• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲರೂ ಚೀನಾದ ಕಡೆಗೇ ಏಕೆ ಮುಖ ಮಾಡಿದ್ದಾರೆ?

By * ವಿಶ್ವೇಶ್ವರ ಭಟ್
|

ಚಿಂಡಿಯಾ!? ಹತ್ತು ವರ್ಷಗಳ ಹಿಂದೆ ಕೇಳುತ್ತಿದ್ದ ಪದವಿದು. ನೀವೂ ಕೇಳಿರಬಹುದು. ಜಗತ್ತಿನ ಪತ್ರಿಕೆಗಳು ಚೀನಾ ಹಾಗೂ ಇಂಡಿಯಾ'ವನ್ನು ಒಟ್ಟಾಗಿ ಚಿಂಡಿಯಾ' ಎಂಬ ಪದದಿಂದ ಕರೆಯುತ್ತಿದ್ದವು. ಈ ಶೀರ್ಷಿಕೆಯಲ್ಲಿ ಕೆಲವು ಪುಸ್ತಕಗಳೂ ಬಂದವು. ಫಿನಾನ್ಶಿಯಲ್ ಟೈಮ್ಸ್' ಮತ್ತು ವಾಲ್‌ಸ್ಟ್ರೀಟ್ ಜರ್ನಲ್'ನಂಥ ಪತ್ರಿಕೆಗಳು ಚಿಂಡಿಯಾ' ಪದವನ್ನು ಪದೇ ಪದೆ ಬಳಸಿ ಜನಪ್ರಿಯಗೊಳಿಸಿದವು. ಬಿಸಿನೆಸ್ ವೀಕ್' ಎಂಬ ಪ್ರತಿಷ್ಠಿತ ಪತ್ರಿಕೆಯ ಹಿರಿಯ ಸಂಪಾದಕ ಪೀಟ್ ಎಂಗಾರ್ಡಿಯೋ CHINDIA : How China and India are revolutionising global business ಎಂಬ ಮಹತ್ವದ ಕೃತಿಯನ್ನೂ ಬರೆದ. ಚೀನಾದ ಪ್ರಸ್ತಾಪವಾದಾಗಲೆಲ್ಲ ಭಾರತವೂ ಬರುತ್ತಿದ್ದುದರಿಂದ ಹಾಗೂ ಚೀನಾಕ್ಕೆ ಜತೆಜತೆಯಾಗಿ ಭಾರತವೂ ಬೆಳೆಯುತ್ತಿದ್ದುದರಿಂದ ಚಿಂಡಿಯಾ' ಎಂಬ ಪದವನ್ನು ಬಳಸುತ್ತಿರುವುದಾಗಿ ಎಂಗಾರ್ಡಿಯೋ ಹೇಳಿದ್ದ. ಈ ಪದ ಆ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿ ಜನರ ಬಾಯಲ್ಲಿ ನಲಿದಾಡಿದ್ದುಂಟು. ಭಾರತ ಮತ್ತು ಚೀನಾ ವಿಶ್ವದಲ್ಲಿ ಪ್ರಬಲಶಕ್ತಿಯಾಗಿ ರೂಪುಗೊಂಡಿರುವುದು ಆ ಒಂದು ಪದದಿಂದ ಅರ್ಥೈಸಿಕೊಳ್ಳಬಹುದಾಗಿತ್ತು.

ಅಚ್ಚರಿಯೇನೆಂದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ಈ ಪದವನ್ನು ನೀವು ಕೇಳಿದ್ದೀರಾ? ಕೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಈ ಪದವನ್ನು ಯಾರೂ ಬಳಸುವುದಿಲ್ಲ. ಏಕೆಂದರೆ ಚಿಂಡಿಯಾ' ಪದದಲ್ಲಿದ್ದ ಚೀನಾ, ಭಾರತವನ್ನು ಬಿಟ್ಟು ಬಹಳ ದೂರ ಹೋಗಿಬಿಟ್ಟಿದೆ. ಈಗ ಚಿಂಡಿಯಾ ಅಪ್ರಸ್ತುತ. ಹತ್ತು ವರ್ಷಗಳ ಹಿಂದೆ ಅಮೆರಿಕ, ಬ್ರಿಟನ್‌ನ ಪತ್ರಿಕೆಗಳೂ ಈ ಪದವನ್ನು ತಮ್ಮ ಸ್ಟೈಲ್‌ಶೀಟ್ ಗಳಲ್ಲಿ ಸೇರಿಸಿದ್ದವು. ಚೀನಾ-ಭಾರತ ಪ್ರಸ್ತಾಪ ಬಂದಾಗ ಚಿಂಡಿಯಾ' ಎಂದೇ ಬರೆಯಬೇಕೆಂದು ತಮ್ಮ ವರದಿಗಾರರಿಗೆ ತಾಕೀತು ಮಾಡುತ್ತಿದ್ದವು. ಆ ಪದವನ್ನು ಮೊದಲಿನ ಅರ್ಥದಲ್ಲಿ ಬಳಸಕೂಡದೆಂದು ಈಗ ಹೇಳುತ್ತಿವೆ. ಕಾರಣವಿಷ್ಟೆ, ಭಾರತ ಇದ್ದಲ್ಲಿಯೇ ಇದೆ (ಅಥವಾ ತುಸು ವೇಗವಾಗಿ ಕ್ರಮಿಸುತ್ತಿರಬಹುದು). ಆದರೆ ಚೀನಾ ಮಾತ್ರ ನೂರಾರು ಗಾವುದ ದೂರ ಹೋಗಿ, ಭಾರತದ ಹಿಡಿತಕ್ಕೂ ಸಿಗದಷ್ಟು ವೇಗವಾಗಿ ಕ್ರಮಿಸುತ್ತಿದೆ. ನೋಡನೋಡುತ್ತಿದ್ದಂತೆ ಚಿಂಡಿಯಾ' ಪದವನ್ನು ಅಪ್ರಸ್ತುತವಾಗುವಷ್ಟು ಕ್ಷಿಪ್ರವೇಗದಲ್ಲಿ ಬೆಳೆಯುತ್ತಿದೆ.

ಅಷ್ಟಕ್ಕೂ ಇವೆಲ್ಲ ಚೀನಾಕ್ಕೆ ಹೇಗೆ ಸಾಧ್ಯವಾಯಿತು? ಭಾರತಕ್ಕೆ ಸಾಧ್ಯವಾಗದೇ ಇರುವುದು ಚೀನಾಕ್ಕೆ ಹೇಗೆ ಸಾಧ್ಯವಾಯಿತು? ಹಠಾತ್ತನೆ ಎಲ್ಲರೂ ಚೀನಾದ ಕಡೆಗೇ ಏಕೆ ಮುಖ ಮಾಡಿದರು? ಅಂಥದ್ದೇನಿದೆ ಅಲ್ಲಿ? ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಚಿಂಡಿಯಾ' ಪದವೇಕೆ ಅಪ್ರಸ್ತುತವಾಯಿತು ಎಂಬುದನ್ನು ಹೇಳುತ್ತದೆ. ಭಾರತ-ಚೀನಾ ಅನೇಕ ವೈರುಧ್ಯಗಳನ್ನು ಹೊಂದಿದ್ದರೂ ಹಲವಾರು ಸಾಮ್ಯ ಹಾಗೂ ಒಂದೇ ರೀತಿಯ ಸಮಸ್ಯೆಗಳನ್ನು ಹೊಂದಿದ ರಾಷ್ಟ್ರಗಳಾಗಿದ್ದವು. ಅನೇಕ ವರ್ಷಗಳ ಕಾಲ ಅವೆರಡೂ ಸಮ-ಸಮವಾಗಿ ಹೆಜ್ಜೆಹಾಕಿದ ದೇಶಗಳು. ಭಾರತ ಚೀನಾಕ್ಕೆ ಯಾವುದೇ ರೀತಿಯಲ್ಲೂ ಕಮ್ಮಿಯಿರಲಿಲ್ಲ. ಆದರೆ ಚೀನಾ ಯಾವಾಗ ಒಮ್ಮಿಂದೊಮ್ಮೆಗೆ ನಾಗಾಲೋಟದಲ್ಲಿ ಓಡಲಾರಂಭಿಸಿತೋ, ಅದರ ಮೂಗುದಾಣವನ್ನು ಯಾರಿಂದಲೂ ಹಿಡಿಯಲು ಆಗಲಿಲ್ಲ. ಒಂದು ಸಣ್ಣ ಅಂಕಿ-ಅಂಶದ ಮೇಲೆ ಕಣ್ಣಾಡಿಸಬಹುದು. 2000ರಲ್ಲಿ ಚೀನಾ 30 ಶತಕೋಟಿ ಡಾಲರ್‌ನಷ್ಟು ಹೈಟೆಕ್ ಪ್ರಾಡಕ್ಟ್ ಗಳನ್ನು ರಫ್ತು ಮಾಡಿತ್ತು. 2005ರಲ್ಲಿ ಇದು 220 ಶತಕೋಟಿ ಡಾಲರ್ ನಷ್ಟಾಯಿತು. ಅಂದರೆ ಕೇವಲ ಐದು ವರ್ಷಗಳಲ್ಲಿ ಸುಮಾರು ಎಂಟು ಪಟ್ಟು ಪ್ರಗತಿ! 2010ರಲ್ಲಿ ಇದು ಸುಮಾರು ಐನೂರು ಶತಕೋಟಿ ಡಾಲರ್‌ನಷ್ಟಾಗಲಿದೆ ಅಂದ್ರೆ ಚೀನಾ ಹೊರಟ ವೇಗವೆಂಥದು ಎಂಬುದು ಗೊತ್ತಾಗುತ್ತದೆ. ಬೀಜಿಂಗ್ ನಗರವೊಂದರಲ್ಲಿಯೇ ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಇಪ್ಪತ್ತೈದು ಅಥವಾ ಅದಕ್ಕಿಂತ ಹೆಚ್ಚು ಅಂತಸ್ತುಗಳಿರುವ ಸುಮಾರು 10-12 ಬಹುಮಹಡಿ ಕಟ್ಟಡಗಳಿದ್ದವು. ಭಾರತದ ಪ್ರಮುಖ ನಗರಗಳಾದ ದಿಲ್ಲಿ, ಕೋಲ್ಕತಾ, ಮುಂಬಯಿ, ಚೆನ್ನೈಯಲ್ಲಿ ಆಗ ಇಂಥ ಐದಾರು ಕಟ್ಟಡಗಳಿದ್ದಿರಬಹುದು. ಆದರೆ ಇಂದು ಬೀಜಿಂಗ್‌ನಲ್ಲೊಂದೇ ಇಪ್ಪತ್ತೈದಕ್ಕಿಂತ ಹೆಚ್ಚು ಅಂತಸ್ತುಗಳಿರುವ ಐದು ಸಾವಿರ ಬಹುಮಹಡಿ ಕಟ್ಟಡಗಳಿರಬಹುದು. ದಿಲ್ಲಿ, ಮುಂಬಯಿ, ಕೋಲ್ಕತಾ, ಚೆನ್ನೈಯಲ್ಲಿ ಈ ಸಂಖ್ಯೆ 25ಕ್ಕಿಂತ ಜಾಸ್ತಿಯಾಗಿರಲಿಕ್ಕಿಲ್ಲ. ಅಂದರೆ ಚೀನಾದ ಪ್ರಗತಿಯ ದಾಪುಗಾಲು ಎಂಥದು ಊಹಿಸಿ.

ಹದಿನೈದು ದಿನಗಳ ಹಿಂದೆ ನಮ್ಮ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಜತೆ ಚೀನಾಕ್ಕೆ ಹೋದಾಗ ನಡೆದ ಒಂದು ಸಣ್ಣ ಘಟನೆಯನ್ನು ಹೇಳಲೇಬೇಕು. ನಾಲ್ಕು ದಿನಗಳ ಅಧಿಕೃತ ಪ್ರವಾಸವನ್ನು ಮುಗಿಸಿ ಬೀಜಿಂಗ್‌ನಿಂದ ವಾಪಸ್ ಹೊಸದಿಲ್ಲಿಗೆ ಆಗಮಿಸುವಾಗ ಮಾರ್ಗಮಧ್ಯದಲ್ಲಿ ಕುನ್ಮಿಂಗ್ ಎಂಬ ಬೆಂಗಳೂರಿನ ಅರ್ಧದಷ್ಟಿರುವ ಊರಿನಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ತಂಗಿದ್ದೆವು. ಈ ಸಂದರ್ಭದಲ್ಲಿ ವಿಮಾನಕ್ಕೆ ಇಂಧನ ತುಂಬಿಸಬೇಕಿತ್ತು. ಅಲ್ಲದೇ ಕೃಷ್ಣ ಅವರ ಗೌರವಾರ್ಥ ಕುನ್ಮಿಂಗ್‌ನ ಗವರ್‍ನರ್ ಔತಣಕೂಟ ಏರ್ಪಡಿಸಿದ್ದರು. ಕುನ್ಮಿಂಗ್ ಚೀನಾದಲ್ಲಿಯೇ ಅತ್ಯಂತ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ನೈಸರ್ಗಿಕ ಸೊಬಗಿನಿಂದ ಕಂಗೊಳಿಸುವ ಪ್ರದೇಶ. ಪಶ್ಚಿಮ ಬಂಗಾಲಕ್ಕೆ ತಾಗಿಕೊಂಡಿರುವ ಪ್ರಾಂತ. ಭಾರತದ ಪ್ರವಾಸಿಗರಿಗೆ ಕುನ್ಮಿಂಗ್ ವಿಶೇಷ ಅನುಭವ ನೀಡುವ ಪ್ರದೇಶ. ಬೆಂಗಳೂರಿನಿಂದ ಈ ಊರಿಗೆ ವಿಮಾನ ಪ್ರಯಾಣ ಆರಂಭಿಸುವುದಾದರೆ ನಾವು ಸಹಕರಿಸುತ್ತೇವೆ. ಕುನ್ಮಿಂಗ್ ಜತೆ ಯಾವುದೇ ವ್ಯವಹಾರಕ್ಕೂ ನಾವು ಸಿದ್ಧ' ಎಂದು ಗವರ್‍ನರ್ ಅವರು ಕೃಷ್ಣ ಅವರಿಗೆ ಹೇಳಿ ಹೊಸ ಸಂಬಂಧಕ್ಕೆ ಆಹ್ವಾನ ನೀಡಿದರು.

ಔತಣಕೂಟಕ್ಕೆ ಮುನ್ನ ಗವರ್‍ನರ್ ಅವರ ಜತೆಗಿದ್ದ ಅಲ್ಲಿನ ಪ್ರವಾಸೋದ್ಯಮ ಕಾರ್ಯದರ್ಶಿಯವರನ್ನು ಪರಿಚಯಿಸಿಕೊಂಡು ಅವರ ವಿಸಿಟಿಂಗ್ ಕಾರ್ಡ್ ಪಡೆದಿದ್ದೆ. ಬೆಂಗಳೂರಿಗೆ ಬಂದು ಪರಿಚಿತ ಟ್ರಾವೆಲ್ ಏಜೆಂಟ್ ಒಬ್ಬರಿಗೆ ಆ ಕಾರ್ಡನ್ನು ಕೊಟ್ಟು ಬೆಂಗಳೂರಿನಿಂದ ಕುನ್ಮಿಂಗ್‌ಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಬಹುದು. ಎಲ್ಲರೂ ಬೀಜಿಂಗ್, ಶಾಂಘೈಗೆ ಮಾತ್ರ ಹೋಗುತ್ತಾರೆ. ಕುನ್ಮಿಂಗ್ ಬಹಳ ಸೊಗಸಾಗಿದೆ. ಅಲ್ಲಿಗೇಕೆ ನೀವು ಕಂಡಕ್ಟಡ್ ಟೂರನ್ನು ಏರ್ಪಡಿಸಬಾರದು?' ಎಂದು ಹೇಳಿದೆ. ಟ್ರಾವೆಲ್ ಏಜೆಂಟ್‌ಸ್ನೇಹಿತರು ಆ ಕಾರ್ಡಿನಲ್ಲಿದ್ದ ವಿಳಾಸ ಪಡೆದು ಪ್ರವಾಸೋದ್ಯಮ ಕಾರ್ಯದರ್ಶಿಗೆ ತಮ್ಮ ವ್ಯವಹಾರದ ವಿವರಗಳನ್ನೆಲ್ಲ ಕೊಟ್ಟು ಇ-ಮೇಲ್ ಮಾಡಿದರು. ಪ್ರತಿ ತಿಂಗಳು ಕುನ್ಮಿಂಗ್‌ಗೆ ಕನಿಷ್ಠ ಒಂದು ಸಾವಿರ ಮಂದಿಯನ್ನು ಕರೆದುಕೊಂಡು ಬರುವ ಪ್ರಸ್ತಾಪವನ್ನು ಮುಂದಿಟ್ಟರು.

ಇ-ಮೇಲ್ ಕಳಿಸಿ ಒಂದು ಗಂಟೆಯ ಬಳಿಕ ಸ್ನೇಹಿತರಿಗೆ ಅಚ್ಚರಿ ಕಾದಿತ್ತು. ಸ್ವತಃ ಪ್ರವಾಸೋದ್ಯಮ ಕಾರ್ಯದರ್ಶಿ ಅತ್ತ ತುದಿಯಿಂದ ಮಾತಾಡುತ್ತಿದ್ದರು. ಸ್ನೇಹಿತರಿಗೆ ಒಂದು ಕ್ಷಣ ನಂಬಲು ಆಗಲಿಲ್ಲ. ಆದರೆ ಇ-ಮೇಲ್‌ನಲ್ಲಿ ಪ್ರಸ್ತಾಪಿಸಿದ ಸಂಗತಿಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಾಗ ನಂಬದೇ ಇರಲು ಆಗಲಿಲ್ಲ. ಅದೇ ಕರೆಯಲ್ಲಿ ಪ್ರವಾಸೋದ್ಯಮ ಕಾರ್ಯದರ್ಶಿ, ಟ್ರಾವೆಲ್ ಏಜೆಂಟ್‌ಗೆ ಕುನ್ಮಿಂಗ್ ಗೆ ಬರಬೇಕೆಂಬ ಆಹ್ವಾನವನ್ನೂ, ಬರುವುದಾದರೆ ಪಂಚತಾರಾ ಹೋಟೆಲ್‌ನಲ್ಲಿ ಉಚಿತ ವಾಸ್ತವ್ಯದ ಆಮಿಷವನ್ನೂ ಒಡ್ಡಿದ್ದನು. ಅಂದಹಾಗೆ ಸ್ನೇಹಿತರು ಮುಂದಿನ ತಿಂಗಳ ಎರಡನೇ ವಾರದಲ್ಲಿ ಕುನ್ಮಿಂಗ್‌ಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಇದು ಚೀನಾದವರು ಕೆಲಸ ಮಾಡುವ ವಿಧಾನ ಹಾಗೂ ವೇಗ! ಇದನ್ನು ನಮ್ಮ ದೇಶದಲ್ಲಿ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. (ಮಂತ್ರಿಗಳು, ಅಧಿಕಾರಿಗಳೆಲ್ಲ ಈ ರೀತಿಯಲ್ಲಿ ಕೆಲಸ ಮಾಡಿದ್ದರೆ ನಮ್ಮ ದೇಶ ಹೀಗಿರುತ್ತಿತ್ತಾ? ಸಾಧ್ಯವೇ ಇಲ್ಲ ಬಿಡಿ.)

ಇದು ಒಬ್ಬ ಟ್ರಾವೆಲ್ ಏಜೆಂಟ್ ಅನುಭವವಲ್ಲ. ನೀವು ಚೀನಾದ ಯಾರ ಜತೆಗೆ ವ್ಯವಹರಿಸಿದರೂ ಹೆಚ್ಚು-ಕಮ್ಮಿ ಇದೇ ಅನುಭವವಾಗುತ್ತದೆ. ಇದಕ್ಕೆ ಕಾರಣ ಅಲ್ಲಿ ಮಡುಗಟ್ಟಿರುವ work culture. ಪ್ರತಿಯೊಂದು ಅವಕಾಶವನ್ನೂ ಸದವಕಾಶವಾಗಿ ಮಾರ್ಪಡಿಸಿಕೊಳ್ಳುವ ಜಾಣ್ಮೆ ಹಾಗೂ ಹೊಸ ಸಾಧ್ಯತೆಯನ್ನು ಸೃಷ್ಟಿಸುವ ಹಪಾಹಪಿಯನ್ನು ಚೀನಿಯರು ರೂಢಿಸಿಕೊಂಡಿದ್ದಾರೆ. ಅದಕ್ಕಾಗಿ ತಮ್ಮ ಯಾವುದೇ ಗುಣವನ್ನು ಬೆಳೆಸಿಕೊಳ್ಳಲು, ವ್ಯವಹಾರಕ್ಕೆ ತೊಡಕಾಗುತ್ತದೆಂದು ಅನಿಸಿದರೆ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. ಏಪ್ರಿಲ್ 30ರ ಫೋರ್ಬ್ಸ್' ಪತ್ರಿಕೆ A class room called China ಎಂಬ ಶೀರ್ಷಿಕೆಯಲ್ಲಿ Winning in China ಎಂಬ ಮಾಲಿಕೆಯಡಿಯಲ್ಲಿ ಸುಮಾರು ಇಪ್ಪತ್ತು ಪುಟಗಳ ವಿಶೇಷ ಲೇಖನವನ್ನು ಪ್ರಕಟಿಸಿದೆ. ಕಂಪ್ಯೂಟರ್ ತರಬೇತಿ ಸಂಸ್ಥೆಯಾದ ಎನ್‌ಐಐಟಿ ಮುಖ್ಯಸ್ಥ ಪ್ರಕಾಶ್ ಮೆನನ್ ತಮಗಾದ ಅನುಭವವನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಚೀನಾದ ವುಕ್ಸಿ ಪ್ರಾಂತದ ಗವರ್‍ನರ್ ಅವರು ಮೆನನ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮ ಪ್ರಾಂತದಲ್ಲಿ ಎನ್‌ಐಐಟಿ ಸೆಂಟರನ್ನು ತೆರೆಯುವಂತೆ ಕೋರಿದರಂತೆ. ಆಗ ಮೆನನ್, ತಮಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿದರೆ ತಮ್ಮ ಸೆಂಟರನ್ನು ತೆರೆಯುವುದಾಗಿ ಹೇಳಿದರಂತೆ. ಅದಾಗಿ ಒಂದು ವಾರದಲ್ಲಿ ಮೆನನ್ ಅಪೇಕ್ಷಿಸಿದ ಎಲ್ಲ ಸೌಕರ್ಯ ಗಳನ್ನು ಗವರ್‍ನರ್ ಒದಗಿಸಿದ್ದರಂತೆ. ಆರು ತಿಂಗಳ ಅವಧಿಯಲ್ಲಿ ಮೆನನ್ 1500 ಜನರಿಗೆ ತರಬೇತಿ ನೀಡಿದರಂತೆ. ಅವರೆಲ್ಲ ಕಂಪ್ಯೂಟರ್‌ನಲ್ಲಿ ಗಳಿಸಿದ ಪರಿಣತಿಯನ್ನು ಗಮನಿಸಿ, ಹತ್ತು ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತೆ ಮೆನನ್‌ರನ್ನು ಗವರ್‍ನರ್ ವಿನಂತಿಸಿಕೊಂಡರಂತೆ. ಒಂದು ವಾರದೊಳಗೆ ಮೂರು ಲಕ್ಷ ಚದರ ಅಡಿ ಜಾಗ ರೆಡಿ! ಇಂಥ ಸೌಲಭ್ಯ ಸಿಕ್ಕರೆ ಯಾಕೆ ಬೇರೆಲ್ಲಿಗೆ ಹೋಗಬೇಕು?

ಮುಂದೆ ಓದಿ : ಭಾರತಕ್ಕಿಂತ ಹತ್ತು ವರ್ಷ ಮುಂದಿರುವ ಚೀನಾ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more