ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಂಡೇಲಿ ಕಾಡಲ್ಲಿ ಹಾರ್ನ್‌ಬಿಲ್ ಎಂಬ ಸುಂದರಿ!

By * ವಿಶ್ವೇಶ್ವರ ಭಟ್
|
Google Oneindia Kannada News

Hornbill, endangered species
ಅದು ಮೊದಲ ನೋಟದಲ್ಲಿ ನೆಟ್ಟ ಪ್ರೇಮ! ಅವನು ಸೆರೆಹಿಡಿದ ಫೋಟೊಗಳನ್ನು ನೋಡಿದ ಬಳಿಕ ಆ ಪಕ್ಷಿಯ ಬಗ್ಗೆ ಯಾಕೋ ಮೋಹಿತನಾಗಿಬಿಟ್ಟೆ. ಅದರ ಸೆಳೆತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಡೆವಿಡ್ ಬೆಹ್ರೆನ್ಸ್ ಎಂಬ ವನ್ಯಜೀವಿ ಛಾಯಾಗ್ರಾಹಕನ ಹಾರ್ನ್‌ಬಿಲ್ ಎಂಬ ಸುಂದರ, ವಿಶಿಷ್ಟ ಪಕ್ಷಿಯ ಅವೆಷ್ಟೋ ಚಿತ್ರಗಳನ್ನು ನೋಡಿದ ಬಳಿಕ ಆ ಪಕ್ಷಿ ನನ್ನ ಮನಸ್ಸಿನಲ್ಲಿ ನಿಧಾನವಾಗಿ ಗೂಡುಕಟ್ಟಲಾರಂಭಿಸಿತು. ಹಾರ್ನ್‌ಬಿಲ್ ಬಗ್ಗೆ ಲಭ್ಯವಿರುವ ಪುಸ್ತಕಗಳನ್ನೆಲ್ಲ ಖರೀದಿಸಿದೆ. ಇಂಟರ್‌ನೆಟ್‌ನಲ್ಲಿ ಆ ಪಕ್ಷಿಯ ಬಗ್ಗೆ ಕೆದರಾಡಿದೆ. ಹಾರ್ನ್‌ಬಿಲ್ ಬಗ್ಗೆ ಸಾಕ್ಷ್ಯಚಿತ್ರಗಳೇನಾದರೂ ಇವೆಯಾ ಎಂದು ವಿಚಾರಿಸಿದೆ. ಕೆಲ ವರ್ಷಗಳ ಹಿಂದೆ ಬಿಬಿಸಿ ಈ ಪಕ್ಷಿಯ ಕುರಿತು ಒಂದು ಡಾಕ್ಯುಮೆಂಟರಿ ಪ್ರಸಾರ ಮಾಡಿತ್ತು ಎಂಬ ಅಂಶ ಪಕ್ಷಿಪ್ರೇಮಿ ಸ್ನೇಹಿತ ರಮೇಶ ಅಂಜನಾಪುರನಿಂದ ತಿಳಿಯಿತು. ಆದರೆ ಆ ಸಾಕ್ಷ್ಯಚಿತ್ರದ ಸಿ.ಡಿ. ಪಡೆಯುವುದು ಹೇಗೆ? ಪುನಃ ಬೆಂಗಳೂರಿನ ಪುಸ್ತಕದಂಗಡಿಗಳಿಗೆ ಹೋಗಿ ವಿಚಾರಿಸಿದರೆ ಉಹುಂ ಎಲ್ಲೂ ಸಿಗಲಿಲ್ಲ. ಪರಿಚಿತ ಕೆಲವು ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದೆ. ಅವರ ಉತ್ತರದಲ್ಲಿ ಅಂಥ ಆಸಕ್ತಿಯಿರಲಿಲ್ಲ.

ಬಿಬಿಸಿ ಡಾಕ್ಯುಮೆಂಟರಿ ವಿಭಾಗದ ಮುಖ್ಯಸ್ಥನಿಗೆ ಸುಮ್ಮನೆ ಒಂದು ಇ-ಮೇಲ್ ಕಳಿಸಿದರೆ ಹೇಗೆ? ಒಳ್ಳೆಯ ಐಡಿಯಾ ಎಂದೆನಿಸಿತು. ಆ ಮುಖ್ಯಸ್ಥನ ಹೆಸರು, ಗೋತ್ರ ಏನೂ ಗೊತ್ತಿಲ್ಲದಿದ್ದರೂ, ನನ್ನ ಅಭಿಲಾಷೆಯನ್ನೆಲ್ಲ ಬರೆದು, ದಯವಿಟ್ಟು ಒಂದು ಸಿ.ಡಿ.ಯಲ್ಲಿ ಆ ಸಾಕ್ಷ್ಯಚಿತ್ರವನ್ನು ಕಳುಹಿಸಿಕೊಡಲು ಸಾಧ್ಯವೇ ಎಂದು ಇ-ಮೇಲ್ ಕಳಿಸಿದೆ. ಹದಿನೈದು ದಿನಗಳಾದರೂ ಯಸ್ ಅಥವಾ ನೋ ಎಂಬ ಉತ್ತರವೂ ಬರಲಿಲ್ಲ. ಅಲ್ಲಿಗೆ ಬಿಬಿಸಿ ಸಾಕ್ಷ್ಯಚಿತ್ರದ ಆಸೆ ಬಿಟ್ಟೆ. ಈ ಮಧ್ಯೆ ರೀಡರ್ಸ್ ಡೈಜೆಸ್ಟ್ ಪ್ರಕಟಿಸಿದ The rare birds of Asia ಎಂಬ ಲೇಖನ ಸಿಕ್ಕಿತು. ಅದರಲ್ಲಿ ಹಾರ್ನ್‌ಬಿಲ್ ಬಗ್ಗೆ ಸ್ವಲ್ಪ ಉಪಯುಕ್ತ ಮಾಹಿತಿ ಸಿಕ್ಕಿತು.

ಪುನಃ ನನ್ನ ಹುಡುಕಾಟ ಗರಿಗೆದರಿತು. ಬೆಂಗಳೂರಿನ ಕ್ರಾಸ್ವರ್ಡ್ ಪುಸ್ತಕದಂಗಡಿಗೆ ಹೋಗಿ ಮತ್ತಷ್ಟು ತಡಕಾಡಿದೆ. ಹಾರ್ನ್ ಬಿಲ್‌ನ ಸುಮಾರು ಇಪ್ಪತ್ತು ಫೋಟೊಗಳುಳ್ಳ Indian birds ಎಂಬ ಪುಸ್ತಕ ಸಿಕ್ಕಿತು. ಅಲ್ಲೊಂದು ಪುಟ್ಟ ಮಾಹಿತಿ ಕಣ್ಣಿಗೆ ಬಿತ್ತು. ಭಾರತದಲ್ಲಿ ನಾಗಾಲ್ಯಾಂಡ್ ಬಿಟ್ಟರೆ ಪಶ್ಚಿಮಘಟ್ಟದಲ್ಲಿ ಹಾರ್ನ್ ಬಿಲ್ ಪಕ್ಷಿಗಳನ್ನು ನೋಡಬಹುದು' ಎಂದು ಬರೆದಿತ್ತು. ಈ ಮಧ್ಯೆ ಈ ರಮೇಶ ಅಂಜನಾಪುರ ಅಲ್ಲಯ್ಯ, ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಿದರು ಅನ್ನೋ ಗಾದೆ ಗೊತ್ತಿತ್ತು. ಕೈಯಲ್ಲೇ ತುಪ್ಪ ಇಟ್ಟುಕೊಂಡು ತುಪ್ಪಕ್ಕೇ ಹುಡುಕಾಡಿದ್ದು ಗೊತ್ತಿರಲಿಲ್ಲ' ಎಂದು ಛೇಡಿಸಿದ. ನನಗೆ ಅವನ ಮಾತಿನ ಅರ್ಥ ತಕ್ಷಣಕ್ಕೆ ಗೊತ್ತಾಗಲಿಲ್ಲ.

ಆಗ ರಮೇಶ ಹೇಳಿದ- ಹಾರ್ನ್‌ಬಿಲ್ ಬಗ್ಗೆ ತಲೆಕೆಡಿಸಿಕೊಂಡಿದ್ದೀಯಲ್ಲಾ, ಅದು ನಿನ್ನ ಜಿಲ್ಲೆಯಲ್ಲೇ ಇದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಕಾಡಿನಲ್ಲಿ ಆ ಪಕ್ಷಿಗಳಿವೆ. ನಾನು ಹಿಂದಿನವಾರ ಅಲ್ಲಿಗೆ ಹೋಗಿದ್ದೆ. ಹಾರ್ನ್‌ಬಿಲ್ ಪಕ್ಷಿಯ ಹೆಸರಿನಲ್ಲಿ ಒಂದು ರೆಸಾರ್ಟ್ ಬೇರೆ ಇದೆ. ಅಲ್ಲಿ ಪ್ರತಿನಿತ್ಯ ನೂರಾರು ಹಾರ್ನ್‌ಬಿಲ್‌ಗಳನ್ನು ನೋಡಬಹುದು.' ಎಲಾ ಇಂವ್ನ' ಎಂದೆ. ನಾನು ಹುಡುಕುತ್ತಿದ್ದ ಕಾಡಿನ ಬಳ್ಳಿ ನನ್ನ ಕಾಲಿಗೇ ಸುತ್ತಿಕೊಳ್ಳಲಾರಂಭಿಸಿತ್ತು.

ಈ ಮಧ್ಯೆ ನನಗೆ ಒಂದು ಆಶ್ಚರ್ಯ ಕಾದಿತ್ತು. ಎರಡೂವರೆ ತಿಂಗಳ ಹಿಂದೆ ನಾನು ಕಳಿಸಿದ ಇ-ಮೇಲ್‌ಗೆ ಉತ್ತರ ಬಂದಿತ್ತು. ಕ್ರಿಸ್ಟೋಫರ್ ಮ್ಯಾಕ್‌ಹಾರ್ಥ್ ಎಂಬುವವರ ಪತ್ರ. ನಿಮ್ಮ ಕೋರಿಕೆಯಂತೆ ಹಾರ್ನ್‌ಬಿಲ್ ಕುರಿತಾದ ಸಾಕ್ಷ್ಯಚಿತ್ರವನ್ನು ಸಂಪಾದಿಸಿದ್ದೇವೆ. ನಮ್ಮ ಸಂಗ್ರಹದಲ್ಲಿ 55 ನಿಮಿಷದ ಡಾಕ್ಯುಮೆಂಟರಿಯಿದೆ. ಅದನ್ನು ಕಳಿಸಲು ಸಾಧ್ಯವಾಗುವುದಿಲ್ಲ. ಆದರೆ ಏಳು ನಿಮಿಷಗಳ ಮುಖ್ಯಾಂಶಗಳನ್ನು ಕಳುಹಿಸಲು ತೊಂದರೆಯಿಲ್ಲ. ಅದು ನಿಮಗೆ ಪ್ರಯೋಜನವಾಗುವುದಾದರೆ ತಿಳಿಸಿ. ಕಳುಹಿಸಿಕೊಡುತ್ತೇನೆ' ಎಂದು ಮ್ಯಾಕ್‌ಹಾರ್ಥ್ ಬರೆದಿದ್ದ. ಎಂಥ ಪುಣ್ಯಾತ್ಮ ಅಂದುಕೊಂಡೆ. ತಕ್ಷಣ ಅದನ್ನು ಕಳಿಸು' ಎಂದು ಇ-ಮೇಲ್ ಬರೆದ ಹತ್ತು ದಿನಗಳಲ್ಲಿ ಹಾರ್ನ್‌ಬಿಲ್ ಸಿ.ಡಿ. ನನ್ನ ಕೈ ಸೇರಿತ್ತು. ತಕ್ಷಣ ನನ್ನ ಲ್ಯಾಪ್‌ಟಾಪ್‌ನಲ್ಲಿ ಸಿ.ಡಿ.ಯನ್ನು ತುರುಕಿ ಸಾಕ್ಷ್ಯಚಿತ್ರವನ್ನು ಪೂರ್ತಿ ನೋಡುವ ತನಕ ನನಗೆ ಸಮಾಧಾನವಾಗಿರಲಿಲ್ಲ.

ಕ್ರಿಸ್ಟೋಫರ್ ಮ್ಯಾಕ್‌ಹಾರ್ಥ್‌ಗೆ ನನ್ನ ಅಭಿನಂದನೆ, ಸಂತೋಷಗಳನ್ನೆಲ್ಲ ಮೂಟೆ ಕಟ್ಟಿ ಇ-ಮೇಲ್‌ನಲ್ಲಿ ಕಳಿಸಿದೆ. ಆತ ಹಾರ್ನ್‌ಬಿಲ್ ಬಗ್ಗೆ ನನಗೆ ಕೆಲವು ಲಿಂಕ್ಸ್ ಕಳುಹಿಸಿಕೊಟ್ಟ. ಬಿಬಿಸಿ ಪಕ್ಷಿಗಳ ಬಗ್ಗೆ ಪ್ರಕಟಿಸಿದ, ಆ ಪೈಕಿ ಹಾರ್ನ್‌ಬಿಲ್ ಪ್ರಸ್ತಾಪವಿರುವ ಕೆಲವು ಪುಟಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಿದ್ದ. ಆ ಲೇಖನದಲ್ಲಿ ಒಂದೆಡೆ ಡಾ. ಪಿಲೈ ಪೂನ್ಸ್‌ವಾಡ್ ಎಂಬ ಮಹಿಳೆ ಬಗ್ಗೆ ಪ್ರಸ್ತಾಪವಿತ್ತು. ಈ ಮಹಿಳೆ ಯಾರಪ್ಪಾ ಅಂತ ಹುಡುಕಿದರೆ ಬಿಬಿಸಿಗೆ ಹಾರ್ನ್‌ಬಿಲ್ ಕುರಿತು ಸಾಕ್ಷ್ಯಚಿತ್ರ ಮಾಡಿದಾಕೆಯೋ! ಥಾಯ್ಲೆಂಡ್‌ನ ಹಾರ್ನ್‌ಬಿಲ್ ಕುರಿತು ಸುಮಾರು ಮೂವತ್ತು ವರ್ಷಗಳಿಂದ ಸಂಶೋಧನೆ ಮಾಡುತ್ತಿರುವಾಕೆ. ಖಾವೋಯೈ ರಾಷ್ಟ್ರೀಯ ಉದ್ಯಾನದಲ್ಲಿ 1978ರಲ್ಲಿ ಆಕೆ ಹಾರ್ನ್‌ಬಿಲ್ ಹಕ್ಕಿಯ ಜಾಡನ್ನು ಹಿಡಿದು ಅಧ್ಯಯನ ಆರಂಭಿಸಿದವಳು. ಹಾರ್ನ್‌ಬಿಲ್ ಬಗ್ಗೆ ಈಕೆಯಷ್ಟು ತಲಸ್ಪರ್ಶಿ ಅಧ್ಯಯನ, ಛಾಯಾಗ್ರಹಣ, ಫಿಲ್ಮಿಂಗ್ ಮಾಡಿದ ಹಾಗೆ ಮತ್ತ್ಯಾರೂ ಮಾಡಿಲ್ಲ. 1979ರಲ್ಲಿ ಡಾ. ಪಿಲೈ ಥಾಯ್ಲೆಂಡ್ ಹಾರ್ನ್‌ಬಿಲ್ ಪ್ರಾಜೆಕ್ಟ್ ಸ್ಥಾಪಿಸಿ ತನ್ನ ಹುಡುಕಾಟಕ್ಕೆ ಒಂದು ಸಾಂಸ್ಥಿಕ ರೂಪ ಕೊಟ್ಟು ಅಧ್ಯಯನ ಆರಂಭಿಸಿದಳು. 1993ರಲ್ಲಿ ಇದು ಹಾರ್ನ್‌ಬಿಲ್ ರೀಸರ್ಚ್ ಫೌಂಡೇಶನ್ ಎಂದು ಪರಿವರ್ತಿತವಾಯಿತು.

ಆಕೆ ಆನಂತರ ತನ್ನ ಇಡೀ ಅಧ್ಯಯನ ಹಾಗೂ ಜೀವನವನ್ನು ಹಾರ್ನ್‌ಬಿಲ್‌ಗೆ ಮುಡಿಪಾಗಿಟ್ಟಳು. ಅಷ್ಟೊತ್ತಿಗೆ ಅವಳಿಗೆ ಗೊತ್ತಾಗಿದ್ದೇನೆಂದರೆ ಹಾರ್ನ್‌ಬಿಲ್ ಪಕ್ಷಿಸಂಕುಲ ಅಳಿವಿನ ಅಂಚಿನಲ್ಲಿದೆ ಎಂದು. ಅದಕ್ಕಾಗಿ ಆಕೆ ಆ ಪಕ್ಷಿಯ ಪ್ರತಿ ಚಲನವಲನ, ಜೀವನವಿಧಾನವನ್ನು ದಾಖಲಿಸಲು ನಿರ್ಧರಿಸಿದಳು. ಹಾರ್ನ್‌ಬಿಲ್ ಬಗ್ಗೆ ಗುಡ್ಡಗಾಡು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ವ್ಯಾಪಕ ಸಂಚಾರ ಮಾಡಿದಳು. ಗುಡ್ಡಗಾಡು ಜನರನ್ನು ಸಂದರ್ಶಿಸಿ ಅವಳು ಆ ಪಕ್ಷಿಯ ಬಗ್ಗೆ ಹೇಳಿದ ಎಲ್ಲ ವಿವರಗಳನ್ನು ದಾಖಲಿಸಿಕೊಂಡಳು.

ಈ ಪಕ್ಷಿಯನ್ನು ಹುಡುಕಿಕೊಂಡು ಆಕೆ ಜಾವಾ, ಸುಮಾತ್ರಾಕ್ಕೂ ಹೋಗಿ ಬಂದಿದ್ದಳು. ಆಫ್ರಿಕಾದ ಕಾಡನ್ನು ತಡಕಾಡಿದಳು. ಇದೇ ಉದ್ದೇಶವನ್ನಿಟ್ಟುಕೊಂಡು ಪಶ್ಚಿಮಘಟ್ಟಕ್ಕೂ ಬಂದಳು. ಏಷಿಯಾದಲ್ಲಿ ಮೂವತ್ತೊಂದು ಬೇರೆ ಬೇರೆ ನಮೂನೆಯ ಹಾರ್ನ್‌ಬಿಲ್‌ಗಳನ್ನು ಗುರುತಿಸಿ ಡಾಕ್ಯುಮೆಂಟ್ ಮಾಡಿದಳು. ಆಫ್ರಿಕಾದಲ್ಲಿ ಈ ಪಕ್ಷಿಯ ಬಗ್ಗೆ ವಿವರಗಳನ್ನು ಕಲೆಹಾಕುತ್ತಿದ್ದಾಗ, ಸತ್ತ ವ್ಯಕ್ತಿಗಳ ಆತ್ಮವನ್ನು ದೇವರಿಗೆ ತಲುಪಿಸಿ ಬರುವ ಕೆಲಸವನ್ನು ಹಾರ್ನ್‌ಬಿಲ್‌ಗಳು ಮಾಡುತ್ತವೆ ಎಂದು ಯಾರೋ ಹೇಳಿದರು. ಸರಿ, ಡಾ. ಪಿಲೈ ಆ ಪಕ್ಷಿಯ ಬಗ್ಗೆ ಇರುವ ಕತೆಗಳು, ದಂತಕತೆಗಳು, ಜಾನಪದ ವಿವರಗಳನ್ನು ಸಂಗ್ರಹಿಸಿದಳು.

ಅಳಿವಿನಂಚಿನಲ್ಲಿ ಹಾರ್ನ್‌ಬಿಲ್ ಪಕ್ಷಿಸಂಕುಲ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X