ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವು ಅರ್ಥವಾಗದಿದ್ದರೆ ಬದುಕಿನ ಮಹತ್ವ ತಿಳಿಯುವುದಿಲ್ಲ!

By * ವಿಶ್ವೇಶ್ವರ ಭಟ್
|
Google Oneindia Kannada News

The Last Lecture, by Randy Pauschಮನಸ್ಸು ಎರಡು ತಿಂಗಳು ಚುನಾವಣೆ ಗದ್ದಲಗಟ್ಟೆಯಲ್ಲಿ ಬಿದ್ದಿತ್ತು. ಈಗ ಎಂದಿನ ಕೆಲಸ ಕಾರ್ಯ, ಪುಸ್ತಕ, ಓದು, ಬರಹ, ಸಿನಿಮಾ ಹಾಗೂ ಮಾಮೂಲು ಹವ್ಯಾಸಗಳು ಕೈಹಿಡಿಯುತ್ತಿವೆ. ಸುಮಾರು ಎಂಟು ವಾರಗಳ ಹಿಂದೆ ಅಮೆರಿಕದ ನ್ಯೂಸ್‌ಪೇಪರ್ ಸೊಸೈಟಿ ಕಳಿಸಿದ ವಿಶ್ವದ ಅಪರೂಪದ ಪತ್ರಿಕೆಗಳ ಗಂಟನ್ನು ಬಿಚ್ಚಿ ನೋಡಲು ಸಹ ಆಗಿರಲಿಲ್ಲ. ಒಂದೊಂದು ಪತ್ರಿಕೆಗಳ ಮೈದಡವಿದರೆ ಇತಿಹಾಸ ಸ್ಪರ್ಶಿಸಿದಂತೆ. ಲಂಡನ್‌ನ ದಿ ಗಾರ್ಡಿಯನ್' ಪತ್ರಿಕೆ ಕಾರ್ಯಾಲಯಕ್ಕೆ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಭೇಟಿ ನೀಡಿದ ಮರುದಿನದ ಸಂಚಿಕೆ ಗಮನ ಸೆಳೆಯಿತು. ಚರ್ಚಿಲ್ ತಮ್ಮೆಲ್ಲ ಕೆಲಸಗಳ ಮಧ್ಯೆ ಪತ್ರಿಕಾ ಕಾರ್ಯಾಲಯದಲ್ಲಿ ಸಿಗರೇಟು ಸೇದುತ್ತಾ ಸಂಪಾದಕೀಯ ಬರೆದಿದ್ದರು. ಇಂಥ ಅಪರೂಪದ ಪತ್ರಿಕೆಯೊಳಗೆ ತೂರಿಕೊಂಡರೆ ಯಡಿಯೂರಪ್ಪ ಯಾವಾಗ ಪ್ರಮಾಣವಚನ ಸ್ವೀಕರಿಸುತ್ತಾರೆ, ಯಾರು ಮಂತ್ರಿಯಾಗುತ್ತಾರೆ, ಅವರಿಗೇನು ಖಾತೆ ಇತ್ಯಾದಿ ವಿವರಗಳೆಲ್ಲ ಮರೆತು ಹೋಗುವಷ್ಟು ಮನಸ್ಸು ಗಪ್ಪ ಹೊಡೆದು ಕುಳಿತುಬಿಡುತ್ತದೆ. ಕುಲ್ವಾನಿ ರಾಯ್ ಎಂಬ ಭಾರತದ ಶ್ರೇಷ್ಠ ಫೋಟೊ ಜರ್ನಲಿಸ್ಟ್, ಕ್ರಿಕೆಟ್ ವೇಷದಲ್ಲಿ ಬ್ಯಾಟು ಹಿಡಿದು ನಿಂತ ಜವಾಹರ್‌ಲಾಲ್ ನೆಹರು ಚಿತ್ರವನ್ನು ಸೆರೆಹಿಡಿದಿದ್ದ. ಪ್ರಾಯಶಃ ಈ ಚಿತ್ರವನ್ನು ಯಾರೂ ನೋಡಿರಲಿಕ್ಕಿಲ್ಲ. ಅದನ್ನು ಲಂಡನ್‌ನ ದಿ ಟೈಮ್ಸ್' ಪ್ರಕಟಿಸಿತ್ತು. ಪ್ರತಿ ಪತ್ರಿಕೆಯೂ ಇತಿಹಾಸದ ಕೌತುಕ ಘಳಿಗೆಯ ಸಂಕಲನ. ಆರ್‌ಎಸ್‌ಎಸ್ ಗಣವೇಷ ಮಾದರಿಯ ಚೆಡ್ಡಿ ತೊಟ್ಟ ನೆಹರು, ೧೯೩೮ರಲ್ಲಿ ಕಾನ್ಪುರದ ರ್‍ಯಾಲಿಯೊಂದರಲ್ಲಿ ಭಾಗವಹಿಸಿದ ಚಿತ್ರವನ್ನು ನೋಡಿದರೆ ನೆನಪುಗಳು ಇತಿಹಾಸದ ಓಣಿಯೊಳಗೆ ಹಿಂಬರ್ಕಿ ಹೆಜ್ಜೆ ಹಾಕಲಾರಂಭಿಸುತ್ತದೆ.

ಈ ಚುನಾವಣೆಯ ಒತ್ತಡಗಳ ಮಧ್ಯೆಯೂ ಬಿಟ್ಟು ಬಿಟ್ಟು ಆದರೆ ಬಿಡಲಾರದೇ ಎದೆಗೆ ಅವುಚಿಕೊಂಡು ಓದಿದ್ದು ರ್‍ಯಾಂಡಿ ಪಾಶ್ ಬರೆದ The Last Lecture. ಮೂರ್ನಾಲ್ಕು ವಾರಗಳ ಹಿಂದೆ ಈ ಕೃತಿ ಹಾಗೂ ರ್‍ಯಾಂಡಿಯ ಬಗ್ಗೆ ಸಂಕ್ಷಿಪ್ತವಾಗಿ ಜನಗಳ ಮನ' ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಪುಸ್ತಕ ಓದಿದ ಬಳಿಕ ನಿಮಗೆ ಅದರ ಕುರಿತು ಹೇಳುವುದಾಗಿ ತಿಳಿಸಿದ್ದೆ. ಪುಸ್ತಕದ ಕೊನೆಯ ಪುಟದ ಅಂಚಿಗೆ ಬಂದುನಿಂತಾಗ ಮನಸ್ಸು ಭಾರವಾದಂತಾಯಿತು. ಸಾವನ್ನು ಅರ್ಥಮಾಡಿಕೊಳ್ಳದಿದ್ದರೆ ಬದುಕಿನ ಮಹತ್ವ ಅರ್ಥವಾಗುವುದಿಲ್ಲ, ಸಾವು ಎದುರಾಗದೇ ಬದುಕು ಕಾಣುವುದಿಲ್ಲ, ಸಾವಿನ ಸಾಂಗತ್ಯದ ಭಯ, ಬದುಕಿನಲ್ಲಿ ಹೇಗೆ ಆಸೆಗಳನ್ನು ಗರಿಗೆದರಿಸುತ್ತದೆಂಬುದನ್ನು ರ್‍ಯಾಂಡಿ ಅನುಭವದ ಮೂಸೆಯಲ್ಲಿ ಹೇಳುವುದನ್ನು ಕೇಳಿದಾಗ, ಅವನ ಪುಸ್ತಕದ ಕೆಲವು ವಿಚಾರಗಳನ್ನು ನಿಮಗೂ ಉಣಿಸಬೇಕೆನಿಸಿತು.

ಕಳೆದ ವರ್ಷದ ಸೆಪ್ಟೆಂಬರ್ 18ರಂದು ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿರುವ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್‌ಸೈನ್ಸ್ ವಿಭಾಗದ ಪ್ರೊಫೆಸರ್‌ನಾದ ರ್‍ಯಾಂಡಿ ವಿದ್ಯಾರ್ಥಿ ಹಾಗೂ ತನ್ನ ಸಹೋದ್ಯೋಗಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದ. ಸುಮಾರು ಒಂದು ಗಂಟೆ ಅವಯ ಈ ಉಪನ್ಯಾಸವನ್ನು ತಂತ್ರeನದ ನೆರವಿನಿಂದ ಕೋಟ್ಯಂತರ ಜನ ವೀಕ್ಷಿಸಿದರು. ಅದನ್ನೇ ಆಧರಿಸಿ ರ್‍ಯಾಂಡಿ The Last Lecture ಎಂಬ ಪುಸ್ತಕ ಬರೆದ. ಕೇವಲ ನಾಲ್ಕು ದಿನಗಳಲ್ಲಿ ಅದರ ಒಂದೂವರೆ ಲಕ್ಷ ಪ್ರತಿಗಳು ಮಾರಾಟವಾದವು. ನಲವತ್ತೇಳು ವರ್ಷ ವಯಸ್ಸಿನ ರ್‍ಯಾಂಡಿ ಟರ್ಮಿನಲ್ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್(ಗುಣಪಡಿಸಲಾಗದ ಕಾಯಿಲೆ)ನಿಂದ ಬಳಲುತ್ತಿರುವುದಾಗಿ ಅವನನ್ನು ಪರೀಕ್ಷಿಸಿದ ವೈದ್ಯರು ಹೇಳಿದರು. ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಲಾರಂಭಿಸಿತ್ತು. ಅಬ್ಬಬ್ಬಾ ಅಂದ್ರೆ ಮೂರು ತಿಂಗಳು ಬದುಕುಳಿಯಬಹುದೆಂದು ವೈದ್ಯರು ತಿಳಿಸಿದರು. ಮೂರು ಮಕ್ಕಳ ತಂದೆಯಾಗಿರುವ ರ್‍ಯಾಂಡಿ ಧೃತಿಗೆಡಲಿಲ್ಲ. ಸಾವು ಬಂದು ತನ್ನ ಪ್ರಾಣ ತಿನ್ನುತ್ತದೆಂದು ಅಳುತ್ತಾ ಕುಳಿತುಕೊಳ್ಳಲಿಲ್ಲ. ಸಾಯುವುದಂತೂ ಇದ್ದೇ ಇದೆ. ಬದುಕಿರುವಷ್ಟು ದಿನ ಏನು ಮಾಡಬಹುದೆಂದು ಯೋಚಿಸಲಾರಂಭಿಸಿದ. ತನ್ನ ವಿದ್ಯಾರ್ಥಿಗಳಿಗೆ, ಸಹೋದ್ಯೋಗಿಗಳಿಗೆ ಈ ವಿಷಯ ತಿಳಿಸಿದ. ಅವರೆಲ್ಲ ಅವನಿಗೆ ಅನುಕಂಪ ಸೂಚಿಸಿದರು. ರ್‍ಯಾಂಡಿಗೆ ಅದರ ಅಗತ್ಯವೂ ಇರಲಿಲ್ಲ.

ಸಾವಿನ ಮನೆಯಲ್ಲಿ ಕುಳಿತು ದಿನಗಳನ್ನು ಎಣಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳದ ಆತ ವಿದ್ಯಾರ್ಥಿಗಳಿಗೆ ಹೇಳಿದ- ಒಂದು ವೇಳೆ ಇನ್ನು ಕೆಲವೇ ಗಂಟೆಗಳಲ್ಲಿ ನಾನು ಸಾಯುವುದು ಶತಸಿದ್ಧವೆಂದು ನಿರ್ಧಾರವಾದಾಗ, ಬಾ ಒಂದು ಗಂಟೆ ಉಪನ್ಯಾಸ ಮಾಡು ಅಂದ್ರೆ ನಾನೇನು ಮಾತಾಡಬಹುದು? ನಾನೊಬ್ಬ ಉಪನ್ಯಾಸಕ. ನನ್ನ ಜೀವಮಾನದ ಕೊನೆಯ ಉಪನ್ಯಾಸದಲ್ಲಿ ನಾನೇನೆಲ್ಲ ಹೇಳಬಹುದು? ಬನ್ನಿ, ನಾನು ನಾಳೆ ಅಂಥ ಉಪನ್ಯಾಸ ಮಾಡಲಿದ್ದೇನೆ." ನಾನೂರು ಜನ ಅವನ ಉಪನ್ಯಾಸ ಕೇಳಲು ಬಂದಿದ್ದರು.

ಅಂದು ರ್‍ಯಾಂಡಿ Really achieving childhood dreams ಎಂಬ ವಿಷಯ ಕುರಿತು ಮಾತಾಡಿದ. ಸಾವಿನ ಹೆಬ್ಬಾಗಿಲಲ್ಲಿ ನಿಂತವ, ಬದುಕನ್ನು ಹಿಂತಿರುಗಿ ನೋಡಿದ, ತಾನು ಅಲ್ಲಿಯತನಕದ ಬದುಕಿನಲ್ಲಿ ಕಂಡ ಅನುಭವಗಳನ್ನು ಬಸಿದುಕೊಟ್ಟ ಉಪನ್ಯಾಸ ಅದಾಗಿತ್ತು. ಈ ಉಪನ್ಯಾಸವನ್ನು ಒಂದು ಕೋಟಿಗೂ ಹೆಚ್ಚು ಮಂದಿ ಕೇಳಿದ್ದಾರೆ, ನೋಡಿದ್ದಾರೆ. ತನ್ನ ಉಪನ್ಯಾಸದ ಸಾರವನ್ನೆಲ್ಲ ಸಂಗ್ರಹಿಸಿ ರ್‍ಯಾಂಡಿ The Last Lecture ಎಂಬ ಪುಸ್ತಕ ಪ್ರಕಟಿಸಿದ್ದಾನೆ.

ಸಾವಿನ ಕದ ಬಡಿದವನಿಗೆ ಮಾತ್ರ ಬದುಕಿನ ಸತ್ಯ ಗೋಚರಿಸುವುದಂತೆ. ಸಾವಿನ ಸಾಕ್ಷಾತ್ಕಾರ ಮಾತ್ರ ಬದುಕಿನ ಸಾರ್ಥಕ್ಯದ ಚಿಂತನೆಯನ್ನು ಚಿಗುರಿಸುವುದಂತೆ. ರ್‍ಯಾಂಡಿ ಹೇಳಿದ ಇಂಥ ಪುಟ್ಟ ಪುಟ್ಟ ಅನುಭವಸತ್ಯಗಳನ್ನು ಧೇನಿಸೋಣ. * ನಾನು ಯಾರಿಗಾದರೂ ಉಪದೇಶ ಹೇಳಲೇಬೇಕಾದ ಪ್ರಸಂಗ ಬಂದರೆ ಕೇವಲ ಎರಡೇ ಪದಗಳ ಉಪದೇಶ ಹೇಳುತ್ತೇನೆ. ಅದೇನೆಂದರೆ ಸತ್ಯವನ್ನೇ ಹೇಳಿ'. ಇನ್ನೊಂದು ಪದ ಸಿಕ್ಕಿದರೆ ಹೇಳುವುದೇನೆಂದರೆ ಯಾವತ್ತೂ.' ನನ್ನ ತಂದೆ ತಾಯಿಗಳು ನನಗೆ ಸದಾ ಹೇಳುತ್ತಿದ್ದುದೇನೆಂದರೆ You are only as good as your words. ಅಂದರೆ ನೀನು ನಿನ್ನ ಮಾತಿನಷ್ಟೇ ಒಳ್ಳೆಯವನು ಅಂತ. ಅದಕ್ಕಿಂತ ಒಳ್ಳೆಯವನಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಸದಾ ಮಾತಿನಂತೆ ನಡೆದುಕೊಳ್ಳಬೇಕು. ಸತ್ಯ ಹೇಳಿದರೆ ಡಬಲ್ ಚೆಕ್ ಮಾಡುವ ಪ್ರಮೇಯವೇ ಇರುವುದಿಲ್ಲ. ಸತ್ಯಕ್ಕೆ ಹೊದಿಸಬಹುದಾದ ಕವಚವೇ ಸುಳ್ಳು. ಕವಚ ಇರೋತನಕ ನೀವು ಸುರಕ್ಷಿತ. ಆದರೆ ಕವಚ ಶಾಶ್ವತ ಅಲ್ಲ. ನಿಮ್ಮನ್ನು ಕೊನೆತನಕ ಕಾಯುವುದು ಸತ್ಯವೊಂದೇ. * ಕ್ಷಮೆ ಕೇಳುವಾಗ ಪೂರ್ಣ ಮನಸ್ಸಿನಿಂದ ಕೇಳಿ. ನಿಜಕ್ಕೂ ತಪ್ಪಾಯ್ತು ಕ್ಷಮಿಸಿ ಎಂದು ಹೇಳಿ. ಕ್ಷಮೆಯಾಚನೆಯಲ್ಲಿ ತಪ್ಪಿನ ಅರಿವಿನ ದರ್ಶನವಿದೆ. ಒಳ್ಳೆಯತನ ಅರಸುವ ತುಡಿತವಿರುತ್ತದೆ. ಅರ್ಧ ಮನಸ್ಸಿನ ಕ್ಷಮೆಯಾಚನೆಗಿಂತ ಕ್ಷಮೆ ಕೇಳದಿರುವುದೇ ಲೇಸು. * ಜೀವನದಲ್ಲಿ ಯಾವ ಕೆಲಸವೂ ಕೀಳಲ್ಲ. ಅಷ್ಟಕ್ಕೂ ಕೆಲಸಗಳನ್ನು ಮಾಡುವವರು ಮನುಷ್ಯರು. ಹೇಗೆ ಯಾವ ಮನುಷ್ಯನೂ ಕೀಳಲ್ಲವೋ ಅವರು ಮಾಡುವ ಕೆಲಸವೂ ಕೀಳಲ್ಲ. ನಿರುದ್ಯೋಗಿಯಾಗಿದ್ದಾಗ ಯಾವ ಕೆಲಸವನ್ನಾದರೂ ಮಾಡುತ್ತೇವೆಂದು ಹೇಳುತ್ತಾರೆ. ಕೆಲಸ ಸಿಕ್ಕ ಬಳಿಕ ಅದೇ ಕೆಲಸದಲ್ಲಿ ನಿರಾಸಕ್ತಿ ಬೆಳೆಸಿಕೊಳ್ಳುತ್ತಾರೆ.

*ಜೀವನದಲ್ಲಿ ಆಶಾಭಾವನೆ ಬಹಳ ಮುಖ್ಯ. ನೀನು ಸತ್ತೇ ಹೋಗುತ್ತೀಯಾ" ಅಂದರು ವೈದ್ಯರು. ಹೇಳಿ ಎಂಟು ತಿಂಗಳಾಗುತ್ತಾ ಬಂತು. ಇನ್ನೂ ಸತ್ತಿಲ್ಲ. ಸಾವು ನನ್ನ ಬಳಿ ಬರಲು ಹೆದರಿರಬೇಕು. ಯಾಕೆಂದರೆ ಬದುಕುವ ಆಸೆ ನನ್ನಲ್ಲಿ ಅದಮ್ಯವಾಗಿದೆ. ಸಾಯ್ತಿಯಾ ಎಂದು ಹೇಳಿದಂದಿನಿಂದ ಸಾವಿನ ಬಗ್ಗೆ ಯೋಚಿಸುವುದನ್ನೇ ಬಿಟ್ಟಿದ್ದೇನೆ. ಇಡೀ ಮನಸ್ಸಿಗೆ ದೇಹವನ್ನು ನಿಯಂತ್ರಿಸುವ ಶಕ್ತಿಯಿದೆ. ಆದರೆ ಅನೇಕರು ಕೆಟ್ಟ ಯೋಚನೆಯಿಂದ ಮನಸ್ಸು ಹಾಗೂ ದೇಹಗಳೆರಡನ್ನೂ ಕೆಡಿಸಿಕೊಳ್ಳುತ್ತಾರೆ. ಆಶಾಭಾವನೆಯಿದ್ದರೆ ಆಕಾಶ ಬಿದ್ದರೂ ಹಿಡಿದೆತ್ತಬಹುದು !

*ಒಬ್ಬ ವ್ಯಕ್ತಿಯನ್ನು ಈಗಾಗಲೇ ನೀವು ಭೇಟಿ ಮಾಡಿದ್ದರೆ ಎರಡನೆ ಸಲಸಿಕ್ಕಾಗ ಅವನಿಗೆ ನೀವು ಕೊಡುವ ದೊಡ್ಡ ಗೌರವವೆಂದರೆ ಅವನ ಹೆಸರನ್ನು ಹಿಡಿದು ಕರೆಯುವುದು. ಆತ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಹೊಂದುತ್ತಾನೆ. ಬೇರೆಯವರಲ್ಲಿ ಇರುವ ಒಳ್ಳೆಯ ಗುಣಗಳನ್ನು ಮಾತ್ರ ಹುಡುಕಿ. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣವಿರುತ್ತದೆ. ಅದನ್ನು ತೋರಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಅಲ್ಲಿ ತನಕ ಕಾಯಬೇಕು. ಒಂದು ಕೆಟ್ಟ ಗುಣದಿಂದ ವ್ಯಕ್ತಿಯನ್ನು ಅಳೆಯಬಾರದು. ಆಗ ಆತನ ಒಳ್ಳೆಯ ಗುಣಗಳ ಅನುಭವ ನಿಮಗೆ ಆಗುವುದೇ ಇಲ್ಲ.

*ಯಾವ ವ್ಯಕ್ತಿಯೂ ತಿರಸ್ಕರಿಸುವಷ್ಟು ಕೆಟ್ಟವನಾಗಿರುವುದಿಲ್ಲ. ಜೀವನವಿಡೀ ದ್ವೇಷಿಸುವಷ್ಟು ದುಷ್ಪನಾಗಿರುವುದಿಲ್ಲ. ಯಾರನ್ನೇ ಆಗಲಿ ನಾವು ದ್ವೇಷಿಸುತ್ತಿದ್ದೇವೆ ಅಂದರೆ ದ್ವೇಷವೆಂಬ ಕೆಟ್ಟ ಗುಣ ನಮ್ಮದೇ ಹೊರತು ದ್ವೇಷಕ್ಕೊಳಗಾದವನದ್ದಲ್ಲ. ನಾವು ಯಾರನ್ನು ದ್ವೇಷಿಸುತ್ತೇವೋ ಅವನನ್ನು ಪ್ರೀತಿಸಲು ಸಾಧ್ಯವಿದೆ ಹಾಗೂ ಅದು ಸುಲಭ. ಆದರೆ ಬಹುತೇಕ ಮಂದಿ ದ್ವೇಷವನ್ನು ಸಾಸುತ್ತಾ ಹೋಗುತ್ತಾರೆ. ಆದರೆ ಅದು ಸಾಧನೆ ' ಅಲ್ಲ. * ಮಾಡುವುದು ಕಷ್ಟ. ಹೇಳುವುದು ಸುಲಭ. ಹೀಗಾಗಿ ಜನರು ಮಾಡಿದ್ದನ್ನು ಮೆಚ್ಚಬೇಕು. ಹೇಳಿದ್ದನ್ನು ಮರೆಯಬೇಕು. ಉತ್ತಮ ಸಾಧನೆ ಮಾಡಿದವನ ಕೆಲಸವನ್ನು ಮೆಚ್ಚಬೇಕು. ಅವನೇನೋ ಹೇಳಿದ ಎಂದು ಅವನನ್ನು ದೂರಸರಿಸಬಾರದು. *ಮೊದಲ ಸಲ ಗೆಲ್ಲದಿದ್ದರೆ ಪ್ರಯತ್ನಿಸಿ, ಪ್ರಯತ್ನಿಸಿ, ಪ್ರಯತ್ನಿಸಿ ಎಂಬುದು ಚರ್ವಿತಚರ್ವಣ. ಆದರೆ ನಾನು ಚ.ಚ.ವನ್ನು ಇಷ್ಟಪಡುತ್ತೇನೆ. ನಾನು ಮಾಡಬಲ್ಲೆ ಅಥವಾ ಮಾಡಲಾರೆ ಎಂದು ನೀವು ಅಂದುಕೊಂಡರೆ, ನೀವು ಸರಿ" ಎಂಬುದು ಸಹ ಚ.ಚ. ಆದರೆ ಅದರಲ್ಲಿ ಎಂಥ ಸಂದೇಶವಿದೆ ನೋಡಿ. ಪ್ರಯತ್ನವೆಂಬುದು ಸದವಕಾಶವನ್ನು ಭೇಟಿ ಮಾಡಿದರೆ ಅದು ಅದೃಷ್ಟ ಎಂಬುದೂ ಚ.ಚ. ಇದನ್ನು ರೋಮನ್ ತತ್ವಜ್ಞಾನಿ ಕ್ರಿಸ್ತಪೂರ್ವ ಐದನೆ ಶತಮಾನದಲ್ಲಿ ಹೇಳಿದ್ದು. ಇದನ್ನು ಕನಿಷ್ಠ ಇನ್ನೂ ಎರಡು ಸಾವಿರ ವರ್ಷಗಳವರೆಗೆ ಹೇಳಿದರೆ ತಪ್ಪೇನಿಲ್ಲ. *ನೀವು ಬರುವಾಗ ಏನನ್ನು ತೆಗೆದುಕೊಂಡು ಬರುತ್ತೀರೋ ಅವಷ್ಟೇ ನಿಮ್ಮದು. ಉಳಿದಿದ್ದೆಲ್ಲ ಬೇರೆಯವರದು. ಆದರೆ ನಾವು ಅವೆಲ್ಲವೂ ನಮ್ಮದೆಂದೇ ಭಾವಿಸುತ್ತೇವೆ. ನಮ್ಮ ಅಶಾಂತಿ, ಅಸಮಾಧಾನಕ್ಕೆ ಇವೇ ಕಾರಣ. *ನೆಮ್ಮದಿಯ ಜೀವನ ಸಾಗಿಸಲು ನಮ್ಮ ಬೇಡಿಕೆಗಳನ್ನು ಮಿತಿಗೊಳಿಸಬೇಕು. ನಿಮಗೆ ಹತ್ತೂ ಬೆರಳುಗಳಿಗೆ ಉಂಗುರಗಳನ್ನು ಧರಿಸುವ ಶಕ್ತಿಯಿರಬಹುದು. ಆದರೆ ಒಂದೇ ಬೆರಳಿಗೆ ಧರಿಸಿ. ಯಾಕೆಂದರೆ ಹತ್ತೂ ಬೆರಳುಗಳಿಗೆ ಉಂಗುರ ಧರಿಸಿದ ನಂತರವೂ ನಿಮಗೆ ಉಂಗುರಗಳ ಮೇಲಿನ ಮೋಹ ಕಮ್ಮಿಯಾಗುವುದಿಲ್ಲ. ಒಂದೊಂದು ಬೆರಳಿಗೆ ಎರಡೆರಡು ಉಂಗುರಗಳನ್ನು ತೊಡಲಾರಂಭಿಸುತ್ತೀರಿ. ಬೆರಳಿಗಿಂತ ಉಂಗುರ ಮುಖ್ಯವಲ್ಲ. ಬೆರಳಿದ್ದರೆ ಮಾತ್ರ ಉಂಗುರ. ಬೇಡಿಕೆ ಕಡಿಮೆಯಾದಷ್ಟೂ ಸಮಾಧಾನ ಇಮ್ಮಡಿಯಾಗುತ್ತದೆ.

*ಯಾವ ಕ್ಷಣದಲ್ಲಾದರೂ ನೀವು ನಿಮ್ಮ Plan ಬದಲಿಸಬಹುದು. ಆದರೆ ಕನಿಷ್ಠ ನಿಮ್ಮಲ್ಲಿ ಒಂದಾದರೂ Plan ಇರಬೇಕು. *ಪದೇಪದೆ ಕೇಳಿಕೊಳ್ಳಿ, ನಿಮ್ಮ ಸಮಯ ಸದ್ವಿನಿಯೋಗವಾಗುತ್ತಿದೆಯಾ? ಇಲ್ಲ ಎಂದೆನಿಸಿದರೆ ಬೇರೆ ಕೆಲಸಕ್ಕೆ ಹೊರಡಿ. ವಾಪಸ್ ಬರದಿರುವುದು ಸಮಯವೊಂದೇ. ನಿದ್ದೆ ಮಾಡಿದರೆ ಸಮಯ ವ್ಯರ್ಥವಾಗುವುದಿಲ್ಲ. ಚೆನ್ನಾಗಿ ನಿದ್ರಿಸಿ. ಆದರೆ ಎಚ್ಚರವಾದ ಬಳಿಕ ಹಾಸಿಗೆಯಲ್ಲಿ ಹೊರಳಾಡಬೇಡಿ. ಅದು ಆಲಸ್ಯ. *ಎಲ್ಲ ಕೆಲಸಗಳನ್ನು ನೀವೊಬ್ಬರೇ ಮಾಡಬೇಡಿ. ಬೇರೆಯವರಿಂದ ಮಾಡಿಸಿ. ನೀವೊಬ್ಬರೇ ಮಾಡಿದರೆ ಎರಡು ಕೈಗಳು ಹತ್ತು ಜನರಿಂದ ಮಾಡಿಸಿದರೆ ಇಪ್ಪತ್ತು ಕೈಗಳು. *1969ರಲ್ಲಿ ನಾನು ಚಂದ್ರನ ಮೇಲೆ ಮನುಷ್ಯ ನಡೆದಾಡಿದ್ದನ್ನು ನೋಡಿದೆ. ಆಗ ನನಗನಿಸಿದ್ದೇನೆಂದರೆ ಯಾವುದೂ ಕಷ್ಟವಲ್ಲ. ಎಲ್ಲವನ್ನೂ ಸಾಸಬಹುದು. ನೀವು ಯೋಚಿಸಿದ್ದೆಲ್ಲವನ್ನೂ, ಊಹಿಸಿದ್ದೆಲ್ಲವನ್ನೂ ಕಾರ್ಯರೂಪಕ್ಕೆ ತರಬಹುದು. *ಗೊಣಗಬೇಡಿ, ದೂರಬೇಡಿ, ಇನ್ನೂ ಪರಿಶ್ರಮದಿಂದ ಕೆಲಸ ಮಾಡಿ. ಜಾಕಿ ರಾಬಿನ್‌ಸನ್ ಎಂಬ ಆಫ್ರಿಕನ್ ಅಮೆರಿಕನ್ ಬೇಸ್‌ಬಾಲ್ ಆಟಗಾರನಿದ್ದ. ಆತನ ಕಪ್ಪು ಬಣ್ಣ ನೋಡಿ ಜನ ಅವನನ್ನು ದ್ವೇಷಿಸುತ್ತಿದ್ದರು. ಮುಖಕ್ಕೆ ಉಗಿಯುತ್ತಿದ್ದರು. ಆದರೆ ಕೊನೆ ತನಕ ತನ್ನ ಮೈಬಣ್ಣದ ಬಗ್ಗೆ ಆತ ಗೊಣಗಲಿಲ್ಲ. ಮಹಾನ್ ಬೇಸ್‌ಬಾಲ್ ಆಟಗಾರ ಎಂದು ಚರಿತ್ರೆ ಅವನ ಹೆಸರನ್ನು ದಾಖಲಿಸಿಕೊಂಡಿತು. *ನೀವೇನು ಆಗಬೇಕೆಂದು ಬಯಸಿದ್ದೀರೋ ಹಾಗೇ ಆಗಿ. ನೀವೇನು ಆಗಬೇಕೆಂದು ನಿಮ್ಮ ಪಾಲಕರು ಬಯಸಿದಂತೆ ಆಗಲು ಹೋಗಬೇಡಿ. ನೀವು ನಿಮ್ಮ ಪಾಲಕರಿಗೆ ಹಾಗೂ ನಿಮಗೆ ನಿರಾಸೆ ಮಾಡುತ್ತೀರಿ. *ನೀವು ನಿಮ್ಮ ಮಕ್ಕಳಿಗೆ ಕೊಡಬಹುದಾದ ದೊಡ್ಡ ಆಸ್ತಿ, ಉಡುಗೊರೆಯೆಂದರೆ ನಿಮ್ಮ ಸಮಯ. ಅದೊಂದನ್ನು ಕೊಡದೇ ಬೇರೆಲ್ಲವನ್ನೂ ಕೊಟ್ಟರೆ ಅವೆಲ್ಲ ನಿಷ್ಪ್ರ ಯೋಜಕ.

ಛೆ ! ರ್‍ಯಾಂಡಿಯ ಉಪನ್ಯಾಸ ಇಷ್ಟು ಬೇಗ ಮುಗಿಯಬಾರದಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X