ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಭವನದಲ್ಲಿ ಇಂಥವರು, ಎಂಥವರೆಲ್ಲ ಉಳಿದಿದ್ದಾರೆಂದ್ರೆ...!

By Staff
|
Google Oneindia Kannada News


ತಾನು ಸಹಿ ಮಾಡುತ್ತಿರುವ ಘೋಷಣೆಯ ಪರಿಣಾಮವೇನೆಂಬುದು ಸಹ ಫಕ್ರುದ್ದೀನ್‌ ಆಲಿ ಅಹಮದ್‌ಗೆ ಗೊತ್ತಿರಲಿಲ್ಲ. ಒಂದು ವೇಳೆ ಗೊತ್ತಿತ್ತೆನ್ನಿ. ಅವರು ಏನೂ ಮಾಡದಷ್ಟು ಅಸಹಾಯಕರಾಗಿದ್ದರು. ತುರ್ತುಸ್ಥಿತಿ ಘೋಷಣೆಗೆ ಅಂಕಿತ ಹಾಕುವುದಿಲ್ಲ ಎಂದು ಹೇಳುವ ನೇರವಂತಿಕೆಯಾಗಲಿ, ಎದೆಗಾರಿಕೆಯಾಗಲಿ ಇರಲಿಲ್ಲ.

ರಾಷ್ಟ್ರಪತಿ ಭವನಕ್ಕೆ ಇಂಥವರೆಲ್ಲ ಬಂದು ಹೋಗಿದ್ದಾರೆ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವುದರಲ್ಲಿ, ಆಪರೇಶನ್‌ ಮಾಡಿಸಿ ಕೊಳ್ಳಲು, ವಿದೇಶ ಯಾತ್ರೆ ಮಾಡುವುದರಲ್ಲಿಯೇ ಐದು ವರ್ಷ ಕಳೆದ ಡಾ.ಶಂಕರ ದಯಾಳ್‌ ಶರ್ಮಾ, ಪ್ರತಿ ತಿಂಗಳಿಗೊಮ್ಮೆ ವಿದೇಶ ಪ್ರವಾಸ, ವಿಹಾರ, ಮಗಳ ಓದು, ಔತಣಕೂಟಗಳಲ್ಲಿಯೇ ಕಳೆದ ಕೆ.ಆರ್‌.ನಾರಾಯಣ್‌, ಇಂದಿರಾಗಾಂಧಿ ಹೇಳಿದರೆ ಕಸಬರಿಕೆ ಹಿಡಿದು ಗುಡಿಸುತ್ತೇನೆಂದ ಗ್ಯಾನಿ ಜೈಲ್‌ಸಿಂಗ್‌, ಕೇಂದ್ರದಲ್ಲಿ ಆಗ ಬಹುದಾದ ಎಲ್ಲ ಮಂತ್ರಿಯಾಗಿ ಕೊನೆಗೆ ನಿರಾಶ್ರಿತರ ತಾಣವೊಂದಿರಲಿ ಎಂಬಂತೆ ರಾಷ್ಟ್ರಪತಿ ಭವನ ಸೇರಿದ ಆರ್‌. ವೆಂಕಟರಾಮನ್‌ ಹೀಗೆ ಹಲವರು ರೈಸಿನಾ ಹಿಲ್‌ನಲ್ಲಿ ರಾಷ್ಟ್ರಪತಿ ಹುದ್ದೆಗೆ ಅಂಟಿಕೊಂಡು ಹೋಗಿದ್ದಾರೆ. ಇವರೆಲ್ಲ ಈ ಅಲಂಕಾರಿಕ ಪಟ್ಟದಲ್ಲಿ ಇದ್ದು ಎದ್ದು ಹೋಗಿದ್ದನ್ನು ಬಿಟ್ಟರೆ ನೆನಪಿನಲ್ಲಿ ಉಳಿಯುವಂಥ ಕೆಲಸಗಳನ್ನು ಬಿಟ್ಟು ಹೋಗಲಿಲ್ಲ.

ನಿವೃತ್ತಿಯ ಅಂಚಿನಲ್ಲಿರುವ, ನಿವೃತ್ತಿಗಾಗಿಯೂ ಕಾಲಕ್ಷೇಪ ಮಾಡುತ್ತಾ ದಿನಗಳನ್ನು ಎಣಿಸುತ್ತಿರುವ ವೃತ್ತಿಪರ ರಾಜಕಾರಣಿಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿದೆ. ರಾಷ್ಟ್ರಪತಿಯಂಥ ಹುದ್ದೆಯನ್ನು ಕ್ಷುಲ್ಲಕ ರಾಜಕೀಯ ಕಾರಣಗಳಿಗಿಂತ ಎತ್ತರದಲ್ಲಿಟ್ಟು ನೋಡುವ, ಯಾವುದೇ ರಾಜಕೀಯ ಕಾರಣಗಳಿಗಿಂತ ಎತ್ತರದಲ್ಲಿಟ್ಟು ನೋಡುವ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ, ದೇಶದ ಪ್ರಗತಿಯಾಂದನ್ನೇ ಗಮನದಲ್ಲಿಟ್ಟುಕೊಂಡವರು ಬರಲೇ ಇಲ್ಲ.

ಡಾ.ಅಬ್ದುಲ್‌ ಕಲಾಂ ಎಂಬ ಸಂತ ಬರುವ ತನಕ ಈ ಮಾತು ನಿಜವಾಗಿತ್ತು. ಆದರೆ ಡಾ.ಕಲಾಂ ಈ ಎಲ್ಲ ಸ್ಥಾಪಿತ ಕಲ್ಪನೆಗಳನ್ನೂ ದೂರ ಮಾಡಿದರು. ಈ ನಾಲ್ಕೂಮುಕ್ಕಾಲು ವರ್ಷಗಳಲಿ ಅವರು ತಮ್ಮನ್ನು ಪ್ರೆಸೆಂಟ್‌ ಮಾಡಿಕೊಂಡ ರೀತಿ ಅನುಕರಣೀಯ ಆದರ್ಶ. ಅಭಿವೃದ್ಧಿ ಮಂತ್ರ ಪಠಿಸುತ್ತಲೇ, ಮುಂದಿನ ಇಪ್ಪತ್ತು ವರ್ಷಗಳ ಕನಸನ್ನು ಬಿತ್ತುತ್ತಲೇ ಆಗಮಿಸಿದ ಅವರು, ರಾಷ್ಟ್ರಪತಿ ಹುದ್ದೆಯ ಅಗಾಧ ವಿಸ್ತಾರವನ್ನು ಅನಾವರಣಗೊಳಿಸಿದರು.

ಪ್ರತಿದಿನ ಏನಿಲ್ಲವೆಂದರೂ 16-18ತಾಸು ಕೆಲಸ ಮಾಡುವ ಅವರು, ರಾಷ್ಟ್ರಪತಿ ಭವನವನ್ನು ಎಂದಿಗೂ (ಲಾಸ್ಟ್‌) ರೆಸಾರ್ಟ್‌ ಎಂದು ಭಾವಿಸಲಿಲ್ಲ. ವಿದೇಶ ಪ್ರಯಾಣಕ್ಕೆ ಹೊರಟಾಗ ತಮ್ಮ ಬಂಧು-ಬಾಂಧವರನ್ನು ಕರೆದೊಯ್ಯಲಿಲ್ಲ. ಅವರೆಲ್ಲರನ್ನೂ ರಾಷ್ಟ್ರಪತಿಭವನದಿಂದ ದೂರವಿಟ್ಟರು. ಈ ದೇಶದ ಭವಿಷ್ಯದ ಮಕ್ಕಳೆಂದು ಭಾಷಣ ಹೊಡೆದು ಚಾಚಾ ಎನಿಸಿಕೊಳ್ಳಲಿಲ್ಲ. ಪ್ರತಿದಿನ ಮಕ್ಕಳೊಂದಿಗೆ ಬೆರೆತರು. ಮಕ್ಕಳೊಂದಿಗೆ ಬೆರೆಯದೇ ಅವರು ಯಾವ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ.

ಯಾವ ನಾಯಕನೂ ಮಕ್ಕಳನ್ನು ತನ್ನ ತೆಕ್ಕೆಗೆಳೆದುಕೊಂಡು ಅವರೊಂದಿಗೆ ಸಂವಾದ ನಡೆಸಿದ್ದಿಲ್ಲ. ಮೊದಮೊದಲು ಡಾ.ಕಲಾಂ ಅವರನ್ನು ಟೀಕಿಸಿದವರು ಅವರ ಮಕ್ಕಳ ಪ್ರೇಮ, ಕಳಕಳಿ ಕಂಡು ಸುಮ್ಮನಾದರು. ಗ್ರಾಮೀಣ ಪ್ರದೇಶಗಳಿಗೆ ಪಟ್ಟಣದ ಸೌಕರ್ಯ ಕಲ್ಪಿಸುವ ಪುರ ಯೋಜನೆ, ಹಳ್ಳಿಗಳಿಗೆ ಇಂಟರ್‌ನೆಟ್‌, ರೇಡಿಯೋ ತಲುಪಿಸುವ ಯೋಜನೆ ಸರ್ವವ್ಯಾಪಿ ಪ್ರಶಂಸೆಗೆ ಪಾತ್ರವಾಯಿತು. ವಿಜ್ಞಾನಿಯಾಬ್ಬ ರಾಷ್ಟ್ರಪತಿ ಭವನದಲ್ಲಿ ಕುಳಿತು ಇಡೀ ದೇಶದ ವೈಜ್ಞಾನಿಕ ಸಮುದಾಯವನ್ನು ಎಚ್ಚರಿಸಿದ, ಪ್ರೇರೇಪಿಸಿದ ಮತ್ತೊಂದು ನಿದರ್ಶನ ಸಿಗಲಿಕ್ಕಿಲ್ಲ. ಸದಾ ದೇಶ, ಪ್ರಗತಿಯ ಬಗೆಗೇ ಚಿಂತಿಸುವ ಅಪ್ಪಟ ಭಾರತೀಯ ಮನಸ್ಸು ಅವರದು.

ಆ ಭವನಕ್ಕೆ, ಆ ಹುದ್ದೆಗೆ ಗಾಂಭೀರ್ಯ ಹಾಗೂ ಮರ್ಯಾದೆಯನ್ನು ತಂದುಕೊಟ್ಟ ಆ ‘ಭಾರತ ರತ್ನ’, ಮತ್ತೊಂದು ಅವಧಿ ನನಗೆ ಬೇಡ ಎಂದು ಒಂದೂವರೆ ವರ್ಷಗಳ ಹಿಂದೆಯೇ ಹೇಳಿ, ಪುನಃ ಪಾಠ ಮಾಡುವುದಕ್ಕೆ ಸಿದ್ಧರಾಗುತ್ತಿದ್ದಾರೆ. ಸಾವು ಬರುವ ತನಕ, ರೋಗ ಅಮರಿಕೊಳ್ಳುವ ತನಕ ಅಧಿಕಾರದಲ್ಲಿರಬೇಕೆಂದು ತವಕಿಸುವ ರಾಜಕಾರಣಿಗಳಿಗೂ ಡಾ.ಕಲಾಂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಮುಂದಿನ ರಾಷ್ಟ್ರಪತಿ ಯಾರು ಎಂಬ ಪ್ರಶ್ನೆಗೆ ಯಾವ ಪಕ್ಷದಲ್ಲೂ ಇನ್ನೂ ಒಮ್ಮತ ಮೂಡುತ್ತಿಲ್ಲ. ಕಾರಣ ಆ ಪಕ್ಷಗಳನ್ನು ಅಭ್ಯರ್ಥಿಗಳಿಲ್ಲ. ಡಾ.ಕಲಾಂ ಅವರು ಬಿಟ್ಟು ಹೋಗುವ ಜಾಗ ತುಂಬುವುದು ಸುಲಭ ಅಲ್ಲ.

ಅಂದ ಹಾಗೆ ಡಾ.ಕಲಾಂ ಅವರೇ ಎರಡನೇ ಅವಧಿಗೆ ಮುಂದುವರಿಯಬೇಕೆಂಬ ಒತ್ತಾಸೆ ಬಲಗೊಳ್ಳುತ್ತಿದೆ. ಆದರೆ ಅವರು ಮನಸ್ಸು ಮಾಡಬೇಕಷ್ಟೆ. ಈ ದೇಶದ ಹಣೆಬರಹದಲ್ಲಿ ಅದೇನಿದೆಯೋ?

(ಅನಿವಾರ್ಯ ಕಾರಣಗಳಿಂದ ‘ನೂರೆಂಟು ಮಾತು’ ಅಂಕಣ ಶನಿವಾರ ಪ್ರಕಟಗೊಳ್ಳುತ್ತಿದೆ -ಸಂಪಾದಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X