ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕಿಂತ ಹತ್ತು ವರ್ಷ ಮುಂದಿರುವ ಚೀನಾ

By * ವಿಶ್ವೇಶ್ವರ ಭಟ್
|
Google Oneindia Kannada News

Glittering street in China
ಗೊತ್ತಿರಲಿ, ಭಾರತದ ಎನ್‌ಐಐಟಿ ಇಂದು ಚೀನಾದ ಪ್ರಮುಖ ಕಂಪ್ಯೂಟರ್ ತರಬೇತಿ ಸಂಸ್ಥೆಗಳಲ್ಲೊಂದು. ಹದಿಮೂರು ವರ್ಷಗಳ ಹಿಂದೆ, ಎನ್‌ಐಐಟಿ ಚೀನಾವನ್ನು ಪ್ರವೇಶಿಸಿದಾಗ ಅದು ಆ ಪ್ರಮಾಣದಲ್ಲಿ ಬೆಳೆಯಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಸ್ವತಃ ಪ್ರಕಾಶ್ ಮೆನನ್‌ಗೆ ಅನುಮಾನಗಳಿದ್ದವು. ಆದರೆ ಚೀನಾದ 25 ಪ್ರಾಂತಗಳಲ್ಲಿ 183 ಶಾಖೆಗಳನ್ನು ಎನ್‌ಐಐಟಿ ಹೊಂದಿದೆ. ಚೀನಾ ಸರಕಾರ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯುವಂತೆ ಮೆನನ್‌ಗೆ ಹೇಳುತ್ತಿದೆ. ಇಷ್ಟು ನಿಧಾನವಾದರೆ ಹೇಗೆ, ಎಲ್ಲ ಸೌಕರ್ಯ ಒದಗಿಸಲು ಸಿದ್ಧ ಎಂದು ಪ್ರಚೋದಿಸುತ್ತಿದೆ. ಆದರೆ ಮೆನನ್‌ಗೆ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಚೀನಾದ ಹಾಂಗ್‌ಜೋ ಪ್ರಾಂತದಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವೀಸ್ (ಟಿಸಿಎಸ್) ತನ್ನ ಕಚೇರಿ ಸ್ಥಾಪಿಸಲು ನಿರ್ಧರಿಸಿತು. ಆದರೆ ಶಾಕಾಹಾರಿ ಆಹಾರ ಲಭ್ಯವಾಗದೇ ಸಿಬ್ಬಂದಿಗೆ ತೀವ್ರ ಅನನುಕೂಲ ವಾಗಬಹುದೆಂದೂ, ಅದಕ್ಕಾಗಿ ತಮ್ಮ ಯೋಜನೆಯನ್ನು ಮುಂದೂಡುವುದು ಅನಿವಾರ್ಯವಾಗಬಹುದೆಂದೂ ಟಿಸಿಎಸ್ ಮುಖ್ಯಸ್ಥರು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು. ಈ ವಿಷಯ ಮೇಯರ್‌ಗೆ ಗೊತ್ತಾಯಿತು. ಅವರು ತಕ್ಷಣ ಟಿಸಿಎಸ್ ಮುಖ್ಯಸ್ಥರನ್ನು ಭೇಟಿ ಮಾಡಿ, ಪರಿಹಾರ ಹುಡುಕುವ ಭರವಸೆ ಕೊಟ್ಟರು. ಮೂರು ತಿಂಗಳ ಬಳಿಕ ಹಾಂಗ್‌ಜೋ ಪ್ರಾಂತಕ್ಕೆ ಟಿಸಿಎಸ್‌ನ ಏಷಿಯಾ ಪೆಸಿಫಿಕ್ ಮುಖ್ಯಸ್ಥೆ ಗಿರಿಜಾ ಪಾಂಡೆ ಹೋದಾಗ ಅವರಿಗೆ ಅಚ್ಚರಿ ಕಾದಿತ್ತು. ಟಿಸಿಎಸ್ ಸಂಸ್ಥೆಗಾಗಿಯೇ ಅಲ್ಲಿನ ಮೇಯರ್ ಭಾರತೀಯ ತಿಂಡಿ-ತಿನಿಸು, ಪದಾರ್ಥ ಸಿಗುವಂಥ ಶುದ್ಧ ಶಾಕಾಹಾರಿ ಹೋಟೆಲನ್ನು ತೆರೆದಿದ್ದರು!

ತೈವಾನ್ ಮೂಲದ ಸಾಬೂನು ಕಂಪನಿಯ ಮುಖ್ಯಸ್ಥರೊಬ್ಬರು ಟಯಾಂಜಿನ್ ಗವರ್‍ನರ್‌ರನ್ನು ಭೇಟಿ ಮಾಡಿ, ಇಡಿ ಅಮೆರಿಕಕ್ಕೆ ಮುಂದಿನ ಐದು ವರ್ಷಕ್ಕೆ ಸಾಕಾಗುವಷ್ಟು ಸೋಪನ್ನು ಆರು ತಿಂಗಳ ಅವಧಿಯಲ್ಲಿ ತಯಾರಿಸುವುದಾಗಿ ಹೇಳಿದಾಗ, ಕೇವಲ ಎರಡು ತಿಂಗಳ ಅವಧಿಯೊಳಗೆ ಆ ಕಂಪನಿಯ ಮುಖ್ಯಸ್ಥ ಕೇಳಿದ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ on the spot ವಾಗ್ದಾನ ಮಾಡಿದರು. ಆ ಪೈಕಿ ಹದಿನೆಂಟು ಕಿ.ಮೀ. ರಸ್ತೆ, ಎರಡು ಸೇತುವೆ ಹಾಗೂ ಪ್ರತ್ಯೇಕ ಸಣ್ಣ ವಿಮಾನ ನಿಲ್ದಾಣ ಕೂಡ ಸೇರಿತ್ತು. ಟಯಾಂಜಿನ್ ಗವರ್‍ನರ್ ಅವೆಲ್ಲವುಗಳಿಗೂ ಓಕೆ ಎಂದಿದ್ದ. ಅಷ್ಟೇ ಅಲ್ಲ ಎರಡು ತಿಂಗಳಲ್ಲಿ ಸೋಪ್ ಕಂಪನಿ ತನ್ನ ಘಟಕ ಸ್ಥಾಪಿಸುವುದಕ್ಕೆ ಕೆಂಪುಗಂಬಳಿಯನ್ನು ಹಾಸಿದ್ದ! ಮುಂದಿನ ನಾಲ್ಕು ತಿಂಗಳೊಳಗೆ ಘಟಕ ಸ್ಥಾಪನೆಯಾಯಿತು. ಆರು ತಿಂಗಳಾಗುವ ಹೊತ್ತಿಗೆ ಅಲ್ಲಿ ತಯಾರಾದ ಸೋಪ್‌ಗಳು ಅಮೆರಿಕದ ಬಚ್ಚಲುಮನೆಗಳಲ್ಲಿ ಕರಗುತ್ತಿದ್ದವು!

ನನಗೆ ಇವೆಲ್ಲಕ್ಕಿಂತ ತಮಾಷೆ ಅನಿಸಿದ್ದು ಈ ಪ್ರಸಂಗದಿಂದ. ಅಮೆರಿಕದ ವಾಗನ್-ಬಸೆಟ್ ಫರ್ನಿಚರ್ ಕಂಪನಿ ಚೀನಾದಲ್ಲಿ ಫರ್ನಿಚರ್ ತಯಾರಿಸಲು ನಿರ್ಧರಿಸಿತು. ಈ ವಿಷಯ ಚೀನಾದ ಸ್ಟಾರ್‌ಕಾರ್ಪ್ ಫರ್ನಿಚರ್ ಕಂಪನಿಗೆ ಹೇಗೋ ಗೊತ್ತಾಯಿತು. ನಾಲ್ಕು ದಿನಗಳಲ್ಲಿ ಸ್ಟಾರ್‌ಕಾರ್ಪ್‌ನ ಮುಖ್ಯಸ್ಥ ಬರ್ಮಾದಲ್ಲಿದ್ದ. ಬರ್ಮಾದಲ್ಲಿ ಉತ್ಪಾದನೆಯಾಗುವ ಟೀಕ್‌ವುಡ್ಡನ್ನು ತನ್ನ ಹೊರತಾಗಿ ಮತ್ತ್ಯಾರಿಗೂ ಕೊಡಬಾರದು ಎಂದು ಒಪ್ಪಂದ ಮಾಡಿಕೊಂಡ. ಅದಕ್ಕಾಗಿ ಲಕ್ಷಾಂತರ ಹೆಕ್ಟೇರ್ ಕಾಡನ್ನು ಖರೀದಿಸಿದ. ಈ ವಿಷಯ ವಾಗನ್-ಬಸೆಟ್ ಫರ್ನಿಚರ್ ಕಂಪನಿಗೆ ಗೊತ್ತಾಯಿತು. ಅವರು ಚೀನಾಕ್ಕೆ ಬರುವ ಯೋಚನೆಯನ್ನೇ ಕೈಬಿಟ್ಟರು. ಚೀನಾದಲ್ಲಿ ಬಿಜಿನೆಸ್ ಮಾಡಲು ತಲೆ, ಕಿಸೆಯಷ್ಟೇ ಮುಖ್ಯ ಅಲ್ಲ, ಅವೆಲ್ಲಕಿಂತ ಮುಖ್ಯವಾಗಿ speed ಬೇಕು. ಅದಕ್ಕಾಗಿ ಚೀನಾ ಕೇವಲ ಹತ್ತು ವರ್ಷಗಳಲ್ಲಿ ಭಾರತಕ್ಕಿಂತ ಇಪ್ಪತ್ತೈದು ವರ್ಷ ಮುಂದೆ ಹೋಗಿರೋದು.

ನಾನು ಸಾಮಾನ್ಯವಾಗಿ ಒಂದೇ ವಿಷಯಕ್ಕೆ ಜೋತುಬಿದ್ದು ಹೀಗೆ ವಾರವಾರ ಬರೆಯುವುದಿಲ್ಲ. ಆದರೆ ನಮ್ಮ ಪಕ್ಕದ ದೇಶದಲ್ಲಾಗುತ್ತಿರುವ ಈ ಪಾಟಿ ಕ್ರಾಂತಿ ನೋಡಿ ಬರೆಯದೇ ಇರುವುದಾದರೂ ಹೇಗೆ? ನಿಮ್ಮಲ್ಲಿ ಒಳ್ಳೆಯ ಐಡಿಯಾ ಹಾಗೂ ವೇಗ ಇದ್ದರೆ ನಿಮಗೂ ಚೀನಾದಲ್ಲಿ ಪುಟ್ಟ ಜಾಗವಿದೆ, ಹಾಗೂ ನಿಮ್ಮನ್ನೂ ಸ್ವಾಗತಿಸುವ ಕೈಗಳಿವೆ ಎಂದು ಹೇಳಲು ಇಷ್ಟೆಲ್ಲ ಬರೆಯಬೇಕಾಯಿತು.

ಎಲ್ಲರೂ ಚೀನಾದ ಕಡೆಗೇ ಏಕೆ ಮುಖ ಮಾಡಿದ್ದಾರೆ?ಎಲ್ಲರೂ ಚೀನಾದ ಕಡೆಗೇ ಏಕೆ ಮುಖ ಮಾಡಿದ್ದಾರೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X