ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಾಲಸ್ವಾಮಿ ತಂಡದಿಂದ ವೀರಭದ್ರಗಾಸೆ

By Staff
|
Google Oneindia Kannada News

CEC Gopalaswamyಚುನಾವಣೆ ಕಟ್ಟುಪಾಡುಗಳನ್ನು ಮೀರುವ ಕುಟಿಲ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಿತ್ಯ ಬೀಳುತ್ತಿರುವ ದುಃಸ್ವಪ್ನದ ಹೆಸರು ಶ್ರೀ ಗೋಪಾಲ ಸ್ವಾಮಿ. ಚುನಾವಣೆ ಎಂಬ ಕರಗದಲ್ಲಿ ಅವರ ತಂಡದಿಂದ ಈ ಬಾರಿ ವೀರಭದ್ರ ಗಾಸೆ !

* ವಿಶ್ವೇಶ್ವರ ಭಟ್

"ಈ ದೇಶದಲ್ಲಿ ಯಶಸ್ವಿಯಾಗಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ನಡೆಸಿದ್ದೇ ಆದರೆ, ಅದಕ್ಕೆ ಕಾರಣನಾದ ವ್ಯಕ್ತಿ ಜಗತ್ತಿನಲ್ಲಿ ಯಾವುದೇ ಹುದ್ದೆ, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ."

ಹಾಗಂತ ಹೇಳಿದ್ದು ಮಾಜಿ ಮುಖ್ಯ ಚುನಾವಣಾ ಅಕಾರಿ ಟಿ.ಎನ್. ಶೇಷನ್. ತಕ್ಷಣ ಪತ್ರಕರ್ತನೊಬ್ಬ ಕೇಳಿದ "ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನ?" ಅದಕ್ಕೆ ಶೇಷನ್ ಅದ್ಯಾವ ಸೀಮೆ ಕೆಲಸ ಸ್ವಾಮಿ? ಮದುವೆಮನೆಯಲ್ಲಿ ಮದುಮಗನ ಕೆಲಸವಿದ್ದಂತೆ. ಆದರೆ ಚುನಾವಣಾಕಾರಿ ಕೆಲಸ ಅಂದ್ರೆ ಸಾಮಾನ್ಯಾನಾ? ದೇಶಕ್ಕೆ ದೇಶವೇ ನುಂಗುವಂಥ ಸಾವಿರಾರು ರಾಜಕಾರಣಿಗಳನ್ನು ಏಕಕಾಲಕ್ಕೆ ನಿಯಂತ್ರಿಸುವುದಿದೆಯಲ್ಲ, ಅವರನ್ನೆಲ್ಲ ಒಂದು ಕಾನೂನಿನ ಅಡಿಯಲ್ಲಿ ತರುವುದಿದೆಯಲ್ಲ, ಮರು ಮಾತಾಡದೇ ಅವರನ್ನೆಲ್ಲ ಸುಮ್ಮನೆ ಕುಳ್ಳಿರಿಸುವುದಿದೆಯಲ್ಲ, ಮಾತು ಕೇಳದಿದ್ದರೆ ಅನರ್ಹಗೊಳಿಸುವ ಮೂಲಕ ಅವರನ್ನು ಶಿಕ್ಷಿಸುವುದಿದೆಯಲ್ಲ, ಇದಕ್ಕೆ ಗುಂಡಿಗೆ ಎಷ್ಟು ಗಟ್ಟಿಯಿರಬೇಕು ಗೊತ್ತಾ?" ಎಂದು ಕೇಳಿದ್ದರು.

ಇಡೀ ಬಿಹಾರವನ್ನು ತನ್ನ ಕಾಲ ಕಸವನ್ನಾಗಿರಿಸಿಕೊಂಡಿದ್ದ ಲಾಲು ಪ್ರಸಾದ್‌ನಂಥ ಭಂಡ ರಾಜಕಾರಣಿಯೇ ಶೇಷನ್ ಗುಟುರಿಗೆ ಗಡಗಡ ನಡುಗಿಹೋದ. ಹೆಚ್ಚು ಮಾತಾಡಿದರೆ ಹುಷಾರ್, ನಾಲಿಗೆ ಕತ್ತರಿಸಿಬಿಟ್ಟೇನು' ಎಂದು ಶೇಷನ್ ಹೇಳದಿರಬಹುದು, ಆದರೆ ಕೈಗೊಂಡ ಕ್ರಮಗಳು ಅದೇ ಮಾತಿನ ಪ್ರತಿಧ್ವನಿಯಂತಿತ್ತು. ಶೇಷನ್ ವಿರುದ್ಧ ಲಾಲು ಏನೇನೋ ಮಸಲತ್ತು ಮಾಡಿದ. ಶೇಷನ್ ಅಂಗಿ ಮೇಲಿನ ಇರುವೆಯಂತೆ ಕೊಡವಿಹಾಕಿದ. ಯಾರಿಗೂ ಶೇಷನ್‌ನ ಕೂದಲನ್ನು ಕೊಂಕಿಸಲು ಸಹ ಆಗಲಿಲ್ಲ. ಚುನಾವಣಾ ಸಂದರ್ಭದಲ್ಲಿ ಇಂಥ ಪರಮಾಕಾರ, ಅದನ್ನು ಚಲಾಯಿಸುವ ತಾಕತ್ತು, ದಾಢಸಿತನ ಯಾರಿಗೆ ಇದ್ದೀತು? ಒಬ್ಬ ಸರ್ವಾಕಾರಿಗಿಂತ ಹೆಚ್ಚಿನ ಮಹತ್ವ, ಕಾನೂನಿನ ಪ್ರಕಾರವೇ ಇವನ್ನೆಲ್ಲ ಚಲಾಯಿಸುವ ಅಧಿಕಾರ ಜಗತ್ತಿನಲ್ಲಿ ಯಾರಿಗಿದ್ದೀತು? ಒಬ್ಬ ಶೇಷನ್ ಬರುವ ತನಕ ಚುನಾವಣಾ ಅಧಿಕಾರಿಗೆ ಇಷ್ಟೆಲ್ಲ ಅಧಿಕಾರವಿದೆಯೆಂಬುದೇ ಗೊತ್ತಿರಲಿಲ್ಲ. ಗೊತ್ತಿದ್ದರೂ ಯಾರೂ ಅದನ್ನು ಚಲಾಯಿಸುವ ಗಂಡಸುತನ ತೋರಿರಲಿಲ್ಲ. ಹೀಗಾಗಿ ಚುನಾವಣಾ ಆಯೋಗ ಎಂಬ ಹೆಸರಿನ ಸಂಸ್ಥೆಯಿದೆಯೆಂಬುದು ಸಾಮಾನ್ಯ ಜನರಿಗೆ ಗೊತ್ತಿರಲೇ ಇಲ್ಲ.

ಶೇಷನ್‌ಗಿಂತ ಮೊದಲು ಸುಕುಮಾರ್ ಸೇನ್, ಕೆ.ವಿ.ಕೆ .ಸುಂದರಂ, ಎಸ್.ಪಿ. ಸೇನ್ ವರ್ಮ, ಡಾ. ನಾಗೇಂದ್ರ ಸಿಂಗ್, ಟಿ. ಸ್ವಾಮಿನಾಥನ್, ಎಸ್.ಎಲ್. ಶಕ್ದರ್, ಆರ್.ಕೆ. ತ್ರಿವೇದಿ, ಆರ್.ವಿ.ಎಸ್. ಪೆರಿಶಾಸ್ತ್ರಿ, ವಿ.ಎಸ್. ರಮಾದೇವಿ ಮುಖ್ಯ ಚುನಾವಣಾಕಾರಿಗಳಾಗಿದ್ದರು. ಆದರೆ ಯಾರೂ ಅವರ ಹೆಸರುಗಳನ್ನೇ ಕೇಳಿರಲಿಲ್ಲ. ಈ ದೇಶದ ರಾಜಕಾರಣಿಗಳೇನಾದರೂ ತುಸು ಹೆದರಿದ್ದರೆ ಅದು ಕಾನೂನು, ಕೋರ್ಟ್‌ಗೆ ಅಲ್ಲ, ಶೇಷನ್ ಎಂಬ ಮುಖ್ಯ ಚುನಾವಣಾ ಅಕಾರಿಗೆ! ಅದಕ್ಕೇ ಹೇಳಿದ್ದು ಭಾರತದ ರಾಜಕಾರಣಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವಿರುವ ವ್ಯಕ್ತಿ ಜಗತ್ತಿನಲ್ಲಿ ಯಾವುದೇ ಹುದ್ದೆಯನ್ನೂ ನಿಭಾಯಿಸಬಲ್ಲ!

ಇಲ್ಲದಿದ್ದರೆ ದೇವೇಗೌಡರ ವಾಹನ ವಶಪಡಿಸಿಕೊಳ್ಳಲು ಆಗುತ್ತಿತ್ತಾ? ಯಡಿಯೂರಪ್ಪನವರ ಕಾರನ್ನು ಪಕ್ಕಕ್ಕೆ ಹಚ್ಚಲು ಸಾಧ್ಯವಿತ್ತಾ? ಮಲ್ಲಿಕಾರ್ಜುನ ಖರ್ಗೆ ಹೆಲಿಕಾಪ್ಟರ್ ವಶಪಡಿಸಿಕೊಳ್ಳುವುದುಂಟಾ? ಜಗತ್ತಿನ ಯಾವ ಶಕ್ತಿಗೆ ದೇವೇಗೌಡರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸುವ ಸಾಮರ್ಥ್ಯವಿದೆ? ಅವರನ್ನು ವಾಹನದಿಂದ ಕೆಳಗಿಳಿಸುವ ಶಕ್ತಿಯಿದೆ? ಕೆಳಗಿಳಿಸಿಯೂ ದಕ್ಕಿಸಿಕೊಳ್ಳಬಲ್ಲೆ ಎಂಬ ಹಮ್ಮು, ಬಿಮ್ಮು, ದಾರ್ಷ್ಟ್ಯ ಯಾರಿಗಿದೆ?

ಕೆಲವು ತಿಂಗಳುಗಳ ಹಿಂದೆ ದೇವೇಗೌಡರ ಮಗ ಬಾಲಕೃಷ್ಣೇಗೌಡರ ಕಾರಿಗೆ ಅಡ್ಡವಾಗಿ ಯಾವನೋ ತನ್ನ ಕಾರನ್ನು ಪಾರ್ಕ್ ಮಾಡಿದ್ದಕ್ಕೆ, ಮರಿಗೌಡ'ರ ಡ್ರೈವರ್ ಆಕಾಶವೇ ಕಳಚಿಬಿದ್ದಷ್ಟು ರಾದ್ಧಾಂತ ಮಾಡಿದ್ದ. ಮರಿಗೌಡರೂ ಇದನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದರು. ತನ್ನ ಕಾರಿಗೆ ಯಾರೋ ಕಾರನ್ನು ಅಡ್ಡ ನಿಲ್ಲಿಸುವಷ್ಟು ಕಾಲ ಕೆಟ್ಟೋಯ್ತಾ ಎಂದು ಅಬ್ಬರಿಸಿದ್ದರು. ಇದು ಅವರದೊಬ್ಬರದೇ ಕಥೆಯಲ್ಲ. ಯಾವ ರಾಜಕಾರಣಿಗಳ, ಅವರ ಮಕ್ಕಳ ಕಾರನ್ನು ಅಡ್ಡ ಹಾಕಿದರೂ, ಅಧಿಕಾರಿ ಕತೆ ಮುಗಿಯಿತು. (ಪ್ರೆಸ್' ಎಂದು ಬರೆದಿರುವ ವಾಹನ ಹಿಡಿದರೆ, ನಿಲ್ಲಿಸಿದರೆ ಪತ್ರಕರ್ತರೂ ದೊಡ್ಡ ರಾದ್ಧಾಂತ ಮಾಡದೇ ಹೋಗುವುದಿಲ್ಲ. ಆಗಲೇಬಾರದ ಕೆಲಸ ಆಗೋಯ್ತು ಎಂಬಂತೆ ಬೊಬ್ಬೆ ಹಾಕ್ತಾರೆ. ಮೇಲಧಿಕಾರಿಗಳಿಂದ ವಾಹನ ಹಿಡಿದ ಪೊಲೀಸನಿಗೆ ಮಂಗಳಾರತಿ ಎತ್ತಿಸುತ್ತಾರೆ, ಬಿಡಿ.)

ಹೀಗಿರುವಾಗ ಚುನಾವಣೆ ಸಂದರ್ಭದಲ್ಲಿ ದೇವೇಗೌಡ, ಯಡಿಯೂರಪ್ಪ, ಖರ್ಗೆ ವಾಹನಗಳನ್ನು ಪಕ್ಕಕ್ಕೆ ಹಚ್ಚು ಎಂದು ಹೇಳುವಂಥ ಎದೆಗಾರಿಕೆ ತೋರುತ್ತಾನಲ್ಲ ಒಬ್ಬ ಸಾಮಾನ್ಯ ಅಧಿಕಾರಿ ಅದು ನಿಜಕ್ಕೂ ಗ್ರೇಟ್. ಆ ಅಧಿಕಾರ ನಿನಗಿದೆಯೆಂದು ಒಬ್ಬ ಅಧಿಕಾರಿಗೆ ತೋರಿಸಿಕೊಟ್ಟವರು, ನಿನಗಿರುವ ಅಧಿಕಾರವನ್ನು ಬಿಡಬೇಡ, ಚಲಾಯಿಸು ಎಂದು ಧೈರ್ಯ ತುಂಬಿದವರು, ಹೊಡಿಮಗ, ಹೊಡಿಮಗ, ಬಿಡಬೇಡ ಅಂವ್ನ' ಎಂದು ಅಕ್ಷರಶಃ ಜೋಗಿ' ಸಿನಿಮಾ ಮಾದರಿಯಲ್ಲಿ ಅಧಿಕಾರಿಗಳಲ್ಲಿ ಪ್ರಜ್ಞೆ ತುಂಬಿದವರು ಶೇಷನ್! ಚುನಾವಣಾ ಸಂದರ್ಭದಲ್ಲಿ ಅವರು ಎಲ್ಲ ರಾಜಕಾರಣಿಗಳಿಗೆ ತೋರಿದ irreverenceನ್ನು ಮೆಚ್ಚಲೇಬೇಕು. ಅವರೆಲ್ಲ ತೌಬಾತೌಬಾ' ಎಂದುಬಿಟ್ಟರು. ಆ ರೀತಿ ಕಬ್ಬಿನ ಜಲ್ಲೆಯಂತೆ ಹಿಂಡಿಬಿಟ್ಟಿದ್ದರು ಶೇಷನ್.

ಅನಂತರ ಅಧಿಕಾರಕ್ಕೆ ಬಂದ ಎಂ.ಎಸ್. ಗಿಲ್, ಜೆ.ಎಂ. ಲಿಂಗ್ಡೋ, ಟಿ.ಎಸ್. ಕೃಷ್ಣಮೂರ್ತಿ, ಬಿ.ಬಿ. ಟಂಡನ್ ಅವರೆಲ್ಲ ಶೇಷನ್ ಮಟ್ಟಕ್ಕೆ ಬೆಳೆಯದಿದ್ದರೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಶೇಷನ್ ಬಿಟ್ಟುಹೋದ ಪರಂಪರೆ ಹೇಗಿತ್ತೆಂದರೆ ಅವರ್‍ಯಾರಿಗೂ ನಿಷ್ಕ್ರಿಯರಾಗಿರಲು ಸಾಧ್ಯವೇ ಆಗಲಿಲ್ಲ. ಪ್ರಧಾನಿ ಹೇಳಿದ್ದನ್ನು ದೇಶಕ್ಕೆ ದೇಶವೇ ಕೇಳದಿರಬಹುದು. ಆದರೆ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದನ್ನು ಕೇಳದಿದ್ದರೆ ಆಗ ಕೇಳಿ. ಇಡೀ ದೇಶ, ಅದರಲ್ಲೂ ರಾಜಕಾರಣಿಗಳು ರಾಜಾಜ್ಞೆಯಂತೆ ಶಿರಸಾ ಪಾಲಿಸುತ್ತಾರೆ. ಚುನಾವಣಾ ಆಯೋಗದ ನೀತಿಸಂಹಿತೆಯನ್ನು ಉಲ್ಲಂಘಿಸುವ ರಾಜಕಾರಣಿ ಹುಟ್ಟಿ ಬರಬೇಕು. ಅಂಥ ಸ್ಥಿತಿಯನ್ನು ಆಯೋಗ ನಿರ್ಮಿಸಿಬಿಟ್ಟಿದೆ.

ಕರ್ನಾಟಕದಲ್ಲಿ ಈಗ ವಿಧಾನಸಭೆ ಚುನಾವಣೆ ನಡೆಯುತ್ತಿದೆಯೆಂದು ಯಾರಿಗೆ ಅನಿಸುತ್ತಿದೆ? ಪತ್ರಿಕೆ ಹಾಗೂ ಟಿವಿ ನೋಡಿದರೆ ಮಾತ್ರ ಚುನಾವಣೆ. ಬೇರೆಲ್ಲೂ ಅಂಥ ವಾತಾವರಣವಾಗಲಿ, ದೃಶ್ಯಗಳಾಗಲಿ ಇಲ್ಲವೇ ಇಲ್ಲ. ಒಂದು ಬ್ಯಾನರ್, ಪೋಸ್ಟರ್, ಬಂಟಿಂಗ್ಸ್, ಫ್ಲೆಕ್ಸ್, ಬಾವುಟ ಹಾಕಲೂ ಆಯೋಗ ಅನುಮತಿ ನೀಡಿಲ್ಲ.

ಪ್ರತಿಯೊಂದಕ್ಕೂ ಲೆಕ್ಕ ಕೊಡಬೇಕು. ಆಯಾ ದಿನದ ಖರ್ಚನ್ನು ಅದೇ ದಿನ ತಂದು ಒಪ್ಪಿಸಿ ಹೋಗಬೇಕು. ಸುಳ್ಳು ಲೆಕ್ಕ, ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕೆಲ್ಲ ಆಸ್ಪದವೇ ಇಲ್ಲ. ಆರು ವಾಹನಗಳಿಗಿಂತ ಹೆಚ್ಚು ಬಳಸುವಂತಿಲ್ಲ. ಬಳಸಿದರೆ ಅಭ್ಯರ್ಥಿಖರ್ಚಿಗೆ ಸೇರಿಸಲಾಗುವುದು. ನಾಮಪತ್ರ ಸಲ್ಲಿಸುವಾಗ ಐದಕ್ಕಿಂತ ಹೆಚ್ಚು ಮಂದಿ ಜತೆ ಹೋಗುವಂತಿಲ್ಲ. ಹೋದರೆ ತಲಾ ಒಬ್ಬನಿಗೆ 72 ರೂ. ಖರ್ಚು! ಟೀಶರ್ಟ್, ಪ್ಲಾಸ್ಟಿಕ್ ಬಳಸುವಂತಿಲ್ಲ, ಟೋಪಿ ನೀಡುವುದು ಸಹ ನಿಷಿದ್ಧ. ಹೋಮ, ಹವನ, ಪೂಜೆ ಮಾಡಿಸಿದರೂ ಆಯೋಗದ ಹದ್ದಿನ ಕಣ್ಣು. ಚುನಾವಣಾಧಿಕಾರಿ ಪರವಾನಗಿ ಪಡೆದೇ ಪ್ರಚಾರ ಸಾಮಗ್ರಿ ಸಾಗಿಸಬೇಕು. ಅಭ್ಯರ್ಥಿ ಪರ ಪತ್ರಿಕೆಗಳಲ್ಲಿ ಪ್ರಾಯೋಜಿತ ವರದಿ ಬಂದರೂ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿ ಮನೆ ಮನೆ ತಿರುಗಿ ಪ್ರಚಾರ ಮಾಡಬೇಕು. ಇರುವುದು ಅದೊಂದೇ ಮಾರ್ಗ. ಅಕ್ಷರಶಃ ಆಯೋಗ ಅಭ್ಯರ್ಥಿಗಳ ಕೈಕಟ್ಟಿ ಹಾಕಿದೆ.

ಈ ಸಲ ಛಾಟಿ ಬೀಸಿದವರ ಹೆಸರು ಎನ್. ಗೋಪಾಲಸ್ವಾಮಿ! ಶೇಷನ್ ಥರಾ ಅಬ್ಬರವಿಲ್ಲದಿರಬಹುದು, ಆದರೆ ಮಹಾ ಖಂಡಿತವಾದಿ, ಜಿಗುಟ. ಹಾಕಿದ ಗೆರೆ ದಾಟುವುದಿಲ್ಲ. ಗೆರೆಯನ್ನೂ ಮುಂದಕ್ಕೆ ಹಾಕುವುದಿಲ್ಲ. ಯಾರ ಮುಲಾಜೂ ಇಲ್ಲ. ಹಾಗೆ ನೋಡಿದರೆ ಈ ಸಲದ ಮೇನಲ್ಲಿ ಚುನಾವಣೆ ಮಾಡಕೂಡದೆಂದು ಯುಪಿಎ ಸರಕಾರದಿಂದ ಗೋಪಾಲಸ್ವಾಮಿ ಮೇಲೆ ತೀವ್ರ ಒತ್ತಡವಿತ್ತು. ಆದರೆ ಮನುಷ್ಯ ಕೇಳಲೇ ಇಲ್ಲ. ಕಾಂಗ್ರೆಸ್ ಸರಕಾರ ನಕಲಿ ಮತದಾರರ ಸಬೂಬನ್ನು ಒಡ್ಡಿತು. ಗೋಪಾಲಸ್ವಾಮಿ ಅಂಥ ಕಾರಣವನ್ನೆಲ್ಲ ಒರೆಸಿ ಹಾಕಿಬಿಟ್ಟರು. ಮತ್ತೊಬ್ಬ ಚುನಾವಣಾಧಿಕಾರಿ ಹಾಗೂ ಕಾಂಗ್ರೆಸ್ ಏಜೆಂಟ್' ನವೀನ್ ಚಾವ್ಲಾ ಸಹ ಮೇ ಚುನಾವಣೆಗೆ ಅಪಸ್ವರವೆತ್ತಿದರು.

ಸ್ವಾಮಿ ಅದನ್ನೂ ದರಕರಿಸಲಿಲ್ಲ. ಸಂವಿಧಾನದ ಚೌಕಟ್ಟಿನೊಳಗೆ ಚುನಾವಣೆ ಆಗಲೇಬೇಕು, ಮುಂದೂಡಲು ಕಾರಣಗಳೇ ಇಲ್ಲ ಎಂದು ಹಠಕ್ಕೆ ಬಿದ್ದರು. ಅಷ್ಟೇ ಸಾಕಾಯಿತು, ಗೋಪಾಲಸ್ವಾಮಿ ಬಿಜೆಪಿ ಏಜೆಂಟ್ ಅಂದರು. ಅದಕ್ಕೆ ನೀಡಿದ ಕಾರಣ ಅಂದ್ರೆ ಆಡ್ವಾಣಿ ಗೃಹ ಸಚಿವರಾಗಿದ್ದಾಗ ಇವರನ್ನು ಗೃಹ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು ಅಂತ. ಹಾಗೆ ವಾದಿಸುವುದಾದರೆ ರಾಜೀವ್ ಗಾಂ ಧಿ ಪ್ರಧಾನಿಯಾಗಿದ್ದಾಗ ಟಿ.ಎನ್. ಶೇಷನ್ ಕ್ಯಾಬಿನೆಟ್ ಸೆಕ್ರೆಟರಿ ಆಗಿದ್ದರು. ಆದ್ದರಿಂದ ಅವರೂ ಕಾಂಗ್ರೆಸ್ ಏಜೆಂಟ್ ಎಂದು ಹೇಳಬಹುದು. ಆದರೆ ಶೇಷನ್ ಹಾಗೆ ನಡೆದುಕೊಳ್ಳಲಿಲ್ಲ.

ಗೋಪಾಲಸ್ವಾಮಿ ಸಹ ಅಂಥ ಅಕಾರಿಯಲ್ಲ. ತಮಿಳುನಾಡಿನ ತಂಜಾವೂರಿನಲ್ಲಿ ಹುಟ್ಟಿದ ಅವರು 1966ರ ಬ್ಯಾಚಿನ ಗುಜರಾತ್ ಕೇಡರ್‌ಗೆ ಸೇರಿದ ಐಎಎಸ್ ಅಕಾರಿ. ನಲವತ್ತು ವರ್ಷಗಳ ಸುದೀರ್ಘ ಆಡಳಿತ ಅನುಭವವಿರುವ ಗೋಪಾಲಸ್ವಾಮಿ ಎಂದೂ ವಿವಾದಕ್ಕೆ ಸಿಲುಕಿದವರಲ್ಲ, ಕಪ್ಪು ಚುಕ್ಕೆಯನ್ನು ಮೈಗೆ ಅಂಟಿಸಿಕೊಂಡವರಲ್ಲ. ಕೆಲವು ವರ್ಷಗಳ ಹಿಂದೆ ಅವರು ಸೂರತ್ ಮಹಾನಗರಪಾಲಿಕೆಯ ಕಮಿಷನರ್ ಆಗಿದ್ದಾಗ, ಕಾಂಗ್ರೆಸ್ ನಾಯಕನೊಬ್ಬ ಗುತ್ತಿಗೆಯನ್ನು ಪಡೆಯಲು ಲಂಚದ ಆಮಿಷವೊಡ್ಡಿದ. ಗೋಪಾಲಸ್ವಾಮಿ ನೇರವಾಗಿ ಮುಖ್ಯಮಂತ್ರಿಯವರಿಗೆ ಫೋನ್ ಮಾಡಿ, ನಿಮ್ಮ ಪಕ್ಷದ ನಾಯಕರೊಬ್ಬರು ನನಗೆ ಲಂಚ ನೀಡುತ್ತಿದ್ದಾರೆ. ಅವರನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ನಿಮಗೆ ತಿಳಿಸುತ್ತಿದ್ದೇನೆ' ಎಂದು ಹೇಳಿದ್ದರು.

ಗುಜರಾತ್‌ನಲ್ಲಿ ಸುಮಾರು 25 ವರ್ಷ ವಿವಿಧ ಹುದ್ದೆಯಲ್ಲಿದ್ದ ಗೋಪಾಲಸ್ವಾಮಿ, ಇತ್ತೀಚೆಗೆ ಗುಜರಾತ್ ವಿಧಾನಸಭೆ ಚುನಾವಣೆಯನ್ನು ಸ್ವಲ್ಪವೂ ತಕರಾರು ಇಲ್ಲದೇ ಮುಗಿಸಿದರು. ಎಲ್ಲ ಪಕ್ಷಗಳ ಅಭ್ಯರ್ಥಿಗಳನ್ನೂ ಕಾಡಿದ ಅವರು, ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು. ಬಿಜೆಪಿ ಅಭ್ಯರ್ಥಿಯೊಬ್ಬ ತನ್ನ ಕ್ಷೇತ್ರದಲ್ಲಿ ಹಿಂದೂ ರಾಷ್ಟ್ರಕ್ಕೆ ಸ್ವಾಗತ' ಎಂಬ ಫಲಕಗಳನ್ನು ಎಲ್ಲೆಡೆ ನಿಲ್ಲಿಸಿದ್ದ. ಅವೆಲ್ಲವನ್ನೂ ಇನ್ನು ಎರಡು ತಾಸಿನೊಳಗೆ ಉರುಳಿಸಬೇಕೆಂದು ಗೋಪಾಲಸ್ವಾಮಿ ಆದೇಶ ನೀಡಿದರು. ಗುಜರಾತ್ ಚುನಾವಣೆಯಲ್ಲಿ ರಾಜ್ಯ ಸರಕಾರ ಎಲ್ಲ ಕೇಬಲ್ ಆಪರೇಟರ್‌ಗಳನ್ನು ಕರೆದು ಸರಕಾರದ ಪರ ಜಾಹೀರಾತನ್ನು ಬಿತ್ತರಿಸುವಂತೆ ಒತ್ತಡ ಹೇರಿತ್ತು. ಈ ವಿಷಯ ಸ್ವಾಮಿಯವರಿಗೆ ಗೊತ್ತಾಯಿತು. ಕೇಬಲ್ ಆಪರೇಟರ್‌ಗಳನ್ನು ಕರೆದು, ತತ್‌ಕ್ಷಣಕ್ಕೆ ಜಾಹೀರಾತು ಪ್ರಸಾರ ನಿಲ್ಲಿಸದಿದ್ದರೆ ಲೈಸೆನ್ಸ್ ರದ್ದುಪಡಿಸುವುದಾಗಿ ಗದರಿದರು. ಕೇಬಲ್ ಟಿವಿಯಲ್ಲಿ ಮೋದಿ ತುತ್ತೂರಿ ಬಂದ್ ಆಯಿತು. ರಾಜ್ಯದ ಪೊಲೀಸ್ ವರಿಷ್ಠರನ್ನು ಕರೆದು ಒಂದೇ ಒಂದು ಕೋಮು ಗಲಭೆಯಾಗದಂತೆ ಎಚ್ಚರವಹಿಸಬೇಕು. ಅಂಥ ಅಹಿತಕರ ಘಟನೆ ಸಹಿಸುವುದಿಲ್ಲ" ಎಂದು ತಾಕೀತು ಮಾಡಿದರು. ಚುನಾವಣೆ ಕೆಲಸಕ್ಕೆ ನಿಯೋಜಿಸಲಾದ 58 ಭ್ರಷ್ಟ ಅಧಿಕಾರಿಗಳನ್ನು ವಾಪಸ್ ಕಳಿಸಿದರು. ಚುನಾವಣೆ ಬಹಳ ಸುರಳೀತವಾಗಿ ನಡೆಯಿತು. ಅಪಸ್ವರದ ಕೀರಲು ದನಿಯೂ ಕೇಳಿಸಲಿಲ್ಲ.

ಈಗ ಕರ್ನಾಟಕದಲ್ಲಿ ಅಂಥದೇ ವಾತಾವರಣವನ್ನು ಗೋಪಾಲಸ್ವಾಮಿ ಸೃಷ್ಟಿಸಿದ್ದಾರೆ. ರಾಜಕಾರಣಿಗಳು, ಕ್ರಿಮಿನಲ್‌ಗಳು, ಭೂ ಮಾಫಿಯಾಗಳು, ಹೆಂಡದ ದೊರೆಗಳು ಕಮಕ್ ಕಿಮಕ್ ಎನ್ನುತ್ತಿಲ್ಲ. ರೂಲ್ಸು ಅಂದ್ರೆ ರೂಲ್ಸು. ಇದರಿಂದ ಪ್ರಚೋದಿತರಾದ ಮಣಿವಣ್ಣನ್ ಥರದ ಅಧಿಕಾರಿಗಳು ಮೈಸೂರಿನಲ್ಲಿ ರಾತ್ರಿಗಸ್ತು ಮಾಡುತ್ತಾ ನೀತಿಸಂಹಿತೆ ಉಲ್ಲಂಘಿಸಲು ತುದಿಗಾಲ ಮೇಲೆ ನಿಂತಿರುವವರ ಪ್ರಯತ್ನಗಳನ್ನೆಲ್ಲ ಭಂಗಗೊಳಿಸಿದ್ದಾರೆ. ಹಾಗೆಂದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೆಲ್ಲ ಬಹಳ ಸಾಚಾ ಆಗಿ ವರ್ತಿಸುತ್ತಿದ್ದಾರೆಂದು ಭಾವಿಸಬೇಕಿಲ್ಲ. ಹಣ, ಹೆಂಡದ ಹೊಳೆ ಗುಟ್ಟಾಗಿ ನಡೆಯುತ್ತಿದೆ. ಅವರೆಲ್ಲ ರಂಗೋಲಿಗಿಂತ ಕೆಳಗೇ ನುಸುಳುತ್ತಿದ್ದಾರೆ. ಆದರೂ ಗೋಪಾಲಸ್ವಾಮಿಯವರ ದೀರ್ಘನಾಮ' ಕೆಲಸ ಮಾಡಿದೆ. ಅಬ್ಬರ, ಆಶ್ವಾಸನೆ, ಮೈಕು, ಪೋಸ್ಟರ್, ಫ್ಲೆಕ್ಸ್, ಗೋಡೆಬರಹ ಮುಂತಾದ ಅಸಹ್ಯ, ಮಾಲಿನ್ಯದಿಂದ ಇಡೀ ರಾಜ್ಯ ಮುಕ್ತವಾಗಿದೆ. ಅಭ್ಯರ್ಥಿಗಳಿಗೆ ಮನೆಮನೆಗೆ ಹೋಗುವುದು, ಜನರನ್ನು ಭೇಟಿ ಮಾಡಲೇಬೇಕಾದುದು ಅನಿವಾರ್ಯವಾಗಿದೆ. ಕರ್ನಾಟಕಕ್ಕೆ ಕರ್ನಾಟಕವೇ ಹಾವಾಡಿಗನ ಮುಂದೆ ತಲೆಯಾಡಿಸುವ ಹಾವಿನಂತೆ ವರ್ತಿಸುತ್ತಿದೆ. ಒಂದು ಆದೇಶ, ವ್ಯವಸ್ಥೆಗೆ ಎಲ್ಲರೂ ತಲೆಬಾಗುತ್ತಿದ್ದಾರೆ. ಗೋಪಾಲಸ್ವಾಮಿ ಹಾಗೂ ಅವರ ತಂಡ ಆ ಕೆಲಸ ಮಾಡುತ್ತಿದೆ. ವಂಡರ್‌ಫುಲ್.

ಚುನಾವಣಾ ಆಯೋಗದಂಥ ಸಂಸ್ಥೆ ಹಾಗೂ ಗೋಪಾಲಸ್ವಾಮಿಯಂಥ ಸಭ್ಯ, ದಕ್ಷ ಅಧಿಕಾರಿಗಳು ಇಷ್ಟೆಲ್ಲ ಬದಲಾವಣೆ ತರಬಹುದಾದರೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದಾದರೆ ಈ ಚುನಾವಣೆಯಿಂದ ಹುಟ್ಟುವ ಸರಕಾರಕ್ಕೆ, ಜನರಿಂದಲೇ ಆಯ್ಕೆಯಾಗುವ ಮುಖ್ಯಮಂತ್ರಿಗೆ ಯಾಕೆ ಸಾಧ್ಯವಾಗುವುದಿಲ್ಲ? ಅದೇ ಮುಖ್ಯ ಪ್ರಶ್ನೆ. ಚುನಾವಣೆ ಸಂದರ್ಭದಲ್ಲಿ ಸಿಂಹದಂತೆ ಘರ್ಜಿಸುವ ಅಧಿಕಾರಿಗಳು, ಅನಂತರ ನರಸತ್ತವರಂತೆ ಏಕೆ ವರ್ತಿಸುತ್ತಾರೆ? ಪ್ರಜಾಪ್ರಭುತ್ವದಂಥ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರದ್ದೇ ಆದ ಅಧಿಕಾರವಿರುತ್ತದೆ. ಸಾಮಾನ್ಯ ಮತದಾರನಿಗೂ ಅಧಿಕಾರವಿದೆ. ಒಬ್ಬ ಅಂಬಾನಿ, ಟಾಟಾ, ಮಿತ್ತಲ್‌ನ ವೋಟಿಗಿರುವಷ್ಟೇ ಬೆಲೆ ಯಂಕ, ನಾಣಿಯ ಮತಗಳಿಗೂ ಇದೆ. ಆದರೆ ಯಾರೂ ಅಧಿಕಾರ ಚಲಾಯಿಸುವುದಿಲ್ಲ. ತನ್ನ ಕಡಿತದಲ್ಲಿ ವಿಷವಿದೆಯೆಂಬುದು ಹೇಗೆ ಹಾವಿಗೆ ಗೊತ್ತಿರುವುದಿಲ್ಲವೋ, ನಮ್ಮ ಮತಕ್ಕೆ ಎಷ್ಟೆಲ್ಲ ಬೆಲೆ, ಶಕ್ತಿ ಇದೆ ಎಂಬುದು ನಮಗೂ ಗೊತ್ತಿಲ್ಲ.

ಒಂದು ಚುನಾವಣೆ ಆಯೋಗ, ಒಬ್ಬ ಗೋಪಾಲಸ್ವಾಮಿಯಂಥವರಿಂದ ನಾವು ಪಾಠ ಕಲಿಯುವುದು ಯಾವಾಗ? ನಮಗೆ ಈ ಚುನಾವಣೆ ಕಲಿಸುವ ದೊಡ್ಡ ಪಾಠ ಅದೇ ಅಲ್ಲವೇ?

(ಸ್ನೇಹಸೇತು : ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X