ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣವಿದ್ದವರ ಹಣ ಮಾಡುವವರ ಹಣ ಹೊಡೆಯುವವರ ಕ್ಷೇತ್ರ

By ವಿಶ್ವೇಶ್ವರ ಭಟ್
|
Google Oneindia Kannada News

Lal Bahadur Shastri, former Prime Minister of Indiaಈ ಪ್ರಸಂಗ ಕೇಳಲು ಚೆನ್ನಾಗಿರುತ್ತದೆ, ಆಚರಣೆ ಮಾಡಲು, ಪಾಲಿಸಲು ಅಲ್ಲ. ಆದರೆ ಈ ದಿನಗಳಲ್ಲಿ ಇಂಥ ಪ್ರಸಂಗಗಳನ್ನು ಕೇಳಿದರೆ ಅದೆಷ್ಟು ಅವಾಸ್ತವಿಕವೆಂದೆನಿಸುತ್ತದೆ. ಕಾರಣ ನಾವು ಅಷ್ಟು ದೂರ ನಡೆದು ಬಂದುಬಿಟ್ಟಿದ್ದೇವೆ.

ಕಾಮರಾಜ ಯೋಜನೆಯಂತೆ ಲಾಲ್ ಬಹಾದೂರ್ ಶಾಸ್ತ್ರಿಯವರು ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದಿಲ್ಲಿಯಿಂದ ಬೇರೆ ಊರುಗಳಿಗೆ ಹೋದಾಗ ಅವರು ಸರಕಾರಿ ಗೆಸ್ಟ್‌ಹೌಸ್‌ನ ವಿಐಪಿ ರೂಮಿನಲ್ಲಿ ಉಳಿಯುತ್ತಿರಲಿಲ್ಲ. ತಮ್ಮ ಸ್ನೇಹಿತರು, ಪರಿಚಿತರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಒಮ್ಮೆ ಶಾಸ್ತ್ರಿಯವರು ಹೀಗೆ ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದಾಗ, ಅವರು ಒಂದು ವಿಲಕ್ಷಣ ಪ್ರಸಂಗ ಎದುರಿಸಬೇಕಾಯಿತು. ಮನೆಯ ಯಜಮಾನ ರಾತ್ರಿ ಊಟವಾದ ಬಳಿಕ, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕೆಂದಿದ್ದೇನೆ" ಎಂದು ಹೇಳಿದ. ಅಂದು ಈಗಿದ್ದಂತೆ ಪಕ್ಷದ ಟಿಕೆಟ್ ಗಿಟ್ಟಿಸಲು ಪೈಪೋಟಿ, ಜಟಾಪಟಿ ಇರಲಿಲ್ಲ. ಹೈಕಮಾಂಡ್ ಮರ್ಜಿ ಕಾಯುವ ಪ್ರಮೇಯವೂ ಇರಲಿಲ್ಲ. ಕಂಡ ಕಂಡ ನಾಯಕರ ಮನೆ ಬಾಗಿಲು ಬಡಿಯುವ, ಅವರ ಮುಂದೆ ಹಲ್ಲು ಗಿಂಜುವ ಹಿಂಸಾತ್ಮಕ' ಚಟುವಟಿಕೆ ಕೈಗೊಳ್ಳಬೇಕಿರಲಿಲ್ಲ. ಆದರೂ ಶಾಸ್ತ್ರಿಯವರ ಒಳಮನಸ್ಸಿನೊಳಗೆ ಏನೋ ಒಂದು ವಿಚಾರ ಕಳ್ಳಹೆಜ್ಜೆ ಹಾಕುತ್ತಾ ನಡೆದು ಬಂದಿತು. ಚುನಾವಣೆಗಾಗಿ ಈ ಆಸಾಮಿ ನನ್ನ ಸಹಾಯ ಅಪೇಕ್ಷಿಸುತ್ತಿರಬಹುದಾ? ಅದಕ್ಕಾಗಿಯೇ ಈತ ನನ್ನನ್ನು ಒತ್ತಾಯ ಮಾಡಿ ತನ್ನ ಮನೆಯಲ್ಲಿ ಉಳಿಸಿಕೊಂಡಿರಬಹುದಾ? ಮನೆಯಲ್ಲಿ ಉಳಿದ ದಾಕ್ಷಿಣ್ಯಕ್ಕೆ ನಾನು ಅವನಿಗೆ ಸಹಾಯ ಮಾಡುವುದು ಎಷ್ಟು ಸರಿ?" ಶಾಸ್ತ್ರಿಯವರಿಗೆ ಏನನಿಸಿತೋ ಏನೋ, ತಾನು ಅಲ್ಲಿ ಒಂದು ಕ್ಷಣ ಸಹ ಇರಬಾರದೆನಿಸಿತು. ಮನೆಯ ಯಜಮಾನನಿಗೆ ಏನೋ ಒಂದು ನೆಪ ಹೇಳಿ ಅಲ್ಲಿಂದ ಜಾಗ ಖಾಲಿಮಾಡಿದರು!

ಮತ್ತೊಂದು ಪ್ರಸಂಗ. ಗೃಹಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಾಸ್ತ್ರಿಯವರು ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಶಾಸ್ತ್ರಿಯವರು ತಮ್ಮ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ತೊಳೆದ ಬಟ್ಟೆಯನ್ನು ನೀಟಾಗಿ ಮಡಚಿ ಮಲಗುವಾಗ ಹಾಸಿಗೆ ಹಾಗೂ ದಿಂಬಿನಡಿ ಇಡುತ್ತಿದ್ದರು. ಬೆಳಗಾಗುವ ಹೊತ್ತಿಗೆ ಮೈಯ ಭಾರದಿಂದ ಬಟ್ಟೆಗಳು ಚೆನ್ನಾಗಿ ಇಸ್ತ್ರಿಯಾಗಿರುತ್ತಿದ್ದವು. ಅದನ್ನೇ ಅವರು ಧರಿಸುತ್ತಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಅಳಿಯ ರಾಮ್‌ಜೀ (ವಿಜಯ್‌ನಾಥ್ ಸಿಂಗ್) ನೀಡಿದ್ದ ಕಾರನ್ನು ಬಳಸುತ್ತಿದ್ದರು. ಆದರೆ ಪೆಟ್ರೋಲ್ ತುಂಬಿಸಲು ಹಣ ಇರುತ್ತಿರಲಿಲ್ಲ. ಹೀಗಾಗಿ ಆ ಕಾರು ಓಡಿದ್ದಕ್ಕಿಂತ ನಿಂತಿದ್ದೇ ಜಾಸ್ತಿ. ಒಮ್ಮೆ ರಾಮ್‌ಜೀ ಹೆಸರು ಹೇಳಿಕೊಂಡು ಅವನ ಸ್ನೇಹಿತನೊಬ್ಬ ಶಾಸ್ತ್ರಿಯವರ ಬಳಿ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಬೇಕು. ನಿಮ್ಮ ಸಹಕಾರವಿದ್ದರೆ ನಾನು ಸುಲಭವಾಗಿ ಆರಿಸಿಬರುತ್ತೇನೆ" ಎಂದು ಹೇಳಿದ. ಆ ವ್ಯಕ್ತಿ ಹೇಳಿದ್ದನ್ನೆಲ್ಲ ಸುಮ್ಮನೆ ಕೇಳಿದ ಶಾಸ್ತ್ರಿಯವರು ಅವನನ್ನು ಬೀಳ್ಕೊಟ್ಟರು. ಮರುದಿನವೇ ರಾಮ್‌ಜೀಗೊಂದು ಅಚ್ಚರಿ, ಆಘಾತ ಕಾದಿತ್ತು. ಮಾವನಿಗೆ ನೀಡಿದ ಕಾರು ಮನೆಯ ಮುಂದೆ ನಿಂತಿತ್ತು. ಶಾಸ್ತ್ರಿಯವರು ಆ ಕಾರನ್ನು ವಾಪಸ್ ಮಾಡಿದ್ದರು. ತಾನು ಅವನಿಂದ ಕಾರನ್ನು ಪಡೆದಿದ್ದಕ್ಕಾಗಿಯೇ, ಆತ ತನ್ನಿಂದ ಚುನಾವಣೆಯಲ್ಲಿ ಏನೋ ಲಾಭದ ನಿರೀಕ್ಷೆಯನ್ನಿಟ್ಟುಕೊಂಡಿದ್ದಿರಬೇಕೆಂದು ಶಾಸ್ತ್ರಿಯವರು ಭಾವಿಸಿದ್ದರು. ಪತ್ರಕರ್ತ ಜನಾರ್ದನ ಠಾಕೂರ್ ಅವರು ಶಾಸ್ತ್ರಿ ಕುರಿತು ಬರೆದಿರುವ Lal Bahadur Shastri: The Little Colossus ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಿದ ಈ ಘಟನೆಗಳನ್ನು ಈಗ ನೆನೆದರೆ ನಗು ಬರುತ್ತದೆ.

ಎನ್.ಎಂ. ಘಟಾಟೆ ಬರೆದ ಅಟಲ್ ಬಿಹಾರಿ ವಾಜಪೇಯಿ: ಫೋರ್ ಡಿಕೆಡ್ಸ್ ಇನ್ ಪಾರ್ಲಿಮೆಂಟ್" ಎಂಬ ಕೃತಿಯಲ್ಲಿ ಒಂದು ಪ್ರಸಂಗ ಬರುತ್ತದೆ. ಜನಸಂಘದ ಕೇಂದ್ರ ಕಚೇರಿಯಲ್ಲಿ ಪಂಡಿತ ದೀನ್‌ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ಮುಂತಾದ ನಾಯಕರು ಸೇರಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರು. ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ದೀನ್‌ದಯಾಳರು ಔನ್‌ಪುರದಿಂದ, ವಾಜಪೇಯಿ ಬಲರಾಮ್‌ಪುರದಿಂದ ಸ್ಪರ್ಧಿಸಿದ್ದರು. (ದೀನ್‌ದಯಾಳರು ಪರಾಭವಗೊಂಡಿದ್ದು ಬೇರೆ ಮಾತು.) ಬಲರಾಮ್‌ಪುರ ಮೀಸಲು ವಿಧಾನಸಭೆ ಕ್ಷೇತ್ರದಿಂದ ಜನಸಂಘದ ಸುಖ್‌ದೇವ್ ಪ್ರಸಾದ್ ಆ ಮೂವರು ನಾಯಕರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ನಿಲ್ಲಲು ನನಗೆ ಎಲ್ಲ ಅರ್ಹತೆಗಳಿವೆ. ಜನಪ್ರತಿನಿಧಿಯಾಗಲು ನಾನು ಎಲ್ಲ ಯೋಗ್ಯತೆ ಹೊಂದಿದ್ದೇನೆಂದು ಭಾವಿಸಿದ್ದೇನೆ. ಆದರೆ ನನ್ನಲ್ಲಿ ಇಲ್ಲದಿರುವುದೆಂದರೆ ಒಂದೇ. ಅದು ಹಣ. ಅದನ್ನು ಒದಗಿಸಿದರೆ ನಾನು ಚುನಾವಣೆಗೆ ನಿಲ್ಲುತ್ತೇನೆ" ಎಂದರು. ಮೂವರೂ ಮುಖಂಡರು ಮುಖಮುಖ ನೋಡಿಕೊಂಡರು. ಆದರೆ ಎಲೆಕ್ಷನ್ ಫಂಡ್ ಕೊಡುವಷ್ಟು ಹಣ ಪಕ್ಷದಲ್ಲಿ ಇರಲಿಲ್ಲ. ದೀನ್‌ದಯಾಳರು ಸುಖ್‌ದೇವ್ ಪ್ರಸಾದ್‌ಗೆ ಹೇಳಿದರು- ಚುನಾವಣೆಯಲ್ಲಿ ಸ್ಪರ್ಧಿಸಲು ಹಣ ಬೇಕು ನಿಜ. ಆದರೆ ಹಣದಿಂದಲೇ ಚುನಾವಣೆ ನಡೆಯೊಲ್ಲ. ಹಾಗಿದ್ದಿದ್ದರೆ ಹಣವಂತರೆಲ್ಲ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಮತ ಗಳಿಸುವ ಯೋಗ್ಯತೆ ನಿನ್ನಲ್ಲಿದ್ದರೆ ಸಾಕು." ಅಚ್ಚರಿಯೆಂದರೆ ಸುಖ್‌ದೇವ್ ಪ್ರಸಾದ್ ಕೇವಲ ನಾಲ್ಕು ಸಾವಿರ ರೂ. ಖರ್ಚು ಮಾಡಿ, ಎರಡು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದರು.

ಈ ಪ್ರಸಂಗಗಳನ್ನು ಈಗ ಹೇಳಿದರೆ ಕೆಕ್ಕರಿಸಿ ನೋಡಿಯಾರು. ಈಗಿನ ಚುನಾವಣೆಯಲ್ಲಿ ಈ ಯಾವ ಸಂಗತಿಗಳೂ ಆದರ್ಶ'ವೆಂದು ಅನಿಸುವುದಿಲ್ಲ. ಹೀಗೆ ಹೇಳಿದವರ ಬಗ್ಗೆ ಸ್ವರ್ಣಯುಗ' ಪಕ್ಷದ ಮಹಿಮಾ ಪಟೇಲ್‌ಗೆ ಹೇಳುವಂತೆ ಅನುಕಂಪ, ಶೋಕ ವ್ಯಕ್ತಪಡಿಸಬಹುದು. ಅಂದಿನಿಂದ ಇಲ್ಲಿ ತನಕ ಮತಪೆಟ್ಟಿಗೆಗಳಲ್ಲಿ ಎಷ್ಟೋ ಕೋಟಿ ಮತಗಳು ಬಿದ್ದು ಹೋಗಿವೆ. ಅಟ್ರೌಲಾ ಕ್ಷೇತ್ರದಿಂದ ಜನಸಂಘದಿಂದ ಸ್ಪರ್ಧಿಸಿದ್ದ ಸೂರಜ್‌ಲಾಲ್ ಗುಪ್ತಾ ಕ್ಷೇತ್ರದ ಮತದಾರರೆಲ್ಲರಿಗೂ ಕಾಲಿಗೆ ನಮಸ್ಕರಿಸಿ ಮತ ಯಾಚಿಸಿದ್ದರಂತೆ. ಆ ಕಾಲ ಎಲ್ಲಿ, ಈ ಕಾಲ ಎಲ್ಲಿ. 1952ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ವೆಚ್ಚವಾಗಿದ್ದು ಕೇವಲ ಎರಡೂವರೆ ಲಕ್ಷ ರೂ.!! ಆ ಚುನಾವಣೆಯಲ್ಲಿ 393 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸುಮಾರು 23 ದಿನಗಳ ಕಾಲ ಚುನಾವಣೆ ಪ್ರಚಾರ ನಡೆದಿತ್ತು. ಪ್ರತಿಯೊಬ್ಬ ಅಭ್ಯರ್ಥಿ ಖರ್ಚು ಮಾಡಿದ ಸರಾಸರಿ ಮೊತ್ತ ಕೇವಲ 636 ರೂ. ಇವನ್ನೆಲ್ಲ ನೋಡಿದರೆ ಮುಂಡೆಯಾದವಳು ತನ್ನ ತಾರುಣ್ಯದ ತುರುಬು ನೆನೆದು ಕನವರಿಸಿದಂತೆ. ಈ ಸಲದ ಚುನಾವಣೆಯಲ್ಲಿ ಏನಾದರೂ ಸಮಾಧಾನಪಡುವ ಸಂಗತಿಗಳೇನಾದರೂ ಸಿಗಬಹುದಾ ಎಂದು ಯೋಚಿಸಿದರೆ ಏನೂ ಕಾಣುತ್ತಿಲ್ಲ.

ನಮ್ಮ ಪ್ರಜಾಪ್ರಭುತ್ವದ ಒಳನೋಟ, ವೈಶಿಷ್ಟ್ಯ, ಅಗಾಧ ವ್ಯಾಪ್ತಿ ಅರ್ಥವಾಗದಿದ್ದರೆ ನಮಗೆ ಚುನಾವಣೆಯನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ನಮ್ಮ ಚುನಾವಣೆಯ ಹೆಚ್ಚುಗಾರಿಕೆಯೆಂದರೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಜಾತಿ, ಕುಲ, ಸಿರಿವಂತಿಕೆ, ಬಡತನ, ಸಾಕ್ಷರತೆ ಯಾವುದರ ಪರಿಗಣನೆಯೂ ಲಾಗೂ ಆಗುವುದಿಲ್ಲ. ಜೈಲಿನಲ್ಲಿರುವ ಕೈದಿಗೂ ಸ್ಪರ್ಧಿಸುವ ಅವಕಾಶವಿದೆ. ರಾಜಕೀಯ ಪಕ್ಷಗಳಿಂದ ಅಲ್ಲದಿದ್ದರೆ ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು, ಆರಿಸಿಯೂ ಬರಬಹುದು. ಹೀಗಾಗಿ ಪೂಲನ್‌ದೇವಿ, ಅರುಣ್ ಗವಳಿ, ಶಹಾಬುದ್ದೀನ್, ಡಿ.ಪಿ. ಯಾದವ್‌ನಂಥ ಪರಮಪಾತಕಿಗಳು, ಗೂಂಡಾಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಆರಿಸಿಬರುತ್ತಾರೆ. ಇಂಥ ಪಾತಕಿಗಳು ಶಾಸನಸಭೆಯಲ್ಲಿ ಆಶ್ರಯ ಪಡೆಯುತ್ತಾರೆ. ಅಷ್ಟೇ ಅಲ್ಲ ಅವರೇ ಶಾಸನ ರೂಪಿಸುತ್ತಾರೆ.

ಇಡೀ ಸಮಸ್ಯೆಯ ಮೂಲವಿರುವುದೇ ಅಭ್ಯರ್ಥಿಗಳ ಆಯ್ಕೆಯಲ್ಲಿ. ಅವರ ಆಯ್ಕೆಗೆ ಮಾನದಂಡಗಳೇ ಇಲ್ಲ. ಜಗತ್ತಿನಲ್ಲಿ ಪ್ರತಿಯೊಂದಕ್ಕೂ ವಿದ್ಯಾರ್ಹತೆ ಬೇಕೇಬೇಕು. ಡಿಗ್ರಿಯಿಲ್ಲದೇ ಯಾವ ಕೆಲಸವೂ ಸಿಗುವುದಿಲ್ಲ. ಆದರೆ ಓದು, ಡಿಗ್ರಿಯ ಅವಶ್ಯಕತೆಯೇ ಇಲ್ಲದ ಕ್ಷೇತ್ರವೆಂದರೆ ರಾಜಕೀಯ. ಅಕ್ಷರವೇ ಗೊತ್ತಿಲ್ಲದವ, ಕಾನೂನೇ ಅರಿಯದವ, constitutionಗೂ constipationಗೂ ವ್ಯತ್ಯಾಸ ಗೊತ್ತಿಲ್ಲದವರೆಲ್ಲ ಆಡಳಿತ ನಡೆಸಲು ಕುಳಿತರೆ ಏನಾಗಬಹುದು? ವಿಮಾನ ಹಾರಾಟ ಗೊತ್ತಿಲ್ಲದವನನ್ನು ಪೈಲಟ್ ಮಾಡಿದಂತೆ. ನಮ್ಮ ಸಂಸತ್ತು, ಶಾಸನಸಭೆಗಳಲ್ಲಿರುವ ಬಹುತೇಕ ಮಂದಿಗೆ ಸರಕಾರ ಹೇಗೆ ನಡೆಯುತ್ತದೆಂಬುದೇ ಗೊತ್ತಿರುವುದಿಲ್ಲ. ಯಾಕೆಂದರೆ ಅದನ್ನು ಗೊತ್ತುಮಾಡಿಕೊಳ್ಳುವ ಅಗತ್ಯವಿದೆಯೆಂದು ಅವರಿಗೂ ಅನಿಸಿಲ್ಲ. ಇಂದು ಬೇರಾವ ಅರ್ಹತೆಗಳು ಇಲ್ಲದಿದ್ದರೂ ಪರವಾಗಿಲ್ಲ, ಹಣವೊಂದಿದ್ದರೆ ಸಾಕು. ಅಷ್ಟೇ ಅಲ್ಲ ಅದೊಂದೇ ಇದ್ದರೂ ಆದೀತು. ಹೀಗಾಗಿ ರಾಜಕೀಯವೆಂದರೆ ಹಣವಿದ್ದವರ, ಹಣ ಮಾಡುವವರ, ಹಣ ಹೊಡೆಯುವವರ ಕ್ಷೇತ್ರವಾಗಿಬಿಟ್ಟಿದೆ. ಇಂದು ಒಂದು ಪಕ್ಷದಲ್ಲಿ, ನಾಳೆ ಮತ್ತೊಂದರಲ್ಲಿ, ನಾಡಿದ್ದು ಇನ್ನೊಂದರಲ್ಲಿ. ಅಂಥವರಿಗೆ ರಾಜಕೀಯ ಪಕ್ಷವೆಂದರೆ ಕಂಪ್ಯೂಟರ್ ಎಂಜಿನಿಯರ್‌ಗಳು ಕಂಪನಿ ಬದಲಿಸಿದಂತೆ. ಇದೂ ಒಂದು ರೀತಿಯಲ್ಲಿ ವ್ಯಾಪಾರ, ವ್ಯವಹಾರವೇ. ಯಾವ ಪಕ್ಷದಲ್ಲಿ ಲಾಭ ಸಿಗುವುದೋ ಆ ಪಕ್ಷಕ್ಕೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಟಿಕೆಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ, ಪಕ್ಷವನ್ನು ಬಿಡುವುದು ಮತ್ತೊಂದು ಪಕ್ಷ ಸೇರುವುದೂ ಸಹ. ರಾಜಕೀಯ ಪಕ್ಷಗಳ ಅಧ್ಯಕ್ಷರು, ನಾಯಕರನ್ನು ನೋಡಿದರೆ ಮಣಕನ ವ್ಯಾಪಾರಕ್ಕೆ ನಿಂತ ದಲ್ಲಾಳಿಗಳಂತೆ ಕಾಣುತ್ತಾರೆ. ಯಾವ ಮಣಕ ದಷ್ಟಪುಷ್ಟವಾಗಿದೆಯೋ ಅದನ್ನು ಗಬಕ್ಕನೆ ಖರೀದಿಸುವಂತೆ ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಸೆಳೆದುಕೊಳ್ಳುತ್ತಿದ್ದಾರೆ ಅವರವರ ಕಿಮ್ಮತ್ತು ನೋಡಿಕೊಂಡು. ಎಲ್ಲ ಪಕ್ಷಗಳೂ ಶಿಸ್ತಿನಿಂದ ಮರ್ಯಾದೆಯನ್ನು ಬಿಟ್ಟಿರುವುದರಿಂದ ಅವುಗಳ ಮಧ್ಯೆ ವ್ಯತ್ಯಾಸವಿಲ್ಲದಂತಾಗಿದೆ. ಮರ್ಯಾದೆಯೊಂದೇ ಅಡ್ಡಿಯಾಗುವುದಾದರೆ ಅದನ್ನೇಕೆ ಇಟ್ಟುಕೊಳ್ಳಬೇಕು? ಹೀಗಾಗಿ ಎಲ್ಲ ಪಕ್ಷಗಳೂ ಒಂದೇ.

ಜಗತ್ತಿನ ಯಾವ ದೇಶದಲ್ಲೂ ಇಂಥ ಹುಚ್ಚಾಸ್ಪತ್ರೆ ನೆನಪಿಸುವ ರಾಜಕೀಯ ಪಕ್ಷಗಳಿಲ್ಲ. ಬ್ರಿಟನ್‌ನಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಯಾವುದಾದರೊಂದು ರಾಜಕೀಯ ಪಕ್ಷದಲ್ಲಿ ಕನಿಷ್ಠ ಐದು ವರ್ಷ ಪ್ರಮುಖ ಜವಾಬ್ದಾರಿ ನಿರ್ವಹಿಸಿರಬೇಕು. ಅನಂತರ ಐದಾರು ತಿಂಗಳ ಡಿಪ್ಲೊಮಾ ಕೋರ್ಸ್ ಮುಗಿಸಬೇಕು. ಅವುಗಳಲ್ಲಿ ತೇರ್ಗಡೆಯಾಗದೇ ಚುನಾವಣೆಗೆ ನಿಲ್ಲುವಂತಿಲ್ಲ. ಅಲ್ಲಿ ಪಕ್ಷ ಬದಲಿಸುವ ಸಂಪ್ರದಾಯವೇ ಇಲ್ಲ. ಹೀಗಾಗಿ ದಾರಿಯಲ್ಲಿ ಹೋಗುವ ಕಾಕಪೋಕರೆಲ್ಲ ಎಮ್ಮೆಲ್ಲೆ, ಎಂಪಿ, ಮಂತ್ರಿಗಳಾಗುವುದಿಲ್ಲ. ನಾಗರಿಕ ಸಮಾಜದಲ್ಲಿ ಜನರ ಪ್ರತಿನಿಧಿಯಾಗಲು ಕನಿಷ್ಠ ಅರ್ಹತೆಯಾದರೂ ಇರಬೇಕು. ಎಲ್ಲೆಲ್ಲಿಯೋ ಇದ್ದವರು ಏಕಾಏಕಿ ಚುನಾವಣೆ ಸಮಯದಲ್ಲಿ ಬಂದು ಹಣಕೊಟ್ಟು ಟಿಕೆಟ್ ಖರೀದಿಸಿ ಗೆದ್ದು ಎಮ್ಮೆಲ್ಲೆ ಆಗಿ ಮಂತ್ರಿಯಾಗುವುದನ್ನು ಸಹಿಸಿಕೊಳ್ಳುವುದಾದರೂ ಹೇಗೆ?

ದುರ್ದೈವವೆಂದರೆ ನಮ್ಮನ್ನು ಆಳುವವರೆಲ್ಲ ಇಂಥವರೇ ಆಗಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತಿದೆ ನೋಡಿ. ಪಕ್ಷದ ಅಭ್ಯರ್ಥಿಯಾಗಲು ರಾಷ್ಟ್ರವ್ಯಾಪಿ ಚುನಾವಣೆಯಾಗುತ್ತದೆ. ದೇಶದ ಜನರು ಅಭ್ಯರ್ಥಿಯನ್ನು ಚೆನ್ನಾಗಿ ಅರೆದು ಅವನ ತಾಕತ್ತನ್ನು ಪರೀಕ್ಷಿಸುತ್ತಾರೆ. ವಧು ಪರೀಕ್ಷೆಯಲ್ಲಿ ವರ ಕಣ್ಣು ಕಣ್ಣು ಬಿಟ್ಟು ನೋಡುತ್ತಾನಲ್ಲ, ಹಾವೇರಿ ಸಂತೆಯಲ್ಲಿ ರೈತ ಆಕಳನ್ನು ಖರೀದಿಸುವ ಮುನ್ನ ಕೊಂಬು, ಕೆಚ್ಚಲು, ಬಾಯಿ ತೆರೆಸಿ ಹಲ್ಲುಗಳನ್ನೆಲ್ಲ ಲೆಕ್ಕ ಹಾಕಿ ನೋಡುತ್ತಾನಲ್ಲ ಹಾಗೆ ಅಭ್ಯರ್ಥಿಗೆ ಅಭ್ಯಂಜನ ಸ್ನಾನ ಮಾಡಿಸಿ ಪರೀಕ್ಷಿಸುತ್ತಾರೆ. ಈ ಕೆಲಸ ಸುಮಾರು ಒಂದೂವರೆ ವರ್ಷಗಳಿಂದಲೇ ಆರಂಭವಾಗುತ್ತದೆ. ದೇಶಕ್ಕೆ ದೇಶವೇ ಒಪ್ಪಿತನಾಗುವವನು ಅಧ್ಯಕ್ಷನಾಗುತ್ತಾನೆ. ಅಲ್ಲಿನ ಸೆನೆಟರ್‌ಗಳೂ ಸಹ ಜನರ ಅಗ್ನಿಪರೀಕ್ಷೆಗೊಳಗಾಗಿಯೇ ಆಯ್ಕೆಯಾಗುತ್ತಾನೆ. ಥೀಯೋಡರ್ ಹೆರಾಲ್ಡ್ ವೈಟ್ ಬರೆದ The Making of the President ಓದಿದರೆ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿ ಹೇಗೆ ಸಿದ್ಧತೆ ನಡೆಸುತ್ತಾನೆಂಬುದರ ಒಳಪದರ ತಿಳಿಯುತ್ತಾ ಹೋಗುತ್ತದೆ. ಎಲ್ಲೋ ಓದಿದ ನೆನಪು, ತಟ್ಟನೆ ನೆನಪಾಗುತ್ತಿಲ್ಲ, ಪ್ರಾಯಶ: ಫ್ರಾಂಕ್ಲಿನ್ ರೂಸ್‌ವೆಲ್ಟ್‌ನ ತಾಯಿಯೇ ಇರಬೇಕು, ತನ್ನ ಮಗುವಿನ ಅಪರೂಪದ ಫೋಟೊಗಳನ್ನು ತೆಗೆಸಿಟ್ಟಿದ್ದಳಂತೆ. ಮುಂದೆ ತನ್ನ ಮಗ ಅಮೆರಿಕದ ಅಧ್ಯಕ್ಷನಾದರೆ ಈ ಚಿತ್ರಗಳು ಪ್ರಯೋಜನಕ್ಕೆ ಬಂದೀತೆಂದು.

ನಮ್ಮಲ್ಲಿ ಮೊದಲ ಹಂತದ ಚುನಾವಣೆಗೆ ಇನ್ನು 22 ದಿನಗಳಿವೆ. ಅಭ್ಯರ್ಥಿಗಳು ಯಾರೆಂಬುದೇ ಗೊತ್ತಿಲ್ಲ. ಚುನಾವಣೆ ಮುಗಿದು ಫಲಿತಾಂಶ ಬಂದರೂ ಮುಖ್ಯಮಂತ್ರಿ ಯಾರಾಗುತ್ತಾರೆಂಬುದೂ ಗೊತ್ತಾಗುವುದಿಲ್ಲ. ಒಂದು ಪಕ್ಷದವರು ದಿಲ್ಲಿ ಕಡೆ ಮುಖ ಮಾಡಿ ನೋಡುತ್ತಿದ್ದರೆ, ಉಳಿದವರು ಪದ್ಮನಾಭನಗರದತ್ತ ಶಂಭೋ' ಎನ್ನುತ್ತಾ ನೋಡುತ್ತಿರುತ್ತಾರೆ. ರಾಜ್ಯಪಾಲರು ಕೂಗಿ ಕರೆಯುವ ತನಕ ಮುಖ್ಯಮಂತ್ರಿ ಯಾರೆಂಬುದೂ ತಿಳಿಯುವುದಿಲ್ಲ. ಹುಚ್ಚು ವ್ಯವಸ್ಥೆಯಲ್ಲಿ ಸರಿಯಾಗಿರುವವನೇ ಮೂರ್ಖ. ಜನರ ಪಾಡೂ ಹಾಗೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X