• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ

By * ವಿಶ್ವೇಶ್ವರ ಭಟ್
|

ಮೊನ್ನೆ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತಷ್ಟೆ. ಅದೇ ರೆಸಾರ್ಟ್‌ನಲ್ಲಿ ಕೆಲಸ ಮಾಡುವ ವೇಟರೊಬ್ಬರು ಸಾಯಂಕಾಲ ನಮ್ಮ ಕಚೇರಿಗೆ ತಾನು ಮೊಬೈಲ್‌ನಲ್ಲಿ ತೆಗೆದ ಕೆಲವು ದೃಶ್ಯಗಳನ್ನು ಸೆರೆಹಿಡಿದು ತಂದಿದ್ದರು. ಆದರೆ ಚಿತ್ರಗಳ ಗುಣಮಟ್ಟ ಚೆನ್ನಾಗಿಲ್ಲದುದರಿಂದ ಅವನ್ನೆಲ್ಲ ಪ್ರಕಟಿಸುವಂತಿರಲಿಲ್ಲ. ಶಾಸಕರು, ಸಂಸದರು ಹಾಗೂ ಸಚಿವರು ಎಲೆ ಅಡಕೆಯಿಂದ ಸುಂದರ' ಚಿತ್ತಾರ ಮೂಡಿಸಿದ ಹಾಗೂ ಸಿಗರೇಟ್ ಪ್ಯಾಕ್, ಗುಟಖಾ ಪೊಟ್ಟಣಗಳನ್ನು ಬೇಕಾಬಿಟ್ಟಿ ಚೆಲ್ಲಿದ ದೃಶ್ಯವದು. ಒಂದು ಕಾಲದಲ್ಲಿ' ಶಿಸ್ತಿನ ಪಕ್ಷವೆಂದು ಕರೆಯಿಸಿಕೊಂಡ ಬಿಜೆಪಿಯ ಜನ ಪ್ರತಿನಿಧಿಗಳು ಬರೀ ಒಂದು ದಿನ ಕಳೆದ ಜಾಗದ ಕೆಲವು ದೃಶ್ಯ ತುಣುಕುಗಳಲ್ಲಿ ಅವರ civic sense ಅನಾವರಣಗೊಂಡಿತ್ತು.

ಈ ದೃಶ್ಯಗಳನ್ನು ನೋಡುವಾಗ ಎರಡು ವರ್ಷಗಳ ಹಿಂದೆ ಫಿನ್‌ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಯಲ್ಲಿ ಕಂಡ ಆ ದೃಶ್ಯ ಕಣ್ಣಮುಂದೆ ಹಾದು ಹೋಯಿತು. ಹೆಲ್ಸಿಂಕಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಪಕ್ಕದಲ್ಲಿ ಸುಮಾರು ಅರವತ್ತು ವರ್ಷ ವಯಸ್ಸಿನ ಮಹಿಳೆಯೊಬ್ಬಳು ನಿಂತಿದ್ದಳು. ತುಂತುರು ಮಳೆ ಜಿನುಗುತ್ತಿದ್ದುದರಿಂದ ಅವಳ ಕೈಯಲ್ಲಿ ಕೊಡೆಯಿತ್ತು. ಆಕೆ ಒಂದೇಸಮನೆ ಸಿಗರೇಟು ಸೇದುತ್ತಿದ್ದಳು. ಸಿಗರೇಟಿನ ಬೂದಿಯನ್ನು ಕೊಡೆಯ 'ಒ' ಆಕಾರದ ಹಿಡಿಕೆಗೆ ಸಿಕ್ಕಿಸಿದ ಪೌಚ್‌ನಲ್ಲಿ ಸಂಗ್ರಹಿಸುತ್ತಿದ್ದಳು. ಪೂರ್ತಿ ಸಿಗರೇಟ್ ಸೇದಿದ ಬಳಿಕ ಉಳಿದ ಕೊನೆಯ ಭಾಗವನ್ನು ಅದೇ ಪೌಚ್‌ನೊಳಗೆ ಹಾಕಿದಳು. ಎರಡು ನಿಮಿಷಗಳ ಬಳಿಕ ಮತ್ತೊಂದು ಸಿಗರೇಟು. ಆಗಲೂ ಬೂದಿಯ ನ್ನೆಲ್ಲ ಕೊಡೆಗೆ ಸಿಕ್ಕಿಸಿಕೊಂಡ ಪೌಚ್‌ನೊಳಗೇ ಹಾಕುತ್ತಿದ್ದಳು.

ನನಗೆ ತುಸು ಕುತೂಹಲವಾಯಿತು. ಅವಳೇಕೆ ಸಿಗರೇಟಿನ ಬೂದಿಯನ್ನು ಸಂಗ್ರಹಿಸುತ್ತಿದ್ದಾಳೆ ಎಂಬುದು ಗೊತ್ತಾಗಲಿಲ್ಲ. ಅವಳಿಗೇ ಕೇಳಿದರೆ ಸಂದೇಹ ನಿವಾರಿಸಿಕೊಳ್ಳಬಹುದಲ್ಲ ಎಂದು ಮೇಡಂ, ನೀವು ಸಿಗರೇಟು ಬೂದಿ ಸಂಗ್ರಹಿಸುತ್ತೀರಾ?' ಎಂದು ಕೇಳಿದೆ. ಅದಕ್ಕೆ ಆಕೆ ನಕ್ಕು ಹೇಳಿದಳು- ಹಾಗೇನಿಲ್ಲ. ಈ ಬೂದಿಯನ್ನು ಬೇಕಾಬಿಟ್ಟಿ ಚೆಲ್ಲಿದರೆ ಪರಿಸರವನ್ನು ಕೊಳಕು ಮಾಡಿದಂತಾಗುವುದಿಲ್ಲವೇ? ಅದಕ್ಕಾಗಿ ಈ ಬೂದಿಯನ್ನು ಸಂಗ್ರಹಿಸಿ ಆನಂತರ ಕಸದ ಬುಟ್ಟಿಗೋ, ತೊಟ್ಟಿಗೋ ಹಾಕುತ್ತೇನೆ.'

ಸುರಿಯುವ ಆ ಮಳೆಯಲ್ಲಿ ಸಿಗರೇಟಿನ ಬೂದಿಯನ್ನು ಬಿಸಾಡಿದ್ದರೆ ಏನೂ ಆಗುತ್ತಿರಲಿಲ್ಲ. ತೊಳೆದು ಹೋಗುತ್ತಿತ್ತು. ಆದರೆ ಆ ಮಹಿಳೆಗೆ ಎಂಥ ಕಾಳಜಿ! ಒಂದು ತೊಟ್ಟು ಬೂದಿ ಸಹ ಹೊರಗೆ ಚೆಲ್ಲಬಾರದೆಂಬ ಕಾಳಜಿ! ಮರುದಿನ ಅಲ್ಲಿನ ಡಿಪಾರ್ಟ್ಮೆಂಟ್ ಸ್ಟೋರ್‍ಸ್‌ಗೆ ಹೋದಾಗ ಗಲ್ಲಾಪೆಟ್ಟಿಗೆಯ ಸನಿಹ ಆ ಪೌಚ್‌ಗಳು ಕಣ್ಣಿಗೆ ಬಿದ್ದವು. ಸಿಗರೇಟ್ ಖರೀದಿಸಿದವರೆಲ್ಲ ಆ ಪೌಚನ್ನು ತಪ್ಪದೇ ಖರೀದಿಸುತ್ತಿದ್ದರು. ಅಲ್ಲಿ ಸಿಗರೇಟಿನ ಬೂದಿ, ತುಂಡು, ಪೊಟ್ಟಣಗಳನ್ನು ಸಹ ಹೊರಗೆಲ್ಲೂ ಕಾಣುವಂತಿಲ್ಲ. ಅವರೇಕೆ ಹಾಂಗ? ನಾವ್ಯಾಕೆ ಹೀಂಗ?

ಈ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರೂ ನಮ್ಮ ಹಾಗೆ ಮನುಷ್ಯರು. ನಾವೂ ಅವರಂತೆ ಮನುಷ್ಯರು. ಅವರಿಗೆ ಸಾಧ್ಯ ವಾಗಿದ್ದು ನಮಗೇಕೆ ಸಾಧ್ಯವಾಗುವುದಿಲ್ಲ? ಅವರು ಅಷ್ಟೊಂದು ಸ್ವಚ್ಛವಾಗಿದ್ದರೆ ನಾವೇಕೆ ಇಷ್ಟೊಂದು ಕೊಳಕರು? ಅವರಿಗೆ ತಮ್ಮ ಮನೆಯನ್ನೊಂದೇ ಅಲ್ಲ, ತಮ್ಮ ಪರಿಸರ, ಬೀದಿ, ತಾವಿರುವ ಊರು, ಇಡೀ ದೇಶವನ್ನೇ ಶುದ್ಧವಾಗಿಟ್ಟುಕೊಳ್ಳಬೇಕೆಂಬ ಆಸೆ. ಆದರೆ ನಾವೇಕೆ ನಮ್ಮ ಮನೆಯೊಂದನ್ನು ಬಿಟ್ಟು ಉಳಿದೆಲ್ಲ ತಾಣಗಳನ್ನು ಹೊಲಸು ಮಾಡುತ್ತೇವೆ? ಮನೆಯೊಳಗಿನ ಸ್ವಚ್ಛತೆ, ಬೀದಿಯಲ್ಲಿಯೇ ಕರಗಿಹೋಗುವುದೇಕೆ? ನನ್ನ ಮನೆ, ಅಂಗಳ ಸ್ವಚ್ಛವಾಗಿದ್ದರೆ ಸಾಕು, ಉಳಿದುದೆಲ್ಲ ಹಾಳಾದರೂ ಚಿಂತೆಯಿಲ್ಲ ಎಂಬ ಮನೋಭಾವವೇಕೆ? ಹೀಗಾಗಿ ಎಲ್ಲರ ಮನೆಯೂ ಸ್ವಚ್ಛ. ಹೊರಗೆಲ್ಲ ಹೊಲಸು. ಮನೆಯ ಮ್ಯಾಟ್ ಹೊಲಸಾಗಿದ್ದರೆ ಜಗುಲಿ ಸ್ವಚ್ಛವಾಗಿರಲು ಹೇಗೆ ಸಾಧ್ಯ? ಇಂಥ ಸರಳ ಸತ್ಯವೇಕೆ ನಮಗೆ ಅರ್ಥವಾಗುವುದಿಲ್ಲ? ನಾವು ಸಭ್ಯಸಾಚಿ'ಗಳಾಗುವುದು ಯಾವಾಗ?

ನನ್ನದೊಂದಿಷ್ಟು ಪ್ರಶ್ನೆಗಳಿವೆ. ಅವು ನಿಮ್ಮವೂ ಆಗಿರಬಹುದು. ಅನೇಕ ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗಳಿವು. ಉತ್ತರ ಮಾತ್ರ ಸಿಗುತ್ತಿಲ್ಲ. ಯೋಚಿಸಿದಷ್ಟೂ ನಾನು ಹಾಗೆ ಯೋಚಿಸುವುದೇ ತಪ್ಪೇನೋ ಎಂಬಷ್ಟರಮಟ್ಟಿಗೆ ಈ ಪ್ರಶ್ನೆಗಳು ಚುಚ್ಚುತ್ತವೆ. ಇಲ್ಲಿನ ಬಹುತೇಕ ಪ್ರಶ್ನೆಗಳು ನಿಮ್ಮವೂ ಆಗಿದ್ದರೆ, ನನಗೆ ಅಷ್ಟೇ ಸಮಾಧಾನ. ಆದರೂ ಅಸಮಾಧಾನವಾಗುತ್ತದೆ. ಏಕೆಂದರೆ ಇಷ್ಟೆಲ್ಲ ಎಲ್ಲರಿಗೂ ಅನಿಸಿಯೂ ನಾವೇಕೆ ಹೀಗೆ ಇದ್ದೇವೆ? ಏಕೆ ಏಕೆ, ಏಕೆ ಹಾಗೂ ಏಕೆ?

ನಾವೇಕೆ ಕಂಡಕಂಡಲ್ಲಿ ಉಗುಳುತ್ತೇವೆ? ಎಲ್ಲಿ ಬೇಕಾದರೂ ಉಗುಳುವುದು, ಎಲೆಅಡಕೆ ಹಾಕಿ ಗೋಡೆಗೆ ಪಿಚಕಾರಿ ಹಾರಿಸುವುದು ನಮ್ಮ ಜನ್ಮಸಿದಟಛಿ ಹಕ್ಕಾ? ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಹೊಲಸು ಮಾಡುವುದು ಅಪರಾಧ ಎಂದು ಬೋರ್ಡ್ ಬರೆಯಿಸಿದರೂ, ದಂಡ ಹಾಕುತ್ತೇವೆ ಎಂದು ಬೆದರಿಸಿದರೂ, ಅಲ್ಲಿ ಹೊಲಸು ಮಾಡುವುದೇಕೆ? ಕಸ, ಕಡ್ಡಿ, ಬೇಡದ ಪದಾರ್ಥಗಳನ್ನು ಎಸೆಯಲು ತೊಟ್ಟಿಗಳನ್ನು ಇಟ್ಟಿದ್ದರೂ, ಅಲ್ಲೇಕೆ ಅವುಗಳನ್ನು ಹಾಕುವುದಿಲ್ಲ? ಕಂಡಕಂಡಲ್ಲಿಯೇ ಬಿಸಾಡುವುದೇಕೆ? ಪ್ರವಾಸಿ ತಾಣಗಳಿಗೆ ಹೋದಾಗ ಶೇಂಗಾ ಪೊಟ್ಟಣ, ಪೆಪ್ಸಿ-ಕೋಲಾ ಬಾಟಲಿ, ಚಿಪ್ಸ್ ಪೊಟ್ಟಣ, ಬಿಯರ್ ಬಾಟಲಿಗಳನ್ನು ಬೇಕಾಬಿಟ್ಟಿ ಎಸೆಯುವುದೇಕೆ? ಕುಡಿಯದೇ ಒಂದು ಊರಿನಲ್ಲಿ ಸುಂದರವಾಗಿ ಕಳೆಯಲು ಆಗುವುದಿಲ್ಲವಾ? ಕುಡಿಯುವುದೇ ಎಂಜಾಯ್‌ಮೆಂಟಾ? ಹಂಪಿ, ಅಜಂತಾ, ತಾಜ್‌ಮಹಲ್, ತಲಕಾಡು, ಗೋಲಗುಂಬಜ್‌ಗೆ ಹೋದಾಗ ಅಲ್ಲಿನ ಸ್ಮಾರಕಗಳ ಗೋಡೆಗಳ ಮೇಲೆ ನಮ್ಮ ಹೆಸರಿನ ಜತೆಗೆ ಹೆಂಡತಿ, ಪ್ರೇಯಸಿಯರ ಹೆಸರುಗಳನ್ನೇಕೆ ಬರೆದು ಅಂದಗೆಡಿಸುತ್ತೇವೆ? ನಾವೇನು ಆ ಸ್ಮಾರಕಗಳನ್ನು ಕಟ್ಟಿದವರಾ? ಜಕಣಾಚಾರಿಗಳಾ? ಹಾಗೆ ಬರೆಯುವುದರಿಂದ ಆ ಸ್ಮಾರಕಗಳನ್ನು ವಿರೂಪಗೊಳಿಸುತ್ತಿದ್ದೇವೆಂದು ನಮಗೇಕೆ ಸ್ವಲ್ಪವೂ ಅನಿಸುವುದಿಲ್ಲ?

ಸಿನಿಮಾ ನಟರು, ಆರಾಧ್ಯ ಕಲಾವಿದರು, ಮುಖ್ಯಮಂತ್ರಿ, ಪ್ರಧಾನಿ ಹಾಗೂ ಇನ್ನಿತರ ಗಣ್ಯರು ನಿಧನರಾದರೆ ಕಂಬನಿ ಮಿಡಿಯುವುದನ್ನು ಬಿಟ್ಟು, ಮರ್‍ಯಾದೆಯಿಂದ ಸಂತಾಪ ಸಲ್ಲಿಸುವುದನ್ನು ಬಿಟ್ಟು ನಾವೇಕೆ ಸಾರ್ವಜನಿಕ ಆಸ್ತಿಗಳ ಮೇಲೆ ದಾಳಿ ಮಾಡುತ್ತೇವೆ? ಕಟ್ಟಡ, ಬಸ್, ವಾಹನಗಳನ್ನೇಕೆ ಸುಡುತ್ತೇವೆ? ಜನರ ಮೇಲೇಕೆ ಕಲ್ಲು ತೂರುತ್ತೇವೆ? ನಾವು ಪೂಜಿಸುವ ನಟ ಸತ್ತಾಗ ಒಂದೂ ಬಸ್ಸನ್ನು ಸುಡದಿದ್ದರೆ, ಕಲ್ಲು ಹೊಡೆಯದಿದ್ದರೆ ಅದೆಂಥ ಪ್ರೀತಿ ಎಂದು ಜನರು ಭಾವಿಸಬಹುದೆಂಬ ಭಯವಾ? ಒಬ್ಬ ಸತ್ತಾಗ ಇನ್ನೊಬ್ಬರನ್ನು ಸತಾಯಿಸುವುದು ಹಾಗೂ ಸಾಯಿಸುವುದು ಅದೆಂಥ ಪ್ರೀತಿ? ಅದೂ ಪ್ರೀತೀನಾ? ಅದು ಮಾನವೀಯತೆಯಾ? ಅಮೆರಿಕದ ಆರಾಧ್ಯ ದೈವನಾದ ಮೈಕೆಲ್ ಜಾಕ್ಸನ್ ಸತ್ತಾಗ ಅವರು ಬಸ್ ಸುಡಲಿಲ್ಲವಲ್ಲಾ? ಕಟ್ಟಡಕ್ಕೆ ಕಲ್ಲು ತೂರಲಿಲ್ಲವಲ್ಲಾ? ಏಕೆ? ಮರ್‍ಯಾದೆಯಿಂದ ಶೋಕ, ಸಂತಾಪ ಸೂಚಿಸುವುದನ್ನೂ ನಾವೇಕೆ ಕಲಿತಿಲ್ಲ?

ಮುಂದಿನ ಭಾಗ : ನಾವು ಸಭ್ಯಸಾಚಿ'ಗಳಾಗುವುದು ಯಾವಾಗ? »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more