ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮಾದರಿ ಅಂದ್ರೆ ಇದು ಸ್ವಾಮಿ!

By Staff
|
Google Oneindia Kannada News

ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಮೋದಿ, ಪಕ್ಷ ರಾಜಕಾರಣದ ನಡುವೆಯೂ ಅಭಿವೃದ್ಧಿ ಸಾಧಿಸುವುದನ್ನು ತೋರಿಸಿಕೊಟ್ಟಿದ್ದಾರೆ. ರಾಜಕಾರಣಗಳೆಂದರೆ ಅಭಿವೃದ್ಧಿ ಕಂಟಕರು ಎಂಬುದನ್ನು ಸುಳ್ಳು ಮಾಡಿದ್ದಾರೆ. ಗುಜರಾತ್ ಮಾದರಿ ಅಂದ್ರೆ ಇದು ಸ್ವಾಮಿ, ಕುಮಾರಸ್ವಾಮಿ!

  • ವಿಶ್ವೇಶ್ವರ ಭಟ್
ಗುಜರಾತ್ ಮಾದರಿ ಅಂದ್ರೆ ಇದು ಸ್ವಾಮಿ!ರಾಜ್ಯ ರಾಜಕಾರಣದ ಅಂಗಳವನ್ನು ನೋಡಿದರೆ ಸುನಾಮಿ ಬಂದು ಹೋದ ನಂತರದ ಸಮುದ್ರತೀರವನ್ನು ನೋಡಿದಂತೆನಿಸುತ್ತದೆ. ರಾಜಕಾರಣಿಗಳೆಲ್ಲ ಗೂಡು ಸೇರಿದ್ದಾರೆ. ಪತ್ರಿಕೆಗಳಲ್ಲಿ ಯಾರ ಹೇಳಿಕೆಗಳೂ ಇಲ್ಲ, ಚಿತ್ರಗಳೂ ಇಲ್ಲ. ಗಂಡ ಸತ್ತ ಹೆಂಗಸಿನಂತೆ ಮಂಕಾಗಿ ಕುಳಿತಿದ್ದಾರೆ. ಎಲ್ಲ ಪಕ್ಷಗಳ ರಾಜಕಾರಣಿಗಳು ಸುಮ್ಮನಿದ್ದಾರೆಂದರೆ ಏನೋ ಗಂಡಾಂತರ ಕಾದಿದೆಯೆಂದೇ ಅರ್ಥ. ಯಾರ ಮುಖದಲ್ಲೂ ತೇಜಿ ಇಲ್ಲ. ಬರಲಿರುವ ಚುನಾವಣೆ ಎಲ್ಲರ ಹಣೆಗಳ ಮೇಲೂ ಬೆವರಸಾಲುಗಳನ್ನು ಸೃಷ್ಟಿಸಲಿದೆ.

ಆದರೂ ವಿಚಿತ್ರ ಕುದಿಮೌನ ಎಲ್ಲ ರಾಜಕೀಯ ಪಕ್ಷಗಳಲ್ಲಿ ಆವರಿಸಿದೆ. ಈ ಎಲ್ಲ ಘಟನೆಗಳನ್ನು ಒಬ್ಬನ ತಲೆಗೆ ಕಟ್ಟಬಹುದಾದರೆ, ಅದಕ್ಕೆ ದೇವೇಗೌಡರು ಮಾತ್ರ ಸಿಕ್ಕಾರು. ಅವರ ಫಿನಿಕ್ಸ್ ಹಕ್ಕಿ ಬೂದಿಯಿಂದ ಯಾವಾಗ ಬೇಕಾದರೂ ಮೇಲೆದ್ದು ಬರಬಹುದು. ಅಷ್ಟಕ್ಕೂ ಉತ್ತರ ಸಿಗದ ಒಂದು ಪ್ರಶ್ನೆಯೆಂದರೆ ದೇವೇಗೌಡರು ಕೊನೆಗೂ ಸಾಧಿಸಿದ್ದಾದರೂ ಏನು? ಅವರನ್ನು ರಾಜ್ಯದ ಜನತೆ ಭಲೇ ಚತುರ ರಾಜಕಾರಣಿ ಅಂದುಕೊಂಡಿದ್ದರು. ಅಂಥವರು ಈ ಪರಿ ಬೇಸ್ತುಬೀಳೋದಾ? ಮಣ್ಣಿನ ಮಕ್ಕಳಾದ ಮಾತ್ರಕ್ಕೆ ಮಣ್ಣನ್ನು ತಿನ್ನಬೇಕೆಂದೇನೂ ಇಲ್ಲವಲ್ಲ?

ಗೌಡರು ಅದನ್ನು ತಿಂದಿದ್ದಲ್ಲದೇ ಎಲ್ಲರಿಗೂ ಅದನ್ನೇ ತಿನ್ನಿಸಿದರಲ್ಲ. ಇದರಿಂದ ಅವರಿಗೆ ಸಂತೃಪ್ತಿಯಾದರೂ ಆಯಿತಾ, ಅದೂ ಇಲ್ಲ. ತನ್ನ ಎರಡು ಕಣ್ಣು ಹೋದರೂ ಪರವಾಗಿಲ್ಲ, ಅವರ ಒಂದು ಕಣ್ಣನ್ನಾದರೂ ತೆಗೆಯಲೇಬೇಕು ಎಂಬ ಹಠವೇ ಇಷ್ಟಕ್ಕೆಲ್ಲ ಕಾರಣವಾಯಿತಾ? ಉತ್ತರ ಸಿಗುತ್ತಿಲ್ಲ. ಕ್ಷಮಿಸಿ, ನಾನು ಬರೆಯಬೇಕೆಂದುಕೊಂಡಿದ್ದು ಈ ವಿಷಯದ ಬಗ್ಗೆ ಅಲ್ಲ.

ಕಳೆದ ಎರಡು ತಿಂಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ರಾಜಕಾರಣಿಗಳ ಹೇಳಿಕೆಗಳನ್ನೆಲ್ಲ ಹರವಿ ಕುಳಿತುಕೊಂಡಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಕಂಡು ಭಲೇ ತಮಾಷೆ ಎನಿಸಿತು. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತಾನು ಗುಜರಾತ್ ಮಾದರಿ ಸರಕಾರ ನೀಡುತ್ತೇನೆಂದು ಹೇಳಿದ್ದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ಒಂದು ವಾರಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂತು. ಅನಂತರ ಕುಮಾರಸ್ವಾಮಿ ಹೇಳಿದ್ದರು- “ಬಿಜೆಪಿ ಅಧಿಕಾರಕ್ಕೆ ಬರುತ್ತಿರುವಂತೆ ಯಡಿಯೂರಪ್ಪನವರು ಗುಜರಾತ್ ಮಾದರಿ ಸರಕಾರ ನೀಡುವುದಾಗಿ ಹೇಳಿದರು. ಗುಜರಾತ್ ಮಾದರಿ ಅಂದ್ರೆ ಗೋಧ್ರಾ ಮಾದರಿ ಹಿಂಸಾಚಾರವೇ? ಬಿಜೆಪಿಗಳು ಅಧಿಕಾರಕ್ಕೆ ಬರುತ್ತಿರುವಂತೆ ತಮ್ಮ ನಿಜ ಬಣ್ಣ ತೋರಿದರು. ನರೇಂದ್ರ ಮೋದಿ 'ಆದರ್ಶ" ನಮಗೆ ಬೇಕಿಲ್ಲ". ಈ ಧಾಟಿಯಲ್ಲಿ ಕುಮಾರಸ್ವಾಮಿ ಮಾತು ಸಾಗಿತ್ತು.

ಯಡಿಯೂರಪ್ಪ ಯಾವ ಅರ್ಥದಲ್ಲಿ ಹೇಳಿದರೋ, ಕುಮಾರಸ್ವಾಮಿ ಯಾವ ಅರ್ಥದಲ್ಲಿ ತಿಳಿದುಕೊಂಡರೋ ಏನೋ? ಆದರೆ ಕುಮಾರಸ್ವಾಮಿಗೆ ಒಂದು ವಿಷಯದ ಬಗ್ಗೆ ಸಂಪೂರ್ಣ ತಿಳಿವಳಿಕೆ, ಮಾಹಿತಿ ಇಲ್ಲವೆಂಬುದು ಸ್ಪಷ್ಟವಾಗಿತ್ತು. ಅದೇನೆಂದರೆ ಗುಜರಾತ್ ಮಾದರಿ ಅಂದ್ರೆ ಗೋಧ್ರಾ ಮಾದರಿ ಎಂದು ಅವರು ಭಾವಿಸಿರುವುದು. ಹಾಗಾದರೆ ಒಬ್ಬ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಮಾಡಿದ ಕೆಲಸಗಳೇನು ಎಂಬುದು ಅವರಿಗೆ ಗೊತ್ತಿಲ್ಲವಾ? ಮೋದಿ ಅಂದ್ರೆ ಗೋಧ್ರಾ ಎಂದು ನೆನಪಿಸಿಕೊಳ್ಳುವವರಿಗೆ, ಅವರು ಈ ದೇಶಕ್ಕೇ ಮಾದರಿ ಎನಿಸಬಹುದಾದ ಆಡಳಿತ ನೀಡಿದ್ದು ಯಾಕೆ ನೆನಪಾಗುವುದಿಲ್ಲ? ಮೋದಿ ಮಾಡಿದಷ್ಟು ಕೆಲಸದ ತುಕಡಿ ಕೆಲಸ ಇವರು ಮಾಡಿದ್ದಾರಾ?

ಬೇರೆ ಯಾರಾದರೂ ಹೇಳಿದ್ದರೆ ಆ ಮಾತಿಗೆ ಕಿಮ್ಮತ್ತು ಬರುತ್ತಿರಲಿಲ್ಲ. ಸೋನಿಯಾ ಗಾಂಧಿ ನೇತೃತ್ವದ ರಾಜೀವ್ ಗಾಂಧಿ ಫೌಂಡೇಶನ್ ಹೇಳಿತು. ಭಾರತದಲ್ಲಿ ಅತ್ಯುತ್ತಮ ಆಡಳಿತಕ್ಕೊಳಗಾದ ರಾಜ್ಯವೆಂದರೆ ಗುಜರಾತ್ ಎಂದು. ಅತ್ಯುತ್ತಮ ಮುಖ್ಯಮಂತ್ರಿಯೆಂದರೆ ನರೇಂದ್ರ ಮೋದಿ ಎಂದು. ರಾಜೀವ್‌ಗಾಂಧಿ ಫೌಂಡೇಶನ್ ಹೀಗೆ ಹೇಳಿದ್ದು ಒಂದು ಸಲವಲ್ಲ. ಸತತ ಮೂರು ವರ್ಷ ಮೋದಿಗೆ 'ಬೆಸ್ಟ್ ಚೀಫ್ ಮಿನಿಸ್ಟರ್" ಎಂಬ ಅಭಿದಾನ ನೀಡಿತು. “ಅಭಿವೃದ್ಧಿ, ಆಡಳಿತ, ಭ್ರಷ್ಟಾಚಾರ ನಿಯಂತ್ರಣ, ಜನರಿಗೆ ಭದ್ರತೆ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದಂತೆ ಗುಜರಾತ್ ದೇಶದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದೆ. ಮೋದಿ ಇಂಥ ಸಾಧನೆಗೆ ಚಾಲನೆ, ನೇತೃತ್ವ ನೀಡಿದ ಧೀಮಂತ ಹಾಗೂ ಅತ್ಯುತ್ತಮ ಮುಖ್ಯಮಂತ್ರಿ" ಎಂದು ರಾಜೀವ್‌ಗಾಂಧಿ ಫೌಂಡೇಶನ್ ಮುಕ್ತಕಂಠದಿಂದ ಶ್ಲಾಘಿಸಿತು.

ಬೇರೆ ಮುಖ್ಯಮಂತ್ರಿಗಳಿಗೂ ಮೋದಿಗೂ ಇರುವ ವ್ಯತ್ಯಾಸವೇನೆಂದರೆ, ಮೋದಿ ಬರೀ ಹೇಳುತ್ತಾ ಹೋಗಲಿಲ್ಲ. ಬರೀ ಜನಪ್ರಿಯ ಯೋಜನೆಗಳನ್ನು ಹಾಕಿಕೊಳ್ಳಲಿಲ್ಲ. ಆದರೆ ಅಂದುಕೊಂಡಿದ್ದ ಯೋಜನೆಗಳನ್ನೆಲ್ಲ ಜಾರಿಗೊಳಿಸಿ ಜನಪ್ರಿಯರಾದರು. ಸ್ವತಂತ್ರ ಭಾರತದಲ್ಲಿ ಕೇವಲ ನಾಲ್ಕೂವರೆ ವರ್ಷಗಳಲ್ಲಿ ಗುಜರಾತ್‌ನಷ್ಟು ಶೀಘ್ರ ಬದಲಾವಣೆ-ಸುಧಾರಣೆ ಕಂಡಂತಹ ರಾಜ್ಯ ಇನ್ನೊಂದಿಲ್ಲ. ವಿಶ್ವಬ್ಯಾಂಕ್ ಅಧಿಕಾರಿಗಳ ತಂಡ 2006ರಲ್ಲಿ ಗುಜರಾತ್‌ಗೆ ಭೇಟಿ ನೀಡಿ, ಮೂಲಭೂತ ಸೌಕರ್ಯ ನೀಡುವಲ್ಲಿ ಗುಜರಾತ್ ಸರಕಾರ ತೋರಿದ ಕಾಳಜಿ ಮಾದರಿ ಎಂದು ಹೇಳಿ ಒಂದು ವರ್ಷವಾಗಿರಲಿಲ್ಲ, ಬೇರೆ ರಾಜ್ಯಗಳೂ ಈ ಮಾದರಿ ಅನುಸರಿಸಬೇಕು ಎಂದು ಹೇಳಿತು.

ಗ್ರಾಮ ವಾಸ್ತವ ಅರಿಯುವುದಕ್ಕೂ ಗ್ರಾಮ ವಾಸ್ತವ್ಯ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೋದಿ ಗ್ರಾಮ ವಾಸ್ತವ್ಯ ಮಾಡಲಿಲ್ಲ. ಗ್ರಾಮ ವಾಸ್ತವ ಅರಿಯುವ ಕೆಲಸಕ್ಕೆ ಮುಂದಾದರು. ಇದಕ್ಕೆ ಅವರು ಹಮ್ಮಿಕೊಂಡ 'ಜಲಸಂಚಯ" ಹಾಗೂ 'ಕೃಷಿ ವಿಕಾಸ" ಕಾರ್ಯಕ್ರಮಗಳೇ ಸಾಕ್ಷಿ. ಗುಜರಾತಿನಲ್ಲಿ ಕಳೆದ ಐದು ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಕೆರೆಗಳು ಪುನರ್ಜೀವ ಪಡೆದಿವೆ. ಸುಮಾರು ಎರಡು ಲಕ್ಷ ಹೊಸ ಕೆರೆಗಳನ್ನು ನಿರ್ಮಿಸಲಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಯಾವ ರಾಜ್ಯವೂ ಹೊಸ ಕೆರೆ ನಿರ್ಮಾಣವನ್ನು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದಿಲ್ಲ. ನೀರಿನ ಸೆಲೆಯೇ ಬತ್ತಿಹೋದರೆ ರೈತರು ಕೃಷಿ ಮಾಡುವುದಾದರೂ ಹೇಗೆ? ಹೀಗಾಗಿ ನೀರಿನ ಹೊಸ ಮೂಲ ಸೃಷ್ಟಿಸಿದ್ದು ದೊಡ್ಡ ಸಾಧನೆ. ನರ್ಮದಾ ಅಣೆಕಟ್ಟು ಎತ್ತರ ಏರಿಸುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದವುಂಟಾಗಿ ಒತ್ತಡ ಬಂತು. ಮೋದಿ ಕ್ಯಾರೇ ಅನ್ನಲಿಲ್ಲ. ಅಣೆಕಟ್ಟಿನ ಎತ್ತರವನ್ನು 95 ಮೀಟರ್‌ನಿಂದ 110 ಮೀಟರ್‌ಗೆ ಏರಿಸಿದರು. ಇದು ರಾಜ್ಯದ ನೀರಾವರಿ ಹಾಗೂ ಜಲವಿದ್ಯುತ್ ಉತ್ಪಾದನೆಯ ಚಿತ್ರಣವನ್ನೇ ಬದಲಿಸಿತು.

ಮೋದಿ ಅಧಿಕಾರಕ್ಕೆ ಬಂದಾಗ ಭುಜ್ ಹಾಗೂ ಕಛ್ ಭೂಕಂಪಕ್ಕೆ ತುತ್ತಾಗಿ ಸರ್ವನಾಶವಾಗಿತ್ತು. ಚಂಡಮಾರುತ, ಪ್ರವಾಹ ಸಹ ತಮ್ಮ ಕೊಡುಗೆ ನೀಡಿದ್ದವು. ಗೋಧ್ರಾದಲ್ಲಿ ನಡೆದ ನರಮೇಧ ಹಾಗೂ ಅನಂತರದ ಹಿಂಸಾಚಾರದಿಂದ ಗುಜರಾತ್ ಅಂದ್ರೆ ಜನ ಭಯಪಡುತ್ತಿದ್ದರು. ಮೋದಿಯನ್ನು ಖಳನಾಯಕನಂತೆ ನೋಡುತ್ತಿದ್ದರು. ಬಿಜೆಪಿಯಲ್ಲೂ ಅವರಿಗೆ ಸಾಕಷ್ಟು 'ಸ್ನೇಹಿತರು" ಹುಟ್ಟಿಕೊಂಡಿದ್ದರು. ಎಲ್ಲರೂ ಅವರು 'ಬಲಿಬೀಳುವುದನ್ನು" ಎದುರು ನೋಡುತ್ತಿದ್ದರು. ಅಮೆರಿಕ ಸರಕಾರ ಸಹ ಮೋದಿಗೆ ವಿಸಾ ನಿರಾಕರಿಸಿತು. ಆದರೆ ಈ ಎಲ್ಲ ಅಪಸವ್ಯಗಳನ್ನು ದಾಟಿ, ಎದ್ದು ನಿಂತಿದ್ದು ಸಣ್ಣ ಸಾಧನೆಯಲ್ಲ. ಇಂದು ಭುಜ್, ಸೌರಾಷ್ಟ್ರ, ಕಛ್ ಭೂಕಂಪಗಳನ್ನು ಹೀರಿಕೊಂಡು ಗಟ್ಟಿಯಾಗಿ ನಿಲ್ಲುವ ನಗರಗಳಾಗಿ ನಿರ್ಮಾಣ ಗೊಂಡಿವೆ.

ಪ್ರಾಯಶಃ ಮೋದಿ ಮಾಡಿದ ದೊಡ್ಡ ಸಾಧನೆಯೆಂದರೆ ಇಡೀ ಸರಕಾರ, ಆಡಳಿತ, ವ್ಯವಸ್ಥೆಗೆ ನಾಯಕತ್ವಕೊಟ್ಟಿದ್ದು, ಸರಕಾರದ ಕೆಲಸವೆಂದರೆ ದೇವರಿಗೆ ಮಾತ್ರ ಪ್ರೀತಿ ಎಂಬಂತಿದ್ದ ಮನೋಭಾವ ಬದಲಿಸಿ ಇಡೀ ಆಡಳಿತಯಂತ್ರ ವನ್ನು ಅಭಿವೃದ್ಧಿಪರ ತಿರುಗಿಸಿದ್ದು. ಇದಕ್ಕೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡಿದ್ದು. ರಾಜ್ಯದಲ್ಲಿ ಕೈಗಾರಿಕೆಯನ್ನು ಉತ್ತೇಜಿಸಬೇಕೆಂದರೆ ವಿದ್ಯುತ್ ಸಮಸ್ಯೆ ಪರಿಹರಿಸಲೇಬೇಕು. ಒಂದು ಕಡೆ ಮಾತ್ರ ಅಲ್ಲ ರಾಜ್ಯದ ಎಲ್ಲ ಕಡೆಗಳಲ್ಲೂ ವಿದ್ಯುತ್ ಸದಾ ಸಿಗಬೇಕು. ಆಗ ಮಾತ್ರ ಕೈಗಾರಿಕಾ ಚಟುವಟಿಕೆ ಬಿರುಸುಗೊಳ್ಳುತ್ತದೆ. ಸಣ್ಣ ಕೈಗಾರಿಕೆಗಳು ಬಲವಾಗುತ್ತವೆ. ಅದರ ಫಲವಾಗಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾಗುತ್ತವೆ. ಗ್ರಾಮೀಣ ನಿರುದ್ಯೋಗ ನಿವಾರಣೆಯಾಗುತ್ತದೆ. ಅವರೆಲ್ಲ ಪಟ್ಟಣಗಳಿಗೆ ವಲಸೆ ಬರುವುದು ತಪ್ಪುತ್ತದೆ. ಅಂದರೆ ಸರಕಾರ ಸರಣಿ ಯೋಜನೆಗಳನ್ನು ಹಮ್ಮಿಕೊಂಡರೆ ಮಾತ್ರ ಸಂಘಟಿತ ಪ್ರಗತಿ ಸಾಧ್ಯ.

ಗುಜರಾತ್‌ನಲ್ಲಿ ಮಾತ್ರ ಈ ಸಾಮರಸ್ಯ ಕಂಡು ಬಂದಿದ್ದನ್ನು ರಾಜೀವ್‌ಗಾಂಧಿ ಫೌಂಡೇಶನ್ ಗಮನಿಸಿದೆ. “ಇಂಥ ಸಾಮರಸ್ಯ, ಹೊಂದಾಣಿಕೆ ಕೇವಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಗುಜರಾತ್ ಸರಕಾರ ಒಂದು ಕಾರ್ಪೊರೇಟ್ ಕಂಪನಿಯ ಹಾಗೆ ಕೆಲಸ ಮಾಡಿದೆ. ಇದರಿಂದ ನಿಶ್ಚಿತ ಫಲ ಪಡೆಯುವುದು ಸಾಧ್ಯವಾಗಿದೆ" ಎಂದು ಫೌಂಡೇಶನ್ ಹೇಳಿದೆ.

ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ಗುಜರಾ ತನ್ನು ಗುರುತು ಹಿಡಿಯಲಾರದಷ್ಟು ಬದಲಾಯಿಸಿದ್ದಾರೆ. ಅಹಮದಾಬಾದ್, ಬರೋಡ, ಸೂರತ್ ಮುಂತಾದ ನಗರಗಳು ನವವಧುವಿನಂತೆ ಸಿಂಗಾರಗೊಂಡಿವೆ. ರಸ್ತೆ, ಸೇತುವೆ, ಹೈವೇ, ಫ್ಲೈಓವರ್‌ಗಳು ಆಧುನಿಕತೆಯ ಸಂಕೇತಗಳಂತೆ ಎದ್ದು ನಿಂತಿವೆ. ಗುಜರಾತ್‌ನಲ್ಲಿ ನೂರಕ್ಕೂ ಹೆಚ್ಚು ಫ್ಲೈಓವರ್‌ಗಳು ಮೂರ್ನಾಲ್ಕು ವರ್ಷಗಳಲ್ಲಿ, ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿವೆ. ಮೋದಿ ಮುಖ್ಯಮಂತ್ರಿಯಾದ ಬಳಿಕ ಎಂಟು ಸಾವಿರ ಕಿ.ಮೀ. ಉದ್ದದ ರಸ್ತೆಗಳಾಗಿವೆ. ವಿದೇಶಿ ಬಂಡವಾಳ ವ್ಯಾಪಕವಾಗಿ ಹರಿದು ಬರುತ್ತಿವೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೋದಿ ಅಮೆರಿಕದಲ್ಲಿ ನೆಲೆಸಿದ 'ಗುಜ್ಜು"ಗಳಿಗೆ ಒಂದು ಕರೆ ನೀಡಿದರು ನೋಡಿ, ಸಾವಿರಾರು ಕೋಟಿ ರೂ. ಹರಿದುಬಂತು. ಮೋದಿ ಅಂಥ ವಿಶ್ವಾಸಾರ್ಹತೆ ಬೆಳೆಸಿ ಕೊಂಡಿದ್ದಾರೆ.

ಕಳೆದ ವರ್ಷ ಮೋದಿ ಭಾರತದ ಖ್ಯಾತನಾಮ ಉದ್ದಿಮೆ ದಾರರನ್ನು ಕರೆದು ಒಂದು ಸಮಾವೇಶ ಮಾಡಿದರು. ಅದರಲ್ಲಿ ಮಿತ್ತಲ್, ಟಾಟಾ, ಬಿರ್ಲಾ, ಅಂಬಾನಿ, ಮಹೀಂದ್ರ, ಜೈನ್, ಠಾಕೂರ್, ಗೋಯಲ್, ಮಲ್ಯ, ಒಬೇರಾಯ್, ಪಾರೀಖ್ ಸೇರಿದಂತೆ ಉದ್ದಿಮೆಯ ನಾಯಕಮಣಿಗಳನ್ನು ಆಹ್ವಾನಿಸಿದ್ದರು. ಅಲ್ಲಿ ಮೋದಿ ಹೇಳಿದ್ದಿಷ್ಟೇ- “ನಿಮಗೆಂಥ ಪರಿಸರ ಬೇಕು ಹೇಳಿ. ಉದ್ದಿಮೆಸ್ನೇಹಿ ಕಾನೂನು ರೂಪಿಸುತ್ತೇನೆ. ಯಾವುದೇ ಅಡೆತಡೆ ಇಲ್ಲದ, ಮುಕ್ತ ವಾತಾವರಣ ನಿರ್ಮಿಸಿಕೊಡುತ್ತೇನೆ. ನಮ್ಮ ರಾಜ್ಯದಲ್ಲಿ ಬಂಡವಾಳ ತೊಡಗಿಸಿ. ನಮ್ಮ ರಾಜ್ಯದವರಿಗೆ ಉದ್ಯೋಗ ಕೊಡಿ ಸಾಕು. ನೀವೂ ಹಣ ಮಾಡಿ. ಗುಜರಾತ್ ಅಭಿವೃದ್ಧಿಗೆ ಅನುವು ಮಾಡಿಕೊಡಿ."

ಆಶ್ಚರ್ಯವಾಗಬಹುದು, ಸುಮಾರು ಮೂವತ್ನಾಲ್ಕು ಸಾವಿರ ಕೋಟಿ ರೂ. ಹರಿದು ಬಂದಿತು. ದೇಶದ ಎಲ್ಲ ಪ್ರಮುಖ ಕಂಪನಿಗಳೂ ಇಂದು ಗುಜರಾತ್‌ನಲ್ಲಿ 'ಅಂಗಡಿ" ತೆರೆದಿವೆ. ಮೋದಿ ಆ ಎಲ್ಲ ಕಂಪನಿಗಳನ್ನು ಖುದ್ದಾಗಿ ಬರಮಾಡಿ ಕೊಂಡಿದ್ದಾರೆ. ಇಂದು ಗುಜರಾತ್‌ನಲ್ಲಿ ಹಣಹೂಡಲು ಬರುವ ಕಂಪನಿಗಳ ಉದ್ದದ ಸಾಲಿದೆ. ಉದ್ಯಮಪತಿಗಳ ಸಭೆಯಲ್ಲಿ ಮೋದಿ ವಿಶೇಷ ಆಕರ್ಷಣೆ. ದೇಶದ ಷೇರು ವಹಿವಾಟಿನ ಶೇ. ೩೪ರಷ್ಟು, ಕೈಗಾರಿಕಾ ಉತ್ಪಾದನೆಯ ಶೇ. 24ರಷ್ಟು, ಪೆಟ್ರೋರಾಸಾಯನಿಕಗಳ ಶೇ. 56ರಷ್ಟು, ಔಷಧ ತಯಾರಿಕೆಯ ಶೇ. 32ರಷ್ಟು ವ್ಯವಹಾರ ಗುಜರಾತ್‌ದಿಂದ ಮಾತ್ರ ಆಗುತ್ತಿದೆ.

ಗುಜರಾತಿನ ಯಾವುದೇ ಮೂಲೆಯಲ್ಲಿ ನಿಮ್ಮ ಕೈಗಾರಿಕೆಯಿರಲಿ, 24 ಗಂಟೆಯೊಳಗೆ ತಲುಪಿಸುವ ಹೆದ್ದಾರಿ ವ್ಯವಸ್ಥೆ ಸಂಪರ್ಕ ಕ್ರಾಂತಿಯನ್ನುಂಟು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಪಾಳುಬಿದ್ದ ಭೂಮಿಯನ್ನು ಸಹ ವಿಶೇಷ ಆರ್ಥಿಕ ವಲಯವನ್ನಾಗಿ ಅಭಿವೃದ್ಧಿಪಡಿಸಿ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್‌ನ್ನು ಆಹ್ವಾನಿಸಲಾಗುತ್ತಿದೆ. ಅಕ್ಷರಶಃ ಮೋದಿ ರಾಜಕಾರಣಿಯಂತೆ ವರ್ತಿಸುತ್ತಿಲ್ಲ. ಪಕ್ಕಾ CEO(ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ)ನಂತೆ ಕೆಲಸ ಮಾಡುತ್ತಿದ್ದಾರೆ. ಅವರ ಹಾವಭಾವ, ಭಾಷೆಯೂ ಅದಕ್ಕೆ ತಕ್ಕಂತೆ ಬದಲಾಗಿದೆ. ಅನಿಸಿದ್ದನ್ನು ದಾಢಸಿತನದಿಂದ ಮಾಡುತ್ತಾರೆ. ಹೀಗಾಗಿ ಸರ್ವಾಧಿಕಾರಿ ಎಂತಲೂ ಟೀಕೆ ಗೊಳಗಾಗುತ್ತಾರೆ.

ಮುಂದಿನವಾರ ನಡೆಯಲಿರುವ ಅಸೆಂಬ್ಲಿ ಚುನಾವಣೆ ಯಲ್ಲಿ ಮೋದಿ ವರ್ಸಸ್ ಇತರ ರಾಜಕೀಯ ಪಕ್ಷಗಳು ಎಂಬಂತಾಗಿದೆ. ಬಿಜೆಪಿಯ 'ಪೋಸ್ಟರ್ ಬಾಯ್" ಮೋದಿ ಹೊರತಾಗಿ ಮತ್ತ್ಯಾವ ರಾಷ್ಟ್ರೀಯ ನಾಯಕರ ಭಾವಚಿತ್ರಗಳೂ ಕಾಣಿಸುತ್ತಿಲ್ಲ. ಗುಜರಾತ್ ಮೋದಿಮಯ. ವಾಜಪೇಯಿ, ಆಡ್ವಾಣಿ, ರಾಜನಾಥ್ ಸಿಂಗ್ ಸಹ ಮಸುಕು ಮಸುಕು. ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ ಮೋದಿ, ಪಕ್ಷ ರಾಜಕಾರಣದ ನಡುವೆಯೂ ಅಭಿವೃದ್ಧಿ ಸಾಧಿಸುವುದನ್ನು ತೋರಿಸಿಕೊಟ್ಟಿದ್ದಾರೆ. ರಾಜಕಾರಣಗಳೆಂದರೆ ಅಭಿವೃದ್ಧಿ ಕಂಟಕರು ಎಂಬುದನ್ನು ಸುಳ್ಳು ಮಾಡಿದ್ದಾರೆ. ಗುಜರಾತ್ ಮಾದರಿ ಅಂದ್ರೆ ಇದು ಸ್ವಾಮಿ, ಕುಮಾರಸ್ವಾಮಿ!

(ಸ್ನೇಹ ಸೇತು : ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X