• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷಿಗಳ ಹಸ್ತಸಾಮುದ್ರಿಕೆಯಲ್ಲಿ ರಾಜ್ಯದ ಭವಿಷ್ಯ

By Staff
|

ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ರಾಜಕಾರಣಿಗಳಲ್ಲಿ ಒಂದು ಮನವಿ. ವಿಶ್ವೇಶ್ವರ ಭಟ್ ಅವರು ಬರೆದಿರುವ ಈ ಕೆಳಗಿನ ಲೇಖನವನ್ನು ಓದುವುದಕ್ಕೆ ಪ್ರಶಸ್ತ ಗಳಿಗೆ ಯಾವುದು ? ಒಳ್ಳೆ ಮುಹೂರ್ತ ಎಷ್ಟು ಹೊತ್ತಿಗೆ ಇದೆ ? ಓದುವುದರಿಂದಾಗುವ ಲಾಭ ನಷ್ಟಗಳೇನು ? ಎಂದು ಕವಡೆ ಶಾಸ್ತ್ರ ಕೇಳಿಕೊಂಡು ಬಂದು ಆನಂತರ ಸಾವಧಾನವಾಗಿ ಓದಬೇಕಾಗಿ ವಿನಂತಿ- ಸಂಪಾದಕ

  • ವಿಶ್ವೇಶ್ವರ ಭಟ್

ಜ್ಯೋತಿಷಿಗಳ ಹಸ್ತಸಾಮುದ್ರಿಕೆಯಲ್ಲಿ ರಾಜ್ಯದ ಭವಿಷ್ಯ ನಮ್ಮ ರಾಜಕೀಯ ನಾಯಕರ ಇಂಥ ಅಧಃಪತನ ಕಂಡಿರಲಿಲ್ಲ ಬಿಡಿ. ನಾನು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಡದ ದೇವೇಗೌಡ, ಕುಮಾರಸ್ವಾಮಿ ರಾಜಕೀಯದ ಬಗ್ಗೆ ಮಾತಾಡುತ್ತಿಲ್ಲ. ಇಪ್ಪತ್ತು ತಿಂಗಳ ನಂತರ ಮೂಲ ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದೇ ವಚನಭ್ರಷ್ಟರಾದ 'ಕುಮಾರಸ್ವಾಮಿ ಬ್ರ್ಯಾಂಡ್ ಆಫ್ ಪಾಲಿಟಿಕ್ಸ್" ಬಗ್ಗೆ ಹೇಳುತ್ತಿಲ್ಲ.

ರಾಷ್ಟ್ರಪತಿ ಮುಂದೆ ಪ್ರಮಾಣ ಪತ್ರ ಸಲ್ಲಿಸಿ ಯಡಿಯೂರಪ್ಪನವರಿಗೆ ಬೆಂಬಲ ಕೊಡುತ್ತೇವೆಂದು ಹೇಳಿ, ವಿಶ್ವಾಸಮತ ಯಾಚನೆಯಲ್ಲಿ ಅವರ ವಿರುದ್ಧ ಮತ ಚಲಾಯಿಸುವಂತೆ ವಿಪ್ ನೀಡಿ ಸರಕಾರ ಕೆಡವಿ, ಅದು ವಿಧಾನಸಭೆ ವಿಸರ್ಜನೆಯಲ್ಲಿ ಪರ್ಯವಸಾನಗೊಳ್ಳುವಂತೆ ಮಾಡಿದ ಕಪಟ ರಾಜಕಾರಣದ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ವಿಶ್ವಾಸದ್ರೋಹಿಗಳು, ವಚನಭ್ರಷ್ಟಂದು ಕರೆದ ಜರೆದು ಬಿಜೆಪಿ ನಾಯಕರು ಕೊನೆಗೆ ಅದೇ ವಿ.ದ್ರೋ. ಹಾಗೂ ವ.ಭ್ರ.ರ ಜತೆಗೆ ಕೈಜೋಡಿಸಿದವರ ಅಧಿಕಾರಲಾಲಸೆ ಬಗ್ಗೆ ಹೇಳುತ್ತಿಲ್ಲ.

ನಿಮ್ಮ ಜತೆ ಸೇರಿ ಸರಕಾರ ಮಾಡುತ್ತೇವೆ, ಮೊದಲು ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡು ಬನ್ನಿ ಎಂದು ಜೆಡಿ(ಎಸ್) ನಾಯಕರನ್ನು ನಂಬಿಸಿ, ಅನಂತರ ಅವರಿಗೆ ಕೈಕೊಟ್ಟ ಕಾಂಗ್ರೆಸ್‌ನ ಸಮಯಸಾಧಕ ರಾಜಕೀಯದ ಬಗೆಗೂ ಹೇಳುವುದು ನನ್ನ ಉದ್ದೇಶ ಅಲ್ಲ. ಪಕ್ಷಭೇದ ಮರೆತು, ನಮ್ಮ ರಾಜಕೀಯ ನಾಯಕರು ಹೇಗೆ ನಡೆದುಕೊಂಡಿದ್ದಾರೆಂಬುದನ್ನು ನಾವೆಲ್ಲ ನೋಡಿದ್ದೇವೆ. ಅಧಿಕಾರಕ್ಕಾಗಿ ಎಲ್ಲರೂ ಯಾವ ರೀತಿ ಹಲ್ಲುಗಿಂಜಿ, ನಮ್ಮ ಕಣ್ಣೆದುರಿಗೇ ತೀರಾ ಸಣ್ಣವರಾಗಿದ್ದಾರೆ. ಅವರ ಬಗ್ಗೆ ಹೇಳಲು ಹೋಗುವುದಿಲ್ಲ.

ಆದರೆ ನಮ್ಮ ರಾಜಕಾರಣಿಗಳ ಮತ್ತೊಂದು ಅಧಃಪತನದ ಬಗ್ಗೆ ಹೇಳಲೇಬೇಕಾಗಿದೆ. ಅದೇನೆಂದರೆ ಸ್ವಂತವಾಗಿ ಯೋಚಿಸುವುದನ್ನು ಬಿಟ್ಟು, ಜನರೇನು ಹೇಳುತ್ತಿದ್ದಾರೆಂಬುದು ಕೇಳುವುದನ್ನು ಬಿಟ್ಟು, ಮತಿಹೀನರಂತೆ ಸರ್ವನಿರ್ಧಾರಗಳನ್ನು ಜ್ಯೋತಿಷಿಗಳ ನಿಷ್ಕರ್ಷೆಗೆ ಬಿಡುವ, ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಗೇ ಅಪಚಾರವೆಸಗುತ್ತಿರುವ ಅಧಃಪತನದ ಬಗ್ಗೆ ಹೇಳಲೇಬೇಕಾಗಿದೆ. ಇಂದು ಈ ರಾಜ್ಯವನ್ನು, ನಮ್ಮ ರಾಜಕಾರಣಿಗಳನ್ನು ನಿಯಂತ್ರಿಸುತ್ತಿರುವವರು, ನಿರ್ದೇಶಿಸುತ್ತಿರುವವರು ಪ್ರಜೆಗಳು ಅಲ್ಲ, ಜ್ಯೋತಿಷಿಗಳೆಂಬ ಪ್ರಭುಗಳು!

ಪ್ರಜೆಗಳ ಮಾತಿಗೆ ಕವಡೆ ಕಿಮ್ಮತ್ತಿಲ್ಲ. ಎಲ್ಲ ನಾಯಕರೂ ತಾವು ಜನರ ಬಳಿಗೆ ಹೋಗುತ್ತೇವೆ ಅಂತಾರೆ. ಯಾಕೆಂದರೆ ಅವರ ಬಳಿಗೆ ಹೋಗಿ ಎಂದು ಜ್ಯೋತಿಷಿಗಳು ಹೇಳಿರುತ್ತಾರೆ. ಇಂದು ಪ್ರತಿ ರಾಜಕಾರಣಿ, ಪ್ರತಿ ರಾಜಕೀಯ ಪಕ್ಷ, ಪ್ರತಿ ಸರಕಾರವನ್ನು ನಿಯಂತ್ರಿಸುತ್ತಿರುವವರು ಜ್ಯೋತಿಷಿಗಳು. ಅವರ ಆದೇಶವಿಲ್ಲದೇ (predictions ಅನ್ನಿ) ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ.ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು, ಬೆಳಗ್ಗೆ ಯಾವ ದಿಕ್ಕಿಗೆ ಏಳಬೇಕು, ಎದ್ದ ಕೂಡಲೇ ಏನು ನೋಡಬೇಕು, ಯಾವ ದಿಕ್ಕಿಗೆ ಕಕ್ಕ ಮಾಡಬೇಕು, ಮನೆ ಬಾಗಿಲು ಎಲ್ಲಿರಬೇಕು, ಎಷ್ಟೊತ್ತಿಗೆ ಹೊರಡಬೇಕು, ಜತೆಯಲ್ಲಿ ಎಷ್ಟು ಮಂದಿಯಿರಬೇಕು, ಕಾರಿನ ನಂಬರ್ ಯಾವುದಿರಬೇಕು, ಮನೆಗೇಟು ಯಾವ ದಿಕ್ಕಿಗಿರಬೇಕು, ಸಂಪುಟ ರಚನೆ, ಪ್ರಮಾಣವಚನ ಯಾವಾಗ ಆಗಬೇಕು, ಸಂಪುಟದಲ್ಲಿ ಎಷ್ಟು ಜನರಿರಬೇಕು, ಸಂಪುಟ ಸೇರುವವರ ಜಾತಕ ತಾಳೆ ಆಗುತ್ತವೆಯಾ, ಕ್ಯಾಬಿನೆಟ್ ಸಭೆ ಎಷ್ಟು ಗಂಟೆಗೆ, ದಿಲ್ಲಿಗೆ ಹೋಗುವಾಗ ಯಾವ ವೇಳೆಯಲ್ಲಿ ವಿಮಾನವೇರಬೇಕು, ಹೊಸ ಯೋಜನೆ ಪ್ರಕಟಿಸಲು ಒಳ್ಳೆಯ ಮುಹೂರ್ತ ಯಾವುದು, ಸಂಪುಟ ವಿಸ್ತರಣೆ ಯಾವಾಗ, ಖಾತೆ ಹಂಚಿಕೆ ಹೇಗೆ, ನಿಗಮ-ಮಂಡಲಿ ಅಧ್ಯಕ್ಷರ ನೇಮಕ ಯಾವಾಗ, ಯಾವ ಸೆಕ್ರೆಟರಿಗಳನ್ನು ನೇಮಿಸಿಕೊಳ್ಳಬೇಕು, ವಿಧಾನಸೌಧದಲ್ಲಿ ಯಾವ ಕಡೆ ಮುಖಮಾಡಿ ಕುಳಿತುಕೊಳ್ಳಬೇಕು.... ಹೀಗೆ ಪ್ರತಿಯೊಂದನ್ನೂ ನಿರ್ಧರಿಸುವವರು ಜ್ಯೋತಿಷಿಗಳು.

ಮುಖ್ಯಮಂತ್ರಿಯಾದವರಿಗೆ ಮೂರ್ನಾಲ್ಕು ಜ್ಯೋತಿಷಿಗಳು. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅವರೆಲ್ಲರ ಮಾತನ್ನು ಪಾಲಿಸದೇ ಇರುವುದುಂಟಾ? ಒಬ್ಬ ಜ್ಯೋತಿಷಿ ಪೂರ್ವಕ್ಕೆ ಎದ್ದು ಸೂರ್ಯನನ್ನು ನೋಡಬೇಕು ಎಂದು ಸಲಹೆ ಮಾಡಿದರೆ, ಅದಕ್ಕೂ ಮೊದಲಿನ ವಾಸ್ತು ತಜ್ಞ ಸೂರ್ಯ ಕಾಣದಂತೆ ಗೋಡೆ ಕಟ್ಟಿರುತ್ತಾನೆ. ಈಗ ಬಂದ ಹೊಸ ವಾಸ್ತುಶಾಸ್ತ್ರಜ್ಞ ಗೋಡೆ ಒಡೆಯುವಂತೆ ಹೇಳುತ್ತಾನೆ.

ಜ್ಯೋತಿಷಿಗಳು ಹೇಳಿದ್ದನ್ನು ಮೀರುವ ರಾಜಕಾರಣಿಗಳೇ ಇಲ್ಲ. ಜ್ಯೋತಿಷಿಗಳು ಪ್ರಮಾಣವಚನಕ್ಕೆ ಸಮಯವನ್ನು ನಿಗದಿಪಡಿಸಲಿ ಪರವಾಗಿಲ್ಲ. ಶಿಷ್ಟಾಚಾರಗಳನ್ನು ಗಮನಿಸದೇ ವಿಧಾನಸೌಧದ ನೈರುತ್ಯದಿಂದ ಪ್ರವೇಶಿಸಿ ಮೇಲ್ಗಡೆ ಹದಿನೆಂಟು ಮೆಟ್ಟಿಲೇರಿ, ಮೂರು ಕಂಬ ಸುತ್ತಿ ಆರು ಮೆಟ್ಟಿಲು ಇಳಿದು ಪ್ರಮಾಣವಚನ ಸ್ವೀಕರಿಸಬೇಕು ಎಂದು ಜ್ಯೋತಿಷಿಗಳು ಹೇಳಿದರೆ, ಮುಖ್ಯಮಂತ್ರಿ ಅಭ್ಯರ್ಥಿ ಹಿಂದೆ ಮುಂದೆ ನೋಡದೇ ಪಾಲಿಸುತ್ತಾನೆ. ಒಂದು ವೇಳೆ ಹಾಗೆ ಮಾಡದಿದ್ದರೆ ಅಧಿಕಾರ ಕೈತಪ್ಪಿ ಹೋದರೆ ಎಂಬ ಭಯ ಹಾಗೂ ಹಾಗೆ ಮಾಡಿದರೆ ಶಾಶ್ವತವಾಗಿ ಅಧಿಕಾರದಲ್ಲಿರುತ್ತೇನೆ ಎಂಬ ಭ್ರಮೆ. ಇವೆರಡೂ ಅವನಿಂದ ಎಂಥ ಕೆಲಸವನ್ನೂ ಮಾಡಿಸುತ್ತವೆ.

ಈ ಸಲ ಯಾವನೋ ಸಂಖ್ಯಾಶಾಸ್ತ್ರಜ್ಞ ಯಡಿಯೂರಪ್ಪ ಗೆ ಅವರ ಹೆಸರಿನ ಸ್ಪೆಲ್ಲಿಂಗ್ ಬದಲಿಸಿಕೊಳ್ಳಲು ಹೇಳಿದನಂತೆ. ಪಾಪ, ಅವರು ಬದಲಿಸಿಕೊಂಡರು. ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಂಪುಟಕ್ಕೆ ನಾಲ್ಕೇ ಜನ ಸೇರಿಕೊಳ್ಳಲಿ ಎಂದರು. ಇದರಿಂದ ಅವರ ಆಪ್ತ ಸಚಿವರಿಗೆ ಬೇಸರವಾಯಿತು. ಇಷ್ಟೆಲ್ಲ ಮಾಡಿದರೆ ಅವರು ಅವಧಿ ಪೂರೈಸುತ್ತಾರೆಂಬುದು ಅವರ ಜ್ಯೋತಿಷಿಗಳ ವಾದವಾಗಿತ್ತು. ಏನಾಯ್ತು ಎಂಬುದು ಗೊತ್ತೇ ಇದೆ.

ಈಗ ನಮ್ಮ ಸರಕಾರ, ಮುಖ್ಯಮಂತ್ರಿಗಳು, ಮಂತ್ರಿಗಳನ್ನು 'ಆಸ್ಥಾನ ಜ್ಯೋತಿಷಿ"ಗಳೇ ನಿರ್ದೇಶಿಸುತ್ತಾರೆ. ಅವರೇನು ಮಾಡಬೇಕೆಂಬುದನ್ನೆಲ್ಲ ಜ್ಯೋತಿಷಿಗಳೇ ಹೇಳಿಕೊಡುತ್ತಾರೆ. ಒಬ್ಬ ಪ್ರಭಾವಿ, ಚೂರುಪಾರು ವರ್ಚಸ್ಸಿರುವ ಜ್ಯೋತಿಷಿ ಇಡೀ ಸರಕಾರವನ್ನು ಆಡಿಸಬಲ್ಲ. ಜ್ಯೋತಿಷಿ ಎಳೆದ ಗೆರೆಯನ್ನು ಮುಖ್ಯಮಂತ್ರಿ ದಾಟಲಾರ. ಕೊನೆಕೊನೆಗೆ ಮುಖ್ಯಮಂತ್ರಿ ಅದೆಂಥ ಸ್ಥಿತಿ ತಲುಪಿಬಿಡುತ್ತಾನೆಂದರೆ ಆತ ಪ್ರತಿಯೊಂದಕ್ಕೂ ಜ್ಯೋತಿಷಿಯನ್ನೇ ಅವಲಂಬಿಸುತ್ತಾನೆ.

ಅಷ್ಟರೊಳಗೆ ಮುಖ್ಯಮಂತ್ರಿಯ ಒಳ-ಹೊರಗು, ದೌರ್ಬಲ್ಯ, ಮನೋಭಾವ, ಇಷ್ಟ-ಅನಿಷ್ಟಗಳೆಲ್ಲ ಜ್ಯೋತಿಷಿಗೆ ಗೊತ್ತಾಗುತ್ತಾ ಹೋಗುತ್ತವೆ. ಆತ ಮುಖ್ಯಮಂತ್ರಿಗೆ ಹಿತವಾಗುವ ಮಾತುಗಳನ್ನೇ ಹೇಳಲಾರಂಭಿಸುತ್ತಾನೆ. ನಿಧಾನವಾಗಿ ತನ್ನ ಅಜೆಂಡಾಗಳನ್ನು ಬಿಡುತ್ತಾ ಹೋಗುತ್ತಾನೆ. ಕ್ರಮೇಣ ಜ್ಯೋತಿಷಿ ಸರಕಾರ ಹಾಗೂ ಜನರ ಮಧ್ಯೆ ದಲ್ಲಾಳಿಯಂತೆ ವರ್ತಿಸುತ್ತಾನೆ. ಅಧಿಕಾರಿಗಳ ನೇಮಕ, ಭಡ್ತಿ, ವರ್ಗಾವರ್ಗಿ, ಫೈಲ್‌ಗಳ ಓಡಾಟದಲ್ಲಿ ಮೂಗು ತೂರಿಸುವಲ್ಲಿಂದ ಹಿಡಿದು ದೊಡ್ಡ ದೊಡ್ಡ ಡೀಲ್‌ಗಳಿಗೆ ಕೈಯಿಡುತ್ತಾನೆ. ಚೇರ್‌ಮನ್‌ಗಿರಿ, ಅಕಾಡೆಮಿ ಅಧ್ಯಕ್ಷ ಸ್ಥಾನಗಳಿಗೆ ತನಗೆ ಬೇಕಾದವರನ್ನೇ ನೇಮಕ ಮಾಡಿಸುತ್ತಾನೆ. ಈ ಜ್ಯೋತಿಷಿಯೇ ಬಿಡಿಎ ಸೈಟು ಯಾರಿಗೆ ಕೊಡಬೇಕೆಂಬುದನ್ನು ನಿರ್ಧರಿಸುತ್ತಾನೆ. ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲೂ ತನಗೆ ಬೇಕಾದವರನ್ನೇ ತೂರಿಸುತ್ತಾನೆ.

ಒಂದು ಸಂದರ್ಭ ಬರುತ್ತದೆ ಸರಕಾರದಲ್ಲಿ ಈ ಜ್ಯೋತಿಷಿ ಕೈಯಾಡಿಸದ ಕ್ಷೇತ್ರಗಳೇ ಇರುವುದಿಲ್ಲ. ಎಲ್ಲೋ ತನ್ನ ಮಾತು ನಡೆಯುತ್ತಿಲ್ಲವೆಂದು ಜ್ಯೋತಿಷಿಗೆ ಅನಿಸಲಾರಂಭಿಸಿದರೆ, ನಿಧಾನವಾಗಿ ಮುಖ್ಯಮಂತ್ರಿಯನ್ನು ಹೆದರಿಸುತ್ತಾನೆ- ಗ್ರಹಗತಿ ಚೆನ್ನಾಗಿಲ್ಲ, ಶನಿಕಾಟ ಆರಂಭವಾಗಿದೆ, ಆ ಶಾಂತಿ, ಈ ಹೋಮ ಮಾಡಿಸಬೇಕೆಂದು ಬೆದರಿಸುತ್ತಾನೆ. ಈ ಎಲ್ಲ ಜಣುಕುಗಳಿಂದ ಹೊರಬರಲು ಆಗದೇ, ಪುನಃ ಜ್ಯೋತಿಷಿ ಹೇಳಿದ್ದಕ್ಕೆಲ್ಲ ಸಿಯೆಮ್ಮು ತಲೆಯಾಡಿಸುತ್ತಾನೆ. ಜ್ಯೋತಿಷಿ ಒಬ್ಬ extra constitutional authority ತರಹ ವರ್ತಿಸುತ್ತಾನೆ. ರಾಜ್ಯದ ಮುಖ್ಯಮಂತ್ರಿಯೇ ಒಬ್ಬ ಜ್ಯೋತಿಷಿಗೆ ಅಷ್ಟೊಂದು ಪ್ರಾಮುಖ್ಯ ನೀಡುವಾಗ ಕೇಳಬೇಕೇ ಅವನ ಮಂತ್ರಿಗಳು, ಶಾಸಕರು, ಸೆಕ್ರೆಟರಿಗಳು, ಪೊಲೀಸ್ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಅವನ ಹಿಂದೆ 'ಸೇವೆ"ಗೇ ನಿಂತಿರುತ್ತಾರೆ.

ಕರ್ನಾಟಕದಲ್ಲಿ ಅಕ್ಷರಶಃ 'ಜ್ಯೋತಿಷಿ ದರ್ಬಾರು" ನಡೆಯುತ್ತಿರುವುದನ್ನು ನೋಡಿದ್ದೇವೆ. ಎಲ್ಲ ನಾಯಕರೂ ಒಬ್ಬೊಬ್ಬ ಜ್ಯೋತಿಷಿಗಳಿಗೆ ಒಪ್ಪಿಸಿಕೊಂಡುಬಿಟ್ಟಿದ್ದಾರೆ. ಜ್ಯೋತಿಷಿ, ವಾಸ್ತುತಜ್ಞರ ಎಡತಾಕದ ರಾಜಕಾರಣಿಯೇ ಇಲ್ಲ. ದೇವೇಗೌಡರಂತೂ ಕರ್ನಾಟಕದ ಎಲ್ಲ ಜ್ಯೋತಿಷಿಗಳನ್ನೂ ಬಲ್ಲರು. ಅವರ ಮಗ ರೇವಣ್ಣ ಪ್ರತಿದಿನ ದೇವಸ್ಥಾನಕ್ಕೆ ಹೋಗದೇ ಬೇರೆ ಯಾವ ಕೆಲಸ ಮಾಡುವುದಿಲ್ಲವಂತೆ. ಅವರ ದೇವರ ಭಕ್ತಿ ಮೆಚ್ಚೋಣ. ವಿಪರೀತವೆಂದರೆ ಅವರು ರಾಹುಕಾಲದಲ್ಲಿ ಯಾರ ಜತೆಯೂ ಮಾತಾಡುವುದಿಲ್ಲ. ಅವರ ಜತೆ ತುರ್ತಾಗಿ ಮಾತಾಡಬೇಕೆಂದರೆ ರಾಹುಕಾಲ ಕಳೆಯುವ ತನಕ ಕಾಯಲೇಬೇಕು. ಪ್ರತಿದಿನ ಅವರ ಒಂದೂವರೆ ಗಂಟೆ ಈ ರಾಹುಕಾಲದಲ್ಲಿಯೇ ಹೊರಟುಹೋಗುತ್ತದೆ!

ಮುಖ್ಯಮಂತ್ರಿಯಾದ ಮರುದಿನವೇ ಯಡಿಯೂರಪ್ಪನವರು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಆಣತಿಯಂತೆ ಅವರು ಕೊಟ್ಟ ಅಕ್ಷತೆಯನ್ನು ಬಾಯಲ್ಲಿಟ್ಟುಕೊಂಡು ವಿಧಾನಸೌಧದಲ್ಲಿನ ಅವರ ಕುರ್ಚಿ ಮೇಲೆ ಉಗುಳಿದರೆಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಇದರಿಂದ ಯಾವುದೇ ತೊಡಕಿಲ್ಲದೇ ಅಧಿಕಾರ ಅವಧಿ ಪೂರ್ಣಗೊಳಿಸಬಹುದೆಂದು ಸ್ವಾಮೀಜಿ ಹೇಳಿದ್ದರಂತೆ. ಸ್ವಾಮೀಜಿ ಮಾತು ಸುಳ್ಳಾಗಿದ್ದು ಬೇರೆ ಮಾತು. ಆದರೆ ಯಾರೋ ಏನೋ ಹೇಳಿದರೆಂದು ಅದನ್ನು ಪಾಲಿಸುವುದು ಎಷ್ಟು ಸರಿ? ಪುಣ್ಯವಶಾತ್ ಆ ಸ್ವಾಮೀಜಿ ಅಕ್ಷತೆಯನ್ನೇ ಬಾಯಲ್ಲಿಟ್ಟು ಉಗಿಯಿರಿ ಎಂದರು. ಬೇರೇನನ್ನೋ ಇಟ್ಟು ಉಗಿಯಿರಿ ಎಂದಿದ್ದರೆ ಕಥೆಯೇನು? ಬೇರೆ ದಾರಿಯಿಲ್ಲ ಇಟ್ಟುಕೊಳ್ಳಲೇಬೇಕಾಯಿತು. ಅಧಿಕಾರ ಉಳಿಸಿಕೊಳ್ಳಲು ಅಷ್ಟೂ ಮಾಡದಿದ್ದರೆ ಹೇಗೆ?

ನಮ್ಮ ರಾಜಕಾರಣಿಗಳಿಗೆ ಏನಾಗಿದೆ? ಸ್ವಂತ ಯೋಚಿಸುವುದನ್ನೇ ಬಿಟ್ಟುಬಿಟ್ಟಿದ್ದಾರಲ್ಲ? ಅವರ ಪಾಲಿಗೆ nothing is logical, only astrological ಜ್ಯೋತಿಷಿ ಹೇಳಿದಂತೆ ಮಾಡುವುದಾದರೆ ರಾಜಕಾರಣಿಗಳೇಕೆ ಇರಬೇಕು? ಅವರಿಗೆ ಸಲಹೆಗಾರರು ಏಕಿರಬೇಕು? ವಿಷಯ ತಜ್ಞರು, ಪರಿಣತರು, ವಿಜ್ಞಾನಿಗಳು, ಚಿಂತಕರು ಯಾಕಿರಬೇಕು? ಜ್ಯೋತಿಷಿಗಳೇ ಸರಕಾರ ನಡೆಸಬಹುದಲ್ಲ? ಅಷ್ಟಕ್ಕೂ ಈ ಜ್ಯೋತಿಷಿಗಳಿಗೆ ಈ ಅಧಿಕಾರ ಕೊಟ್ಟವರಾರು? ಮುಖ್ಯಮಂತ್ರಿಯಾದವ ಜ್ಯೋತಿಷಿಯ ಪಾದಕ್ಕೆ ತನ್ನ ಸರಕಾರವನ್ನಿಟ್ಟರೆ ಜನರ ಪಾಡೇನು? ಇಲ್ಲಿ ಮುಖ್ಯಮಂತ್ರಿ ಹೆಚ್ಚೋ, ಜ್ಯೋತಿಷಿ ಹೆಚ್ಚೋ? ಇದು ಸಂವಿಧಾನದ ಅಪಚಾರವಲ್ಲವೇ? ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹವಲ್ಲವೇ? ಅಪಾತ್ರರಿಗೆ ಮನ್ನಣೆ ಕೊಟ್ಟು ತಮ್ಮ ಸ್ಥಾನಮಾನ, ಘನತೆ, ಗೌರವಕ್ಕೆ ಕುಂದು ತಂದಂತಾಗಲಿಲ್ಲವೇ? ಸ್ವಂತ ಯೋಚಿಸುವ, ಚಿಂತಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೆಲ್ಲ ಕಳೆದುಕೊಂಡು ಇವನ್ನೆಲ್ಲ ಯಾರೋ ಕೆಲವು ಜ್ಯೋತಿಷಿಗಳಿಗೆ ಒಪ್ಪಿಸುವುದು ಎಷ್ಟು ಸರಿ?

ಇವನ್ನೆಲ್ಲ ಯಾವುದೇ ಒಂದು ಪಕ್ಷದ ರಾಜಕೀಯ ನಾಯಕರನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿಲ್ಲ. ನಮ್ಮ ರಾಜಕೀಯ ವರ್ಗವೇ ಜ್ಯೋತಿಷಿಗಳಿಗೆ ಅರ್ಪಿಸಿಕೊಂಡುಬಿಟ್ಟಿದೆ. ಅದಕ್ಕೆ ಪ್ರತಿಯಾಗಿ ಜ್ಯೋತಿಷಿಗಳು ರಾಜಕೀಯ ಒಳಮನೆಯ ಹೊಸ ಏಜೆಂಟ್‌ಗಳಾಗಿ, ಪವರ್ ಬ್ರೋಕರ್‌ಗಳಾಗಿ ಪರಿವರ್ತಿತರಾಗಿದ್ದಾರೆ. ದಿಲ್ಲಿಯಿಂದ ಹಳ್ಳಿ ವರೆಗೂ ಈ ಜ್ಯೋತಿಷಿಗಳ ದೊಡ್ಡ ಜಾಲವೇ ಹಬ್ಬಿದೆ. ಯಾವನಿಗೆ ಸ್ವಂತ ಚಿಂತಿಸುವ ಸಾಮರ್ಥ್ಯವಿಲ್ಲವೋ ಅವನು ಬೇರೆಯವರ ಮೇಲೆ ಅವಲಂಬಿತನಾಗಿರುತ್ತಾನೆ. ನಮ್ಮ ರಾಜಕಾರಣಿಗಳು ಸರಿಯಾಗಿ ಆಲೋಚಿಸುವುದನ್ನು ಎಂದೋ ಬಿಟ್ಟಿರುವುದರಿಂದ ಅವರಿಗೆ ಜ್ಯೋತಿಷಿಗಳು ಅನಿವಾರ್ಯವಾಗಿದ್ದಾರೆ. ಅದಕ್ಕಾಗಿಯೇ ಜ್ಯೋತಿಷಿಗಳು ಹೇಳಿದರೆ ಸಾಕು, ನಾಯಕರು ಮಣ್ಣು ತಿನ್ನಲೂ ಮುಂದಾಗುತ್ತಾರೆ!

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಶಂಕರಾಚಾರ್ಯರ ಪಾದಕ್ಕೆರಗಿದ್ದನ್ನು ಕಂಡು ನ್ಯಾಯವಾದಿ ವಿ.ಎಂ. ತಾರ್ಕುಂಡೆ ಬರೆದಿದ್ದರು- “ಇದು ಒಬ್ಬ ಪ್ರಧಾನಿಗೆ ತಕ್ಕುದಾದ ನಡವಳಿಕೆ ಅಲ್ಲ. ಪ್ರಧಾನಿಯಾದವರು ಸಂವಿಧಾನ ಹಾಗೂ ಸಂಸತ್ತಿಗೆ ಮಾತ್ರ ತಲೆಬಾಗಬೇಕೇ ಹೊರತು ಮತ್ತಾವುದಕ್ಕೂ ಅಲ್ಲ. ದೇಶದ ಗೌರವ ಯಾರದೋ ಪಾದಕ್ಕೊಪ್ಪಿಸುವಷ್ಟು ಕ್ಷುಲ್ಲಕವಲ್ಲ."ಕಂಡ ಕಂಡ ಜ್ಯೋತಿಷಿಗಳಿಗೆ ಈಗ ನಮ್ಮ ನಾಯಕರು 'ಡೈವ್" ಹೊಡೆಯುವುದನ್ನು ನೋಡಿದ್ದರೆ ಅವರು ಏನು ಹೇಳುತ್ತಿದ್ದರೋ? ಇದು ರಾಜಕಾರಣಿಗಳ ಅಧಃಪತನ!

(ಸ್ನೇಹ ಸೇತು : ವಿಜಯಕರ್ನಾಟಕ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X