ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಹಾರಿಹೋದ ಪಾರಿವಾಳಗಳೆಲ್ಲ ಹೋದವೆಲ್ಲಿಗೆ?

By * ವಿಶ್ವೇಶ್ವರ ಭಟ್
|
Google Oneindia Kannada News

Pigeon or dove
ಸಮಸ್ಯೆಯೆಂದರೆ ಯಾರಿಗೂ ಬೇಡ. ಇನ್ನು ಸಮಸ್ಯೆಯ ಕತ್ತಲ ಬಾವಿಯೊಳಗಿಳಿದು ಪರಿಹಾರದ ನೀರು ಸೇದುವುದರಲ್ಲಿ ಯಾರಿಗೂ ಆಸಕ್ತಿಯಿರುವುದಿಲ್ಲ. ನಮಗೆ ಎಲ್ಲವೂ ರೆಡಿಮೇಡ್ ಸಿಗಬೇಕು. ಎಷ್ಟೆಂದರೂ ಇದು "Ready to eat" ಕಾಲ ತಾನೆ. ಆದರೆ ಕೆಲವರಿರುತ್ತಾರೆ, ಅವರು ತಮ್ಮದೇ ಪ್ರಪಂಚದಲ್ಲಿ ಇರುತ್ತಾರೆ. ಅವರಿಗೆ ಲಾಭ, ನಷ್ಟದ ಗೊಡವೆಯೂ ಇರುವುದಿಲ್ಲ. ಸಮಯದ ಪರಿವೆಯೂ ಇರುವುದಿಲ್ಲ. ಕೈಗೆತ್ತಿಕೊಂಡ ಕೆಲಸ ಮುಗಿಸುವತನಕ ಸಮಾಧಾನ ಇಲ್ಲ. ಅದರಿಂದ ತಮಗೇನು ಪ್ರಯೋಜನ ಎಂಬುದನ್ನೂ ಲೆಕ್ಕಿಸುವುದಿಲ್ಲ. ಯಾವನೋ ಪುಣ್ಯಾತ್ಮ ಗೆದ್ದಲಹುಳು, ಜೆನ್ನೊಣಗಳ ಬಗ್ಗೆ ಹತ್ತಾರು ವರ್ಷಗಳಿಂದ ಸಂಶೋಧನೆ ನಡೆಸುತ್ತಿರುತ್ತಾನೆ. ಇನ್ಯಾರೋ ಸೂರ್ಯ, ಚಂದ್ರ, ಉಪಗ್ರಹ, ಉಲ್ಕೆ, ಧೂಮಕೇತುಗಳತ್ತ ಟೆಲಿಸ್ಕೋಪ್ ನೆಟ್ಟು ವರ್ಷಗಟ್ಟಲೆ ನೋಡುತ್ತಿರುತ್ತಾನೆ. ಐದಾರು ವರ್ಷ ಹಾಗೆ ನೋಡುತ್ತಿದ್ದರೂ ಹೊಸ ಆಕಾಶಕಾಯಗಳೇನೂ ಕಾಣದೇ ಹೋಗಬಹುದು. ಆದರೆ ಆತ ನೋಡುವುದನ್ನು ಬಿಡಲಾರ. ಡಿಸ್ಕವರಿ ಚಾನೆಲ್‌ನ ಛಾಯಾಗ್ರಾಹಕ ಹಾವು ಪೊರೆ ಕಳಚುವುದಕ್ಕಾಗಿ ತಿಂಗಳುಗಟ್ಟಲೆ ಅದರ ಹಿಂದೆ ಸುತ್ತುತ್ತಾನೆ. ಅದನ್ನು ನಾವು ಟೀವಿಯಲ್ಲಿ ನೋಡಿ ಇಷ್ಟೇನಾ ಅನ್ನುತ್ತೇವೆ. ಆದರೆ ಅದರ ಹಿಂದಿನ ಉದ್ದೇಶ, ಅವನ ಶ್ರಮ ಅರ್ಥವಾಗುವುದೇ ಇಲ್ಲ. ಹೀಗೆ ಹೇಳುವಾಗ ನಾನು ಯಾವುದೋ ಹೊಸ ವಿಷಯಕ್ಕೆ ಪೀಠಿಕೆ ಹಾಕುತ್ತಿದ್ದೇನೆಂದು ಅಂದುಕೊಂಡರೂ ಪರವಾಗಿಲ್ಲ.

ಅಂದು ಗೆಳೆಯ ಶಿವಮೊಗ್ಗದ ಸುಬ್ರಮಣ್ಯ ಪಾರಿವಾಳಗಳ ಬಗ್ಗೆ ಒಂದಷ್ಟು ಕುತೂಹಲವನ್ನು ಹಾರಿಬಿಟ್ಟಿದ್ದರು. ಅದು ಎಲ್ಲೆಲ್ಲೋ ಹಾರಿ ಹೋಗಿ ಪುನಃ ಬಳಿ ಬಂದು ವಿಸ್ಮಯದ ಮೊಟ್ಟೆಗೆ ಕಾವು ಕೊಡುತ್ತಲಿತ್ತು. ಕಳೆದ ಒಂದೆರಡು ತಿಂಗಳಲ್ಲಿ ಈ ಪಾರಿವಾಳ ಯಾವ ಪರಿ ಕಾಡಿತ್ತೆಂದರೆ, ಅದರ ಕುರಿತಾದಹಲವು ಪುಸ್ತಕಗಳು ನನ್ನ ಟೇಬಲ್‌ಗೆ ಬಂದು ಗೂಡು ಕಟ್ಟಿದ್ದವು. ಪಾರಿವಾಳಗಳ ಸುತ್ತ ನಡೆದಿರುವ ಅಧ್ಯಯನ, ನಡೆಯುತ್ತಿರುವ ಸಂಶೋಧನೆ, ಅರ್ಥವಾಗದ ಸಂಗತಿ ಹಾಗೂ ನಿಗೂಢವಾಗಿರುವ ಅಂಶ ಸಹಜ ಬೆರಗು, ವಿಚಿತ್ರ ಆಸಕ್ತಿಯನ್ನು ಕೆರಳಿಸಿದ್ದವು. ಟಾಟಾ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೆ.ಗೋಪಾಲಕೃಷ್ಣನ್ ಬರೆದಿರುವ The Case of the Bonsai Manager ಪುಸ್ತಕದಲ್ಲಿ Homing Pigeons, Listening to the inaudible ಎಂಬ ಅಧ್ಯಾಯ ಓದಿದ ಬಳಿಕ ತರ್ಕಕ್ಕೆ ನಿಲುಕದ ಪಾರಿವಾಳಗಳ ಬಗ್ಗೆ ಹೀಗೂ ಉಂಟೆ?' ಅಂದೆನಿಸಿತು.

ನಿಮಗೆ ಗೊತ್ತಿರಬಹುದು, ರಾಜ-ಮಹಾರಾಜರು ಹಿಂದಿನಕಾಲದಲ್ಲಿ ಪಾರಿವಾಳಗಳ ಮೂಲಕ ಸಂದೇಶ ರವಾನಿಸುತ್ತಿದ್ದರು, ಪತ್ರಗಳನ್ನು ಕಳಿಸುತ್ತಿದ್ದರು. ಪ್ರೇಮಿಗಳು ಸಹ ಪ್ರೇಮಪತ್ರಗಳನ್ನು ಪಾರಿವಾಳದ ಮೂಲಕವೇ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಪೋಸ್ಟ್, ಪೋಸ್ಟ್‌ಮನ್, ಇ-ಮೇಲ್, ಕೊರಿಯರ್, ಎಸ್ಸೆಮ್ಮೆಸ್‌ಗಳಾದರೂ ಎಲ್ಲಿದ್ದವು? ಪಾರಿವಾಳವೇ ಮೆಸೆಂಜರ್. ಅದರ ಕಾಲಿಗೆ ಚೀಟಿಯನ್ನೋ, ಪತ್ರವನ್ನೋ ಕಟ್ಟಿದರೆ ಅದು ನೇರವಾಗಿ 'To' ಬರೆದವರಿಗೆ ತಲುಪಿಸಿ ಬರುತ್ತಿತ್ತು. ಹಾಗೆಂದು ಈ ಪಾರಿವಾಳಗಳಿಗೆ ಯಾರೂ ಟ್ರೇನಿಂಗ್ ಕೊಡುತ್ತಿರಲಿಲ್ಲ. ಪತ್ರಿಕಾ ವರದಿಗಾರರು ತಾವು ಬರೆದ ಸುದ್ದಿಯನ್ನು ತಮ್ಮ ಪತ್ರಿಕಾ ಕಾರ್ಯಾಲಯಗಳಿಗೆ ಪಾರಿವಾಳಗಳ ಮೂಲಕ ಕಳಿಸಿಕೊಡುತ್ತಿದ್ದರು. 1913ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸುದ್ದಿಯನ್ನು ಮದ್ರಾಸ್ ಮೇಲ್' ಪತ್ರಿಕೆಯ ವರದಿಗಾರ ಪಾರಿವಾಳದ ಕಾಲಿಗೆ ಕಟ್ಟಿ ಕಳಿಸಿಕೊಟ್ಟಿದ್ದನ್ನು ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಒಮ್ಮೆ ನೆನಪಿಸಿಕೊಂಡಿದ್ದರು. ಅಕ್ಬರ್ ತನ್ನ ಆಸ್ಥಾನದಲ್ಲಿ ಈ ಖಬೂತರ್‌ಗಳಿಗಾಗಿ ವಿಶೇಷ ಗೂಡುಗಳನ್ನು ನಿರ್ಮಿಸಿದ್ದ. ಆತ ಇವುಗಳ ಮೂಲಕವೇ ಸಂದೇಶ ಕಳಿಸುತ್ತಿದ್ದ. ತನ್ನ ಸಖಿಯಿಂದ ಆಪ್ತ ಸಂದೇಶ ಬರಬಹುದೆಂಬ ನಿರೀಕ್ಷೆಯಲ್ಲಿ ಪಾರಿವಾಳಗಳ ದಾರಿ ಬರಹಾಯುತ್ತಾ ಅಕ್ಬರ್ ಕಾದು ಕುಳಿತಿರುತ್ತಿದ್ದ. ಆತ ಪಾರಿವಾಳಗಳನ್ನು ಅದೆಷ್ಟು ಅವಲಂಬಿಸಿದ್ದನೆಂಬುದಕ್ಕೆ ಅವುಗಳಿಗಾಗಿ ನಿರ್ಮಿಸಿದ ಖಬೂತರ್ ಮಹಲ್'ಗಳೇ ಸಾಕ್ಷಿ.

ಪಾರಿವಾಳಗಳಿಗೆ ಅಂಚೆಯಣ್ಣನ ಕೆಲಸವನ್ನು ಯಾರು ಹಚ್ಚಿದರೋ ಏನೋ, ಅದಂತೂ ಬಹಳ ನಿಷ್ಠೆಯಿಂದ ಆ ಕೆಲಸವನ್ನು ತಲತಲಾಂತರಗಳಿಂದ ಮಾಡುತ್ತಾ ಬರುತ್ತಿದೆ. ಇದು ಕೇವಲ ನಮ್ಮೂರ ಪಾರಿವಾಳಗಳಿಗೆ ಮಾತ್ರ ಕಲಿಸಿದ ಪಾಠವಲ್ಲ. ಜಗತ್ತಿನ ಯಾವ ದೇಶದ ಪಾರಿವಾಳಗಳನ್ನಾದರೂ ಗಮನಿಸಬಹುದು, ಈ ಗುಣ ಅವುಗಳಲ್ಲಿ ಹಾಸುಹೊಕ್ಕಾಗಿದೆ. ಊರು ಯಾವುದಾದರೇನು ಅವುಗಳ ರಕ್ತ ಮಾತ್ರ ಒಂದೇ ತಾನೆ? ಪೋಸ್ಟ್ ವ್ಯವಸ್ಥೆ ಆರಂಭವಾಗುವುದಕ್ಕಿಂತ ಮೊದಲೇ ಪಾರಿವಾಳ ಸಂದೇಶ ರವಾನೆ ವ್ಯವಸ್ಥೆಯಿತ್ತು. ಪಿಜನ್ ಪೋಸ್ಟ್' ವ್ಯವಸ್ಥೆ ಸಹ ಪೋಸ್ಟಾಫೀಸು ಅಸ್ತಿತ್ವಕ್ಕೆ ಬಂದ ಎಷ್ಟೋ ವರ್ಷಗಳ ನಂತರವೂ ಇತ್ತು. ಆಫ್ರಿಕಾದಲ್ಲಿ ಇಂದಿಗೂ ಈ ವ್ಯವಸ್ಥೆ ಜಾರಿಯಲ್ಲಿದೆ. ಒಮ್ಮೆ ಏನಾಯ್ತಪಾ ಅಂದ್ರೆ... ಬಹಳ ಕುತೂಹಲವಾಗಿದೆ... ಮುಂದೆ ಓದಿ.

1997ರ ಜೂನ್ 29. ಅಂದು ಇಂಗ್ಲೆಂಡಿನ ರಾಯಲ್ ಪಿಜನ್ ರೇಸಿಂಗ್ ಅಸೋಸಿಯೇಶನ್‌ಗೆ ನೂರರ ಸಂಭ್ರಮ. ಪ್ರತಿವರ್ಷ ಆ ಸಂಸ್ಥೆ ಪಾರಿವಾಳಗಳ ಹಾರಾಟ ಸ್ಪರ್ಧೆ ಏರ್ಪಡಿಸುತ್ತದೆ. ಕಳೆದ ನೂರು ವರ್ಷಗಳಿಂದ ಅಂಥ ಸ್ಪರ್ಧೆ ನಡೆಸಿಕೊಂಡು ಬರುತ್ತಿದೆ. ಈ ಸ್ಪರ್ಧೆಯಲ್ಲಿ 25-30 ಸಾವಿರ ಪಾರಿವಾಳಗಳು ಭಾಗವಹಿಸುತ್ತವೆ. ಶತಮಾನೋತ್ಸವವಾದುದರಿಂದ ಆ ವರ್ಷ ಸುಮಾರು 60 ಸಾವಿರ ಪಾರಿವಾಳಗಳು ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಕಾರ್ಯಕ್ರಮಕ್ಕೆ ಭಾರೀ ಪ್ರಚಾರ ಕೊಡಲಾಗಿತ್ತು. ದೇಶ-ವಿದೇಶಗಳ ಗಣ್ಯರು, ಮಂತ್ರಿಗಳು, ಪತ್ರಕರ್ತರು ಇದರ ವೀಕ್ಷಣೆಗೆಂದು ಆಗಮಿಸಿದ್ದರು. ಎರಡು ದಿನಗಳಿಂದ ಸಾರ್ವಜನಿಕರು ತಮ್ಮ ಆಸನಗಳನ್ನು ಕಾಯ್ದಿರಿಸಿದ್ದರು. ಅಂದು ಮುಂಜಾನೆ ಆರೂವರೆ ಗಂಟೆಗೆ ದಕ್ಷಿಣ ಫ್ರಾನ್ಸ್‌ನ ನಾಂಟೀಸ್ ಎಂಬ ಊರಿನಿಂದ ಏಕಕಾಲಕ್ಕೆ 60 ಸಾವಿರ ಪಾರಿವಾಳಗಳು ಪಟಪಟ ರೆಕ್ಕೆ ಬಡಿಯುತ್ತಾ ಆಗಸಕ್ಕೆ ನೆಗೆದವು. ಎಲ್ಲವೂ ಸ್ಪರ್ಧಿಗಳೇ! ನಾಂಟೀಸ್‌ನಿಂದ ಸುಮಾರು 800 ಕಿಮೀ ದೂರದಲ್ಲಿರುವ ದಕ್ಷಿಣ ಇಂಗ್ಲೆಂಡನ್ನು ತಲುಪಬೇಕು. ಮಧ್ಯೆ ಎಲ್ಲಿಯೂ ತಂಗುವಂತಿಲ್ಲ. ರೆಕ್ಕೆ ಬಳಲಿತೆಂದು ವಿರಮಿಸುವಂತಿಲ್ಲ. ಅಲ್ಲದೇ ವಿರಮಿಸಲಿಕ್ಕೂ ಆಗುವುದಿಲ್ಲ. ಕಾರಣ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಡುವೆ ಇಂಗ್ಲಿಷ್ ಕಡಲ್ಗಾಲುವೆಯಿದೆ. ಒಮ್ಮೆ ನೆಗೆದ ಬಳಿಕ ಎಲ್ಲಿಯೂ ಕುಳಿತುಕೊಳ್ಳಲು ಆಗುವುದಿಲ್ಲ. ಎಂಟುನೂರು ಕಿಮಿ ದೂರ ಕ್ರಮಿಸಲು ಪಾರಿವಾಳಗಳಿಗೆ ಏನಿಲ್ಲವೆಂದರೂ ಎಂಟುಗಂಟೆಗಳಾದರೂ ಬೇಕು.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅರವತ್ತು ಸಾವಿರ ಪಾರಿವಾಳಗಳು ದಕ್ಷಿಣ ಇಂಗ್ಲೆಂಡ್ ಪ್ರಾಂತ ಸೇರಬಹುದೆಂದು ನಿರೀಕ್ಷಿಸಲಾಗಿತ್ತು. ನಾಂಟೀಸ್‌ನಲ್ಲಿ ಪಾರಿವಾಳಗಳೆಲ್ಲ ಆಕಾಶಕ್ಕೆ ನೆಗೆದ ಸುದ್ದಿ ಇಂಗ್ಲೆಂಡ್‌ನಲ್ಲಿದ್ದವರಿಗೆ ತಲುಪಿತ್ತು. ಅವರೆಲ್ಲ ಪಾರಿವಾಳಗಳು ಮಧ್ಯಾಹ್ನ ಒಂದು ಗಂಟೆಯ ಬಳಿಕ ಎಷ್ಟು ಹೊತ್ತಿಗಾದರೂ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು. ಎರಡಾಯಿತು... ಮೂರಾಯಿತು... ನಾಲ್ಕಾಯಿತು... ಆರು ಗಂಟೆಯಾಯಿತು! ನೂರು-ಇನ್ನೂರು ಪಾರಿವಾಳಗಳು ಮಾತ್ರ ದಡ ತಲುಪಿದವು. ಇನ್ನು ಕೆಲವು ನೂರು ಪಾರಿವಾಳಗಳು ಮರುದಿನ ಮಧ್ಯಾಹ್ನದ ಹೊತ್ತಿಗೆ ಬಂದವು. ಆದರೆ ಉಳಿದ ಐವತ್ತೊಂಬತ್ತು ಸಾವಿರ ಪಾರಿವಾಳಗಳು ಎಲ್ಲಿ ಹೋದವು? ಮೂರ್‍ನಾಲ್ಕು ದಿನ ಕಾಯ್ದಿದ್ದಾಯಿತು. ಆದರೂ ಅವು ಮರಳಲಿಲ್ಲ. ಪಾರಿವಾಳ ಹಾರಾಟದ ಸ್ಪರ್ಧೆಯ ಇತಿಹಾಸದಲ್ಲಿಯೇ ಇಂಥ ಘಟನೆ ಸಂಭವಿಸಿರಲಿಲ್ಲ. ಅದರಲ್ಲೂ ಆ ಸ್ಪರ್ಧೆಯ ಶತಮಾನೋತ್ಸವ ಸಮಾರಂಭದಲ್ಲಿಯೇ ಹೀಗಾಗಬೇಕೆ?

ಮರುದಿನ ಇಂಗ್ಲೆಂಡ್ ಸೇರಿದಂತೆ ಯುರೋಪಿನ ಎಲ್ಲದೇಶಗಳ ಪತ್ರಿಕೆಗಳಲ್ಲೂ ಇದೇ ಪ್ರಧಾನ ಸುದ್ದಿ. ಪಾರಿವಾಳಗಳೆಲ್ಲ ಎಲ್ಲಿ ಹಾರಿಹೋದವು? ಎಲ್ಲರಿಗೂ ಇದೇ ಜಿಜ್ಞಾಸೆ. ಎಲ್ಲೆಡೆ ಇದೇ ಚರ್ಚೆ. ಸಾಮಾನ್ಯವಾಗಿ ಇಷ್ಟೊಂದು ಪಾರಿವಾಳಗಳು ಹಾರಿದಾಗ ನೂರಿನ್ನೂರು ಪಾರಿವಾಳಗಳು ದಾರಿತಪ್ಪಿ ಬೇರೆಡೆ ಹೋಗುವುದು, ನಾಪತ್ತೆಯಾಗುವುದು ಹೊಸತೇನಲ್ಲ. ಆದರೆ ಐವತ್ತೊಂಬತ್ತು ಸಾವಿರ ಪಾರಿವಾಳಗಳು ಕಣ್ಮರೆಯಾದ ನಿದರ್ಶನವೇ ಇಲ್ಲ. ಬಹುತೇಕ ಸಂದರ್ಭಗಳಲ್ಲಿ ಹಾರುವಾಗ ಎಷ್ಟಿರುತ್ತವೆಯೋ, ಗುರಿ ತಲುಪಿದಾಗಲೂ ಅಷ್ಟೇ ಇರುತ್ತವೆ. ಹಾಗಾದರೆ ನಾಂಟೀಸ್ ನಲ್ಲಿ ಜಿಗಿದ ಪಾರಿವಾಳಗಳು ಹೋದದ್ದಾದರೂ ಎಲ್ಲಿಗೆ? ಶೋಧಕಾರ್ಯ ಆರಂಭವಾದವು. ಕೆಲವರು ಹಾಗಾಗಿರಬಹುದು, ಹೀಗಾಗಿರಬಹುದು ಎಂಬ ಥಿಯರಿ ಹೊಸೆಯತೊಡಗಿದರು. ಮತ್ತೆ ಕೆಲವರು ತಮ್ಮ ಮೂಗಿನ ನೇರಕ್ಕೆ ವಾದ ಮಂಡಿಸಲಾರಂಭಿಸಿದರು. ಪತ್ರಿಕೆಗಳಲ್ಲಿ ತಿಂಗಳುಗಟ್ಟಲೆ ಇದೇ ಸುದ್ದಿ. ಆದರೆ ನಿಜವಾಗಿ ಏನಾಯಿತೆಂಬುದು ಮಾತ್ರ ನಿಗೂಢವಾಗಿಯೇ ಉಳಿಯಿತು. ಈ ಮಧ್ಯೆ ನೂರಾರು ಗಾಳಿಸುದ್ದಿ, ವದಂತಿಗಳು. ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಸಾವಿರಾರು ಪಾರಿವಾಳಗಳು ಸತ್ತುಬಿದ್ದಿವೆಯಂತೆ, ನಾಂಟೀಸ್‌ನಲ್ಲಿ ಹಾರಿದ ಪಾರಿವಾಳ ಇಂಗ್ಲೆಂಡ್‌ನ ದಕ್ಷಿಣ ಪ್ರಾಂತ ಸೇರುವ ಬದಲು ಇನ್ನೆಲ್ಲೋ ಹಾರಿಹೋದವಂತೆ, ಹಾಗೆ ಹಾರಿದ್ದನ್ನು ನೋಡಿದ್ದೇವೆ ಅಂತ... ಹೀಗೆ ಚಿತ್ರ-ವಿಚಿತ್ರ ವಾದಗಳು ಹಾರಾಡತೊಡಗಿದವು. ಆದರೆ ಪಾರಿವಾಳಗಳು ಮಾತ್ರ ಕಾಣಲೇ ಇಲ್ಲ.

ಪಾರಿವಾಳಗಳಿಗೆ ದೂರ ಹಾರಾಟ ಹೊಸದೇನಲ್ಲ, ಕಷ್ಟವೂ ಅಲ್ಲ. ಅವು ಗಂಟೆಗೆ 90-100 ಕಿಮೀ ದೂರ ಹಾರಬಲ್ಲವು. ಹತ್ತು ಸಾವಿರ ಕಿಮಿ ದೂರವನ್ನು ಕ್ರಮಿಸುವುದು ಅಂಥ ಕಷ್ಟದ ಕೆಲಸವೇನಲ್ಲ. ಕ್ರಿಸ್ತಶಕಪೂರ್ವ 3000ದಿಂದ ಪಾರಿವಾಳಗಳನ್ನು ಸಂದೇಶವಾಹಕಗಳಾಗಿ ಬಳಸಿರುವ ಬಗ್ಗೆ ದಾಖಲೆಗಳಿವೆ. ಪಾರಿವಾಳಗಳ ಹಾರಾಟ ಸ್ಪರ್ಧೆಯೂ ಅಷ್ಟೇ ಹಳತು. ಆಗಲೂ ಪಾರಿವಾಳಗಳು ಕಣ್ಮರೆಯಾದದ್ದು ಇಲ್ಲ. ಬಾಗ್ದಾದ್‌ನ ಸುಲ್ತಾನ್ ಪಿಜನ್-ಪೋಸ್ಟ್ ವ್ಯವಸ್ಥೆ ಆರಂಭಿಸಿರಬಹುದು, ರಾಯಿಟರ್‌ನಂಥ ಸುದ್ದಿಸಂಸ್ಥೆ ಸುದ್ದಿ ರವಾನೆಗೆ ಪಾರಿವಾಳಗಳನ್ನು ಬಳಸಿಕೊಂಡಿತ್ತು.

ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಲ್ಲಿ ಯುರೋಪ್ ಹಾಗೂ ಅಮೆರಿಕದಲ್ಲಿ ಟೆಲಿಗ್ರಾಫ್ ತೀರಾ ವ್ಯಾಪಕವಾಗಿ ಬಳಕೆಗೆ ಬಂದಿತು. ಆದರೂ ಬೆಲ್ಜಿಯಮ್ ರಾಜಧಾನಿ ಬ್ರಸೆಲ್ಸ್ ಮತ್ತು ಜರ್ಮನಿಯ ಅಚೆನ್ ನಡುವೆ ಟೆಲಿಗ್ರಾಫ್ ಇರಲಿಲ್ಲ. ರೈಲಿನ ಮೂಲಕವೇ ಸಂಪರ್ಕ ಸಾಧಿಸಬೇಕಿತ್ತು. ಅಂಥ ಸಂದರ್ಭದಲ್ಲೂ ರಾಯಿಟರ್ ಸುದ್ದಿಸಂಸ್ಥೆ ಆ ಎರಡು ನಗರಗಳ ನಡುವೆ ಸಂದೇಶ, ಸುದ್ದಿ ರವಾನೆಗೆ ಪಾರಿವಾಳಗಳನ್ನು ಬಳಸುತ್ತಿತ್ತು. ಮೊದಲ ಮಹಾಯುದ್ಧದ ಸಂದರ್ಭದಲ್ಲೂ ಫ್ರೆಂಚ್ ಸೇನೆ ಸಂದೇಶರವಾನೆಗೆ ಸಾವಿರಾರು ಪಾರಿವಾಳಗಳನ್ನು ಇಟ್ಟುಕೊಂಡಿತ್ತು. ಸೇನೆಯಲ್ಲಿ ಈ ಪಕ್ಷಿಗಾಗಿಯೇ ಪ್ರತ್ಯೇಕ ವಿಭಾಗವಿತ್ತು. ಎರಡನೇ ಮಹಾಯುದ್ಧ ಕಾಲದಲ್ಲಿ ಜರ್ಮನ್‌ರು ಯುರೋಪಿನ ಬಹುಭಾಗವನ್ನು ಆಕ್ರಮಿಸಿದಾಗ, ತನ್ನ ಸೈನಿಕರಿಗೆ ಮಹತ್ವದ ಸಂದೇಶ ಕಳಿಸಲು ತೊಂದರೆ ಅನುಭವಿಸುತ್ತಿದ್ದರು. ಜರ್ಮನ್ ಸೈನಿಕರು ವಿಮಾನದಿಂದ ಸಾವಿರಾರು ಪಾರಿವಾಳಗಳನ್ನು ಹಾರಿಬಿಡುತ್ತಿದ್ದರು. ಆ ಪಾರಿವಾಳಗಳು ಗಡಿಯಲ್ಲಿನ ಸೈನಿಕರು ಕಳಿಸುವ ಸಂದೇಶಗಳನ್ನು ಹೊತ್ತು ತರುತ್ತಿದ್ದವು.

ಪಾರಿವಾಳಗಳು ಎಂದೂ ಹೀಗೆ ದಾರಿತಪ್ಪಿದ ಮಗ'ನಂತೆ ಹುಯ್ದಾಡಿದ್ದು, ಹಾರಲಾಗದೇ ಎಲ್ಲೋ ಬಿದ್ದಿದ್ದು, ಎಲ್ಲೋ ಹೊರಟು ಇನ್ನೆಲ್ಲೋ ತಲುಪಿದ್ದು ಇಲ್ಲವೇ ಇಲ್ಲ. ಪಾರಿವಾಳಕ್ಕೆ navigationನಲ್ಲಿ ಅತ್ಯಂತ ವಿಶೇಷ ಸಂವೇದಿ ಗುಣವಿದೆ. ಪಾರಿವಾಳದ ಕಿವಿ ಅದೆಷ್ಟು ಸೂಕ್ಷ್ಮವೆಂದರೆ ಅದು ಅತ್ಯಂತ ಕಡಿಮೆ ತರಂಗಗಳ ಶಬ್ದವನ್ನಾದರೂ (ಇನ್ಫ್ರಾಸೌಂಡ್) ಗ್ರಹಿಸುತ್ತದೆ. ಸಮುದ್ರದಲ್ಲಿ ಎರಡು ತೆರೆಗಳ ನಡುವಿನ ಘರ್ಷಣೆಯ ಶಬ್ದವನ್ನು ಸಹ ಮೇಲೆ ಹಾರುವ ಪಾರಿವಾಳ ಚೆನ್ನಾಗಿ ಆಲಿಸುತ್ತದೆ. ಈ acoustic beam ಇದೆಯಲ್ಲ, ಪಾರಿವಾಳಕ್ಕೆ ಸಮುದ್ರ ಎಲ್ಲಿದೆಯೆಂಬುದನ್ನು ಅರಿಯಲು ಸಹಾಯಕವಾಗುತ್ತದೆ. ಪರ್ವತ, ಗಿರಿ-ಶಿಖರಗಳಿಗೆ ಅಪ್ಪಳಿಸುವ ಗಾಳಿಯ ಸದ್ದು ಸಹ ಪಾರಿವಾಳಗಳ ಕಿವಿಯಲ್ಲಿ ಸರಿಯಾಗಿ ದಾಖಲಾಗುತ್ತದೆ. ಈ ಸದ್ದು ಅವುಗಳಿಗೆ ಬರೀ ಸದ್ದಲ್ಲ. ಆ ಸದ್ದಿನ ಮೂಲಕ ಅವು ಸುತ್ತಲಿನ ಪರಿಸರವನ್ನು ಕಲ್ಪಿಸಿಕೊಳ್ಳಬಲ್ಲವು. ಪಾರಿವಾಳಗಳು ಮನಸ್ಸಿನಲ್ಲಿ ನಕ್ಷೆಯನ್ನು ಸೃಷ್ಟಿಸಿಕೊಳ್ಳುವುದು ಹೀಗೆ. ತಾವು ಹೋಗಬೇಕಾದ ಮಾರ್ಗ, ತಲುಪಬೇಕಾದ ಜಾಗವನ್ನು ಅವು ಕಲ್ಪಿಸಿಕೊಳ್ಳುವುದು ಹೀಗೆ. ಈ ಕಾರಣಗಳಿಂದ ಪಾರಿವಾಳವೊಂದು ನಿರ್ದಿಷ್ಟ ಜಾಗವನ್ನು ಮನಸ್ಸಿನಲ್ಲಿಟ್ಟುಕೊಂಡು ಹಾರಿತೆಂದರೆ ಗುರಿ ತಪ್ಪಲು ಸಾಧ್ಯವೇ ಇಲ್ಲ. ವೇಗ, ಗ್ರಹಿಕೆಯಲ್ಲಿ ಅದರಷ್ಟು ಸೂಕ್ಷ್ಮತೆಯನ್ನು ಬೆಳೆಸಿಕೊಂಡ ಪಕ್ಷಿಗಳು ವಿರಳ.

ಹೀಗಿರುವಾಗ ಅಂದು ನಾಂಟೀಸ್‌ನಿಂದ ಹಾರಿದ ಪಾರಿವಾಳಗಳು ಹೋದದ್ದಾದರೂ ಎಲ್ಲಿಗೆ? ಅಷ್ಟೊಂದು ಸಾವಿರ ಪಾರಿವಾಳಗಳು ಕಣ್ಮರೆಯಾದದ್ದಾದರೂ ಹೇಗೆ? ಯಾವ ಸ್ಪಷ್ಟನೆಯೂ, ಸಮಜಾಯಿಷಿಯೂ ತೃಪ್ತಿ ಕೊಡುವುದಿಲ್ಲ. ನಾಲ್ಕೈದು ತಿಂಗಳುಗಳ ಬಳಿಕ ಎಲ್ಲರೂ ಈ ಪಾರಿವಾಳಗಳನ್ನು ಮರೆತುಬಿಟ್ಟರು. ಎಷ್ಟು ದಿನ ಅಂತ ಈ ಪಕ್ಷಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು? ಬೇರೆ ಕೆಲಸವಿಲ್ಲವೇ? ಹೆಚ್ಚೂಕಮ್ಮಿ ಎಲ್ಲರೂ ಪಾರಿವಾಳಗಳ ಬಗ್ಗೆ ಚರ್ಚಿಸುವುದನ್ನು ನಿಲ್ಲಿಸಿಬಿಟ್ಟರು. ಪತ್ರಿಕೆಯಲ್ಲಿ ಅದು ತಲೆಚಿಟ್ಟು ಹಿಡಿಸುವಷ್ಟು ವರದಿಯಾಗಿತ್ತು. ಇನ್ನು ಅದರ ಬಗ್ಗೆ ಬರೆದರೆ ವಾಕರಿಕೆ ಬರುವುದೊಂದು ಬಾಕಿ. ಹೀಗಾಗಿ ಎಲ್ಲ ಪತ್ರಿಕೆಗಳು ಸುಮ್ಮನಾಗಿದ್ದವು. ಆದರೆ ಒಬ್ಬನ ಹೊರತಾಗಿ! ಅಮೆರಿಕದ ಜಿಯಾಲಾಜಿಕಲ್ ಸರ್ವೇ ಸಂಶೋಧಕ ಜೊನಾಥನ್ ಹ್ಯಾಗ್‌ಸ್ಟ್ರಮ್ ಎಂಬಾತನ ತಲೆತುಂಬಾ ಪಾರಿವಾಳಗಳೇ! ಆತನನ್ನು ಪದೇ ಪದೆ ಕಾಡಿದ ಪ್ರಶ್ನೆಯೆಂದರೆ- ಹಾಗಾದರೆ ಅವು ಹೋದದ್ದಾದರೂ ಎಲ್ಲಿ? ಸುಮ್ಮನೆ ಅದೃಶ್ಯವಾಗಲು ಸಾಧ್ಯವೇ ಇಲ್ಲ. ಏನೋ ಆಗಿರಲೇಬೇಕು, ಅದಕ್ಕೆ ಕಾರಣಗಳೂ ಇರಲೇಬೇಕು. ಅದೇನಿರಬಹುದು? ಹ್ಯಾಗ್‌ಸ್ಟ್ರಮ್ ಪಾರಿವಾಳಗಳ ಬಗ್ಗೆ ಓದಲಾರಂಭಿಸಿದ. ಅವುಗಳ ಗ್ರಹಣಶಕ್ತಿಯ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ. ಸಂದೇಶವಾಹಕಗಳಾಗಿ ಪಾರಿವಾಳಗಳ ಇತಿಹಾಸದ ಪುಟಗಳನ್ನು ತಿರುವಿಹಾಕಿದ. ಅವುಗಳ ಮನಸ್ಸಿನಲ್ಲಿ ಮೂಡುವ ನಕ್ಷೆಯ ಹಂತಗಳನ್ನು ಕಲ್ಪಿಸಿಕೊಳ್ಳಲಾರಂಭಿಸಿದ. ಅದಾದ ನಂತರವೇ ಪಾರಿವಾಳಗಳ ಹಾರಾಟ ಸ್ಪರ್ಧೆಯ ವಿವರಗಳನ್ನೆಲ್ಲ ಕಲೆಹಾಕಲಾರಂಭಿಸಿದ. ಒಂದೊಂದೇ ಅಂಶಗಳು ಹೊರಬೀಳ ಲಾರಂಭಿಸಿದವು. ಹ್ಯಾಗ್‌ಸ್ಟ್ರಮ್ ತನಿಖೆ ಮುಂದುವರಿಸಿದ. ಆತನ ಮನಸ್ಸಿನಲ್ಲಿ ಒಂದು ಸಂಗತಿ ಮಿಂಚಿನಂತೆ ಚಕ್ಕನೆ ಸರಿದು ಹೋಯಿತು. ಆ ಸಂಬಂಧ ಆತ ಮಾಹಿತಿ ಕಲೆಹಾಕಲಾರಂಭಿಸಿದ. ಅವನ ಊಹೆ ನಿಜವಾಗಿತ್ತು.

ಅಂದು ರೇಸಿನಲ್ಲಿ ಭಾಗವಹಿಸಿದ್ದ ಪಾರಿವಾಳಗಳು ಇಂಗ್ಲಿಷ್ ಕಡಲ್ಗಾಲುವೆ ದಾಟುತ್ತಿರುವಾಗ, ಬೆಳಗ್ಗೆ ಸುಮಾರು ಹನ್ನೊಂದು ಗಂಟೆ ಸುಮಾರಿಗೆ, ಪ್ಯಾರಿಸ್‌ನಿಂದ ನ್ಯೂಯಾರ್ಕ್‌ಗೆ ಕಾನ್ ಕಾರ್ಡ್ ವಿಮಾನ ಆಕಾಶಕ್ಕೆ ನೆಗೆದಿತ್ತು. ಕಾನ್‌ಕಾರ್ಡ್ ವಿಮಾನ ಗೊತ್ತಲ್ಲ, ಅದು ಟೇಕಾಫ್ ಆಗುವಾಗ ಅದೆಂಥ ಭಯಂಕರ ಸದ್ದು ಮಾಡುತ್ತದೆಂದರೆ, ಸುತ್ತಲಿನ ಕಟ್ಟಡಗಳ ಕಿಟಕಿ ಗಾಜುಗಳೆಲ್ಲ ಪತರ ಗುಟ್ಟಿ ಹೋಗುತ್ತವೆ. ಉಳಿದ ಪ್ಯಾಸೆಂಜರ್ ವಿಮಾನಗಳಿಗಿಂತ ಎರಡು ಪಟ್ಟು ವೇಗದಲ್ಲಿ ಹಾರುವ ಕಾನ್‌ಕಾರ್ಡ್‌ನ್ನು ಸೂಪರ್ ಸಾನಿಕ್ ವಿಮಾನವೆಂದೇ ಕರೆಯುವುದು. ಕಾನ್‌ಕಾರ್ಡ್ ಹಾರುವಾಗ ಗಾಳಿಯ ಕಣಗಳಿಗೆ ಘರ್ಷಣೆಯಾಗಿ ಬೆಳಕಿನ ಕಣಗಳು ಕಾಣಿಸಿಕೊಳ್ಳುತ್ತವೆ. ಅಂಥ ಸ್ಪೀಡು! ಅಂದು ಕಾನ್‌ಕಾರ್ಡ್ ಆಕಾಶದಲ್ಲಿ ಹಾರುವಾಗ ಅದರ ಕೆಳಗೆ ಪಾರಿವಾಳಗಳು ಹಾರುತ್ತಿದ್ದವು. ಕಾನ್‌ಕಾರ್ಡ್ ಹಾರುವಾಗ ಕೆಳಗೆ 160 ಕಿ.ಮೀ. ವ್ಯಾಪ್ತಿಯಲ್ಲಿ ಅದರ ಶಬ್ದಚಾಪೆ (sound carpet) ಆವರಿಸಿಕೊಳ್ಳುತ್ತದೆ. ಇದನ್ನು ತಪ್ಪಿಸಿಕೊಳ್ಳಲು ಪಾರಿವಾಳಗಳಿಗೆ ಸಾಧ್ಯವೇ ಆಗಿಲ್ಲ. ಆ ಶಬ್ದಚಾಪೆಯ ಹೊಡೆತದ ತೀವ್ರತೆಗೆ ಕಂಗಾಲಾದ ಪಾರಿವಾಳಗಳು ತರಗಾಬರಗಾ ಆಗಿ ದಿಕ್ಕುತಪ್ಪಿಬಿಟ್ಟಿವೆ. ಚೆಲ್ಲಾ ಪಿಲ್ಲಿಯಾದ ಪಾರಿವಾಳಗಳಿಗೆ ತಾವು ಹೋಗಬೇಕಾದ ಜಾಗದ ದಿಕ್ಕಿನ ಜಾಡುಹಿಡಿಯುವುದು ಕೊನೆಗೂ ಸಾಧ್ಯವಾಗಲೇ ಇಲ್ಲ. ವಿಮಾನದ ಕರ್ಕಶ ಸದ್ದಿಗೆ ಪಾರಿವಾಳಗಳ ಕಿವಿ ಹರಿದುಹೋಗಿದೆ. ಪರಿಣಾಮ, ಎಷ್ಟೋ ಪಾರಿವಾಳಗಳು ನೀರಲ್ಲಿ ಬಿದ್ದು ಸತ್ತಿವೆ. ಇನ್ನುಳಿದವು ಸೇರಬೇಕಾದ ಜಾಗ ಬಿಟ್ಟು ಬೇರೆಡೆ ಹಾರಿಹೋಗಿವೆ. ಹೀಗೆ ಎಷ್ಟೋ ದಿನಗಳ ಬಳಿಕ ಪಾರಿವಾಳಗಳ ನಿಗೂಢ ಸಾವಿನ ರಹಸ್ಯ ಬಯಲಾಗಿತ್ತು. ಅದೆಲ್ಲ ಸರಿ, ಪಾರಿವಾಳ ಆ ನಿರ್ದಿಷ್ಟ ವ್ಯಕ್ತಿಗೇ ಪತ್ರ ಅಥವಾ ಸಂದೇಶ ತಲುಪಿಸುವುದು ಹೇಗೆ? ಗೊತ್ತಾ ನಿಮಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X