ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ!

By * ವಿಶ್ವೇಶ್ವರ ಭಟ್
|
Google Oneindia Kannada News

Subhashini Mistry
ಪುಸ್ತಕದೊಳಗೆ ಹಾದು ಹೋಗುವ ವ್ಯಕ್ತಿಗಳು ಇಷ್ಟೊಂದು ಗಾಢವಾಗಿ ಸ್ಫೂರ್ತಿ, ಪ್ರೇರಣೆಯ ಸಂಚಲನದ ಸಿಂಚನಗೈಯಬಹುದು ಎಂದುಕೊಂಡಿರಲಿಲ್ಲ. ಇತ್ತೀಚೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಫೋಟೊಗ್ರಾಫರ್, ಅಪ್ಪಟ ಕನ್ನಡಿಗ, ಸ್ನೇಹಿತ ಮಹೇಶ್ ಭಟ್ ತಾವು ಅನಿತಾ ಪ್ರತಾಪ್ ಜತೆಗೂಡಿ ಬರೆದ 'Unsung' ಎಂಬ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದರು. ನಿಮಗೆ ಮಹೇಶ್ ಭಟ್ ಗೊತ್ತಿರಬಹುದು, ಅವರು ಕರ್ನಾಟಕದ ಬಗ್ಗೆ ತೀರಾ ಅಪರೂಪವೆನಿಸುವ ಫೋಟೊಗಳಿರುವ ಪುಸ್ತಕ ಬರೆದಿದ್ದಾರೆ. ನ್ಯೂಸ್‌ವೀಕ್, ಟೈಮ್, ನ್ಯೂಯಾರ್ಕ್ ಟೈಮ್ಸ್ ಮ್ಯಾಗಜಿನ್, ದಿ ಗಾರ್ಡಿಯನ್ ಮುಂತಾದ ಪತ್ರಿಕೆಗಳಿಗೆ ಕೆಲಸ ಮಾಡಿದವರು.

ಸುಮಾರು ಏಳು ವರ್ಷಗಳ ಹಿಂದೆ, ದೊಡ್ಡ ಗಾತ್ರದಲ್ಲಿದ್ದ ವಿಜಯ ಕರ್ನಾಟಕ' ಪತ್ರಿಕೆಯನ್ನು ತುಸು ಕಿರಿದುಗೊಳಿಸಿದಾಗ ನಾನು ಮಹೇಶ್ ಭಟ್ ಅವರನ್ನು ತೀರ ಅನಿರೀಕ್ಷಿತವಾಗಿ ರೂಪದರ್ಶಿಯಾಗಿ ಬಳಸಿಕೊಂಡಿದ್ದೆ. ಸಾಯಿಬಾಬಾಹೇರ್‌ಸ್ಟೈಲ್‌ನಲ್ಲಿದ್ದ ಮಹೇಶ್ ಭಟ್ ಅವರ ತಲೆಗೂದಲನ್ನು ಕಂಪ್ಯೂಟರ್ ನೆರವಿನಿಂದ ಕತ್ತರಿಸಿ, ಪತ್ರಿಕೆಯ ಗಾತ್ರ ಕಡಿಮೆಗೊಳಿಸಿದ್ದನ್ನು ಅದಕ್ಕೆ ಹೋಲಿಸಿ ಸ್ಲಿಮ್ ಆಂಡ್ ಟ್ರಿಮ್' ಎಂಬ ಕ್ಯಾಂಪೇನ್ ಮಾಡಿದ್ದೆವು. ಅತ್ಯಂತ ಸೂಕ್ಷ್ಮ ಸಂವೇದಿ ಕಣ್ಣು, ಮನಸ್ಸಿನ ಪ್ರತಿಭಾನ್ವಿತ ಫೋಟೊಗ್ರಾಫರ್ ಮಹೇಶ್ ಕಳಿಸಿದ ಪುಸ್ತಕ ನನ್ನಲ್ಲಿ ಸಹಜ ಕುತೂಹಲ ಕೆರಳಿಸಿತು. ಮೊದಲ ಪುಟದ ಮೇಲೆ ಬೆರಳಿಟ್ಟಿದ್ದು ಮಾತ್ರ ಗೊತ್ತು, ಕೊನೆಯ ಪುಟದ ಬದುವಿನಲ್ಲಿ ನಿಂತುಕೊಂಡಾಗ ಮನಸ್ಸಿನ ಹುಲ್ಲುಗಾವಲಿನಲ್ಲಿ ಸ್ಫೂರ್ತಿಯ ಅಸಂಖ್ಯ ಮೊಗ್ಗುಗಳು ಪಕಳೆಗಳಾಗಿ ಮೈಬಿರಿಯುತ್ತಿದ್ದವು. ಮೆರವಣಿಗೆಯಲ್ಲಿ ಹೊರಟ ಸಾರ್ಥಕ ಕ್ಷಣಗಳೆಲ್ಲ ನನ್ನ ಮುಂದೆ ಪ್ರೀತಿಯಿಂದ ಧರಣಿ ಕುಳಿತಿದ್ದವು. ಯಾರೋ ಕೆಲವು ಅನಾಮಧೇಯ ವ್ಯಕ್ತಿಗಳು ನನ್ನನ್ನು ಬಂದು ಹಿಡಿದು ಅಲುಗಾಡಿಸಿ, ಮೈಯಲ್ಲಿದ್ದ ಜಾಡ್ಯವನ್ನು ಉದುರಿಸಿ, ಹೊಸ ಚೈತನ್ಯದ ಜೀವಸೆಲೆ ತುಂಬಿ ಪಕ್ಕನೆ ಅದೃಶ್ಯರಾಗಿ ಹೋದಂತೆ ಭಾಸವಾಗಿತ್ತು. ಆಗ ಮನಸ್ಸಿನಲ್ಲಿ ಸ್ನೇಹಿತ ಮಹೇಶ್‌ಗೆ ([email protected]) ಅಭಿಮಾನದ ಪುಟ್ಟತೋರಣ ಕಟ್ಟಿದ್ದೆ!

ಸಿನಿಮಾದಲ್ಲಿ ಹಾಡದ ಅಥವಾ ಹಾಡಲು ಬಾರದ ನಾಯಕನನ್ನು Unsung Hero ಎಂದು ತಮಾಷೆಗೆ ಪನ್ ಮಾಡುವುದುಂಟು. ಆದರೆ ಈ ಪುಸ್ತಕ ಅಂಥದ್ದಲ್ಲ. ಇದು ಅನಾಮಧೇಯ ವ್ಯಕ್ತಿಗಳ ಅಸಾಧಾರಣ, ಅದ್ಭುತ ಕಾಯಕ-ಸಾಧನೆ ಮೆರೆದ ಯಶೋಗಾಥೆ. ನಮ್ಮ ಮಧ್ಯದಲ್ಲೇ ಇರುವ ಒಬ್ಬ ತೀರಾ ಸಾಮಾನ್ಯ ವ್ಯಕ್ತಿ, ವಠಾರದಲ್ಲಿದ್ದೂ ಕಣ್ಣಿಗೆ ಬೀಳದ ವ್ಯಕ್ತಿ ಹಾಗೂ ಪ್ರಚಾರ, ಪತ್ರಿಕಾಗೋಷ್ಠಿ, ಫ್ಲೆಕ್ಸ್, ಟಿವಿ-9 ಮುಂತಾದವು ತನಗೆ ಗೊತ್ತೇ ಇಲ್ಲವೆಂದು ಭಾವಿಸಿ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿ ನೋಡನೋಡುತ್ತಾ ಅದ್ಭುತವೆನಿಸುವ ಕೆಲಸ ಮಾಡಿ ನಮ್ಮ ಮುಂದೆ ಬೆರಗನ್ನು ಹಾಸುವ ಸಾಮಾನ್ಯರಲ್ಲಿ ಸಾಮಾನ್ಯ, ಅಸಾಮಾನ್ಯ ವ್ಯಕ್ತಿಗಳ ಕುರಿತ ಪುಸ್ತಕವಿದು. ಇಲ್ಲಿ ಅಂಥ ಹತ್ತು ಶುದ್ಧ ಸಾಧಕರ ಜೀವನದರ್ಶನ'ವಿದೆ. ಇರುವೆಯಾಗಲಿ, ಜೇನ್ನೊಣಗಳಾಗಲಿ ಎಂದೂ ಹೆಸರು, ಖ್ಯಾತಿ, ಪ್ರಶಸ್ತಿ, ಪಿಂಡಗಳಿಗೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿನ ಸಾಧಕರೂ ಹಾಗೇ. ಅವರಾಯಿತು, ಅವರ ಕೆಲಸಗಳಾಯಿತು. ನಂಬಿದ ವಿಶ್ವಾಸ, ನೆಚ್ಚಿಕೊಂಡ ನಂಬಿಕೆಗಳೊಂದಿಗೆ ಅವರಿಗೆ ದುಡಿಯುವುದೊಂದೇ ಗೊತ್ತು. ಅದರಿಂದ ನಾಲ್ಕು ಮಂದಿಗೆ, ಸುತ್ತಲಿನ ಸಮಾಜಕ್ಕೆ ಒಳ್ಳೆಯದಾದರೆ ಸಾಕು ಎಂಬುದು ಅವರ ಪರಮ ಆಶಯ, ಅಪ್ಪಟ ಸ್ವಾರ್ಥ.

ನಮ್ಮಲ್ಲೊಂದು ನಂಬಿಕೆಯಿದೆ. ನಮಗೆ ನಾಯಕರು ಅಂದ್ರೆ ರಾಜಕೀಯ ನಾಯಕರು. ಉಳಿದವರಾರೂ ನಮಗೆ ನಾಯಕರಲ್ಲ. ಉಳಿದವರನ್ನು ನಾವು ನಾಯಕರೆಂದು ಪರಿಗಣಿಸುವುದಿಲ್ಲ. ನಮ್ಮ Role Modelಗಳೂ ಹಾಗೆ. ಸಿನಿಮಾ ನಟ, ನಟಿಯರು,ಕ್ರಿಕೆಟ್ ಆಟಗಾರರು, ಫ್ಯಾಷನ್ ಪ್ರಪಂಚದವರು ಮಾತ್ರ ಆದರ್ಶ ವ್ಯಕ್ತಿಗಳು. ನಾವು ಅವರನ್ನು ಅನುಕರಿಸುತ್ತೇವೆ. ಅವರಂತೆ ಆಗಬೇಕೆಂದು ಬಯಸುತ್ತೇವೆ. ನಮ್ಮ ಮಕ್ಕಳಿಗೂ ಅವರಂತೆ ಆಗುವಂತೆ ಹೇಳುತ್ತೇವೆ. ಅವರ ಎಲ್ಲ ನಡೆ-ನುಡಿಗಳೂ ನಮಗೆ ಇಷ್ಟವಾಗುತ್ತವೆ. ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳೂ ಪದೇ ಪದೆ ಅವರನ್ನು ವೈಭವೀಕರಿಸುತ್ತವೆ. ಈ ಭರಾಟೆಯಲ್ಲಿ ನಿಜವಾದ ಹೀರೊಗಳು, ಆದರ್ಶ ವ್ಯಕ್ತಿಗಳು ಬೆಳಕಿಗೆ ಬರುವುದೇ ಇಲ್ಲ. ಹಾಗೆ ನೋಡಿದರೆ ನಮಗೆ ನಾಯಕರೇ ಇಲ್ಲ. ನಾವು ಅನುಕರಿಸುತ್ತಿರುವ, ಅನುಸರಿಸುತ್ತಿರುವ ಆದರ್ಶ ವ್ಯಕ್ತಿಗಳು ಖಂಡಿತವಾಗಿಯೂ ಆದರ್ಶ ಅಲ್ಲ. ನಮ್ಮ ಭ್ರಷ್ಟ ಶಾಸಕ, ಸಂಸದ, ಮಂತ್ರಿಗಳನ್ನೆಲ್ಲ ಯಾವ ಮುಖವಿಟ್ಟುಕೊಂಡು ನಾಯಕ ಎಂದು ಒಪ್ಪಿಕೊಳ್ಳೋಣ? ಸಿನಿಮಾ ತಾರೆಯರು, ಕ್ರಿಕೆಟ್ ಪಟುಗಳನ್ನುಆದರ್ಶವ್ಯಕ್ತಿಗಳೆಂದು ಹೇಗೆ ಅಪ್ಪಿಕೊಳ್ಳೋಣ?

ಆದರೆ ನಮ್ಮ ಸುತ್ತ ನಮ್ಮ ಕಣ್ಣಿಗೆ ಬೀಳದ ಅಸಂಖ್ಯ ಹೀರೊಗಳಿದ್ದಾರೆ, ಆದರ್ಶ ವ್ಯಕ್ತಿಗಳಿದ್ದಾರೆ. ಇವರೆಲ್ಲ ದಿನನಿತ್ಯ ಪತ್ರಿಕೆ, ಟಿವಿ, ಕಂಪ್ಯೂಟರ್ ಸ್ಕ್ರೀನ್‌ಗಳಲ್ಲಿ ಇಣುಕುವುದಿಲ್ಲ. ಪತ್ರಕರ್ತರೂ ಸಹ ಇವರ ಹತ್ತಿರ ಹೋಗುವುದಿಲ್ಲ, ಅವರನ್ನು ಮೂಸಿಯೂ ನೋಡುವುದಿಲ್ಲ. ಅವರಿಗೂ ವಿಧಾನಸೌಧ, ಗಾಂಧಿ ನಗರ, ಮಂತ್ರಿಗಳು, ತಾರೆಯರು, ಫ್ಯಾಷನ್ ಗುರುಗಳೇ ಬೇಕು. ಅಪ್ಪಿತಪ್ಪಿಯೂ ಇವರನ್ನು ಬಿಟ್ಟು ಅವರತ್ತ ಹೋಗುವುದಿಲ್ಲ. ಕಂಡರೂ ಮಾತಾಡಿಸುವುದಿಲ್ಲ. ಹೀಗಾಗಿ ಅವರು ತಮ್ಮ ಪಾಡಿಗೆ ತಾವಿರುತ್ತಾರೆ. ಪ್ರಪಂಚ'ದಿಂದ ದೂರವಿರುತ್ತಾರೆ. ನಮಗೆ Unsung Heroಗಳಾಗಿಯೇ ಇರುತ್ತಾರೆ. ಮಹೇಶ್ ಇಂಥವರ ಲೋಕ ಪ್ರವೇಶಿಸುತ್ತಾರೆ. ಅವರನ್ನು ಹುಡುಕಿಕೊಂಡು ದೇಶವ್ಯಾಪಿ ತಿರುಗುತ್ತಾರೆ. ಅವರ ಸಾಧನೆಗೆ ಕಿವಿಯಾಗುತ್ತಾರೆ, ಕಣ್ಣಾಗುತ್ತಾರೆ. ಕನ್ನಡಿಯ ಮುಂದೆ ನಿಂತು ಪೋಸು ಕೊಡಲು ನಾಚುವವರನ್ನು ಸಹ ತಮ್ಮ ಕೆಮರಾದಲ್ಲಿ ಹಿಡಿದಿಡುತ್ತಾರೆ. ಇಲ್ಲಿನ ಎಲ್ಲರ ಬದುಕು ಒಂದು ಆದರ್ಶವೇ. ಎಲ್ಲರ ಗುರಿ ಸದುದ್ದೇಶವೇ. ಈ ಕೃತಿಯಲ್ಲಿ ಬರುವ ಎಲ್ಲ ವ್ಯಕ್ತಿಗಳು ಒಂದಿಲ್ಲೊಂದು ರೀತಿಯಲ್ಲಿ ಅಪ್ರತಿಮ ಹೀರೊಗಳೇ ಆದರೂ, ಆದರ್ಶ ವ್ಯಕ್ತಿಗಳೇ ಆದರೂ ಅತಿಯಾಗಿ ತಟ್ಟಿದವರು ಅವಳು.

ಮುಂದಿನ ಭಾಗ : ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಸುಭಾಷಿಣಿ ಮಿಸ್ತ್ರಿ! »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X