• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇತಿಹಾಸ ಸ್ಪರ್ಶಿಸುವ ಅವಕಾಶ ನಮ್ಮಿಬ್ಬರಿಗೂ ಸಿಗಲೇ ಇಲ್ಲ!

By Staff
|

ಇದಾಗಿ ಎಂಟು ದಿನಗಳ ನಂತರ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸುದ್ದಿ ನೋಡಿ ದಂಗಾದೆ. ಅದು ನಾನು ಎತ್ತಿಕೊಟ್ಟ ಕೈಚೀಲದ ಬಗ್ಗೆ ಬರೆದ ಸುದ್ದಿ! ಆಫ್‌ಕೋರ್ಸ್, ಆ ವರದಿಯಲ್ಲಿ ನನ್ನ ಹೆಸರೇನೂ ಪ್ರಸ್ತಾಪವಾಗಿರಲಿಲ್ಲ. ಈ ಘಟನೆ ನೆನಪಾದರೆ ಸಾಕು, ಹೊಟ್ಟೆಯೊಳಗೆ ಬುದಗುಡುವ ಪಿತ್ತ.

  • ವಿಶ್ವೇಶ್ವರ ಭಟ್

Stone carverಕೆಲವು ಸಲ ಹಾಗೇ ಆಗುತ್ತದೆ. ನಾವು ಇತಿಹಾಸದ ಜತೆಗಿರುತ್ತೇವೆ. ಅದನ್ನು ಬಗಲಲ್ಲಿ ಇಟ್ಟುಕೊಂಡಿರುತ್ತೇವೆ. ನಮ್ಮ ಪಕ್ಕದಲ್ಲಿ ಕೆಲಕಾಲ ಜಗತ್ತು ಚಿಂತಿಸಿದ, ತಲೆಕೆಡಿಸಿಕೊಂಡ ಇತಿಹಾಸದ ತುಣುಕು ಕುಳಿತಿರುತ್ತದೆ. ಇತಿಹಾಸ ನಿರ್ಮಿಸಿದ ವ್ಯಕ್ತಿ ನೆಟ್ಟಗೆ ಕುಳಿತಿರುತ್ತಾನೆ. ಆದರೆ ಗೊತ್ತೇ ಆಗುವುದಿಲ್ಲ ನಮಗೆ.

ಖ್ಯಾತ ಬ್ರಿಟನ್ ಪತ್ರಕರ್ತ ರಿಚರ್ಡ್ ಸೈಮನ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಕ್ಕದ ಸೀಟಿನಲ್ಲಿ ಇಂಗ್ಲೆಂಡ್ ಪ್ರಧಾನಿಯಾಗಿದ್ದ ವಿನ್‌ಸ್ಟನ್ ಚರ್ಚಿಲ್ ಕುಳಿತಿದ್ದ. ಪ್ರಧಾನಿಪಟ್ಟ ಕಳಕೊಂಡ ನಂತರ, ಮನಸ್ಸಿಗೆ ಕವಿದ ಸಣ್ಣ ಕಿರಕಿತೆಯನ್ನು ನಿವಾರಿಸಲು ಒಂದು ಸುತ್ತು ಹಾಕಿಬರೋಣವೆಂದು ಚರ್ಚಿಲ್ ಬಸ್ಸು ಹತ್ತಿದ. ಈ ಸೈಮನ್ ಪಕ್ಕದಲ್ಲಿಯೇ ಹೋಗಿ ಕುಳಿತ. ಸೈಮನ್ ಆಗಿನ್ನೂ ಪತ್ರಕರ್ತನಾಗಿರಲಿಲ್ಲ. ಆದರೆ ಚರ್ಚಿಲ್ ಬಗ್ಗೆ ಸಾಕಷ್ಟು ಓದಿದ್ದ, ಕೇಳಿದ್ದ. ಚರ್ಚಿಲ್‌ನಿಂದ ಪ್ರಭಾವಿತನಾಗಿದ್ದ. ಚರ್ಚಿಲ್ ಭಂಗಿಯಲ್ಲಿ ಸಿಗಾರು ಸೇದುವುದನ್ನೂ ರೂಢಿ ಮಾಡಿಕೊಂಡಿದ್ದ. ಜೀವನದಲ್ಲೊಮ್ಮೆ ಚರ್ಚಿಲ್ ಜತೆ ಕೆಲ ಸಮಯವನ್ನಾದರೂ ಕಳೆಯಬೇಕೆಂಬುದು ಅವನ ಹಸಿ ಹಸಿ ಹುಚ್ಚು ಆಕಾಂಕ್ಷೆ. ಬಹು ದಿನಗಳಿಂದ ಕಾತರಿಸುತ್ತಿದ್ದ ಕ್ಷಣ ಬಂದೇ ಬಿಟ್ಟಿತು. ಯುದ್ಧ ಕಾಲದಲ್ಲಿ ಬ್ರಿಟನ್‌ನನ್ನು ಮುನ್ನಡೆಸಿದ (Wartime prime ministers) ಧೀಮಂತ, ದೈತ್ಯ ಪಕ್ಕದಲ್ಲಿ ಕುಳಿತಿದ್ದಾನೆ. ಇತಿಹಾಸದ ಮಾಂಸದ ಮುದ್ದೆ!

ಸೈಮನ್‌ಗೆ ಅನಿಸಿತು, ಹೋಗಿ ಹೋಗಿ ಈ ಬಸ್ಸಿನಲ್ಲಿ ಪಯಣಿಸಲು ಚರ್ಚಿಲ್‌ಗೆ ತಲೆ ಕೆಟ್ಟಿದೆಯೇ? ಈ ದೇಶದ ಪ್ರಧಾನಿಯಾಗಿದ್ದವ ಹೀಗೆ ಚಿಲ್ಲರೆಯಾಗಿ ಬಸ್ಸಿನಲ್ಲಿ ಪ್ರಯಾಣಿಸುವುದುಂಟೇ? ನಾನೇನು ಕನಸು ಕಾಣುತ್ತಿಲ್ಲವಷ್ಟೆ?

ಸೈಮನ್ ತನ್ನ ಪಾಡಿಗೆ ತಾನು ಅಂದಿನ ಪತ್ರಿಕೆಯೊಳಗೆ ತೂರಿಕೊಂಡುಬಿಟ್ಟ. ಅದೇ ಪತ್ರಿಕೆಯಲ್ಲಿ ಚರ್ಚಿಲ್‌ನ ಸಂದರ್ಶನವೂ ಅಂದು ಪ್ರಕಟವಾಗಿತ್ತು. ಚರ್ಚಿಲ್ ಸ್ವಾರಸ್ಯವಾಗಿ ಸಿಗಾರು, ಹೆಣ್ಣು, ಗುಂಡು, ಕೋಟು, ಟೋಪಿ, ವಿಲಾಸಿ ಜೀವನ, ಷೋಕಿತನ, ಓದಿದ ಪುಸ್ತಕ, ಬರಹ, ಪೆನ್ನು, ನಾಯಿ... ಹೀಗೆ ತನ್ನ ಅನೇಕ ಖಾಸಗಿ ವಿಷಯಗಳ ಬಗ್ಗೆ ಎದೆಯಗೂಡಿನ ಬಾಗಿಲು ಸರಿಸಿ ಮಾತಾಡಿದ್ದ. ಅಧ್ಯಯನ ಹಾಗೂ ಬರವಣಿಗೆಯಲ್ಲಿರುವ ಜೀವನ ಸಾಕ್ಷಾತ್ಕಾರವನ್ನು ಬೇರೆ ಯಾವುದರಲ್ಲಿಯೂ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ಚರ್ಚಿಲ್ ವೇದಾಂತಿಯಂತೆ ನುಡಿದಿದ್ದ. ಇಡೀ ರಾಷ್ಟ್ರವೇಕೆ, ಜಗತ್ತನ್ನೇ ಬೇಕಾದರೂ ಉದ್ದೇಶಿಸಿ ಮಾತಾಡುತ್ತಾ ಸಮ್ಮೋಹನದ ಪ್ರೋಕ್ಷಣೆ ಸೋಕಿಸುವ ಅಪ್ರತಿಮ ನಾಯಕನ ಪ್ರತಿಕೃತಿ ಮನದೊಳಗೆ ಹರಡಿಕೊಂಡು ಗುಂಗು ಹಿಡಿಸುತ್ತಿದ್ದರೆ, ಅದಕ್ಕೆ ಕಾರಣನಾದ ವ್ಯಕ್ತಿ ಸಾಕ್ಷಾತ್ ಪಕ್ಕದಲ್ಲಿಯೇ ಬಿಮ್ಮಗೆ ಕುಳಿತಿದ್ದಾನೆ.

ಸೈಮನ್ ಪಕ್ಕದಲ್ಲಿ ಕುಳಿತ ಆಸಾಮಿಯನ್ನು ಅಪಾದಮಸ್ತಕವಾಗಿ ನೋಡಿ, 'ನನಗೇನೋ ಭ್ರಮೆ, ಚರ್ಚಿಲ್ ಏಕೆ ಈ ಬಸ್ಸಿನಲ್ಲಿ, ಅದೂ ನನ್ನ ಪಕ್ಕದಲ್ಲಿ ಕುಳಿತುಕೊಳ್ತಾನೆ. ಆತನಿಗೆ ತಲೆ ಸರಿಯಾಗಿಯೇ ಇದೆಯಲ್ಲ, ನನ್ನ ಮನಸ್ಸು ಹೀಗ್ಯಾಕೆ ಸೊಟ್ಟಗೆ ಒಂದೊಂದು ಸಲ ವರ್ತಿಸುತ್ತದೆ" ಎಂದು ಅಂದುಕೊಂಡು ಪುನಃ ಪತ್ರಿಕೆಯೊಳಗೆ ತೂರಿಕೊಂಡ.

ಆತನ ಪಾಲಿಗೆ 'ಇತಿಹಾಸ" ಕೈತಪ್ಪಿಹೋಯಿತು. ಮುಂದೆಂದೂ ಅಂಥ ಅವಕಾಶ ಬರಲೇ ಇಲ್ಲ. ಮರುದಿನ ಪತ್ರಿಕೆಯಲ್ಲಿ ಚರ್ಚಿಲ್ ಬಸ್ ಪ್ರಯಾಣದ ವರದಿ ನೋಡಿದ ಸೈಮನ್‌ಗೆ ಷಾಕ್! ತನ್ನ ಜೀವನದಲ್ಲಿ 'ಅಮೋಘ ಗಳಿಗೆ"ಯಾಗುವ ಕ್ಷಣಗಳು ಮಡಿಲೇರಿ ಬಂದು ಕುಳಿತಿದ್ದರೂ ಅದನ್ನು ಗುರುತಿಸಲಿಲ್ಲವಲ್ಲಾ ಎಂದು ಸೈಮನ್ ತನ್ನನ್ನೇ ಹಳಿದುಕೊಂಡ. ತನ್ನ ಜೀವನದ ಅತ್ಯಂತ ಸ್ಮರಣೀಯ ಹಾಗೂ ಕೆಟ್ಟ ಗಳಿಗೆಯೆಂದರೆ ಇದೇ ಎಂದು ಸೈಮನ್ ಅನೇಕ ಬಾರಿ ಹೇಳಿ ವ್ಯಥೆಪಟ್ಟುಕೊಂಡ.

ಬಾಲ್ಯದಲ್ಲಿ ಮುದ್ದು ಮುದ್ದು ಅಕ್ಷರಗಳಲ್ಲಿ ಬರೆದ ಪುಸ್ತಕ, ಸ್ವಹಸ್ತಾಕ್ಷರವಿದ್ದ ಪುಸ್ತಕ ಎಷ್ಟೋ ವರ್ಷಗಳ ನಂತರ ರದ್ದಿ ಅಂಗಡಿಯಲ್ಲಿ ಸಿಕ್ಕಾಗ ನಮ್ಮ ಪಾಲಿಗೆ ಅದು ಅಪೂರ್ವ ಇತಿಹಾಸದ ತುಣುಕಾಗಿ ಮಾರ್ಪಾಡಾಗಿರುತ್ತದೆ. ತುದಿ ಬೆರಳಲ್ಲಿ ಮುಟ್ಟಿದರೆ ಕೈಗೆಲ್ಲ ಬಾಲ್ಯದ ನೆನಪುಗಳ ಹುಡಿ ಹುಡಿ. ಅವನ್ನು ಹುಡುಕಿಕೊಂಡು ಮನಸ್ಸು ಹಿಂಗಾಲಿನಲ್ಲಿ ಪ್ರಯಾಣ ಹೊರಡುತ್ತದೆ.

ಕೆಲವು ಜನ, ಕೆಲವು ವಸ್ತು ಕೆಲ ಕ್ಷಣ ಮಾತ್ರ ನಮ್ಮೊಂದಿಗೆ ಇರುತ್ತಾರೆ, ಇರುತ್ತವೆ. ಆ ಕ್ಷಣ ತಪ್ಪಿ ಹೋದರೆ ಮುಂದೆಂದೂ ಅವರನ್ನು ಭೇಟಿಯಾಗಲು ಸಾಧ್ಯವಾಗುವುದೇ ಇಲ್ಲ. ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗ ಮುಂದಿನ ಬೆಂಚಿನ ಕೊನೆಯಲ್ಲಿ ಕುಳಿತ ಹುಡುಗಿ, ಅದೇ ಶಾಲೆಯ ಮಾಸ್ತರು, ಬೆನ್ನುತಟ್ಟಿದ ಮೇಡಮ್ಮು, ಜಗಳಕ್ಕೆ ನಿಂತ ಗೆಳೆಯ, ಮೈತುಂಬಾ ಕಾಯಿಗಳನ್ನು ಜೋಲಿಸಿಕೊಳ್ಳುತ್ತಿದ್ದ ಮಾವಿನ ಮರ, ಮನೆಯಲ್ಲಿದ್ದ ಹಳೇ ಕುರ್ಚಿ, ಎಲೆ ಅಡಕೆ ಹಾಕಿದವರ ಹಲ್ಲಿನಂತಿದ್ದ ಅಡಕತ್ತರಿ, ಮೊದಲ ಬಾರಿಗೆ ನೋಡಿದ ಬಸ್ಸಿನ ಕಂಡಕ್ಟರ್, ಬೆಂಡು, ಬತ್ತಾಸು, ಪುಗ್ಗ, ಐಸ್‌ಕ್ಯಾಂಡಿ, ರಂಗಾಣಿಗಳನ್ನು ತಳ್ಳುಗಾಡಿಯಲ್ಲಿ ತರುತ್ತಿದ್ದವ, ಕೈಕೊಟ್ಟ ಪ್ರೀತಿ, ಶಾಲೆ-ಕಾಲೇಜಿನಲ್ಲಿ ಕಳೆದ ದಿನಗಳೂ ಜೀವನದಲ್ಲಿ ಇನ್ನೊಮ್ಮೆ ಬರದೇ ತಪ್ಪಿಸಿಕೊಂಡುಬಿಡುತ್ತವೆ. ಆ ಕ್ಷಣಗಳು, ವ್ಯಕ್ತಿಗಳು, ವಸ್ತುಗಳು ಪುನಃ ನಮ್ಮೆದುರು ಬರುತ್ತವಾ ಇಲ್ಲವಾ ಗೊತ್ತಿಲ್ಲ. ಒಮ್ಮೆ ಬಂದಿತೆನ್ನಿ. ಆಗ ಅವನ್ನು ಗುರುತಿಸಲಾಗದಿದ್ದರೆ, ಗುರುತಿಸಲಾಗಲಿಲ್ಲವೆನ್ನುವುದು ಗೊತ್ತಾದರೆ ಅದರಂಥ ವೇದನೆ ಇನ್ನೊಂದಿಲ್ಲ.

ಇಲ್ಲಿ ನನಗೆ ಸಿಕ್ಕಿದ 'ಇತಿಹಾಸ"ವನ್ನು, ನಾನು ತಪ್ಪಿಸಿಕೊಂಡ 'ಇತಿಹಾಸ"ವನ್ನು ಹೇಳಬೇಕು. ಈ ಘಟನೆ ನೆನಪಾದರೆ ಸಾಕು, ಹೊಟ್ಟೆಯೊಳಗೆ ಬುದಗುಡುವ ಪಿತ್ತ. 1998ರ ಸೆಪ್ಟೆಂಬರ್‌ನ ಒಂದು ದಿನ. ಲಂಡನ್‌ನ ಉತ್ತರ ತುದಿಯ ಸೌತ್‌ಗೇಟ್‌ನಿಂದ ಊರ ಮಧ್ಯದಲ್ಲಿರುವ ಚೆರಿಂಗ್ ಕ್ರಾಸ್‌ಗೆ ಹೋಗಲು ಅಂಡರ್‌ಗ್ರೌಂಡ್ ರೈಲಿನಲ್ಲಿ ಕುಳಿತಿದ್ದೆ. ಚಲಿಸುವ ಲಂಡನ್ ಅನ್ನು ನೋಡಬೇಕೆನಿಸಿದರೆ ಭೂಮಿಯ ಕೆಳಗಿನ ಐದಾರು ಪದರಗಳಲ್ಲಿ ನಿತ್ಯ ಹರಿದಾಡುವ ಅಂಡರ್‌ಗ್ರೌಂಡ್ ರೈಲನ್ನು ನೋಡಬೇಕು. ಇದು ಎಂಥ ವಿಚಿತ್ರ ಅಂತೀರಿ. ನಿಮಗೆ ಈ ರೈಲಿನಲ್ಲಿ ವಿಚಿತ್ರಾತಿ ವಿಚಿತ್ರ ಜನರು ಕಾಣಸಿಗುತ್ತಾರೆ. ನಿಮ್ಮ ರಾಜ್ಯದ, ಊರಿನ, ಪಕ್ಕದ ಮನೆಯಾತ ಸಿಕ್ಕರೂ ಅಚ್ಚರಿಯಿಲ್ಲ. ಇಡೀ ಭೂಮಿ ಸೂರ್ಯನ ಸುತ್ತ ಸುತ್ತಬಹುದು. ಆದರೆ ಇಡೀ ಲಂಡನ್ ಮಾತ್ರ ಈ ರೈಲಿನ ಸುತ್ತ ಸುತ್ತುತ್ತದೆ.

ಇಂಥ ರೈಲಿನಲ್ಲಿ ಹೋಗುವಾಗ ಹಣ್ಣುಹಣ್ಣು ಮುದುಕನೊಬ್ಬ ಪಕ್ಕದಲ್ಲಿಯೇ ಕುಳಿತಿದ್ದ. ಅದ್ಯಾವ ಸ್ಟೇಶನ್ನು ಬಂತೋ ಏನೋ ಆತ ತನ್ನ ಪಾಡಿಗೆ ತಾನು ಇಳಿದು ಹೋದ. ಅವನ ಸೀಟನ್ನು ಇನ್ಯಾರೋ ಭರ್ತಿ ಮಾಡಿದರು. ಅದನ್ನು ಕೂಡ ನಾನು ಗಮನವಿಟ್ಟು ಲಕ್ಷ್ಯ ಕೊಡಲಿಲ್ಲ. ಯಾರೋ ಬರುತ್ತಾರೆ, ಯಾರೋ ಹೋಗುತ್ತಾರೆ. ಅವರೆಲ್ಲರನ್ನು ಏನೆಂದು, ಏಕಾಗಿ ನೋಡಬೇಕು?

ಪ್ರತಿ ಸ್ಟೇಶನ್ ಬಂದಾಗಲೂ ನನ್ನ ಪಕ್ಕದ ಸೀಟಿನಲ್ಲಿದ್ದವರು ಎದ್ದು ಹೋಗುತ್ತಿದ್ದರು. ಹಾಗೆ ಆ ಸೀಟಿನಲ್ಲಿ ಬೇರೊಬ್ಬರು ಕುಳಿತುಕೊಳ್ಳುತ್ತಿದ್ದರು. ಆದರೆ ಆ ಸೀಟಿನ ಬುಡದಲ್ಲಿಟ್ಟಿದ್ದ ವೆಲ್‌ವೆಟ್ ಕೈಚೀಲ ಮಾತ್ರ ಹಾಗೇ ಇತ್ತು. ಚೆರಿಂಗ್ ಕ್ರಾಸ್ ಬಂತು. ಅದು ಕೊನೆಯ ನಿಲ್ದಾಣ. ಇನ್ನೇನು ಇಳಿಯಬೇಕೆಂದಿದ್ದಾಗ ವಾರಸುದಾರರಿಲ್ಲದ ಆ ಚೀಲ ಹಾಗೇ ಇತ್ತು. ಸಂಶಯಾಸ್ಪದ ವಸ್ತುವನ್ನು (ಬಾಂಬ್?) ಸುತ್ತಿಟ್ಟಂತೆ ಕಾಣುತ್ತಿದ್ದ ಆ ಚೀಲವನ್ನು ಎತ್ತಿ, ನಿಲ್ದಾಣದ ಅಧಿಕಾರಿಗಳಿಗೆ ತಲುಪಿಸೋಣವೆಂದುಕೊಂಡರೆ, ಗೆಳೆಯ ಮಹಾಬಲೇಶ್ವರ ಜೋಶಿ, 'ನಿನಗ್ಯಾಕೆ ಈ ಉಸಾಬರಿ? ಸುಮ್ಮನೆ ಬಾರಯ್ಯ, ಇಲ್ಲಿನ ಜನ ಈ ರೈಲಿನಲ್ಲಿ ಬ್ಯಾಗನ್ನಲ್ಲ, ಕಟ್ಟಿಕೊಂಡವರನ್ನೇ ಬಿಟ್ಟು ಹೋಗ್ತಾರೆ. ಈ ಬ್ಯಾಗೇನು ಮಹಾ?" ಎಂದ. ಆದರೂ ನನಗೆ ಸಮಾಧಾನವಾಗಲಿಲ್ಲ. ಏನು ಬೇಕಾದರಾಗಲಿ, ಆ ಬ್ಯಾಗನ್ನು ಎತ್ತಿಕೊಂಡು ಅಲ್ಲಿನ ರೈಲು ಅಧಿಕಾರಿಗೆ ಒಪ್ಪಿಸಿದೆ. ಆಕೆ ಪ್ರೀತಿಯಿಂದ 'ಥ್ಯಾಂಕ್ಸ್" ಅಂದಳು. ನಾನು ಆಕೆಗೊಂದು ನಗೆ ಚೆಲ್ಲಿ ಮುನ್ನಡೆದೆ.

ಇದಾಗಿ ಎಂಟು ದಿನಗಳ ನಂತರ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸುದ್ದಿ ನೋಡಿ ದಂಗಾದೆ. ಅದು ನಾನು ಎತ್ತಿಕೊಟ್ಟ ಕೈಚೀಲದ ಬಗ್ಗೆ ಬರೆದ ಸುದ್ದಿ! ಆಫ್‌ಕೋರ್ಸ್, ಆ ವರದಿಯಲ್ಲಿ ನನ್ನ ಹೆಸರೇನೂ ಪ್ರಸ್ತಾಪವಾಗಿರಲಿಲ್ಲ. ಈ ವರದಿಯಲ್ಲಿ ಪ್ರಸ್ತಾಪಿಸಿದ ಸಂಗತಿಗಳಿಷ್ಟು.

ನಾನು ನಿರ್ಗಮಿಸಿದ ನಂತರ ಈಕೆ ತನ್ನ ಸಹೋದ್ಯೋಗಿಗಳ ಸಮ್ಮುಖದಲ್ಲಿ ಈ ವೆಲ್‌ವೆಟ್ ಚೀಲವನ್ನು ಬಿಚ್ಚಿದ್ದಾಳೆ. ಅದರಲ್ಲಿ ಊದಿನಕಡ್ಡಿಯ ಪೆಟ್ಟಿಗೆಯಂತಿರುವ ಕೊಳವೆಯಾಕೃತಿಯ ಪೊಟ್ಟಣ, ಅದರೊಳಗೆ ನೀಟಾಗಿ ಸುತ್ತಿದ ಏಳೆಂಟು ಕ್ಯಾಲೆಂಡರ್‌ನಂತಿರುವ ಕಲಾಕೃತಿ, ತಾಮ್ರದ ಕ್ಲಿಪ್‌ಗಳು, ಚಿಕ್ಕ ಸುತ್ತಿಗೆ ಹಾಗೂ ಇಟಾಲಿಯನ್ ಭಾಷೆಯಲ್ಲಿ ಬರೆದ ಕೆಲವು ಕಾಗದಪತ್ರಗಳು ಸಿಕ್ಕಿವೆ. ಕೆಲವು ಪೇಪರ್‌ಗಳನ್ನು ನೋಡಿದಾಗ ಇನ್‌ಶ್ಯೂರೆನ್ಸ್‌ಗೆ ಸಂಬಂಧಪಟ್ಟ ಕಾಗದಪತ್ರಗಳಿರಬೇಕೆಂದು ಆಕೆಗೆ ಅನಿಸಿದೆ. ಇಷ್ಟೇ ಆಗಿದ್ದರೆ ಆಕೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇನ್‌ಶ್ಯೂರೆನ್ಸ್ ಮೊಬಲಗು ನೋಡಿ ಆಕೆ ಕಂಗಾಲಾಗಿದ್ದಾಳೆ. ಈ ಕಲಾಕೃತಿ, ಸುತ್ತಿಗೆಗೆ, ತಾಮ್ರದ ಕ್ಲಿಪ್‌ಗಳನ್ನು ಐದುನೂರು ಸಾವಿರ ಡಾಲರ್‌ಗೆ ಇನ್‌ಶ್ಯೂರ್ ಮಾಡಿರುವ ಕಾಗದಪತ್ರ ನೋಡಿ ಆಕೆ ತಾಪ್ಡತೋಪ್ ಇಟಲಿಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾಳೆ. ಅಲ್ಲಿನ ಅಧಿಕಾರಿ ತಕ್ಷಣ ಕಾರ್ಯಪ್ರವೃತ್ತನಾಗಿ 'ಈ ಕಲಾಕೃತಿ, ಸುತ್ತಿಗೆ, ಕಾಗದಪತ್ರಗಳನ್ನು ಸುರಕ್ಷಿತವಾಗಿ ಕಾಪಾಡಬೇಕು, ಸಾಧ್ಯವಾದರೆ ಅದಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಕೊಡಬೇಕು. ನಾನು ಬರುವ ತನಕ ಹೇಗಾದರೂ ಮಾಡಿ ಅವೆಲ್ಲವನ್ನೂ ಸಂರಕ್ಷಿಸುವ ಜವಾಬ್ದಾರಿ ನಿಮ್ಮದು" ಎಂದು ಹೇಳಿ ತಕ್ಷಣ ಹೊರಟಿದ್ದಾನೆ.

ಈ ಮಧ್ಯೆ ರಾಯಭಾರ ಕಚೇರಿಯ ಅಧಿಕಾರಿ, ಇನ್‌ಶ್ಯೂರೆನ್ಸ್ ಕಾಗದದ ಮೇಲಿನ ರೋಮ್ ವಿಳಾಸವನ್ನು ಸಂಪರ್ಕಿಸಿದ್ದಾನೆ. ಆತ ಅದೇ ಹಣ್ಣು ಹಣ್ಣು ಮುದುಕ. ಆತ ತಾನು ಅಂಡರ್‌ಗ್ರೌಂಡ್ ರೈಲಿನಲ್ಲಿ ವೆಲ್‌ವೆಟ್ ಕೈಚೀಲವನ್ನು ಉದ್ದೇಶಪೂರ್ವಕವಾಗಿಯೇ ಬಿಟ್ಟು ಬಂದಿರುವುದನ್ನು ಖಚಿತಪಡಿಸಿದ್ದಾನೆ.

ಈ ಅಧಿಕಾರಿ ಅವನನ್ನು ಅಷ್ಟಕ್ಕೆ ಬಿಟ್ಟಿಲ್ಲ. ಆ ಚೀಲವನ್ನು ಲಂಡನ್‌ಗೆ ಹೊತ್ತೊಯ್ದಿದ್ದೇಕೆಂದು ಕೇಳಿದ್ದಾನೆ. ಅದಕ್ಕೆ ಹಣ್ಣುಹಣ್ಣು ಮುದುಕ ಕತೆ ಬಿಚ್ಚಿದ್ದಾನೆ. “ನನ್ನಲ್ಲಿರುವ ಕಲಾಕೃತಿ, ಕ್ಲಿಪ್, ಸುತ್ತಿಗೆಯನ್ನು ಲಂಡನ್‌ನಲ್ಲಿರುವ ಸೊಥೆಬೀಸ್ ಮ್ಯೂಸಿಯಂನಲ್ಲಿ ನಡೆಯುವ ಕಲಾಕೃತಿಗಳ ಹರಾಜಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಆದರೆ ಇವೆಲ್ಲವುಗಳಿಗೆ ಒಂದು ಪೌಂಡ್ (70 ರೂಪಾಯಿ) ಕೊಡುವುದಾಗಿ ಹೇಳಿದರು. ಪ್ರಸಿದ್ಧ ಕಲಾಕಾರ ರಚಿಸಿದ ಕೃತಿಗಳಿವು. ಅವನು ಬಳಸಿದ ಸುತ್ತಿಗೆಯಿದು ಎಂದು ಹೇಳಿದೆ. ಅವರು ಬಹುಶಃ ನನ್ನ ವೇಷ-ಭೂಷಣ ನೋಡಿ ನಂಬಲಿಲ್ಲ. ಕೊನೆಗೆ ಚೌಕಾಸಿಗೆ ಬಿದ್ದವರಂತೆ ಐದು ಪೌಂಡ್ ಕೊಡುವುದಾಗಿ ಹೇಳಿದರು. ನನಗೆ ಅತೀವ ಬೇಸರವಾಯಿತು. ಈ ಮಣಭಾರವನ್ನು ಯಾರು ಹೊತ್ತು ತರುತ್ತಾರೆಂದು ರೈಲಿನಲ್ಲಿಯೇ ಬಿಟ್ಟು ಬಂದೆ" ಎಂದಿದ್ದಾನೆ.

ಈ ಮುದುಕನಿಗೆ ಈ ಕಲಾಕೃತಿ, ಸುತ್ತಿಗೆ, ಕ್ಲಿಪ್ ಯಾರದ್ದೆಂದು ಗೊತ್ತಿಲ್ಲ. ಆತ ಅವನ್ನೆಲ್ಲ ತಿಳಿದುಕೊಳ್ಳುವ ಗೋಜಿಗೂ ಹೋಗಿರಲಿಲ್ಲ. ರಾಯಭಾರ ಕಚೇರಿಯ ಅಧಿಕಾರಿ ಅಂಡರ್‌ಗ್ರೌಂಡ್ ರೈಲಿನ ಕಚೇರಿಗೆ ಬಂದು ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಆಶ್ಚರ್ಯ ಕಾದಿತ್ತು. ಸುತ್ತಿಗೆ ಮೇಲೆ ಇಟಾಲಿಯನ್ ಭಾಷೆಯಲ್ಲಿ ಮೈಕೆಲ್ ಏಂಜಲೋ ಎಂದು ಬರೆದಿತ್ತು! ಜಗತ್ತಿನ ಮಹಾ ಕಲಾಕಾರ ಬಳಸಿದ ಉಪಕರಣವದು!! ಕೊಳವೆಯಾಕಾರದ ಪೊಟ್ಟಣದಲ್ಲಿದ್ದುದು ಅವನದೇ ಕಲಾಕೃತಿ!! ಚಿತ್ರ ಬಿಡಿಸುವಾಗ ಕಾಗದ ಹಾರಿಹೋಗದಂತೆ ಬೋರ್ಡಿಗೆ ತಗುಲಿಸುವ ತಾಮ್ರದ ಕ್ಲಿಪ್‌ಗಳು!!

ಮ್ಯೂಸಿಯಂನಲ್ಲಿರುವವರೂ ಸಹ ಈ ಸಂಗತಿಗಳನ್ನು ಗಮನಿಸಿರಲಿಲ್ಲ. ಈ ಸುದ್ದಿ ಓದಿದಾಗ ಮೈಯಲ್ಲೆಲ್ಲ ರೋಮಾಂಚನ. ಇತಿಹಾಸದ ಮಹಾನ್ ತುಣುಕನ್ನು ಕೆಲವು ಕ್ಷಣ ಮುಟ್ಟಿದ ಝುಂ ಝುಂ ಅನುಭವ. ಮೈಕಲ್ ಏಂಜಲೋ ಮೈಮನಗಳ ಕದ ತಟ್ಟಿದ ಸದ್ದು. ಆದರೆ 'ಇತಿಹಾಸ" ಯಾವುದೇ ಸುಳಿವು ಕೊಡದೇ ಕೈಸವರಿ ಹೊರಟು ಹೋಗಿತ್ತು! ಛೇ!

(ಸ್ನೇಹಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X