• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳ್ಳಿ ಸಮಾಧಿ ಮೇಲೆ ತಲೆಯೆತ್ತಿರುವ ನಗರ

By Staff
|

ರೈತ ಹೆದರಿಬಿಟ್ಟಿದ್ದಾನೆ. ಮರ್ಯಾದೆಯಿಂದ ಮೂರು ಹೊತ್ತು ಮೂರು ತುತ್ತು ತಿಂದುಂಡು ಹಾಯಾಗಿ ಇರಲಾಗದಂಥ ಸ್ಥಿತಿ ಬಂದು ಬಿಡಬಹುದಾ ಎಂಬ ಆತಂಕದಲ್ಲಿದ್ದಾನೆ. ಅವನ ಕಣ್ಣೀರನ್ನು ಒರೆಸಲು ಯಾರೂ ಮುಂದೆ ಬರುತ್ತಿಲ್ಲ. ಸಮಾಧಾನದ ಮೊಸಳೆ ಕಣ್ಣೀರನ್ನೂ ಯಾರೂ ಸುರಿಸುತ್ತಿಲ್ಲ. ಕೃಷಿಕರ ಜೀವನದಲ್ಲಿ ಭರವಸೆಯ ಹೊಸ ಪೈರು ಚಿಗುರೊಡೆಯಬಹುದೆಂಬ ಚಿಟಿಕೆ ವಿಶ್ವಾಸವೂ ಕಾಣಿಸುತ್ತಿಲ್ಲ.

* ವಿಶ್ವೇಶ್ವರ ಭಟ್

ರಿವರ್ಸ್ ಗೇರ್‌ನಲ್ಲಿ ಹೋದರೆ ಇಪ್ಪತ್ತು ವರ್ಷ ಹಿಂದಕ್ಕೆ ಬಂದು ನಿಂತಾಗ... ಅವು ಬೆಂಗಳೂರಿಗೆ ಬಂದ ಶುರುವಾತಿನ ದಿನಗಳು. ಬಡಾವಣೆಗಳು ಇನ್ನೂ ನಾಯಿಕೊಡೆಗಳಿಗೆ ಹೋಲಿಸುವಷ್ಟು ಬೆಳೆದಿರಲಿಲ್ಲ. ಪುಟ್ಟ ಮಗುವಿನ ಕುತೂಹಲವನ್ನು ಕಂಕುಳಲ್ಲಿ ಮಡಚಿಟ್ಟುಕೊಂಡು ಇಲ್ಲಿನ ಬೀದಿಬೀದಿಗಳನ್ನು ಅಲೆಯುತ್ತಿದ್ದಾಗ ಮಲೆನಾಡಿನ ಹಳ್ಳಿಗಳಲ್ಲಿ ಸಮೃದ್ಧವಾಗಿ ಕಾಣುವ ಅಬ್ಬಲಿಗೆ ಅರ್ಥಾತ್ ಬೆಂಗಳೂರಿನ ಕನಕಾಂಬರ ಹೂವುಗಳು ಕಣ್ಣಲ್ಲಿಯೇ ಸೋಜಿಗದ ಕುಸುಮ ಮಾಲೆಯನ್ನು ಕಟ್ಟುತ್ತಿದ್ದವು. ಮೆಜೆಸ್ಟಿಕ್, ಮಲ್ಲೇಶ್ವರ, ಕೃಷ್ಣರಾಜ ಮಾರುಕಟ್ಟೆ ಪ್ರದೇಶಗಳಲ್ಲಿ ಕನಕಾಂಬರ ಚಪ್ಪರದಂತೆ ಹಾಸಿರುತ್ತಿದ್ದವು. ಹುಡುಗಿಯರ ಜಡೆಯನ್ನು ಅಡಗಿಸುವಷ್ಟು, ದೇವರ ಮುಡಿಯನ್ನು ಮುಳುಗಿಸುವಷ್ಟು ಕನಕಾಂಬರದ ಚಮತ್ಕಾರ ಎಲ್ಲೆಡೆ ಕಣ್ಸೆಳೆಯುತ್ತಿತ್ತು.

ಬೆಂಗಳೂರಿನಂಥ ನಗರಕ್ಕೆ ಈ ಕನಕಾಂಬರ ಹೂವುಗಳು ಯಾವ ಬಸ್ಸು ಹಿಡಿದು ಬರುತ್ತವೆ, ಯಾವ ಊರಿಂದ ಬರುತ್ತವೆ, ಅವನ್ನು ಕರೆತರುವವರಾದರೂ ಯಾರು ಎಂಬ ಕುತೂಹಲದಿಂದ ಕೆಲವರನ್ನು ವಿಚಾರಿಸಿದಾಗ ಬೆಂಗಳೂರಿಗೆ ಸೆರಗಿನಂತೆ ಸುತ್ತಿಕೊಂಡಿರುವ ಹತ್ತಾರು ಹಳ್ಳಿಗಳ ಹೆಸರುಗಳನ್ನು ಹೇಳಿದ್ದರು. ಜಡೆಯನೇರುವ ಈ ಕನಕಾಂಬರದ ಜಾಡು ಹಿಡಿದು ಹೊರಟಾಗ ವರ್ತೂರು, ತೊರ ಹುಣಸೆ, ಪಣತ್ತೂರು ಮುಂತಾದ ಹಲವು ಹಳ್ಳಿಗಳಲ್ಲಿ ಸಮೃದ್ಧವಾಗಿ ಬೆಳೆಯುವ ಕನಕಾಂಬರದ ತೋಟಗಳಲ್ಲಿ ಮನಸ್ಸು ಹರಡಿಕೊಂಡಿತ್ತು. ಈ ಹಳ್ಳಿಗಳಲ್ಲಿನ ಜನರ ಪಾಲಿಗೆ ಈ ಹೂವು ಅಕ್ಷರಶಃ ಕನಕಗಳೇ!

ಸೂರ್ಯನಿನ್ನೂ ಕೆಲಸ ಮುಗಿಸಿ ಮನೆಗೆ ಹೊರಡುವ ಮೊದಲು ಇಲ್ಲಿನ ಹಳ್ಳಿಗರು ತೋಟಕ್ಕಿಳಿದು ಕನಕಾಂಬರ ಹೂವುಗಳನ್ನು ಕೊಯ್ದು, ಎರಡು ಗೋಣಿಚೀಲಗಳಲ್ಲಿ ಪೇರಿಸಿ, ಬೆಳಗು ಸರಿಯುವ ಮೊದಲೇ ಬೆಂಗಳೂರಿನ ಗಡಿದಾಟಿಸಿದರೆ ಆ ದಿನದ ಖರ್ಚಿಗೆ ಸರಿಹೊಂದಿ ತುಸು ಚಿಲ್ಲರೆ ಮಿಗುತ್ತಿತ್ತು. ಈ ಮಧ್ಯೆ ತುರ್ತು ಹಣ ಬೇಕಾದರೆ ಕನಕಾಂಬರ ತೋಟವೇ ಎಟಿಎಂ! ಈ ಹೂವಿನ ಗಿಡ ವರ್ಷದಲ್ಲಿ ಒಂದು ದಿನವೂ ರಜಾ ಹಾಕುತ್ತಿರಲಿಲ್ಲ. ಸಾಯಂಕಾಲವಾಗುವುದನ್ನೇ ಎದುರು ನೋಡುತ್ತಿರುವಂತೆ ಹೂಗಳು ಬಿರಿದು ನಿಂತುಬಿಡುತ್ತಿದ್ದವು. ಆರೇಳು ಮಂದಿ ಇರುವ ಮನೆಗೆ ಬರೀ ಕನಕಾಂಬರ ತೋಟವೇ ಆಧಾರವಾಗಿತ್ತು. ಪಣತ್ತೂರಿನಲ್ಲಂತೂ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕನಕಾಂಬರ ಅಂಬರನನ್ನು ದಿಗಂಬರನನ್ನಾಗಿಸುವ ಹಾಗೆ ಕಂಗೊಳಿಸುತ್ತಿತ್ತು. ಕನಕಾಂಬರ ಬೆಳೆದವಗೆ ಕೈತುತ್ತಿಗೆ ತತ್ವಾರವಿಲ್ಲ' ಎಂಬ ಮಾತು ಹಳ್ಳಿಗರಲ್ಲಿ ಗಾದೆಯಾಗಿ, ಸಂಸ್ಕೃತಿಯಾಗಿ, ಜನಜೀವನವಾಗಿ ಹಾಸುಹೊಕ್ಕಾಗಿತ್ತು. ಹಲವಾರು ದಶಕಗಳಿಂದ ಈ ಹಳ್ಳಿಗಳಲ್ಲಿನ ಕನಕಾಂಬರ ಬೆಂಗಳೂರಿನ ಹೆಂಗಸರ ವೈಯಾರಕ್ಕೆ, ಮನೆಯ ಅಲಂಕಾರಕ್ಕೆ,ದೇವರ ಸಿಂಗಾರಕ್ಕೆ ಮೊಗ್ಗಾಗಿ, ಹೂವಾಗಿ ಲಾರಿ, ಬಸ್ಸುಗಳನ್ನೇರಿ ಬರುತ್ತಿದ್ದವು. ಎಷ್ಟೋ ವರ್ಷ ಹೀಗೆಯೇ ರಿಪೀಟ್ ಆದವು.

ಮೂರ್ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಬೆಳಗಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅದೇ ಮೆಜೆಸ್ಟಿಕ್, ಮಲ್ಲೇಶ್ವರ, ಕೆ.ಆರ್. ಮಾರುಕಟ್ಟೆಯ ಓಣಿ ಬೀದಿಗಳಲ್ಲಿ ಜೀಕುತ್ತಿದ್ದರೆ ಆಶ್ಚರ್ಯ, ಕನಕಾಂಬರ ಕಣ್ಮರೆ! ಯಾಕೋ ಗೊತ್ತಿಲ್ಲ, ಏಳೆಂಟು ವರ್ಷಗಳಾದವು ಕನಕಾಂಬರ ಮೊದಲಿನ ಹಾಗೆ ಬರೊಲ್ಲ ಸಾರ್. ಮೊದಲು ನಾವೇ ಹನ್ನೆರಡು ಮೂಟೆ ಇಳಿಸಿಕೊಳ್ತಿದ್ವಿ. ಈಗ ಒಂದು ಮೂಟೆ ಬೇಕು ಅಂದ್ರೂ ಸಿಗೊಲ್ಲ' ಎಂದು ಅಂಗಡಿಯವ ಹೇಳಿದಾಗ ಅವನ ಮುಖದಲ್ಲಿ ಏನೋ ಹೇಳಲಾಗದ ವಿಷಾದ ಕಾಣಿಸಿತು. ಕನಕಾಂಬರವನ್ನೇ ಹುಡುಕಿಕೊಂಡು ಹೊರಟಾಗಲೂ ಇದೇ ನಿರಾಸೆ ಉತ್ತರ ಕೇಳಿಬಂದಿತು.

ಅದಾಗಿ ಎರಡು ವಾರಗಳ ಬಳಿಕ ಒಂದು ಮುಂಜಾನೆ ಪಣತ್ತೂರಿನ ಕಡೆ ಕಾರು ಓಡಿಸಿಕೊಂಡು ಹೊರಟರೆ, ನಾನು ಹುಡುಕಿಕೊಂಡು ಹೊರಟಿರುವುದು ಕನಕಾಂಬರದ ತೋಟಗಳನ್ನೊ ಅಥವಾ ಹೊಸ ಬಡಾವಣೆಗಳನ್ನೊ ಎಂಬ ಅನುಮಾನ ಮೂಡಲಾರಂಭಿಸಿತು. ಕನಕಾಂಬರದ ತೋಟಗಳೆಲ್ಲ ಗುರುತು ಸಿಗದಂತೆ ಸೈಟುಗಳಾಗಿ ಪರಿವರ್ತನೆಯಾಗಿದ್ದವು. ಶಾಪಿಂಗ್ ಕಾಂಪ್ಲೆಕ್ಸ್‌ಗಳು ತಲೆಯೆತ್ತಿದ್ದವು. ಒಂದು ಕಾಲಕ್ಕೆ ಅಲ್ಲಿ ಕನಕಾಂಬರ ತೋಟವಿತ್ತು ಎಂಬ ಕುರುಹು ಸಹ ಸಿಗದ ರೀತಿಯಲ್ಲಿ ಆ ಪರಿಸರ ಬದಲಾಗಿತ್ತು. ಬೆಂಗಳೂರು ಬೆಳೆಯಲಾರಂಭಿಸಿದಂತೆಲ್ಲ ತನ್ನ ಬಾಹುಗಳನ್ನೆಲ್ಲ ವಿಸ್ತರಿಸುತ್ತಾ ಊರನ್ನು ದಾಟಿ, ಮಗ್ಗಲು ಊರಿನ ಗರ್ಭ ಸೀಳಿ ಅಲ್ಲಿಯೂ ಬೆಳೆದು ಅದರ ಅಕ್ಕಪಕ್ಕಗಳನ್ನೆಲ್ಲ ಕಬಳಿಸುವ ದಾಹ ಯಾವ ನಿಯಂತ್ರಣಕ್ಕೂ ಸಿಗದೇ ಕೆರೆ, ಕಟ್ಟೆ, ಜಲಾಶಯ, ಸರೋವರ, ಹೊಲಗದ್ದೆ, ತೋಟಗಳನ್ನೆಲ್ಲ ಥರ್ಟಿಫಾರ್ಟಿ ಸೈಟುಗಳಾಗಿ ಸಪಾಟಾಗಿ ಮಲಗಿಸಿಹಾಕಿತ್ತು. ಒಂದು ಸಂಸ್ಕೃತಿಯ ಸಮಾಧಿಯ ಮೇಲಿನ ಹರವುಭೂಮಿಯೇ ಸೈಟುಗಳೆಂದು ಕರೆಯಬಹುದಾದರೆ ಆ ಹಳ್ಳಿಗಳೆಲ್ಲ ಬಯಲು ಸ್ಮಶಾನವೇ!

ಬೆಂಗಳೂರು ಹೀಗೆ ಕಾಲು ಹರಡಿಕೊಂಡು, ಮೈ ಹೊರಳಿಸಿಕೊಂಡು ಬೆಳೆಯುತ್ತಿದ್ದರೆ ಕ್ಷುದ್ರ ಸೈಟುಗಳಾದ ಹೊಲಗದ್ದೆಗಳೆಲ್ಲ ವಿನಾಶವಾದ ಒಂದು ಜನಜೀವನದ ಪಳೆಯುಳಿಕೆಗಳಂತೆ ಗೋಚರಿಸುತ್ತಿದ್ದರೆ, ಏಕಾಏಕಿ ಭೂಮಿ ಮಾರಿ ನಂಬಲಸಾಧ್ಯವಾದಷ್ಟು ಹಣ ಗೋಚಿಕೊಂಡ ರೈತರು ಬೆಂಗಳೂರಿನ ರಸ್ತೆಗಳಲ್ಲಿನ ಹೊಸ ಕಾರಿನ ಟ್ರಾಫಿಕ್‌ಜಾಮ್‌ನಲ್ಲಿ, ಐಷಾರಾಮಿ ಜೀವನದಲ್ಲಿ ಕಳೆದುಹೋಗಿದ್ದು ದುರಂತದ ಮತ್ತೊಂದು ಮಗ್ಗಲು.

ತಂದೆಯ ಆಸ್ತೆಯೆಂದೋ, ಅಜ್ಜ ಮಾಡಿಟ್ಟಿದ್ದೆಂಬ ವ್ಯಾಮೋಹದಿಂದಲೋ ಜಮೀನುಗಳನ್ನು ಉಳಿಸಿಕೊಂಡವರದು ಇನ್ನೊಂದು ಗೋಳು. ಬೆಂಗಳೂರಿಗೆ ಕೂಡಿಕೊಂಡಿರುವ, ಇನ್ನೂ ಸೈಟುಗಳಾಗದಿರುವ ಜಮೀನು ಮಾಲೀಕನ ಹೆಗಲ ಮೇಲೊಮ್ಮೆ ಕೈಯಿಟ್ಟು ಸುಮ್ಮನೆ ಕುಳಿತರೆ ಆತನ ಸಮಸ್ಯೆಗಳ ಸುರುಳಿಗಳು ನಿಧಾನವಾಗಿ ಬಿಚ್ಚುತ್ತಾ ಹೋಗುತ್ತವೆ. ಜಮೀನು ಮಾಡಲು ಭೂಮಿಯಿದೆ. ಆದರೆ ಕೆಲಸಕ್ಕೆ ಕೂಲಿಗಳೇ ಇಲ್ಲ. ಇಷ್ಟು ದಿನ ಊರಿನಲ್ಲಿ ಕೆಲಸಕ್ಕೆ ಸಿಗುತ್ತಿದ್ದ ಆಳುಗಳೆಲ್ಲ ಬೆಳಗಾಗುತ್ತಲೇ ಬೆಂಗಳೂರಿನತ್ತ ಹೊರಡುವ ಬಸ್ಸನ್ನೇರಿ ಹೊರಟುಬಿಡುತ್ತಾರೆ. ಕೆಲಸ ಮುಗಿಸಿ ಸಿಟಿಯಲ್ಲಿ ಷೋಕಿ ಮಾಡಿ ರಾತ್ರಿಯಾಗುವ ಹೊತ್ತಿಗೆ ಮನೆ ಸೇರುತ್ತಾರೆ. ಜಮೀನಿನಲ್ಲಿ ಹಗಲಿರುಳು ದುಡಿದರೆ' ನೂರು ರೂ. ಕೊಟ್ಟರೆ ಹೆಚ್ಚು. ಅದೇ ನಗರದಲ್ಲಿ ಜಾಬ್' ಮಾಡಿದರೆ ದಿನಕ್ಕೆ 200-300 ರೂ. ಗ್ಯಾರಂಟಿ. ಹೊಲಗದ್ದೆಗಳಲ್ಲಿ ಮೈ ಕೈ ಹೊಲಸು ಮಾಡಿಕೊಂಡು ದುಡಿಯುವುದಕ್ಕಿಂತ, ಚೆಂದದ ಕಚೇರಿಯಲ್ಲಿ ಪ್ಯಾಂಟು-ಷರ್ಟ್ ತೊಟ್ಟು ಕ್ಲೀನಾಗಿ ಕೆಲಸ ಮಾಡುವ ಜೋಶೇ ಬೇರೆ. ಹೀಗಾಗಿ ನಗರಕ್ಕೆ ಅಂಟಿಕೊಂಡಿರುವ ಹಳ್ಳಿಗಳೆಲ್ಲ ಸದ್ಯದಲ್ಲಿಯೇ ಸೈಟುಗಳಾಗದೇ ಬೇರೆ ದಾರಿಯೇ ಇಲ್ಲ. ಕೈತುಂಬಾ ಕೊಡುತ್ತೇನೆಂದು ಕರೆದು ಕೆಲಸ ಕೊಟ್ಟರೂ ಕ್ಯಾರೇ ಅನ್ನುವವರಿಲ್ಲ. ನಗರಗಳಿಗೆ ಹೊರಟ ಆಳುಗಳನ್ನು ತಮ್ಮತ್ತ ಸೆಳೆಯುವ ಯಾವ ಆಕರ್ಷಣೆಗಳೂ ಈ ರೈತರ ಬತ್ತಳಿಕೆಗಳಲ್ಲಿಲ್ಲ. ಮನೆಯ ಮುಂದಿನ ತೋಟದಲ್ಲಿ ಬೆಳೆದು ನಿಂತ ಬೆಳೆಯನ್ನು ಕೊಯ್ಯಲು ಕೂಲಿಗಳು ಇಲ್ಲದೇ ಪರಿತಪಿಸುವಂತಾಗಿದೆ.

ಇನ್ನು ಹಳ್ಳಿಗಳ ಪಾಡಂತೂ ಕೇಳುವುದೇ ಬೇಡ. ಅದೊಂದು ಪ್ರಾರಬ್ಧ ಕರ್ಮ. ಒಂದು ಕಾಲದಲ್ಲಿ ಚಲನಶೀಲವಾಗಿದ್ದ ಹಳ್ಳಿಗಳೆಲ್ಲ ಇಂದು ಬಣಗುಡುತ್ತಿವೆ. ಹಳ್ಳಿಗಳ ಒಳಗೆ ಅಡಿಯಿಡುತ್ತಿದ್ದರೆ ಸೂತಕದ ಮನೆ ಹೊಕ್ಕಂತಾಗುತ್ತದೆ. ಪ್ಲೇಗೋ, ಕಾಲರಾವೋ ಬಡಿದರೆ ಸಾಮಾನುಗಳನ್ನೆಲ್ಲ ಅಲ್ಲಲ್ಲೇ ಬಿಟ್ಟು ಓಡಿಹೋಗುತ್ತಾರಲ್ಲ, ಅದೇ ರೀತಿಯ ದೃಶ್ಯಗಳು ಹಳ್ಳಿಗಳಿಗೆ ಅಡಿಯಿಟ್ಟಾಗ ಹಾದುಹೋಗುತ್ತವೆ. ಹಳ್ಳಿಗಳಲ್ಲಿ ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಸಾಯಂಕಾಲವಾಗುತ್ತಿದ್ದಂತೆ ನೂರಾರು ಮಂದಿ ಸೇರುತ್ತಿದ್ದರು. ಆದರೆ ಈಗ ಅಂಥ ಒಂದು ಹಿತವೆನಿಸುವ ಜನಜಂಗುಳಿ ಸಹ ಕಾಣುತ್ತಿಲ್ಲ. ಸಂಜೆಯಾಗುತ್ತಿದ್ದಂತೆ ಹಳ್ಳಿಗಳೆಲ್ಲ ಮುಸುಕು ಧರಿಸಿ ಮಲಗಿಬಿಡುತ್ತವೆ. ಒಂಬತ್ತು ಗಂಟೆಯ ಟಿವಿ ಧಾರಾವಾಹಿಯೇ ಕೊನೆಯ ಎಚ್ಚರ.

ಹಳ್ಳಿಗಳ ಸಮಾಧಿ ಮೇಲೆ ಬೆಂಗಳೂರು ಬೆಳೆಯುತ್ತಿದೆ ನೋಡಾ! »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more