ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವೆಲ್ಲ ಬಿಸಿ ಕಡಾಯಿಯಲ್ಲಿ ಮೈ ಕಾಯಿಸಿ ಸತ್ತುಹೋಗುವ ಕಪ್ಪೆ ಥರಾ...

By Staff
|
Google Oneindia Kannada News


ಮಂತ್ರಿ ಪದವಿ ಹೋದ ಒಂದು ವರ್ಷದೊಳಗೆ ಶೌರಿ, Governance and the sclerosis that has set inಎಂಬ ಅಧ್ಯಯನಪೂರ್ಣ ಪುಸ್ತಕ ಬರೆದರು. ಅದಾಗಿ ಎರಡು ವರ್ಷಗಳ ನಂತರ, ಇತ್ತೀಚೆಗೆ ಶೌರಿ ಮತ್ತೊಂದು ಪುಸ್ತಕ ಬರೆದಿದ್ದಾರೆ -The Parliamentary System, What we have madd of it, What we can make of it ಅಂತ ಅದರ ಹೆಸರು.

ನಮ್ಮ ಸಂಸದೀಯ ವ್ಯವಸ್ಥೆಯಲ್ಲಿನ ಹುಳುಕು, ವಿಪರ್ಯಾಸ, ಜಾಡ್ಯ, ಕೊಳಕನ್ನೆಲ್ಲ ಶೌರಿ ಎಳೆಎಳೆಯಾಗಿ ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದೇವೆ ಎಂದೇನಾದರೂ ಭಾವಿಸಿದ್ದರೆ, ಎಂಥ ಭ್ರಮೆಯಲ್ಲಿದ್ದೇವೆಂಬುದನ್ನು ಶೌರಿ ತಿಳಿಸಿಕೊಡುತ್ತಾರೆ.

ಈ ಕೃತಿಯನ್ನು ಓದಿ ಮುಗಿಸಿದಾಗ ಅನಿಸಿದ್ದೇನಪ್ಪಾ ಅಂದ್ರೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ಶಿಸ್ತುಬದ್ಧವಾಗಿ, ಕಾನೂನುಬದ್ಧವಾಗಿ ಜನರನ್ನು ವಂಚಿಸಲು, ಶೋಷಿಸಲು ಕೆಲವು ಅಧಿಕಾರಸ್ಥರಿಗೆ ನೆರವಾಗಿದೆ, ಪ್ರಜಾಸತ್ತೆಯೂ ಹೇಗೆ ಅನೈತಿಕತೆಯನ್ನು ಪೋಷಿಸಬಹುದು, ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಪ್ರಜೆ ಅದೆಷ್ಟು ತೀರಾ ಸಾಮಾನ್ಯ, ಕಷ್ಟಪಟ್ಟು ಒಮ್ಮೆ ಅಧಿಕಾರ ಸಂಪಾದಿಸಿದರೆ ಅದನ್ನು ಹಿಡಿದಿಟ್ಟುಕೊಳ್ಳುವುದು ಎಷ್ಟು ಸುಲಭ, ಎಲ್ಲ ಕಾನೂನುಗಳನ್ನು Violate ಮಾಡುವುದರ ಮೂಲಕವೇ ಹೇಗೆ ಪಾಲಿಸಬಹುದು, ಕಾನೂನು ಕೇವಲ ಕುರುಡ ಒಂದೇ ಅಲ್ಲ, ಹೇಗೆ ಕಿವುಡ, ಮೂಕ ಹಾಗೂ ಅಶಕ್ತ ಆದರೂ ವಿಕಲಚೇತನ, ಸಂಸತ್ತು ಈ ದೇಶದ ಮೇಲೆ ಎಂಥ ಕ್ರೂರ ಅಣಕಗಳನ್ನು ಮಾಡಬಹುದು.. ಇನ್ನೂ ಏನೇನೋ.

ನಾವು ಒಂಥರಾ ಕಪ್ಪೆಗಳ ಹಾಗೆ ಅಂದರು ಶೌರಿ. ತಕ್ಷಣ ಅರ್ಥವಾಗಲಿಲ್ಲ. ಆಗ ಶೌರಿಯವರೇ ಹೇಳಿದರು -ಒಂದು ಕಪ್ಪೆಯನ್ನು ತೆಗೆದುಕೊಳ್ಳಿ. ಅದನ್ನು ಬಿಸಿನೀರಿನ ಕಡಾಯಿಗೆ ಬಿಸಾಕಿ. ಕಪ್ಪೆ ಒಂದು ಕ್ಷಣ ಗಲಿಬಿಲಿಗೊಳ್ಳುತ್ತದೆ. ಬಿಸಿಯ ತೀವ್ರತೆಯಿಂದ ಕಡಾಯಿಯಿಂದ ಅದು ಮೇಲಕ್ಕೆ ಹಾರುತ್ತದೆ. ಸ್ವಲ್ಪ ಸುಟ್ಟ ಗಾಯಗಳಾದರೂ ಕಪ್ಪೆ ಹೇಗೋ ಬಚಾವಾಗುತ್ತದೆ. ಮತ್ತೊಂದು ಕಪ್ಪೆ ತೆಗೆದುಕೊಳ್ಳಿ. ಅದನ್ನು ತಣ್ಣೀರು ತುಂಬಿರುವ ಕಡಾಯಿಯಲ್ಲಿ ಹಾಕಿ. ಅನಂತರ ನಿಧಾನವಾಗಿ ಕಡಾಯಿಯನ್ನು ಕುದಿಸಿ. ನೀರು ಬಿಸಿಯಾಗುತ್ತಾ ಹೋಗುತ್ತದೆ. ಕಡಾಯಿಯೊಳಗಿನ ಕಪ್ಪೆ ಏರುತ್ತಿರುವ ನೀರಿನ ತಾಪಮಾನಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತದೆ. ಕೊನೆಕೊನೆಗೆ ಕಪ್ಪೆ ಏರುತ್ತಿರುವ ನೀರಿನ ತಾಪಮಾನಕ್ಕೆ ಅದೆಷ್ಟು ಹೊಂದಿಕೊಳ್ಳುತ್ತದೆಂದರೆ ಮೈಸುಡುತ್ತಿರುವುದು ಸಹ ಗೊತ್ತಾಗುವುದಿಲ್ಲ. ಕೊನೆಗೆ ಆ ಹಂತ ಬರುತ್ತದೆ. ಅಷ್ಟು ಹೊತ್ತಿಗೆ ಕಾಲ ಮೀರಿರುತ್ತದೆ. ಏನೂ ಮಾಡಲು ಆಗುವುದಿಲ್ಲ. ಕಪ್ಪೆ ಸುಟ್ಟ ಗಾಯಗಳಿಂದ ಸತ್ತು ಹೋಗುತ್ತದೆ. ನಿಮಗೆ ಅನಿಸುವುದಿಲ್ವಾ ನಾವೂ ಒಂಥರ ಈ ಕಪ್ಪೆಗಳ ಹಾಗೆ ಅಂತ. ಸಾರ್ವಜನಿಕ ಜೀವನದಲ್ಲಿ ಕೊಳಕು, ಅನೀತಿ, ಅತ್ಯಾಚಾರ, ಅನೈತಿಕತೆ ಎಷ್ಟೇ ಹೆಚ್ಚಲಿ, ಕಡಾಯಿಯೊಳಗಿನ ಕಪ್ಪೆಯಂತೆ ಮೈಬಿಸಿ ಕಾಯಿಸಿಕೊಳ್ಳುತ್ತಿರುತ್ತೇವೆ. ಕೊನೆಗೆ ಸತ್ತು ಹೋಗುತ್ತೇವೆ.

ಶೌರಿ ಹೇಳುವುದರಲ್ಲಿ ಅತಿಶಯೋಕ್ತಿಯೇನಿಲ್ಲ, ಅರ್ಥವಿದೆ. ಕಳೆದ 20ವರ್ಷಗಳ ಹಿಂದೆ ನಾವು ಹೀಗೆ ಕಲ್ಪಿಸಿಕೊಂಡಿದ್ದೆವಾ, ಅತ್ಯಾಚಾರಿಗಳು, ಮರ್ಡರ್ ಮಾಡಿದವರು, ಅನಾಚಾರವೆಸಗಿದವರೆಲ್ಲ ಇಂದು ಮಂತ್ರಿಗಳು, ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳಾಗುತ್ತಾರೆಂದು? ನಾವು ಇವರನ್ನು ಸಹಿಸಿಕೊಂಡಿಲ್ಲವಾ? ಇವರು ಬರುತ್ತಾರೆಂದರೆ ಅವರ ಹಿಂದೆ ಓಡುವುದಿಲ್ಲವಾ? ಭ್ರಷ್ಟ ಅಧಿಕಾರಿಗಳು ಆಯಕಟ್ಟಿನ ಸ್ಥಳದಲ್ಲಿ ಕುಳಿದ್ದರೂ, ಜನರನ್ನು ಸುಲಿಯುತ್ತಿದ್ದರೂ ಸಹಿಸಿಕೊಂಡಿಲ್ಲವಾ? ಒಂದು ದಿನವಾದರೂ ನಾವು ಪ್ರತಿಭಟಿಸಿದ್ದೇವಾ?

ಬಿಹಾರ, ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ನಡೆಯುವ ಪ್ರಹಸನಗಳು ನಮ್ಮ ರಾಜ್ಯ ವಿಧಾನಸಭೆಗಳಲ್ಲಿ ನಡೆಯುತ್ತಿದ್ದರೂ, ಅದನ್ನು ನಾವು ಈಗ ಒಪ್ಪಿಕೊಂಡಿಲ್ಲವಾ? ಸಂಸತ್ತಿನಲ್ಲೂ ಅಂತಹ ಘಟನೆ ನಡೆದಾಗಲೂ ನಮಗೇಕೆ ಏನೂ ಅನಿಸುವುದಿಲ್ಲ? ಭಯೋತ್ಪಾದಕರ ಹಿಂಸೆ, ಕಗ್ಗೊಲೆ, ಸ್ಫೋಟ, ಹಿಂಸಾಚಾರಗಳನ್ನೆಲ್ಲ ನಾವು ಸಹಿಸಿಕೊಂಡಿಲ್ಲವಾ? ಭಾರತದ ನ್ಯಾಯಾಲಯಗಳ ಮುಂದೆ ಎರಡೂವರೆ ಕೋಟಿ ಕೇಸುಗಳಿದ್ದರೂ, ನ್ಯಾಯ ಸಿಗುವುದೇ ಇಲ್ಲ ಎಂಬ ಪರಿಸ್ಥಿತಿಯಿದ್ದರೂ ಪುನಃ ಕೋರ್ಟಿನ ಮುಂದೆ ನಿಂತುಕೊಂಡಿಲ್ಲವಾ?

ನಮ್ಮ ಕಾರ್ಪೋರೇಟರ್, ಮಂಡಲ ಪಂಚಾಯಿತಿ ಸದಸ್ಯ, ಶಾಸಕ, ಸಂಸದರೆಲ್ಲ ಶುದ್ಧ ಹಸ್ತರೇನಲ್ಲ ಎಂಬುದು ಗೊತ್ತಿದ್ದರೂ ನಮ್ಮನ್ನು ಆಳುವ ಹಕ್ಕು ಹಾಗೂ ಹೊಣೆಗಾರಿಕೆಯನ್ನು ಅವರಿಗೇ ವಹಿಸಿ ನಾವು ಸುಮ್ಮನೆ ಕುಳಿತಿಲ್ಲವಾ? ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲ ಲೋಪದೋಷಗಳಿದ್ದರೂ, ಅದನ್ನೇ ನಾವು ಒಪ್ಪಿಕೊಂಡಿಲ್ಲವಾ? ಇದೇ ಸಂವಿಧಾನದ ಹೆಸರಿನಲ್ಲಿ ನಮ್ಮನ್ನು ಆಳುವವರು ಪ್ರಮಾಣ ವಚನ ಸ್ವೀಕರಿಸುವುದನ್ನು ಮೂಕ ಪ್ರೇಕ್ಷಕರಾಗಿ ನೋಡುವುದಿಲ್ಲವಾ?

ಈಗ ಹೇಳಿ ನಾವು ಬಿಸಿ ಕಡಾಯಿಯಲ್ಲಿನ ಕಪ್ಪೆಗಳಲ್ಲವಾ? ನಾವು ಎಂಥವರೋ, ನಮಗೆ ಅಂಥವರೇ ಸಿಗುತ್ತಾರೆ. ನಾವು ಇವನ್ನೆಲ್ಲ ನೋಡಿ ಸುಮ್ಮನೆ ಕುಳ್ಳಿರಿಸುವವರೇ ಸಿಗುತ್ತಾರೆ. ನಮ್ಮ ಕೈಯಲ್ಲಿ ಏನೂ ಆಗುವುದಿಲ್ಲವೆಂಬುದು ನಮ್ಮನ್ನು ಆಳುವುರಿಗೆ ಗೊತ್ತು. ಎಲ್ಲಿಯವರೆಗೆ ಸುಲಭವಾಗಿ ನಂಬುವವರು ಸಿಗುತ್ತಾರೋ ಅಲ್ಲಿವರೆಗೆ ಸುಲಭವಾಗಿ ಮೋಸ ಹೋಗುವವರು ಇರುತ್ತಾರೆ. ಎಲ್ಲಿಯವರೆಗೆ ಶೋಷಣೆಗೊಳಗಾಗುವವರು ಇರುತ್ತಾರೋ ಅಲ್ಲಿ ತನಕ ಶೋಷಿಸುವವರೂ ಇರುತ್ತಾರೆ.

ಹಾಗೆ ನೋಡಿದರೆ ನಾವು ಆಚರಿಸುತ್ತಿರುವ ಪ್ರಜಾಪ್ರಭುತ್ವವಿದೆಯಲ್ಲಿ ಅದೊಂದು ಶುದ್ಧ ಬೋಗಸ್. ಶೇ. 99ರಷ್ಟು ಶಾಸಕರು, ಸಂಸದರು ಶೇ. 15ರಿಂದ 20ರಷ್ಟು ಮತದಾರರಿಂದ ಆಯ್ಕೆಯಾಗುತ್ತಾರೆ. ಅಂದರೆ ಒಟ್ಟೂ ಜನಸಂಖ್ಯೆಯ ಶೇ.7ರಿಂದ 10ರಷ್ಟು ಮಾತ್ರ ಮತದಾನದಲ್ಲಿ ಭಾಗವಹಿಸುತ್ತಾರೆ. ಹೀಗಿರುವಾಗ ಶಾಸಕ, ಸಂಸದರು ಹೇಗೆ ಜನಪ್ರತಿನಿಧಿಗಳಾಗುತ್ತಾರೆ? ಇವರಿಂದ ರಚಿತವಾಗುವುದು ಹೇಗೆ ಜನಪ್ರಿಯ ಸರ್ಕಾರವಾಗುತ್ತದೆ? ಅದನ್ನು ಒಪ್ಪಿಕೊಳ್ಳುವುದಾದರೂ ಹೇಗೆ?

ಈಗಿನ ಲೋಕಸಭೆಯಲ್ಲಿ 30ಪಕ್ಷಗಳಿವೆ. ಸರ್ಕಾರದಲ್ಲಿ 14ಪಕ್ಷಗಳಿವೆ. ಸರ್ಕಾರದಲ್ಲಿರುವ ಪಕ್ಷಗಳಿಗಿಂತ ಹೊರಗೇ ಹೆಚ್ಚು ಪಕ್ಷಗಳಿವೆ. ಹೀಗಿರುವಾಗ ಈ ಸರ್ಕಾರ ಅದೆಷ್ಟು ದಕ್ಷ ಆಡಳಿತ ನೀಡಬಹುದು? ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾದ ಪ್ರಸಂಗವನ್ನು ನಮ್ಮ ಸಂಸದೀಯ ವ್ಯವಸ್ಥೆ ನಿರ್ಮಿಸಿದ್ದನ್ನು ಸಹ ಕಂಡಿದ್ದೇವೆ. Mandate ಇಲ್ಲದವರು ಮುಖ್ಯಮಂತ್ರಿ, ಪ್ರಧಾನಿಗಳಾಗಿದ್ದನ್ನು ನೋಡಿದ್ದೇವೆ. ಕೇವಲ ಹದಿನಾರು ಸಂಸದರನ್ನು ಹೊಂದಿದವರು ಪ್ರಧಾನಿಯಾಗಲಿಲ್ಲವೇ? ಇದೆಂಥ ವ್ಯವಸ್ಥೆ? ಇದೂ ಒಂದು ವ್ಯವಸ್ಥೆಯಾ?

ಕಾನ್‌ಸ್ಟಿಟ್ಯೂಯೆಂಟ್ ಅಸೆಂಬ್ಲಿಗೆ ಸಂವಿಧಾನ ಸಲಹೆಗಾರರಾಗಿದ್ದ ಬಿ.ಎನ್. ರಾವ್ ಹೇಳುತ್ತಿದ್ದರು -ನನ್ನ ಸ್ನೇಹಿತರು ಸಿಕ್ಕಾಗಲೆಲ್ಲ ಸಂವಿಧಾನ ರೂಪಿಸುವಲ್ಲಿ ನಿಮ್ಮ ಪಾತ್ರವೂ ದೊಡ್ಡದು, ಡಾ.ಅಂಬೇಡ್ಕರ್ ಜತೆ ನೀವೂ ದುಡಿದಿದ್ದೀರಿ, ನೀವು ಸಂವಿಧಾನದ ರೂವಾರಿ ಎಂದೆಲ್ಲ ಹೊಗಳುತ್ತಾರೆ. ಆದರೆ ಈ ಸಂವಿಧಾನದಲ್ಲಿ ಅಡಕವಾದ ಅನೇಕ ಸಂಗತಿಗಳನ್ನು ಮನಸ್ಸಿಲ್ಲದ ಮನಸ್ಸಿನಿಂದ ಸೇರಿಸಿದ್ದೇನೆ. ಈ ಸಂವಿಧಾನವನ್ನು ಸುಡಬೇಕೆನ್ನುವುವವರಲ್ಲಿ ನಾನೇ ಮೊದಲಿಗ. ಇದೇನೂ ಅವರು ಗುಟ್ಟಾಗಿ ಹೇಳಿದ್ದಲ್ಲ. 1953ರ ಸೆಪ್ಟೆಂಬರ್ 2ರಂದು ರಾಜ್ಯಸಭೆಯಲ್ಲಿಯೇ ಈ ಮಾತು ಬಿ.ಎನ್.ರಾವ್ ಹೇಳಿದ್ದರು. ನಿಶ್ಚಿತವಾಗಿಯೂ ಸಂವಿಧಾನ ರೂವಾರಿಗಳಿಗೆ ಈ ವ್ಯವಸ್ಥೆಯನ್ನು ನೈತಿಕವಾಗಿ ಆ ಅಧೋಗತಿಗೆ ಕೊಂಡೊಯ್ಯಬಹುದೆಂಬ ಕಲ್ಪನೆ ಸಹ ಇದ್ದಿರಲಿಕ್ಕಿಲ್ಲ.

ಶೌರಿ ಮಾತುಗಳನ್ನು ಕೇಳುತ್ತಿದ್ದರೆ ಬೇಸರ, ವ್ಯಥೆ, ಸಿಟ್ಟು ಎಲ್ಲವೂ ಮುಕರಿಕೊಳ್ಳುತ್ತದೆ. ಹೌದಲ್ಲ. ನಾವು ಒಂದಿ ದಿನ ಕಡಾಯಿ ಕಪ್ಪೆಯಂತೆ ಸತ್ತು ಹೋಗುತ್ತೇವೆ. ಛೇ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X