• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಸುಭಾಷಿಣಿ ಮಿಸ್ತ್ರಿ!

By * ವಿಶ್ವೇಶ್ವರ ಭಟ್
|

ಆಕೆ ಸುಭಾಷಿಣಿ ಮಿಸ್ತ್ರಿ! ಅವಳದ್ದೊಂದು ವಿಚಿತ್ರ, ಭಯಂಕರ' ಕತೆ. ಸುಭಾಷಿಣಿ ಹುಟ್ಟಿದಾಗ ಇಡೀ ಬಂಗಾಳದಲ್ಲಿ ಕಡುಕ್ಷಾಮ. ಅವಳ ಅಪ್ಪ ಸಣ್ಣ ರೈತ. ಮನೆಯಲ್ಲಿ ಹದಿನಾಲ್ಕು ಮಕ್ಕಳ ಸಂಸಾರ. ತುಂಬಿದ ಬಡತನ. ತಾಯಿ ಬೀದಿ ಬೀದಿಯಲ್ಲಿ ಬೇಡಿ ತಂದ ತಂಗಳನ್ನು ಮಕ್ಕಳಿಗೆ ಉಣಿಸುತ್ತಿದ್ದಳು. ಅವಳು ಏನೇ ಕೆಲಸ ಮಾಡಿದರೂ ಮಕ್ಕಳನ್ನು ಸಾಕುವುದು ಸಾಧ್ಯವೇ ಇರಲಿಲ್ಲ. ಕೆಲವೇ ವರ್ಷಗಳಲ್ಲಿ ಆ ಸಂಸಾರದಲ್ಲಿ ಒಂದಾದ ಮೇಲೆ ಒಂದರಂತೆ ಏಳು ಮಕ್ಕಳು ಅಸುನೀಗಿದರು. ಸುಭಾಷಿಣಿ ಬದುಕುಳಿದಿದ್ದೇ ಒಂದು ಪವಾಡ. ಇನ್ನೂ ಹನ್ನೆರಡು ಆಗಿರಲಿಲ್ಲ. ಆ ಪುಟ್ಟ ಬಾಲೆ ಸುಭಾಷಿಣಿ ಯನ್ನು ಮದುವೆ ಮಾಡಿ ಕೊಟ್ಟುಬಿಟ್ಟರು. ಆಕೆಯ ಗಂಡನೋ ಕೂಲಿ. ಅವನ ಹೆಸರು ಸಾಧನ್. ಕೋಲ್ಕತಾಕ್ಕೆ ಸನಿಹದ ಹನ್ಸ್‌ಪುಕುರ್ ಗ್ರಾಮದವನು. ಇಡೀ ತಿಂಗಳು ದುಡಿದರೆ ಆತನಿಗೆ ಇನ್ನೂರು ರೂಪಾಯಿ ಸಿಕ್ಕರೆ ಅಬ್ಬಬ್ಬಾ. ಮದುವೆಯಾಗಿ ಎಂಟು ವರ್ಷಗಳಲ್ಲಿ ಅಂದರೆ ಇಪ್ಪತ್ತು ತುಂಬುವುದರೊಳಗೆ ಸುಭಾಷಿಣಿ ನಾಲ್ಕು ಮಕ್ಕಳ ತಾಯಿಯಾಗಿದ್ದಳು.

ಅದೆಲ್ಲಿತ್ತೋ ಪೀಡೆ, ಸೇಡು ತೀರಿಸಿಕೊಳ್ಳಲೆಂಬಂತೆ ಬಂದೆರಗಿತು. ಗಂಡ ಸಾಧನ್ ಹಠಾತ್ತನೆ ಕಾಯಿಲೆಬಿದ್ದ. ಕೋಲ್ಕತಾದ ಸರಕಾರಿ ಆಸ್ಪತ್ರೆಗೆ ಸೇರಿಸಿದಳು. ಅದು ನರಕದ ತವರುಮನೆ. ನರ್ಸ್‌ಗಳಾಗಲಿ, ಡಾಕ್ಟರ್‌ಗಳಾಗಲಿ ಸಾಧನ್ ಕಡೆಗೆ ಸುಳಿ ಯಲೇ ಇಲ್ಲ. ಅವರ ಕೈ ಬೆಚ್ಚಗೆ ಮಾಡಿ ಗಂಡನಿಗೆ ಚಿಕಿತ್ಸೆ ಕೊಡಿಸುವಷ್ಟು ಹಣವೂ ಅವಳ ಬಳಿ ಇರಲಿಲ್ಲ. ಯಾರ ಮುಂದೆ ಅಂಗಲಾಚಿದರೂ ತಿರಸ್ಕಾರದ ಭಾವ. ಸಾವು ಅವಳ ಗಂಡನ ಸಮಸ್ಯೆ, ಸಂಕಟಗಳನ್ನೆಲ್ಲ ಏಕ್‌ದಮ್ ಅಂತ್ಯಗೊಳಿಸಿತು. ಆದರೆ ಸುಭಾಷಿಣಿಯ ಸಂಕಟಗಳು ಆಗ ತಾನೆ ಆರಂಭ ವಾಗಿದ್ದವು! ಸಾಧನ್ ಇಡೀ ಕುಟುಂಬದ ಆಧಾರಸ್ತಂಭವಾಗಿದ್ದ. ಸುಭಾಷಿಣಿ ಹೊರಪ್ರಪಂಚಕ್ಕೆ ಕಾಲಿಟ್ಟವಳಲ್ಲ. ಒಂದು ದಿನವೂ ಶಾಲೆಗೆ ಹೋದವಳಲ್ಲ. ಹೆಬ್ಬೆಟ್ಟನ್ನೂ ಪ್ರಯೋಗಿಸುವ ಅವಕಾಶ ಅವಳಿಗೆ ಒದಗಿ ಬಂದಿರಲಿಲ್ಲ. ಮನೆಯಲ್ಲಿ ನಾಲ್ವರು ಪುಟ್ಟ ಕಂದಮ್ಮಗಳು. ಗಂಡನ ಶವದ ಮುಂದೆ ಕುಳಿತು ಹೃದಯ ಬಿರಿಯುವಂತೆ ರೋದಿಸುತ್ತಿದ್ದರೆ ಮುಂದಿನ ಬದುಕು ಕತ್ತಲಿನ ಮುಸುಕು ಹೊಡೆದು ಕುಳಿತಿತ್ತು. ನಾಳೆಯಿಂದ ಹೇಗೆ ಬದುಕು ಸಾಗಿಸುವುದೆಂಬುದು ಸಹ ಅವಳಿಗೆ ಗೊತ್ತಿರಲಿಲ್ಲ. ಅವಳಿಗೆ ಸಹಾಯಹಸ್ತ ಚಾಚಬಲ್ಲವರು ಈ ಜಗತ್ತಿನಲ್ಲೇ ಯಾರೂ ಇರಲಿಲ್ಲ. ಗಂಡ ತೀರಿಕೊಂಡನೆಂಬ ಸುದ್ದಿಯನ್ನು ತವರಿಗೆ ತಿಳಿಸಿದರೂ ಒಬ್ಬರೂ ಬರಲಿಲ್ಲ. ಅಂಥ ಬಡತನ ಅವರಿಗೂ. ಹಾಗೆಂದು ಸುಮ್ಮನಿರುವಂತಿಲ್ಲ. ಪುಟ್ಟ ಮಕ್ಕಳಿಗಾಗಿ ಬದುಕಲೇಬೇಕಿತ್ತು.

ಗಂಡನ ಶವಸಂಸ್ಕಾರ ಮಾಡಿ ಮನೆಗೆ ಬಂದ ಸುಭಾಷಿಣಿ ಆ ಹಸಿವು, ದುಃಖ ತುಂಬಿದ ಒಡಲಿಗೆ ನಾಲ್ವರು ಮಕ್ಕಳನ್ನು ತಬ್ಬಿಕೊಂಡು ಕಣ್ಣೀರನ್ನು ಒರೆಸಿಕೊಂಡು ಮನಸ್ಸಿನಲ್ಲಿ ಒಂದು ಶಪಥಗೈದಳು- ನನ್ನ ಗಂಡನ ಸಾವಿಗೆ ಆಸ್ಪತ್ರೆ ವೈದ್ಯರು, ದಾದಿಯರ ನಿರ್ಲಕ್ಷ್ಯವೇ ಕಾರಣವಾಯಿತಲ್ಲ. ಇದು ತನ್ನೊಬ್ಬ ಗಂಡನ ಗೋಳಿನ ಕತೆಯಲ್ಲ. ಸಾವಿರಾರು ಅಮಾಯಕರು ತಮ್ಮದಲ್ಲದ ತಪ್ಪಿಗಾಗಿ ಅಬ್ಬೇಪಾರಿಗಳಾಗಿ ಸತ್ತು ಹೋಗುತ್ತಾರೆ. ಇದನ್ನು ತಪ್ಪಿಸಲು ನಾನು ನನ್ನ ಜೀವನದಲ್ಲಿ ಬಡಜನರ ಪ್ರಾಣ ಉಳಿಸುವ, ಬಡರೋಗಿಗಳನ್ನು ಮನುಷ್ಯರಂತೆ ಕಾಣುವ ಒಂದು ಆಸ್ಪತ್ರೆ ತೆರೆಯಬೇಕು. ನನ್ನ ಒಬ್ಬ ಮಗನನ್ನಾದರೂ ಡಾಕ್ಟರನನ್ನಾಗಿ ಮಾಡಬೇಕು. ಸುಭಾಷಿಣಿಯ ಸ್ಥಾನದಲ್ಲಿ ಯಾರೇ ಇದ್ದರೂ ಅವರಿಗೆ ಹೀಗೇ ಅನಿಸುತ್ತಿತ್ತು. ಕಾರಣ ಆ ಕ್ಷಣದಲ್ಲಿ ಹಾಗೇ ಅನಿಸುವುದು ಸಹಜ. ಆದರೆ ಕೆಲ ದಿನಗಳ ಅನಂತರ ಭಾವತೀವ್ರತೆ ಇಷ್ಟು ಉತ್ಕಟವಾಗಿರುವುದಿಲ್ಲ. ಕಾಲಕ್ಕೆ ಎಂಥ ನೋವನ್ನಾದರೂ ಮರೆಯಿಸುವ ತಾಕತ್ತು ಇರುತ್ತದೆ. ಸುಭಾಷಿಣಿಗೂ ಇತರರಿಗೂ ಇರುವ ವ್ಯತ್ಯಾಸವೇ ಇದು. ಅವಳು ತಾನು ಗೈದ ಶಪಥವನ್ನು ಮರೆಯಲಿಲ್ಲ.

ಎದೆಗೂಡಿನಲ್ಲಿ ಬಚ್ಚಿಟ್ಟುಕೊಂಡು ನಿತ್ಯವೂ ಕಾವು ಕೊಡಲು ನಿರ್ಧರಿಸಿದಳು. ಆದರೆ ಅವಳ ಮುಂದಿದ್ದ ಮಾರ್ಗದಲ್ಲಿ ಆಶಾಕಿರಣವೆನ್ನುವುದು ಇರಲೇ ಇಲ್ಲ. ನಾಲ್ವರು ಮಕ್ಕಳನ್ನು ಸಾಕುವುದಕ್ಕಾಗಿ ಅವಳು ದುಡಿಯಲೇಬೇಕಿತ್ತು. ಅವಳಿಗೆ ಹೊರಗಿನ ಯಾವ ಕೆಲಸವೂ ಗೊತ್ತಿರಲಿಲ್ಲ. ಹೀಗಾಗಿ ಊರಿನ ಶ್ರೀಮಂತನೊಬ್ಬನ ಮನೆಯಲ್ಲಿ ಪಾತ್ರೆತಿಕ್ಕುವ, ಮುಸುರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡಳು. ಒಂದು ಮನೆಯಲ್ಲಿ ಕೆಲಸ ಮಾಡಿದರೆ ತುತ್ತಿನಚೀಲ ತುಂಬುವುದಿಲ್ಲವೆಂಬುದು ಗೊತ್ತಾಯಿತು. ಐದು ಮನೆಗಳಲ್ಲಿ ಇದೇ ಕೆಲಸ ಮಾಡಲಾರಂಭಿಸಿದಳು. ಒಮ್ಮೆ ಮನೆಗೆಲಸ ಮಾಡುವಾಗ ಮನೆ ಯಜಮಾನನ ಮುಂದೆ ತನ್ನ ಮುಂದಿನ ಆಸೆ ಹೇಳಿಕೊಂಡಾಗ ಆತ ಜೋರಾಗಿ ನಕ್ಕು ಗದರಿದ್ದನಂತೆ. ಸುಭಾಷಿಣಿ ಎಲ್ಲ ಕೆಲಸಗಳನ್ನೂ ಮಾಡಿದಳು. ಕೆಲವರ ಮನೆಯಲ್ಲಿ ಪಾಯಖಾನೆ ಸ್ವಚ್ಛಗೊಳಿಸುವುದು, ಚಪ್ಪಲಿ ಪಾಲಿಶ್ ಮಾಡುವುದು, ಅಡುಗೆ ಮಾಡುವುದು, ಹೂದೋಟಕ್ಕೆ ನೀರುಣಿಸುವುದು... ಹೀಗೆ ಯಾವ ಕೆಲಸ ಹೇಳಿದರೂ ಇಲ್ಲವೆನ್ನುತ್ತಿರಲಿಲ್ಲ. ಇಷ್ಟೆಲ್ಲ ಕೆಲಸ ಮಾಡಿದರೆ ಅವಳಿಗೆ ತಿಂಗಳಿಗೆ ಎರಡು ನೂರು ರೂ. ಸಿಗುತ್ತಿತ್ತು. ಯಾರದೋ ಮನೆಯಲ್ಲಿ ಉಪಾಹಾರ, ಊಟವಾಗುತ್ತಿತ್ತು. ಇನ್ಯಾರದೋ ಮನೆಯಲ್ಲಿ ಕೊಟ್ಟ ತಂಗಳು ಮಕ್ಕಳಿಗೆ ಸಾಕಾಗುತ್ತಿತ್ತು. ಸಣ್ಣಪುಟ್ಟ ಖರ್ಚನ್ನು ಬಿಟ್ಟರೆ ಗಳಿಸಿದ ಹಣವನ್ನೆಲ್ಲ ಉಳಿತಾಯ ಮಾಡುತ್ತಿದ್ದಳು. ಮೊದಲ ಮಗ ಅಜಯ್‌ನನ್ನು ಅನಾಥಮಕ್ಕಳ ಆಶ್ರಮಕ್ಕೆ ಕಳಿಸಿದಳು. ಆತನಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿಯಿತ್ತು. ಉಳಿದ ಮೂವರನ್ನು ತನ್ನೊಂದಿಗೆ ಕೆಲಸಕ್ಕೆ ಹಚ್ಚಿದಳು. ಅವರಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂಬುದು ಅವಳ ಆಸೆಯಾಗಿತ್ತು. ಆದರೆ ಮಕ್ಕಳಿಗೆ ಆಸಕ್ತಿಯಿರಲಿಲ್ಲ.

ಈ ಮಧ್ಯೆ ಸುಭಾಷಿಣಿ ಸಾಯಂಕಾಲದ ಹೊತ್ತು ತರಕಾರಿಗಳನ್ನು ಮಾರಲಾರಂಭಿಸಿದಳು. ಊರಲ್ಲಿನ ರೈತರು ಬೆಳೆದ ತರಕಾರಿಗಳನ್ನು ಖರೀದಿಸಿ, ರಸ್ತೆ ಬದಿಯಲ್ಲಿ ತಳ್ಳುಗಾಡಿಯನ್ನಿಟ್ಟುಕೊಂಡು ತರಕಾರಿ ವ್ಯಾಪಾರಕ್ಕೆ ತೊಡಗಿದಳು. ಇದರಿಂದ ಆರಂಭದಲ್ಲಿ ಒಳ್ಳೆಯ ಲಾಭ ಬರಲಾರಂಭಿಸಿತು. ಬೇರೆಯವರ ಮನೆಯಲ್ಲಿ ಮುಸುರೆ ಬಳಿಯುವುದಕ್ಕಿಂತ ಈ ದಂಧೆಯೇ ಹೆಚ್ಚು ಲಾಭದಾಯಕವೆಂದು ಅನಿಸಿದ್ದರಿಂದ ಮೂವರು ಮಕ್ಕಳನ್ನು ಕಟ್ಟಿಕೊಂಡು ಧಾಪಾ ಎಂಬ ಊರಿಗೆ ಬಂದಳು. ಅಲ್ಲಿಯೂ ತರಕಾರಿ ಅಂಗಡಿ ಆರಂಭಿಸಿದಳು. ಕೋಲ್ಕತಾದಲ್ಲಿ ತರಕಾರಿ ಅಂಗಡಿ ತೆರೆದರೆ ಇನ್ನೂ ಹೆಚ್ಚು ಲಾಭ ಮಾಡಬಹುದೆಂದು ಯಾರೋ ಹೇಳಿದಾಗ ಸುಭಾಷಿಣಿಯ ಕಿವಿ ನೆಟ್ಟಗಾದವು. ಅದಾಗಿ ಎಂಟು ತಿಂಗಳಲ್ಲಿ ಕೋಲ್ಕತಾಕ್ಕೆ ಹೋಗಿ ಪುಟ್ಟ ತರಕಾರಿ ಅಂಗಡಿ ತೆರೆದಳು. ತಿಂಗಳಿಗೆ ಐನೂರು ರೂ. ಲಾಭ ಬರುತ್ತಿತ್ತು. ಪೋಸ್ಟಾಫೀಸಿನಲ್ಲಿ ಉಳಿತಾಯ ಖಾತೆ ತೆರೆದು ದುಡಿದ ಹಣವನ್ನೆಲ್ಲ ಜಮಾ ಮಾಡಲಾರಂಭಿಸಿದಳು. ಇಪ್ಪತ್ತು ವರ್ಷ ಹೀಗೇ ಗತಿಸಿದವು. ತರಕಾರಿ ಮಾರಾಟ, ಮನೆಗೆಲಸದಿಂದ ಅವಳು ಹೊಸ ವ್ಯಕ್ತಿ ಯಾಗಿ ರೂಪುಗೊಂಡಿದ್ದಳು. ದುಡಿದ ಹಣದಲ್ಲಿ ತನಗಾಗಿ ಏನನ್ನೂ ಖರ್ಚು ಮಾಡಲಿಲ್ಲ. ಅಜಯ್‌ನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡಿದ್ದನ್ನು ಬಿಟ್ಟರೆ ಉಳಿದ ಹಣವನ್ನೆಲ್ಲ ಎತ್ತಿಟ್ಟಳು. ಆಸ್ಪತ್ರೆ ಕಟ್ಟುವ ಕನಸು ತೀವ್ರವಾಗಲಾರಂಭಿಸಿತು. 1992ರಲ್ಲಿ ಗಂಡನ ಊರಾದ ಹನ್ಸ್‌ಪುಕುರ್‌ದಲ್ಲಿ ಹತ್ತು ಸಾವಿರ ರೂ. ಕೊಟ್ಟು ಒಂದು ಎಕರೆ ಜಾಗ ಖರೀದಿಸಿದಳು. ಮರುವರ್ಷವೇ ಸುಭಾಷಿಣಿ ಕೋಲ್ಕತಾದಲ್ಲಿನ ತನ್ನ ತರಕಾರಿ ಅಂಗಡಿ ಮಾರಾಟ ಮಾಡಿ ಹನ್ಸ್‌ಪುಕುರ್‌ಗೆ ಹೋಗಿ ನೆಲೆಸಲು ನಿರ್ಧರಿಸಿದಳು. ಕೋಲ್ಕತಾದಲ್ಲಿದ್ದು ತನ್ನ ಕನಸನ್ನು ಸಾಕಾರಗೊಳಿಸುವುದು ಕಷ್ಟವೆಂಬುದು ಮನವರಿಕೆಯಾಗಿತ್ತು. ಊರಿನ ಜನರೆಲ್ಲರನ್ನೂ ಕರೆದು ತನ್ನ ಯೋಜನೆ ವಿವರಿಸಿದಳು. ತನ್ನ ಜೀವನವನ್ನೇ ಆಸ್ಪತ್ರೆ ನಿರ್ಮಾಣಕ್ಕೆ ಮುಡಿಪಾಗಿಟ್ಟಿರುವುದನ್ನು ಮನವರಿಕೆ ಮಾಡಿಕೊಟ್ಟಳು. ಆಗ ಊರಿನ ಜನರಿಂದ ಸಂಗ್ರಹವಾದ ಹಣ ಬರೀ 926 ರೂ.!

ಸುಭಾಷಿಣಿ ಧೃತಿಗೆಡಲಿಲ್ಲ. ಅದೇ ಹಣದಿಂದ ಆ ಒಂದೆಕರೆ ಜಾಗದಲ್ಲಿ ಪುಟ್ಟ ಗುಡಿಸಲನ್ನು ಕಟ್ಟಿದಳು. ಅದೇ ಆಸ್ಪತ್ರೆ ಯಾಯಿತು. ಈ ಆಸ್ಪತ್ರೆಗೆ ಸ್ವಯಂಪ್ರೇರಿತರಾಗಿ ವಾರಕ್ಕೆ ಕೆಲ ಗಂಟೆ, ತಿಂಗಳಿಗೆ ಒಂದು ದಿನವಾದರೂ ವೈದ್ಯರು ಉಚಿತವಾಗಿ ಬಂದು ಕೆಲಸ ಮಾಡುವಂತೆ ರಿಕ್ಷಾಕ್ಕೆ ಮೈಕ್ ಕಟ್ಟಿ ಹತ್ತಾರು ಊರುಗಳಲ್ಲಿ ಪ್ರಚಾರ ಮಾಡಿದಳು- ತಕ್ಷಣ ಡಾ. ರಘುಪತಿ ಚಟರ್ಜಿ ಎಂಬ ವೈದ್ಯರು ಮುಂದೆ ಬಂದರು. ಅವರ ಹಿಂದೆ ಬೇರೆ ಬೇರೆ ಕಾಯಿಲೆಗಳ ತಜ್ಞರು ಸಹ ಬಂದರು. ಆಸ್ಪತ್ರೆ ಆರಂಭವಾದ ಮೊದಲ ವಾರದಲ್ಲಿ ಆ ಗುಡಿಸಲೆಂಬ ಆಸ್ಪತ್ರೆಯಲ್ಲಿ 252 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಹ್ಯೂಮೆನಿಟಿ ಹಾಸ್ಪಿಟಲ್' ಎಂದು ಆ ಗುಡಿಸಲಿಗೆ ಹೆಸರಿಡಲಾಯಿತು. ಸುಭಾಷಿಣಿ ನಿರ್ಮಿಸಬೇಕೆಂದಿದ್ದು ಅಂಥ ಆಸ್ಪತ್ರೆಯಾಗಿರಲಿಲ್ಲ. ಸುಸಜ್ಜಿತ ಕಟ್ಟಡದಲ್ಲಿ ಕನಿಷ್ಠ ಎರಡು ಸಾವಿರ ಚದರ ಅಡಿ ವಿಸ್ತಾರದಲ್ಲಿ ಭವ್ಯ ಆಸ್ಪತ್ರೆ ಕಟ್ಟಬೇಕೆಂಬುದು ಅವಳ ಆಸೆಯಾಗಿತ್ತು. ಈ ಮಧ್ಯೆ ಮಗ ಅಜಯ್ ಪ್ರತಿಷ್ಠಿತ ಕೋಲ್ಕೊತಾ ಮೆಡಿಕಲ್ ಕಾಲೇಜಿನಲ್ಲಿ ಮೆರಿಟ್‌ನಲ್ಲಿ ಸೀಟು ಗಿಟ್ಟಿಸಿಕೊಂಡು ವೈದ್ಯನಾಗಿ ಹೊರಹೊಮ್ಮಿ ತಾಯಿಯ ಕನಸು ನನಸಾಗಿಸುವ ಕೈಂಕರ್ಯಕ್ಕೆ ಸಂಕಲ್ಪ ತೊಟ್ಟಿದ್ದ. ಭವ್ಯ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಹಣ ಅವರಲ್ಲಿ ಇರಲಿಲ್ಲ. ಸ್ಥಳೀಯ ಸಂಸದೆ ಮಾಲಿನಿ ಭಟ್ಟಾಚಾರ್ಯ ಅವಳನ್ನು ಭೇಟಿ ಮಾಡಿ ಆಸ್ಪತ್ರೆ ಯೋಜನೆ ವಿವರಿಸಿದರೆ ಆಸಕ್ತಿ ತೋರಲಿಲ್ಲ. ಆದರೆ ಸುಭಾಷಿಣಿ ಬಿಡಲಿಲ್ಲ. ತನ್ನ ಗುಡಿಸಲೆಂಬ ಆಸ್ಪತ್ರೆಯಲ್ಲಿ ಎಂಥ ಚಮತ್ಕಾರ ನಡೆಯುತ್ತಿದೆಯೆಂಬುದನ್ನು ನೋಡಲು ಬರುವಂತೆ ಸಂಸದೆಯನ್ನು ಮನವೊಲಿಸಿದಳು.

ಸುಭಾಷಿಣಿಯ ತಪಸ್ಸು ಫಲನೀಡಲು ವರವಾಗುವ ಕ್ಷಣಕ್ಕೆ ಕಾಲಿಡುತ್ತಿದ್ದ ಸಂದರ್ಭ. ಮಾಲಿನಿ ಮುಕ್ತ ಮನಸ್ಸಿನಿಂದ ಬೆಂಬಲಿಸಲು ನಿರ್ಧರಿಸಿದರು. ಆಸ್ಪತ್ರೆ ನಿರ್ಮಾಣ ಶಂಕುಸ್ಥಾಪನೆ ಸಮಾರಂಭಕ್ಕೆ ಕರೆದರೆ ಒಬ್ಬರೇ ಒಬ್ಬ ಪತ್ರಕರ್ತರು ಬರಲಿಲ್ಲ. ಅದಾಗಿ ಎರಡು ವರ್ಷಗಳಲ್ಲಿ ಭವ್ಯ ಹಾಗೂ ಸುಸಜ್ಜಿತ ಆಸ್ಪತ್ರೆ ತಲೆಯೆತ್ತಿದಾಗ ಅದರ ಉದ್ಘಾಟನೆಗೆ ಸ್ವತಃ ರಾಜ್ಯಪಾಲರೇ ಬಂದರು. ಆಗಲೇ ಹೊರ ಜಗತ್ತಿಗೆ ಸುಭಾಷಿಣಿ ಎಂಬ ಮುಸುರೆತಿಕ್ಕುವ, ತರಕಾರಿ ಮಾರುವ ಅನಕ್ಷರಸ್ಥ ಹೆಣ್ಣುಮಗಳು ಆಸ್ಪತ್ರೆ ಕಟ್ಟಿದ ಸಂಗತಿ ಗೊತ್ತಾಗಿದ್ದು! ಈಗ ಮೂರು ಎಕರೆ ಜಾಗದಲ್ಲಿ ಸುಮಾರು ಒಂಬತ್ತು ಸಾವಿರ ಚದರ ಅಡಿ ವಿಸ್ತಾರದಲ್ಲಿ ರೂಪುಗೊಂಡಿರುವ ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರಿದ್ದಾರೆ, ಆಧುನಿಕ ಉಪಕರಣಗಳಿವೆ, ಆಪರೇಶನ್ ಥಿಯೇಟರ್‌ಗಳಿವೆ. ಆಂಬ್ಯುಲೆನ್ಸ್ ಸೇವೆಯಿದೆ. ಇಷ್ಟಾಗಿಯೂ ಇದು ಬಡವರ ಆಸ್ಪತ್ರೆಯಾಗಿಯೇ ಉಳಿದಿದೆ. ಲಾಭ ಮಾಡುವುದು ಅವಳ ಉದ್ದೇಶ ಅಲ್ಲ. ಸಣ್ಣಪುಟ್ಟ ರೋಗಗಳಿಗೆ ಹತ್ತು ರೂ.ಗಿಂತ ಹೆಚ್ಚು ಚಾರ್ಜ್ ಮಾಡುವುದಿಲ್ಲ. ಶಸ್ತ್ರಚಿಕಿತ್ಸೆಯನ್ನು ಐದು ಸಾವಿರ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಮುಗಿಸಬಹುದು. ಬೇರೆ ಬೇರೆ ಊರುಗಳಿಂದ ರೋಗಿಗಳು ಹ್ಯೂಮೆನಿಟಿ ಹಾಸ್ಪಿಟಲ್‌ಗೆ ಬರುತ್ತಾರೆ. ಇಲ್ಲಿ ರೋಗಿಗಳನ್ನು ಅತಿಥಿಗಳಂತೆ ನೋಡಿಕೊಳ್ಳಲಾಗುತ್ತದೆ. ಹಣ ನೀಡುವ ಶಕ್ತಿಯಿಲ್ಲದವರನ್ನು ವಾಪಸ್ ಕಳಿಸುವುದಿಲ್ಲ. ಉಚಿತ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಲಾಗುತ್ತದೆ. ಸದಾ ರೋಗಿಗಳಿಂದ ತುಂಬಿದ್ದರೂ ಆಸ್ಪತ್ರೆಯಲ್ಲಿ ವಿಸ್ಮಯವೆನಿಸುವ ಆತ್ಮೀಯತೆ, ಶಾಂತ ವಾತಾವರಣ ಯಾವತ್ತೂ ನೆಲೆಸಿರುತ್ತದೆ.

ಸುಭಾಷಿಣಿ ಮಿಸ್ತ್ರಿ ಕನಸು ನನಸಾದ ನಂತರವೂ ವಿರಮಿಸಿಲ್ಲ. ಆಸ್ಪತ್ರೆ ಖರ್ಚುಗಳನ್ನು ತೂಗಿಸಿಕೊಂಡು ರೋಗಿಗಳಿಗೆ ಭಾರ ವಾಗದ ನಿರ್ವಹಣೆ ಬಗ್ಗೆ ಯೋಚಿಸುತ್ತಿದ್ದಾಳೆ. ಇಷ್ಟನ್ನು ಬಿಟ್ಟರೆ ಆಸ್ಪತ್ರೆಯಲ್ಲಿ ತರಕಾರಿ ಮಾರುವವಳಿಗೇನು ಕೆಲಸ? ಹೇಗಿದ್ದರೂ ಮಗ ಡಾ. ಅಜಯ್ (098830-62354) ಆಸ್ಪತ್ರೆಯ ಆಡಳಿತ, ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿದ್ದಾನೆ. ಹೀಗಾಗಿ ಆಕೆ ಇಂದಿಗೂ ಸಾಯಂಕಾಲವಾಗುತ್ತಿದ್ದಂತೆ ತರಕಾರಿ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಾಳೆ. ಅಲ್ಲಿ ಸಿಗುವ ನಾಲ್ಕು ಕಾಸನ್ನು ಆಸ್ಪತ್ರೆಗೆ ಕೊಡುತ್ತಾಳೆ. ಆಕೆಯ ದೊಡ್ಡ ಮಗಳು ಹಾಗೂ ಎರಡನೆ ಮಗ ಅವಳೊಂದಿಗೆ ತರಕಾರಿ ಅಂಗಡಿಯಲ್ಲಿ ಸಹಾಯಕರಾಗಿದ್ದಾರೆ. ಕೊನೆಯ ಮಗಳು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ.

ಸುಭಾಷಿಣಿ ಮಿಸ್ತ್ರಿ ಕತೆ ಓದಿ ಮುಗಿಸುವಾಗ ಒಂದು ವಿಷಾದ ಕೋಲ್ಮಿಂಚಿನಂತೆ ಆಹ್ಲಾದವಾಗಿ ಮಾರ್ಪಟ್ಟಿತು. ಮುಸುರೆ ಬಳಿಯುವ, ತರಕಾರಿ ಮಾರುವ ಹೆಂಗಸಿಗೆ ಇಷ್ಟೆಲ್ಲ ಸಾಧ್ಯವಾಗು ವುದಾದರೆ...!? ಆಕೆ ಮುಸುರೆ ಬಳಿದು, ತರಕಾರಿ ಮಾರುತ್ತಿದ್ದಳು, ಕೊನೆಗೆ ಆಸ್ಪತ್ರೆ ಕಟ್ಟಿದಳು, ಹೇಗೆ?

« ಲೇಖನದ ಹಿಂದಿನ ಭಾಗ : ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X