ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೇಕಿಂಗ್ ನ್ಯೂಸ್ ಹಾವಳಿ ಸಾಕಪ್ಪಾ ಸಾಕು

By Super
|
Google Oneindia Kannada News

Breaking News or Braking News?
ವ್ಯಾಪಾರಿ ಉದ್ದೇಶಿಗಳಿಗಾಗಿ ಪವಿತ್ರ ಪತ್ರಿಕೋದ್ಯಮದ ನೆಲೆಗಟ್ಟುಗಳನ್ನು ಬಲಿಕೊಡುವುದು ಸಾಧುವಾ? ಮಾಹಿತಿಯ ಸತ್ಯಾಸತ್ಯತೆಗಳನ್ನು ಪರೀಕ್ಷಿಸದೆ ಸುದ್ದಿಯನ್ನು ಬೆರಳ ತುದಿಯಲ್ಲಿ ಕುಣಿಸಿ ಖುಷಿಪಡುವುದು ಸರೀನಾ? ಅರೆಬೆಂದ ಬ್ರೇಕಿಂಗ್ ನ್ಯೂಸ್ ಹರಾಜುಕಟ್ಟೆಗಳಲ್ಲಿ ಹೋದ ಮಾನ ವಾಪಸ್ ಬರುವುದಾ? ಟಿವಿ ವಾಹಿನಿಗಳ ಮಾಲಿಕರು ಮತ್ತು ಅದರ ಸುದ್ದಿಸಂಪಾದಕರಲ್ಲಿ ಒಂದು ಕಳಕಳಿಯ ನಿವೇದನೆ.

ಅಂಕಣಕಾರ : ವಿಶ್ವೇಶ್ವರ ಭಟ್

ಜೀವನದಲ್ಲಿ ನೀವು ಪ್ರಸಿದ್ಧ ವ್ಯಕ್ತಿಯಾದರೆ ಮಾವಿನ ಹಣ್ಣನ್ನು ಗೊರಟೆ ವಾಟೆ ಸಹಿತ ತಿನ್ನಲು ಆಗುವುದಿಲ್ಲ ಎನ್ನುವುದು ವಕ್ರತುಂಡೋಕ್ತಿ. ಆದರೆ ಅದು ವಾಸ್ತವ ಕೂಡ. ಪ್ರಸಿದ್ಧರಾದ ಬಳಿಕ ನೀವು ಸಿಪ್ಪೆ, ಗೊರಟೆ ಸಹಿತ ತಿಂದರೆ ಜನ ನಗುತ್ತಾರೆ, ಮಾವಿನ ಹಣ್ಣನ್ನು ತಿನ್ನಲು ಬರೊಲ್ಲವೆಂದು ವ್ಯಂಗ್ಯವಾಡುತ್ತಾರೆ. ಅದಕ್ಕಾಗಿ ಮಾವಿನ ಹಣ್ಣಿನ ಸಿಪ್ಪೆ ಬಿಡಿಸಿ, ಗೊರಟೆಯನ್ನು ಬಿಸಾಕಿ, ಹೋಳು ಮಾಡಿ, ಪ್ಲೇಟಿನಲ್ಲಿಟ್ಟುಕೊಂಡು ಫೋರ್ಕಿನಲ್ಲಿ ತಿನ್ನಬೇಕಾಗುತ್ತದೆ. ಪ್ರಸಿದ್ಧ ವ್ಯಕ್ತಿಗಳಾಗುವ ತಾಪತ್ರಯವಿದು. ಗೊರಟೆ ಸಹಿತ ತಿಂದರೆ ಅದನ್ನು ಪತ್ರಿಕೆಯವರು ಚಿತ್ರಸಹಿತ ಪ್ರಕಟಿಸಿಬಿಡಬಹುದು!

ಸೆಲಬ್ರಿಟಿಯಾಗಲು ಎಲ್ಲರೂ ಆಸೆಪಡುತ್ತಾರೆ. ಕೂಲಿಂಗ್‌ಗ್ಲಾಸನ್ನು ಹಾಕಿಕೊಂಡು ರೂಪ ಹೆಚ್ಚಿಸಿಕೊಳ್ಳಲು ಬಯಸುತ್ತಾರೆ. ಸೆಲಬ್ರಿಟಿಯಾದ ಬಳಿಕ ಕೂಲಿಂಗ್ ಗ್ಲಾಸನ್ನು ಧರಿಸಿ ವೇಷ ಮರೆಸಿಕೊಳ್ಳುತ್ತಾರೆ. ಪತ್ರಕರ್ತರು, ಛಾಯಾಗ್ರಾಹಕರು, ಟಿವಿ ಪತ್ರಕರ್ತರ ಕಾಟದ ಭಯ! ಇವರು ಎಲ್ಲಿಯೇ ಹೋಗಲಿ ಪತ್ರಕರ್ತರು, ಛಾಯಾಗ್ರಾಹಕರು ಬೆನ್ನಟ್ಟುತ್ತಾರೆ. ಮೊದಮೊದಲು ಹೀಗೆ ಬೆನ್ನಟ್ಟುವುದನ್ನು, ಫೋಟೊ ತೆಗೆದು ಪತ್ರಿಕೆಗಳಲ್ಲಿ ಪ್ರಕಟಿಸುವುದನ್ನು ಸೆಲಬ್ರಿಟಿಗಳು ಇಷ್ಟಪಡುತ್ತಾರೆ. ಕೊನೆಗೊಂದು ಸ್ಥಿತಿ ಬರುತ್ತದೆ, ಪತ್ರಕರ್ತರು, ಛಾಯಾಗ್ರಾಹಕರಿಗೆ ಗೊತ್ತಿಲ್ಲದೇ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದೇ ಇಲ್ಲ. ಸಂಘರ್ಷ ಶುರುವಾಗುವುದು ಇಲ್ಲಿಯೇ. ಮಾಧ್ಯಮಗಳು ವ್ಯಕ್ತಿಗಳ ಖಾಸಗಿ ಬದುಕಿನಲ್ಲಿ ಮೂಗು ತೂರಿಸುತ್ತವೆ, ಖಾಸಗಿತನದ ಹರಣ ಮಾಡುತ್ತವೆ ಎಂಬ ಕೂಗು ಕೇಳಲಾರಂಭಿಸುತ್ತವೆ. ಆದರೆ ಅಷ್ಟೊತ್ತಿಗೆ ಆಗಬೇಕಾದ ಹಾನಿ ಆಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಅತಿಯಾದ ಮಾಧ್ಯಮೀಕರಣದಿಂದ ವ್ಯಕ್ತಿಗಳ ಖಾಸಗಿತನ ಹನನವಾಗುತ್ತಿರುವುದು ಸುಳ್ಳೇನಲ್ಲ. ಬ್ರೇಕಿಂಗ್ ನ್ಯೂಸ್, ಸುದ್ದಿ ಸ್ಫೋಟ, ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ) ನೆಪದಲ್ಲಿ ಟಿವಿ ಕ್ಯಾಮೆರಾವನ್ನು ಮಲಗುವ ಕೋಣೆಯೊಳಗೂ ನುಸುಳಿಸುವ ಪ್ರವೃತ್ತಿ ಕಂಡುಬರುತ್ತಿದೆ. ಒಂದೇ ಒಂದು ಕ್ಷಣದಲ್ಲಿ ಯಾರ ಮಾನವನ್ನು ಬೇಕಾದರೂ ಹರಾಜು ಹಾಕಿಬಿಡಬಹುದು. ಕೋರ್ಟು, ಕೇಸು ಅವೆಲ್ಲ ಅನಂತರ. ಅಷ್ಟರೊಳಗೆ ಸರಿಪಡಿಸಲಾಗದ damage ಆಗಿಬಿಟ್ಟಿರುತ್ತದೆ. ಟಿವಿ ಚಾನೆಲ್‌ಗಳು ಯಾರನ್ನು ಬೇಕಾದರೂ ತಪ್ಪಿತಸ್ಥರನ್ನಾಗಿ, ಕೊಲೆಗಾರನನ್ನಾಗಿ, ದೋಷಿಯಾಗಿ, ನಿರ್ದೋಷಿಯಾಗಿ ನಿಲ್ಲಿಸಿಬಿಡಬಹುದು. ಅಷ್ಟೇ ಅಲ್ಲ ಇವನೇ ಕೊಲೆಗಾರ, ಇವನಲ್ಲ ಅಪರಾ ಎಂದು ಜಡ್ಜ್‌ಮೆಂಟ್ ಕೊಟ್ಟುಬಿಡಬಹುದು.

ಈಗ ಆಗುತ್ತಿರುವುದೂ ಅದೇ. ಒಂದು ಪ್ರಕರಣ ಕೋರ್ಟಿನ ಮೆಟ್ಟಿಲೇರಿ, ವಾದ-ಪ್ರತಿವಾದ ನಡೆದು ವಿಚಾರಣೆ ಮುಗಿದು ತೀರ್ಪು ನೀಡುವ ಹೊತ್ತಿಗೆ ಮೂರ್ನಾಲ್ಕು ವರ್ಷಗಳಾದರೂ ಬೇಕು. ಆದರೆ ಮಾಧ್ಯಮಗಳು ಅದರಲ್ಲೂ ಟಿವಿ ಮಾಧ್ಯಮ ರಾತ್ರಿ ಬೆಳಗಾಗುವುದರೊಳಗೆ ಆರೋಪಿಯನ್ನು ಬೆತ್ತಲೆ ನಿಲ್ಲಿಸಿ ತೀರ್ಪು ಕೊಟ್ಟುಬಿಡುತ್ತವೆ. ಒಂದು ಸಲ ಲೋಕದ ಎದುರು ಬೆತ್ತಲೆಯಾಗಿ ನಿಂತ ಮೇಲೆ ಎಷ್ಟೂಂತ ಮಾನ ಮುಚ್ಚಿಕೊಳ್ಳಲು ಸಾಧ್ಯ? ಒಮ್ಮೆ ಹೋದ ಮಾನ ವಾಪಸ್ ಬರುವುದುಂಟಾ? ಅನಂತರ ಯಾವಜ್ಜೀವ ಲೋಕನಿಂದಿತರಾಗಿಯೇ ಬದುಕಬೇಕಲ್ವಾ? ಒಂದು ವೇಳೆ ವಿಚಾರಣೆ ನಡೆದು ನಿರ್ದೋಷಿಯೆಂದು ತೀರ್ಪು ನೀಡಿದರೆ ಟಿವಿ ಚಾನೆಲ್‌ನಲ್ಲಿ ಹೋದ ಮಾನ ವಾಪಸ್ ಬರುವುದಾ?

ಹೀಗಾಗಿ ಪ್ರತಿ ಎಪಿಸೋಡ್‌ಗಳೂ ಎಪಿಸೇಡುಗಳಾಗುವ ಸಾಧ್ಯತೆಯಿರುತ್ತದೆ. ಟಿವಿ ಕ್ಯಾಮೆರಾಗಳಿಗೆ ಯಾರನ್ನು ಬೇಕಾದರೂ ಕಣ್ಣಿಗೆ ಕಟ್ಟುವಂತೆ ನಂಬಿಸುವ ಶಕ್ತಿಯಿದೆ. ಒಬ್ಬ ವ್ಯಕ್ತಿಯ ಬೇರೆ ಬೇರೆ ಸಂದರ್ಭಗಳ ದೃಶ್ಯಗಳನ್ನು ಸೇರಿಸಿಕೊಂಡು ಅಪೇಕ್ಷಿತ ಕಥೆ ಕಟ್ಟಿ ಅದಕ್ಕೆ ಹಿನ್ನೆಲೆ ದನಿ ಸೇರಿಸಿ ನಮಗೆ ಬೇಕಾದ ಎಪಿಸೇಡ್'ನ್ನು ಮಾಡಲು ಸಾಧ್ಯವಿದೆ. ಯಾರೂ ತಳ್ಳಿಹಾಕಲು ಸಾಧ್ಯವಾಗದಂಥ, ನೋಡಿದವರೆಲ್ಲ ನಿಜವೆಂದೇ ನಂಬುವಂತೆ ಬಿಂಬಿಸಲು ಸಾಧ್ಯವಿದೆ. ಬ್ರಿಟನ್‌ನಲ್ಲಿ ಇಂಥ ಕಲ್ಪಿತ ಕಾರ್ಯಕ್ರಮ ಜನಪ್ರಿಯವಾಗಿ ಅದನ್ನು ಅರ್ಧಕ್ಕೆ ನಿಲ್ಲಿಸಿದ್ದು ನಮಗೆಲ್ಲ ಗೊತ್ತಿದೆ. ದೃಶ್ಯಗಳ ತುಣುಕುಗಳನ್ನೇ ಸೇರಿಸಿಕೊಂಡು ಬೇಕಾದ ಹಾಗೆ ಕತೆ ಹೆಣೆಯಬಹುದು ಎಂಬುದನ್ನು ತೋರಿಸುವುದು ಇದರ ಉದ್ದೇಶವಾಗಿತ್ತು. ಟಿವಿ ಕೆಮರಾ ಸುಳ್ಳು ಹೇಳದಿದ್ದರೂ, ನಂಬಿಸುವ ಗುಣ ಅದಕ್ಕಿದೆ. ಹೀಗಾಗಿ ಏನನ್ನು ಬೇಕಾದರೂ ಅದು ನಂಬಿಸುತ್ತದೆ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಬೇಕೆಂಬ ವಿವೇಚನೆಯನ್ನು ಮರೆಯಿಸುತ್ತದೆ. ಅಷ್ಟಕ್ಕೂ ಆ ವಿವೇಚನೆ ಎಷ್ಟು ಜನರಿಗಿದೆ? ಹೀಗಾಗಿ ಬ್ರೇಕಿಂಗ್ ನ್ಯೂಸ್ ಎಂಬುದು ಬ್ರೆಕಿಂಗ್ ನ್ಯೂಸೆನ್ಸ್' ಆಗಿಬಿಟ್ಟಿದೆ.

ಯಾರೋ ಗಣ್ಯರು ತೀರಿಕೊಂಡರಂತೆ ಎಂದು ಹೇಳಿದರೆ ಸಾಕು, ಟಿವಿ ಚಾನೆಲ್‌ಗಳು ಹಿಂದೆಮುಂದೆ ನೋಡದೇ, ಮಾಹಿತಿಯನ್ನು ದೃಢಪಡಿಸಿಕೊಳ್ಳದೇ ಏಕಾಏಕಿ ಪ್ರಸಾರ ಮಾಡಿಬಿಡುತ್ತವೆ. ಯಾವ ಚಾನೆಲ್, ಯಾವ ಸುದ್ದಿಯನ್ನು ಮೊದಲು ಬಿತ್ತರಿಸಿತು ಎಂಬುದು ಅಗ್ಗಳಿಕೆಯ ಸಂಗತಿಯಾಗಿರುವುದರಿಂದ, ಎಲ್ಲರಿಗಿಂತ ಮೊದಲು ತಾನೇ ಸುದ್ದಿಯನ್ನು ಬ್ರೇಕ್ (ಸಿಡಿಸುವುದು) ಮಾಡಬೇಕೆಂದು ತಾಮುಂದು ನಾಮುಂದು ಎಂದು ಮುಗಿಬೀಳುತ್ತವೆ. ಯಾರೂ Factsಗಳನ್ನು cross-check ಮಾಡುವುದಿಲ್ಲ.

ಒಮ್ಮೆ ಬ್ರೇಕಿಂಗ್ ನ್ಯೂಸ್‌ನಲ್ಲಿ ಸುದ್ದಿ ಬಿತ್ತರವಾದರೆ ಸಾಕು, ಕಾಳ್ಗಿಚ್ಚಿನಂತೆ ಹಬ್ಬುತ್ತದೆ. ಅದೆಂಥ ಅವಾಂತರ, ಅನಾಹುತಗಳನ್ನು ಮಾಡಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಟಿವಿ ಚಾನೆಲ್‌ಗಳು ನಕಾರಾತ್ಮಕವಾಗಿ ಎಂಥ ಪರಿಣಾಮ ಬೀರುತ್ತಿವೆಯೆಂಬುದಕ್ಕೆ ಒಂದೇ ಸುದ್ದಿ ಅಥವಾ ದೃಶ್ಯದ ತುಣುಕನ್ನು ಪದೇ ಪದೆ ತೋರಿಸುವುದೇ ಸಾಕ್ಷಿ. ವೀಕ್ಷಕರ ಚಿತ್ತಭಿತ್ತಿಯಲ್ಲಿ ಆ ದೃಶ್ಯಗಳು ಎಂದೂ ಅಳಿಯದಂತೆ ಅಚ್ಚೊತ್ತಿಬಿಡುತ್ತವೆ. ಅಷ್ಟೇ ಅಲ್ಲ, ವೀಕ್ಷಕರ ಮನಸ್ಸಿನಲ್ಲಿ ಸುತ್ತಿಗೆಯಲ್ಲಿ ಹೊಡೆದಂತೆ (hammering) ಕುಟ್ಟುತ್ತಿರುತ್ತದೆ. ಹಾವೇರಿ ಗೋಲಿಬಾರ್‌ನಲ್ಲಿ ರೈತನೊಬ್ಬ ಪೊಲೀಸ್ ಗುಂಡಿಗೆ ಸತ್ತ ದೃಶ್ಯವನ್ನು ಸಾವಿರಾರು ಸಲ ತೋರಿಸಿದರೆ, ಗುಂಡು ಹಾರಿದ್ದನ್ನು ಬಾಣ ಹಾಕಿ, ಗುಂಡು ಬಿದ್ದಿದ್ದನ್ನು ಸರ್ಕಲ್ ಹಾಕಿ ತೋರಿಸಿದರೆ ವೀಕ್ಷಕನಿಗೆ ಏನಾಗಬೇಡ? ಇಂಥ ದೃಶ್ಯಗಳನ್ನು ನೋಡಿದ ದುರ್ಬಲ ಮನಸ್ಸಿನ ವೀಕ್ಷಕ ಕಳವಳಕ್ಕೊಳಗಾಗುವುದರಲ್ಲಿ ಸಂದೇಹವಿಲ್ಲ. ಇದು ಮತ್ತಷ್ಟು ದಂಗೆಗೆ ಪ್ರಚೋದನೆಯಾಗಬಹುದು. ಪೊಲೀಸರ ಮೇಲಿನ ಆಕ್ರೋಶಕ್ಕೆ ಇಂಬು ನೀಡಬಹುದು.

ಉಡುಪಿ ಶಾಸಕರ ಪತ್ನಿಯ ಆತ್ಮಹತ್ಯೆ ಪ್ರಕರಣವನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಸರ್ವತ್ರ ಆಕ್ಷೇಪಕ್ಕೆ ಒಳಗಾಗಿದೆ. ಮಾಧ್ಯಮಗಳು ಬೇಕಾಬಿಟ್ಟಿ ವರದಿ ಮಾಡಿದ್ದೇ ಆಕೆಯ ಸಾವಿಗೆ ಕಾರಣವಾಯಿತೆಂದು ಹೇಳಲಾಗುತ್ತಿದೆ. ಮಾಧ್ಯಮಗಳ ವರದಿಯಿಂದ ಕಂಗೆಟ್ಟ ಆ ಹೆಣ್ಣುಮಗಳು ಸಾವೊಂದೇ ಪರಿಹಾರವೆಂಬ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ. ಈ ಪ್ರಕರಣದ ಟ್ರಯಲ್‌ನ್ನು ಈಗಾಗಲೇ ಮುಗಿಸಿರುವ ವಿಕಟ ಆನಂದ ಮಾಧ್ಯಮಗಳದು. ಶಾಸಕರ ಖಾಸಗಿ ಜೀವನ ಈಗ ಬೀದಿಗೆ ಬಿದ್ದಂತಾಗಿದೆ. ಜಗಜ್ಜಾಹೀರು ಆಗಿದೆ. ಪತ್ನಿ ಕಳೆದುಕೊಂಡ ದುಃಖಕ್ಕಿಂತ ಲೋಕನಿಂದಿತನಾಗಬೇಕಾದುದಕ್ಕೆ ಇನ್ನೂ ಸಂಕಟವಾಗುತ್ತಿರಬಹುದು. ವಸ್ತುಸ್ಥಿತಿ ಏನೋ ಗೊತ್ತಿಲ್ಲ. ಆದರೆ ಆತ್ಮಹತ್ಯೆ ಪ್ರಕರಣದ ಎಳೆಎಳೆಯನ್ನು ಮಾಧ್ಯಮಗಳು ಬಿಚ್ಚಿ ಇಟ್ಟಿವೆ. ಟಿವಿ ಚಾನೆಲ್‌ಗಳಂತೂ ತೀರ್ಪು ನೀಡಿ ಷರಾ ಬರೆದುಬಿಟ್ಟಿವೆ. ಅವುಗಳ ಪಾಲಿಗೆ ಈ ಪ್ರಕರಣ ಮುಗಿದ ಅಧ್ಯಾಯ.

ದಿಲ್ಲಿಯ ಆರುಷಿ ತಲ್ವಾರ್ ಕೊಲೆ ಪ್ರಕರಣವಂತೂ ಟಿವಿ ವರದಿಗಾರಿಕೆಯ ಅಧಃಪತನದ ಸಂಕೇತ. ಟಿವಿ ಚಾನೆಲ್‌ಗಳು ಯಾರ್‍ಯಾರನ್ನೋ ತಮ್ಮ ಸ್ಟುಡಿಯೋಗಳಿಗೆ ಕರೆತಂದು ಭೂತದ ಬಾಯಲ್ಲಿ ಭಗವದ್ಗೀತೆ' ಹೇಳಿಸುವ ರೀತಿಯಲ್ಲಿ ಅಭಿಪ್ರಾಯಗಳನ್ನು ಮೂಡಿಸಿ ಅಥವಾ ಉತ್ಪಾದಿಸಿ ಜನರ ಮೇಲೆ ಉಗುಳುತ್ತಿವೆ. ಸ್ಟುಡಿಯೋಕ್ಕೆ ಬಂದು ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ತಮಗೆ ಅನಿಸಿದ್ದನ್ನು ಹೇಳಿ ಇಡೀ ಪ್ರಕರಣವನ್ನು ಕಗ್ಗಂಟಾಗಿಸಿದ್ದಾರೆ. ಆರುಷಿ ತಂದೆಯ ಗುಣ, ಶೀಲ, characterಗಳ ಬಗ್ಗೆ ಇನ್ನು ಹೇಳುವುದನ್ನು ಯಾರೂ ಬಾಕಿ ಉಳಿಸಿಲ್ಲ. ಅವರಿಗೆ ಯಾರ್‍ಯಾರ ಜತೆ ಸಂಬಂಧವಿತ್ತೆಂಬುದನ್ನು ಹೇಳುವ ಧಾವಂತದಲ್ಲಿ ಅವರ ಸಹೋದ್ಯೋಗಿ ವೈದ್ಯೆಯರ ಶೀಲವನ್ನೂ ಹರಣ ಮಾಡಿಬಿಟ್ಟಿವೆ. ಟಿವಿ ನಿರೂಪಕ ನ್ಯಾಯಾಶನ ಸ್ಥಾನದಲ್ಲಿ ಕುಳಿತಿದ್ದೇನೆಂದು ಭಾವಿಸಿ ಯದ್ವಾತದ್ವಾ ಪ್ರಶ್ನೆಗಳನ್ನು ಕೇಳುತ್ತಾನೆ. ಬೇಕಾದ ಉತ್ತರ ಪಡೆಯುವ ಹುನ್ನಾರದಿಂದ ಅಸಂಬದ್ಧವಾಗಿ ಸಂವಾದಕಾರರನ್ನು ಕೆಣಕುತ್ತಾನೆ. ಅವರೂ ಸಹ ಹಸಿಹಸಿ ಅನಿಸಿಕೆಗಳನ್ನು ಕಕ್ಕುತ್ತಾರೆ. ಕೊನೆಯಲ್ಲಿ ನಿರೂಪಕ ಜಡ್ಜ್‌ಮೆಂಟ್ ಕೊಡುತ್ತಾನೆ.

ಹಾಗಾದರೆ ಕೋರ್ಟ್ ಯಾಕೆ ಬೇಕು? ವಕೀಲರ ಅಗತ್ಯವಿದೆಯೇ? ನ್ಯಾಯಾಂಗದ ಗತಿಯೇನು? ನ್ಯಾಯಾಧೀಶರ ಕೆಲಸವೇನು? ಕೋರ್ಟ್ ತೀರ್ಪು ವಿಳಂಬವಾಗುವುದಾದರೆ ಶೀಘ್ರ ನ್ಯಾಯದಾನದ ಕೆಲಸವನ್ನು ಟಿವಿ ಚಾನೆಲ್‌ಗಳಿಗೆ ವಹಿಸಿಬಿಡಬಹುದಲ್ಲ? ಒಂದೊಂದು ಪ್ರಕರಣವನ್ನು ಒಂದೊಂದು ಚಾನೆಲ್‌ಗೆ ಒಪ್ಪಿಸಿದರೆ ಕೆಲಸ ಇನ್ನೂ ಸುಲಭವಾಗಬಹುದಲ್ಲ? ಹೀಗಾದರೆ ಏನು ಗತಿ? ಮುಕ್ತ ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶವಿರಬೇಕು ನಿಜ. ಅದು ಇದೆಯೆಂದು ಮನಸ್ಸಿಗೆ ಬಂದಂತೆ ಸ್ವಾತಂತ್ರ್ಯ ಬಳಸಿಕೊಂಡರೆ ಏನಾಗಬಹುದು?

ಎಲ್ಲರನ್ನೂ ಕಟಕಟೆಗೆ ನಿಲ್ಲಿಸುವ ಮಾಧ್ಯಮಗಳೇ ಈಗ ಜನರ ಕಣ್ಣಲ್ಲಿ ಕಟಕಟೆಗೇರುವಂತಾಗಿದೆ. ನಮಗೆ ಸಂಯಮ ಸಂಹಿತೆ ಇಲ್ಲದುದೇ ಈ ಎಲ್ಲ ಅಪಸವ್ಯಗಳಿಗೆ ಕಾರಣ. ಟಿಆರ್‌ಪಿ, ಜಾಹೀರಾತುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚಾನೆಲ್ ನಡೆಸಿದರೆ, ಸ್ಪೀಡೋಮೀಟರ್ ನೋಡಿ ಗಾಡಿ ಓಡಿಸಿದಂತಾಗುತ್ತದೆ. ಗಾಡಿಯ ವೇಗ ಅರಿಯಲು ಸ್ಪೀಡೋಮೀಟರ್ ಬೇಕು. ಆದರೆ ಅದೊಂದನ್ನೇ ನೋಡುತ್ತಿದ್ದರೆ ಅಪಘಾತ ಗ್ಯಾರಂಟಿ. ಟಿಆರ್‌ಪಿ, ಜಾಹೀರಾತು ಸಹ ಬೇಕು. ಕಾರ್ಯಕ್ರಮಗಳಿಗೆಲ್ಲ ಅದೇ ಮಾನದಂಡವಾದರೆ, ಮಾನವೂ ದಂಡವಾಗುತ್ತದೆ. ಯಾರ ಮಾನವನ್ನೂ ತೆಗೆಯುವ ಅಧಿಕಾರ ಮಾಧ್ಯಮಗಳಿಗಿಲ್ಲ. ಅದನ್ನು ಯಾರೂ ಇಲ್ಲಿತನಕ ಕೊಟ್ಟಿಲ್ಲ. ಸಾರ್ವಜನಿಕ ಹಿತಾಸಕ್ತಿ ಎಂಬ ನೆಪ ಹೇಳಿ ಮಾಧ್ಯಮಗಳು ಗೆರೆ ದಾಟುವುದುಂಟು. ಆದರೆ ಅಂಥ ಸಂದರ್ಭದಲ್ಲಿ ಜನರೂ ಹಾಗೇ ಅಂದುಕೊಂಡು ಸುಮ್ಮನಾಗುವುದೂ ಉಂಟು.

ಅಮೆರಿಕದ ವಿಶ್ವವ್ಯಾಪಾರ ಕೇಂದ್ರದ ಅವಳಿ ಗೋಪುರಗಳು ಭಯೋತ್ಪಾದಕರ ದಾಳಿಗೆ ನೆಲಸಮವಾದಾಗ ಮೂರು ಸಾವಿರಕ್ಕಿಂತ ಹೆಚ್ಚು ಜನ ಮೃತಪಟ್ಟರು. ಆದರೆ ಅಲ್ಲಿನ ಟಿವಿ ಚಾನೆಲ್‌ಗಳು ಮೃತದೇಹಗಳ ಮೇಲೆ ಟಿವಿ ಕ್ಯಾಮೆರಾಗಳನ್ನು ಇಡಲಿಲ್ಲ. ಹೆಣಗಳ ಸಾಲಿನ ಹಿಂದೆ ನಿಂತವರ ಬಾಯಿಗೆ ಮೈಕನ್ನು ಹಿಡಿಯಲಿಲ್ಲ. ದುರಂತ, ಅಪಘಾತಗಳನ್ನು ವರದಿ ಮಾಡುವಾಗ ಹೆಣಗಳನ್ನು ತೋರಿಸಲೇಬೇಕೆಂದಿಲ್ಲ. ಅದು ಅನಿವಾರ್ಯವೂ ಅಲ್ಲ. ಆದರೆ ನಮ್ಮ ಟಿವಿ ಚಾನೆಲ್‌ಗಳಿಗೇಕೆ ಹೆಣಗಳ ಮೇಲೆ ಅಂಥ ಮೋಹ? ರಕ್ತಪಾತ, ಹೆಣಗಳನ್ನು ಪದೇ ಪದೆ ತೋರಿಸುತ್ತಾ ವೀಕ್ಷಕರ ನಿದ್ದೆಗೆಡಿಸುವುದೇಕೆ?

ರಾಜಕುಮಾರಿ ಡಯಾನಾ ಜೀವನಚರಿತ್ರೆ ಬರೆದ ಜಯ್ನೆ ಫಿಂಚರ್ ಹೇಳುವಂತೆ- ಡಯಾನಾಗೆ ಖಾಸಗಿ ಬದುಕೇ ಇರಲಿಲ್ಲ. ಆಕೆ ಹೋದಲ್ಲಿ, ಬಂದಲ್ಲಿ ಮಾಧ್ಯಮದ ಮಂದಿ ಬೆನ್ನಟ್ಟುತ್ತಿದ್ದರು. ಆಕೆಗೆ ಈಜಲು ಬಿಡುತ್ತಿರಲಿಲ್ಲ. ಜಿಮ್‌ಗೆ ಹೋದರೂ ಫೋಟೊಗ್ರಾಫರ್ ಕದ್ದು ಕ್ಲಿಕ್ಕಿಸಿದ್ದರು. ಆಕೆ ದೂರದಿಂದ ಮಾತಾಡಿದ್ದನ್ನು ಲಿಪ್‌ರೀಡರ್ಸ್ (ತುಟಿ ಚಾಲನೆ ವಾಚಕರು) ಮೂಲಕ ಅರ್ಥೈಸಿಕೊಂಡು ಬ್ರಿಟಿಷ್ ಪತ್ರಕರ್ತರು ವರದಿ ಮಾಡುತ್ತಿದ್ದರು. ಆಕೆಗೆ ಏಕಾಂತವೆಂಬುದೇ ಇರಲಿಲ್ಲ. ನಿಧನವಾದ ಹನ್ನೆರಡು ವರ್ಷಗಳ ನಂತರವೂ ಆಕೆಗೆ ಅಡುಗೆಭಟ್ಟನ ಜತೆ ಸಂಬಂಧವಿತ್ತು, ಡ್ರೈವರ್ ಜತೆ ಮಲಗಿದ್ದಳು ಎಂದೆಲ್ಲ ಮಾಧ್ಯಮಗಳು ವರದಿಮಾಡುತ್ತಿರುತ್ತವೆ. ಆಕೆಯ ಸಾವೂ ಅವಳ ನೆರವಿಗೆ ಬಂದಿಲ್ಲ. ಈಗಲೂ ಅವಳ ಬಗ್ಗೆ ಒಂದಲ್ಲ ಒಂದು ಸುದ್ದಿ ಪ್ರಕಟವಾಗುತ್ತಿರುತ್ತದೆ.

ಅಮೆರಿಕದ ಅಧ್ಯಕ್ಷನಿಗೆ ಜಗತ್ತಿಗೆ ಗೊತ್ತಾಗದಂತೆ ಸೀನಲು ಬರುವುದಿಲ್ಲವಂತೆ. ಹಾಗೆಂದು ಆತ ಸೀನಿದ್ದನ್ನೆಲ್ಲ ಸುದ್ದಿ ಮಾಡಬೇಕೆಂದಿಲ್ಲ. ಆತ ಸೀನಿದ್ದೇಕೆ, ಅದಕ್ಕೂ ಹಿಂದೆ ಸೀನಿದ್ದು ಯಾವಾಗ, ಇದರಿಂದ ಅಮೆರಿಕ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುವುದಾ ಎಂದೆಲ್ಲ ಟಿವಿ ಸ್ಟುಡಿಯೋದಲ್ಲಿ ಕುಳಿತು ಚರ್ಚಿಸಬೇಕಿಲ್ಲ. ನಮ್ಮ ಮೇಲೊಬ್ಬ ಮಾಧ್ಯಮ ಧರ್ಮಾಕಾರಿ (ಓಂಬುಡ್ಸಮನ್) ಬಂದು ಕುಳಿತುಕೊಳ್ಳುವ ಮೊದಲು ಎಚ್ಚರವಾಗುವುದು ಒಳಿತು. (ಸ್ನೇಹಸೇತು : ವಿಜಯಕರ್ನಾಟಕ)

ಓದಲು ಮರೆಯದಿರಿ

ದಕ್ಷ, ಆದರ್ಶ ಟಿವಿ ಪತ್ರಕರ್ತನ ಸಾವು

English summary
Should Indian tv channels be governed by ombudsman? Sensationalising half baked, fact free, breaking news is outrageous on society argues Vishweshwara Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X