• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಿಡೆ ಬಿಡದಿದ್ದರೆ ಬದುಕೇ ಭಾರ!

By * ವಿಶ್ವೇಶ್ವರ ಭಟ್
|

ನಮ್ಮನ್ನು ಸಂಪೂರ್ಣ ಹತಾಹತಿಗೊಳಿಸಲು ನಮ್ಮೊಳಗಿರುವ ಒಂದು ಗುಣ ಸಾಕು. ಅದರಲ್ಲೂ ಆ ಗುಣ-ಸಂಕೋಚ- ಎಂದಾದರೆ ಮುಗೀತು. ಕಾಣಾಕಾಣ ಒಬ್ಬನನ್ನು ಮುಗಿಸಲಿಕ್ಕೆ ಒಂದು ಸೌಟು ಸಂಕೋಚ ಸಾಕು. ಬೇಕಾದರೆ ನೋಡಿ ನಮ್ಮೆಲ್ಲ ಪರಿತಪನೆ, ಚಡಪಡಿಕೆ, ಕೊರಗು, ವೇದನೆ, ಹತಾಶೆ, ಖಜ್ಜಾಖೋರತನ, ಅಸಹಾಯಕತೆ, ವಿಷಾದ, ಅಲವತ್ತುಕೊಳ್ಳುವಿಕೆ, ಭಾವ ಭಂಗದ ಹಿಂದುಗಡೆ ಈ ಸಂಕೋಚವೆಂಬ ಹೆಮ್ಮಾರಿ ಕುಳಿತುಕೊಂಡಿದೆ. ತಮಾಷೆಯೆಂದರೆ ನಮಗ್ಯಾರಿಗೂ ಇದು ಹೆಮ್ಮಾರಿಯೆಂದು ಅನಿಸುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಈ ಸಂಕೋಚವನ್ನು ನಾವು ಸಂಪನ್ನಗುಣ' ಎಂದೇ ಭಾವಿಸಿದ್ದೇವೆ. "ನೋಡು ಆಕೆ ಎಷ್ಟೊಂದು ಒಳ್ಳೆಯವಳು! ಅದೇನು ನಯ, ವಿನಯ? ಅದೇನು ಸಂಕೋಚ? ಅದೇನು ಒಳ್ಳೆಯ ನಡತೆ?" ಎಂದು ಪ್ರಶಂಸಿಸುತ್ತೇವೆ. ಸಂಕೋಚ ಪ್ರವೃತ್ತಿಯನ್ನು ನಮ್ಮ ಒಳ್ಳೆಯ ಗುಣಗಳ ಹರಿವಾಣದಲ್ಲಿಟ್ಟಿರುತ್ತೇವೆ.

ಆದರೆ ನಿಜಕ್ಕೂ ಈ ಸಂಕೋಚವೆಂಬುದು ನಾವಂದುಕೊಂಡಷ್ಟು ಒಳ್ಳೆಯ ಗುಣವಾ? ನಿಜಕ್ಕೂ ಇದು ಸಂಪನ್ನತೆಯಾ? ಸಂಕೋಚಕ್ಕೇಕೆ ಈ ಪರಿ ಮರ್ಯಾದೆ? ಸಂಕೋಚವೆಂಬುದು ಉತ್ತಮತನವಾ? ಈ ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತರೆ ಈ ಗುಣದಿಂದ ಒಳ್ಳೆಯ ನಿದರ್ಶನಗಳು ಸಿಗುವುದಿಲ್ಲ. ಆದರೂ ನಾವು ಸಂಕೋಚವನ್ನು ಭಾವಕೋಶದಲ್ಲಿ ಭದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಅದನ್ನಿಟ್ಟುಕೊಂಡಿದ್ದಕ್ಕೆ ನಮ್ಮೊಳಗೆ ಖುಷಿ, ಸಮಾಧಾನ ಅನುಭವಿಸುತ್ತಿರುತ್ತೇವೆ.

ಇನ್ನು ಕೆಲವರಿಗೆ ಸಂಕೋಚದ ದುಷ್ಪರಿಣಾಮಗಳೇನು ಎಂಬುದು ಗೊತ್ತು. ಹಾಗಂತ ಇವರು ಕೆಟ್ಟ ಗುಣಗಳ ಕವಾಟಿನಲ್ಲಿ ಅದನ್ನು ಇಡಲು ಬಯಸುವುದಿಲ್ಲ. ಬನಿಯನ್ ಅಥವಾ ಪ್ಯಾಂಟಿನೊಳಗೆ ಹೊಕ್ಕ ಕೆಂಪಿರುವೆ ಎಂದಷ್ಟೇ ಭಾವಿಸಿರುತ್ತಾರೆ. ಇಂಥವರು ಸಂಕೋಚದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅದು ಬಿಟ್ಟರೆ ಅವರು ಸಂಕೋಚವನ್ನು ಬದಿಗೊತ್ತಿ ನೇರಾನೇರ. ಅವರ ಮನಸುಬೆ ಏಕದಂ ನೇರ. ಸಂಕೋಚವೆಂಬುದು ಕಳ್ಳಹೆಜ್ಜೆ ಹಾಕಿ ಮುಂದೆ ಬಂದು ನಿಂತಾಗ, ಸುಮ್ಮಸುಮ್ನೆ ಕಳ್ಳನಗೆ ನಕ್ಕಾಗ ಸಂಕೋಚದಿಂದಲೇ ಅದನ್ನು ಬರಮಾಡಿಕೊಳ್ಳುತ್ತೇವಲ್ಲ ಅಲ್ಲಿಂದಲೇ ಶುರುವಾಗುತ್ತದೆ ಅದರ ಅವಾಂತರ. ಎದುರಿಗೆ ಬಂದಾಗ ಕೈಹಿಡಿದು ಒಳಮನೆಗೆ ಏಕಾಏಕಿ ಏಕೆ ಬಿಟ್ಟುಕೊಳ್ಳುತ್ತೇವೆಂದರೆ ಅದು ನಮಗೆ ಸಂಪನ್ನತೆಯ ಗುಣಶಾಹಿಯಾಗಿ ಕಾಣುತ್ತದೆ. ಹೀಗೆ ಮೆಲ್ಲಮೆಲ್ಲ ಈ ಸಂಕೋಚವೆಂಬುದು ಒಳಹೊಕ್ಕು ಪಟಗಚ್ಚೆ ಹಾಕಿ ಚಕ್ಕಳಮಕ್ಕಳ ಕುಳಿತುಬಿಟ್ಟರೆ ಅದರ ಪರಿತಪನೆಯ ಪ್ರಹಸನ ಆರಂಭವಾದಂತೆ.

ಬೆಳಗಾಯಿತೆಂದರೆ ಸಾಕು, ಈ ಸಂಕೋಚವೆಂಬುದು ಎಲ್ಲಿ ಮಡಗಿಬಿದ್ದಿರುತ್ತೋ ಏನೋ ತಟ್ಟನೆ ಬಂದು ಅಮರಿಕೊಳ್ಳುತ್ತದೆ. ಪೇಪರ್ ಓದುತ್ತಾ ಇರ್‍ತೇವೆ. ಪಕ್ಕದಲ್ಲೊಬ್ಬ ತಲೆ ಇಣುಕಿ ಇಣುಕಿ ಓದತೊಡಗುತ್ತಾನೆ. ಅಷ್ಟಕ್ಕೂ ಬಗ್ಗದಿದ್ದರೆ ನಮ್ಮ ಹೆಗಲ ಮೇಲೆ ಗಲ್ಲ ಇಟ್ಟು ಓದತೊಡಗುತ್ತಾನೆ. ಸರಿಯಾಗಿ ಕೂತ್ಕೊಳಯ್ಯ ಅಂತ ಹೇಳುವುದಿಲ್ಲ. ಅವನಿಗೇ ಪೇಪರ್ ಕೊಟ್ಟು ನಾವು ಸುಮ್ಮನಿರುತ್ತೇವೆ. ಅವನಿಗೆ ಬೇಸರವಾಗುತ್ತಲ್ಲ ಅಂತ ಹಾಗೂ ಮಾಡುತ್ತೇವೆ. ಉಪಾಹಾರಕ್ಕೆ ಕುಳಿತರೆ ತಾಟಿನಲ್ಲೂ ಸಂಕೋಚ ಬಂದು ಕುಳಿತಿರುತ್ತದೆ. ಐದಾದ ಮೇಲೊಂದು ದೋಸೆಯನ್ನು ತಿನ್ನಬೇಕೆಂದು ಮನಸ್ಸು ಹೇಳುತ್ತದೆ. ಬೇರೆಯವರು ಏನೆಂದುಕೊಳ್ಳುತ್ತಾರೋ, ಹೊಟ್ಟೆಬಾಕ, ಪಿಚಂಡಿಲ ಎನ್ನಬಹುದೇನೋ ಎಂಬ ಸಣ್ಣ ಸಂಕೋಚ. ಹೊಟ್ಟೆಯ ಆರ್ತನಾದವನ್ನು ಕೇಳಿಸಿಕೊಳ್ಳದೇ ಮೂರನೆ ದೋಸೆಯ ಕೊನೆಯಲ್ಲಿ ಮೇಲೆದ್ದು ಕೈತೊಳೆಯುತ್ತೇವೆ. ಕಚೇರಿಯಲ್ಲಿ ಬಾಸ್ ಮುಂದೆ ಕುಳಿತರೆ ಹೆಜ್ಜೆ ಹೆಜ್ಜೆಗೆ ಇದೇ ದಾಕ್ಷಿಣ್ಯ. ಬಾಸ್‌ನ ಅಂಗಿಗೂ ಕೋಟಿಗೂ ಮ್ಯಾಚ್ ಆಗುವುದಿಲ್ಲವೆಂಬುದು ಗೊತ್ತಿದ್ದೂ ಆತ "ಹೇಗಿದೆ ಡ್ರೆಸ್ಸು" ಅಂತ ಕೇಳಿದರೆ "ಬಹಳ ಚೆನ್ನಾಗಿದೆ... ಬಹಳ ಚೆನ್ನಾಗಿ ಕಾಣಿಸ್ತೀರಿ..." ಅಂತ ಅನಿಸಿಕೆ ಒಪ್ಪಿಸುತ್ತೇವೆ. ಚೆನ್ನಾಗಿ ಕಾಣಿಸುತ್ತಿಲ್ಲ, ಶುದ್ಧ ಪೆಕರನಂತೆ ಕಾಣಿಸುತ್ತೀರಿ' ಎಂದು ಹೇಳಲು ಧೈರ್ಯ ಸಾಕಾಗುವುದಿಲ್ಲ.

ಇದು ಕೇವಲ ನಮ್ಮ-ನಿಮ್ಮ ಪಾಡಲ್ಲ. ಮಹಾನ್ ವ್ಯಕ್ತಿಗಳಿಗೂ ಈ ಸಂಕೋಚ ಕಾಡುವುದುಂಟು. ಫ್ರಾಂಕ್ಲಿನ್ ರೂಸ್‌ವೆಲ್ಟ್ ಎಂಬ ಹೆಸರಿನ ಅಮೆರಿಕದ ಅಧ್ಯಕ್ಷನಿದ್ದ. ಆತ ಗಾಲಿಕುರ್ಚಿಯ ಮೇಲೆ ಚಲಿಸುತ್ತಿದ್ದ. ಪ್ರತಿನಿತ್ಯ ಅವನನ್ನು ನೂರಾರು ಮಂದಿ ಭೇಟಿ ಮಾಡುತ್ತಿದ್ದರು. ಅವರು ಹೋಗುವಾಗ ಗಾಲಿಕುರ್ಚಿಯಿಂದ ಮೇಲೆದ್ದು ಕೈಕುಲುಕಲು ಬಯಸುತ್ತಿದ್ದ. ಮೇಲೆದ್ದು ಷೇಕ್ ಹ್ಯಾಂಡ್ ಮಾಡದಿದ್ದರೆ ತನ್ನನ್ನು ತಪ್ಪಾಗಿ ಭಾವಿಸಬಹುದೆಂಬ ಸಂಕೋಚ ರೂಸ್‌ವೆಲ್ಟ್‌ನನ್ನು ಕಾಡುತ್ತಿತ್ತು. ಮೂರ್ನಾಲ್ಕು ಬಾರಿ ಗಾಲಿಕುರ್ಚಿಯಿಂದ ಮೇಲೇಳುವಾಗ ಬಿದ್ದುಬಿಟ್ಟಿದ್ದ. ಒಮ್ಮೆಯಂತೂ ಮೂಗು ಜಜ್ಜಿ ರಕ್ತ ಬಂದಿತ್ತು. ಈ ಸಂಕೋಚ ರೂಸ್‌ವೆಲ್ಟ್‌ನನ್ನು ತಿಂಗಳಾನುಗಟ್ಟಲೆ ಮಲಗಿಸಿಬಿಟ್ಟಿತ್ತು. ಆದರೂ ಅವನು ಸುಮ್ಮನಿರುತ್ತಿರಲಿಲ್ಲ. ಹಾಗಂತ ಆತನೇ ಬರೆದುಕೊಂಡಿದ್ದಾನೆ.

ಯೋಗಿತಾ ಬಾಲಿ ಎಂಬ ಹಿಂದಿ ತಾರೆಯಿದ್ದಳು. ಎಪ್ಪತ್ತರ ದಶಕದಲ್ಲಿ ಹದಿಹರೆಯದ ಯುವಕರಲ್ಲಿ ರಾತ್ರಿಗಳನ್ನು ಸಪ್ನಮಯವಾಗಿ ಉಳಿಸುತ್ತಿದ್ದ ನಟಿ. ಗಂಗಾ ತೇರಾ ಪಾನಿ ಅಮೃತ್, ನಫರತ್, ಧಮ್‌ಕಿ, ಮೃಗತೃಷ್ಣಾ, ಖ್ವಾಬ್, ಜಾನ್‌ವರ್, ಬೇಶಕ್ ಮುಂತಾದ ಚಿತ್ರಗಳಲ್ಲಿನ ಆಕೆಯ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ಯೋಗಿತಾ ಬಾಲಿಗೆ ಮೊದಲಿಂದಲೂ ಕಿಶೋರ್‌ಕುಮಾರ್ ಅಂದ್ರೆ, ಅವನ ಹಾಡುಗಳೆಂದರೆ ಪಂಚಪ್ರಾಣ. ಕಿಶೋರ್ ಜತೆ ಸಲುಗೆ ಮೂಡಿತು. ಆದರೆ ಆಕೆಗೆ ಆತನನ್ನು ಮದುವೆಯಾಗಲು ಮನಸ್ಸಿರಲಿಲ್ಲ. ಆಗಲೇ ಆತನ ಎರಡು ಮದುವೆಗಳು ಮುರಿದು ಬಿದ್ದಿದ್ದವು. ಒಂದು ದಿನ ಕಿಶೋರ್ ಆಕೆಯ ಮುಂದೆ ಮದುವೆಯಾಗೋಣ' ಅಂದ. ಹಾಳಾದ್ದು ಸಂಕೋಚ ಮೂಗು ತೂರಿಸಿತು. ಮದ್ವೆಗಿದ್ವೆ ಬೇಡ. ಹೀಗೇ ಸ್ನೇಹಿತರಾಗಿರೋಣ" ಅಂತ ಹೇಳಿದ್ದರೆ ಅಲ್ಲಿಗೆ ಮುಗಿದು ಹೋಗ್ತಿತ್ತು. ಕಿಶೋರ್ ಆಕೆಯ ಹಿಂದೆ ಬಿದ್ದ. ಪದೇ ಪದೆ ಮದ್ವೆ ಎಂದ. ಯೋಗಿತಾಗೆ ಗಂಟಲಿನ ಮಾತು ಬಾಯಿಗೆ ಬರಲಿಲ್ಲ. ಒಲ್ಲದ ಮನಸ್ಸಿನಿಂದ ಹಸೆಮಣೆ ಏರಿದಳು. ಕೊನೆಗೆ ಪಡಬಾರದ ಕಷ್ಟ ಅನುಭವಿಸಿದಳು. ಕಿಶೋರ್ ಜತೆ ಬಾಳ್ವೆ ಮಾಡಲು ಆಗಲಿಲ್ಲ. ಮದುವೆ ಅಸಹನೀಯವಾಯಿತು. ಕೊನೆಗೆ ವಿಚ್ಛೇದನ ಕೊಟ್ಟು ಹೊರನಡೆದು ಬಂದಳು. ಒಂದು ಸಂಕೋಚ ಬದುಕಿನಲ್ಲಿ ರಂಬಾರೂಡಿ ಎಬ್ಬಿಸಿಬಿಟ್ಟಿತು.

ಯಾವನೋ ಸ್ನೇಹಿತ ಬಂದು ಹಣ ಕೇಳುತ್ತಾನೆ. ನಮ್ಮ ಹತ್ರಾನೇ ದುಡ್ಡು ಇರೊಲ್ಲ. ಆದರೂ ಹಾಗಂತ ಹೇಳುವುದಿಲ್ಲ. ಬೇರೆಯವರ ಹತ್ತಿರ ಸಾಲ ಮಾಡಿ ತಂದು ಕೊಡುತ್ತೇವೆ. ಸ್ನೇಹಿತ ಹೇಳಿದ ದಿನಕ್ಕೆ ಹಣ ವಾಪಸ್ ಕೊಡುವುದಿಲ್ಲ. ನಾವು ಯಾರಿಂದ ಹಣ ತಂದಿರುತ್ತೇವೋ ಆತ ವಾಪಸ್ ಕೊಡುವಂತೆ ಪೀಡಿಸುತ್ತಾನೆ. ಆದರೂ ಸ್ನೇಹಿತನಲ್ಲಿ ಹೋಗಿ ಹಣ ಕೇಳುವುದಕ್ಕೆ ಸಂಕೋಚ. ಹಣ ವಾಪಸು ಕೊಡು ಅಂತ ಹೇಳಿದರೆ ಆತ ಬೇಸರಿಸಿಕೊಂಡರೆ, ಸಂಬಂಧ ಹಾಳಾದರೆ ಅಂತ ಯೋಚಿಸುತ್ತೇವೆಯೇ ಹೊರತು, ಕೊಟ್ಟ ಹಣ ಕೊಡು ಅಂತ ಖಡಾಖಂಡಿತವಾಗಿ ಹೇಳುವುದಿಲ್ಲ. ಈ ಸಂಕೋಚ ಬಂದು ಬಾಯನ್ನೇ ಮುಚ್ಚಿಹಾಕಿದರೂ ಸುಮ್ಮನಿರುತ್ತೇವೆ. ಅದರಿಂದ ಬರುವ ಎಲ್ಲ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೂ ಗಪ್ಪಂತ ಕುಳಿತಿರುತ್ತೇವೆ. ದುಡ್ಡು ವಾಪಸ್ ಬಂದಿಲ್ಲ ಎಂದು ಕೊನೆತನಕ ಕದಕದಿಸುತ್ತೇವೆಯೇ ಹೊರತು ಕೇಳಲು ಮುಂದಾಗುವುದೇ ಇಲ್ಲ.

ಈ ಸಂಕೋಚ ಒಮ್ಮೆ ಹೊಕ್ಕಿತೆಂದರೆ ಸಾಕು ಹೊರಗೆ ಬರುವುದೇ ಇಲ್ಲ. ಶ್ರೀಲಂಕಾ ಮೂಲದ ಕುಮಾರನ್ ಸನಂತರಿಯಾ ಬರೆದ ಕತೆಯನ್ನು ಹೇಳಬೇಕು. ಕತೆ ಹೆಸರೇ ಸಂಕೋಚ ಎಂಬ ಪೀಡೆ. ಅದೊಂದು ದೊಡ್ಡ ಮನೆ, ಶ್ರೀಮಂತ ಕುಟುಂಬ. ಅಪ್ಪ- ಅಮ್ಮಂದಿರಿಗೆ ಒಬ್ಬನೇ ಮಗ. ಅವನಿಗೊಬ್ಬಳು ಸುಂದರ ಹೆಂಡತಿ. ಮಗನಿಗೆ ವಿಪರೀತ ಕೆಲಸ. ಅಪ್ಪನ ಆಸ್ತಿಗೆ ಒಬ್ಬನೇ ವಾರಸುದಾರ. ಹೀಗಾಗಿ ತಿಂಗಳಲ್ಲಿ ಇಪ್ಪತ್ತು ಇಪ್ಪತ್ತೈದು ದಿನ ಊರೂರು ಸುತ್ತಾಟ. ಈ ಮಧ್ಯೆ ಮಾವನಿಗೆ ಸೊಸೆಯ ಮೇಲೆ ಕಣ್ಣು ಬಿತ್ತು. ಮಗ ಇಲ್ಲದ ಸಮಯದಲ್ಲಿ ಸೊಸೆಯನ್ನು ಏಕಾಂತಕ್ಕೆ ಕರೆಯತೊಡಗಿದ. ಸೊಸೆಗೆ ಸಂಕೋಚ. ಮಾವನೋ ಅತಿ ಶ್ರೀಮಂತ. ನಾಡಿಗೇ ಹೆಸರಾಂತ, ಪ್ರಭಾವಿ ವ್ಯಕ್ತಿ. ಇಂಥವನಿಗೆ ಹೇಗೆ ಎದುರಾಡಬೇಕೆಂಬ ದುಗುಡ. ಮಾವನ ಕಾಟ ಅತಿಯಾಯಿತು. ಸೊಸೆಗೆ ಅತೀವ ವೇದನೆ, ಸಂಕಟ. ಹಾಗೆಂದು ಇದನ್ನು ಗಂಡನ ಮುಂದಾಗಲಿ, ಅತ್ತೆಯ ಮುಂದಾಗಲಿ ಹೇಳುವಂತಿಲ್ಲ. ಹೇಳದಿದ್ದರೆ ಅರ್ಥವಾಗುವುದಿಲ್ಲ. ಮಾವನಿಗೆ ತಿರಸ್ಕಾರ ತೋರುವಂತಿಲ್ಲ. ಎಲ್ಲೆಡೆಯಿಂದಲೂ ಸಂಕೋಚ ಸುತ್ತುವರಿದಿತ್ತು. ಇಷ್ಟೆಲ್ಲ ಸಂಕಟ ಅನುಭವಿಸುವ ಬದಲು ಮಾವನಿಗೆ ಖಂಡತುಂಡಾಗಿ ಒಲ್ಲೆ' ಎಂದರೆ ಅವಳ ಸಮಸ್ಯೆ ಇತ್ಯರ್ಥವಾಗುತ್ತಿತ್ತು. ಹಾಗೆ ಹೇಳಲು ಅವಳಿಗೆ ಒಳ್ಳೆಯತನದ ಬಡಿವಾರ ಕಾಡುತ್ತಿತ್ತು. ಒಳ್ಳೆಯತನವೇ ಸಂಕೋಚವೆಂದು ಅವಳು ಭಾವಿಸಿದ್ದಳು. ಈ ಕತೆ ಅಂತ್ಯ ಇಲ್ಲಿ ಮುಖ್ಯ ಅಲ್ಲ. ಒಂದು ಸಣ್ಣಸಂಕೋಚ ಅವಳನ್ನು ಯಾವ ಪರಿ ಕಾಡುತ್ತದೆಂಬುದನ್ನು ಕತೆಗಾರ ಸೊಗಸಾಗಿ ಹೇಳುತ್ತಾನೆ.

ಬಾಸ್ ಹೇಳುವ ಕೆಟ್ಟ ಜೋಕಿಗೆ ನಗುವಾಗ, ಮನಸ್ಸಿಲ್ಲದಿದ್ದರೂ ಗೆಳೆಯನ ಜತೆ ಸುತ್ತುವಾಗ, ಮೇಲಧಿಕಾರಿಯನ್ನು ಮೆಚ್ಚಿಸುವುದಕ್ಕಾಗಿ ಆಫೀಸಿನ ಫೈಲುಗಳೆಲ್ಲವನ್ನು ಮನೆಗೆ ತಂದು ನೋಡುತ್ತಾ ಹೆಂಡತಿಯಿಂದ ಉಗಿಸಿಕೊಳ್ಳುವಾಗ, ಒಲ್ಲದ ಗೆಳೆತನಕ್ಕೆ ಸಿಕ್ಕು ವೃಥಾ ಕಾಲಹರಣ ಮಾಡುವಾಗ, ಮನೆಯಲ್ಲಿ ಬೈಸಿಕೊಳ್ಳುವುದು ಗ್ಯಾರಂಟಿಯಾದಾಗಲೂ ಮನಸ್ಸಿಲ್ಲದ ಮನಸ್ಸಿನಿಂದ ಸ್ನೇಹಿತನ ಜತೆ ಸುತ್ತುವಾಗ, ಖಾರ ತಿನ್ನುವುದು ಅಸಾಧ್ಯವಾದರೂ ಬೇರೆಯವರಿಂದ ಹೊಗಳಿಸಿಕೊಳ್ಳಲು ಅತಿ ಖಾರ ತಿಂದು ಬಾಯಿ ಉರಿಸಿಕೊಳ್ಳುವಾಗ, ಪ್ರಿಯಕರನ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಒಟ್ಟಾದ ಗುಟ್ಟು ರಟ್ಟಾದಾಗ, ಜೋಪಾನವಾಗಿ ಸಲಹಿದ ಕಾರನ್ನು ಒಂದೆರಡು ದಿನಗಳ ಮಾತಿಗೆ ಸ್ನೇಹಿತ ಕೇಳಿದಾಗ, ಅನೇಕ ವರ್ಷಗಳಿಂದ ಪ್ರೀತಿಯಿಂದ ಕಾಯ್ದುಕೊಂಡು ಬಂದ ಪುಸ್ತಕಗಳಿಗೆ ಸ್ನೇಹಿತರು ಕೈಹಾಕಿ ತೆಗೆದುಕೊಂಡು ಹೋಗುವಾಗ, ವಾರದ ಮಟ್ಟಿಗೆ ಕ್ಯಾಮೆರಾ ಬೇಕೆಂದು ಗೆಳೆಯನ ವರಾತಕ್ಕೆ ಬೀಳುವಾಗ ಈ ಸಂಕೋಚವೆಂಬುದು ಪೀಡೆಯಾಗಿ ಗೋಚರಿಸುತ್ತದೆ. ಆದರೆ ಅನೇಕರಿಗೆ ತಮ್ಮ ಒಳ್ಳೆಯತನಕ್ಕೆ ಎಲ್ಲಿ ಧಕ್ಕೆ ಬರುವುದೋ ಎಂಬ ಆತಂಕ. ಇಂಥವರಿಗೆ ನೇರವಾಗಿದ್ದರೆ, straight forward ಇದ್ದರೆ ಕೆಟ್ಟವರೆಂದು ಇತರರು ಭಾವಿಸುತ್ತಾರೆಂಬ ಪುಕಪುಕಿ. ಈ ಸಂಕೋಚ ತಮಗೆ ಮುಳುವಾಗುತ್ತದೆಯೆಂಬುದನ್ನು ಮರೆಯುತ್ತಾರೆ. ಸಂಕೋಚ ಎಂಬ ಬಲಹೀನತೆ ಎಂದಿಗೂ ನಮಗೆ ಒಳ್ಳೆಯದಲ್ಲ ಎಂಬ ಸಾಮಾನ್ಯ ಸಂಗತಿಯೂ ಅವರ ಗಮನಕ್ಕೆ ಬರುವುದಿಲ್ಲ.

ಈ ಸಂಕೋಚ ಇದೆಯಲ್ಲ ಅದು ನಿಮಗೆ ತಿನ್ನಬೇಕೆಂದು ಅನಿಸಿದಾಗ ತಿನ್ನಲು ಹೇಗೆ ಬಿಡುವುದಿಲ್ಲವೋ, ತಿನ್ನಲು ಆಗದಿದ್ದಾಗ ಬೇಕಾಬಿಟ್ಟಿ ತಿನ್ನುವಂತೆ ಮಾಡುತ್ತದೆ. ಬಾಸ್ ಮನೆಗೆ ಊಟಕ್ಕೆ ಹೋದರೆ ಇಷ್ಟವಿಲ್ಲದಿದ್ದರೂ ತಿನ್ನಬೇಕಾಗುತ್ತದೆ. ಬಾಸ್‌ನ ಒತ್ತಾಯಕ್ಕೆ, ಆತನ ಹೆಂಡತಿಯನ್ನು ಮೆಚ್ಚಿಸಲು ತಿಂದು ಹೊಟ್ಟೆ, ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಬಾಸ್‌ನ ಮೆಚ್ಚಿಸಲು ಆತನ ನಾಯಿ, ಬೆಕ್ಕನ್ನು ಒತ್ತಾಯಕ್ಕೆ ಪ್ರೀತಿಸುತ್ತಾರೆ. ತಮ್ಮ ಮನೆಯಲ್ಲಿ ನಾಯಿಯನ್ನು ಎಂದೂ ಹೊರಗೆ ಕರೆದುಕೊಂಡು ಹೋಗದವರು, ಬಾಸ್‌ನ ನಾಯಿಯನ್ನು ಒಂದು ರೌಂಡು ಹೊಡೆಸುತ್ತಾರೆ. ಬಾಸ್‌ಗೆ ಕೆಂಪು ಇಷ್ಟವಾದರೆ ಇವರಿಗೂ ಅದೇ ಇಷ್ಟ. ಆತನಿಗೆ ಪಿಜ್ಜಾ ಇಷ್ಟವಾದರೆ ಇವರಿಗೂ ಅದೇ ಬೇಕು, ರಬ್ಬರ್ ಜಗಿದಂತೆ ಎಂದೆನಿಸಿದರೂ ಪರವಾಗಿಲ್ಲ. ಕೆಲವು ಸಲ ನಮಗೆ ಸುತಾರಾಂ ಇಷ್ಟವಿರುವುದಿಲ್ಲ. ಆದರೂ ಬಹಳ ಇಷ್ಟವಿರುವಂತೆ ನಟಿಸುತ್ತೇವೆ. ಈ ಹಾಳು ಸಂಕೋಚದ ಸಹವಾಸ!

ಯಾವುದಾದರೂ ಸಂಗತಿ ಹಿಡಿಸದಿದ್ದರೆ, ಇಷ್ಟವಾಗದಿದ್ದರೆ ಒಂದೇ ಪಾಟಿಗೆ ಇಲ್ಲ, ಸಲ್ಲ, ಒಲ್ಲೆ, ಆಗದು ಎಂದು ಹೇಳಿಬಿಟ್ಟರೆ, ಸಂಕೋಚವನ್ನು ನಾಯಿಮರಿಯಂತೆ ಕುತ್ತಿಗೆ ಹಿಡಿದು ಹೊರಗಿಟ್ಟರೆ ಆ ಕ್ಷಣಕ್ಕೆ ಕಿರಿಕಿರಿಯಾದರೂ ಅನಂತರ ಯಾವತ್ತೂ ನೆಮ್ಮದಿಯಿಂದ ಇರಬಹುದು. ಎರಡನೆ ಮಹಾಯುದ್ಧದಲ್ಲಿ ಅಮೆರಿಕದ ಅಧ್ಯಕ್ಷ ಹ್ಯಾರಿಟ್ರೂಮನ್‌ಗೆ, ತುರ್ತುಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿಯನ್ನು ಒಪ್ಪಿಕೊಂಡ ಆಕೆಯ ಬೆಂಬಲಿಗರಿಗೆ, ಮುಷರ್ರಫ್ ನಂಥ, ಸದ್ದಾಂನಂಥ, ಜಾರ್ಜ್ ಬುಷ್‌ನಂಥವರನ್ನು ಯಾವತ್ತೂ ಒಪ್ಪಿಕೊಳ್ಳಬೇಕಾದ ಅನಿವಾರ್‍ಯತೆಯಿರುವ ಅವರ ನಿಕಟವರ್ತಿಗಳಿಗೆ, ನಮ್ಮ ನಿಮ್ಮೆಲ್ಲರನ್ನು ನಿತ್ಯವೂ ಸಹಿಸಿಕೊಳ್ಳಬೇಕಾಗಿರುವ ಹೆಂಡತಿಯರಿಗೆ ಹಾಗೂ ಗಂಡಂದಿರಿಗೆ ಅಡಿಗಡಿಗೆ ಎದುರಾಗುವುದು ಈ ಸಂಕೋಚವೆಂಬ ಬನಿಯನ್ ಒಳಗಿನ ಕೆಂಪಿರುವೆ! ಏನೇ ಹೇಳಿ ಸಂಕೋಚ ನಾವಂದುಕೊಂಡಷ್ಟು ಒಳ್ಳೆಯದಲ್ಲ.

(ಸ್ನೇಹಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more