ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?

By * ವಿಶ್ವೇಶ್ವರ ಭಟ್
|
Google Oneindia Kannada News

Former CM of West Bengal Jyoti Basu
ಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ ಪಕ್ಷಗಳೂ ಅವುಗಳದ್ದೇ ಆದ ಲೆಕ್ಕಾಚಾರದ ತಿರುಗಣೆಯಲ್ಲಿ ಗಿರಕಿ ಹೊಡೆದು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಹೊತ್ತಿಗೆ ಏಳೋ ಹನ್ನೊಂದೋ ಆಗುತ್ತಿವೆ. ಯಾವ ಪಕ್ಷಕ್ಕೂ ಸರಕಾರ ರಚಿಸುತ್ತೇನೆಂಬ ಆತ್ಮವಿಶ್ವಾಸವಿಲ್ಲ.

ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುರಕಾಯಿಸುತ್ತಿರುವ ಅಭ್ಯರ್ಥಿಗಳೆಲ್ಲರಲ್ಲೂ ಗೆಲ್ಲುವವರು ತಾವೇ ಎಂಬ ಅಪರಿಮಿತ ಭರವಸೆ. ಯಾರನ್ನೇ ಕೇಳಿ, ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ. ಆದರೆ ಟಿಕೆಟ್ ಸಿಗುವುದೇ ಡೌಟು' ಅಂತಾರೆ. ಎಲ್ಲರದ್ದೂ ಒಂದೊಂದು ಜಾತಿವಾರು ಲೆಕ್ಕಾಚಾರ. ಈ ಲೆಕ್ಕಾಚಾರದಲ್ಲಿ ಹೇಗೆ ಕೂಡಿಸಿ, ಕಳೆದು, ಗುಣಿಸಿ, ಭಾಗಾಕಾರ ಮಾಡಿದರೂ ಗೆಲ್ಲುವವರು ತಾವೇ ಎಂಬ ಭ್ರಮೆ. ಇನ್ನು ಸಾಮಾನ್ಯ ಮತದಾರ, ಮರಿ ಪುಢಾರಿ, ರಾಜಕೀಯ ಕಾರ್ಯಕರ್ತರಂತೂ ಸೂತ್ರ-ಸಮೀಕರಣ-ಪ್ರಮೇಯಗಳಲ್ಲಿ ಅದ್ದಿ ವಾದ ಮಂಡಿಸುವುದನ್ನು ನೋಡಿ, ಕೇಳಿಯೇ ಆನಂದಿಸಬೇಕು. ದೇವೇಗೌಡರು ಈ ಸಲ ಸೋಲ್ತಾರಂತೆ, ಕೃಷ್ಣ ಎಲ್ಲಿಂದ ನಿಂತರೂ ಗೆಲ್ತಾರಂತೆ, ಅವರ ವಿರುದ್ಧ ಇವರು ಸ್ಪರ್ಧಿಸಿದರೆ ಇವರು ಸೋಲ್ತಾರಂತೆ, ಅವರ ಠೇವಣಿ ಜಪ್ತಾಗುವುದು ಗ್ಯಾರಂಟಿಯಂತೆ ಎಂದು ಜನ ಹೇಳುವುದನ್ನು ಕೇಳಿದರೆ ಜಗನ್ನಾಥರಾವ್ ಜೋಶಿಯವರು ಹೇಳುತ್ತಿದ್ದ ಒಂದು ಹಾಸ್ಯ ಪ್ರಸಂಗ ನೆನಪಾಗುತ್ತದೆ.

ಜಗನ್ನಾಥರಾಯರು ಇಂಥ ಪ್ರಸಂಗವನ್ನು ಆನೆ ಹೂಂಸು ಹೊಡೆದ ಹಾಗೆ' ಎಂದು ಹೇಳುತ್ತಿದ್ದರು. ಒಮ್ಮೆ ಒಂದೂರಿನಲ್ಲಿ ಯಾರೋ ಕಿಡಿಗೇಡಿಗಳು ಒಂದು ಸುದ್ದಿಯನ್ನು ತೇಲಿಬಿಟ್ಟರಂತೆ- ಊರಿಗೆ ಬಂದಿರುವ ಸರ್ಕಸ್ ಆನೆ ಇಂದು ಸಾಯಂಕಾಲ ಹೂಂಸು ಹೊಡೆಯುತ್ತದೆ' ಅಂತ. ಈ ಸುದ್ದಿ ಕಾಳ್ಗಿಚ್ಚಿನಂತೆ ಊರಿನಲ್ಲೆಲ್ಲ ಹರಡಿ ಊರಿನ ಜನರೆಲ್ಲ ಸರ್ಕಸ್ ಡೇರಿ ಸುತ್ತ ಜಮಾಯಿಸಿದರಂತೆ. ಈ ಸುದ್ದಿ ಪಕ್ಕದ, ಅದರ ಪಕ್ಕದ, ಅದರ ಪಕ್ಕದ ಊರುಗಳಿಗೆಲ್ಲ ಹಬ್ಬಿ ಅವರೂ ಜಮಾಯಿಸಿದರಂತೆ. ಎಲ್ಲರಲ್ಲೂ ವಿಚಿತ್ರ ಕುತೂಹಲ. ಆನೆ ಹೇಗೆ ಹೊಡೆಯಬಹುದು, ಅದು ಹೇಗಿದ್ದಿರಬಹುದು. ಆವಾಜು ಎಷ್ಟು ಜೋರಾಗಿರಬಹುದು... ಹೀಗೆ ತಲೆಗೊಬ್ಬರು ತಮ್ಮತಮ್ಮ ಪಾಡಿಗೆ ಕಲ್ಪಿಸಿಕೊಳ್ಳಲಾರಂಭಿಸಿದರಂತೆ. ಬುಲೆಟ್ ಮೋಟಾರ್‌ಸೈಕಲ್‌ನಿಂದ ಹೊಗೆ ಬಂದ ಹಾಗಿರುತ್ತದೆ, ರಾಕೆಟ್ ನಿಂದ ಹೊಗೆ ಬಂದಷ್ಟು ಬಿರುಸಾಗಿರುತ್ತದೆ, ಕಾರ್ಖಾನೆ ಚಿಲುಮೆ ಉಗುಳುವ ಹೊಗೆಯಂತೆ ದಟ್ಟವಾಗಿರುತ್ತದೆ... ಎಂದೆಲ್ಲ ಒಬ್ಬೊಬ್ಬರು ಮನಸ್ಸಿಗೆ ಬಂದ ಯೋಚನೆಗಳನ್ನೆಲ್ಲ ಹರಿಯಬಿಟ್ಟು ತದೇಕಚಿತ್ತದಿಂದ ಆನೆಯತ್ತ ನೋಡುತ್ತಿದ್ದರಂತೆ. ಅಷ್ಟು ಹೊತ್ತು ಎಲ್ಲೋ ಇದ್ದ ಮಾವುತ ಬಂದನಂತೆ. ಆತನಿಗೆ ಆಶ್ಚರ್ಯ. ಯಾಕೆ ಇಷ್ಟೆಲ್ಲ ಮಂದಿ ಆನೆಸುತ್ತ ಜಮಾಯಿಸಿದ್ದಾರೆಂಬುದು ಅವನಿಗೆ ಗೊತ್ತಾಗಲಿಲ್ಲ. ಪಕ್ಕದಲ್ಲಿದ್ದವನನ್ನು ಕೇಳಿದಾಗ ಆನೆ ಹೂಂಸು ಹೊಡೆಯುವುದೆಂದು ಗೊತ್ತಾಯಿತು. ಅದಕ್ಕಾಗಿ ಮಧ್ಯಾಹ್ನದಿಂದಲೇ ಕಾಯುತ್ತಿದ್ದೇವೆ" ಅಂದನಂತೆ. ಅದಕ್ಕೆ ಮಾವುತ ಹೇಳಿದನಂತೆ- ಓಹೋ ಅದಾ ವಿಷ್ಯ? ಆನೆ ಹೂಂಸು ಹೊಡೆದು ಅರ್ಧಗಂಟೆ ಆಯ್ತು. ಗೊತ್ತಾಗಲಿಲ್ಲವಾ?" ಏನೋ ಅದ್ಭುತವಾಗುತ್ತದೆ, ದೊಡ್ಡ ಕ್ರಾಂತಿಯಾಗುತ್ತದೆಂದು, ಚಮತ್ಕಾರ ಸಂಭವಿಸುತ್ತದೆಂದು ಭಾವಿಸಿದವರಿಗೆಲ್ಲ ತೀವ್ರ ನಿರಾಸೆಯಾಗಿತ್ತು. ತಮ್ಯಾಗಳಾ, ಚುನಾವಣೆ ಬಂದ್ರೆ ಏನೂ ಆಗೊಲ್ಲ. ಒಂದೋ ಒಬ್ಬ ಸೋಲ್ತಾನೆ ಅಥವಾ ಗೆಲ್ತಾನೆ. ಅದನ್ನು ಬಿಟ್ಟು ಮತ್ತೇನೂ ಆಗೊಲ್ಲ. ಗೆದ್ದಂವ ಐದು ವರ್ಷ ಹಾರಾಡ್ತಾನ. ಸೋತಾಂವ ಐದು ವರ್ಷ ಮಲಗ್ತಾನೆ. ಅಷ್ಟೇ. ಚುನಾವಣೆ ಅಂದ್ರ ಅಷ್ಟ. ಅದು ಆನೆ ಹೂಂಸು ಹೊಡೆದ ಹಾಗೆ" ಅಂದಿದ್ದರು ಜಗನ್ನಾಥರಾಯರು.

ಆದರೆ ಚುನಾವಣೆ ಜಗನ್ನಾಥರಾಯರು ಹೇಳಿದಷ್ಟು ಸುಲಭ ಅಲ್ಲ. ಕೇವಲ 64 ವಿದ್ಯೆಗಳು ಗೊತ್ತಿದ್ದರೆ ಸಾಲದು, ಚುನಾವಣೆಯಲ್ಲಿ ಗೆಲ್ಲುವ ಕಲೆ ಗೊತ್ತಿದ್ದರೆ 64 ಕಲೆಗಳನ್ನು ಕಲಿಯುವುದು ಕಷ್ಟವಲ್ಲ. 64 ಕಲೆ ಬಲ್ಲವರು ಚುನಾವಣೆಯಲ್ಲಿ ಗೆಲ್ಲುವರೆಂಬ ಗ್ಯಾರಂಟಿಯೇನೂ ಇಲ್ಲ" ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಮಾಧವರಾವ್ ಸಿಂಧಿಯಾ ವಿರುದ್ಧ ಸೋತಾಗ ವಾಜಪೇಯಿ ಈ ಮಾತನ್ನು ಮಾರ್ಮಿಕವಾಗಿ ಹೇಳಿದ್ದರು. ಇಲ್ಲಿಯ ತನಕ ಯಾರೂ 'How to win an election' ಎಂಬ ಪುಸ್ತಕ ಬರೆದಂತಿಲ್ಲ. ಒಂದು ವೇಳೆ ಬರೆದಿದ್ದರೆ ಆ ಪುಸ್ತಕ ಬರೆದವನ ವಿರುದ್ಧ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ಬಿಜೆಪಿ ನಾಯಕ ದಿವಂಗತ ಪ್ರಮೋದ್ ಮಹಾಜನ್ ಹೇಳುತ್ತಿದ್ದರು. ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದ ಮಹಾಜನ್ ಸಹ ಲೋಕಸಭೆ ಚುನಾವಣೆಯಲ್ಲಿ ಸೋತಾಗ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ರಾಯ್‌ಬರೇಲಿ ಕ್ಷೇತ್ರದಿಂದ ಪ್ರಧಾನಿ ಇಂದಿರಾಗಾಂಧಿ, ರಾಜ್‌ನಾರಾಯಣ್ ವಿರುದ್ಧ ಸ್ಪರ್ಧಿಸಿ ತೀವ್ರ ಪರಾಭವ ಕಂಡಾಗ ಹೇಳಿದ್ದರು- ಒಮ್ಮೊಮ್ಮೆ ಮತದಾರರೂ ತಪ್ಪು ಮಾಡುತ್ತಾರೆ!' ಕರ್ನಾಟಕದ ಮಟ್ಟಿಗೆ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಬಂಗಾರಪ್ಪ ಹಾಗೂ ಧರ್ಮಸಿಂಗ್ ಸಹ ಸೋಲಿನ ದವಡೆಯಲ್ಲಿ ಸಿಕ್ಕಿ ನರಳಿದವರೇ. You can win ಪುಸ್ತಕ ಬರೆದು, ಗೆಲ್ಲುವ ಹುಮ್ಮಸ್ಸಿನಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಿವಖೇರಾ ಎಂಬ ಯಶಸ್ಸು ಬೋಧಿಸುವ ವ್ಯಕ್ತಿಗೆ ಠೇವಣಿ ಕೂಡ ಹುಟ್ಟುವಷ್ಟು ಮತ ಬರಲಿಲ್ಲ.

ಈ ಚುನಾವಣೆಯೆಂಬ ಮಾಯೆಯಲ್ಲಿ ಏನಿದೆಯೋ ಬಲ್ಲವರಾರು? ಒಳ್ಳೆಯ ಆಡಳಿತ ನೀಡಿ, ಉತ್ತಮ ಕೆಲಸ ಮಾಡಿದವರು ಮುಂದಿನ ಚುನಾವಣೆಯಲ್ಲಿ ಸೋತು ಹೋಗುತ್ತಾರೆ. ನಮಗೆ ಚೆನ್ನಾಗಿ ಗೊತ್ತಿರುತ್ತದೆ, ಇವನು ಬದ್ಮಾಶ್, ಕಳ್ಳ, ಲಫಂಗ ಅಂತ. ಆದರೂ ಆತ ಚುನಾವಣೆಯಲ್ಲಿ ಗೆದ್ದು ಬಂದಿರುತ್ತಾನೆ. ಸೋಲಲು ಕಾರಣಗಳೇ ಇಲ್ಲದವರು ಸೋತಿರುತ್ತಾರೆ. ಗೆಲ್ಲಲು ಅರ್ಹತೆ, ಯೋಗ್ಯತೆಯಿಲ್ಲದವರು ಗೆದ್ದಿರುತ್ತಾರೆ. ಘಟಾನುಘಟಿ ನಾಯಕನನ್ನು ಪಿಳ್ಳೆಪೋಟಿ ಅಭ್ಯರ್ಥಿ ಸೋಲಿಸುತ್ತಾನೆ. ಹೆಸರೇ ಇಲ್ಲದ, ಅಡ್ರೆಸ್ ಗೊತ್ತಿಲ್ಲದವ ಗೆದ್ದು ಪಾರ್ಲಿಮೆಂಟ್‌ನತ್ತ ಹೊರಟಿರುತ್ತಾನೆ. ತುರ್ತುಸ್ಥಿತಿ ಅನಂತರ ನಡೆದ ಚುನಾವಣೆಯಲ್ಲಿ ಕೆನರಾ ಲೋಕಸಭೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ ಸ್ಪರ್ಧಿಸಿದ್ದರು. ಅವರು ಜನತಾಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ನಾಯಕರೆನಿಸಿಕೊಂಡಿದ್ದರು. ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಗಾಳಿ ಬೀಸುತ್ತಿದ್ದ ಕಾಲ. ಹೆಗಡೆ ವಿರುದ್ಧ ನಿಂತವರು ಅಲ್ಲಿತನಕ ಹೆಸರೇ ಕೇಳಿಲ್ಲದ ಅನಾಮಧೇಯ ಅಭ್ಯರ್ಥಿ ಬಿ.ಪಿ. ಕದಂ ಎಂಬುವವರು. ಚುನಾವಣೆಗೆ ನಾಮಪತ್ರ ಸಲ್ಲಿಸುವ ತನಕ ಅವರ್‍ಯಾರು ಎಂಬುದು ಮತದಾರರಿಗೆ ಗೊತ್ತಿರಲಿಲ್ಲ ಅಂದ್ರೆ ನೀವು ನಂಬಬೇಕು. ಹೆಗಡೆಯವರಂಥ ಜನಪ್ರಿಯ ನಾಯಕನ ಎದುರು ಕದಂ ಅದ್ಯಾವ ಮರದ ತೊಪ್ಪಲು?

ಆದರೆ ಚುನಾವಣೆ ಫಲಿತಾಂಶ ಹೊರಬಿದ್ದಾಗ ಅಚ್ಚರಿ ಕಾದಿತ್ತು. ಪ್ರಾಯಶಃ ಕದಂ ಕೂಡ ಅದನ್ನು ನಿರೀಕ್ಷಿಸಿರಲಿಕ್ಕಿಲ್ಲ. ಹೆಗಡೆಯವರ ವಿರುದ್ಧ ಕದಂ ಆರಿಸಿಬಂದಿದ್ದರು! ಮತದಾರರು ಪಕ್ಷ, ಅಭ್ಯರ್ಥಿ ಅಥವಾ ಇಂದಿರಾಗಾಂಧಿಯವರನ್ನು ನೋಡಿ ವೋಟು ಹಾಕಿದರೋ ಗೊತ್ತಿಲ್ಲ. ಈ ಮೂರೂ ಸಂಗತಿಗಳನ್ನು ಗಮನಿಸಿದರೂ ಕದಂ ಆರಿಸಿಬರಲೇಕೂಡದು. ಆದರೆ ಮತಪೆಟ್ಟಿಗೆಯಲ್ಲಿ ಅದೆಂಥ ಮ್ಯಾಜಿಕ್ ಆಯಿತೋ ಏನೋ ಹೆಗಡೆ ಸೋತಿದ್ದರು. ಹೆಗಡೆಯವರು ನಿಧನರಾಗುವುದಕ್ಕಿಂತ ಕೆಲದಿನಗಳ ಹಿಂದೆ ಈ ಬಗ್ಗೆ ಅವರನ್ನು ಕೇಳಿದಾಗ ನಾನು ಆ ಚುನಾವಣೆಯಲ್ಲಿ ಸೋತಿದ್ದು ಹೇಗೆ ಎಂಬುದು ಇಲ್ಲಿತನಕವೂ ನನಗೆ ಅರ್ಥವಾಗಿಲ್ಲ. ಇಂದಿಗೂ ಅದು ನನಗೆ ನಿಗೂಢವಾಗಿಯೇ ಉಳಿದಿದೆ" ಎಂದು ಹೇಳಿದ್ದರು.

ಇದೇ ರೀತಿಯ ಅಭಿಪ್ರಾಯವನ್ನು ಅಟಲ್ ಬಿಹಾರಿ ವಾಜಪೇಯಿಯವರೂ ನೀಡಿದ್ದರು. 2004ರ ಚುನಾವಣೆಯಲ್ಲಿ ಅವರು ಅದೆಷ್ಟು ಆತ್ಮವಿಶ್ವಾಸ ಹೊಂದಿದ್ದರೆಂದರೆ, ಪ್ರಧಾನಿಯಾಗಿ ಪುನಃ ಅಧಿಕಾರಕ್ಕೆ ಬರುವ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ. ಆದರೆ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಪತ್ರಕರ್ತರ ಜತೆ ಮಾತಾಡುತ್ತಾ, ಚುನಾವಣೆಯಲ್ಲಿ ಗೆಲ್ಲಲು ಒಳ್ಳೆಯ ಕೆಲಸ ಮಾಡುವುದೊಂದೇ ಮಾನದಂಡವಲ್ಲ. ಅದಕ್ಕಿಂತ ಮಿಗಿಲಾದ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಆದರೆ ಅವು ಯಾವವೆಂಬುದು ಗೊತ್ತಾಗುವುದು ಚುನಾವಣೆ ಮುಗಿದು ಫಲಿತಾಂಶ ಬಂದ ಮೇಲೆಯೇ" ಎಂದು ಬಹಳ ಫಿಲಾಸಫಿಕಲ್ ಆಗಿ ನುಡಿದಿದ್ದರು.

ವಾಜಪೇಯಿ ಮಾತು ಅಕ್ಷರಶಃ ನಿಜ. ವಿಚಿತ್ರವೆಂದರೆ ಈ ಮಾತು ಈಗಲ್ಲ, ಅರವತ್ತು ವರ್ಷಗಳ ಹಿಂದೆಯೂ ನಿಜವಾಗಿತ್ತು. ಬ್ರಿಟನ್‌ನ ಅತ್ಯಂತ ಜನಪ್ರಿಯ ರಾಜಕಾರಣಿ, ಮಹಾನ್ ಮುತ್ಸದ್ದಿ ಹಾಗೂ ಧೀಮಂತ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅಂದು ತತ್ತ್ವ ಜ್ಞಾನಿಯಂತೆ ಮಾತಾಡುತ್ತಿದ್ದರು "ನಾವು ಮಾಡುವ ಒಳ್ಳೆಯ ಕೆಲಸಗಳೆಲ್ಲ ಎಲ್ಲರಿಗೂ ಹಾಗೇ ಅನಿಸುವುದಿಲ್ಲ. ಅದರಲ್ಲೂ ದೋಷಗಳನ್ನು ಕಾಣುವ ಮನಸ್ಸುಗಳಿರುತ್ತವೆ. ಆದ್ದರಿಂದ ನೀವು ಒಳ್ಳೆಯ ಕೆಲಸ ಮಾಡುವುದಷ್ಟೇ ಮುಖ್ಯವಲ್ಲ. ನೀವು ಒಳ್ಳೆಯ ಮನಸ್ಸನ್ನು ಹೊಂದಿರುವುದಷ್ಟೇ ಮುಖ್ಯವಲ್ಲ, ಎಲ್ಲರೂ ನಿಮ್ಮ ಒಳ್ಳೆಯ ಕೆಲಸ ಹಾಗೂ ಮನಸ್ಸನ್ನು ಗುರುತಿಸುವುದು ಹಾಗೂ ಮನವರಿಕೆ ಮಾಡಿಕೊಡುವುದು ಸಹ ಅಷ್ಟೇ ಮುಖ್ಯ."

ಚರ್ಚಿಲ್ ಹಾಗೆ ಹೇಳಲು ಕಾರಣವೂ ಇತ್ತು. War time Primeminister ಎಂದೇ ಖ್ಯಾತರಾಗಿದ್ದ ಚರ್ಚಿಲ್, ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ನನ್ನು ಧೈರ್ಯದಿಂದ ಮುನ್ನಡೆಸಿದವರು. ಅಮೆರಿಕದ ಹ್ಯಾರಿ ಟ್ರೂಮನ್, ರಷ್ಯಾದ ಜೋಸೆಫ್ ಸ್ಟಾಲಿನ್ ರೀತಿಯಲ್ಲಿ ಬ್ರಿಟನ್ನನ್ನು ಎರಡನೇ ವಿಶ್ವಸಮರದ ಮುಂಚೂಣಿಗೆ ಕರೆತಂದು, ತಾವೊಬ್ಬ ವಿಶ್ವನಾಯಕ' ಎಂದು ಮನದಟ್ಟು ಮಾಡಿಕೊಟ್ಟವರು. ಚರ್ಚಿಲ್ ಧೀಮಂತ ನಾಯಕತ್ವ ಬ್ರಿಟನ್‌ಗೆ ಮಹಾಯುದ್ಧದಲ್ಲಿ ಗೆಲುವು ಸಾಧಿಸುವಲ್ಲಿ ಸಹಾಯಕವಾಯಿತು. ಸೊಗಸಾದ ಮಾತುಗಾರಿಕೆ, ಆಕರ್ಷಕ ವ್ಯಕ್ತಿತ್ವ, ಎಂಥವರನ್ನೂ ಸಮ್ಮೋಹನಗೊಳಿಸುವ ನಾಯಕತ್ವಗುಣ, ಚಾಣಾಕ್ಷತೆಗೆ ಹೆಸರಾಗಿದ್ದ ಚರ್ಚಿಲ್, ಒಂದು ಪೀಳಿಗೆಯ ಜನರ ಮೇಲೆ ಅಗಾಧ ಪ್ರಭಾವ ಹಾಗೂ ಪರಿಣಾಮ ಬೀರಿದ ವ್ಯಕ್ತಿ. ಸಾಹಿತ್ಯ, ಕಲೆ, ಸಂಸ್ಕೃತಿ ಮುಂತಾದ ವಿಷಯಗಳಲ್ಲೂ ಅಪಾರ ತಿಳಿವಳಿಕೆ ಹಾಗೂ ಅಭಿರುಚಿ ಹೊಂದಿದ್ದ ಅವನದು ಬಹುಮುಖ ವ್ಯಕ್ತಿತ್ವ. ಎರಡನೆ ಮಹಾಯುದ್ಧದ ಗೆಲುವಿನಿಂದ ಬೀಗುತ್ತಿದ್ದ ಚರ್ಚಿಲ್, ಮುಂಬರಲಿರುವ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿದ್ದರು. ಹಾಗೆ ನೋಡಿದರೆ ಅವರಿಗೆ ಎದುರಾಳಿಗಳೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಚರ್ಚಿಲ್ ಗೆಲುವು ಗೋಡೆಯ ಮೇಲಿನ ಬರಹದಷ್ಟು, ಅಂಗೈ ಮೇಲಿನ ಗೆರೆಗಳಷ್ಟು ಸ್ಪಷ್ಟವಾಗಿತ್ತು. ಆದರೆ ಆಗಿದ್ದೇನು?

ಚರ್ಚಿಲ್ ಚುನಾವಣೆಯಲ್ಲಿ ಎಗರಿಹೋದರು! ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಚರ್ಚಿಲ್ ಮಾತ್ರ ಸೋಲಲಿಕ್ಕಿಲ್ಲ ಎಂದು ಭಾವಿಸಿದವರು ಕೂಡ ಅವುಡು ಕಚ್ಚುವಂತಾಗಿತ್ತು! ಆ ಬ್ಯಾಲೆಟ್ ಬಾಕ್ಸ್‌ನಲ್ಲಿ ಅದೆಂಥ ಬುಡಬುಡಿಕೆಯಾಯಿತೋ ಆ ಯೇಸುವೇ ಬಲ್ಲ. ಚುನಾವಣೆಯ ಗರ್ಭದೊಳಗೆ ಏನಿದೆಯೆಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಜಗನ್ನಾಥರಾಯರು ಹೇಳುತ್ತಿದ್ದ ಇನ್ನೊಂದು ಪ್ರಸಂಗವನ್ನು ನೆನಪಿಸಿಕೊಳ್ಳುವುದಾದರೆ...

ಒಂದೂರಿನಲ್ಲಿ ಒಬ್ಬ ಜನಪ್ರಿಯ ನಾಯಕನಿದ್ದನಂತೆ. ಅವನಿಗೆ ಎದುರಾಳಿಗಳೇ ಇರಲಿಲ್ಲ. ಅವನಿಗೆ ವೈರಿಗಳೇ ಇರಲಿಲ್ಲ. ಅವನನ್ನು ಮತದಾರರೆಲ್ಲ ಸಾಕ್ಷಾತ್ ದೇವರೆಂದೇ ಪೂಜಿಸುತ್ತಿದ್ದರು. ಹೀಗಾಗಿ ಪ್ರತಿ ಚುನಾವಣೆಯಲ್ಲೂ ಅವನನ್ನು ಆರಿಸುತ್ತಿದ್ದರು. ಪ್ರತಿಸಲ ಆತ ಹಿಂದಿನ ಸಲಕ್ಕಿಂತ ಹೆಚ್ಚಿನ ಲೀಡ್‌ನಿಂದ ಗೆಲ್ಲುತ್ತಿದ್ದ. ಅದಕ್ಕೆ ತಕ್ಕ ಹಾಗೆ, ಜನರ ನಿರೀಕ್ಷೆಗಿಂತ ಹೆಚ್ಚಾಗಿ ಕೆಲಸ ಮಾಡುತ್ತಿದ್ದ. ಆದರೆ ಈ ಅಭ್ಯರ್ಥಿ ಮುಂದಿನ ಚುನಾವಣೆಯಲ್ಲಿ ಸೋತು ಹೋದ. ಅಭ್ಯರ್ಥಿಗೆ ಆಶ್ಚರ್ಯ! ಎದುರಾಳಿ ಮೂರ್ಛೆಹೋಗುವುದೊಂದು ಬಾಕಿ! ಮತದಾರರೆಲ್ಲ ಕಕ್ಕಾಬಿಕ್ಕಿ. ಎಲ್ಲರಿಗೂ ಆತ ಸೋತಿದ್ದು ಹೇಗೆಂಬ ಬಗ್ಗೆ ತೀವ್ರ ಜಿಜ್ಞಾಸೆ. ಕೊನೆಗೆ ಗೊತ್ತಾಗಿದ್ದೇನೆಂದರೆ ಆ ಆಭ್ಯರ್ಥಿ ವಿರುದ್ಧ ಹಿಂದಿನ ರಾತ್ರಿ ಮಾಡಲಾದ ವ್ಯವಸ್ಥಿತ ಅಪಪ್ರಚಾರ. ಅವರ ಬಗ್ಗೆ ನಿಮಗೆ ನಿಜಕ್ಕೂ ಒಲವಿದೆ, ಗೌರವವಿದೆಯೆಂದಾದರೆ ಒಂದು ಮತವನ್ನೇಕೆ ಕೊಡುತ್ತೀರಿ, ಈ ಬಾರಿ ಎರಡೆರಡು ವೋಟು ಹಾಕಿ" ಎಂದು ಪ್ರಚಾರ ಮಾಡಲಾಯಿತು. ಮುಗ್ಧ ಮತದಾರರು ಅವನ ಹೆಸರಿನ ಮುಂದೆ ಎರಡು ಸಲ ಮುದ್ರೆ ಒತ್ತಿದರು. ಎಲ್ಲ ಮತಗಳು ಕುಲಗೆಟ್ಟಿದ್ದವು! ಆತ ಸೋತು ಹೋಗಿದ್ದ! ಈ ಪ್ರಸಂಗವನ್ನು ಸ್ವಾರಸ್ಯವಾಗಿ ಹೇಳುತ್ತಾ ನನ್ನ ಮೇಲೆ ನಿಮಗೆ ಪ್ರೀತಿ ಇದ್ದರೆ ಒಂದೇ ಮತ ಹಾಕಿ, ಸರೋಜಿನಿ ಮಹಿಷಿ (ತಮ್ಮ ಎದುರಾಳಿ) ಮೇಲೆ ಇನ್ನೂ ಹೆಚ್ಚಿನ ಪ್ರೀತಿ ಇದ್ದರೆ ಅವರಿಗೆ ದಯವಿಟ್ಟು ಎರಡು ಮತಗಳನ್ನು ಹಾಕಿ" ಎಂದು ಜಗನ್ನಾಥರಾಯರು ಚುನಾವಣಾ ಭಾಷಣದಲ್ಲಿ ಹೇಳುತ್ತಿದ್ದರು. ಆದರೂ ಸರೋಜಿನಿ ಮಹಿಷಿಯೇ ಆರಿಸಿ ಬರುತ್ತಿದ್ದರು!

ಈಗಿನಂತೆ ಆಗಿನ ಕಾಲದಲ್ಲಿ ಚುನಾವಣಾ ಪ್ರಚಾರ ಸಭೆಗೆ ಮತದಾರರನ್ನು ಲಾರಿಗಳಲ್ಲಿ ತುಂಬಿಕೊಂಡು ಬರುತ್ತಿರಲಿಲ್ಲ. ಜನರು ಸ್ವಯಂಪ್ರೇರಿತರಾಗಿ ಆಗಮಿಸುತ್ತಿದ್ದರು. ಜಗನ್ನಾಥರಾಯರ ಭಾಷಣ ಅಂದ್ರೆ ನಿಂತುಕೊಳ್ಳಲು ಸಹ ಜಾಗ ಇರುತ್ತಿರಲಿಲ್ಲ. ಕಾರ್ಯಕ್ರಮಕ್ಕಿಂತ ಎರಡು ತಾಸು ಮುಂಚಿತವಾಗಿ ಬಂದು ಆಸನ (ಆಗ ಈಗಿನಂತೆ ಕುರ್ಚಿ ಸಹ ಇರುತ್ತಿರಲಿಲ್ಲ. ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದರು) ಕಾದಿರಿಸುತ್ತಿದ್ದರು. ಜಗನ್ನಾಥರಾಯರು ಯಾವ ಊರಿಗೆ ಹೋದರೂ ಇದೇ ಚಿತ್ರಣ. ಅವರು ಎಲ್ಲ ಸಭೆಗಳಲ್ಲೂ ಒಂದು ಮಾತನ್ನು ಹೇಳಲು ಮರೆಯುತ್ತಿರಲಿಲ್ಲ. ನನ್ನ ಭಾಷಣ ಕೇಳಲಿಕ್ಕೆ ಭಾಳ ಮಂದಿ ಬಂದೀರಿ. ಬೇರೆ ಯಾರೂ ಅಲ್ಲ, ನೀವಷ್ಟೇ ವೋಟು ಹಾಕಿದರೆ, ನಾನು ಖಂಡಿತ ಗೆಲ್ಲುತ್ತೇನೆ. ನನಗೆ ಗೊತ್ತು ನೀವು ನನ್ನ ಮಾತನ್ನು ಕೇಳ್ತೀರಿ. ಆದರೆ ವೋಟನ್ನು ಮಾತ್ರ ಸರೋಜಿನಿ ಮಹಿಷಿಗೆ ಹಾಕ್ತೀರಿ" ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಫಲಿತಾಂಶ ಪ್ರಕಟವಾದಾಗಲೆಲ್ಲ ಜಗನ್ನಾಥರಾಯರ ಮಾತು ಎಷ್ಟು ನಿಜ ಅನ್ನಿಸುತ್ತಿತ್ತು. ಸರೋಜಿನಿ ಮಹಿಷಿ ಗೆದ್ದಿರುತ್ತಿದ್ದರು.

ಚುನಾವಣೆಗೂ ಅಧಿಕಾರಕ್ಕೂ ನೇರ-ಅವಿನಾಭಾವ ಸಂಬಂಧವೆಂಬುದನ್ನು ಭಾರತದ ರಾಜಕಾರಣದಲ್ಲಿ ಯಾರಾದರೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಅದು ಜ್ಯೋತಿ ಬಸು ಮಾತ್ರ! ಅದಕ್ಕಾಗಿ ಅವರು ಕೇವಲ ಕಾಲು ಶತಮಾನಗಳ ಕಾಲ (1977-2000) ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದರು. ಸ್ವತಂತ್ರ ಭಾರತದಲ್ಲಿ ಅವರಷ್ಟು ದೀರ್ಘಕಾಲ ಅಧಿಕಾರದಲ್ಲಿದ್ದವರು ಯಾರೂ ಇಲ್ಲ. ಬಸು ದಾಖಲೆ ಮುರಿಯಲು ಅವರೇ ಹುಟ್ಟಿ ಬರಬೇಕೇನೋ? ಅವರು ಪ್ರತಿಸಲ ಆರಿಸಿ ಬಂದು ಪ್ರಮಾಣವಚನ ಸ್ವೀಕರಿಸುವಾಗಲೂ ನಾಳೆಯೇ ಚುನಾವಣೆಯೇನೋ ಎಂಬಂತೆ ವರ್ತಿಸುತ್ತಿದ್ದರು. ಯಾರನ್ನೂ ಟೀಕಿಸುತ್ತಿರಲಿಲ್ಲ. ಯಾರ ವೈರತ್ವವನ್ನೂ ಕಟ್ಟಿಕೊಳ್ಳುತ್ತಿರಲಿಲ್ಲ. ಅತಿ ಕಡಿಮೆಯೆನಿಸುವಷ್ಟು ಮಾತಾಡುತ್ತಿದ್ದರು. ಹೇಳುವುದೆಲ್ಲವನ್ನೂ ಕೇಳುತ್ತಿದ್ದರು. (ಅವರ ಕಿವಿ ದೊಡ್ಡದು, ಗಮನಿಸಿ) ತಮ್ಮ ಕಡು ವಿರೋಧಿಗಳು ಟೀಕೆ ಮಾಡಿದಾಗಲೂ ಪ್ರತಿಹೇಳಿಕೆ ಕೊಡುತ್ತಿರಲಿಲ್ಲ. ಅವರ ಮೇಲೆ ಸೀಳುನಾಯಿಯಂತೆ ಎಗರಿ ಹೋಗುತ್ತಿರಲಿಲ್ಲ. ಪತ್ರಕರ್ತರನ್ನು ಸುರಕ್ಷಿತ ಅಂತರದಲ್ಲಿಯೇ ಇಟ್ಟಿರುತ್ತಿದ್ದರು. ಪ್ರತಿ ಟೀಕೆಗೆ ಉತ್ತರಿಸುವ ಗೋಜಿಗೂ ಹೋಗುತ್ತಿರಲಿಲ್ಲ. ಅವರು ವೀರಾವೇಶದಿಂದ ಮಾತಾಡಿದ್ದನ್ನು ನೋಡಿದವರಿಲ್ಲ. ಚುನಾವಣೆ ವೇಳೆ ರಾಜೀವ್ ಗಾಂಧಿ ಬಸು ಅವರನ್ನು ಟೀಕಿಸಿದರೂ ಅವರು ಪ್ರಚೋದಿತರಾಗಲಿಲ್ಲ. ಕೊನೆಗೆ ರಾಜೀವ್ ಕ್ಷಮೆ ಯಾಚಿಸಿದರು.

ಬಿಜೆಪಿ ಪರಮವೈರಿಯಾದರೂ ಎಂದೂ ವಾಜಪೇಯಿ, ಆಡ್ವಾಣಿಯಂಥ ಜ್ಯೇಷ್ಠ ನಾಯಕರನ್ನು ಟೀಕಿಸಲಿಲ್ಲ. ಎಷ್ಟೇ ಕೋಪ ಬಂದಾಗಲೂ ನಂದಿಕಂಬದ ಮುಂದಿನ ಬಸವನಂತೆ ಜೋಲುಮೋರೆ ಹಾಕಿಕೊಂಡು ಕುಳಿತುಬಿಡುತ್ತಿದ್ದರು. ನಾಳೆಯೇ ಚುನಾವಣೆ ಬಂದುಬಿಡಬಹುದೆಂಬ ದುಗುಡಕ್ಕೊಳಗಾದವರಂತೆ ವರ್ತಿಸುತ್ತಿದ್ದರು. ಕೋಲ್ಕತಾದಲ್ಲಿ ಇದ್ದ ದಿನಗಳಲ್ಲೆಲ್ಲ ತಪ್ಪದೇ ಪಕ್ಷದ ಕಾರ್ಯಾಲಯಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದರು. (ಮುಖ್ಯಮಂತ್ರಿಯಾಗಿ ಅಕಾರಕ್ಕೆ ಬಂದ ಬಳಿಕ ಯಾರೂ ಪಕ್ಷದ ಕಚೇರಿಯತ್ತ ಮುಖ ಮಾಡುವುದಿಲ್ಲ.) ಕಾರ್ಯಕರ್ತರ ಅಹವಾಲುಗಳನ್ನು ಕೇಳುತ್ತಿದ್ದರು. ಪಕ್ಷದ ಸಂಘಟನೆ ಬಗ್ಗೆ ಕಾಲಕಾಲಕ್ಕೆ ವಿಚಾರಿಸುತ್ತಿದ್ದರು. ಅಧಿಕಾರಕ್ಕೆ ಬಂದ ಬಳಿಕ ಸಾಮಾನ್ಯವಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖ್ಯಮಂತ್ರಿ ನಡುವೆ ಕಂದಕ ಏರ್ಪಡುತ್ತದೆ.

ಆದರೆ ಬಸು ಇಂಥ ಕಂದಕವನ್ನು ಸೃಷ್ಟಿಸಿಕೊಳ್ಳಲೇ ಇಲ್ಲ. ಯಾಕೆಂದರೆ ನಾಳೆಯೇ ಚುನಾವಣೆ ಬಂದರೆ? ಹೀಗಾಗಿ ಅವರು ಅಧಿಕಾರದಲ್ಲಿ ಇದ್ದಷ್ಟು ವರ್ಷ ಆಡಳಿತ ವಿರೋಧಿ ಅಲೆ (anti incumbancy) ಎಂಬುದು ಏಳಲೇ ಇಲ್ಲ. ವೃದ್ಧಾಪ್ಯ ಹಾಗೂ ಅನಾರೋಗ್ಯ ಕಾರಣದಿಂದ ಸಾಕು ಇಷ್ಟು ವರ್ಷ ರಾಜ್ಯವಾಳಿದ್ದು ಎಂದು ಸ್ವತಃ ಅವರೇ ಮುಖ್ಯಮಂತ್ರಿ ಪೀಠದಿಂದ ಎದ್ದು ಬಂದರೇ ಹೊರತು ಯಾವ ಚುನಾವಣೆಯೂ ಅವರನ್ನು ಕಿತ್ತೆಸೆಯಲಿಲ್ಲ. ಇಂದಿನ ನಮ್ಮ ರಾಜಕಾರಣಿಗಳು, ಮುಖ್ಯಮಂತ್ರಿಗಳು ಜ್ಯೋತಿಬಸು ಅವರಿಂದ ಕಲಿಯುವ ಪಾಠ ಸಾಕಷ್ಟಿದೆ. ಅವರು ಹಾಗೆ ಸುಮ್ಮನೆ, ಖಾಲಿ ಪುಗಸಟ್ಟೆ ಅಷ್ಟು ವರ್ಷ ಮುಖ್ಯಮಂತ್ರಿಯಾಗಲಿಲ್ಲ. ಹೀಗಾಗಿ ಕಾಲು ಶತಮಾನ ಅವರನ್ನಾಗಲಿ, ಅವರ ಪಕ್ಷವನ್ನಾಗಲಿ ಅಲುಗಾಡಿಸಲಾಗಲಿಲ್ಲ. ಬಸು ಚುನಾವಣೆಗೆ ಸನ್ನದ್ಧರಾಗಿಯೇ ಅಧಿಕಾರ ನಡೆಸಲು ಕುಳಿತಿರುತ್ತಿದ್ದರು. ಹೀಗಾಗಿ ಸೋಲೆಂಬುದು ಅವರ ಹತ್ತಿರವೂ ಸುಳಿಯಲಿಲ್ಲ. ಅವರು ರಾಜಕೀಯ ಶಾಸ್ತ್ರದ ಎಲ್ಲ ಸಿದ್ಧಸೂತ್ರಗಳನ್ನು ಮುರಿದು ಎಲ್ಲರೂ ಮೂಗಿನ ಮೆಲೆ ಬೆರಳಿಡುವಂತೆ ಆಡಳಿತ ನಡೆಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡ ನಮಗೆ ಬಸು ಈ ಸಂದರ್ಭದಲ್ಲೂ ಸೋಜಿಗವಾಗಿ ಕಾಡು(ಣು)ತ್ತಾರೆ. ಚುನಾವಣೆಯೆಂಬ ಮತ್ತೊಂದು ಮಹಾಸಮರಕ್ಕೆ ಸಕಲ ಸಿದ್ಧತೆಗಳೆಲ್ಲ ನಮ್ಮ ಸುತ್ತಮುತ್ತ ಗರಿಗೆದರಲು ಆರಂಭವಾಗಿರುವ ಈ ಕ್ಷಣದಲ್ಲಿ ಆ ಮಾಯೆ'ಯ ಮಹಿಮೆ ಏನಿವೆಯೋ ಯಾರು ಬಲ್ಲರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X