ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟಿಆರ್ : ಆಹಾರ ಸಂಸ್ಕೃತಿಗೆ ಹೊಸರುಚಿ

By * ವಿಶ್ವೇಶ್ವರ ಭಟ್
|
Google Oneindia Kannada News

Yajnanarayana Maiya
ಆ ಪುಸ್ತಕ ಓದುತ್ತಿದ್ದಾಗ ನನಗೆ ಹೋಟೆಲ್ ಮಾಲೀಕರೊಬ್ಬರ ಜೀವನಕಥನ ಓದುತ್ತಿದ್ದೇನೆಂದು ಅನಿಸಲೇ ಇಲ್ಲ. ಅದು ಕೇವಲ ಹೋಟೆಲ್ ಉದ್ಯಮಿಯೊಬ್ಬರ ಕತೆಯೋ, ಕೈಫಿಯತ್ತೋ ಆಗಿದ್ದಿದ್ದರೆ ಅದರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಲೂ ಇರಲಿಲ್ಲ. ಒಬ್ಬ ಅಪರೂಪದ ಸಾಧಕ,ದಣಿವರಿಯದ ಶ್ರಮಿಕ, ಹಿರಿಯಣ್ಣನಂಥ ಬೋಧಕ ಹಾಗೂ ಹಲವು ತಲೆಮಾರುಗಳನ್ನು ಮುನ್ನಡೆಸುವ ಮಾರ್ಗದರ್ಶಕ ಹೀಗೆ ಏಕಕಾಲಕ್ಕೆ ಅನೇಕ ಗುಣಗಳಿಂದ ಬದುಕಿಗೆ ಸ್ಫೂರ್ತಿ ನೀಡುವ ಒಬ್ಬ ಯಶಸ್ವಿ ವ್ಯಕ್ತಿಯ ಕೃತಿಯೆಂದು ಅನಿಸಿದ್ದರಿಂದ ನಿಮಗೆ ಹೇಳಬೇಕೆನಿಸುತ್ತಿದೆ. ಹೋಟೆಲ್ ಮಾಲೀಕನೊಬ್ಬ ಬದುಕಿನ ಸಂದೇಶಗಳನ್ನು ಉಣಬಡಿಸುವ ಈ ಕೃತಿ ಪ್ರಸ್ತುತತೆ ಪಡೆಯುವುದು ಈ ಕಾರಣಗಳಿಂದ.

ಎಂಟಿಆರ್ ಅಂದ್ರೆ ಯಾರಿಗೆ ಗೊತ್ತಿಲ್ಲ? ಅದು ಬೆಂಗಳೂರಿನ ಒಂದು ಪ್ರಸಿದ್ಧ ಹೋಟೆಲ್. ಅಷ್ಟೇ ಆಗಿದ್ದರೆ ಅದರ ಬಗ್ಗೆ ಬರೆಯುವ ಅಗತ್ಯವಿರಲಿಲ್ಲ. ಬೆಂಗಳೂರಿನ ಪ್ರತಿ ಪ್ರದೇಶದಲ್ಲೂ ಒಂದಲ್ಲ ಒಂದು ಪ್ರಸಿದ್ಧ ಹೋಟೆಲ್ ಇದೆ. ಅವೆಲ್ಲ ಎಂಟಿಆರ್ ಆಗಿಲ್ಲ. ಹಾಗೆ ನೋಡಿದರೆ ಎಂಟಿಆರ್ ಕೇವಲ ಒಂದು ಹೋಟೆಲ್ ಎನ್ನುವ ಕಾರಣಕ್ಕೆ ಪ್ರಸಿದ್ಧವೂ ಆಗಿಲ್ಲ. ಅದೊಂದು ಅನ್ನಸಂಸ್ಕೃತಿಯ ಕೇಂದ್ರ. ನಮ್ಮ ಆಹಾರ ಸಂಪ್ರದಾಯಕ್ಕೆ ವಿಶಿಷ್ಟ ಭಾಷ್ಯ ಬರೆದ ಅನನ್ಯ ತಾಣ. ಎಂಟಿಆರ್ ಅಂದಾಕ್ಷಣ ಕೇವಲ ತಿಂಡಿ, ತಿನಿಸುಗಳ ನೆನಪು ಬರುವುದಿಲ್ಲ. ನಮ್ಮ ಬಾಲ್ಯ, ಹಂಚಿಕೊಂಡ ಖುಷಿ ಕ್ಷಣ,ರುಚಿ-ಶುಚಿ ತಿಂಡಿಗಳ ಸ್ವಾದ, ಒಟ್ಟಾಗಿ ಕಲೆತು ಸವಿದ ಭೋಜನ, ಆ ಭೋಜನದಲ್ಲಿ ಆಸ್ವಾದಿಸಿದ ಸಂತಸದ ತೇಗು, ನಿತ್ಯ ಸೇವಿಸುವ ತಿಂಡಿಗಳ ರುಚಿಯ ಪುನರವತರಣ... ಹೀಗೆ ಮನಸು ಜ್ಞಾಪಕ ಚಿತ್ರಶಾಲೆಯಲ್ಲಿ ಸಾಗುತ್ತದೆ.

ಬೆಂಗಳೂರಿನಲ್ಲಿ ನೋಡಲೇಬೇಕಾದ, ಭೇಟಿ ನೀಡಲೇಬೇಕಾದ ತಾಣಗಳ ಪಟ್ಟಿ ಮಾಡುವಾಗ ವಿಧಾನಸೌಧ, ಲಾಲ್‌ಬಾಗ್,ಕಬ್ಬನ್‌ಪಾರ್ಕ್ ನಂತರ ಮುಂದಿನ ಸ್ಟಾಪ್ ಎಂಟಿಆರ್! ಅಷ್ಟರಮಟ್ಟಿಗೆ ಬೆಂಗಳೂರಿನೊಳಗೆ ಎಂಟಿಆರ್ ಹಾಸುಹೊಕ್ಕು. ಎಂಟಿಆರ್‌ಗೆ ನೆಹರು ಬಂದಿದ್ದರಂತೆ, ಡಾ. ರಾಧಾಕೃಷ್ಣನ್, ಡಾ. ರಾಜೇಂದ್ರ ಪ್ರಸಾದ್ ದೋಸೆ ತಿಂದಿದ್ದರಂತೆ. ಅದೇ ಟೇಬಲ್ ಮುಂದೆ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಕುಳಿತು ರವೆ ಇಡ್ಲಿ ಸೇವಿಸಿದ್ದರಂತೆ, ಬೆಂಗಳೂರಿಗೆ ಭೇಟಿ ನೀಡಿದ ವಿದೇಶಿ ಗಣ್ಯರು, ಅಧ್ಯಕ್ಷರು, ಪ್ರಧಾನಿಗಳೆಲ್ಲ ಎಂಟಿಆರ್‌ಗೂ ಹೋಗಿದ್ದರಂತೆ. ಇವರೆಲ್ಲರೂ ಎಂಟಿಆರ್‌ನಲ್ಲಿ ಆಹಾರ ಸೇವಿಸುತ್ತಿರುವ ಫೋಟೊಗಳನ್ನು ಗೋಡೆಗೆ ತಗುಲಿ ಹಾಕಿದ್ದಾರಂತೆ, ಬೆಳ್ಳಿ ತಟ್ಟೆ, ಲೋಟದಲ್ಲಿ ಆಹಾರ, ಕಾಫಿ, ಟೀ ಕೊಡ್ತಾರಂತೆ... ಎಂಟಿಆರ್ ಅಂದ್ರೆ ಅದೊಂದು ಅಸಂಖ್ಯ ನೆನಪುಗಳ ಕೊನೆಯೇ ಇಲ್ಲದ ಮೆರವಣಿಗೆ! ಇಂದಿಗೂ ಎಂಟಿಆರ್ ಅಂಥ ನೆನಪುಗಳನ್ನು ಪದೇಪದೆ ಚಿಗುರಿಸುತ್ತಲೇ ಇರುತ್ತದೆ.

ಯಜ್ಞನಾರಾಯಣ ಮಯ್ಯ!

ನಾನು ಹೇಳಲು ಬಯಸಿರುವುದು ಎಂಟಿಆರ್‌ನ ಸ್ಥಾಪನೆ, ಬೆಳವಣಿಗೆಗೆ ಕಾರಣರಾದ, ಎಂಟಿಆರ್‌ನ್ನು ಅಪ್ಪಟ ಕನ್ನಡದ ಬ್ರ್ಯಾಂಡನ್ನಾಗಿ ಮಾಡಿದ, ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಒಂದು ಗರಿ ಮೂಡಿಸಿದ ಪಾರಂಪಳ್ಳಿ ಯಜ್ಞಪ್ಪ ಯಾನೆ ಯಜ್ಞನಾರಾಯಣ ಮಯ್ಯ ಅವರ ಬಗ್ಗೆ.

ಉಡುಪಿ ತಾಲೂಕಿನ ಕೋಟಕ್ಕೆ ಸಮೀಪ ಪಾರಂಪಳ್ಳಿ ಎಂಬ ಪುಟ್ಟ ಊರಿದೆ. ಯಜ್ಞಪ್ಪ ಮಯ್ಯ ಹುಟ್ಟಿದ್ದು ಇಲ್ಲಿಯೆ. ತಂದೆ ನಾಗಪ್ಪಯ್ಯನವರಿಗೆ ನಾಲ್ಕು ಗಂಡು ಹಾಗೂ ಐದು ಹೆಣ್ಣುಮಕ್ಕಳು. ಒಂಬತ್ತು ಮಕ್ಕಳಿರುವ ಮನೆಯ ತುಂಬಾ ಸಮೃದ್ಧ ಬಡತನ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂಥ ಸ್ಥಿತಿ.ಹೀಗಿರುವಾಗ ಮಕ್ಕಳ ವಿದ್ಯಾಭ್ಯಾಸದತ್ತ ಗಮನಹರಿಸುವವರು ಯಾರು? ಯಜ್ಞಪ್ಪ ಕಾರ್ಕಳದಲ್ಲಿ ಬಂಧುಗಳೊಬ್ಬರ ಮನೆಯಲ್ಲಿ ಉಳಿದುಕೊಂಡು ನಾಲ್ಕನೆ ತರಗತಿ ಮುಗಿಸುವ ಹೊತ್ತಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದು ಸಾಧ್ಯವೇ ಇಲ್ಲವೆಂಬುದು ನಿಕ್ಕಿಯಾಯಿತು. ದುಡಿಯದೇತುತ್ತಿನಚೀಲ ತುಂಬುವಂತಿರಲಿಲ್ಲ. ಆ ಕಾಲದಲ್ಲಿ (1910) ಬೇರೆ ಕೆಲಸ ಗೊತ್ತಿರಲಿಲ್ಲ, ಸಿಗುವ ಸಾಧ್ಯತೆಯೂ ಇರಲಿಲ್ಲ. ಬೇರೆ ದಾರಿ ಕಾಣದೇ ಅಡುಗೆ ಕೆಲಸವನ್ನು ಕಲಿತರು. ಯಾವ ಕೆಲಸ ಸಿಗದವನು, ಯಾವ ಕೆಲಸ ಮಾಡಲು ಬಾರದವನು ಕೊನೆಗೆ ಅಡುಗೆ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಎಂಬ ಮಾತಿತ್ತು. ಯಜ್ಞಪ್ಪನವರ ವಿಷಯದಲ್ಲೂ ಹಾಗೇ ಆಯಿತು.

ಅದನ್ನು ಬಿಟ್ಟರೆ ಬೇರೆ ಮಾರ್ಗವೇ ಇರಲಿಲ್ಲ. ಆರಂಭ ದಿಂದಲೂ ಯಜ್ಞಪ್ಪನವರಿಗೆ ಒಂದು ಕೆಲಸ ಕೊಟ್ಟರೆ ಅದನ್ನು ಅತ್ಯಂತ ನಿಷ್ಠೆ, ಶಿಸ್ತು ಹಾಗೂ ಅಚ್ಚುಕಟ್ಟಾಗಿ ಮಾಡಿಮುಗಿಸುವ ತನಕ ಸಮಾಧಾನವಿರುತ್ತಿರಲಿಲ್ಲ. ಅಡುಗೆ ಕೆಲಸವನ್ನು ಸಹ ಅದೇ ಮನಸ್ಸಿನಿಂದ ಸ್ವೀಕರಿಸಿದರು. ಅಡುಗೆಭಟ್ಟನಾಗಿ ಬಹುಬೇಗನೆ ಹೆಸರುಗಳಿಸಿದ ಯಜ್ಞಪ್ಪನವರಿಗೆ ಮದುವೆ, ವಿಶೇಷ ಸಂದರ್ಭಗಳಲ್ಲಿ ಕರೆ ಬರುತ್ತಿತ್ತು. ಯಜ್ಞಪ್ಪನವರ ಅಡುಗೆಯೆಂದರೆ ವಿಶೇಷ ಆಕರ್ಷಣೆ ಎಂದೂ ಪರಿಗಣಿಸಲಾಗುತ್ತಿತ್ತು. ಅವರ ಪಾಕ ಪ್ರಾವೀಣ್ಯ ಅರಿತ ಹೈದರಾಬಾದ್‌ನ ನ್ಯಾಯಾಧೀಶರೊಬ್ಬರು ತಮ್ಮ ಮನೆಯಲ್ಲಿ ಅಡುಗೆ ಮಾಡಲು ಯಜ್ಞಪ್ಪನವರನ್ನು ಕರೆಸಿಕೊಂಡರು. ತಿಂಗಳತುದಿಯಲ್ಲಿ ಪಗಾರ ಎಂದು ಸಿಗಲಾರಂಭಿಸಿದ್ದು ಆಗಲೇ. ನ್ಯಾಯಾಧೀಶರ ಮನೆಗೆ ಗಣ್ಯವ್ಯಕ್ತಿಗಳು ಬರುತ್ತಿದ್ದರೆ ಅದಕ್ಕೆ ಯಜ್ಞಪ್ಪನವರ ಕೈಚಳಕವೂ ಕಾರಣವಾಗಿತ್ತು.

Yajnanarayana Maiya
ಈ ಮಧ್ಯೆ ಒಂದು ಮಹತ್ವದ ಬೆಳವಣಿಗೆ ಯಜ್ಞಪ್ಪನವರ ಜೀವನದ ಗತಿಯನ್ನೇ ಬದಲಿಸಿತು. ಯಜ್ಞಪ್ಪನವರ ಸಹೋದರರಾದ ಪರಮೇಶ್ವರ ಮಯ್ಯ ಅವರು ಬೆಂಗಳೂರಿನಲ್ಲಿ ಹೈಕೋರ್ಟ್ ನ್ಯಾಯಾಶರಾದ ಚಂದ್ರಶೇಖರಯ್ಯನವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಜಸ್ಟೀಸ್ ಸಾಹೇಬ್ರು ಒಂದು ದಿನ ಪರಮೇಶ್ವರ ಮಯ್ಯರನ್ನು ಕರೆದು, "ಎಷ್ಟು ದಿನ ಅಂತ ಈ ಅಡುಗೆ ಕೆಲಸ ಮಾಡುತ್ತೀಯಾ? ಬೇರೆ ಯಾವುದಾದರೂ ಕೆಲಸದ ಬಗ್ಗೆ ಯೋಚನೆ ಮಾಡಬಾರದೇ?" ಎಂದು ಕೇಳಿದರು. "ಕೈಯಲ್ಲಿ ಹಣ ಇದ್ದರೆ ಮಾಡಬಹುದು" ಎಂದು ಪರಮೇಶ್ವರ ಮಯ್ಯರು ಹೇಳಿದಾಗ ಜಸ್ಟೀಸ್ ಚಂದ್ರಶೇಖರಯ್ಯನವರು ಸಹಾಯ ಮಾಡುವುದಾಗಿ ತಿಳಿಸಿದರು. ತಡಮಾಡಲಿಲ್ಲ, ಅಣ್ಣ ಗಣಪಯ್ಯ ಮಯ್ಯರ ಬಳಿ ಚರ್ಚಿಸಿ ಲಾಲ್‌ಬಾಗ್ ಫೋರ್ಟ್ ರಸ್ತೆಯಲ್ಲಿ 'ಬ್ರಾಹ್ಮಣರ ಕಾಫಿ ಕ್ಲಬ್'ನ್ನು 1924ರಲ್ಲಿ ಆರಂಭಿಸಿಬಿಟ್ಟರು. ಅದ್ಯಾವ ಮುಹೂರ್ತದಲ್ಲಿ ಆರಂಭವಾಯಿತೋ ಏನೋ, ಕಾಫಿ ಕ್ಲಬ್ ಬಹಳ ಚೆನ್ನಾಗಿ ನಡೆಯಲಾರಂಭಿಸಿತು. ಐದು ವರ್ಷಗಳಲ್ಲಿ ಸಾಕಷ್ಟು ಜನಪ್ರಿಯವಾಯಿತು. ಈ ಮಧ್ಯೆ ಪರಮೇಶ್ವರಮಯ್ಯ ಟೈಫಾಯಿಡ್‌ಗೆ ಅಸು ನೀಗಿದರು. ಆಗ ಗಣಪಯ್ಯ ಹೈದರಾಬಾದ್‌ನಲ್ಲಿರುವ ಯಜ್ಞಪ್ಪನವರನ್ನು ಬೆಂಗಳೂರಿಗೆ ಕರೆಸಿಕೊಂಡರು. ಆಗಲೇ ಅಡುಗೆಭಟ್ಟನಾಗಿ ಚೆನ್ನಾಗಿ ಪಳಗಿದ್ದ ಯಜ್ಞಪ್ಪನವರು ಕಾಲಿಟ್ಟಿದ್ದೇ ಇಟ್ಟಿದ್ದು, ಆ ಹೋಟೆಲ್‌ನ ದೆಸೆಯೇ ಬದಲಾಗಿಹೋಯಿತು.

ಯಜ್ಞಪ್ಪನವರಿಗೆ ಹೋಟೆಲ್ ಬಗ್ಗೆ ಒಂದು ಸ್ಪಷ್ಟ ಕಲ್ಪನೆಯಿತ್ತು. ಗ್ರಾಹಕರ ಹೊಟ್ಟೆಗೆ ದ್ರೋಹ ಮಾಡಿ ಹಣ ಮಾಡಬಾರದು, ಗ್ರಾಹಕರ ಉದರ ಸಂತೃಪ್ತಿಗಿಂತ ಮಿಗಿಲಾದ ಸಂತಸ ಮತ್ತ್ಯಾವುದೂ ಇಲ್ಲ. ಗುಣಮಟ್ಟವೊಂದೇ ಈ ದಂಧೆಯಲ್ಲಿ ಕೈಹಿಡಿಯುವುದು ಹಾಗೂ ರುಚಿಗಿಂತ ಶುಚಿ ಮುಖ್ಯ. ಗ್ರಾಹಕರು ಬಯಸಿದ ತಿಂಡಿ, ತೀರ್ಥ ಕೊಡುವುದರ ಜತೆಗೆ ಅವರ ರುಚಿಗ್ರಂಥಿಗಳನ್ನು ಇನ್ನಷ್ಟು ವೃದ್ಧಿಸುವುದೂ ಅಷ್ಟೇ ಮುಖ್ಯ.

ಸ್ವತಃ ಅಡುಗೆಭಟ್ಟರಾಗಿದ್ದ ಯಜ್ಞಪ್ಪ ಬಹುಬೇಗನೆ ಹೋಟೆಲ್ ದಂಧೆಯ ಮಜಕೂರುಗಳನ್ನು, ಒಳಮನೆಯ ಪಟ್ಟುಗಳನ್ನು ಕರಗತಗೊಳಿಸಿಕೊಂಡರು. ತಮ್ಮ ಹೋಟೆಲ್ ಹತ್ತರಲ್ಲಿ ಹನ್ನೊಂದನೆಯದಾಗಬಾರದು, ತಮ್ಮದು ಮಾತ್ರ ಎಲ್ಲ ಹೋಟೆಲ್‌ಗಳ ಪೈಕಿ ಏಕಮೇವಾದ್ವಿತೀಯವಾಗ ಬೇಕು ಎಂಬ benchmarkನ್ನುಅವರೇ ಹಾಕಿಕೊಂಡರು. ನಷ್ಟವಾದರೂ ಪರವಾಗಿಲ್ಲ, ಯಾವತ್ತೂ ಹಳಸಿದ ತಿಂಡಿಗಳನ್ನು ಕೊಡಲೇಬಾರದು, ಸದಾ ತಾಜಾ ಆಹಾರವನ್ನೇ ನೀಡಬೇಕೆಂದು ಕಟ್ಟಪ್ಪಣೆ ವಿಸಿದ್ದರು.

ಅಕ್ಕಿಹಿಟ್ಟಿಗೆ ಸಂಬಂಧಿಸಿದ ತಿಂಡಿಗಳೆಲ್ಲ ಬೆಳಗ್ಗೆ ಒಂಬತ್ತರೊಳಗೆ ಖಾಲಿಯಾಗಲೇಬೇಕೆಂದು ಅವರು ಹುಕುಂ ವಿಧಿಸಿದ್ದರು. ಏಕೆಂದರೆ ಇಡ್ಲಿ ಹಿಟ್ಟು ಒಂಬತ್ತರ ನಂತರ ಹುಳಿಯಾಗಲಾರಂಭವಾಗುತ್ತದೆ. ಇದರಿಂದ ರುಚಿ ಕೆಡುತ್ತದೆ. ಒಂಬತ್ತರ ನಂತರ ಇಡ್ಲಿ ಹಿಟ್ಟು ಉಳಿದರೆ ಮೋರಿಗೆ ಚೆಲ್ಲುವಂತೆ ಸೂಚಿಸುತ್ತಿದ್ದರು. ಎಷ್ಟೇ ಒಳ್ಳೆಯ ಅಡುಗೆ, ತಿಂಡಿ ಮಾಡಿ ಯಾವುದಾದರೂ ಒಂದು ಐಟಂ ಹಾಳಾದರೆ ಇಡೀ ಊಟವೇ ಹಾಳಾಗುತ್ತದೆಂದು ಅಡುಗೆಮನೆಯೊಳಗಿನವರಿಗೆಲ್ಲ ಪದೇಪದೆ ಹೇಳುತ್ತಿದ್ದ ಯಜ್ಞಪ್ಪ, ಬಿಸಿಬಿಸಿ ಪೂರಿಗೆ ಒಳ್ಳೆಯ ಸಾಗು ಕೊಟ್ಟು ಹಳಸಿದ ಚಟ್ನಿ ಕೊಟ್ಟರೆ ಎಲ್ಲವೂ ನಿಷ್ಫಲ ಎಂದು ಹೇಳುತ್ತಿದ್ದರು.'ಹೋಟೆಲ್ ದಂಧೆಯಲ್ಲಿ ಗ್ರಾಹಕನ ರುಚಿ ಕೆಟ್ಟರೆ ಸಂಬಂಧ ಕೆಡುತ್ತದೆ' ಎಂಬುದು ಅವರ ಘೋಷವಾಕ್ಯವಾಗಿತ್ತು. ಊಟ ಬಡಿಸುವ ಮಾಣಿ ಗಲೀಜಾದ ತಾಟು ಇಟ್ಟರೆ, ಆತನ ಫಿಂಗರ್ ಪ್ರಿಂಟ್ ಬಟ್ಟಲ ಮೇಲೆ ಮೂಡಿದರೆ, "ಗ್ರಾಹಕರು ಹಣ ನೀಡುವುದು ರುಚಿ ಹಾಗೂ ಶುಚಿಗೇ ಹೊರತು ನಿನ್ನ ಗಲೀಜಿಗೆ ಅಲ್ಲ" ಎಂದು ಬೈಯ್ದು ಅವನಿಗೆ ಅಲ್ಲಿಯೇ 'ಒಗ್ಗರಣೆ' ಹಾಕುತ್ತಿದ್ದರು.

ಯಜ್ಞಪ್ಪನವರ ಅಗ್ಗಳಿಕೆಯೆಂದರೆ ಪ್ರಯೋಗಶೀಲತೆ.ಪಾಕಶಾಸ್ತ್ರಕ್ಕಿಂತ ಅದ್ಭುತವಾದ ರಸಾಯನಶಾಸ್ತ್ರವಿಲ್ಲವೆಂದು ಅವರು ನಂಬಿದ್ದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಕ್ಕಿಯ ಅಭಾವವುಂಟಾದಾಗ, ರವೆಯನ್ನು ಜನಪ್ರಿಯ ಗೊಳಿಸಿದರು. ಅಲ್ಲಿವರೆಗೆ ರವೆ ಬಳಕೆ ಕೇವಲ ಉಪ್ಪಿಟ್ಟು ತಯಾರಿಕೆಗೆ ಸೀಮಿತವಾಗಿತ್ತು. ರವೆಯನ್ನು ಬಳಸಿ ಇಡ್ಲಿಯನ್ನು ಮಾಡಬಹುದೆಂದು ತೋರಿಸಿಕೊಟ್ಟವರು ಯಜ್ಞಪ್ಪನವರು. ಅಲ್ಲಿ ತನಕ ಅಕ್ಕಿ ಇಡ್ಲಿ ಸೇವಿಸಿದ್ದವರಿಗೆ ರವೆ ಇಡ್ಲಿ ಹೊಸರುಚಿ ಯಾಯಿತು.

ಯಜ್ಞಪ್ಪನವರು ಹೋಟೆಲ್‌ಗೆ ಬೇಕಾದ ಸಾಮಾನುಗಳನ್ನು ಸ್ವತಃ ತಾವೇ ಖರೀದಿಸುತ್ತಿದ್ದರು. ತರಕಾರಿ, ಬೇಳೆ, ಕಡಿ-ಕಾಳುಗಳನ್ನು ಸ್ವತಃ ತಾವೇ ಆರಿಸುತ್ತಿದ್ದರು. ಬ್ಯಾಡಗಿಯ ಮೆಣಸಿಲ್ಲದೇ ಉಪ್ಪಿನಕಾಯಿ ಮಾಡುತ್ತಿರಲಿಲ್ಲ. ತುಪ್ಪವೆಂದರೆ ಮಂಡ್ಯದಿಂದ ತಂದ ಬೆಣ್ಣೆಯನ್ನು ತೊಳೆದು ಹದಕಾವಿನಲ್ಲಿ ಕಾಯಿಸಿ ತಯಾರಿಸಬೇಕು! ಗ್ರಾಹಕನ ಒತ್ತಾಯಕ್ಕೆ ಹರಿಬರಿಯಲ್ಲಿ ಯಾವ ಪದಾರ್ಥವನ್ನೂ ಕೊಡುತ್ತಿರಲಿಲ್ಲ. ಕಾಯಲು ಸಮಯವಿಲ್ಲದಿದ್ದರೆ ಕೇಳಿದ ತಿಂಡಿ ಕೊಡುವುದಿಲ್ಲ ಎಂದು ಹೇಳಲು ಹಿಂದೇಟು ಹಾಕುತ್ತಿರಲಿಲ್ಲ. ಗಿರಾಕಿಗಳು ಹೆಚ್ಚು ಬಂದಾಗ ಸಾರಿಗೆ ನೀರು ಬೆರೆಸಿ ರುಚಿ ಕೆಡಿಸುವ ಅಡುಗೆಭಟ್ಟರು ಅವರ ಮುಂದೆ ಹೆಚ್ಚು ದಿನ ಇರುತ್ತಿರಲಿಲ್ಲ. ಲಾಲ್‌ಬಾಗ್‌ಗೆ ವಾಕ್ ಮುಗಿಸಿ ಕಾಫಿ ಕುಡಿದವರಿಂದ ಉತ್ತಮ ಪ್ರತಿಕ್ರಿಯೆ ಬಾರದಿದ್ದರೆ ಒಳಬಂದು ವಿಚಾರಿಸುತ್ತಿದ್ದರು. ಬೆಳ್ಳಿಲೋಟದ ತುದಿಯಲ್ಲಿ ಕಾಲು ಇಂಚು ಕಾಫಿ ನೊರೆ ಇರಲೇಬೇಕು. ಇಲ್ಲದಿದ್ದರೆ ಕಾಫಿ ಪುಡಿ ಹುರಿದವರಿಂದ ಹಿಡಿದು ಹಾಲು ಕೊಟ್ಟವನ ತನಕ ವಿಚಾರಣೆ ಶುರು.

ಒಮ್ಮೆ ಎಂಟಿಆರ್‌ನಲ್ಲಿ ಕಾಫಿ ಪುಡಿಗೆ ಚಿಕೋರಿ ಮಿಕ್ಸ್ ಮಾಡುತ್ತಾರೆಂಬ ಆರೋಪ ಬಂದಾಗ, ಸ್ಯಾಂಪಲ್ಲನ್ನು ಕೋಲ್ಕತಾದಲ್ಲಿರುವ ಪ್ರಯೋಗಶಾಲೆಗೆ ಕಳಿಸಿ ಶುದ್ಧ ಕಾಫಿಪುಡಿ ಎಂಬ ವರದಿ ತರಿಸಿಕೊಂಡ ನಂತರವೇ ಕಾಫಿ ಕೊಟ್ಟಿದ್ದರು! ಅರ್ಜೆಂಟಾಗಿ ಬರುವ ಗಿರಾಕಿಗಳಿಗೆ "ಸಿದ್ಧವಿರುವ ಐಟಂ ತೆಗೆದುಕೊಳ್ಳಿ. ಹೆಚ್ಚು ಬೇಡಿಕೆಯಲ್ಲಿರುವ ಮಸಾಲೆದೋಸೆಗೆ ಆರ್ಡರ್ ಮಾಡಬೇಡಿ" ಎಂದು ಹೇಳುತ್ತಿದ್ದ ಯಜ್ಞಪ್ಪ, ಸಾಗು ಖರ್ಚಾದರೆ ಪೂರಿ ಮಾಡಬೇಡಿ, ಸಾಂಬಾರು ಇಲ್ಲದೇ ದೋಸೆ ಕೊಡಬೇಡಿ" ಎಂದು ಮಾಣಿಗಳಿಗೆ ಹೇಳುತ್ತಿದ್ದರು. ಯಜ್ಞಪ್ಪನವರ ಹೋಟೆಲ್ ಆಸ್ಥೆ ಇಷ್ಟೇ ಆಗಿರಲಿಲ್ಲ. ದೇಶದ ಬಹುತೇಕ ಸಣ್ಣ, ದೊಡ್ಡ ಹೋಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಎಲ್ಲ ಒಳ್ಳೆಯ ಅಂಶಗಳನ್ನೂ ತಮ್ಮ ಹೋಟೆಲ್‌ನಲ್ಲಿ ಅಳವಡಿಸುತ್ತಿದ್ದರು. ಅಷ್ಟಕ್ಕೂ ಸಮಾಧಾನವಾಗದ ಅವರು ವಿದೇಶಗಳಲ್ಲಿರುವ ಹೋಟೆಲ್ ಅಧ್ಯಯನಕ್ಕೆಂದು 1951ರಲ್ಲಿಇಂಗ್ಲೆಂಡ್ ಸೇರಿದಂತೆ ಯೂರೋಪ್‌ನ ಕೆಲ ದೇಶಗಳಿಗೆ ಭೇಟಿ ಕೊಟ್ಟರು. ಇಂಗ್ಲಿಷ್ ಮಾತಾಡಲು, ಓದಲು ಬಾರದಿದ್ದರೂ ವಿದೇಶಿ ಹೋಟೆಲ್ ನೋಡುವ ತವಕ. ಇಂಗ್ಲಿಷ್ ಬಲ್ಲ ಸ್ನೇಹಿತ ಪತ್ರಕರ್ತ ಜೀವನ್‌ರಾವ್ ಅವರನ್ನು ಕರೆದುಕೊಂಡು ಹೋಗಿದ್ದರು. ಇಂಗ್ಲೆಂಡ್, ಫ್ರಾನ್ಸ್‌ನಲ್ಲಿನ ಹೋಟೆಲ್‌ಗಳಲ್ಲಿನ ಶುಚಿತ್ವ ಅವರ ಮೇಲೆ ಪ್ರಭಾವ ಬೀರಿತು. ಪಾತ್ರೆಗಳನ್ನು ಸ್ಟರಲೈಸ್ ಮಾಡುವ ವಿಧಾನ ಅವರಿಗೆ ಖುಷಿ ನೀಡಿತು. ಯೂರೋಪ್ ಪ್ರವಾಸ ಅವರ ಮೇಲೆ ಅದೆಂಥ ಮೋಡಿ ಮಾಡಿತೆಂದರೆ ಅಲ್ಲಿಂದ ಬಂದವರೇ ಅಡುಗೆ ಮನೆಯನ್ನು ಪಾರದರ್ಶಕಗೊಳಿಸಿದರು.

ಅಡುಗೆಮನೆ ಬಾಗಿಲಿಗೆ "ಒಳಗೆ ಪ್ರವೇಶ ಇಲ್ಲ" ಎಂದು ನೇತುಹಾಕಿದ್ದ ಬೋರ್ಡ್ ಕಿತ್ತೆಸೆದರು. ಆಹಾರ ಪದಾರ್ಥಗಳ ತಯಾರಿಕೆಗೆ ಯಂತ್ರಗಳನ್ನು ಬಳಸಲಾರಂಭಿಸಿದರು. ಬರಿಗೈ ಬಳಕೆಯನ್ನು ನಿಲ್ಲಿಸಿದರು. ಓವನ್, ಗ್ರೈಂಡರ್, ಮಿಕ್ಸರ್, ಬಾಯ್ಲರ್ ಮುಂತಾದ ಯಂತ್ರಗಳನ್ನು ಅಳವಡಿಸಿದರು. ಅಷ್ಟೇ ಅಲ್ಲ ಬ್ರಾಹ್ಮಣರ ಕಾಫಿಕ್ಲಬ್ ಹೆಸರನ್ನು ಬದಲಿಸಿ "ಮಾವಳ್ಳಿಟಿಫಿನ್ ರೂಮ್ಸ್" ಎಂದು ಪುನರ್ ನಾಮಕರಣ ಮಾಡಿದರು. ಅದು ಕ್ರಮೇಣ ಎಂಟಿಆರ್ ಆಯಿತು. ಆ ಮೂರಕ್ಷರಗಳಲ್ಲಿ ಅದೆಂಥ ಮೋಡಿಯಿದೆಯೆಂದರೆ ಅದರ ರುಚಿ ಸವಿದವನೇ ಬಲ್ಲ.

ಗ್ರಾಹಕರನ್ನು ಜಾಗೃತಗೊಳಿಸದೇ ಅಡುಗೆಮನೆ ಯಲ್ಲಿ ಯಾವ ಪರಿವರ್ತನೆ ತರಲು ಸಾಧ್ಯವಿಲ್ಲವೆಂದು ಯಜ್ಞಪ್ಪನವರು ಸುಮಾರು 75 ವರ್ಷಗಳ ಹಿಂದೆಯೇ ಮನಗಂಡಿದ್ದರು. ಹೋಟೆಲ್‌ಗಳಿಗೆ ಬರುವ ಗಿರಾಕಿಗಳಿಗೆ ಹೇಗೆ ವರ್ತಿಸಬೇಕೆಂಬುದನ್ನು ಅವರು ಮುಲಾಜಿಲ್ಲದೇ ಹೇಳುತ್ತಿದ್ದರು. ಅದಕ್ಕಾಗಿಯೇ ಅವರು ಒಂದು ಸಣ್ಣ ಪುಸ್ತಕ ಪ್ರಕಟಿಸಿ, ಗ್ರಾಹಕರಿಗೆ ಕೊಡುತ್ತಿದ್ದರು. ಆ ಪುಸ್ತಕದಲ್ಲಿ ಬರೆದ ಕೆಲ ಅಂಶಗಳನ್ನು ನೋಡಿ

* ಮಾಣಿಗಳ ಜತೆ ಹೆಚ್ಚು ಮಾತಾಡಬೇಡಿ.ನೀವು ಸೇವಿಸುವ ತಿಂಡಿ ಮೇಲೆ ಅವನ ಎಂಜಲು ಬಿದ್ದೀತು.
* ಆತುರದಲ್ಲಿದ್ದರೆ ಸಿದ್ಧ ಪದಾರ್ಥಗಳನ್ನು ತರಿಸಿಕೊಳ್ಳಿ.
* ಕಟ್ಟಡದ ಗೋಡೆಗಳ ಮೇಲೆ ಕೈಯಿಡಬೇಡಿ. ಗೋಡೆಗಳಿಗೆ ಕ್ರಿಮಿನಾಶಕ (ಜಿರಳೆ, ತಿಗಣಿ) ಸಿಂಪಡಿಸಿರುತ್ತೇವೆ. ಇದರಿಂದ ಗೋಡೆಯೂ, ನಿಮ್ಮ ಕೈಯೂ ಗಲೀಜಾಗುವುದಿಲ್ಲ.
* ಒಮ್ಮೆ ಕುಳಿತ ಬಳಿಕ ಸ್ಥಾನ ಬದಲಿಸಬೇಡಿ.
* ಕುರ್ಚಿಗಳ ಮೇಲೆ ಕಾಲನ್ನಿಡಬೇಡಿ. ಮುಂದೆ ಬರುವ ಗಿರಾಕಿ ಪೋಷಾಕು ಹೊಲಸಾದೀತು .
* ತಾಟಿನಲ್ಲಿ ಕೈ ತೊಳೆಯಬೇಡಿ, ಉಗುಳಬೇಡಿ. ನಾಳೆ ಅದೇ ತಾಟಿನಲ್ಲಿ ನೀವೇ ಊಟ ಮಾಡಬೇಕಾಗಬಹುದು
* ಕರಿಬೇವಿನ ಸೊಪ್ಪನ್ನು ಟೇಬಲ್ ಅಥವಾ ನೆಲದ ಮೇಲೆ ಬಿಸಾಡಬೇಡಿ. ಬಟ್ಟಲಿನಲ್ಲಿಯೇ ಇರಲಿ.
* ವಾಷ್ ಬೇಸಿನ್‌ನಲ್ಲಿ ಕ್ಯಾಕರಿಸಿ ಉಗುಳಬೇಡಿ. ಪಕ್ಕದಲ್ಲಿರುವ ಗಿರಾಕಿಗಳಿಗೆ ಕಿರಿಕಿರಿಯಾಗುತ್ತದೆ. ಕಪ್ ಕೆಳಗೆ ಸಾಸರ್ ಹಿಡಿದು ಕಾಫಿ, ಟೀ, ಕುಡಿಯಿರಿ. ಕಪ್ ಅಡಿಯಲ್ಲಿನ ಪಾನೀಯದ ತೊಟ್ಟು ಅಂಗಿ ಮೇಲೆ ಬಿದ್ದು ಕೊಳೆಯಾಗುವುದಿಲ್ಲ... ಹೀಗೆ ಹಲವಾರು.

ಯಜ್ಞಪ್ಪನವರು ವ್ಯವಹಾರದಲ್ಲಿ ಎಷ್ಟು ಕಟ್ಟುನಿಟ್ಟೋ, ಖಾಸಗಿ ಜೀವನದಲ್ಲೂ ಹಾಗೇ. ತಮ್ಮ ಏಳು ಮಂದಿ ಮಕ್ಕಳಿಗೆ ಸುಂದರ ಭವಿಷ್ಯ ರೂಪಿಸಿದ ತಂದೆಯಾದ ಯಜ್ಞಪ್ಪ, ಅವರೆಲ್ಲರೂ ಅವರವರ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸೂರ್ತಿಯಾದದ್ದು ವಿಶೇಷ. ಆ ಪೈಕಿ ಮಗ ಸದಾನಂದ ಮಯ್ಯ ಎಂಟಿಆರ್ ಬ್ರ್ಯಾಂಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಆಹಾರ ರಂಗದಲ್ಲಿ ಕ್ರಾಂತಿ ಮಾಡಿದ್ದು ಗಮನಾರ್ಹ. ಒಬ್ಬ ಸಾಮಾನ್ಯ ಅಡುಗೆ ಭಟ್ಟ ಆಹಾರ ಸಂಸ್ಕೃತಿಗೆ ಹೊಸ ರುಚಿ ಕೊಟ್ಟ ಕತೆಯಿದು. ರುಚಿಯಲ್ಲಿ ನಮ್ಮ ನಾಡ ಗರಿಮೆಯನ್ನು ಎತ್ತರಿಸಿದ ಸಾಹಸ ಗಾಥೆಯಿದು.

ಮೊನ್ನೆ ಪಾರಂಪಳ್ಳಿಯ ಮಯ್ಯರ ಮನೆಯಲ್ಲಿ ಡಾ. ಪಾ.ನ. ಮಯ್ಯ ಬರೆದ 'ಎಂಟಿಆರ್ ಯಜ್ಞಪ್ಪ' ಕೃತಿಯನ್ನು ಲೋಕಾರ್ಪಣೆ ಮಾಡುವಾಗ ಒಬ್ಬ ಅಸಾಧಾರಣ ಸಾಧಕನ ಬದುಕಿನಿಂದ ಪ್ರೇರಣೆ ಪಡೆದ ಧನ್ಯತೆ ನನ್ನದಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X