ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಕುಣಿಕೆಯಿಂದ ಪಾರಾದರೆ ಅಚ್ಚರಿಯಿಲ್ಲ!

By * ವಿಶ್ವೇಶ್ವರ ಭಟ್
|
Google Oneindia Kannada News

Ajmal Amir Kasab
ಒಂದು ಕ್ಷುಲ್ಲಕ ಕಸ ಸಹ ಕಸಬ್ ಆಗಬಲ್ಲುದು! ಹಾಗಾಗೋದು ನಮ್ಮ ದೇಶದಲ್ಲಿ ಮಾತ್ರ. ಬೇರೆ ದೇಶಗಳಲ್ಲಾಗಿದ್ದರೆ ಒಬ್ಬ ಕಸಬ್ ಕಸವಾಗುತ್ತಿದ್ದ. ಆದರೆ ನಾವು ಮಾತ್ರ ಕಸ ಸಮಾನನನ್ನು ಅಟ್ಟಕ್ಕೇರಿಸಿ ಭಯಂಕರ ಆಸಾಮಿ ಕಸಬ್'ನನ್ನಾಗಿ ಮಾಡಿಬಿಟ್ಟಿದ್ದೇವೆ. ಅಷ್ಟಕ್ಕೂ ಕಸಬ್ ಯಾರು? ಒಬ್ಬ ಅಡ್ಡಕಸುಬಿ, ಅಟ್ರಾಕಣಿ ಬಾಡಿಗೆ ಹಂತಕ. ಬದುಕಿನಲ್ಲಿ ದಿಕ್ಕುತಪ್ಪಿದ, ಗೊತ್ತುಗುರಿಯಿಲ್ಲದ, ಹಿಂಸೆಯಿಂದ ಪ್ರೇರಿತನಾದ ಒಬ್ಬ ಪಾತಕಿ. ಹಣಕ್ಕಾಗಿ ಅಮಾಯಕರನ್ನು ಸಾಯಿಸಿದ ಹೇಡಿ. ಆದರೆ ನಾವು ಅವನನ್ನು ಮಹಾನ್ ಹುತಾತ್ಮನನ್ನಾಗಿ ಮಾಡಲು ಹೊರಟಿದ್ದೇವೆ. ಅವನಿಗೆ ಗಲ್ಲುಶಿಕ್ಷೆ ವಿಧಿಸಿದ ದಿನ ಇಡೀ ದೇಶವೇ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿತು. ಭಾರತದಲ್ಲಿ ಮಾತ್ರ ಹೀಗಾಗೋದು ಸಾಧ್ಯ.

ಕಸಬ್ ಭವಿಷ್ಯ ಇಂದು ತೀರ್ಮಾನ' ಎಂಬ ಧಾಟಿಯಲ್ಲೇ ಎಲ್ಲ ಪತ್ರಿಕೆಗಳೂ ಬರೆದವು. ಕಸಬ್ ದುಷ್ಕೃತ್ಯಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಮೊದಲ ದಿನ ಆತ ದೋಷಿ ಎಂದು ತೀರ್ಪು ಕೊಟ್ಟರು. ಅದಾಗಿ ಎರಡು ದಿನಗಳ ನಂತರ ಶಿಕ್ಷೆಯೇನೆಂಬುದನ್ನು ತಿಳಿಸುವುದಾಗಿ ಹೇಳಿದರು. ಎರಡು ದಿನಗಳ ಬಳಿಕ ಗಲ್ಲುಶಿಕ್ಷೆ ವಿಧಿಸಿದ್ದಾಗಿ ತಿಳಿಸಿದರು. ಅವನಿಗೆ ಗಲ್ಲುಶಿಕ್ಷೆ ವಿಧಿಸಿದ್ದೇ ಪರಮಸಾಹಸ ಎಂಬಂತೆ ಆ ನ್ಯಾಯಾಧೀಶರೂ ಪೋಸು ಕೊಟ್ಟರು. ಆ ನ್ಯಾಯಾಧಿಶರನ್ನು ಹೀರೊ' ಎಂಬಂತೆ ಪತ್ರಿಕೆಗಳೂ ಬರೆದವು. ಟಿವಿ ಚಾನೆಲ್ ಗಳಂತೂ ಆ ಜಡ್ಜ್ ಸಾಹೇಬ್ರನ್ನು ಪುಣ್ಯವಶಾತ್ ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್ ಎಂದು ಹೊಗಳಲಿಲ್ಲ.

ಬೋನಿನಲ್ಲಿ ಹಿಡಿದಿಟ್ಟ ಇಲಿಯನ್ನು ಸಾಯಿಸಲಿಕ್ಕೆ ಇಷ್ಟೆಲ್ಲ ಬಡಿವಾರ ಮಾಡಬೇಕಾಗಿತ್ತಾ? ಅದಕ್ಕೆ ಇಷ್ಟೆಲ್ಲ ಕಾನೂನು ಕಟ್ಟಳೆ ಅಂತ ತಲೆಕೆಡಿಸಿಕೊಳ್ಳಬೇಕಾಗಿತ್ತಾ? ಇಂಥ ಸಣ್ಣಪುಟ್ಟ ವಿಷಯಗಳನ್ನು ಸರಿಯಾಗಿ ನಿಭಾಯಿಸಲು ಇನ್ನೂ ಹೆಣಗಾಡುತ್ತೇವಲ್ಲ, ನಮಗೆ ನಾಚಿಕೆಯಾಗುವುದು ಬೇಡವಾ? ಒಬ್ಬ ಪರಮ ಹೇಡಿ, ನೂರಾರು ಮುಗ್ಧ, ಅಮಾಯಕ ಜನರನ್ನು ಸಾವಿರಾರು ಮಂದಿ ಎದುರಾಎದುರೇ ಕೊಲೆಮಾಡಿದ ನಂತರವೂ ಅವನು ಶಿಕ್ಷಾರ್ಹ ಹೌದೋ ಅಲ್ಲವೋ, ಹೌದಾಗಿದ್ದರೆ ಅವನಿಗೆಂಥ ಶಿಕ್ಷೆ ವಿಧಿಸಬೇಕು, ಗಲ್ಲಿಗೇರಿಸಿದರೆ ಹೇಗೆ, ಬಿಟ್ಟರೆ ಹೇಗೆ, ಗಲ್ಲುಶಿಕ್ಷೆ ವಿಧಿಸಿದ್ದೇ ಅಪರಾಧವಾದರೆ, ಎಂದು ನ್ಯಾಯಾಲಯ, ನ್ಯಾಯಾಧೀಶರು, ಇವರಲ್ಲಿ ಇನ್ನೂ ನಂಬಿಕೆ ಇಟ್ಟಿರುವ ಜನ ಯೋಚಿಸುವ ನಾಮರ್ದಚಿಂತನೆಯಿದೆಯಲ್ಲ ಅದೇ ಭಯಾನಕ! ಅಮಾಯಕರನ್ನು ಕೊಲ್ಲುವ ಒಬ್ಬ ಭಯೋತ್ಪಾದಕ ಹೇಗೆ ಹೇಡಿಯೋ, ಈ ಹೇಡಿಗೆ ಶಿಕ್ಷೆ ಕೊಡಬೇಕೋ, ಬಿಡಬೇಕೋ, ಕೊಟ್ಟರೆ ಎಂಥ ಶಿಕ್ಷೆ ಕೊಡಬೇಕು ಎಂದು ಯೋಚಿಸುತ್ತಾ ಕಾಲತಳ್ಳುವವನೂ ಹೇಡಿಯೇ! ಅನುಮಾನ ಬೇಡ. ಒಬ್ಬ ಯಃಕಶ್ಚಿತ ಪಾತಕಿಗೆ ಶಿಕ್ಷೆ ವಿಧಿಸುವುದಕ್ಕಾಗಿ ಇಷ್ಟೆಲ್ಲ ರಂಪಾರುಡಿ, ಕೋಲಾಹಲ ಮಾಡಬೇಕಿತ್ತಾ?

ಇವೆಲ್ಲಕ್ಕಿಂತ ಮುಖ್ಯವಾಗಿ ಕಾಡುವ ಪ್ರಶ್ನೆಯೆಂದರೆ ಕಸಬ್‌ನಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಹದಿನೇಳು ತಿಂಗಳು ಕಾಯಬೇಕಿತ್ತಾ? ಅವನಿಗಾಗಿ ಮೂವತ್ತೈದು ಕೋಟಿ ರೂ. ಖರ್ಚು ಮಾಡಬೇಕಿತ್ತಾ? ಈ ಯಃಕಶ್ಚಿತನಿಗಾಗಿ ವಿಶೇಷ ನ್ಯಾಯಾಲಯ, ನ್ಯಾಯಾಧೀಶರು, ಅವನ ರಕ್ಷಣೆ'ಗಾಗಿ ಮೂವತ್ತೆಂಟು ಪೊಲೀಸರು, ಎಂಟು ವಾಹನಗಳನ್ನೆಲ್ಲ ನಿಯೋಜಿಸಬೇಕಿತ್ತಾ? ಅವನಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ, ಬಾಡೂಟ ಮಾಡಿ ಬಡಿಸಬೇಕಾಗಿತ್ತಾ? ಆತ ದಿನಕ್ಕೊಂದು ಹೇಳುತ್ತಿದ್ದ ಸುಳ್ಳಿನ ಕಂತೆಗಳನ್ನು ಕೇಳಬೇಕಿತ್ತಾ? ಕಸಬ್ ಪರವಾಗಿ ವಾದಿಸಲು ವಕೀಲರನ್ನು ನೇಮಿಸಲೇಬೇಕು ಎಂದು ರಾಷ್ಟ್ರಪತಿವರೆಗೆ ಮೊರೆ ಹೋಗಬೇಕಿತ್ತಾ? ಅವನಿಗೆ ಪ್ರತ್ಯೇಕ ಜೈಲು, ಆ ಜೈಲಿಗೆ ವಿಶೇಷ ಭದ್ರತೆ, ಒಳಗೆ ಅವನಿಗೆ ರಾಜೋಪಚಾರ ಕೊಡಬೇಕಿತ್ತಾ?

ಕಸಬ್ ಎಸಗಿದ ಅಪರಾಧವೇನೆಂಬುದನ್ನು ಇಡೀ ದೇಶ ಕಣ್ಣಾರೆ ಕಂಡಿದೆ. ಅವನ ಪಾತಕ ಕೃತ್ಯಗಳನ್ನು ಕಣ್ಣಾರೆ ಕಂಡವರಿದ್ದಾರೆ. ಸಾಕ್ಷಿ, ಪುರಾವೆಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ದಂಡಿಯಾಗಿವೆ. ಪೇಟ ಧರಿಸದೇ ಬಂದರೆ ನಮ್ಮ ಪ್ರಧಾನಿಯನ್ನು ಜನ ಗುರುತಿಸದೇ ಹೋಗಬಹುದು, ಆದರೆ ಬಂದೂಕಿನಿಂದ ಅಮಾಯಕರ ಮೇಲೆ ಗುಂಡು ಹಾರಿಸುವ ಕಸಬ್‌ನನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಗುರುತಿಸಬಲ್ಲರು. ಕಸಬ್‌ನಿಂದಾಗಿ ಹತ್ತಾರು ಮಂದಿ ಸತ್ತರು. ನೂರಾರು ಮಂದಿ ಗಾಯಗೊಂಡರು. ಮುಂಬಯಿ ಕಲ್ಲವಿಲಗೊಂಡಿತು. ದೇಶಕ್ಕೆ ದೇಶವೇ ಕಂಪಿಸಿತು. ಆತನಿಂದಾಗಿ ಮುಂಬಯಿಯ ಆಸ್ತಿಪಾಸ್ತಿಗೆ 155 ಕೋಟಿ ರೂ.ನಷ್ಟು ನಷ್ಟವಾಯಿತು. ಅವನನ್ನು ಗಲ್ಲಿಗೇರಿಸಲು ಇಷ್ಟೇ ಸಾಕಾಗಿತ್ತು. ಒಂದು ತಿಂಗಳೊಳಗೆ ಈ ಕೆಲಸ ಮುಗಿದುಬಿಡಬೇಕಿತ್ತು. ಆದರೆ ನಾವು ಅದಕ್ಕೆ ಹದಿನೇಳು ತಿಂಗಳು ತೆಗೆದುಕೊಂಡೆವು! ಇದಕ್ಕಿಂತ ಅಸಹ್ಯ, ನಾಚಿಕೆಗೇಡಿತನ ಇನ್ನೊಂದಿದೆಯಾ? ನೂರು ಅಪರಾಧಿಗಳು ಕಾನೂನಿನ ತೆಕ್ಕೆಯಿಂದ ತಪ್ಪಿಸಿಕೊಳ್ಳಬಹುದು, ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು' ಎಂಬುದು ನಮ್ಮ ನ್ಯಾಯವ್ಯವಸ್ಥೆಯ ಬೀಜಮಂತ್ರವಾಗಿರಬಹುದು, ಆದರೆ ಅಪರಾಧಿ ಎಂದು ಜಗತ್ತೇ ತೀರ್ಮಾನಿಸಿದವನಿಗೆ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಕಾಲಾವಕಾಶವನ್ನೂ ಕೊಡಬಾರದು ತಾನೆ?

ಕಸಬ್‌ನ ವಿಷಯದಲ್ಲಿ ನಾವು ಹೇಗೆ ನಡೆದುಕೊಂಡೆವೆಂದರೆ, ಅವನು ಮಾಡಬಾರದ ಘೋರ ಅಪರಾಧ ಮಾಡಿರುವುದು ಗೊತ್ತಿದ್ದರೂ, ಅವನು ಅಂಥದ್ದೇನನ್ನೂ ಮಾಡಿಲ್ಲದಿರಬಹುದೆಂದು ನಮ್ಮನ್ನೇ ನಂಬಿಸಿಕೊಂಡು, ಸಾಕ್ಷ್ಯ, ಪುರಾವೆಗಳನ್ನು ಒದಗಿಸಿ, ಸುದೀರ್ಘ ವಿಚಾರಣೆ ನಡೆಸಿ ಅವನು ಅಪರಾಧಿ ಎಂಬುದನ್ನು ಸಾಬೀತುಪಡಿಸಿದೆವು. ಇದು ನಮ್ಮ ನ್ಯಾಯವ್ಯವಸ್ಥೆಯ ಹೆಚ್ಚುಗಾರಿಕೆ ಎಂದು ಬೆನ್ನುತಟ್ಟಿಕೊಂಡು ಖುಷಿ ಪಡಬೇಕಾ? ಕಸಬ್‌ಗೆ ಈಗ ಗಲ್ಲುಶಿಕ್ಷೆ ವಿಧಿಸಲಾಗಿದೆ ತಾನೆ. ಆದರೆ ತಾಳಿ, ಅವನನ್ನಿನ್ನೂ ಗಲ್ಲಿಗೇರಿಸಿಲ್ಲ. ಗಲ್ಲಿಗೇರಿಸುವ ಮೊದಲೇ ನಾವು ಸಂಭ್ರಮಿಸಿದ್ದಷ್ಟೇ ಬಂತು. ನಿಮಗೆ ಗೊತ್ತಿರಲಿ, ಕಸಬ್‌ನನ್ನು ಗಲ್ಲಿಗೇರಿಸುವುದು ಅಷ್ಟು ಸುಲಭವೇನೂ ಅಲ್ಲ. ಒಂದು ವೇಳೆ ಅವನು ಗಲ್ಲುಶಿಕ್ಷೆಯಿಂದ ಪಾರಾದರೂ ಆಶ್ಚರ್ಯಪಡಬೇಡಿ.

ನಮ್ಮ ದೇಶದ ಕಾನೂನು ಸಚಿವ ವೀರಪ್ಪ ಮೊಯ್ಲಿಯವರು ಇನ್ನು ಒಂದು ವರ್ಷದೊಳಗೆ ಕಸಬ್‌ನನ್ನು ಗಲ್ಲಿಗೇರಿಸುತ್ತೇವೆ ಎಂದು ಹೇಳಿದ್ದಾರೆ. ಅವರು ಈ ಹೇಳಿಕೆ ಕೊಟ್ಟಿದ್ದರಿಂದಲೇ ಕಸಬ್ ಮರಣದಂಡನೆಯಿಂದ ಬಚಾವ್ ಆಗುತ್ತಾನೆ ಎಂಬ ಗುಮಾನಿ ಮತ್ತಷ್ಟು ದಟ್ಟವಾಗಿದೆ. ಯಾಕೆಂದರೆ ಈ ಒಂದು ವರ್ಷದಲ್ಲಿ ಕಸಬ್ ಪರವಾದ ಘಟನೆಗಳು ಸಂಭವಿಸಲು ಅವಕಾಶ ಮಾಡಿಕೊಟ್ಟಂತಾಯಿತು. ಅವನ ವಿರುದ್ಧವಾದ ಘಟನೆ (ಗಲ್ಲುಶಿಕ್ಷೆ) ಇನ್ನು ಒಂದು ವರ್ಷ ಸಂಭವಿಸುವುದಿಲ್ಲ ಅಂದಂತಾಯಿತು. ಈ ಅವಧಿಯಲ್ಲಿ ಏನು ಬೇಕಾದರೂ ಆಗಬಹುದು. ಕಂದಹಾರ್ ವಿಮಾನ ಅಪಹರಣ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಸುರಾಗಿಯೇ ಇದೆ. 1999ರ ಡಿಸೆಂಬರ್ 24ರಂದು ಐವರು ಪಾಕಿಸ್ತಾನಿ ಉಗ್ರರು 176 ಪ್ರಯಾಣಿಕರಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಅಪಹರಿಸಿದರು. ಅವರ ಪ್ರಮುಖ ಬೇಡಿಕೆ ಭಾರತದ ವಿವಿಧ ಜೈಲುಗಳಲ್ಲಿದ್ದ 35 ಮುಸ್ಲಿಂ ಉಗ್ರರನ್ನು ಬಿಡುಗಡೆಗೊಳಿಸಬೇಕು ಎಂಬುದು. ಕೊನೆಗೆ ಭಾರತ ಸರಕಾರ ಮೌಲಾನ ಮಸೂದ್ ಅಜರ್ (2001ರ ಪಾರ್ಲಿಮೆಂಟ್ ದಾಳಿಯ ಪ್ರಮುಖ ಆರೋಪಿ), ಅಹಮದ್ ಒಮರ್ ಸಯೀದ್ ಷೇಕ್ (2002ರಲ್ಲಿ ಅಮೆರಿಕ ಪತ್ರಕರ್ತ ಡೇನಿಯಲ್ ಪರ್ಲ್‌ನ ಅಪಹರಣ ಹಾಗೂ ಹತ್ಯೆ ಪ್ರಕರಣದ ಆರೋಪಿ) ಮುಷ್ತಾಕ್ ಅಹಮದ್ ಝರ್ಗರ್(ಕಾಶ್ಮೀರದಲ್ಲಿ ಉಗ್ರಗಾಮಿ ತರಬೇತಿ ಶಿಬಿರ ನಡೆಸುವಾತ)ನನ್ನು ಬಿಡುಗಡೆ ಮಾಡಿ ಭಾರಿ ಬೆಲೆತೆತ್ತಿತ್ತು.

ನಾಳೆ ಪಾಕಿಸ್ತಾನದ ಯಾವುದೋ ಉಗ್ರಗಾಮಿ ಸಂಘಟನೆ ಕಂದಹಾರ್ ಮಾದರಿಯಲ್ಲಿ ಭಾರತದ ವಿಮಾನ ಅಪಹರಿಸಿ, ಕಸಬ್‌ನನ್ನು ಬಿಡುಗಡೆ ಮಾಡಿದರೆ ಮಾತ್ರ ಎಲ್ಲ ಪ್ರಯಾಣಿಕರನ್ನು ಬಿಡುತ್ತೇವೆ ಎಂಬ ಷರತ್ತನ್ನು ಒಡ್ಡಿದರೆ, ಆಗ ನಾವೇ ನೂರಾರು ಪ್ರಯಾಣಿಕರ ಜೀವ ಉಳಿಸುವುದಕ್ಕಾಗಿ ಒಬ್ಬನನ್ನು ಬಿಡುವುದೇ ಲೇಸು ಎಂದು ಕಸಬ್‌ನನ್ನು ಪಾಕಿಸ್ತಾನದಲ್ಲಿರುವ ಅವನ ಮನೆತನಕ ಹೋಗಿ ಸುರಕ್ಷಿತವಾಗಿ ಕಳುಹಿಸಿಕೊಟ್ಟು ಬರುತ್ತೇವೆ. ಹೀಗಾಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಇಂಥ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವಲ್ಲ. ಆಗ ಕಸಬ್‌ಗೆ ಗಲ್ಲುಶಿಕ್ಷೆ ಆಗಬೇಕೆಂದು ಯಾರೂ ಹೇಳುವುದಿಲ್ಲ. ಮೊದಲು ಅವನನ್ನು ಬಿಟ್ಟುಬಿಡಿ ಅಂತಾನೇ ಎಲ್ಲರೂ ಹೇಳುತ್ತಾರೆ. ಒಮ್ಮೆ ಅಂಥ ಸ್ಥಿತಿ ಉದ್ಭವಿಸಿದರೆ ಅದಕ್ಕಿಂತ ಅವಮಾನ, ನಾಚಿಕೆ ಮತ್ತೊಂದಿದೆಯಾ? ಕಸಬ್‌ಗೆ ಗಲ್ಲುಶಿಕ್ಷೆ ಎಲ್ಲಿತನಕ ತಡವಾಗುತ್ತದೋ, ಅಲ್ಲಿತನಕ ಈ ಅಪಾಯ ಸಾಧ್ಯತೆ ತಪ್ಪಿದ್ದಲ್ಲ. ಗಲ್ಲುಶಿಕ್ಷೆ ಶೀಘ್ರ ನೆರವೇರಿಸಿದರೆ ಕಸಬ್‌ಗೊಂದೇ ಫಾಸಿ. ತಡಮಾಡಿದರೆ ಇಡೀ ದೇಶವಾಸಿಗಳ ತಲೆಮೇಲೇ ಕುಣಿಕೆ!

ಆದರೆ ನಾವು ಎಂಥ ದರಿದ್ರ ವ್ಯವಸ್ಥೆಯಲ್ಲಿದ್ದೇವೆ ಅಂದ್ರೆ ಇನ್ನು ಕನಿಷ್ಠ ಎರಡು ವರ್ಷಗಳಾದರೂ ಕಸಬ್‌ನನ್ನು ಗಲ್ಲಿಗೇರಿಸಲು ಆಗುವುದಿಲ್ಲ, ಬೇಕಾದರೆ ನೋಡಿ, ಬೆಟ್! ನಮ್ಮ ಕಾನೂನು ಸದಾ ಕೊಂಕಣಸುತ್ತಿ ಮೈಲಾರಕ್ಕೇ ಹೋಗುತ್ತದೆ. ಕಸಬ್‌ಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ಅವರು ತಮ್ಮ ಆದೇಶವನ್ನು ಮುಂಬಯಿ ಹೈಕೋರ್ಟ್‌ಗೆ ಕಳುಹಿಸಿಕೊಡಬೇಕು, ಮುಂಬಯಿ ಹೈಕೋರ್ಟ್ ತಹಲಿಯಾನಿ ತೀರ್ಪನ್ನು ಪರಿಶೀಲಿಸಬೇಕು. ಎಲ್ಲ ಸಾಕ್ಷ್ಯಗಳನ್ನು ಮುಂಬಯಿ ಹೈಕೋರ್ಟ್ ಮೊದಲಿನಿಂದ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಬೇಕು. ಅದಾದ ಬಳಿಕ ನ್ಯಾಯಮೂರ್ತಿ ತಹಲಿಯಾನಿ ನೀಡಿದ ತೀರ್ಪನ್ನು ಎತ್ತಿಹಿಡಿಯಬೇಕೋ, ತಿರಸ್ಕರಿಸಬೇಕೋ, ಶಿಕ್ಷೆ ಪ್ರಮಾಣವನ್ನು ಕಡಿಮೆಗೊಳಿಸಬೇಕೋ ಎಂಬುದನ್ನು ತೀರ್ಮಾನಿಸಬೇಕು. ಇಷ್ಟಕ್ಕೆ ಏನಿಲ್ಲವೆಂದರೂ ಕನಿಷ್ಠ ಆರು ತಿಂಗಳು ಬೇಕೇಬೇಕು. ನ್ಯಾ. ತಹಲಿಯಾನಿ ನೀಡಿದ ತೀರ್ಪನ್ನು ಮುಂಬಯಿ ಹೈಕೋರ್ಟ್ ಎತ್ತಿಹಿಡಿಯಿತು ಅಂತಾನೇ ಇಟ್ಟುಕೊಳ್ಳೋಣ, ಅದನ್ನು ಕಸಬ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದು. ಆಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಟ ಠ ಡ ಢ ಣ'ದಿಂದ ಪುನಃ ಆರಂಭವಾಗುತ್ತದೆ. ಅದಕ್ಕೂ ಆರು ತಿಂಗಳು ಬೇಕು. ಸುಪ್ರೀಂಕೋರ್ಟ್ ಸಹ ಮುಂಬಯಿ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತು ಅಂತಿಟ್ಟುಕೊಳ್ಳೋಣ, ಭಾರತದ ಸಂವಿಧಾನದ 72ನೇ ವಿಧಿಯನ್ವಯ ಕಸಬ್ ತನಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬಹುದು. ಈ ವಿಷಯದಲ್ಲಿ ರಾಷ್ಟ್ರಪತಿಯವರ ನಿನಿರ್ಧಾರವೇ ಅಂತಿಮವಲ್ಲ. ಅವರು ಕ್ಷಮಾದಾನ ಕೋರಿಕೆ ಅರ್ಜಿಯನ್ನು ಕೇಂದ್ರ ಗೃಹಸಚಿವರಿಗೆ ಕಳಿಸುತ್ತಾರೆ. ಗೃಹಸಚಿವರು ಸಂಪುಟದ ಮುಂದಿಡುತ್ತಾರೆ. ಅನಂತರವೇ ಅದು ಗೃಹಸಚಿವಾಲಯದ ಮೂಲಕ ರಾಷ್ಟ್ರಪತಿಯವರಿಗೆ ಹೋಗುತ್ತದೆ. ಇಷ್ಟಕ್ಕೆ ಒಂದು ವರ್ಷ ಹಿಡಿಯುತ್ತದೆ.

ಗೊತ್ತಿರಲಿ, ಈಗಾಗಲೇ ರಾಷ್ಟ್ರಪತಿಯವರ ಮುಂದೆ ಕ್ಷಮಾದಾನ ಬೇಡಿ ಸಲ್ಲಿಸಿದ 29 ಅರ್ಜಿಗಳಿವೆ! ಆ ಪೈಕಿ ನಮ್ಮ ದೇಶದ ಆತ್ಮವಾಗಿರುವ ಸಂಸತ್‌ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರುನ ಅರ್ಜಿಯೂ ಸೇರಿದೆ! ಪಾರ್ಲಿಮೆಂಟ್ ಮೇಲಿನ ದಾಳಿ ಅಫ್ಜಲ್‌ಗುರು ನೇತೃತ್ವದಲ್ಲಿಯೇ ನಡೆದಿದೆಯೆಂಬುದು ಸಾಬೀತಾಗಿ, ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ತೀರ್ಪು ನೀಡಿ ಆರು ವರ್ಷಗಳಾದವು. ಇನ್ನೂ ಕ್ಷಮಾದಾನದ ಬಗ್ಗೆ ತೀರ್ಮಾನವಾಗಿಲ್ಲ. 29 ಕ್ಷಮಾದಾನ ಕೋರಿಕೆ ಅರ್ಜಿಗಳ ಪೈಕಿ ಎಂಟು ಅರ್ಜಿ ಭಯಾನಕ ಉಗ್ರಗಾಮಿಗಳದು. ನಮ್ಮ ದೇಶದ ವಿರುದ್ಧ ಯುದ್ಧ ಸಾರಿದವರದು. ಈ ಸಾಲಿಗೆ ಕಸಬ್ ಅರ್ಜಿಯೂ ಸೇರುತ್ತದೆ. ಆತ ಈ ಅರ್ಜಿ ಸಲ್ಲಿಸುವ ಹಂತ ತಲುಪುವವರೆಗೆ ಕನಿಷ್ಠ ಎರಡೂವರೆ-ಮೂರು ವರ್ಷಗಳಾಗಬಹುದು. ಆನಂತರ ರಾಷ್ಟ್ರಪತಿಯವರು ಕ್ಷಮಾದಾನ ನೀಡಬೇಕೋ, ಬೇಡವೋ ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಅಷ್ಟೊತ್ತಿಗೆ, ಅನುಮಾನ ಬೇಡ, ನಾಲ್ಕು ವರ್ಷಗಳಾಗುತ್ತವೆ. ಈ ಮಧ್ಯೆ ಮತ್ತೇನಾದರೂ ಅಹಿತಕರ ಘಟನೆ ನಡೆದರೆ? ಕಸಬ್ ಬಿಡುಗಡೆಗೆ ಆಗ್ರಹಿಸಿ ಅಪಹರಣಗಳಾದರೆ? ಯಾರೂ ಊಹಿಸದ ಮತ್ತಿನ್ನೇನೋ ಅವಘಡ ಸಂಭವಿಸಿದರೆ? ಮುಗೀತು.

ಆದ್ದರಿಂದ ಕಸಬ್‌ಗೆ ಗಲ್ಲುಶಿಕ್ಷೆಯಾಯಿತೆಂದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದು ಭಾವಿಸಿದರೆ ನಮ್ಮಂಥ ಮುಗ್ಧರು ಮತ್ತ್ಯಾರೂ ಇಲ್ಲ. ಅಷ್ಟಕ್ಕೂ ಕಸಬ್‌ಗೆ ಮರಣದಂಡನೆಯನ್ನು ತಕ್ಷಣ ವಿಧಿಸಲೇಬೇಕೆಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಅವಸರವೇನಿಲ್ಲ. ಅಫಜಲ್ ಗುರುಗೆ ಮರಣದಂಡನೆ ವಿಧಿಸುವ ವಿಚಾರದಲ್ಲಿ ತೋರಿದ ದಿವ್ಯ ನಿರ್ಲಕ್ಷ್ಯವನ್ನು ಈ ಪ್ರಕರಣದಲ್ಲೂ ಪ್ರದರ್ಶಿಸಿದರೆ ಅಚ್ಚರಿಪಡಬೇಕಿಲ್ಲ.

ಅಂತಾರಾಷ್ಟ್ರೀಯ ಉಗ್ರಗಾಮಿಗಳು, ಕೈದಿಗಳಿಗೆ ಶಿಕ್ಷೆ ನೀಡಲೆಂದೇ ಅಮೆರಿಕವು ಗ್ವಾಂಟಾನಮೋ ಕೊಲ್ಲಿಯಲ್ಲಿ ಒಂದು ಶಿಕ್ಷಾಕೇಂದ್ರವನ್ನು ತೆರೆದಿದೆ. ಕ್ಯೂಬಾದಲ್ಲಿರುವ ಈ ಶಿಕ್ಷಾಕೇಂದ್ರದಲ್ಲಿ ಆರು ತಿಂಗಳೊಳಗೆ ಕೇಸನ್ನು ಮೋಕಳೀಕ್ ಮಾಡಲಾಗುತ್ತದೆ. ಕಸಬ್‌ಗೆ ಗಲ್ಲುಶಿಕ್ಷೆ ವಿಧಿಸಿದ ದಿನ ನಮ್ಮ ಗೃಹಸಚಿವ ಪಿ. ಚಿದಂಬರಂ ಹೇಳಿದರು- ನಾವು ಗ್ವಾಂಟಾನಮೋ ಕೊಲ್ಲಿಯಂಥ ವ್ಯವಸ್ಥೆಯನ್ನು ನಿರ್ಮಿಸಿಲ್ಲ. ನಾವು ಮಿಲಿಟರಿ ಕೋರ್ಟನ್ನೂ ನಿರ್ಮಿಸಿಲ್ಲ. ಕಸಬ್ ವಿಚಾರಣೆಯನ್ನು ಮಾಮೂಲಿ ಕೋರ್ಟ್‌ನಲ್ಲಿ ನಡೆಸಿದೆವು. ಈ ಬಗ್ಗೆ ನಮಗೆ ಸಮಾಧಾನವಿದೆ.' ಚಿದಂಬರಂ ಮಾತುಗಳನ್ನು ಕೇಳಿದ ಯಾರಿಗಾದರೂ ಕಸಬ್ ಪ್ರಕರಣ ಮುಂದೇನಾಗಬಹುದೆಂಬ ಬಗ್ಗೆ ಸುಳಿವು ಸಿಕ್ಕಿರಲಿಕ್ಕೆ ಸಾಕು.

2011ರ ಫೆಬ್ರವರಿಯೊಳಗೆ ಕಸಬ್‌ನನ್ನು ಗಲ್ಲಿಗೇರಿಸದಿದ್ದರೆ (ಖಂಡಿತ ಅಷ್ಟರೊಳಗೆ ಗಲ್ಲಿಗೇರಿಸುವುದಿಲ್ಲ ಬಿಡಿ) ಆತನಿಗೆ Unique Identity Card ಅರ್ಥಾತ್ ವಿಶಿಷ್ಟ ಗುರುತು ಪತ್ರವನ್ನು ಕೇಂದ್ರ ಸರಕಾರ ನೀಡಬೇಕಾಗುತ್ತದೆ. ಆರು ತಿಂಗಳು ರಾಜ್ಯದಲ್ಲಿ ವಾಸಿಸಿದವರನ್ನು (ಕೈದಿಗಳೂ ಸೇರಿ) ಮಹಾರಾಷ್ಟ್ರ ಸರಕಾರ ಜನಗಣತಿಯಲ್ಲಿ ದಾಖಲಿಸಲಿದೆ. ಅಷ್ಟರಮಟ್ಟಿಗೆ ಕಸಬ್ ಭಾರತದ ಇತರ ಪ್ರಜೆಗಳಂತೆ ಧನ್ಯನಾಗುತ್ತಾನೆ. ಇವೆಲ್ಲ ಆಗಿ ಮುಂದೊಂದು ದಿನ ಗಲ್ಲುಶಿಕ್ಷೆ ಜಾರಿಯಾಗುವ ದಿನ ಬಂತು ಅಂತಿಟ್ಟುಕೊಳ್ಳಿ. ನಮ್ಮ ದೇಶದಲ್ಲಿ ಗಲ್ಲಿಗೇರಿಸುವವರೇ ಇಲ್ಲವಂತೆ, ನಮ್ಮಲ್ಲಿ ನೇಣಿಗೆ ಬಳಸುವ ಹಗ್ಗವೂ ಇಲ್ಲವಂತೆ! ಅಲ್ಲಿತನಕ ಕಸಬ್ ರಕ್ಷಣೆಗೆ ಇನ್ನೆಷ್ಟು ಕೋಟಿ ತೆರಬೇಕೋ? ಅವನಿಗೆ ಇನ್ನೆಷ್ಟು ಬಿರಿಯಾನಿ ತಿನ್ನಿಸಬೇಕೋ? ಕಸಬ್ ಶಿಕ್ಷೆಗೇ ಗಲ್ಲಾಗಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X