• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಗ್ಗಡೆಯವರು ಕಳಿಸಿದ ಪುಸ್ತಕವೂ,ಶಾಂಘೈ ರೋಚಕತೆಯೂ

By Staff
|

ನಮ್ಮ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರುಗಳೆಲ್ಲ ಶಾಂಘೈನಂತಾಗಬೇಕು, ಸಿಂಗಾಪುರವಾಗಬೇಕು ಖರೆ. ಆದರೆ ಯಾಕಾಗುತ್ತಿಲ್ಲ? ನಾವಿನ್ನೂ ಸ್ಲಮ್ ಪುರದಲ್ಲಿಯೇ ಇದ್ದೇವೆ ಏಕೆ? ಅವರಲ್ಲಿರುವ ಯಾವ ಅಂಶ ನಮ್ಮಲ್ಲಿ ಇಲ್ಲ?


Shanghai, The melting pot of the world!ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಎಸ್ಸೆಮ್ಮೆಸ್ಸನ್ನು ನಾನು ನಿರೀಕ್ಷಿಸಿರಲಿಲ್ಲ. ಎರಡು ವಾರಗಳ ಹಿಂದೆ ನಾ ಬರೆದಿದ್ದನಮ್ಮ ಮನೆ ಸ್ವಚ್ಛ, ಸುಂದರ ಆದರೆ ಬೀದಿ ಮಾತ್ರ ಗಬ್ಬ್ಬು ನಾತ, ಹೀಗೇಕೆ? ಎಂಬ ಬರಹ ಓದಿ ಅವರು ಪ್ರತಿಕ್ರಿಯಿಸಿದ್ದರು. ‘Accept my appreciation for todays article by Dr. Veerendra Heggade ಎಂಬ ಸಂದೇಶ ಕಳಿಸಿದ್ದರು.

ಡಾ. ಹೆಗ್ಗಡೆಯವರು ಇರುವುದೇ ಹಾಗೆ. ಅವರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಓದುತ್ತಾರೆ, ಪ್ರತಿಕ್ರಿಯಿಸುತ್ತಾರೆ. ಊರಲ್ಲಿ ಇಲ್ಲದಿರುವಾಗ ಬಂದ ಪತ್ರಿಕೆಗಳನ್ನು ಎತ್ತಿಡುವಂತೆ ಹೇಳುತ್ತಾರೆ. ಬಂದ ನಂತರ ಓದುತ್ತಾರೆ. ನಮ್ಮ ಸುತ್ತ ನಡೆಯುವ ವಿದ್ಯಮಾನಗಳ ಬಗ್ಗೆ ಅವರೊಂದು ನಜರಿಟ್ಟಿರುತ್ತಾರೆ. ಅಷ್ಟೇ ಮುಖ್ಯವಾಗಿ, ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಹಾಗೂ ಸ್ಪಂದಿಸುತ್ತಾರೆ. ಇದು ಅವರ ವ್ಯಕ್ತಿತ್ವದ ಒಂದು ಭಾಗವೇ ಆಗಿದೆ.

ಧರ್ಮಸ್ಥಳದ ನಮ್ಮ ವರದಿಗಾರ ಲಕ್ಶ್ಮೀ ಮಚ್ಚಿನ ಮತ್ತೊಂದು ಸಂಗತಿ ತಿಳಿಸಿದರು;“ಡಾ. ಹೆಗ್ಗಡೆಯವರು ಆ ಲೇಖನದ ಜೆರಾಕ್ಸ್ ಪ್ರತಿಗಳನ್ನು ಮಾಡಿಸಿ, ತಮ್ಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಓದಲು ವಿತರಿಸುವ ವ್ಯವಸ್ಥೆ ಮಾಡಿದ್ದಾರೆ.”

ಡಾ. ಹೆಗ್ಗಡೆಯವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಅಚ್ಚರಿ ಮೂಡಿಸುವುದಿಲ್ಲ. ಯಾಕೆಂದರೆ ಅವರು ಇರುವುದೇ ಹಾಗೆ. ಇಲ್ಲದಿದ್ದರೆ ಧರ್ಮಸ್ಥಳವನ್ನು ಒಂದು ಮಾದರಿ ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸಲು, ನೂರಾರು ಶಿಕ್ಷಣಸಂಸ್ಥೆಗಳನ್ನು ಅಚ್ಚುಕಟ್ಟಾಗಿ ಕಟ್ಟಲು, ಗ್ರಾಮೀಣ ಅಭಿವೃದ್ಧಿ ಸಂಸ್ಥೆಗಳ ಮೂಲಕ ಹಳ್ಳಿಗಳ ಏಳಿಗೆಗೆ ಶ್ರಮಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸಮಾಜ ಜೀವನ, ಅಧ್ಯಾತ್ಮರಂಗ ಹಾಗೂ ಸಾಂಸ್ಕೃತಿಕ ಬದುಕಿನ ಪ್ರತಿಯೊಂದು ವಿಭಾಗಗಳಲ್ಲಿ ಆಸ್ಥೆವಹಿಸಿರುವ ಡಾ. ಹೆಗ್ಗಡೆಯವರು, ಒಂದಿಷ್ಟು ಕಾಳಜಿ, ಕಳಕಳಿ, ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ. ನಿಜಕ್ಕೂ ನಾವೆಲ್ಲ ಅವರ ಬಗ್ಗೆ ಹೆಮ್ಮೆ ಪಡುವಂಥ ವ್ಯಕ್ತಿತ್ವ ಅವರದು.

ಹಿಂದಿನ ವಾರ ಡಾ. ಹೆಗ್ಗಡೆಯವರು ನನಗೆ ಮತ್ತೊಂದು ಅಚ್ಚರಿ ನೀಡಿದರು. ಒಂದು ಪಾರ್ಸೆಲ್ ಕಳಿಸಿಕೊಟ್ಟಿದ್ದರು. ತೆರೆದು ನೋಡಿದರೆ ಒಂದು ಪುಸ್ತಕ! ಅದರೊಳಗೊಂದು ಪತ್ರ.

ಡಾ. ಹೆಗ್ಗಡೆಯವರು ಬರೆದಿದ್ದರು; “ನಾನು 2007ನೇ ಜೂನ್ 25 ರಿಂದ ಜುಲೈ 12ರ ತನಕ ಚೀನಾ ದೇಶಕ್ಕೆ ಪ್ರವಾಸ ಹೋಗಿದ್ದೆ. ಕಳೆದ 25 ವರ್ಷಗಳಲ್ಲಿ ಅಲ್ಲಿ ಆಗಿರುವ ಪ್ರಗತಿ, ಸಾಧನೆ ನೋಡಿ ನನಗೆ ಆಶ್ಚರ್ಯವೂ, ಹೆಮ್ಮೆಯೂ ಆಯಿತು (ಕೊಂಚ ಮತ್ಸರವೂ ಆಯಿತೆನ್ನಿ). ಶಾಂಘೈ ನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ಪುಸ್ತಕ ಮಾರಾಟದ ಮಳಿಗೆಯೊಂದರಿಂದ ಶಾಂಘೈ ನಗರಾಭಿವೃದ್ಧಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಇರುವ ಪುಸ್ತಕವನ್ನು ಖರೀದಿಸಿದೆ. ಅದನ್ನು ನಿಮಗೆ ಕಳುಹಿಸುತ್ತಿದ್ದೇನೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಿಗೆ ಈ ಪುಸ್ತಕವನ್ನು ಕಳುಹಿಸಬೇಕೆಂದು ಯೋಚಿಸಿದ್ದೆ. ಆದರೆ ಎಂದಿನಂತೆ ಅದು ಯಾವುದೋ ಇಲಾಖೆಗೆ ಹೋಗಬಹುದೆಂದು ಪುಸ್ತಕವನ್ನು ಅವರಿಗೆ ಕಳಿಸಲಿಲ್ಲ. ಈ ಪುಸ್ತಕದಲ್ಲಿರುವ ಮಾಹಿತಿಯಿಂದ ಸ್ಪೂರ್ತಿ ಪಡೆದು ನಿಮ್ಮ ಪತ್ರಿಕೆಯಲ್ಲಿ ಲೇಖನದ ಮೂಲಕ ನಗರಾಭಿವೃದ್ಧಿ ಯೋಜನೆ ಮಾದರಿ ಬಗ್ಗೆ ಸರಕಾರದ ಗಮನ ಸೆಳೆದರೆ ಸಂತೋಷವಾಗುವುದು. ಶ್ರೀ ಮಂಜುನಾಥಸ್ವಾಮಿ ಅನುಗ್ರಹವಿರಲಿ, ಇತಿ, ಡಿ. ವೀರೇಂದ್ರ ಹೆಗ್ಗಡೆ."

ಶಾಂಘೈ ನಗರದ ಹಾಗೂ ಅಂತಾರಾಷ್ಟೀಯ ವಿಮಾನ ನಿಲ್ದಾಣದ ನೀಲನಕ್ಷೆ ರಚಿಸಿ, ಆ ನಗರದ ನಿರ್ಮಾಣಕ್ಕೆ ಯೋಗದಾನ ಸಲ್ಲಿಸಿದ ಲೀಪುಜನ ಹಾಗೂ ಹುವಾಂಗ್ ಕ್ಸಿಯಾಂಗ್ ಎಂಬ ಎಂಜಿನೀಯರ್ ಮತ್ತು ನಗರ ವಿಜ್ಞಾನಿಗಳು ಬರೆದ ಪುಸ್ತಕವದು. ಮತ್ಸ್ಯೋದ್ಯಮದಲ್ಲಿ ನಿರತವಾಗಿದ್ದ ಪುಟ್ಟ ನಗರವೊಂದು ಹೇಗೆ ಒಂದು ದಶಕದಲ್ಲಿ ಜಗತ್ತಿನ ಐದು ಪ್ರಮುಖ ನಗರಗಳಲ್ಲಿ ಒಂದಾಗಿ ಬೆಳೆದಿದೆಯೆಂಬುದನ್ನು ಹೇಳುವ ಈ ಕೃತಿ, ನೋಡನೋಡುತ್ತಿದ್ದಂತೆ ಒಂದು ಬೃಹತ್ ನಗರ, ಒಂದು ಅದ್ಭುತ ವ್ಯವಸ್ಥೆ, ಜಗತ್ತಿನ ಶಕ್ತಿಶಾಲಿ ಆರ್ಥಿಕ ಕೇಂದ್ರವಾಗಿ ಬೆಳೆದ ಪರಿಯನ್ನು ಮನೋಜ್ಞವಾಗಿ ತೆರೆದಿಡುತ್ತದೆ.

ಶಾಂಘೈ ರಾತ್ರೋ ರಾತ್ರಿ ಹುಟ್ಟಿದ ನಗರವಲ್ಲ. ಯಾರೋ ಒಂದಿಬ್ಬರ ಶ್ರಮದಿಂದ ಸಾಕಾರಗೊಂಡ ಕನಸಲ್ಲ. ತೀರಾ ಹಿಂದಲ್ಲ, ಸುಮಾರು 25-35 ವರ್ಷಗಳ ಹಿಂದೆ, ಈ ನಗರದ ಹೆಸರು ಚೀನಾ ಹೊರತಾಗಿ ಬೇರೆಲ್ಲೂ ಕೇಳಿ ಬರುತ್ತಿರಲಿಲ್ಲ. ಈ ಊರಿನ ಹೆಸರು ನಮ್ಮ ಕಿವಿ ಮೇಲೆ ಬೀಳಲಾರಂಭಿಸಿದ್ದು ಕಳೆದ ಎಂಟರಿಂದ ಹತ್ತು ವರ್ಷಗಳ ಹಿಂದೆ. ಅಂದರೆ ಆ ಅವಧಿಯೊಳಗೇ ಶಾಂಘೈ ಬೆಳೆಯಲಾರಂಭಿಸಿದ್ದು, ಬೆಳೆದು ನಿಂತಿದ್ದು ಹಾಗೂ ಪುನಃ ಬೆಳೆಯಲಾರಂಭಿಸಿರುವುದು. ಶಾಂಘೈ ನಗರ ಈ ಸ್ವರೂಪಕ್ಕೆ ಬರಬೇಕೆಂದು ನಿರ್ಧರಿಸಿದವರಾರು? ಯಾವ ಶಕ್ತಿ ಅವರನ್ನು ಈ ಪರಿ ಕೆಲಸಕ್ಕೆ ಹಚ್ಚಿರಬಹುದು? ನಮ್ಮಿಂದ ಸಾಧ್ಯವಾಗದ್ದು ಅವರಿಗೆ ಹೇಗೆ ಸಾಧ್ಯವಾಯಿತು?

ಈ ಕೃತಿಯನ್ನು ಬರೆದ ನಗರ ವಿಜ್ಞಾನಿಗಳು ಹೇಳುತ್ತಾರೆ: “ ಶಾಂಘೈ ದಾರಿ, ಕಟ್ಟಡ, ಪಾರ್ಕು, ಶಾಲೆ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೀಗಿರಬೇಕೆಂದು ನಕ್ಷೆ ಬಿಡಿಸಿ ನಾವು ತೋರಿಸಿರಬಹುದು. ಇಡೀ ನಗರದ ವಿನ್ಯಾಸವನ್ನು ನಾವು ಸಿದ್ಧಪಡಿಸಿರಬಹುದು. ಆದರೆ ಶಾಂಘೈ ನಗರವನ್ನು ರೂಪಿಸಿದವರು ಅಲ್ಲಿನ ಜನರೇ. ಅವರ ಒತ್ತಾಸೆ, ಕಳಕಳಿ, ಪರಿಶ್ರಮ, ಹಾಗೂ ಜಾಗತಿಕ ಸ್ಪರ್ಧೆಗೆ ಸಜ್ಜಾಗಬೇಕೆಂಬ ಮನೋಭಾವವೇ ಶಾಂಘೈ ನಗರವನ್ನು ಇಷ್ಟೊಂದು ಆಧುನಿಕವಾಗಿ, ಸದೃಢವಾಗಿ, ವ್ಯವಸ್ಥಿತವಾಗಿ ರೂಪುಗೊಳ್ಳುವಂತೆ ಮಾಡಿದೆ. ಜನರ ಒತ್ತಾಸೆಯಿಲ್ಲದೇ ಯಾವ ನಗರವೂ ಹೊಸ ಸ್ವರೂಪ ಪಡೆಯಲಾರದು. ಅಲ್ಲದೇ ಈ ಒತ್ತಾಸೆಯೆಂಬುದು ಎಲ್ಲರಲ್ಲಿ ಏಕಕಾಲಕ್ಕೆ ಹೊರಹೊಮ್ಮಿದಾಗಲೇ ಬದಲಾವಣೆ ಸಾಧ್ಯ. ಶಾಂಘೈಯಲ್ಲಿ ಕಾಣಬಹುದಾಗಿದ್ದು ಅದನ್ನೇ. ಹಣವಿದ್ದು ಹತ್ತಾರು ಮಂದಿ ದುಡ್ಡು ಸುರಿದರೆ, ಹತ್ತಾರು ಕಟ್ಟಡಗಳು ತಲೆಯೆತ್ತಬಹುದು ಅಷ್ಟೇ. ಆದರೆ ನಗರಕ್ಕೆ ನಗರವೇ ಏಕಕಾಲಕ್ಕೆ ಸಜ್ಜಾಗಿ ನಿಲ್ಲಬೇಕೆಂದರೆ ಎಲ್ಲರೂ ಸಿದ್ಧರಾಗಬೇಕು. ಇದರ ಪ್ರತೀಕ ಶಾಂಘೈ!"

ಹೀಗೆ ಹೇಳುವಾಗ ಅವರಿಬ್ಬರಿಗೂ ನಮ್ಮ ದೇಶದ ನಗರಗಳನ್ನು, ಅದರಲ್ಲೂ ನಮ್ಮ ಬೆಂಗಳೂರನ್ನು ಗಮನದಲ್ಲಿರಿಸಿಕೊಂಡು ಹೇಳುತ್ತಿರಬಹುದಾ ಎಂದೆನಿಸುತ್ತಿತ್ತು. ಇರಲಿ. ನಮ್ಮ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರುಗಳೆಲ್ಲ ಶಾಂಘೈನಂತಾಗಬೇಕು, ಸಿಂಗಾಪುರವಾಗಬೇಕು ಖರೆ. ಆದರೆ ಯಾಕಾಗುತ್ತಿಲ್ಲ? ನಾವಿನ್ನೂ ಸ್ಲಮ್ ಪುರದಲ್ಲಿಯೇ ಇದ್ದೇವೆ ಏಕೆ? ಅವರಲ್ಲಿರುವ ಯಾವ ಅಂಶ ನಮ್ಮಲ್ಲಿ ಇಲ್ಲ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X