ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಗ್ಗಡೆಯವರು ಕಳಿಸಿದ ಪುಸ್ತಕವೂ,ಶಾಂಘೈ ರೋಚಕತೆಯೂ

By Staff
|
Google Oneindia Kannada News


ಲೀವುಜನ್ ಹಾಗೂ ಕ್ಸಿಯಾಂಗ್ ಹೇಳುತ್ತಾರೆ ;“ನಮ್ಮ ನೆಲದ ಬಗ್ಗೆ ಪ್ರೀತಿ, ಬದಲಾವಣೆಗೆ ತೆರೆದುಕೊಳ್ಳುವ ಮನಸ್ಸು, ಈ ಮನಸ್ಸನ್ನು ಹಿಡಿದು ನಿಲ್ಲಿಸಿ ಕೆಲಸಕ್ಕೆ ತೊಡಗಿಸುವ ಕರ್ತೃತ್ವ ಶಕ್ತಿ. ಮೂಲಸೌಕರ್ಯ ಅಭಿವೃದ್ಧಿ ಪಡಿಸದೇ ಯಾವ ದೇಶವೂ ಬದಲಾವಣೆಗೆ ತೆರೆದುಕೊಳ್ಳುವುದಿಲ್ಲ. ಈ ದಿನಗಳಲ್ಲಿ ನಾವು ಏನನ್ನು ಮಾಡುತ್ತೇವೆ ಎಂಬುದಕ್ಕಿಂತ, ಏನನ್ನು ಎಷ್ಟು ವೇಗವಾಗಿ ಮಾಡುತ್ತೇವೆಂಬುದು ಬಹಳ ಮುಖ್ಯ."

ಶಾಂಘೈಯಲ್ಲಿರುವ ಪುಡಾಂಗ್ ವಿಮಾನನಿಲ್ದಾಣದ ವ್ಯಾಪ್ತಿ ಗಮನಿಸಬೇಕು. ನಾಲ್ಕು ಕಿ.ಮೀ. ಉದ್ದದ ರನ್ ವೇ, ಎರಡು ಟ್ಯಾಕ್ಸಿವೇ, ಎಂಟು ಲಕ್ಷ ಚದರ ಮೀಟರ್ ವಿಸ್ತೀರ್ಣದ ಏಪ್ರಾನ್, ಇಪ್ಪತ್ತೆಂಟು ಏರೋಬ್ರಿಡ್ಜ್, ಎರಡು ಲಕ್ಷ ಎಂಬತ್ತು ಸಾವಿರ ಚದರ ವಿಸ್ತೀರ್ಣದ ಟರ್ಮಿನಲ್ ಕಟ್ಟಡ, ಐವತ್ತು ಸಾವಿರ ಚದರ ಮೀಟರ್ ಕಾರ್ಗೋ ಗೋದಾಮು, ಇಪ್ಪತ್ತು ದಶಲಕ್ಸ ಪ್ರಯಾಣಿಕರಿಗೆ ಸಂಚರಿಸಲು ಅನುಕೂಲವಾಗುವ ವ್ಯವಸ್ಥೆ, ಏಳೂವರೆ ಲಕ್ಷ ಟನ್ ಕಾರ್ಗೋ ಸಾಗಿಸಲು ಸಾಮರ್ಥ್ಯವಿರುವ ಪೂರಕ ಏರ್ಪಾಡು, ವರ್ಷದಲ್ಲಿ ಒಂದು ಲಕ್ಷ ಇಪ್ಪತ್ತಾರು ಸಾವಿರ ವಿಮಾನಗಳು ಹಾರುವಂಥ ವಿಮಾನ ನಿಲ್ದಾಣವನ್ನು ಪುಡಾಂಗ್ ಹೊಂದಿದೆ. ಅಚ್ಚರಿಯೆನಿಸಬಹುದು, ಇಂಥ ಬೃಹದ್ಭುವ್ಯ ಏರ್ ಫೋರ್ಟನ್ನು ಕೇವಲ ಎರಡು ವರ್ಷಗಳಲ್ಲಿ (ಅಕ್ಟೋಬರ್ 1997 ರಿಂದ ಸೆಪ್ಟೆಂಬರ್ 1999) ಪೂರ್ಣಗೊಳಿಸಲಾಯಿತು. ನಿಗದಿಪಡಿಸಿದ್ದಕ್ಕಿಂತ ಎರಡು ತಿಂಗಳ ಮೊದಲೇ ಅದು ಸಿದ್ಧಗೊಂಡಿತ್ತು. ಬೆಂಗಳೂರು ಅಂತಾರಾಷ್ಟೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆಂದು ನಾವು ಕಳೆದ ಹನ್ನೆರಡು ವರ್ಷಗಳಿಂದ ಮಾತನಾಡುತ್ತಾ, ಈಗ ಕೆಲಸ ಆರಂಭಿಸುತ್ತಿದ್ದೇವೆ. ಯಾವಾಗ ಮುಗಿಯುವುದೋ ಗೊತ್ತಿಲ್ಲ.

ಅದೇ ರೀತಿ ಶಾಂಘೈ ಮ್ಯಾಗ್ ಲೆವ್ ರೈಲು. ಗಂಟೆಗೆ ಐನೂರು ಕಿಮೀ. ವೇಗದಲ್ಲಿ ಸಂಚರಿಸುವ ಈ ರೈಲು ಮಾರ್ಗ ನಿರ್ಮಾಣವನ್ನು ಕೇವಲ ಇಪ್ಪತ್ತು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಎಂಟು-ಹತ್ತು ನಿಮಿಷಗಳಲ್ಲಿ ನಗರದ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕನ್ನು ತಲುಪಬಹುದು. ಸುಮಾರು ಒಂದು ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ರೈಲು ಒಂದು ಗಂಟೆ ಅವಧಿಯಲ್ಲಿ ಹನ್ನೆರಡು ಸಲ ಸಂಚರಿಸುತ್ತದೆ. ಈ ರೈಲು ನಿರ್ಮಾಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಹಿರಿಮೆ ಸಾಧಿಸಿದ್ದು, ಹನ್ನೆರಡು ಪೇಟೆಂಟ್ ಗಳನ್ನು ಹೊಂದಿರುವುದು ಗಮನಾರ್ಹ.

ಇದು ಕೇವಲ ಏರ್ ಫೋರ್ಟ್, ರೈಲು ನಿಲ್ದಾಣಕ್ಕೆ ಮಾತ್ರ ಸೀಮಿತವಲ್ಲ. ಚರಂಡಿ ವ್ಯವಸ್ಥೆಯಿಂದ ಹಿಡಿದು ದೂರಸಂಪರ್ಕ ಜಾಲ ವಿಸ್ತರಿಸುವವರೆಗಿನ ಪ್ರತಿಯೊಂದು ರಂಗದಲ್ಲೂ ಸುಧಾರಣೆಯನ್ನು ಕಂಡಿದೆ. ಶಾಂಘೈ ಪ್ರತಿ ಅಂಗುಲ ಬೆಳೆದಾಗ ಅಭಿವೃದ್ಧಿಯಲ್ಲಿ ಮೈಲು ದೂರ ಮುಂದಕ್ಕೆ ಹೋಗಿರುತ್ತದೆ. ಅಂದರೆ ಅದರ ಬೆಳವಣಿಗೆಯ ಗತಿಗಿಂತ ಅಭಿವೃದ್ಧಿ ವೇಗ ಜಾಸ್ತಿಯಿದೆ. ಈ ಕಾರಣಕ್ಕಾಗಿ ಶಾಂಘೈ ಜಗತ್ತಿನ ಮೂರನೆ ‘ವಾಣಿಜ್ಯ ಹಾಗೂ ಹಣಕಾಸು ಕೇಂದ್ರ’ವೆನಿಸಿಕೊಂಡಿದೆ. ಪೂರ್ವಾತ್ಯ ರಾಷ್ಟ್ರಗಳ ಅತಿ ದೊಡ್ಡ ಕಮರ್ಷಿಯಲ್ ಸೆಂಟರ್ ಸಹ ಆಗಿದೆ.

ಚೀನಾದ ಆರ್ಥಿಕ ರಂಗ ನಿಂತಿರುವುದೇ ಶಾಂಘೈ ನಗರದ ಮೇಲೆ. ಶಾಂಘೈ ಅದುರಿದರೆ ಅಮೆರಿಕವೂ ಅದುರುತ್ತದೆಂಬ ಮಾತುಗಳು ಅಮೆರಿಕದ ಬಹುರಾಷ್ಟೀಯ ಕಂಪನಿಗಳಿಗೆ ಮನವರಿಕೆಯಾಗಿದೆ. 2010ರಲ್ಲಿ ನಡೆಯುವ ವರ್ಲ್ಡ್ ಎಕ್ಸ್ ಪೋ ಹೊತ್ತಿಗೆ ಶಾಂಘೈ ಖದರು ಹೇಗಿರುತ್ತದೆಂದರೆ, ಅಲ್ಲೊಂದು ಕಚೇರಿ ಇಲ್ಲ ಅಂದ್ರೆ, ಜಾಗತಿಕ ಮಾರುಕಟ್ಟೆಯಲ್ಲಿ ನಿಮಗೊಂದು ಸ್ಥಾನ ಗಿಟ್ಟಿಸಲೂ ಆಗಿಲ್ಲ ಎಂದೇ ಭಾವಿಸುವಂತಾಗುತ್ತದೆ. ಹೀಗಾಗಿ ಈಗ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ, ಸಣ್ಣ ಪುಟ್ಟ ಕಂಪನಿಗಳು, ಉದ್ಯಮ ಸಂಸ್ಥೆಗಳು ಸಹ ಶಾಂಘೈ ಕಡೆ ಮೆರವಣಿಗೆ ಹೊರಟಿವೆ.

ಈ ಎಲ್ಲ ಬೆಳವಣಿಗೆಯನ್ನು ತಡೆದುಕೊಳ್ಳಲು ನಗರ ಯೋಜನೆಯನ್ನು ಸದೃಢಗೊಳಿಸಲಾಗುತ್ತಿದೆ. ತ್ಯಾಜ್ಯ ಮತ್ತು ಸಂಸ್ಕರಣ, ನೀರು ಮರುಬಳಕೆ, ಮಳೆನೀರು ಕೊಯ್ಲು, ನೈರ್ಮಲ್ಯೀಕರಣದಲ್ಲಂತೂ ವಿಶ್ವದರ್ಜೆ ಸೌಲಭ್ಯವನ್ನು ಕಲ್ಪಿಸಿಕೊಂಡಿರುವ ಶಾಂಘೈ, ಭವಿಷ್ಯದ ವಿಶ್ವದ ಸಮಸ್ತವಾಸಿಗಳ ನಗರ, melting pot of the world ಎಂದೆಲ್ಲ ಕರೆಸಿಕೊಳ್ಳುತ್ತಿದೆ. ನೆನಪಿರಲಿ, ಇಷ್ಟು ದಿನ ನಾವು ನ್ಯೂಯಾರ್ಕನ್ನು ಹೀಗೆಲ್ಲ ಕರೆಯುತ್ತಿದ್ದೆವು!

‘ಶಾಂಘೈ ಜ್ವರ’ ಚೀನಾದ ಎಲ್ಲ ನಗರಗಳಿಗೂ ತಟ್ಟಿದೆ. ಅಭಿವೃದ್ಧಿಯಲ್ಲಿ ಉಳಿದ ನಗರಗಳೂ ಶಾಂಘೈ ಅನುಸರಿಕೊಂಡು ಹೊರಟಿವೆ. ಸುತ್ತಲಿನ ಬೇರೆ ನಗರಗಳು ಸಹ ಪೂರಕವಾಗಿ ಅಭಿವೃದ್ಧಿ ಹೊಂದದಿದ್ದರೆ, ನಮಗೂ ಉಳಿಗಾಲವಿಲ್ಲವೆಂಬುದು ಶಾಂಘೈಗೆ ಗೊತ್ತಾಗಿದೆ. ಅಲ್ಲೊಂದು ಕತೆ ಚಾಲ್ತಿಯಲ್ಲಿದೆ.

ಒಮ್ಮೆ ಯಶಸ್ವಿ ರೈತನೊಬ್ಬನನ್ನು ‘ನಿನ್ನ ಯಶಸ್ಸಿನ ಗುಟ್ಟೇನು?’ ಎಂದು ಕೇಳಿದಾಗ, ನಾನು ಹೊಲಕ್ಕೆ ಬಿತ್ತಿದ ಬೀಜವನ್ನೇ ನನ್ನ ಸುತ್ತಲಿನವರಿಗೆಲ್ಲ ವಿತರಿಸಿ ಅದನ್ನೇ ಬಿತ್ತುವಂತೆ ಹೇಳಿದ್ದು ಎಂದನಂತೆ. ‘ಅದು ಹೇಗೆ?’ ಎಂದು ಕೇಳಿದ್ದಕ್ಕೆ ರೈತ ಹೇಳಿದನಂತೆ; ನನ್ನ ಹೊಲದಲ್ಲಿ ಬೆಳೆದ ಮೆಕ್ಕೆಜೋಳ ಪಕ್ಕದ ತೋಟದಲ್ಲಿನ ಮೆಕ್ಕೆಜೋಳದ ಪುಷ್ಪರೇಣು (pollen) ಬಿದ್ದು ಪರಾಗಸ್ಪರ್ಶ ನಡೆಯುತ್ತದೆ. ಪಕ್ಕದ ತೋಟದಲ್ಲಿ ಕಳಪೆ ಬೀಜ ಬಿತ್ತಿದರೆ ಅದರ ಫಲ ನನ್ನ ತೋಟದ ಮೇಲಾಗುತ್ತದೆ. ನಾನು ಉತ್ತಮವಾದುದನ್ನು ಬಿತ್ತಿದರೆ ಸುತ್ತಲಿನವರಿಗೂ ಒಳ್ಳೆಯದಾಗುತ್ತದೆ. ಎಲ್ಲರೂ ಏಕಕಾಲದಲ್ಲಿ ಉತ್ತಮವಾಗಿ ಬೆಳೆಯಬೇಕಾದರೆ ಇದು ಅತ್ಯಗತ್ಯ.

ತಾವೂ ಸುತ್ತಿದ್ದಲ್ಲದೇ ಶಾಂಘೈ ಸುತ್ತ ನಮ್ಮನ್ನೂ ಸುತ್ತಿಸಿದ ವೀರೇಂದ್ರ ಹೆಗ್ಗಡೆಯವರಿಗೆ ವಂದೇ.

ಅದೆಲ್ಲ ಸರಿ, ನಾವೂ ಹಾಗೆ ಅಭಿವೃದ್ಧಿ ಹೊಂದುವುದು ಯಾವಾಗ? ಹೋಗಲಿ, ನಮ್ಮ ಮನೆ, ವಠಾರ ಸುತ್ತ ಸುಂದರ ಪರಿಸರ ನಿರ್ಮಿಸಿಕೊಳ್ಳುವುದು ಯಾವಾಗ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X