ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಲ್ಲಿ ಶಾಸಕರ ಹಗಲುವೇಷ

By Staff
|
Google Oneindia Kannada News

ಯಾರಿಗಾಗಿ, ಯಾಕಾಗಿ, ಯಾವ ಪುರುಷಾರ್ಥ ಸಾಧನೆಗಾಗಿ, ಯಾರ ಕೊರಳಿಗೆ ಸಾಧನೆ ಸರಮಾಲೆ ಹಾಕಿಕೊಳ್ಳಲು ಈ ಅಧಿವೇಶನ ಎಂಬಹಗಲುವೇಷದ ಆಟ ನಡೆಯುತ್ತಿದೆಯೆಂಬುದೇ ಅರ್ಥವಾಗುವುದಿಲ್ಲ. ನಮ್ಮ ಶಾಸಕರಿಗೆ, ಮಂತ್ರಿಗಳಿಗೆ ಹತ್ತು ದಿನ Change of place ಹಾಗೂ change of atmosphere ಬೇಕಾಗಿತ್ತು. ಹೀಗಾಗಿ ಅವರೆಲ್ಲ ಬೆಳಗಾವಿಗೆ ಬಂದಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಘನ ಉದ್ದೇಶವೂ ಇದ್ದಂತಿಲ್ಲ.

*ವಿಶ್ವೇಶ್ವರ ಭಟ್

ಬೆಳಗಾವಿಗೆ ಬರುವಾಗ ಅದೇ ಪುಸ್ತಕದ ಗುಂಗು. ಕುಂದಾನಗರಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಆಗ ಮಿಸುವಾಗ, ಲೋಕಸಭೆಯ ಸೆಕ್ರೆಟರಿ ಜನರಲ್ ಆಗಿ ನಿವೃತ್ತರಾದ ಸುಭಾಷ್ ಕಶ್ಯಪ್ ಬರೆದ Parliamentary Procedure ಎಂಬ ಕೃತಿಯನ್ನು ಓದುತ್ತಿದ್ದೆ. ನಮ್ಮ ಸಂಸತ್ತಿನ ಕಲಾಪ, ಅದು ಸಾಗಿ ಬಂದ ರೀತಿ, ಸದನದಲ್ಲಿ ಸಂಸದರ ಕಾರ್ಯವೈಖರಿ ಮುಂತಾದವಿಷಯಗಳ ಬಗ್ಗೆ ಅಪಾರ ಕಾಳಜಿ ಹಾಗೂ ತಿಳಿವಳಿಕೆಯುಳ್ಳ ಕಶ್ಯಪ್, ವರ್ಷದಿಂದ ವರ್ಷಕ್ಕೆ ನಮ್ಮ ಸಂಸತ್ತು ಹೇಗೆ ಹೊಣೆಗೇಡಿ ಸಂಸದರಿಂದ ತನ್ನ ಘನತೆ ಕಳೆದುಕೊಳ್ಳುತ್ತಿದೆಯೆಂಬುದನ್ನು ಹೇಳುತ್ತಾ ಹೋಗುತ್ತಾರೆ.

"ಐವತ್ತು ವರ್ಷಗಳ ಹಿಂದೆ ಸಹ ಸಂಸತ್ತಿನಲ್ಲಿದ್ದ ಎಲ್ಲ ಸದಸ್ಯರು ಮಹಾಬುದ್ಧಿವಂತರು, ಶಿಸ್ತುಗಾರರಾಗೇನೂ ಇರಲಿಲ್ಲ. ಎಲ್ಲರೂ ಸದನದ ಕಲಾಪಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಸದನಕ್ಕೆ ಹಾಜರಾಗದವರೂ ಇದ್ದರು. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ ಇತ್ತು. ಅಲ್ಲದೇ ಇಂಥ ಅಪಾಪೋಲಿ ಸದಸ್ಯರು ಎಲ್ಲರ ಟೀಕೆಗೆ ಗುರಿಯಾಗುತ್ತಿದ್ದರು. ಹೀಗಾಗಿ ಉಳಿದವರು ಕಲಾಪಕ್ಕೆ ಚಕ್ಕರ್ ಹೊಡೆಯಲು ಹಿಂಜರಿಯುತ್ತಿದ್ದರು. ಸದನ ನಡೆಯುವಾಗ ಹೊರಗುಳಿಯುವುದು ಸನ್ನಡತೆಯಲ್ಲ ಎಂಬ ಭಾವ ಇತ್ತು. ಅನಂತಶಯನಂ ಅಯ್ಯಂಗಾರರು ಸ್ಪೀಕರ್ ಆಗಿ ದ್ದಾಗ ಎಲ್ಲ ಸದಸ್ಯರ ಹೆಸರು ಹೇಳಿ ಮಾತಾಡುವಂತೆ ಪ್ರಚೋದಿಸುತ್ತಿದ್ದರು. ಸುಮ್ಮನೆ ಕುಳಿತ ಸದಸ್ಯರನ್ನು ಎಬ್ಬಿಸಿ ಈ ವಿಷಯದ ಬಗ್ಗೆ ನೀವೇನು ಹೇಳುತ್ತೀರಿ' ಎಂದು ಕೇಳುತ್ತಿದ್ದರು. ಹೀಗಾಗಿ ಸದಸ್ಯರು ಕಲಾಪಗಳ ಬಗ್ಗೆ ಜಾಗರೂಕರಾಗಿರುತ್ತಿದ್ದರು. ಎಲ್ಲಿ ಮೇಷ್ಟ್ರು ಪ್ರಶ್ನೆ ಕೇಳಿ ಬೆಚ್ಚಿ ಬೀಳಿಸಬಹುದೋ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳ ಹಾಗೆ ಸಂಸದರು ಕುಳಿತಿರುತ್ತಿದ್ದರು. ಕಲಾಪವನ್ನು ಆಗಾಗ ಬಂಕ್ ಮಾಡುವ ಸದಸ್ಯರನ್ನು ನಾಲ್ಕು ಜನರ ಮುಂದೆ ಗೇಲಿ ಮಾಡಿ ಚುರುಕು ಮುಟ್ಟಿಸುತ್ತಿದ್ದರು."

ಸುಭಾಷ್ ಕಶ್ಯಪ್ ಹೇಳುವುದನ್ನು ಕೇಳಿದರೆ ಶ್ರೀಕೃಷ್ಣ ದೇವರಾಯನ ಕಾಲದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಜ್ರ ವೈಢೂರ್ಯಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಸಾಲುಗಳನ್ನು ಕೇಳಿದಾಗ ಮನಸ್ಸಿನಲ್ಲಿ ಮೂಡುವ ಕಲ್ಪನೆಯ ಹೊಳಪಿನ ಚಿತ್ತಾರದಂತೆ, ಹೌದಾ ಆ ಕಾಲದಲ್ಲಿ ಹಾಗಿತ್ತಾ ಎಂಬ ಅಚ್ಚರಿಯೇ ನಮ್ಮನ್ನು ಬೆಚ್ಚಿ ಬೀಳಿಸುವಂತೆ ಇದು ಸಹ ಅಂತಹ ಬೆರಗನ್ನು ಅರಳಿಸಿ ನಮ್ಮನ್ನು ಗಲಿಬಿಲಿಗೊಳಿಸುತ್ತದೆ. ಯಾಕೆಂದರೆ ನಮ್ಮ ಸಂಸದರು ಒಂದು ಕಾಲಕ್ಕೆ ಹೀಗಿದ್ದರು ಎಂದು ಹೇಳಿದರೆ ಯಾರೂ ನಂಬುವುದಿಲ್ಲ. ಬದುಕಿರುವ ಆ ಕಾಲದ ಸಂಸದ ರಿಗೂ ಹೌದಾ, ಅಂದು ನಾವು ಹಾಗಿದ್ದೆವಾ" ಎಂದು ಅನಿಸಬಹುದು. ಆ ಪರಿ ಸಂಸದರು, ಸಂಸತ್ತು ಬದಲಾಗಿ ಬಿಟ್ಟಿದೆ.

ಅನಂತಶಯನಂ ಅಯ್ಯಂಗಾರರು ಸ್ಪೀಕರ್ ಆಗಿದ್ದಸಂದರ್ಭದಲ್ಲಿ ಸಂಸತ್ತಿನ ಅಧಿವೇಶನವೊಂದರಲ್ಲಿ ೫೧೮ಸಂಸದರು ಚರ್ಚೆ, ಕಲಾಪಗಳಲ್ಲಿ ಪಾಲ್ಗೊಂಡಿದ್ದರಂತೆ.ಅಲಿಪ್ತ ನೀತಿಯ ಬಗ್ಗೆ ಮಾತಾಡುವ ಸಂದರ್ಭದಲ್ಲಿ ಪ್ರಧಾನಿಜವಾಹರಲಾಲ್ ನೆಹರು ಪಾರ್ಲಿಮೆಂಟಿನ ಲೈಬ್ರರಿಯಲ್ಲಿ
ಎರಡೂವರೆ ಗಂಟೆ ಕುಳಿತು ನೋಟ್ಸ್ ಮಾಡಿಕೊಂಡಿದ್ದರಂತೆ.ಅವರು ಮನಸ್ಸು ಮಾಡಿದ್ದರೆ, ಸಹಾಯಕರಿಗೆ ಹೇಳಿದ್ದರೆ,ಮನೆಗೆ ಪುಸ್ತಕ ಬರುತ್ತಿತ್ತು. ವಿಷಯ ಪರಿಣತರಿಗೆ ಹೇಳಿದ್ದರೆಅವರೇ ನೋಟ್ಸ್ ಮಾಡಿ, ಸಂಸತ್ತಿನಲ್ಲಿ ಹೇಳಬೇಕಾದುದನ್ನು ಟಿಪ್ಪಣಿ ಮಾಡಿ ಒಪ್ಪಿಸುತ್ತಿದ್ದರು. ನೆಹರು ಹಾಗೆಮಾಡಲಿಲ್ಲ. ಸಂಸತ್ತಿನ ಲೈಬ್ರರಿಯಲ್ಲಿ ನೆಹರು ಬರೆದಒಂದು ಸಾಲನ್ನು ಉದ್ಧರಿಸಲಾಗಿದೆ " ಪುಸ್ತಕವನ್ನು ಮನೆಯಲ್ಲಿ ಓದುವುದಕ್ಕೂ, ಲೈಬ್ರರಿಯಲ್ಲಿ ಓದುವುದಕ್ಕೂಸಾಕಷ್ಟು ಅಂತರವಿದೆ. ಲೈಬ್ರರಿಯಲ್ಲಿ ಬೇಕಾದ ಒಂದುಪುಸ್ತಕ ಹುಡುಕುವಾಗ, ಅದೇ ವಿಷಯಕ್ಕೆ ಸಂಬಂಧಿಸಿದಹತ್ತಾರು ಇನ್ನೂ ಒಳ್ಳೆಯ ಪುಸ್ತಕಗಳು ಸಿಗುತ್ತವೆ. ಹೀಗಾಗಿಲೈಬ್ರರಿಯಲ್ಲಿ ಓದುವುದೆಂದರೆ ನನಗೆ ಇಷ್ಟ.

"ಈ ಮಾತನ್ನು ಸುಮ್ಮನೆ ನಮ್ಮ ಯಡಿಯೂರಪ್ಪ, ಖರ್ಗೆಅವರ ಮುಂದೆ ಹೇಳಿ. ಅವರೇನಾದರೂ ತಪರಾಕಿಗೆ ಎರಡುಬಾರಿಸಿದರೆ ನಾನು ಹೊಣೆಯಲ್ಲ. ಮುಖ್ಯಮಂತ್ರಿಯವರುಲೈಬ್ರರಿಗೆ ಹೋಗೋದು, ಅಲ್ಲಿ ಕುಳಿತು ಓದೋದು ಅಂದ್ರೆ...ಅಕಟಕಟಕಟಾ... ಅಂಥ ಜೋಕು ಮತ್ತೊಂದಿದೆಯಾ? ಮಾಡಲು ಏನೂ ಕೆಲಸವಿಲ್ಲದವನು ಓದುತ್ತಾನೆ.ಹೋಗಲು ಎಲ್ಲೂ ಜಾಗವಿಲ್ಲದವನು ಲೈಬ್ರರಿಗೆ ಹೋಗುತ್ತಾನೆಎಂಬಂತಾಗಿರುವ ಈ ದಿನಗಳಲ್ಲಿ ನಮ್ಮ ಮುಖ್ಯಮಂತ್ರಿ,ಮಂತ್ರಿಗಳಿಂದ ಅವನ್ನೆಲ್ಲ ನಿರೀಕ್ಷಿಸುವುದು ಸಾಧ್ಯವೇಇಲ್ಲ. ಅವರೆಲ್ಲ ಸಾರ್ವಜನಿಕವಾಗಿ ಓದುವುದನ್ನುನೋಡಬಹುದಾದ ಸಂದರ್ಭವೆಂದರೆ ಪ್ರಮಾಣವಚನಸ್ವೀಕರಿಸುವಾಗ ಮಾತ್ರ! ಇರಲಿ, ಸಂಸತ್ತು ಅಥವಾ ವಿಧಾನಮಂಡಲ ಕಲಾಪ ಇಂದು ಊಹೆಗೂ ನಿಲುಕದಷ್ಟು ರಸಾತಳತಲುಪಿದೆ ಅಂದ್ರೆ ಏನೇನೂ ಹೇಳಿ ದಂತಾಗುವುದಿಲ್ಲ.

ಅಟಲ್‌ಬಿಹಾರಿ ವಾಜಪೇಯಿ ಎರಡನೇ ಬಾರಿಗೆ ಪ್ರಧಾನಿ ಯಾದಾಗ ಬಿಜೆಪಿಯ ಎಲ್ಲ ಸಂಸದರನ್ನು ಕುಳ್ಳಿರಿಸಿಕೊಂಡು ಹೇಳಿದ್ದರು "ನೀವು ಉತ್ತಮ ಸಂಸದರಾಗಬೇಕೆಂದರೆ ಉತ್ತಮ ಸಂಸದೀಯ ಪಟುಗಳಾಗ ಬೇಕು. ಸದನದ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಜೆ.ಬಿ.ಕೃಪಲಾನಿ, ರಾಮ್ ಮನೋಹರ ಲೋಹಿಯಾ, ಗೋಪಾಲನ್, ಹೀರೇನ್ ಮುಖರ್ಜಿ, ಸ್ವರ್ಣಸಿಂಗ್, ಗೋವಿಂದವಲ್ಲಭ ಪಂತ್ ಮುಂತಾದ ಧೀಮಂತ ನಾಯಕರನ್ನು ಭೇಟಿ ಮಾಡಲು ಪಾರ್ಲಿಮೆಂಟ್ ಲೈಬ್ರರಿಗೆ ಹೋಗುತ್ತಿದ್ದೆವು. ಕೆಲ ನಾಯಕರು ವಿದ್ಯಾರ್ಥಿಗಳ ಹಾಗೆ ದಿನವಿಡೀ ಕುಳಿತಿರುತ್ತಿದ್ದರು. ಡಾ. ಶಾಮ್‌ಪ್ರಸಾದ್ ಮುಖರ್ಜಿಯವರು ಕಲಾಪ ನಡೆಯುವ ಹಿಂದಿನ ವಾರವೆಲ್ಲ ಲೈಬ್ರರಿಯಲ್ಲಿ ಕುಳಿತು ಸ್ವತಃ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು." ಪುಣ್ಯವಶಾತ್ ವಾಜಪೇಯಿಯವರು ಆ ನಾಯಕರು ಮಾಡಿದಂತೆ ನೀವೂ ಮಾಡಿ ಎಂದು ಹೇಳಿರಲಿಕ್ಕಿಲ್ಲ. ಬರೀ ತಮ್ಮ ನೆನಪುಗಳನ್ನಷ್ಟೆ ತೋಡಿಕೊಂಡಿರಬೇಕು. ಏಕೆಂದರೆ ಹಾಗೆ ನೀವೂ ಮಾಡಿ ಎಂದು ಹೇಳಿದರೆ ನಗೆಪಾಟಲಿಗೆ ಈಡಾಗಬೇಕಾ ಗುತ್ತದೆಂಬುದು ಅವರಿಗೆ ಗೊತ್ತಿರದ ಸಂಗತಿಯೇನಲ್ಲ.

'ಇಂಡಿಯಾ ಟುಡೆ' ಪತ್ರಿಕೆ, 'ಕುಸಿಯುತ್ತಿರುವ ಸಂಸದೀಯ ಕಲಾಪ ಪರಂಪರೆ' ವಿಷಯದ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಸಂದರ್ಶನ ನೀಡಿದ ಜಾರ್ಜ್ ಫರ್ನಾಂಡಿಸ್ ಹೀಗೆ ಹೇಳಿದ್ದಾರೆ -"ನಾನು ಪಾರ್ಲಿಮೆಂಟ್‌ಗೆ ಎರಡೂಕೈಬೀಸಿಕೊಂಡು ಅಥವಾ ಖಾಲಿ ಕೈಯಲ್ಲಿ ಹೋಗಿದ್ದೇ ಇಲ್ಲ. ಕೈಯಲ್ಲಿ ಒಂದೋ ಸೂಟ್‌ಕೇಸ್ ಇರುತ್ತಿತ್ತು. ಇಲ್ಲವೇಹತ್ತಾರು ಫೈಲು, ಪೇಪರ್ ಕ್ಲಿಪಿಂಗ್ಸ್‌ಗಳು ಇರುತ್ತಿದ್ದವು. ಕಾನ್ವೆಂಟ್ ಮಕ್ಕಳು ಸ್ಕೂಲ್ ಬ್ಯಾಗ್ ಇಲ್ಲದೇ ಸ್ಕೂಲಿಗೆಹೋಗುವುದನ್ನು ನೋಡಿದ್ದೀರಾ? ಹಾಗೇ ನಾನುಅಧಿವೇಶನ ನಡೆಯುವಾಗ ಹೋಗುತ್ತಿದ್ದೆ. ಈ ಅಭ್ಯಾಸಈಗಲೂ ಮುಂದುವರಿದುಕೊಂಡು ಬಂದಿದೆ. ನಾನುಮಂತ್ರಿಯಾದಾಗಲೂ ಹಾಗೇ ಹೋಗುತ್ತಿದ್ದೆ. ಆದರೆ ಈಗಿನ ಸಂಸದರು ದಿನಕ್ಕೊಂದು ರೀತಿಯ ಪೋಷಾಕು ಧರಿಸಿ ಖಾಲಿ ಕೈಯಲ್ಲಿ ಬರುತ್ತಾರೆ. ಫ್ಯಾಶನ್ ಪರೇಡ್‌ನಲ್ಲಿಭಾಗವಹಿಸುವವರಂತೆ ಬಂದು ಹೋಗುತ್ತಾರೆ." (ಎಲ್ಲ ಸಂಸದರಿಗೆ ಅಧಿವೇಶನ ಆರಂಭದಲ್ಲಿ ಫೈಲು, ಕಾಗದ ಪತ್ರಗಳನ್ನಿರಿಸಿಕೊಳ್ಳಲು ಒಂದು ಸೂಟ್‌ಕೇಸ್ ಕೊಡುತ್ತಾರೆ.ದುರ್ದೈವವೆಂದರೆ ಅದನ್ನು ಅವರು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ ಅಷ್ಟೆ.)

ಸುಭಾಷ್ ಕಶ್ಯಪ್ ಹೇಳಿದ ಒಂದು ವಿಚಾರವನ್ನು ನಿಮ್ಮ ಮುಂದಿಡಬೇಕು "ಕಮ್ಯುನಿಸ್ಟ್ ಪಕ್ಷ ನಮ್ಮ ದೇಶದಲ್ಲಿ ಒಂದೆರಡು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿರಬಹುದು. ಉಳಿದೆಡೆ ಆ ಪಕ್ಷದ ಅಸ್ತಿತ್ವವೇ ಇಲ್ಲ. ಆದರೆ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಸಿದ್ಧಾಂತವೇನು, ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಆ ಪಕ್ಷದ ನಿಲುವೇನು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಕಾರಣ ಕಳೆದ 50 ವರ್ಷಗಳಲ್ಲಿ ಆ ಪಕ್ಷ ಅತ್ಯುತ್ತಮ ಸಂಸದೀಯ ಪಟುಗಳನ್ನು ಈ ದೇಶಕ್ಕೆ ನೀಡಿದೆ. ಅಶೋಕ್ ಮೆಹತಾ, ಚತುರಾನನ್ ಮಿಶ್ರಾ, ಇಂದರ್‌ಜಿತ್ ಗುಪ್ತಾ, ಚಿತ್ತಬಸು, ಸೋಮನಾಥ ಚಟರ್ಜಿ, ಹರಕಿಶನ್‌ಸಿಂಗ್ ಸುರ್ಜಿತ್, ನೀಲೋತ್ಪಲ್ ಬಸು, ಬಿಮನ್ ಬಸು, ಸೀತಾರಾಮ ಯಚೂರಿ ಮುಂತಾದವರು ಮಾತಾಡಲು ಎದ್ದು ನಿಂತರೆ ಇಡೀ ದೇಶವೇಕೇಳಿಸಿಕೊಳ್ಳುತ್ತದೆ. ಕಮ್ಯುನಿಸ್ಟ್ ಪಕ್ಷದಲ್ಲಿ ಒಂದು ಸಂಪ್ರದಾಯವಿದೆ. ಅದೇನೆಂದರೆ, ಅಂದು ಮಾತಾಡುವ ಸಂಸದರು ಸದನದಲ್ಲಿನ ತಮ್ಮ ನಾಯಕರಿಗೆ ತಮ್ಮ ಪೂರ್ವ ತಯಾರಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಅಂದರೆ ಎಲ್ಲ ಸದಸ್ಯರೂ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೊದಲು ತಯಾರಿ ಮಾಡಿಕೊಂಡು ಬರಬೇಕೆಂಬ ಭಾವನೆಯನ್ನು ಅದು ಇಂದಿಗೂ ಸದಸ್ಯರ ತಲೆಯಲ್ಲಿ ತುಂಬುತ್ತಿದೆ."

ವಾಜಪೇಯಿ ತಮ್ಮ ಸಂಸದೀಯ ಅನುಭವಗಳ ಕುರಿತು ನಲವತ್ತೆರಡು ಪುಟಗಳ ಕಿರು ಹೊತ್ತಗೆಯಲ್ಲಿ, "ಪ್ರತಿದಿನ ಸಂಸತ್ತಿಗೆ ಹೊರಡುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಹಿಂದಿನ ದಿನ ಮಧ್ಯರಾತ್ರಿಯವರೆಗೆ ಅಧ್ಯಯನ ಮಾಡುತ್ತಿದ್ದೆ. ನೆಹರು ಅವರಂಥ ಧೀಮಂತ ನಾಯಕರಿರುವ ಸದನದಲ್ಲಿ ಪೂರ್ವ ಸಿದ್ಧತೆಯಿಲ್ಲದೆ ಮಾತಾಡಲು ಭಯವಾಗುತ್ತಿತ್ತು. ನೆಹರುಗೆ ಇಷ್ಟವಾದ ವಿದೇಶಾಂಗ ನೀತಿ ನನಗೂ ಇಷ್ಟವಾಗಿತ್ತು. ಈ ವಿಷಯದ ಬಗ್ಗೆ ಮಾತಾಡುವವರು ಕಡಿಮೆ ಸದಸ್ಯರಿದ್ದರು. ನಾನು ಈ ವಿಷಯದ ಬಗ್ಗೆ ಮಾತಾಡಲು ಎದ್ದು ನಿಂತರೆ ನೆಹರು ಸೇರಿದಂತೆ ಇಡೀ ಸದನದ ಸದಸ್ಯರು ಕುತೂಹಲದಿಂದ ಕೇಳುತ್ತಿದ್ದರು. ನಾನು ಒಂದು ತಾಸು ಮಾತಾಡಿದರೂ ನೆಹರು ಸುಮ್ಮನೆ ಕೇಳುತ್ತಿದ್ದರು. ಕೊನೆಯಲ್ಲಿ ನೆಹರು ನನ್ನನ್ನು ಕರೆಯಿಸಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದರು.

ಅನಂತರ ಉತ್ತರ ಕೊಡುವಾಗ ಮಾತುಮಾತಿಗೆ ವಾಜಪೇಯಿಜೀ ಹೇಳಿದಂತೆ, ಅಟಲ್‌ಜೀ ಹೇಳಿದಂತೆ ಎಂದು ನನ್ನ ಮಾತುಗಳನ್ನು ಪ್ರಸ್ತಾಪಿಸುತ್ತಿದ್ದರು. ನನಗೆ ಇವೆಲ್ಲ ರೋಮಾಂಚನ ಹುಟ್ಟಿಸುತ್ತಿದ್ದವು. ಸದನದ ಗಮನ ಸೆಳೆಯಲು ಹೊಸ ಹೊಸ ವಿಷಯಗಳನ್ನು ಓದಿಕೊಂಡು ಸಾಕಷ್ಟು ಮಾಹಿತಿ ಕಲೆ ಹಾಕಿಕೊಂಡು ಬರುತ್ತಿದ್ದೆ. ಆರಂಭದ ನನ್ನ ಈ ಪ್ರಯತ್ನ ಮುಂದಿನ ಸಂಸದೀಯ ಬದುಕಿಗೆ ಭದ್ರ ಬುನಾದಿ ಹಾಕಿತು. ಮುಂದೊಂದು ದಿನ ನನಗೆ ಅತ್ಯುತ್ತಮ ಸಂಸದೀಯ ಪಟು ಎಂದು ಸತ್ಕರಿಸಿದಾಗ ಮೊದಲ ದಿನದ ಸಿದ್ಧತೆ ನೆನಪಿಸಿಕೊಂಡು ನನ್ನ ಬಗೆಗೇ ನನಗೆ ಅತೀವ ಅಭಿಮಾನ ಮೂಡಿತು. ಆ ಮನಃಸ್ಥಿತಿಯೇ ನನ್ನನ್ನು ಇಲ್ಲಿಯ ತನಕ ಕೈಹಿಡಿದುಕೊಂಡು ಬಂದಿದೆ.

ಅಲ್ಲದೇ, ಕಮ್ಯುನಿಸ್ಟ್ ಪಕ್ಷದ ಸಂಸದೀಯ ಸ್ನೇಹಿತರು ನನ್ನ ಮೇಲೆ ಬೀರಿದ ಪ್ರಭಾವವೂ ಸಾಮಾನ್ಯವಲ್ಲ. ಹಿರೇನ್ ಮುಖರ್ಜಿಯವರಂಥವರು ಸಂಸತ್ತಿನಲ್ಲಿ ನಡೆದುಕೊಂಡ ರೀತಿಗೆ ನಾನು ಹಲವು ಸಲ ಅಚ್ಚರಿಪಟ್ಟಿದ್ದೇನೆ. ಒಮ್ಮೆ ಅವರು ಲೋಕಸಭೆಯಲ್ಲಿ ಸತತ ಆರು ತಾಸು ಮಾತಾಡಿ ವಿಸ್ಮಯ ಹುಟ್ಟಿಸಿದ್ದರು."

ಇವೆಲ್ಲ ಕಡತಗಳಲ್ಲೇ ಉಳಿದುಬಿಟ್ಟಿವೆಯಾ? ಜಾನೆ ಕಹಾಂ ಗಯೇ ವೋ ದಿನ್...!? ಹಾಗೆಂದು ಯೋಚಿಸುತ್ತಾ ಕಶ್ಯಪ್ ಪುಸ್ತಕ ಮೆಲುಕು ಹಾಕುತ್ತಾ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡರೆ....

ಹೇಳ್ತೀನಿ ಕೇಳಿ, ಬರೀ ಓಳು, ಸಪ್ಪೆ, ನೀರಸ, ಮನಸ್ಸು ಬೇಸರದ ಹಸಿಮುದ್ದೆ. ಯಾರಿಗಾಗಿ, ಯಾಕಾಗಿ, ಯಾವ ಪುರುಷಾರ್ಥ ಸಾಧನೆಗಾಗಿ, ಯಾರ ಕೊರಳಿಗೆ ಸಾಧನೆ ಸರಮಾಲೆ ಹಾಕಿಕೊಳ್ಳಲು ಈ ಅಧಿವೇಶನ ಎಂಬ ಹಗಲುವೇಷದ ಆಟ ನಡೆಯುತ್ತಿದೆಯೆಂಬುದೇ ಅರ್ಥ ವಾಗುವುದಿಲ್ಲ. ನಮ್ಮ ಶಾಸಕರಿಗೆ, ಮಂತ್ರಿಗಳಿಗೆ ಹತ್ತು ದಿನ Change of Place ಹಾಗೂ change of atmosphere ಬೇಕಾಗಿತ್ತು. ಹೀಗಾಗಿ ಅವರೆಲ್ಲ ಬೆಳಗಾವಿಗೆ ಬಂದಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಘನ ಉದ್ದೇಶವೂ ಇದ್ದಂತಿಲ್ಲ. ಎಲ್ಲರೂ ಮದುವೆ ಮನೆಗೋ, ಆರತಕ್ಷತೆಗೋ ಬರುವವರಂತೆ ಆರಾಮವಾಗಿ ಎಚ್‌ಎಮ್‌ಟಿ (ಹೆಗಲ ಮೇಲೆ ಟವೆಲ್ಲು) ನೇತಾಡಿಸಿಕೊಂಡು ಬರುವವರಂತೆ ಬಂದು ಹೋಗುತ್ತಿದ್ದಾರೆ. ಸದನದಲ್ಲಿ ಒಂದು ಗಂಭೀರ ಚರ್ಚೆ ಇಲ್ಲ.

ಬುದ್ಧಿಗೆ ಕಾವು ಕೊಡುವ ಸಂವಾದವಿಲ್ಲ. ಹೋಗಲಿ, ರಾಜ್ಯದ ಹಿತಾಸಕ್ತಿಗಾಗಿ ಬಡಿದಾಡಿಕೊಂಡ್ರು ಅನ್ನೋಣ ಅಂದ್ರೆ ಅಂಥ ಸೆಣಸೂ ಇಲ್ಲ. ಮಾತಾಡಿದ್ರೆ ಕಿರುಚಾಟ, ವೈಯಕ್ತಿಕ ಪ್ರಲಾಪ, ಮೂದಲಿಕೆ, ಗೇಲಿ, ರಾಜಕೀಯದ ಕಮಟು ವಾಸನೆ. ಆಡಳಿತ ಪಕ್ಷದಿಂದ ಅದೇ ಭಾಷೆಯಲ್ಲಿ ಪ್ರತ್ಯುತ್ತರ.ಯಾವನೋ ಶಾಸಕ ಮಾತಾಡುತ್ತಿರುತ್ತಾನೆ, ಉಳಿದವರು ತಮಗೆ ಸಂಬಂಧವೇ ಇಲ್ಲದವರಂತೆ ನಾನಾ ಅವಸ್ಥೆಯಲ್ಲೋ, ಧ್ಯಾನಾವಸ್ಥೆಯಲ್ಲೋ, ನಿದ್ರಾವಸ್ಥೆಯಲ್ಲೋ, ಅವ್ಯವಸ್ಥೆಯಲ್ಲೋ ಇರುತ್ತಾರೆ.

ಇಡೀ ರಾಜ್ಯದ ಜನತೆ ನಮ್ಮನ್ನು ನೋಡುತ್ತಾರೆಂಬ ಸಣ್ಣ ಭಯವೂ ಇಲ್ಲ. ಎಲ್ಲ ಶಾಸಕರು ಶಾಸನ ಸಭೆಯೆಂದರೆ ರಾಜಕೀಯ ಸಭೆ ಎಂದೇ ಭಾವಿಸಿದಂತಿದೆ. ಎಲ್ಲರೂ ತಮ್ಮ ಪಕ್ಷದ ವಕ್ತಾರರಂತೆ ಮಾತಾಡುತ್ತಾರೆ. ಅಪರೂಪಕ್ಕೆ ಯಾರೋ ಗಂಭೀರ ವಿಷಯ ಪ್ರಸ್ತಾಪಿಸಿದರೆ, ಇನ್ಯಾರೋ ಅಪದ್ಧ ಮಾತಾಡಿ, ವಿಷಯಾಂತರ ಮಾಡಿ ಚರ್ಚೆಯನ್ನು ಹಳ್ಳಕ್ಕೆ ಕೆಡುವುತ್ತಾರೆ. ಇನ್ನೂ ಕೆಲವರಂತೂ ಆಜನ್ಮ ವೈರಿಗಳಂತೆ ಮಾತಾಡುತ್ತಾರೆ. ಬುದ್ಧಿವಂತರ, ಪ್ರಾಜ್ಞರ ಸದನವೆಂದೇ ಪರಿಗಣಿಸುವ ಮೇಲ್ಮನೆಯಲ್ಲೂ ಇದೇ ಪರಿಸ್ಥಿತಿ. ಚರ್ಚೆಯಲ್ಲಿ ಗುಣಮಟ್ಟ ನಿರೀಕ್ಷಿಸುವವನೇ ಅಪರಾಧಿ. ಉತ್ತರ ಕರ್ನಾಟಕಕ್ಕೆ ಸ್ಪಂದಿಸಬೇಕೆಂಬ ಸದುದ್ದೇಶದಿಂದ ಆರಂಭವಾದ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗುವುದಿಲ್ಲ.ಸರಕಾರದ ನೀತಿಯ ಬಗ್ಗೆ ಪ್ರತಿಪಕ್ಷಗಳು ಸಕಾರಾತ್ಮಕ ಸಲಹೆ, ಸೂಚನೆಗಳನ್ನೂ ಕೊಡುವುದಿಲ್ಲ. ಟೀಕೆಗಳ ಬಾಣ ದಿಂದ ಘಾಸಿಗೊಳಿಸಲು ಹರಸಾಹಸ ಮಾಡುತ್ತವೆ. ದಿನದ ಕೊನೆಯಲ್ಲಿ ಸಾಧಿಸಿದ್ದೇನೆಂಬುದಕ್ಕೆ ಮಾತ್ರ ಉತ್ತರ ಸಿಗುವುದಿಲ್ಲ. ಚರ್ಚೆಯ ಅಂತರಂಗವನ್ನು ಗಮನಿಸಿದರೆ ಬದ್ಧತೆಯೇನೂ ಕಾಣುವುದಿಲ್ಲ.

ಪ್ರತಿವರ್ಷ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು, ನಡೆಸುತ್ತಿದ್ದೇವೆ ಎಂಬ ಕಾಟಾಚಾರದ ಭಾವನೆಗಿಂತ ಮತ್ಯಾವ ಹಿರಿಮೆಯೂ ಕಾಣಿಸುತ್ತಿಲ್ಲ. ಗಂಭೀರ ಕಲಾಪ ಬೇಕಾಗಿಯೇ ಇಲ್ಲವೇನೋ ಎಂಬಂತೆ ಎಲ್ಲರೂ ನಿರ್ಧರಿಸಿದಂತಿದೆ. ಹೀಗಿರುವಾಗ ಯಾರು ತಾನೇ ಏನು ಮಾಡಿಯಾರು ? ಅಧಿವೇಶನ ಯಾರ ಹಿತಕ್ಕಾಗಿ ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹಾಗೆಂದು ಅರ್ಥಪೂರ್ಣ ಚರ್ಚೆ ಆಗೇ ಇಲ್ಲವೆಂದಲ್ಲ, ಆಗಿವೆ. ಆಗಿದ್ದರ ಹಿಂದೆ ರಾಜಕೀಯ, ವ್ಯಕ್ತಿತ್ವ ನಿಂದನೆ, ಸ್ವಾರ್ಥ ಅಡಗಿರುವುದೂ ಅಷ್ಟೇ ಸತ್ಯ.

ಬೆಳಗಾವಿ ಅಧಿವೇಶನ ಹೀಗೇ ವ್ಯರ್ಥವಾಗಿ ಸೋರಿ ಹೋಗಬಾರದು. ಉತ್ತರ ಕರ್ನಾಟಕದ ಭಾಗದ ಜನತೆಗೆ ಇದೊಂದು ಶುದ್ಧ ಅಣಕ ಎಂದು ಅನಿಸಬಾರದು. ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಈ ಭಾಗದ ಸಮಸ್ಯೆ ಗಳೆಲ್ಲ ಬಗೆಹರಿದು ಹೋಗುವುದಿಲ್ಲ. ಆದರೆ ಜನತೆಗೆ ಅಷ್ಟರಮಟ್ಟಿಗೆ ಸಾಂತ್ವನವಾದರೂ ಸಿಗುತ್ತದೆ. sense of belongingnessಗಟ್ಟಿಯಾಗುತ್ತದೆ. ಕೇವಲ ಎರಡನೆಯ ಅಧಿವೇಶನ ಮುಗಿಸುವ ಹೊತ್ತಿಗೆ ಇದೊಂದು ಶುಷ್ಕ ಪ್ರಯತ್ನ ಎಂದೆನಿಸಬಾರದು.

ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಅಧಿವೇಶನದ ಕಲಾಪದಲ್ಲಿ ಪಾಲ್ಗೊಂಡಾಗ ಸುಭಾಷ್ ಕಶ್ಯಪ್ ಹೇಳಿದ ಮಾತುಗಳೆಲ್ಲ ಮರೆತು ಹೋಗಿದ್ದವು. ಈ ಕಲಾಪದ ಮುಂದೆ ಅವೆಲ್ಲ ಅರ್ಥ ಕಳೆದುಕೊಂಡಿದ್ದವು.

(ಸ್ನೇಹ ಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X