• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಕಥೆಗಳ ಹಕ್ಕಿನೋಟ ಮತ್ತು ಹಕ್ಕಿಹಾಡಿನ ಒಳನೋಟ

By Staff
|

ಆತ್ಮಕಥೆಗಳ ಹಕ್ಕಿನೋಟ ಮತ್ತು ಹಕ್ಕಿಹಾಡಿನ ಒಳನೋಟಕರ್ನಾಟಕದ ರಾಜಕಾರಣಿಗಳು ಬರೆದ ಮತ್ತು ಬರೆಯದ ಆತ್ಮಕಥೆಗಳ ಕುರಿತು ಸೀಳುನೋಟ ಮತ್ತು ನೀವು ಓದಿ ಸವಿಯಲೇಬೇಕಾದ ಎಚ್. ವಿಶ್ವನಾಥ್ ಅವರ "ಹಳ್ಳಿ ಹಕ್ಕಿಯ ಹಾಡು" ಆತ್ಮಕಥೆಯ ಒಳನೋಟ.

ವಿಶ್ವೇಶ್ವರ ಭಟ್

ಇದೂ ಸಹ ವಿವಾದಕ್ಕೆಡೆ ಮಾಡಿಕೊಡಬಹುದೆಂದು ಭಾವಿಸಿರಲಿಲ್ಲ ಸುಮಾರು ನಾಲ್ಕು ತಿಂಗಳ ಹಿಂದೆ, ಒಂದು ದಿನ ಮಾಜಿ ಸಚಿವ ಎಚ್. ವಿಶ್ವನಾಥ್ ಫೋನ್ ಮಾಡಿ, “ನನ್ನ ಜೀವನಕಥೆ ಬರೆದಿದ್ದೇನೆ. ನೀವು ಓದಲೇಬೇಕೆಂಬುದು ನನ್ನ ಒತ್ತಾಸೆ. ಪರವಾಗಿಲ್ಲ ಅಂದ್ರೆ ಅದನ್ನು ಆನಂತರ ಪುಸ್ತಕ ರೂಪದಲ್ಲಿ ಪ್ರಕಟಿಸುವೆ. ಯಾವುದಕ್ಕೂ ಓದಿ ಅಭಿಪ್ರಾಯ ತಿಳಿಸಿ" ಎಂದರು.

ರಾಜಕಾರಣಿ, ಅದರಲ್ಲೂ ಮಂತ್ರಿಯಾಗಿದ್ದವರು ಓದುವುದಾಗಲಿ, ಬರೆಯುವುದಾಗಲಿ ಕಮ್ಮಿಯೇ. ಒಮ್ಮೆ ರಾಜಕೀಯ ಪ್ರವೇಶಿಸಿದ ಬಳಿಕ ಈ ಎರಡೂ ಕ್ರಿಯೆಗಳನ್ನು ಅವರು ಮರೆಯುತ್ತಾರೆ. ತಮ್ಮ ಜೀವನಕಥೆ ಬರೆದುಕೊಂಡ ಕನ್ನಡದ ರಾಜಕಾರಣಿಗಳು ತೀರಾ ಅಪರೂಪ. ರಾಮಕೃಷ್ಣ ಹೆಗಡೆಯವರಿಗೆ ಬರೆಯಬೇಕು ಅಂತಿತ್ತು. ಆದರೆ ಅವರು ಬರೆಯಲಿಲ್ಲ. “ಆತ್ಮಕಥೆ ಬರೆದರೆ ನನ್ನದೊಂದೇ ಅಲ್ಲ, ನನ್ನ ಬದುಕಿನಲ್ಲಿ ಹಾದುಹೋದವರ ಬಗ್ಗೆ ಬರೆಯಬೇಕಾಗುತ್ತದೆ ಹಾಗೂ ಸತ್ಯವನ್ನೇ ಬರೆಯಬೇಕಾಗುತ್ತದೆ. ಅದರಿಂದ ಯಾರಾದರೂ ಬೇಜಾರು ಮಾಡಿಕೊಂಡರೆ? ಆದರೂ ನಮ್ಮ ಬದುಕಿನ ಕೆಲ ಸಂಗತಿಗಳನ್ನಾದರೂ ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಈ ಕಾರಣ ದಿಂದಾದರೂ ನಾವು ಆತ್ಮಕಥೆ ಬರೆದುಕೊಳ್ಳಬೇಕು" ಎಂದು ಹೆಗಡೆಯವರು ಹೇಳಿದ್ದರು. ಕೊನೆಗೂ ಅವರ ಆಸೆ ಈಡೇರಲಿಲ್ಲ.

ದೇವೇಗೌಡರು ಆಗಾಗ “ನಾನು ಬರೆಯಲಿರುವ ಆತ್ಮಕಥೆಯಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ" ಎಂದು ಬೆದರಿಸುತ್ತಿರುತ್ತಾರೆ. ಕಳೆದ ಏಳೆಂಟು ವರ್ಷಗಳಿಂದ ಅವರು ಈ 'ಧಮಕಿ" ಹಾಕುತ್ತಿದ್ದರೂ, ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾದ ಬಗ್ಗೆ ವರದಿಗಳಿಲ್ಲ. ಒಮ್ಮೆ ಪ್ರಕಟವಾದರೆ ಅದನ್ನು Autobiography ಎನ್ನಬೇಕೋ biography ಎನ್ನಬೇಕೋ ಎಂಬುದೇ ಜಿಜ್ಞಾಸೆ. ಇರಲಿ ಬಿಡಿ.

ಕರ್ನಾಟಕದ ರಾಜಕಾರಣಿಗಳಲ್ಲಿ ಕೆಲವರು ಆತ್ಮಕಥೆ ಗಳನ್ನು ಬರೆದುಕೊಂಡಿದ್ದಾರೆ. ಮುಂಬೈ ಸರಕಾರದಲ್ಲಿ ಮಂತ್ರಿಯಾಗಿದ್ದ ಹಾಗೂ ರಾಜ್ಯ ಅರಣ್ಯ ಸಚಿವರಾಗಿದ್ದ ಕೆ.ಎಫ್. ಪಾಟೀಲರು, ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ, ವೀರಪ್ಪ ಮೊಯ್ಲಿ ಆತ್ಮಕಥೆ ಬರೆದುಕೊಂಡಿದ್ದಾರೆ. ಹಂಗಾಮಿ ರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ 'ನನಗೆ ನಾನೇ ಮಾದರಿ" ಎಂಬ ಆತ್ಮಕಥೆ ಬರೆದುಕೊಂಡಿದ್ದರು. ಎಸ್. ನಿಜಲಿಂಗಪ್ಪನವರು ಆತ್ಮಕಥೆ ಯಲ್ಲಿ ತಮ್ಮ ಯೌವನದ ದಿನಗಳಲ್ಲಿನ ವಾಂಛೆಗಳ ಬಗ್ಗೆ ನಿರ್ಭಿಡೆಯಿಂದ ಹೇಳಿಕೊಂಡಿದ್ದಾರೆ. ಮಾಜಿ ಮಂತ್ರಿ ದಿವಂಗತ ವೈ.ಕೆ. ರಾಮಯ್ಯ ತಮ್ಮ ಬದುಕಿನಲ್ಲಿ ರೇಷ್ಮೆಯ ಪಾತ್ರ ಹೇಗೆ ಹಾಸುಹೊಕ್ಕಾಗಿದೆಯೆಂಬುದನ್ನು ಪ್ರಸ್ತಾಪಿಸಿ ಶೀರ್ಷಿಕೆಯಲ್ಲೂ ರೇಷ್ಮೆಯನ್ನೇ ಎಳೆತಂದಿದ್ದಾರೆ.

ಕಡಿದಾಳ್ ಮಂಜಪ್ಪನವರ ಆತ್ಮಕಥೆ ಆ ದಿನಗಳಲ್ಲಿ ತುಸು ಚರ್ಚೆಗೆ, ವಿವಾದ ಅಲ್ಲ, ಗ್ರಾಸವಾಗಿತ್ತು. ಕಾರಣ ಅವರು ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೂ ಎರಡನೇ ವಿವಾಹಕ್ಕೆ ಪ್ರಯತ್ನಿಸಿದ್ದರೆಂದು ಹೇಳುತ್ತಾ ವಿವಾಹೇತರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದರು. ಇನ್ನುಳಿದವರೆಲ್ಲ ತಮ್ಮ ಬಗ್ಗೆ ಬರೆಸಿಕೊಂಡವರು!

ರಾಜಕೀಯ ಬಯಾಗ್ರಫಿಗಳ ಪೈಕಿ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿರುವುದು ಪತ್ರಕರ್ತ ದಿವಂಗತ ಐ.ಕೆ. ಜಹಗೀರದಾರ್, ದೇವರಾಜ ಅರಸು ಬಗ್ಗೆ ಬರೆದಿರುವ 'ಅರಸು ಆಡಳಿತರಂಗ" ಹಾಗೂ ಪತ್ರಕರ್ತ ಆರ್.ಟಿ. ವಿಠಲಮೂರ್ತಿ ಗುಂಡೂರಾಯರ ಬಗ್ಗೆ ಬರೆದಿರುವುದು. ಕರ್ನಾಟಕ ವಿಧಾನಮಂಡಲ ಸಂಸದೀಯ ಪಟುಗಳು, ಮಾಜಿ ಮುಖ್ಯಮಂತ್ರಿಗಳು, ಸ್ಪೀಕರ್ ಮುಂತಾದವರ ಬಯಾಗ್ರಫಿಗಳನ್ನು ಪ್ರಕಟಿಸಿದೆ. ಕೆಲವನ್ನು ಬಿಟ್ಟರೆ ಉಳಿದವು ಬರೀ ಬುರ್ನಾಸು. ಶಾಸನಸಭೆಗಳಲ್ಲಿ ಕೇಳಿದ ಪ್ರಶ್ನೋತ್ತರಗಳಿಗೆ ಸ್ವಲ್ಪ ಬಯೋಡಾಟ ವಿವರ ಸಿಂಪಡಿಸಿ ಸರಕಾರಿ ಕಡತದಂತೆ ಸಿದ್ಧಪಡಿಸಿದ ಕೃತಿಗಳವು. ಯಾರಿಗಾಗಿ ಆ ಜೀವನಕಥೆಗಳನ್ನು ರೂಪಿಸುತ್ತಾರೋ ಗೊತ್ತಿಲ್ಲ.

ಅದಿರಲಿ ಬಿಡಿ. ವಿಶ್ವನಾಥ್ ಫೋನಿನಲ್ಲಿ ಮಾತಾಡಿದ ಎರಡು ದಿನಗಳೊಳಗೆ ಹಸ್ತಪ್ರತಿ ಕಳುಹಿಸಿಕೊಟ್ಟರು. ರಾಜಕಾರಣಿಗಳ, ಮಂತ್ರಿಗಳಾಗಿದ್ದವರ ಆತ್ಮಕಥೆಯೆಂದರೆ ರಸವತ್ತಾಗಿಯೇ ಇರುತ್ತದೆ (ಎಷ್ಟೇ ಕೆಟ್ಟದಾಗಿ ಬರೆದಿದ್ದರೂ), ಅದರಲ್ಲೂ ವಿಶ್ವನಾಥರು ಬರೆದಿದ್ದಾರೆಂದರೆ ರಂಜನೀಯವಾಗಿರಲೇಬೇಕು, ಯಾಕೆಂದರೆ ಯಾವುದೇ ಪ್ರಸಂಗವನ್ನಾಗಲಿ ಅವರು ಸೊಗಸಾಗಿ ಹೇಳುತ್ತಾರೆಂಬುದು ಗೊತ್ತಿದ್ದರಿಂದ ಕುತೂಹಲದಿಂದ ಓದಲಾರಂಭಿಸಿದೆ. ನಾಲ್ಕು ತಾಸಿನೊಳಗೆ ಪುಸ್ತಕದ ಕೊನೆಯ ಸಾಲಿನ ತನಕ ಬಂದು ನಿಂತಿದ್ದೆ.

ಅಷ್ಟೊಂದು ಸಲೀಸಾಗಿ, ನಿರಾಯಾಸವಾಗಿ ಓದಿಸಿಕೊಂಡು ಹೋಯಿತು. ಈ ಕೃತಿಯನ್ನು ಓದಿದ ಬಳಿಕ ವಿಶ್ವನಾಥ್ ಅವರ ಬಗ್ಗೆ ಮತ್ತಷ್ಟು ಹೆಮ್ಮೆ, ಅಭಿಮಾನ ಮೂಡಿತು. ಇಡೀ ಆತ್ಮಕಥೆಯಲ್ಲಿ ಎಲ್ಲಿಯೂ ತಮ್ಮನ್ನು ವೈಭವೀಕರಿಸುವುದಿಲ್ಲ, ಪದೇ ಪದೆ 'ನಾನು, ನಾನು" (I trouble) ಎಂದು ಗೋಳು ಹುಯ್ದುಕೊಳ್ಳುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ತಾವು ಕಂಡ ಸತ್ಯಗಳನ್ನು ಸ್ವಲ್ಪವೂ ಮರೆಮಾಚದೇ ನೇರವಾಗಿ ಎಲ್ಲವನ್ನೂ ಒಪ್ಪಿಸಿದ್ದಾರೆ.

ವಿಶ್ವನಾಥ್‌ಗೆ ತಕ್ಷಣ ಫೋನ್ ಮಾಡಿ, “ನಿಮ್ಮ ಕಥೆಯಲ್ಲಿ ಆತ್ಮವಿದೆ. ಜೀವನವೂ ಇದೆ, ಜೀವನದೃಷ್ಟಿಯೂ ಇದೆ. ನೀವು ಇಷ್ಟೊಂದು ಸೊಗಸಾಗಿ ಬರೆಯುತ್ತೀರೆಂಬುದು ಗೊತ್ತಿರಲಿಲ್ಲ. ದಯವಿಟ್ಟು ಇದನ್ನು ಪುಸ್ತಕರೂಪದಲ್ಲಿ ಪ್ರಕಟಿಸಿ. ಪುಸ್ತಕ ಬಿಡುಗಡೆಗೆ ನನ್ನನ್ನು ಕರೆಯಲು ಮರೆಯಬೇಡಿ. ಖಂಡಿತಾ ಬರುತ್ತೇನೆ" ಎಂದೆ. ಅದಾಗಿ ಒಂದು ತಿಂಗಳಲ್ಲಿ ಪುಸ್ತಕ ಸಿದ್ಧವಾಯಿತು.

ಈ ಮಧ್ಯೆ ವಿಶ್ವನಾಥ್ ಒಮ್ಮೆ ಸಿಕ್ಕರು. ಆಗ ಅವರ ಮುಂದೆ ಹೇಳಿದ್ದೆ- “ವಿಶ್ವನಾಥ್, ನಿಮ್ಮ ಆತ್ಮಕಥೆಯನ್ನು ವಿಜಯ ಕರ್ನಾಟಕದಲ್ಲಿ ಸೀರಿಯಲ್ ರೂಪದಲ್ಲಿ ಪ್ರಕಟಿ ಸಿದರೆ ಹೇಗೆ ಎಂಬ ಆಲೋಚನೆ ನನ್ನನ್ನು ಕಾಡುತ್ತಿದೆ. ಯಾವುದಾದರೂ ಸೂಕ್ತ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದೇನೆ." ನಿರ್ಧಾರ ನಿಮಗೆ ಬಿಟ್ಟಿದ್ದು, ನಾನೇನು ಹೇಳಲಿ ಎಂಬರ್ಥದಲ್ಲಿ ನಗುಚೆಲ್ಲಿ ಅವರು ಏನೂ ಮಾತಾಡದೇ ಸುಮ್ಮನಾಗಿದ್ದರು. ಇಲ್ಲಿ ವಿಶ್ವನಾಥ್ ಎಂಬ ವ್ಯಕ್ತಿಗಿಂತ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮೇಲೇರಿ, ವೈವಿಧ್ಯಮಯ ಅನುಭವಗಳನ್ನು ಸಂಪಾದಿಸಿ, ಶಾಸಕನಾಗಿ, ಮಂತ್ರಿಯಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡ ಪರಿ, ಮಾಡಿದ ಕೆಲಸ, ವರ್ತಿಸಿದ ರೀತಿ, ಬೇರೆ ಬೇರೆ ಕಾಲಖಂಡಗಳಲ್ಲಿನ ರಾಜಕೀಯ ಸ್ಥಿತಿಗತಿ, ತೆರೆಮರೆ ಸನ್ನಿವೇಶ, ಪರಿಸ್ಥಿತಿ ಅನಿವಾರ್ಯತೆ... ಹೀಗೆ ಅನೇಕ ಸಂಕೀರ್ಣಗಳಿಂದ ಆತ್ಮಕಥೆ ಪ್ರಾಮುಖ್ಯ ಪಡೆಯುತ್ತದೆ.

ಸೀರಿಯಲ್ ಆಲೋಚನೆಗೆ ಮೂರ್ತರೂಪ ಕೊಡುವ ಹೊತ್ತಿಗೆ ಪುಸ್ತಕ ಮೈದಾಳಿ, ಆಮಂತ್ರಣವೂ ಕೈಸೇರಿತು. ಡಾ. ಯು.ಆರ್. ಅನಂತಮೂರ್ತಿಯವರಿಂದ ಪುಸ್ತಕ ಬಿಡುಗಡೆ, ನಾನು ಮುಖ್ಯ ಅತಿಥಿ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆ. ಅಂದು ಸಾಯಂಕಾಲ ಐದು ಗಂಟೆಗೆ ಮೈಸೂರು ತಲುಪುವಾಗ ಪುಸ್ತಕ ಬಿಡುಗಡೆಗೆ ಕೆಲವರು ಅಡ್ಡಿಪಡಿಸುತ್ತಿರುವುದು ತಿಳಿಯಿತು. ನಾನು ಶ್ರೀನಿವಾಸ ಪ್ರಸಾದ್ ಮನೆಗೆ ಹೋದೆ. ವಿಶ್ವನಾಥ್ ಅಲ್ಲಿಯೇ ಇದ್ದರು. ಅಷ್ಟರಲ್ಲಿ ಡಾ. ಅನಂತಮೂರ್ತಿ ಕಾರ್ಯಕ್ರಮ ಸ್ಥಳಕ್ಕೆ ತಲುಪಿದ್ದುದು, ಅವರನ್ನು ಪ್ರತಿಭಟನಾಕಾರರು ಜಗ್ಗಿ ಎಳೆದಾಡಿದುದು, ಪೊಲೀಸ್ ರಕ್ಷಣೆಯಲ್ಲಿ ಅವರನ್ನು ಸಭಾಂಗಣಕ್ಕೆ ಕರೆತಂದು ಕೂಡ್ರಿಸಿದ್ದು, ತ್ವೇಷಮಯ ಪರಿಸ್ಥಿತಿ ನೆಲೆಸಿದ್ದು ತಿಳಿಯಿತು.

ಕೊನೆಗೆ ವಿಶ್ವನಾಥ್‌ರನ್ನು ಅಲ್ಲಿಯೇ ಬಿಟ್ಟು ನಾನು ಹಾಗೂ ಶ್ರೀನಿವಾಸ ಪ್ರಸಾದ್ ಸಭಾಂಗಣಕ್ಕೆ ಹೋದೆವು. ಹೋಗುತ್ತಿದ್ದಂತೆ ಮುನ್ನೂರು ಜನರಿದ್ದ ಗುಂಪು ಶ್ರೀನಿವಾಸ ಪ್ರಸಾದ್‌ರನ್ನು ಸುತ್ತುವರಿದು ಪುಸ್ತಕ ಬಿಡುಗಡೆ ಮಾಡದಂತೆ ಒತ್ತಾಯಿಸಿತು. ಕೊನೆಗೂ ಪುಸ್ತಕ ಬಿಡುಗಡೆಯಾಗಲಿಲ್ಲ. ಬಲವಂತವಾಗಿ ಮುಚ್ಚಿದ ಸಭಾಂಗಣದಲ್ಲಿ ಡಾ. ಅನಂತಮೂರ್ತಿಯವರು ಮಾತ್ರ ಮಾತಾಡಿದರು. ಕಾರ್ಯಕ್ರಮ ಅಲ್ಲಿಗೆ ಮುಗಿಯಿತು.

ವಿಶ್ವನಾಥ್ ತಮ್ಮ ಕೃತಿಯಲ್ಲಿ ಎಸ್.ಎಂ. ಕೃಷ್ಣ ಹಾಗೂ ನಟಿ ಸರೋಜಾದೇವಿ ಅವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದ್ದೇ ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಿದ್ದ ಒಬ್ಬರೇ ಒಬ್ಬರು ವಿಶ್ವನಾಥ್ ಕೃತಿ ಓದಿರಲಿಲ್ಲ. 'ಮಿಡ್ ಡೇ" ಪತ್ರಿಕೆ ವರದಿಯನ್ನಾಧರಿಸಿ, ಖಾಸಗಿ ಟಿವಿ ಚಾನೆಲ್ ಬಿತ್ತರಿಸಿದ ಸುದ್ದಿ ನೋಡಿಕೊಂಡು, ಸತ್ಯವನ್ನು ಅರಿಯದೇ, ಯಾರದೋ ಮಾತು ಕೇಳಿ, ಇನ್ಯಾರದೋ ಕುಮ್ಮಕ್ಕಿನಿಂದ, ರಾಜಕೀಯ ಲಾಭ ಪಡೆಯಲು ಈ ಕುಕೃತ್ಯವೆಸಗುತ್ತಿದ್ದಾ ರೆಂಬುದು ಎಂಥವನಿಗೂ ಗೊತ್ತಾಗುತ್ತಿತ್ತು. ಕೃಷ್ಣ ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆಂಬ ಹಿನ್ನೆಲೆಯಲ್ಲಿ ಈ ವಿವಾದ ಪ್ರಾಮುಖ್ಯ ಪಡೆದುಕೊಂಡಿತು.

ಆನಂತರ ಶುರುವಾಯಿತು, ಈ ಕೃತಿಯನ್ನು ಸುಡಬೇಕು, ಮುಟ್ಟುಗೋಲು ಹಾಕಬೇಕು, ವಿಶ್ವನಾಥ್ ಕ್ಷಮೆ ಕೇಳಬೇಕು ಎಂಬ ಬಡಬಡಿಕೆ. ತಮಾಷೆಯೆಂದರೆ ಅಲ್ಲಿಯತನಕ ಪುಸ್ತಕ ಮಾರುಕಟ್ಟೆಗೇ ಬಂದಿರಲಿಲ್ಲ. ಹೀಗಾಗಿ ಯಾರೂ ಅದನ್ನು ಓದಿರಲಿಲ್ಲ. ಕೃತಿ ಓದದೇ ಮುಟ್ಟುಗೋಲಿಗೆ ಆಗ್ರಹ! ಎಂಥ ಅವಿವೇಕ! ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೊಬ್ಬರು ವಿಶ್ವನಾಥ್‌ಗೆ ನೋಟಿಸ್ ಜಾರಿ ಮಾಡಲಾಗುವುದೆಂದು ತಿಳಿಸಿದರು. ವಿಶ್ವನಾಥ್ ಪಕ್ಷದವರೇ ಆದ ಉಗ್ರಪ್ಪ, ಕ್ಷಮೆಯಾಚನೆಗೆ ಆಗ್ರಹಿಸಿದರು.

ಅನುಮಾನವೇ ಬೇಡ, ಇವರ್‍ಯಾರೂ ಕೃತಿ ಓದಿದವರಲ್ಲ. ಯಾಕೆಂದರೆ ಕೃತಿ ಓದಿದ್ದಿದ್ದರೆ ಗಲಾಟೆ ಮಾಡುತ್ತಿರಲಿಲ್ಲ. ವಿಶ್ವನಾಥ್ ಎಲ್ಲೂ ಕೂಡ ಕೃಷ್ಣ-ಸರೋಜಾದೇವಿಗೆ ಸಂಬಂಧವಿತ್ತೆಂದು ಹೇಳಿಲ್ಲ. 'ಅವರಿಬ್ಬರೂ ಪರಸ್ಪರ ಪ್ರೀತಿ ಬಲೆಯಲ್ಲಿದ್ದರು ಎನ್ನುವ ಸ್ವಾರಸ್ಯ ಕಥೆ ಹಿಂದೆ ಚಾಲ್ತಿಯಲ್ಲಿದ್ದುದನ್ನು ಕೇಳಿದ್ದೆ" ಎನ್ನುತ್ತಾರೆ. ಇಂಥ ಕಥೆಗಳು ಎಲ್ಲರ ಬಗೆಗೂ ಇರುತ್ತವೆ. ಹಾಗೆ ನೋಡಿದರೆ ಈ ಪ್ರಸಂಗದಲ್ಲಿ ಅವರು ಗೇಲಿ ಮಾಡಿಕೊಂಡಿದ್ದು ತಮ್ಮನ್ನೇ. ಇಲ್ಲಿ ಮತ್ತೊಂದು ಸಂಗತಿ ಗಮನಿಸಬೇಕು. ಅದೇನೆಂದರೆ ವಿಶ್ವನಾಥ್‌ರ ಉದ್ದೇಶ. 'ಪಾಂಚಜನ್ಯ"ದ ಗಾರುಡಿಗ ಎಂಬ ಶೀರ್ಷಿಕೆಯಡಿಯಲ್ಲಿ ವಿಶ್ವನಾಥ್, ಕೃಷ್ಣರನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಾ, ತಮಗೆ ಅವರೊಂದಿಗಿನ ಸಲುಗೆ, ಸಂಬಂಧ, ಆತ್ಮೀಯತೆಯನ್ನು ಬರೆಯುತ್ತಾ ಸರೋಜಾದೇವಿಯವರ ಹೆಸರನ್ನು ಉಲ್ಲೇಖಿಸುತ್ತಾರೆ.

ಒಂದು ವೇಳೆ ವಿಶ್ವನಾಥ್, ಅವರ (ಸರೋಜಾದೇವಿ) ಹೆಸರನ್ನು ಹೇಳದಿದ್ದರೂ ಜನರಿಗೆ ಅವರು ಯಾರ ಬಗ್ಗೆ ಹೇಳುತ್ತಿದ್ದಾರೆಂಬುದು ಗೊತ್ತಾಗುತ್ತಿತ್ತು. ಆದರೆ ಇಲ್ಲಿ ಕುಚೋದ್ಯ, ನಂಜು ಏನೂ ಇಲ್ಲದ್ದರಿಂದ ನೇರವಾಗಿ ಹೇಳಿದ್ದಾರೆ. ಅಷ್ಟಕ್ಕೂ ಕೃಷ್ಣ ಅವರ ಪತ್ನಿ ಪ್ರೇಮಾ, 'ಕೃಷ್ಣ-ಸರೋಜಾದೇವಿ ಮದುವೆ ಪ್ರಸ್ತಾಪವಿದ್ದಿದ್ದು ನಿಜ. ಆದರೆ ಅದು ಹಿರಿಯರ ವಿರೋಧದಿಂದ ಮುರಿದುಬಿತ್ತು" ಎಂದು ಹೇಳಿದ್ದಾರೆ. ಪ್ರಕರಣ ಅಲ್ಲಿಗೇ ಮುಗಿಯಬೇಕಿತ್ತು. ಆದರೂ ಮುಂದುವರಿದಿರುವುದನ್ನು ನೋಡಿದರೆ ದುರುದ್ದೇಶವಿರುವುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ ಸರೋಜಾದೇವಿಯವರು ವಿಶ್ವನಾಥ್ ವಿರುದ್ಧ ಬೇಸರಿಸಿಕೊಳ್ಳಬೇಕಿಲ್ಲ. ಒಂದು ವೇಳೆ ಈ ಪ್ರಸಂಗದಲ್ಲಿ ಅವರು ಬೇಸರಿಸಿಕೊಳ್ಳಲೇಬೇಕೆಂದಿದ್ದರೆ ಅದು ಮಾಧ್ಯಮಗಳ ಮೇಲೆ! ಅಷ್ಟೆ.

ಬೇರೆಯವರ ಖಾಸಗಿ ವಿಷಯ ಹೇಳುವ ಬದಲು ವಿಶ್ವನಾಥ್ ತಮ್ಮದನ್ನೇ ಹೇಳಿಕೊಳ್ಳಲಿ ಎಂದು ಕೆಲವರು ಸವಾಲು ಹಾಕಿದ್ದಾರೆ. ಅಂಥವರೂ ಸಹ ಈ ಕೃತಿ ಓದದಿರುವುದು ದುರ್ದೈವ. ವಿಶ್ವನಾಥ್ ತಮ್ಮ 'ಲೀಲೆ"ಗಳೆಲ್ಲವನ್ನೂ ಲೀಲಾಜಾಲವಾಗಿ ಹೇಳಿಕೊಂಡಿದ್ದಾರೆ. ತಾವೇಕೆ ಎರಡನೆ ವಿವಾಹವಾಗಬೇಕಾಗಿ ಬಂತು, ಅಂಥ ಅನಿವಾರ್ಯವೇನಿತ್ತು, ಮೊದಲ ಪತ್ನಿಯಿಂದ ಬಂದ ವಿರೋಧ, ಸಂಸಾರದ ನೆಮ್ಮದಿ ಕದಡಿದ್ದು... ಹೀಗೆ ಎಲ್ಲವನ್ನೂ ವಿವರಿಸಿದ್ದಾರೆ. ಪ್ರಾಯಶಃ ಇದನ್ನು ಹೇಳದೇ ಇದ್ದಿದ್ದರೆ ವಿಶ್ವನಾಥ್ ಏನೋ ಮುಚ್ಚಿಟ್ಟಿದ್ದಾರೆಂದೇ ಹೇಳಬಹುದಿತ್ತು. ಈ ಕೃತಿ ಓದುತ್ತಿದ್ದರೆ ವಿಶ್ವನಾಥ್ ಬೇರೆಯವರ ಮೇಲೆ ಕೊಚ್ಚೆ ಎರಚುತ್ತಿದ್ದಾರೆಂದಾಗಲಿ, ಸ್ವವೈಭವೀಕರಣ ಮಾಡಿಕೊಳ್ಳುತ್ತಿದ್ದಾರೆಂದಾಗಲಿ, ಪರಾಕ್ರಮ ಪ್ರದರ್ಶನ ಮೆರೆಯುತ್ತಿದ್ದಾರೆಂದಾಗಲಿ ಅನಿಸುವುದಿಲ್ಲ.

ರಾಜಕಾರಣಿಗಳ ದೌರ್ಬಲ್ಯವೇನೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಯಾರೂ ಹೇಳಿಕೊಳ್ಳುವುದಿಲ್ಲ. ಎಲ್ಲರೂ politically correct ಆಗಿ ಇರಲು ಪ್ರಯತ್ನಿಸುತ್ತಾರೆ. ಎಲ್ಲೋ ಜೆ.ಎಚ್. ಪಟೇಲ್, ವಿಶ್ವನಾಥ್‌ರಂಥವರು ನಿರ್ಭಿಡೆಯಿಂದ ಹೇಳಿಕೊಳ್ಳುತ್ತಾರೆ. ನಾವೆಂಥವರೆಂದರೆ ಸತ್ಯ ಹೇಳಿದವರನ್ನೂ ದೂರವಿಡುವವರು. ನಮಗೆ ಸುಳ್ಳು ಹೇಳುವವರೇ ಚೆಂದ. ಹೀಗಾಗಿ ವಿಶ್ವನಾಥ್‌ರಂಥವರು ವಿವಾದಾಸ್ಪದರಾಗಿ, ಬಾಯಿಚಟ ತೀರಿಸಿಕೊಳ್ಳುವ ರಾಜಕಾರಣಿಯಂತೆ ಗೋಚರಿಸುತ್ತಾರೆ. ಇದು ಅವರಿಗೆ ಮಾಡುವ ಅನ್ಯಾಯ. ಕೃತಿಯುದ್ದಕ್ಕೂ ವಿಶ್ವನಾಥ್ ಬೇಂದ್ರೆ, ಡಿವಿಜಿ, ದಾಸರು, ಯೇಟ್ಸ್, ಗಿಬ್ರಾನ್, ಬಿಎಂಶ್ರೀ, ಉಮರ್ ಖಯ್ಯಾಂ, ಅಡಿಗರನ್ನು Quote ಮಾಡುತ್ತಾ ಹೋಗುತ್ತಾರೆ. ವಿಶ್ವನಾಥ್ ಗೌಣವಾಗಿ, ಒಬ್ಬ ಸಂವೇದನಾಶೀಲ ರಾಜ ಕಾರಣಿಯ ಬದುಕಿನ ವಿವಿಧ ಮುಖಗಳು ಬಯಲಾಗುತ್ತಾ ಹೋಗುತ್ತವೆ.

ಇತ್ತೀಚಿನ ದಿನಗಳಲ್ಲಿ ಉತ್ತಮವೆನಿಸುವಂಥ, ರಾಜ ಕಾರಣಿಯ ಆತ್ಮಕಥನವೊಂದು ನಿಮ್ಮ ಓದಿನಿಂದ ತಪ್ಪಿಹೋಗ ಬಾರದೆಂದು ವಿಶ್ವನಾಥ್ ಬಗೆಗಿನ ತಕರಾರುಗಳನ್ನು ಪಕ್ಕಕ್ಕಿಟ್ಟು, ಅವರ ಪರವಾಗಿ ನಾಲ್ಕು ಮಾತು ಹೇಳಿದ್ದೇನೆ.ಓದಿದ ನಂತರವೂ ತಕರಾರಿದ್ದರೆ ಮುಟ್ಟುಗೋಲಿಗೆ ಆಗ್ರಹಿಸಬಹುದು. ಇದು ಪ್ರಜಾಪ್ರಭುತ್ವ.

( ಸ್ನೇಹ ಸೇತು : ವಿಜಯಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more