ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ನಲ್ಲಿ ಮದುವೆಗೆ ಹಣ ನೀಡಿ ಪ್ರಸ್ತಕ್ಕೆ ಅಂಜಿದೊಡೆಂತಯ್ಯ!

By Staff
|
Google Oneindia Kannada News


ಜಗತ್ತಿನ ಅತ್ಯಂತ ದೊಡ್ಡ ಶ್ರೀಮಂತ ಬಿಲ್‌ಗೇಟ್‌ Road Ahead ಪುಸ್ತಕದಲ್ಲಿ ‘ಹಿಂದುಳಿಯುವುದರಲ್ಲಿ ಸಹ ಲಾಭವಿದೆ’ ಎಂಬ ಮಾತನ್ನು ಹೇಳುತ್ತಾ ಒಂದು ನಿದರ್ಶನ ಕೊಡುತ್ತಾನೆ -‘ವಿಶ್ವದ ಮುಂದುವರಿದ ದೇಶಗಳು ಟೆಲಿಕಾಮ್‌ ರಂಗದಲ್ಲಿ ಸಾವಿರಾರು ಕೋಟಿ ಡಾಲರ್‌ ಸುರಿದವು. ಲಕ್ಷಾಂತರ ಮರಗಳನ್ನ ಕಡಿದು, ತಾಮ್ರ ತಂತಿ ನಿರ್ಮಿಸಲು ಭೂಮಿಯನ್ನೆಲ್ಲ ಅಗೆದು ಪರಿಸರವನ್ನೆಲ್ಲ ಹಾಳು ಮಾಡಿದವು. ಈಗ ಈ ತಂತ್ರಜ್ಞಾನವೆಲ್ಲ ನಿರರ್ಥಕ. ಈಗ ವೈರ್‌ಲೆಸ್‌ ಟೆಕ್ನಾಲಜಿ ಬಂದಿದೆ. ಭೂಮಿ ಅಗೆಯದೇ, ಮರ ಕಡಿಯದೇ ಈ ತಂತ್ರಜ್ಞಾನವನ್ನು ಹೀರಿಕೊಳ್ಳಬಹುದು. ಆದರೆ ಈ ಮಾತನ್ನು ಮೂಲಸೌಕರ್ಯದ ಮಟ್ಟಿಗೆ ಹೇಳಲಾಗುವುದಿಲ್ಲ. ಈ ಸೌಕರ್ಯಗಳಿಲ್ಲದೇ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಿಲ್ಲ.’

ಇಂದು ಎಲ್ಲ ದೇಶಗಳೂ ಮೂಲಸೌಕರ್ಯ ಅಭಿವೃದ್ಧಿಗಾಗಿ ಮಹತ್ವ ನೀಡುತ್ತಿವೆ. ಸಿಂಗಪುರ, ಹಾಂಗ್‌ಕಾಂಗ್‌, ತೈವಾನ್‌, ಕೊರಿಯಾದಂಥ ದೇಶಗಳು ಕಳೆದ ಒಂದು ದಶಕದಲ್ಲಿ ಫ್ಲೈಓವರ್‌, ಸೇತುವೆಗಳ ನಿರ್ಮಾಣಕ್ಕೆ ಅದೆಷ್ಟು ಪ್ರಾಮುಖ್ಯ ನೀಡಿವೆಯೆಂದರೆ, ನೆಲದ ಮೇಲೆ ನಿರ್ಮಿಸಿರುವ ರಸ್ತೆಗಳ ಶೇ.40ರಷ್ಟು ರಸ್ತೆಗಳನ್ನು ಗಾಳಿಯಲ್ಲಿ ನಿರ್ಮಿಸಿವೆ.

ಸಿಂಗಪುರವಂತೂ 2010ರ ವೇಳೆಗೆ ಅಧಿಕವಾಗಲಿರುವ 20ಲಕ್ಷ ಜನಸಂಖ್ಯೆಗೆ ರಸ್ತೆ, ವಾಹನ, ವಸತಿ, ಶಾಲೆ, ಕಾಲೇಜು, ಹೋಟೆಲ್‌ ನಿರ್ಮಾಣಕ್ಕಾಗಿ ನೀಲನಕ್ಷೆ ತಯಾರಿಸಿ, ಅನುಷ್ಠಾನಕ್ಕೆ ಮುಂದಾಗಿದೆ. ಲೀ ಕ್ವಾನ್‌ ಹೇಳುವಂತೆ, ‘ಮೂಲಸೌಕರ್ಯವೆಂದರೆ ಕಟ್ಟಿ ಮುಗಿಸಿ ಸುಮ್ಮನಾಗುವುದಲ್ಲ. ಅದು ನಿರಂತರವಾಗಿ ಉತ್ತಮಪಡಿಸಬೇಕಾದ ಪ್ರಕ್ರಿಯೆ. ಯಾವ ದೇಶ ಪ್ರಗತಿಗೆ ತೆರೆದುಕೊಂಡಿದೆಯೋ, ಅದು ಮೂಲಸೌಕರ್ಯದತ್ತ ಸ್ವಲ್ಪ ಉದಾಸೀನ ಮಾಡಿದರೂ ಮುಗ್ಗರಿಸುತ್ತದೆ. ’. ಅಭಿವೃದ್ಧಿಶೀಲ ದೇಶಗಳು ತಮ್ಮ ವರಮಾನದ ಶೇ.30-40ರಷ್ಟನ್ನು ಇದಕ್ಕಾಗಿ ವ್ಯಯಿಸುತ್ತವೆ.

ಆದರೆ ನಮ್ಮ ದೇಶವನ್ನು ಬಿಡಿ, ರಾಜ್ಯದ ಚಿತ್ರವನ್ನು ನೋಡಿ. ಇತ್ತೀಚೆಗೆ ರಾಜ್ಯ ಹಣಕಾಸು ಸಚಿವರು ಮಂಡಿಸಿದ ಬಜೆಟ್‌ ನೋಡಿದರೆ ಗೊತ್ತಾಗುತ್ತದೆ ನಮ್ಮ ಆದ್ಯತೆಯೇನೆಂಬುದು. ರಾಜ್ಯದ ಪ್ರಗತಿಯ ರೋಡ್‌ಮ್ಯಾಪ್‌ ಗೊತ್ತಿಲ್ಲದಿದ್ದರೆ, ಅಭಿವೃದ್ಧಿಯ ದೂರದೃಷ್ಟಿ ಇಲ್ಲದಿದ್ದರೆ, ಬಜೆಟ್‌ ಮಂಡನೆ ಸಂದರ್ಭದಲ್ಲಿ ರಾಜಕೀಯ ಲಾಭ-ನಷ್ಟಗಳೇ ಮುಖ್ಯವಾದರೆ ಏನಾಗುತ್ತವೋ ಅದೇ ಆಗಿದೆ. ನಮ್ಮ ಆಡಳಿತಗಾರರಿಗೆ ಬಜೆಟ್‌ ಎಂಬುದು ರಾಜಕೀಯ ಅಸ್ತ್ರ. ಜನಪರತೆಗಿಂತ ಜನಪ್ರಿಯತೆಯೇ ಮಾನದಂಡ. ಬಜೆಟ್‌ ರೂಪಿಸುವಾಗ ಅವರ ತಲೆಯಾಳಗೆ ಅಭಿವೃದ್ಧಿಗಿಂತ ತನ್ನ ಪಕ್ಷಕ್ಕೇನು ಲಾಭ, ತನಗೆ ರಾಜಕೀಯವಾಗಿಯೇನು ಲಾಭ, ತನ್ನ ವೈಯಕ್ತಿಕ ಪ್ರತಿಷ್ಠೆ ಹೇಗೆ ಬೆಳೆಸಿಕೊಳ್ಳಬಹುದು ಎಂಬುವವೇ ಮುಖ್ಯವಾಗುತ್ತವೆ. ಹೀಗಾಗಿ ಎಲ್ಲರೂ ಜನಪ್ರಿಯತೆಗೇ ಶರಣು ಹೋಗುತ್ತಾರೆ.

ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಯ ಮುನ್ನೋಟವೇನೆಂಬುದು ಗೊತ್ತೇ ಆಗುವುದಿಲ್ಲ. ಅವರಿಗೆ ಕುಡಿಯುವ ನೀರಿನ ಅಭಾವ, ವಿದ್ಯುತ್‌ ಸಮಸ್ಯೆ, ರೈತರ ಆತ್ಮಹತ್ಯೆ, ಮೂಲಸೌಕರ್ಯ ಅಭಿವೃದ್ಧಿ .. ಇವ್ಯಾವವೂ ಮುಖ್ಯವೆಂದು ಅನಿಸುವುದೇ ಇಲ್ಲ. ಕಳೆದ ಹತ್ತು ವರ್ಷಗಳ ರಾಜ್ಯ ಬಜೆಟ್‌ ಪರಿಶೀಲಿಸಬೇಕು. ನಮ್ಮನ್ನಾಳಿದವರು ಹೇಗೆ ಹುಚ್ಚಾಪಟ್ಟೆ ನಮ್ಮ ದುಡ್ಡನ್ನು ನಿರರ್ಥಕವಾಗಿ, ನಿಷ್ಟ್ರಯೋಜನಕವಾಗಿ ಹಾಳು ಮಾಡಿದ್ದಾರೆಂಬುದು ಗೊತ್ತಾಗುತ್ತದೆ. ಬಡಬಗ್ಗರಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಹಾಗೆಂದು ಮದುವೆ, ಮುಂಜಿಗೆ ಸಹಾಯ ಮಾಡುವುದು ಎಷ್ಟು ಸರಿ?

ತಾಳಿಭಾಗ್ಯ ಎಂಬ ಯೋಜನೆಯಾಂದು ಜಾರಿಯಾಗಿದ್ದನ್ನು ನೆನಪಿಸಿಕೊಳ್ಳಿ. ಮದುವೆಯಾಗುವವರಿಗೆ ಸರ್ಕಾರದಿಂದ ತಾಳಿ ಕೊಡುವ ಯೋಜನೆಯದು. ಒಂದ್ನಿಮಿಷ ತಾಳಿ, ಹೆಂಡತಿಗೆ ತಾಳಿಯನ್ನೂ ಮಾಡಿಸಲಾಗದವನು, ಆಕೆಗೆಂಥ ಬದುಕನ್ನು ಕೊಡಬಹುದು? ಸರ್ಕಾರವೇಕೆ ತಾಳಿಯನ್ನು ಕೊಡಬೇಕು? ಸರ್ಕಾರವೇಕೆ ಜನರ ಮದುವೆ ಮಾಡಿಸಬೇಕು? ತಾಳಿ ಕೊಡುವ, ಮದುವೆ ಮಾಡಿಸುವುದನ್ನು ಸರ್ಕಾರ ಸಮರ್ಥಿಸಿಕೊಂಡರೆ, ಹನಿಮೂನ್‌ ಭತ್ಯೆಯನ್ನು ಕೊಡಬಹುದಲ್ಲ? ಮಕ್ಕಳನ್ನು ಹುಟ್ಟಿಸುವ, ಅವರನ್ನು ಸಾಕಿ ಸಲಹುವ ಕೆಲಸಗಳಿಗೆಲ್ಲ ಸರ್ಕಾರ ಮುಂದಾದರೆ ಅದೆಂಥ ನಗೆಪಾಟಲಿಗೀಡಾಗಬಹುದು? ಪ್ರಾಯಶಃ ಇಂಥ ಯೋಜನೆಗಳು ಜಗತ್ತಿನ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ಅಷ್ಟಕ್ಕೂ ಈ ಅನಿಷ್ಠ ಯೋಜನೆಗಳಿಗೆ ಹಣವನ್ನು ಅರ್ಥ ಸಚಿವರು ತಮ್ಮ ಕಿಸೆಯಿಂದ ಕೊಡುವುದಿಲ್ಲ. ಅದು ಜನರ ಹಣ. ಆದರೆ ಪ್ರಚಾರ ಮಾತ್ರ ಅವರಿಗೆ. ಇದರಿಂದ ಯಾರಿಗೆ ಪ್ರಯೋಜನ? ಇಂಥ ಯೋಚನೆಗಳಿಗೇ ಆಯವ್ಯಯದ ಹಣವೆಲ್ಲ ಸೋರಿಹೋದರೆ ಅಭಿವೃದ್ಧಿ ಎಂತು?

ರಾಜ್ಯದಲ್ಲಿ ಇನ್ನೂ ಕರೆಂಟು ಹೋಗದ, ರಸ್ತೆಗಳೇ ಹೋಗದ ಟೀವಿ ಹೋದ ಊರುಗಳಿವೆ. 50-60 ಕಿ.ಮೀ ಕೊಚ್ಚಿ ಹೋಗಿರುವ, ಹೊಂಡ ಬಿದ್ದಿರುವ ರಸ್ತೆಗಳಿವೆ. ಮಾರುದ್ದದ ಸೇತುವೆಗಾಗಿ ನಾಲ್ಕಾರು ಕಿ.ಮೀ. ಸುತ್ತಾಕಿ ಓಡಾಡುವ ಹಳ್ಳಿಗಳಿವೆ. ರಸ್ತೆ, ಸೇತುವೆ, ವಿದ್ಯುತ್‌, ಶಾಲೆ, ಆಸ್ಪತ್ರೆಗಳೇ ಇಲ್ಲದ ಸಾವಿರಾರು ಊರುಗಳಿವೆ. ಪ್ರತಿ ನಗರ ಜೀವನವೂ ಅಸಹನೀಯವಾಗುತ್ತಿದೆ. ಬೆಂಗಳೂರು ಬಿಡಿ, ಗುಲ್ಬರ್ಗ, ಮಂಗಳೂರು, ಹುಬ್ಬಳ್ಳಿ, ಮೈಸೂರುಗಳಲ್ಲೂ ಟ್ರಾಫಿಕ್‌ ಜಾಮ್‌ ಸಾಮಾನ್ಯವಾಗಿದೆ. ಒಂದಿಲ್ಲೊಂದು ಅಪಘಾತಗಳಿಂದ ದಿನವೂ ಬಚಾವಾಗುತ್ತಿರುವುದರಿಂದ ನಾವು ಸುರಕ್ಷಿತರು. ಐದು ವರ್ಷ ಕಿತ್ತು ಹೋಗದ, ತೊಳೆದು ಹೋಗದ ರಸ್ತೆ ನಿರ್ಮಿಸುವುದೂ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸುರಿದ ಕೆಲಸಗಳಿಗೇ ಮತ್ತೆ ಮತ್ತೆ ಹಣ ಸುರಿಯಬೇಕಾದ ಸ್ಥಿತಿ.

ಯಾವುದೇ ಶಾಶ್ವತ ಪರಿಹಾರ ಕಂಡುಹಿಡಿಯದ ತೊಳಪಾಟಲೆ ಮನಸ್ಸು. ಹೀಗಾಗಿ ಪ್ರತಿ ಬಜೆಟ್‌ ಬಂದಾಗಲೂ ಅದೇ ಅದೇ ಸಮಸ್ಯೆಗಳೇ ಸಾಲು ಹಚ್ಚಿ ನಿಲ್ಲುತ್ತವೆ. ಜತೆಯಲ್ಲಿ ಎಲ್ಲರನ್ನೂ ಖುಷಿ ಪಡಿಸಲು ಮದುವೆ, ಮುಂಜಿ, ಸಾಲ ಮನ್ನಾ, ಎಮ್ಮೆ ಹಸು ವಿತರಣೆ!

ಬಜೆಟ್‌ನಲ್ಲಿ ಹೀಗೆ ಬೇಕಾಬಿಟ್ಟಿ ಹಣ ವಿನಿಯೋಗಿಸುವುದನ್ನು ಯಾರೂ ಏಕೆ ಪ್ರಶ್ನಿಸುವುದಿಲ್ಲ? ಮನೆಯಲ್ಲಿ ಪೈಸೆಪೈಸೆಗೆ ಲೆಕ್ಕ ಕೇಳುವ ನಾವು ಈ ವಿಷಯದಲ್ಲಿ ಮೌನವಹಿಸುತ್ತೇವೇಕೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X