• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

22 ವರ್ಷ ಪ್ರಧಾನಿ ಕಚೇರಿಯಲ್ಲಿದ್ದರೂ ಅವರು ಬಸ್ಸಿನಲ್ಲಿ ತಿರುಗುತ್ತಿದ್ದರು!

By Staff
|

ಅಂದು ಶಾರದಾಪ್ರಸಾದ್‌ರೊಂದಿಗೆ ಅವರ ಮನೆಯಲ್ಲಿ ನಾನು ಎರಡು ಗಂಟೆ ಕಳೆದಿರಬಹುದು. ಮನೆತುಂಬಾ ಹಳೇ ಪುಸ್ತಕ, ಹಳೇ ಫೋಟೊ ಹಾಗೂ ಹಳೇ ಪೀಠೋಪಕರಣಗಳನ್ನು ಬಿಟ್ಟರೆ ಆಧುನಿಕವೆನಿಸುವಂಥ ಯಾವ ಸಾಮಾನುಗಳು ಅಲ್ಲಿರಲಿಲ್ಲ. ಗೋಡೆ ಸುಣ್ಣಬಣ್ಣ ಕಾಣದೇ ಆನೇಕ ವರ್ಷಗಳಾಗಿರಬಹುದು. ಮನೆಯ ಚಾವಣಿ ಅಲ್ಲಲ್ಲಿ ಕಿತ್ತು ಹೋಗಿದ್ದವು. ಲಿಫ್ಟ್‌ ಸಹ ಇಲ್ಲದ ಫಾಟು ಅದು.ಇಡೀ ಮನೆಯನ್ನು ಪುಸ್ತಕಗಳೇ ಆವರಿಸಿದ್ದವು.

ನಿವೃತ್ತ ಸಾಮಾನ್ಯ ಸರಕಾರಿ ನೌಕರನೊಬ್ಬನ ಕ್ವಾರ್ಟರ್ಸ್‌ನಂತೆ ಕಂಗೊಳಿಸುತ್ತಿದ್ದ ಆ ಮನೆಯ ಯಜಮಾನ, ಭಾರತದ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತಿ ಇಂದಿರಾಗಾಂಧಿ ಸೇರಿದಂತೆ ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದರು ಎಂದರೆ ಯಾರೂ ನಂಬುವಂತಿರಲಿಲ್ಲ. ಸಾಮಾನ್ಯ ಸರ್ಕಾರಿ ನೌಕರನೂ ಇಂದು ಬಂಗಲೆ ಕಟ್ಟಿಸುತ್ತಾನೆ, ಕಾರನ್ನಿಟ್ಟುಕೊಂಡಿರುತ್ತಾನೆ. ಆದರೆ ಪ್ರಧಾನಮಂತ್ರಿ ಕಾರ್ಯಾಲಯದಂಥ ದೇಶದ ಆಯಕಟ್ಟಿನ ಪೌವರ್‌ ಹೌಸ್‌ನಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಕಳೆದ ವ್ಯಕ್ತಿಯ ಮನೆಯಾ ಇದು ಎಂದು ಪದೇ ಪದೆ ಕೇಳಿಕೊಳ್ಳುವ ಹಾಗೆ, ಕೇಳಿಕೊಂಡರೂ ಎದುರಾಎದುರು ನೋಡಿದರೂ ನಂಬದ ಹಾಗೆ, ಇಂಥವರೂ ಈ ಕಾಲದಲ್ಲಿ ಇರ್ತಾರಾ ಎಂದು ನಮ್ಮನ್ನೇ ಸಂಶಯಿಸಿಕೊಳ್ಳುವ ಹಾಗೆ, ಶಾರದಾಪ್ರಸಾದ್‌ ಇದ್ದರು. ಅವರ ಮನೆಯೂ ಹಾಗಿತ್ತು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಷ್ಟು ಕಾಲ ಶಾರದಾಪ್ರಸಾದ್‌ ಮಾಧ್ಯಮ ಸಲಹೆಗಾರರಾಗಿದ್ದರು. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗಲೂ ನಾಲ್ಕು ವರ್ಷ ಅದೇ ಹುದ್ದೆಯಲ್ಲಿದ್ದರು. ಮೊರಾರ್ಜಿ ದೇಸಾಯಿ ಸಹ ಅವರನ್ನು ಬಿಡಲಿಲ್ಲ. ಇಂದಿರಾಗಾಂಧಿ ಅವರ ಪ್ರಮುಖ ಭಾಷಗಳೆಲ್ಲವನ್ನೂ ಬರೆದುಕೊಟ್ಟವರು ಇವರೇ. ಇಂದಿರಾಗೆ ತೀರಾ ಆತ್ಮೀಯರಾಗಿದ್ದ ಶಾರದಾಪ್ರಸಾದ್‌ ಎಲ್ಲೂ ತಮ್ಮ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಅವರು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿದ್ದಾಗ ಬಸ್ಸಿನಲ್ಲಿ ಅನೇಕ ವರ್ಷ ತಿರುಗಾಡುವುದನ್ನು ನೋಡಿದವರಿದ್ದಾರೆ.

ಪ್ರಧಾನಮಂತ್ರಿಗಳ ಜತೆ ಸುಮಾರು 60ದೇಶಗಳಿಗೆ ಹೋಗಿ ಬಂದಿದ್ದರೂ, ಈ ಬಗ್ಗೆ ಯಾರಾದರೂ ಕೇಳದಿದ್ದರೆ ಪ್ರಸ್ತಾಪಿಸದಷ್ಟು ಸಕ್ಷಿಂಕೋಚ ಸ್ವಭಾವದವರು. ಶಾರದಾಪ್ರಸಾದ್‌ರನ್ನು ಭೇಟಿಯಾದಾಗ ತಾನು ಪ್ರಧಾನಿ ಕಾರ್ಯಾಲಯದಲ್ಲಿದ್ದೇನೆ, ಪ್ರಧಾನಿಗೆ ಮೀಡಿಯಾ ಅಡ್ವೈಸರ್‌ ಆಗಿದ್ದೇನೆ ಎಂದು ಹೇಳಲು ಸಹಾ ಅವರು ಹಿಂದೆಮುಂದೆ ನೋಡುತ್ತಿದ್ದರು. ಇಂದಿರಾಗೆ ಇವರ ಮೇಲೆ ಅದೆಂಥ ನಿಷ್ಠೆ, ನಂಬಿಕೆಯಿತ್ತೆಂದರೆ ನೆಹರು ನಿಧನದ ಎಷ್ಟೋ ವರ್ಷಗಳ ಬಳಿಕ ಅಲಹಾಬಾದ್‌ನಲ್ಲಿದ್ದ ಅವರ(ನೆಹರು) ಆಲ್ಮೇರಾದೊಳಗೆ ಇರುವ ಸಾಮಾನುಗಳನ್ನು ತರಲು ಇಂದಿರಾ, ಶಾರದಾಪ್ರಸಾದ್‌ಗೆ ಕೀಲಿ ಕೊಟ್ಟು ಕಳುಹಿಸಿದ್ದರು!

ಇಂಥ ಶಾರದಾಪ್ರಸಾದ್‌ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಅನೇಕ ವರ್ಷ ಕನ್ನಡ ನೆಲದಿಂದ ದೂರವಿದ್ದರೂ, ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ ಅವರು ಕನ್ನಡ ಮರೆತವರಲ್ಲ. ಪ್ರಧಾನಿ ಕಚೇರಿಯಲ್ಲಿ ಕೈತುಂಬಾ ಕೆಲಸಗಳ ನಡುವೆ ಸ್ವಲ್ಪ ಸಮಯ ಸಿಕ್ಕರೂ ಏನಾದರೂ ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಶಿವರಾಮ ಕಾರಂತರ ಕುಡಿಯರ ಕೂಸು(Headman of the Little Hill), ಮೈಮನಗಳ ಸುಳಿಯಲ್ಲಿ(The woman of Basrur), ಹಕ್ಷಿುಚ್ಚು ಮನಸ್ಸಿನ ಹತ್ತು ಮುಖಗಳು(The Faces of a crazy mind) ಕಾದಂಬರಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಹೀಗೇ. ಆರ್‌.ಕೆ.ನಾರಾಯಣ್‌ರ Swami and His Friends ಪುಸ್ತಕವನ್ನು ಕನ್ನಡಕ್ಕೂ ಅನುವಾದಿಸಿದ್ದಾರೆ. ಕರ್ನಾಟಕ ಅಂದ್ರೆ ಏನೆಂಬುದನ್ನು ತಿಳಿಯಲು Exploring Karnataka ಎಂಬ ಕೃತಿಯನ್ನು ಓದಬೇಕು.

ಅಕ್ಷರಶಃ ಅವರು ಶಾರದೆಯ ಪ್ರಸಾದವೇ. ಸಾಹಿತ್ಯ, ಸಂಗೀತ, ಸೌಂದರ್ಯ, ಕಲೆ, ಕ್ರಿಕೆಟ್‌, ರಾಜಕೀಯ ಹಾಗೂ ಇತಿಹಾಸದಲ್ಲಿ ಅವರ ಜ್ಞಾನ ಅಗಾಧವಾದುದು. ಈ ವಿಷಯಗಳಲ್ಲಿನ ದಿಗ್ಗಜರೊಂದಿಗೆ ಅವರಿಗೆ ಒಡನಾಟವೂ ಇತ್ತು. ಎಂ.ಎಸ್‌. ಸುಬ್ಬುಲಕ್ಷ್ಮಿ, ಮಲ್ಲಿಕಾರ್ಜುನ ಮನ್ಸೂರ್‌, ಕೆ.ಕೆ.ಹೆಬ್ಬಾರ್‌, ಗಂಗೂಬಾಯಿ ಹಾನಗಲ್‌ ಮುಂತಾದವರಿಗೆ ದಿಲ್ಲಿಯ ಶಾರದಾಪ್ರಸಾದ್‌ ಮನೆಯಲ್ಲೊಂದು ಆತಿಥ್ಯ ಸದಾ ತೆರೆದಿರುತ್ತಿತ್ತು.

ಶಾರದಪ್ರಸಾದ್‌ ಭಾರತದ ರಾಜಕಾರಣಿಗಳ ಬಗ್ಗೆ ಬರೆದ ಬರಹಗಳಲ್ಲಿ ಅವರ ಗ್ರಹಿಕೆಯ ಆಳವೇನೆಂಬುದು ಗೊತ್ತಾಗುತ್ತದೆ. ಇಂದಿರಾಗಾಂಧಿ ತುರ್ತು ಸ್ಥಿತಿ ವಿಧಿಸಿದ್ದರ ಹಿನ್ನೆಲೆಯನ್ನು ಸಾಧ್ಯಂತವಾಗಿ ವಿವರಿಸಿ ಬರೆದ ಲೇಖನ ಅನೇಕ ಸೂಕ್ಷ್ಮಒಳನೋಟಗಳನ್ನು ಬಿಟ್ಟುಕೊಟ್ಟರೂ, ತಮ್ಮ ಬಾಸ್‌ ಬಗ್ಗೆ ಅವರು ಕಾಪಾಡಿಕೊಂಡು ಬಂದ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಇಲ್ಲೂ ಅವರನ್ನು ಕಾಡಿದ್ದು ವೃತ್ತಿ ಹಾಗೂ ವ್ಯಕ್ತಿನಿಷ್ಠೆ. ತುರ್ತುಸ್ಥಿತಿ ಬಗ್ಗೆ ಅವರು ಹೇಳುತ್ತಾ ಹೇಳುತ್ತಾ ಎಲ್ಲೋ ಏನೋ ಮುಚ್ಚಿಡುತ್ತಿದ್ದಾರೇನೋ ಎಂದೆನಿಸುತ್ತದೆ.

ಕೆಲ ದಿನಗಳ ಹಿಂದ ಶಾರದಾಪ್ರಸಾದ್‌ ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಇತಿಹಾಸ ಬರಹಗಾರ ರಾಮಚಂದ್ರ ಗುಹಾ ಹೇಳಿದ ಮಾತುಗಳು ನೆನಪಾಗುತ್ತವೆ -‘ಶಾರದಾಪ್ರಸಾದ್‌ ಅಂದ್ರೆ ನನ್ನ ಕಣ್ಮುಂದೆ ಬರುವುದು ಒಬ್ಬ ನಾಗರಿಕ, ಸುಸಂಸ್ಕೃತ, ಸಜ್ಜನ, ಸರಳ ವ್ಯಕ್ತಿತ್ವದ ಸಾಕಾರಮೂರ್ತಿ. ನಾನು ನೋಡಿರುವ ಅತ್ಯಂತ ಸಿವಿಲೈಜ್ಡ್‌ ವ್ಯಕ್ತಿ ಅಂದ್ರೆ ಶಾರದಾಪ್ರಸಾದ್‌’. ಅವರನ್ನ ಕಂಡ, ಒಡನಾಡಿದ ಯಾರೇ ಆಗಲಿ, ಹೇಳಬಹುದಾದ ಮಾತು ಸಹ ಇದೇ. ಯಾಕೆಂದರೆ ಅವರು ಇದಲ್ಲದೇ ಬೇರೇನೂ ಅಲ್ಲ.

ದಿಲ್ಲಿಯ ಅಧಿಕಾರದ ಅಂತಃಪುರದಲ್ಲಿ ಶಾರದಾಪ್ರಸಾದ್‌ರಷ್ಟು ದೀರ್ಘಕಾಲ ಬಾಳಿಕೆ, ತಾಳಿಕೆ ಬಂದ ಮತ್ತೊಬ್ಬ(ಕನ್ನಡಿಗ) ಇಲ್ಲ. ಆದರೂ ಅವರು ಎಲೆಮರೆಯ ಕಾಯಿ ಹಾಗೆ ಇರಬಯಸುವವರು.

ಮೊನ್ನೆಮೊನ್ನೆಯ ತನಕವೂ ಲವಲವಿಕೆಯಿಂದ ಬರೆಯುತ್ತಿದ್ದ ಶಾರದಾಪ್ರಸಾದ್‌ ಅನಾರೋಗ್ಯಕ್ಕೆ ಬಿದ್ದಿದ್ದಾರೆ. ಎಂಬತ್ನಾಲ್ಕರ ಈ ವಯಸ್ಸಿನಲ್ಲಿ ಪುನಃ ಮೊದಲಿನಂತೆ ಬರೆಯುವುದು ಸಾಧ್ಯವಾಗಲಿಕ್ಕಿಲ್ಲ. ಈ ಅನಾರೋಗ್ಯವೇ ವಿಜಯಕರ್ನಾಟಕಕ್ಕೆ ಅವರು ಬರೆಯುತ್ತಿದ್ದ ಅದ್ಭುತವೆನಿಸುವ ಅಂಕಣವನ್ನು ಬಲಿ ತೆಗೆದುಕೊಂಡಿತು.

ಶಾರದಾಪ್ರಸಾದ್‌ ಪುನಃ ಬರೆಯುವಂತಾದರೆ ಎಂಥ ಚೆನ್ನ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more