ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೇ ಕುಂಕುಮ ರಫ್ತು ಮಾಡಿದ ಚೀನಾ!

By * ವಿಶ್ವೇಶ್ವರ ಭಟ್
|
Google Oneindia Kannada News

China is exporting kumkum to India
ಈ ವರ್ಷವೊಂದರಲ್ಲಿಯೇ ಚೀನಾ ಹನ್ನೆರಡು ದಶಲಕ್ಷ ಟನ್ ಕುಂಕುಮವನ್ನು ಭಾರತಕ್ಕೆ ರಫ್ತು ಮಾಡಲಿದೆ. ಈ ಕುಂಕುಮ ಭಾರತದಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆ ಎಂಬುದು ಗಮನಾರ್ಹ. ಕಳೆದ ಮೂರು ವರ್ಷಗಳಲ್ಲಿ ಚೀನಾ ಭಾರತಕ್ಕೆ ಕಳಿಸಿದ ಕರ್ಪೂರ ನಲವತ್ತೊಂದು ಲಕ್ಷ ಟನ್! ಬಹುಶಃ ಇನ್ನು ಒಂದೆರಡು ವರ್ಷಗಳಲ್ಲಿ ಭಾರತದ ಎಲ್ಲ ದೇಗುಲ, ಎಲ್ಲರ ಮನೆ ಪೂಜಾರೂಮಿನಲ್ಲಿರುವ ವಸ್ತುಗಳೆಲ್ಲ ಮೇಡ್ ಇನ್ ಚೀನಾ' ಆಗಲಿವೆ ಅಂದ್ರೆ ನೀವು ನಂಬಲೇಬೇಕು. 2006ರಲ್ಲಿಯೇ ಜಗತ್ತಿನಲ್ಲಿ ಮಾರಾಟವಾದ ಸಾಂತಾಕ್ಲಾಸ ಸೇರಿದಂತೆ ಕ್ರಿಸ್‌ಮಸ್ ವಸ್ತುಗಳ ಪೈಕಿ ಶೇ.70ರಷ್ಟು ಚೀನಾದಲ್ಲಿಯೇ ತಯಾರಾಗಿದ್ದವು . ಸಾಂತಾಕ್ಲಾಸನ ವಿವಿಧ ಭಂಗಿ, ಕ್ರಿಸ್‌ಮಸ್ ಟ್ರಿ, ಸಾಂತಾನ ಬಟ್ಟೆ, ದಿರಿಸು, ಟೋಪಿ, ಷೂ, ಗಡ್ಡ ಹಾಗೂ ಬೆಲ್ಟ್ ಸೇರಿದಂತೆ ಎಲ್ಲ ಪರಿಸ್ಟರಗಳ ಮೇಲೂ ಮೇಡ್ ಇನ್ ಚೀನಾ' ಸ್ಟಿಕರ್. ಈ ವರ್ಷ ಚೀನಾವು ಭಾರತದ ಎಲ್ಲ ಭಾಷೆಗಳಲ್ಲಿ ಮುದ್ರಿಸಿದ ಸುಮಾರು ಮುನ್ನೂರು ಪುಟಗಳನ್ನು ಒಳಗೊಂಡ ನಾಲ್ಕು ಕೋಟಿ ಭಗವದ್ಗೀತೆ 'ಯ ಪ್ರತಿಗಳನ್ನು ನಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಚೀನಾದಲ್ಲಿ ಮುದ್ರಿತವಾದ ಭಗವದ್ಗೀತೆ ಕನ್ನಡದಲ್ಲೂ ಲಭ್ಯವಾಗಲಿದೆ. ಮುನ್ನೂರು ಪುಟಗಳ ಈ ಪುಸ್ತಕದ ಬೆಲೆ ಐವತ್ತನ್ನು ಮೀರಲಿಕ್ಕಿಲ್ಲ !

ಮುಂಬರುವ ದಿನಗಳಲ್ಲಿ ನಮ್ಮ ಭಾಷೆಯ ಕೆಲವು ಅಮೂಲ್ಯ ಕೃತಿಗಳು ಚೀನಾದಲ್ಲಿ ಪ್ರಿಂಟಾಗಿ ಇಲ್ಲಿಗೆ ಬಂದರೆ ಅಚ್ಚರಿಪಡಬೇಕಿಲ್ಲ. ಕುರಾನ್, ಬೈಬಲ್‌ನ ಸುಮಾರು ಹನ್ನೆರಡು ಕೋಟಿ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿದ ಅಗ್ಗಳಿಕೆ ಚೀನಾದ್ದು. ಭಾಷೆ ಯಾವುದೇ ಇರಬಹುದು, ಪುಸ್ತಕ ಯಾವುದೇ ಇರಬಹುದು, ಅದು ಯಾರು ಬರೆದ ಪುಸ್ತಕವೇ ಆಗಿರಬಹುದು, ಚೀನಾಕ್ಕೆ ಸಂಬಂಧವಿಲ್ಲ. ಆದರೆ ಆರ್ಡರ್ ಮಾತ್ರ ಕೋಟಿಗಳಲ್ಲಿರಬೇಕು ಅಷ್ಟೆ ! ನೀವು ಯಾವುದೇ ವಿಗ್ರಹ, ಚಿತ್ರ, ಪುಸ್ತಕಗಳ ಪ್ರತಿಗಳನ್ನು ತೆಗೆದುಕೊಂಡು ಹೋದರೆ, ಎಷ್ಟು ಗಾತ್ರ, ಸಂಖ್ಯೆಗಳನ್ನೂ ಹೇಳಿದರೆ ನಿಮ್ಮ ಬೇಡಿಕೆಗೆ ಅನುಗುಣವಾದ ಕೆಲಸವನ್ನು ನೀವು ಹೇಳಿದ ದಿನಗಳೊಳಗೆ ಮಾಡಿ, ಮನೆ ಬಾಗಿಲಿಗೆ ತಲುಪಿಸುತ್ತಾರೆ. ಭಾರತದಲ್ಲಿ ಇಂದು ಚೀನಾದ ಫರ್ನಿಚರ್‌ಗಳು ಬಹಳ ಜನಪ್ರಿಯ. ಬಹುತೇಕ ಪೀಠೋಪಕರಣಗಳು ಅಲ್ಲಿಂದಲೇ ಬರುತ್ತವೆ. ನಮಗೆ ಬೇಕಾದ ಸ್ಪೆಸಿಫಿಕೇಶನ್ ಕೊಟ್ಟರೆ ಸಾಕು, ಹೇಳಿದ ದಿನದೊಳಗೆ ಹಾಜರ್. ಸಣ್ಣಪುಟ್ಟ ಹೋಟೆಲ್ ನವರು ಸಹ ಚೀನಾದಿಂದಲೇ ಫರ್ನಿಚರ್ ತರಿಸಲಾರಂಭಿಸಿದ್ದಾರೆ.

ಯಿವು ನಗರದ ಜನಸಂಖ್ಯೆ ಹನ್ನೆರಡು ಲಕ್ಷದಷ್ಟಿರಬಹುದು. ನಮ್ಮ ಮೈಸೂರು, ಮಂಗಳೂರಿನಂಥ ಊರು ಆದರೆ ಈ ನಗರ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ವರ್ಷದ ಯಾವುದೇ ಸಂದರ್ಭದಲ್ಲಿ ಈ ಊರಿಗೆ ಹೋದರೆ ಕನಿಷ್ಠ ಹತ್ತು ಸಾವಿರ ವಿದೇಶಿ ಉದ್ಯಮಿಗಳು, ವ್ಯಾಪಾರಸ್ಥರು ತಂಬು ಹೂಡಿರುತ್ತಾರೆ. ಜಗತ್ತಿನ ಕನಿಷ್ಠ 150 ದೇಶಗಳ ಉದ್ದಿಮೆದಾರರು ಹಣದ ಥೈಲಿ ಹಿಡಿದುಕೊಂಡು ಬಂದಿರುತ್ತಾರೆ. ಅಲ್ಲಿನ ಮಾರುಕಟ್ಟೆಯಲ್ಲಿ ಸಿಗದ ಸಾಮಾನುಗಳಿಲ್ಲ. ಆ ಊರಿನಲ್ಲಿ ಏನಿಲ್ಲವೆಂದರೂ ಐವತ್ತು ಸಾವಿರ ಅಂಗಡಿಗಳಿವೆ. ನಾಲ್ಕು ಲಕ್ಷ ವಿವಿಧ ರೀತಿಯ ಸಾಮಾನುಗಳನ್ನು ಅವರು ಮಾರುತ್ತಾರೆ ಅಂದ್ರೆ ಅಲ್ಲಿ ಉತ್ಪನ್ನವಾಗುವ ಪ್ರಾಡಕ್ಟ್‌ಗಳ ವೈಶಿಷ್ಟ್ಯಗಳೇನೆಂಬುದನ್ನು ಊಹಿಸಬಹುದು. ಯಿವು ನಗರದಲ್ಲಿ ನೀವು ಅಂಗಿ ಬಟನ್‌ಗಳಿಗಾಗಿ ಹುಡುಕಾಡುತ್ತಿದ್ದರೆ ಹುಚ್ಚರಾಗುವುದೊಂದು ಬಾಕಿ. ಯಾಕೆಂದರೆ ಅಲ್ಲಿ ಏನಿಲ್ಲವೆಂದರೂ ಹನ್ನೆರಡು ಲಕ್ಷ ವಿಭಿನ್ನ ವೆರೈಟಿಗಳ ಬಟನ್‌ಗಳು ಸಿಗುತ್ತವೆ. ಭಾರತದಲ್ಲಿ ಆ ಬಟನ್‌ಗೆ ಒಂದು ರೂ. ಇದ್ದರೆ ಯಿವುದಲ್ಲಿ ಹೆಚ್ಚೆಂದರೆ 15 ಪೈಸೆ! ಹೀಗಾಗಿ ಭಾರತಕ್ಕೆ ನೂರಾರು ಕೋಟಿ ಬಟನ್‌ಗಳು ಬರುತ್ತವೆ. ಚೀನಾದ ಬಟನ್‌ಗೆ ಭಾರತವೇ ಗುಂಡಿ!

2006ರಲ್ಲಿ ಸುಮಾರು ಏಳುನೂರು ವಿದೇಶಿ ಕಂಪನಿಗಳು ಈ ಊರಿನಲ್ಲಿ ತಮ್ಮ ಪ್ರತಿನಿಧಿಗಳನ್ನೊಳಗೊಂಡ ಕಚೇರಿಯನ್ನು ತೆರೆದಿದ್ದವು. ಈ ವರ್ಷ ಆ ಸಂಖ್ಯೆ ಏಳು ಸಾವಿರವನ್ನು ತಲುಪಿದೆ. ವಾಲ್ ಮಾರ್ಟ್, ಕ್ಯಾರಿಫೋರ್‌ನಂಥ ಕಂಪನಿಗಳು ಸಹ ಸೇರಿವೆ. ಈ ಪೈಕಿ ಚೀನಾದ ವೈಶಿಷ್ಟ್ಯವೇನೆಂದರೆ ಗ್ರಾಹಕರ ಹಾಗೆ ಯೋಚಿಸುವುದು, ಗ್ರಾಹಕ ಸ್ನೇಹಿಯಾಗಿ ವರ್ತಿಸುವುದು. ಎಂಥ ಚಿಕ್ಕ ಅಥವಾ ದೊಡ್ಡ (ಅತಿದೊಡ್ಡದಾಗಿದ್ದಷ್ಟೂ ಒಳ್ಳೆಯದು) ಆರ್ಡರ್‌ಗಳಿದ್ದರೂ ಒಪ್ಪಿಕೊಂಡು ಹೇಳಿದ ದಿನ ಡೆಲಿವರಿ ಮಾಡುವುದು. ಯಿವು ನಗರದಲ್ಲಿ ಕೋಟಿ, ಶತಕೋಟಿ, ಮಿಲಿಯನ್, ಬಿಲಿಯನ್, ಮೆಟ್ರಿಕ್‌ಟನ್ ಮುಂತಾದ ಪದಗಳು ಬಹಳ ಸಹಜವಾಗಿ ಅಲ್ಲಿನ ಜನರ ಬಾಯಲ್ಲಿ ಹರಿದಾಡುತ್ತದೆ. ಯಿವುದಲ್ಲಿ 15 ಶತಕೋಟಿ ಬಟನ್‌ಗಳು, 200 ದಶಲಕ್ಷ ಮೀಟರ್ ಪ್ಯಾಂಟ್‌ಜಿಪ್‌ಗಳು, ಐದು ಶತಕೋಟಿ ಮೀಟರ್ ಬಟ್ಟೆ, ಮೂರು ಶತಕೋಟಿ ಜೊತೆ ಸಾಕ್ಸ್ ತಯಾರಾಗುತ್ತವೆ ಅಂದ್ರೆ ಕುಶಾಲಲ್ಲ. ಲಾನ್ಸ್‌ವೆ ಲಾಂಗ್‌ಶಾ ನಿಟಿಂಗ್ ಕಂಪನಿ ಎಂಬ ಸಾಕ್ಸ್ ತಯಾರಿಕೆ ಸಂಸ್ಥೆಯಿದೆ. ಅದು ಪ್ರತಿದಿನ ಹತ್ತು ಲಕ್ಷ ಜೋಡಿ ಸಾಕ್ಸ್‌ಗಳನ್ನು ತಯಾರಿಸುತ್ತದೆ. ಇವೆಲ್ಲ ಇಷ್ಟೊಂದು ತಯಾರಾಗುವುದು ಯಿವು ಒಂದೇ ನಗರದಲ್ಲಿ ಅಲ್ಲ. ಚೀನಾದಲ್ಲಿ ಯಿವುನಂಥ 80 ನಗರಗಳಿವೆ. ಅಲ್ಲೂ ಇದೇ ರೀತಿಯ ಭರ್ಜರಿ ವಹಿವಾಟು ನಡೆಯುತ್ತವೆ.

ಇದಕ್ಕೆ ತಕ್ಕ ಹಾಗೆ ಸರಕಾರವೂ ಸ್ಪಂದಿಸಿದೆ. ಉದಾಹರಣೆಗೆ 2001ರಿಂದ 2005ರವರೆಗೆ 24 ಸಾವಿರ ಕಿ.ಮಿ. ಹೊಸ ಎಕ್ಸ್‌ಪ್ರೆಸ್ ಹೈವೇಗಳನ್ನು ಸರಕಾರ ನಿರ್ಮಿಸಿದೆ. ಅಂದರೆ ಪ್ರತಿವರ್ಷ 4800 ಕಿಮೀ ಅಂದರೆ ಕೆನಡಾ ಹಾಗೂ ಜರ್ಮನಿಯಲ್ಲಿರುವ ಹೈವೇಗಳನ್ನು ಸೇರಿಸಿದರೆ ಇಷ್ಟಾಗುತ್ತದೆ. ವಾಜಪೇಯಿ ಕಾಲದಲ್ಲಿ ಶುರುವಾದ ರಸ್ತೆಯನ್ನೇ ನಮಗಿನ್ನೂ ಮುಗಿಸಲು ಆಗಿಲ್ಲವೆಂಬುದರ ಹಿನ್ನೆಲೆಯಲ್ಲಿ ಚೀನಾ ಸಾಧನೆ ಗಮನಿಸಬೇಕು. ಚೀನಾದ ಯಶೋಗಾಥೆ ಪತ್ತೇದಾರಿ ಕಾದಂಬರಿಗಿಂತ ರೋಚಕ. ಪ್ರತಿ ಊರಿನಲ್ಲಿಯೂ ಇಂಥ ರೋಚಕತೆಯ ಹತ್ತಾರು ಕತೆಗಳನ್ನು ಕೇಳಬಹುದು. ಅವು ಎಂಥವನಲ್ಲೂ ಹಿಡಿಸ್ಪೂರ್ತಿಯನ್ನು ಹುಟ್ಟಿಸದೇ ಹೋಗುವುದಿಲ್ಲ. ಚೀನಾದ ಮಾರುಕಟ್ಟೆಯಲ್ಲಿ ಹೊರಟರೆ ಎಂಥವನಾದರೂ Main in India!ಗ್ಯಾರಂಟಿ!

<strong>ನೀವು ಪೂಜಿಸುವ ದೇವರ ವಿಗ್ರಹ ಚೀನಾದ್ದಾಗಿರಬಹುದು!</strong>ನೀವು ಪೂಜಿಸುವ ದೇವರ ವಿಗ್ರಹ ಚೀನಾದ್ದಾಗಿರಬಹುದು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X