ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಲಿಯ ಮರವು ನೆರಳಲ್ಲ, ಗೌರವ ಡಾಕ್ಟರೇಟ್ ಸ್ಥಿರವಲ್ಲ

By Staff
|
Google Oneindia Kannada News

BS Yeddyurappa pleads not to call him Doctor
ರುಂಡ ಮುಂಡಗಳನ್ನು ಒಂದು ಮಾಡುವಂತೆ ಮುಚ್ಚುವ ಉಸಿರುಗಟ್ಟಿಸುವ ಹಾರಗಳು, ಅರ್ಹರನ್ನೂ ಅನರ್ಹರನ್ನಾಗಿ ಮಾಡುವ ಗೌರವ ಡಾಕ್ಟರೇಟ್ ಬಿರುದುಬಾವಲಿಗಳನ್ನು ಒಲ್ಲೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಿವಿತುಂಬಿ ತೂತುಬೀಳುವಂತೆ ಮಾಡುವ ಬಹುಪರಾಕ್ ಗಳನ್ನು ಕೂಡ ನಿರಾಕರಿಸಲಿ. ಇವನ್ನೆಲ್ಲ ನಿರಾಕರಿಸಿ ದೊಡ್ಡವರಾಗುವುದಕ್ಕಿಂತ ನಿಸ್ವಾರ್ಥ ಸೇವೆಯಿಂದ ದೊಡ್ಡವರೆನ್ನಿಸಿಕೊಳ್ಳಲಿ. ಜೊತೆಗೆ ಎಂಟನಿ ಮತ್ತು ಫರ್ನಾಂಡಿಸ್ ಹಾಕಿಕೊಟ್ಟಿರುವ ಮೇಲ್ಪಂಕ್ತಿಯ ಹಾದಿಯಲ್ಲಿ ತುಸುವಾದರೂ ಸಾಗಲಿ.

* ವಿಶ್ವೇಶ್ವರ ಭಟ್

ಈ ಕೆಲಸವನ್ನು ಅವರು ಆಗಲೇ ಮಾಡಬೇಕಿತ್ತು! ಇನ್ನು ಮುಂದೆ ನನ್ನ ಹೆಸರಿಗೆ ಮೊದಲು ಡಾಕ್ಟರ್ ಎಂದು ಸಂಬೋಧಿಸಬಾರದೆಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಫರ್ಮಾನು ಹೊರಡಿಸಿದ್ದಾರೆ. ಮೊನ್ನೆ ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ಅವರು "ಅಮೆರಿಕದ ಸ್ಯಾಜಿನಾವ್ ವ್ಯಾಲಿ ವಿಶ್ವವಿದ್ಯಾಲಯ ನನಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ. ಆದರೆ ಅನೇಕ ಕ್ಷೇತ್ರಗಳಲ್ಲಿ ನನಗಿಂತ ಹಿರಿಯರು, ಪರಿಣತರು ಸಾಕಷ್ಟು ಸೇವೆ, ಸಾಧನೆ ಮಾಡಿದ್ದಾರೆ. ಮೂಲತಃ ನಾನೊಬ್ಬ ರೈತನ ಮಗ. ನನ್ನನ್ನು ಹಾಗೆ ಕರೆದರೇ ಒಳ್ಳೆಯದು. ಯಾವುದೇ ಕಾರಣಕ್ಕೂ ಇನ್ನು ಮುಂದೆ ಡಾಕ್ಟರ್ ಯಡಿಯೂರಪ್ಪ ಎಂದು ಕರೆಯಬೇಡಿ. ಹಾಗೆ ಸಂಬೋಧಿಸುವುದನ್ನು ನಿಲ್ಲಿಸುವಂತೆ ಕೂಡಲೇ ಸರಕಾರಿ ಸುತ್ತೋಲೆ ಹೊರಡಿಸಲಾಗುವುದು" ಎಂದು ಅಪ್ರಚೋದಿತರಾಗಿ ಮನಸಿನ ಭಾವವನ್ನು ಹೊರಹಾಕಿದ್ದಾರೆ. ಇದರ ಜತೆಗೆ ಇನ್ನೂ ಎರಡು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ- ಸಭೆ, ಸಮಾರಂಭಗಳಲ್ಲಿ ಹಾರ, ತುರಾಯಿ ಸ್ವೀಕರಿಸುವುದಿಲ್ಲ ಮತ್ತು ಮುಖ್ಯಮಂತ್ರಿ ಆಗಿರುವವರೆಗೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುವುದಿಲ್ಲ. ಇನ್ನೂ ಒಂದು ಮಾತನ್ನು ಸೇರಿಸಿದ್ದಾರೆ, ಅದೇನೆಂದರೆ ಅಧಿಕಾರದಲ್ಲಿದ್ದಾಗ ತಮ್ಮನ್ನು ಹೊಗಳಿ ಯಾರೂ ಅಭಿನಂದನಾಗ್ರಂಥ ಪ್ರಕಟಿಸಕೂಡದೆಂದು.

ಭಾಳ ಚಲೋ ನಿರ್ಧಾರ, ಎರಡು ಮಾತಿಲ್ಲ. ತಡವಾಗಿಯಾದರೂ ಮುಖ್ಯಮಂತ್ರಿಯವರಿಗೆ ಈ ವಿಷಯದಲ್ಲಿ ವಿವೇಕ ಭೇಟಿಯಾಗಿದೆ. ಅದಕ್ಕೆ ಅವರಿಗೆ 'ಶಹಬ್ಬಾಸ್' ಎಂದು ಹೇಳಲೇಬೇಕು. ಆದರೆ ಈ ಕೆಲಸವನ್ನು ಅವರು ಮೊದಲೇ ಮಾಡಬಹುದಿತ್ತು. ಅಷ್ಟಕ್ಕೂ ಆ ಸ್ಯಾಜಿನಾವ್ ವಿಶ್ವವಿದ್ಯಾಲಯದ ಮಂದಿ "ಬರ್ರಿ, ನಿಮಗೆ ಗೌಡಾ(ಗೌರವ ಡಾಕ್ಟರೇಟ್) ಕೊಡ್ತೇವೆ" ಅಂದಾಗ, "ಅದನ್ನು ನೀವೇ ಇಟ್ಕೋರಿ. ನಿಮ್ಮ ಪ್ರೀತಿಗೆ ಶರಣ್ರೀ" ಅಂತ ಹೇಳಿದ್ರೆ ಮುಖ್ಯಮಂತ್ರಿಯವರ ಪ್ರತಿಷ್ಠೆ ಇನ್ನೂ ಹೆಚ್ಚಾಗುತ್ತಿತ್ತು. ಯಾಕೆಂದ್ರೆ ಮುಖ್ಯಮಂತ್ರಿಯವರಿಗೆ ಗೊತ್ತಿತ್ತು ಆ ಡಾಕ್ಟರೇಟ್ ಎಂಬುದು ಒಂದು ರ್‍ಯಾಕೆಟ್ ಎಂದು. ಆ ಡಾಕ್ಟರೇಟ್ ಕೊಡಿಸುತ್ತೇನೆ ಎಂದು ಹೇಳಿದವ ಒಬ್ಬ ಹಳ್ಳಾಟೋಪಿ ಎಂಬುದು. ಆದರೂ ಹೋದರು. ಎಲ್ಲ ಪತ್ರಿಕೆಗಳೂ "ಹೋಗಬೇಡ್ರಿ, ಅದು ಯಾರು ಬೇಕಾದರೂ ಹಣಕೊಟ್ಟು ಪಡೆಯಬಹುದಾದ ಡಿಗ್ರಿ" ಎಂದು ಬರೆದವು. ಈ ಅಂಕಣದಲ್ಲಿ ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿ ಅಲ್ಲ' ಎಂದು ಬರೆಯಬೇಕಾಯಿತು. ಯಡಿಯೂರಪ್ಪ ಅಲ್ಲ, ಡಾ. ಯಡಿಯೂರಪ್ಪನವರ ಬಗೆಗಿನ ತಕರಾರನ್ನು ಸ್ವಲ್ಪವೂ ನಂಜಿಲ್ಲದೇ ನೇರವಾಗಿ ಅವರಿಗೆ ತಿಳಿಸಬೇಕಾಯಿತು.

ಅಮೆರಿಕದಲ್ಲಿ ಗೌಡಾ ಪದವಿ ಕೊಟ್ಟಿದ್ದೇ ತಡ, ಇಲ್ಲಿ ಅವರ ಮನೆಮುಂದಿನ ನಾಮಫಲಕ ಬದಲಾಗಿ ಹೋಯಿತು. ಬಿ.ಎಸ್. ಯಡಿಯೂರಪ್ಪ ಹೆಸರಿಗೆ ಮೊದಲು ಬಾಲಂಗೋಚಿಯಂತೆ ಡಾ.' ಬಂದು ಸೇರಿಕೊಂಡಿತು. ಅದಕ್ಕೆ ಹಾರವೂ ಬಿತ್ತು. ಸರಕಾರಿ ಪತ್ರಗಳಲ್ಲಿ, ಸುತ್ತೋಲೆಗಳಲ್ಲಿ, ಜಾಹೀರಾತುಗಳಲ್ಲಿ ಡಾ. ಯಡಿಯೂರಪ್ಪ ಎಂದು ತಪ್ಪದೇ ಬರೆಯುವ ಸಂಪ್ರದಾಯ ತತ್‌ಕ್ಷಣದಿಂದ ಜಾರಿಗೆ ಬಂದಿತು. ಸರಕಾರಿ ಹಾಗೂ ಖಾಸಗಿ ಸಮಾರಂಭಗಳಲ್ಲೂ ಅವರನ್ನು ಡಾಕ್ಟರ್ ಯಡಿಯೂರಪ್ಪ ಎಂದು ಸಂಬೋಧಿಸಲಾಯಿತು. ನಾಲ್ಕು ಮಂದಿ ಹತ್ತು ಸಲ ಏನೇ ಹೆಸರು ಹಿಡಿದು ಕರೆದರೂ ಕೊನೆಗೆ ಅದೇ ಖರೆ ಆಗುವಂತೆ, ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಏಕಾಏಕಿ ಡಾಕ್ಟರ್ ಯಡಿಯೂರಪ್ಪ ಆಗಿಹೋದರು. ಜನ ನಾಲ್ಕು ದಿನ ಆಡಿಕೊಂಡರು. ಹೇಳುವಷ್ಟು ದಿನ ಹೇಳಿದರು. ಈ ಬಗ್ಗೆ ಪತ್ರಿಕೆಗಳೂ ಬರೆದವು. ಮುಖ್ಯಮಂತ್ರಿಗಳಿಗೆ ಎಷ್ಟು ದಿನಾ ಅಂತ ಹೇಳೋದು. ಕೊನೆಗೆ ಎಲ್ಲರೂ ಸುಮ್ಮನಾದರು.

ಆದರೆ ಗುಂಗಿಹುಳ ಒಳಗೊಳಗೇ ಕೊರೆಯುತ್ತಲಿತ್ತು. ಸಾರ್ವಜನಿಕರು ಅನಿವಾರ್ಯವಾಗೋ, ಒಲ್ಲದ ಮನಸ್ಸಿ ನಿಂದಲೋ ಅವರನ್ನು ಡಾಕ್ಟರ್ ಯಡಿಯೂರಪ್ಪ ಎಂದು ಕರೆಯಲಾರಂಭಿಸಿದ್ದರು. ಆದರೆ ಯಡಿಯೂರಪ್ಪನವರಿಗೆ ತಮ್ಮನ್ನು ನಂಬಿಸಿಕೊಳ್ಳಬೇಕಾಗಿತ್ತು. ವಿಚಿತ್ರವೆಂದರೆ ನಕಲಿಯೋ, ಗಾಂವಟಿಯೋ, ಅಳಲೇಕಾಯಿಯೋ ಅಂತೂ ಒಬ್ಬ ಡಾಕ್ಟರ್ ಎಂದು ಇಡೀ ಸಮಾಜ ಒಪ್ಪಿಕೊಂಡಿತ್ತು. ಕೆಲವರು ಅಪಹಾಸ್ಯ ಮಾಡಲೆಂದು ಅವರನ್ನು ಡಾಕ್ಟರ್' ಎಂದು ಒತ್ತಿ ಒತ್ತಿ ಹೇಳಿ ಸಂಬೋಧಿಸಿದ್ದಿರಬಹುದು. ಆದರೆ ಅವರಿಗೆ ದೊಡ್ಡ ಸಮಸ್ಯೆಯಾಗಿದ್ದು ತಮ್ಮನ್ನು ನಂಬಿಸಿಕೊಳ್ಳಬೇಕಾಗಿ ಬಂದುದು ಹಾಗೂ ತಮ್ಮನ್ನು ನಂಬಿಸಿಕೊಳ್ಳಲಾಗದೇ ಹೋದುದು! ಬೇರೆ ಎಲ್ಲರಿಗಿಂತ ಯಡಿಯೂರಪ್ಪನವರಿಗೆ ತಾನು ಗೌಡಾ'ಕ್ಕೆ ಪಾತ್ರನಲ್ಲವೆಂಬುದು ಚೆನ್ನಾಗಿ ಗೊತ್ತಿತ್ತು. ಅವರ ಹತ್ತಿರವಿರುವವರಾದರೂ ಅವರಿಗೆ ಈ ಕುರಿತು ಒಂದು ಮಾತನ್ನು ನಿರ್ಭಿಡೆಯಿಂದ ಹೇಳಬಹುದಿತ್ತು (ಅಥವಾ ಅವರೇ ಇವರಿಗೆ ಗೌಡಾ ಸ್ವೀಕರಿಸುವಂತೆ ತಿದಿಯೂದಿದರಾ?) ಅದನ್ನೂ ಮಾಡಲಿಲ್ಲ.

ರಾಜ್ಯದ ಮಟ್ಟಿಗೆ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸಂತಸ ಇನ್ನೊಂದಿಲ್ಲ. ಅದಕ್ಕಿಂತ ದೊಡ್ಡ ಬಿರುದು, ಪದವಿ ಮತ್ತೊಂದಿಲ್ಲ. ಅದು ಏಕಕಾಲಕ್ಕೆ ಒಬ್ಬನಿಗೆ ಮಾತ್ರ ದಕ್ಕುವಂಥದು. ಗೌರವ ಡಾಕ್ಟರೇಟ್ ಹಾಗಲ್ಲ, ಅದನ್ನು ಯಾರಿಗೆ ಬೇಕಾದರೂ ಕೊಡಬಹುದು. ಯಾರು ಬೇಕಾದರೂ ಖರೀದಿಸಬಹುದು. ರಾತ್ರಿ ಬೆಳಗಾಗುವುದರೊಳಗೆ ಹೆಸರಿಗೆ ಮೊದಲು ಸುಮ್ಮನೆ ಡಾ.' ಎಂದು ಬರೆದುಕೊಂಡರೆ ಯಾರೂ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ಅವರಿಗೆ ಒಂದಿಷ್ಟು ಸಮಜಾಯಿಷಿ ಕೊಟ್ಟು ಬಾಯಿ ಮುಚ್ಚಿಸಬಹುದು. ಆದರೆ ಯಾರ್‍ಯಾರನ್ನೋ ಮುಖ್ಯಮಂತ್ರಿ (ಮುಖ್ಯಮಂತ್ರಿ ಚಂದ್ರು ಹೊರತುಪಡಿಸಿ) ಎಂದು ಕರೆಯಲಾಗುವುದಿಲ್ಲ. ಅದರ ಮುಂದೆ ಏನೇ ಸಂಬೋಧಿಸಲಿ ಅವೆಲ್ಲ ಬರೀ ವೋಳು, ಬರೀ ವೋಳು!

ಕೊನೆಗೂ ಯಡಿಯೂರಪ್ಪನವರಿಗೆ ತಾವು ಡಾಕ್ಟರ್ ಯಡಿಯೂರಪ್ಪ ಎಂದು ನಂಬಿಸಿಕೊಳ್ಳಲು ಆಗಲೇ ಇಲ್ಲ. ನೀವು ಬೇರೆಯವರಿಗೆ ಏನು ಬೇಕಾದರೂ ಸುಳ್ಳು ಹೇಳಬಹುದು. ಅವರನ್ನು ನಂಬಿಸಬಹುದು. ಆದರೆ ನಮಗೆ ಹಾಗೆ ಹೇಳಿಕೊಳ್ಳಲೂ ಆಗುವುದಿಲ್ಲ. ಹೇಳಿದರೆ ನಂಬಲೂ ಆಗುವುದಿಲ್ಲ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಆದರೆ ಈ ಡಾಕ್ಟರ್' ಎಂಬ ಸ್ಪೇರ್‌ಪಾರ್ಟ್ ಅವರನ್ನು ಪದೇ ಪದೆ ಅಣಕಿಸಿರಬೇಕು, ಬ್ರಹ್ಮಕಪಾಲ ಗಂಟುಬಿದ್ದಂತೆ ಕಾಡಿರಬೇಕು.

ಒಮ್ಮೊಮ್ಮೆ ನಮಗೆ ಯಾರಾದರೂ ಎಲ್ಲಿಲ್ಲದ ಉಪಮೆ, ವಿಶೇಷಣ ಹಚ್ಚಿ ಹೊಗಳಿದರೆ ತೀವ್ರ ಕಸಿವಿಸಿಯಾಗುತ್ತದೆ, ಕಿರಿಕಿರಿಯಾಗುತ್ತದೆ. ಅದರಲ್ಲೂ ರಾಜಕಾರಣಿಗಳಿಗೆ ಅಪರೂಪದ ವಿಶೇಷಣಗಳಿಂದ ಬೈಯ್ದರೆ ಬೇಸರವಾಗುವುದಕ್ಕಿಂತ, ಅವರಿಗೆ ಮುಜುಗರವಾಗುವಂತೆ ಹೊಗಳಿದರೆ ತೀವ್ರ ಕಸಿವಿಸಿಯಾಗುತ್ತದೆ. ಸತ್ಯಹರಿಶ್ಚಂದ್ರನಂಥ ರಾಜಕಾರಣಿ, ಅತ್ಯಂತ ಪ್ರಾಮಾಣಿಕ ರಾಜಕಾರಣಿ, ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳದ ರಾಜಕಾರಣಿ ಎಂದೆಲ್ಲ ಹೊಗಳಿದರೆ ಭಯಂಕರ ನಾಚಿಕೆಯಾಗುತ್ತದೆ, ಮುಜುಗರವಾಗುತ್ತದೆ. ಪಾಪ, ಯಡಿಯೂರಪ್ಪನವರು ಹೀಗೇನಾದರೂ ಯೋಚಿಸಿದರಾ? ಇದ್ದಿರಲಿಕ್ಕೂ ಸಾಕು. ಈಗ ತಮಗೆ ಗಂಟುಬಿದ್ದ ಬ್ರಹ್ಮಕಪಾಲದಿಂದ ಬಿಡಿಸಿಕೊಂಡಿದ್ದಾರೆ, ನಿರುಮ್ಮಳರಾಗಿದ್ದಾರೆ.

ಇತಿಹಾಸದ ಪಾಠದಲ್ಲಿ ಓದಿದ್ದು. ಒಂದು ದಿನ ಬೀರಬಲ್ ದೊರೆ ಅಕ್ಬರ್‌ನನ್ನು ಏಕಾಏಕಿ ಬಾಯಿಗೆ ಬಂದಂತೆ ಹೊಗಳಲಾರಂಭಿಸುತ್ತಾನೆ. ಆರಂಭದಲ್ಲಿ ಅಕ್ಬರ್‌ಗೆ ಕೇಳಲು ಖುಷಿಯೆನಿಸುತ್ತದೆ. ಬೀರಬಲ್‌ನೆಡೆಗೆ ಮಂದನಗೆ ಬೀರುತ್ತಾನೆ. ಬೀರಬಲ್ ಅಷ್ಟಕ್ಕೆ ಸುಮ್ಮನಾಗದೇ ಮತ್ತಷ್ಟು ಹೊಗಳಲಾರಂಭಿಸುತ್ತಾನೆ. ಅಕ್ಬರ್ ಆನಂದದಲ್ಲಿ ಉಬ್ಬಿಹೋಗುತ್ತಾನೆ. ಬೀರಬಲ್ ಮತ್ತಷ್ಟು ರೀಲು ಸುತ್ತುತ್ತಾನೆ. ಪ್ರಶಂಸೆಯ ಧಾರೆಗರೆಯುತ್ತಾನೆ. ಆಗ ಕ್ರಮೇಣ ಅಕ್ಬರ್‌ಗೆ ಬೀರಬಲ್ ಹೇಳುವುದರಲ್ಲಿ ಸತ್ಯವಿಲ್ಲ, ತನ್ನನ್ನು ಮೆಚ್ಚಿಸಲು ಬೇಕಂತಲೇ ಹೊಗಳುತ್ತಿದ್ದಾನೆಂದು ಅನಿಸಲಾರಂಭಿಸುತ್ತದೆ. ಅಷ್ಟಕ್ಕೂ ಬೀರಬಲ್ ಸುಮ್ಮನಾಗುವುದಿಲ್ಲ. ಯದ್ವಾತದ್ವಾ ಹೊಗಳಲಾರಂಭಿಸುತ್ತಾನೆ. ಆಗ ಅಕ್ಬರ್ ಕೋಪದಿಂದ "ಬಾಯ್ಮುಚ್ಚು, ಒಂದು ಮಾತಾಡಿದರೆ ನಾಲಗೆ ಕತ್ತರಿಸುವೆ" ಎಂದು ಅಬ್ಬರಿಸುತ್ತಾನೆ. ತನ್ನನ್ನು ಅವಮಾನಿಸಿದ್ದಕ್ಕೆ ಬೀರಬಲ್‌ಗೆ ನೂರು ಛಡಿಯೇಟು ಕೊಡುವಂತೆ ಆದೇಶಿಸುತ್ತಾನೆ. ಅದಕ್ಕೆ ಬೀರಬಲ್ ಈ ನೂರು ಛಡಿಯೇಟಿನಲ್ಲಿ ಮೊದಲ ತೊಂಬತ್ತನ್ನು ನೀವೇ ಸ್ವೀಕರಿಸಬೇಕು ಪ್ರಭು. ಏಕೆಂದರೆ ನಿಮ್ಮನ್ನು ಹೊಗಳಿದಾಗ ನೀವು ಸಂತಸಪಟ್ಟಿರಿ. ಆನಂದದಿಂದ ಉಬ್ಬಿಹೋದಿರಿ. ಆಗಲೇ ಹೇಳಬಹುದಿತ್ತಲ್ಲ ಬಾಯ್ಮುಚ್ಚು ಅಂತ. ಹೊಗಳೋ ತನಕ ಹೊಗಳಿಸಿಕೊಂಡು ಈಗ ನನಗೆ ಛಡಿಯೇಟು ಕೊಡ್ತೀರಾ? ನೀವು ಹಿಂದುಸ್ಥಾನದ ಹುಲಿಯಾ? ಹಿಮಾಲಯ ಪರ್ವತದ ಮೇಲೆ ಕಂಗೊಳಿಸುವ ಸೂರ್ಯನಾ? ನೀವು ಇವೆರಡೂ ಅಲ್ಲ ಅಂತ ನನಗೆ ಗೊತ್ತು. ಆದರೆ ನಾನು ಹಾಗೆ ಹೊಗಳಿದಾಗ ನಿಮಗೆ ಆನಂದವನ್ನು ತಡೆದುಕೊಳ್ಳಲಾಗಲಿಲ್ಲ. ಈಗ ಹೊಡೆಯಲು ಹೇಳ್ತೀರಾ? ಹೊಗಳಿಕೆಗೆ ಬಸರಾಗುವವರು ಇರುವತನಕ ಹೊಗಳಿಯೇ ಬಸುರು ಮಾಡುವವರಿರುತ್ತಾರೆ. ನೀವು ಹಡೆಯದಿದ್ದರೆ ನಾನೇನು ಮಾಡಲು ಸಾಧ್ಯ? ನೀವು ಮತ್ತ್ಯಾರೂ ಅಲ್ಲ ಕೇವಲ ಅಕ್ಬರ್ ಅಷ್ಟೇ ಎಂಬುದು ನನಗೆ ಗೊತ್ತು. ಅದಕ್ಕಿಂತ ಹೆಚ್ಚಾಗಿ ನಿಮಗೂ ಗೊತ್ತು. ಅಷ್ಟನ್ನು ಹೇಳಲು ನಿಮ್ಮನ್ನು ಇಷ್ಟೆಲ್ಲ ಹೊಗಳಬೇಕಾಯಿತು" ಎಂದ. ಅಕ್ಬರ್ ಮರುಮಾತಾಡಲಿಲ್ಲ. ಆತನಿಗೆ ಜ್ಞಾನೋದಯವಾದಂತಾಯಿತು. ಛಡಿ ಶಿಕ್ಷೆ ರದ್ದುಪಡಿಸಿದ.

ಈ ಕತೆ ಹೇಳಿದ್ದೇಕೆಂಬುದನ್ನು ವಿವರಿಸಬೇಕಿಲ್ಲ. ಕೊನೆಗೂ ಯಡಿಯೂರಪ್ಪನವರು ಡಾ. ಯಡಿಯೂರಪ್ಪನವರನ್ನು ಹೊರಹಾಕಿದ್ದಾರೆ! ಅಗ್ದಿ ಕರೆಕ್ಟ್ ಮಾಡ್ಯಾರ. ಮನೆ, ಕಚೇರಿ ಮುಂದೆ ಮತ್ತೆ ಹೊಸ ನಾಮಫಲಕ ತೂಗುಹಾಕಲಿ. ನಾವು ಮನದಲ್ಲಿ ಹೂ ಹಾಕಿ, ಊದಿನಕಡ್ಡಿ ಹಚ್ಚೋಣ ಬಿಡಿ. ಮುಖ್ಯಮಂತ್ರಿಯವರು ಇನ್ನು ಮುಂದೆ ಹಾರ, ತುರಾಯಿ ಸ್ವೀಕರಿಸುವುದಿಲ್ಲ ಅಂತಾನೂ ಹೇಳಿದ್ದಾರೆ. ಛಲೋ ಆಯ್ತು. ಮುಖ್ಯಮಂತ್ರಿಯವರನ್ನು ನೋಡಲು ಯಾರೂ ಖಾಲಿ ಕೈಯಲ್ಲಿ ಹೋಗುವುದಿಲ್ಲ. ಬುಕೆ ಹಿಡಿದೇ ಹೋಗಬೇಕೆಂಬುದು ಸಂಪ್ರದಾಯವಾಗಿಬಿಟ್ಟಿದೆ. ಅದನ್ನು ನೀಡುವವರಾಗಲಿ, ಸ್ವೀಕರಿಸುವವರಾಗಲಿ ಬಹಳ ಯಾಂತ್ರಿಕವಾಗಿ ತಮ್ಮ ಕ್ರಿಯೆ ಮುಗಿಸುತ್ತಾರೆ. ಕೊಟ್ಟ ಬುಕೆ ನೋಡುವ ವ್ಯವಧಾನವೂ ಇರುವುದಿಲ್ಲ. ಮುಖ್ಯಮಂತ್ರಿಯಂಥವರ ಮನೆಯಲ್ಲಿ ರಾತ್ರಿಯಾಗುವ ಹೊತ್ತಿಗೆ ನೂರಾರು ಬುಕೆಗಳು ಬಿದ್ದಿರುತ್ತವೆ. ಬೆಳಗಾಗುವ ಹೊತ್ತಿಗೆ ಪ್ರೀತಿ, ಸ್ನೇಹದ ದ್ಯೋತಕವಾದ ಬುಕೆ ಕಸದಬುಟ್ಟಿ ಸೇರಿರುತ್ತದೆ. ಸಭೆ, ಸಮಾರಂಭಗಳಲ್ಲಿ ಹಾಕುವ ಹಾರಗಳ ಆಯುಷ್ಯ ಕುತ್ತಿಗೆಯಿಂದ ತೆಗೆಯುತ್ತಿದ್ದಂತೆ ಹೋಗಿಬಿಡುತ್ತದೆ. ಕೆಲವು ಸಲ ಹಾಕಿದ ಹಾರಗಳೇ ಪದೇ ದೆ recycle ಆಗುತ್ತವೆ. (ಇಂಥ ಹಾರಗಳನ್ನು ಮಾರುವುದೂ ಕೆಲವರಿಗೆ ದಂಧೆ.)

ಹಾರ, ತುರಾಯಿ ಬೇಡ ಎಂದು ಹೇಳಿದವರಲ್ಲಿ ಯಡಿಯೂರಪ್ಪನವರು ಮೊದಲಿಗರೇನೂ ಅಲ್ಲ. ಹಿಂದಿನ ಕೆಲವು ಮಂತ್ರಿಗಳೂ ಹೀಗೆ ಹೇಳಿದ್ದುಂಟು. ಒಮ್ಮೆ ರಾಜ್ಯದ ಮಂತ್ರಿಯೊಬ್ಬರು ಹಾರ, ತುರಾಯಿ ಬೇಡ ಎಂದು ಹೇಳಿದ್ದರು. ಅವರ ಉದ್ದೇಶ ಬೇರೆಯದೇ ಆಗಿತ್ತು. 'ಹಾರ, ತುರಾಯಿ ಬೇಡ, ಅದರ ಬದಲು ಬೇರೇನನ್ನಾದರೂ ಕೊಡಬಹುದು' ಎಂದಾಗಿತ್ತು. ಹಾರದ ಜೀವಿತ ಅವಧಿ ಅತ್ಯಲ್ಪ. ಅದರ ಬದಲು ವಿಗ್ರಹ, ಪ್ರತಿಮೆ, ಇನ್ನಿತರ ವಸ್ತುಗಳನ್ನು ಕೊಟ್ಟರೆ ಯಾವತ್ತೂ ಇಟ್ಟುಕೊಳ್ಳಬಹುದಲ್ಲ ಎಂಬುದು ಅವರ ಹಿಡನ್ ಅಜೆಂಡಾ ಆಗಿತ್ತು. ಅವರ ಉದ್ದೇಶ ಈಡೇರಿದ್ದು ಬೇರೆ ಮಾತು. ಆ ಮಂತ್ರಿಗಳನ್ನು ನೋಡಲು ಖಾಲಿ ಕೈಯಲ್ಲಿ ಹೋಗುವಂತಿಲ್ಲ. ಹಾರ, ತುರಾಯಿ ಒಯ್ಯುವಂತಿಲ್ಲ. ಹೀಗಾಗಿ ಹೋಗುವಾಗ ಶಾಲು, ವಿಗ್ರಹ, ಸ್ಮರಣಿಕೆ, ಬೆಳ್ಳಿಲೋಟ, ಬಟ್ಟಲು, ಚೊಂಬು ಹಾಗೂ ಅವರಿಗೆ ಇಷ್ಟವಾಗುವ ಸಾಮಾನುಗಳನ್ನು ಜನ ತೆಗೆದುಕೊಂಡು ಹೋಗುತ್ತಿದ್ದರು. ಸಚಿವರು ಇವನ್ನೆಲ್ಲ ನೀಡಿದರೆ ಬೇಡ ಎನ್ನುತ್ತಿರಲಿಲ್ಲ. ಖುಷಿಯಿಂದ ಸ್ವೀಕರಿಸುತ್ತಿದ್ದರು. ಯಡಿಯೂರಪ್ಪನವರು ಖಂಡಿತವಾಗಿಯೂ ಈ ಅರ್ಥದಲ್ಲಿ ಹಾರ, ತುರಾಯಿ ಬೇಡ ಎಂದು ಹೇಳಿರಲಿಕ್ಕಿಲ್ಲ. ಒಂದು ವೇಳೆ ಜನ ಹಾರ, ತುರಾಯಿ ಬದಲು ಈ ವಸ್ತುಗಳನ್ನು ನೀಡಿದರೆ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಇಲ್ಲದಿದ್ದರೆ ಆ ಮಂತ್ರಿಯ ಹಾದಿಯಲ್ಲಿ ಇವರೂ ಹೋಗುತ್ತಿದ್ದಾರೆ ಎಂಬ ಅನುಮಾನ ಮೂಡಬಹುದು.

ಹಿಂದೊಮ್ಮೆ ಈ ಅಂಕಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಹಾಲಿ ರಕ್ಷಣಾ ಸಚಿವ ಎ.ಕೆ. ಆಂಟನಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಪುನಃ ನೆನೆಯುವುದಾದರೆ... ಆಂಟನಿಯವರು ತಾವು ಅಧಿಕಾರದಲ್ಲಿದ್ದಾಗ ಸ್ವೀಕರಿಸಿದ ಎಲ್ಲ ಉಡುಗೊರೆ, ಸ್ಮರಣಿಕೆ, ವಿಗ್ರಹ, ಪ್ರತಿಮೆಗಳೆಲ್ಲವನ್ನೂ ತಿರುವನಂತಪುರಮ್‌ನಲ್ಲಿರುವ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್‌ಗೆ ದಾನ ಮಾಡಿಬಿಟ್ಟಿದ್ದಾರೆ. ಈ ಮ್ಯೂಸಿಯಮ್ ನಲ್ಲಿ ಮುಖ್ಯಮಂತ್ರಿ ಗ್ಯಾಲರಿ' ಎಂಬ ಪ್ರತ್ಯೇಕ ವಿಭಾಗವಿದೆ. ನಾನು ಮುಖ್ಯಮಂತ್ರಿ ಅಥವಾ ಅಧಿಕಾರದಲ್ಲಿದ್ದೇನೆಂಬ ಕಾರಣಕ್ಕೆ ಜನ ನನಗೆ ಉಡುಗೊರೆಗಳನ್ನು ನೀಡುತ್ತಾರೆಯೇ ಹೊರತು ನನಗಾಗಿ ನೀಡಿದ್ದಲ್ಲ. ಆದ್ದರಿಂದ ಇದು ರಾಜ್ಯದ ಆಸ್ತಿ. ಈ ಕಾರಣದಿಂದ ಇವೆಲ್ಲ ರಾಜ್ಯದ ಜನತೆಗೆ ಸೇರಬೇಕು" ಎಂದು ತಮಗೆ ಬಂದ ಗಿಫ್ಟ್‌ಗಳೆಲ್ಲವನ್ನೂ ಅವರು ಈ ಮ್ಯೂಸಿಯಮ್‌ಗೆ ಕಳಿಸಿಬಿಟ್ಟಿದ್ದಾರೆ.

ಕೇವಲ ಹಾರ, ತುರಾಯಿ, ಶಾಲು, ವಿಗ್ರಹ, ಸ್ಮರಣಿಕೆಗಳನ್ನಷ್ಟೇ ಅಲ್ಲ, ಉದ್ಘಾಟನಾ ಹಾರಾಟದಲ್ಲಿ ಭಾಗವಹಿಸಿದ ನೆನಪಿಗೆ ಕುವೇಟ್ ಏರ್‌ಲೈನ್ಸ್ ತಮಗೆ ನೀಡಿದ ವಜ್ರ ಹಾಗೂ ಬಂಗಾರಖಚಿತ ಬೆಲೆಬಾಳುವ ವಾಚನ್ನು ಆ ಗ್ಯಾಲರಿಗೆ ನೀಡಿದ್ದಾರೆ. ತೋರಿಸಿದರೆ ಆಸೆಯಾಗಬಹುದೆಂದು ಅದೇ ಸಮಾರಂಭದಲ್ಲಿ ಹೆಂಡತಿಗೆ ನೀಡಿದ ವಾಚನ್ನೂ ಅವರು ಗ್ಯಾಲರಿಗೆ ಕಳಿಸಿಬಿಟ್ಟರು. ಇಲ್ಲಿ ಆಂಟನಿಯವರಿಗೆ ನೀಡಿದ ಉಂಗುರ, ಚೈನು, ಬಂಗಾರದ ತಾಟು, ಚೊಂಬು, ಗದ, ಖಡ್ಗ ಹಾಗೂ ಬೆಲೆಕಟ್ಟಲಾಗದ ಪೇಂಟಿಂಗ್ಸ್ ಮತ್ತು ಇನ್ನಿತರ ಅನೇಕ ವಸ್ತುಗಳಿವೆ. ವಿದೇಶಿ ಗಣ್ಯರು ನೀಡಿದ ಗಿಫ್ಟ್‌ಗಳನ್ನು ಸಹ ಅವರು ಇಟ್ಟುಕೊಂಡಿಲ್ಲ. ತಮಗೆ ಕಾರ್ಯಕ್ರಮದಲ್ಲಿ ನೀಡುವ ಸಾಮಾನುಗಳನ್ನು ಗ್ಯಾಲರಿಗೆ ತಲುಪಿಸಲು ಅವರು ಸೂಕ್ತ ವ್ಯವಸ್ಥೆ ಮಾಡಿಬಿಟ್ಟಿದ್ದಾರೆ. ಸಮಾರಂಭಗಳಲ್ಲಿ ತಮಗೆ ಕೊಟ್ಟ ಗಂಧದ ಮಾಲೆ, ಹಣ್ಣಿನ ಬುಟ್ಟಿ, ಅರಿಶಿನ ಕೊಂಬು, ಶಾಲಿನ ಚುಂಗು, ಲಿಂಬೇಹಣ್ಣು, ಸೆಣಬಿನ ದಾರವನ್ನೂ ಬಿಡದ ರಾಜಕಾರಣಿಗಳ ಮಧ್ಯೆ ಆಂಟನಿಯವರು ಮಾದರಿಯೆನ್ನಬಹುದಾದ ಕ್ರಮ ಕೈಗೊಂಡಿದ್ದಾರೆ. ಇದನ್ನು ಕೇರಳದ ಮುಖ್ಯಮಂತ್ರಿಯಿದ್ದಾಗ ಮಾತ್ರ ಅನುಸರಿಸುತ್ತಿದ್ದರು ಎಂದುಕೊಳ್ಳಬೇಡಿ. ಈಗ ರಕ್ಷಣಾ ಸಚಿವರಾಗಿರುವಾಗಲೂ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹಾರ, ತುರಾಯಿ ಬೇಡ ಎಂದ ನಮ್ಮ ಯಡಿಯೂರಪ್ಪನವರು ಆಂಟನಿಯವರು ತಳೆದ ನಿರ್ಧಾರದ ಬಗ್ಗೆ ತುಸು ಯೋಚಿಸಬೇಕು. ಅಲ್ಲದೇ ಆಂಟನಿಯವರ ತೀರ್ಮಾನದಲ್ಲಿ ಎಂಥ ಉನ್ನತ ಮೌಲ್ಯವಿದೆಯೆಂಬುದನ್ನು ಮನಗಾಣಬೇಕು. ಅಧಿಕಾರದಲ್ಲಿರುವವರ ಇಂಥ ಒಂದು ಸಣ್ಣ ನಡೆ ಇಡೀ ಸಮಾಜಕ್ಕೆ ಒಂದು ಅದ್ಭುತ ಪ್ರೇರಣೆ ನೀಡುತ್ತದೆ. ಉದಾತ್ತ ಸಂದೇಶವನ್ನು ಬೀರುತ್ತದೆ. ಹಾರ, ತುರಾಯಿ ಬೇಡ ಎಂಬುದಕ್ಕಿಂತ ತಮಗೆ ಬಂದ ಗಿಫ್ಟ್‌ಗಳನ್ನೆಲ್ಲ ಜನರಿಗೇ ಸಲ್ಲಿಸುತ್ತೇನೆಂಬುದು ಇನ್ನೂ ಹೆಚ್ಚಿನ ಆದರ್ಶವಾದೀತು. (ತಮಗೆ ಬಂದ ಶಾಲುಗಳನ್ನೆಲ್ಲ ಜಾರ್ಜ್ ಫರ್ನಾಂಡಿಸ್ ಬರ್ಮ ಹಾಗೂ ಟಿಬೆಟ್‌ನ ನಿರಾಶ್ರಿತರಿಗೆ ಕಳಿಸಿಕೊಡುತ್ತಿದ್ದರು.) ಯಡಿಯೂರಪ್ಪನವರು ಅಂಥ ಮೇಲ್ಪಂಕ್ತಿ ಹಾಕುತ್ತಾರಾ? ಅದೇ ಮುಖ್ಯ ಪ್ರಶ್ನೆ. ಉಳಿದ ಘೋಷಣೆಗೆ ಮಹತ್ವ ಕೊಡಬೇಕಿಲ್ಲ.

(ಸ್ನೇಹ ಸೇತು: ವಿಜಯಕರ್ನಾಟಕ)

ಪೂರಕ ಓದಿಗೆ

ದಯವಿಟ್ಟು ಡಾ ಯಡಿಯೂರಪ್ಪ ಅನ್ನಬೇಡಿ ಎಂದ ಸಿಎಂ
ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿಯಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X