• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋರಾಟ, ಹಾರಾಟ ಸಾಕು, ಕನ್ನಡ ಮಾತಾಡ ಬೇಕು

By Staff
|

ಈ ಎಲ್ಲ ವಿಚಾರಗಳನ್ನು ಮನಸ್ಸಿನ ಹಿತ್ತಲಲ್ಲಿಯೇ ಇಟ್ಟುಕೊಳ್ಳೋಣ. ನಮ್ಮ ಪ್ರೀತಿಯ ಕನ್ನಡಕ್ಕೆ ನಾನೇನು ಮಾಡಬಹುದು ಎಂದು ಯೋಚಿಸೋಣ. ಪ್ರತಿವರ್ಷದಂತೆ ರಾಜ್ಯೋತ್ಸವವನ್ನು ಶೋಕಾಚರಣೆಯಂತೆ ಆಚರಿಸುವುದು ಬೇಡ. ಕನ್ನಡಕ್ಕೆ ಹಾಗಾಗುತ್ತಿದೆ, ಹೀಗಾಗುತ್ತಿದೆ ಎಂದು ಕಳವಳಗೊಂಡು ಶೋಕಿಸುವುದು ಬೇಡ. ಕನ್ನಡ ರಾಜ್ಯೋತ್ಸವ ನಿಜ ಅರ್ಥದಲ್ಲಿ ನಮ್ಮಲ್ಲಿ ಉತ್ಸವ ಹಾಗೂ ಉತ್ಸಾಹ ತರಲಿ.

  • ವಿಶ್ವೇಶ್ವರ ಭಟ್

'ಕನ್ನಡ ಹಬ್ಬ"ದ ಹೊಸ್ತಿಲಲ್ಲಿ ಕುಳಿತಿದ್ದಾಗ ಯಾಕೋ ಅವರು ಹೇಳಿದ ಮಾತು ನೆನಪಾಯಿತು.

ಇತ್ತೀಚೆಗೆ ಅಮೆರಿಕದಿಂದ ಬಂದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಜಯಂತಿ ಮಹೇಶ್ ಹೇಳುತ್ತಿದ್ದರು- "ಅಮೆರಿಕದಲ್ಲಿದ್ದೂ ನಾನು ಬೆಂಗಳೂರಿನಲ್ಲಿರುವವರಿಗಿಂತ ಹೆಚ್ಚು ಕನ್ನಡ ಬಳಸುತ್ತೇನೆ. ಕೆಲಸದ ಅವಧಿಯಲ್ಲಿ ಆಫೀಸಿನಲ್ಲಿ ಅನಿವಾರ್ಯವಾಗಿ ಇಂಗ್ಲಿಷ್ ಬಳಸುವುದನ್ನು ಬಿಟ್ಟರೆ ಉಳಿದ ನನ್ನೆಲ್ಲ ವ್ಯವಹಾರ ಕನ್ನಡದಲ್ಲೇ. ಮನೆಯಲ್ಲಿ ಗಂಡ, ಮಕ್ಕಳೆಲ್ಲ ಕನ್ನಡದಲ್ಲೇ ಮಾತಾಡುತ್ತೇವೆ. ನಮ್ಮ ಮನೆಯಲ್ಲಿರುವ ಅಮೆರಿಕದ ನಾಯಿಗೂ ಕನ್ನಡ ಕಲಿಸಿದ್ದೇವೆ. ಪ್ರತಿದಿನ ಕನಿಷ್ಠ ಎರಡು ಕನ್ನಡ ಪತ್ರಿಕೆಗಳನ್ನಾದರೂ ಓದುತ್ತೇನೆ. ಕನ್ನಡಿಗರು ಫೋನಿಗೆ ಸಿಕ್ಕಾಗ, ಖುದ್ದಾಗಿ ಭೇಟಿಯಾದಾಗ ಕನ್ನಡದಲ್ಲೇ ಮಾತಾಡುತ್ತೇನೆ. ಆಫೀಸಿನ ಸಿಬ್ಬಂದಿ ಜತೆ ಮಾತಾಡುವಾಗ 'ನಮಸ್ಕಾರ" ಅಂತೇನೆ. ಹಲೋ ಬದಲು 'ಹರಿ ಓಂ" ಅಂತೇನೆ. ಶುಭ ಮುಂಜಾವು ಎಂದು ಮಾತಿಗಿಳಿಯುತ್ತೇನೆ. ನನ್ನ ದೆಸೆಯಿಂದ ಅವರೂ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದಾರೆ. ನನಗೆ ಇದ್ಯಾವವೂ ತೋರಿಕೆ ಎಂದೆನಿಸುತ್ತಿಲ್ಲ. ಇವೆಲ್ಲ ತೀರಾ ಸಹಜ"

ಪುನಃ ಅವರೇ ಮಾತು ಮುಂದುವರಿಸಿದರು- "ಬೆಂಗಳೂರಿಗೆ ಬಂದು ಒಂದು ತಿಂಗಳಾಯಿತು. ಎಲ್ಲರ ಬಾಯಲ್ಲೂ ಇಂಗ್ಲಿಷ್. ಕನ್ನಡ ಬಾರದಿದ್ದವರ ಜತೆ ಇಂಗ್ಲಿಷ್ ಮಾತಾಡಲಿ, ಆದರೆ ಕನ್ನಡಿಗರು ಪರಸ್ಪರ ಭೇಟಿಯಾದಾಗಲೂ ಇಂಗ್ಲಿಷ್ ಬೇಕಾ? ಮತ್ತೂ ವಿಚಿತ್ರ ಅಂದ್ರೆ ಕೆಲವರು ಕನ್ನಡದಲ್ಲಿ ಹೇಳಿದ್ದನ್ನೇ ಇಂಗ್ಲಿಷಿನಲ್ಲಿ ತರ್ಜುಮೆ ಮಾಡಿ ಹೇಳುತ್ತಾರೆ. 'ನಾನು ಏನು ಹೇಳಬೇಕು ಅಂತಿದೀನಿ ಅಂದ್ರೆ" ಎಂದು ಹೇಳಿ "What I wanted to tell you is that" ಎಂದು ಶುರುಹಚ್ಚಿಕೊಳ್ಳುತ್ತಾರೆ. ಅಸಹ್ಯ ಅನಿಸುತ್ತದೆ. ಇದೆಂಥ ದಾಸ್ಯತ್ವ? ಇದರಿಂದ ಯಾರನ್ನು ಖುಷಿಪಡಿಸುತ್ತಾರೆ? ಎದುರಿಗಿದ್ದವನು ಪಕ್ಕಾ ಕನ್ನಡಿಗ ಎಂಬುದು ಗೊತ್ತಿರುತ್ತದೆ. ಆದರೂ (ಕೆಟ್ಟ) ಇಂಗ್ಲಿಷಿನಲ್ಲೇ ಮಾತಿಗಿಳಿಯುತ್ತಾರೆ. ಕನ್ನಡಿಗನೆಂಬುದು ಗೊತ್ತಾದ ಬಳಿಕವೂ ಇಂಗ್ಲಿಷ್ ಮುಂದುವರಿಯುತ್ತದೆ.

ವಿಶ್ವೇಶ್ವರ ಭಟ್ ಇನ್ನು ಕೆಲವರು ಕನ್ನಡದಲ್ಲಿ ಮಾತಾಡಿದರು ಅಂತಿಟ್ಟುಕೊಳ್ಳಿ. ಉಚ್ಚಾರ ಬಿಟ್ಟರೆ ಪದಗಳೆಲ್ಲ ಇಂಗ್ಲಿಷ್. ಮಧ್ಯೆ ಮಧ್ಯೆ ಕನ್ನಡ. ನಾನು ಜಪಾನ್, ಕೊರಿಯಾ, ಚೀನಾದಲ್ಲಿ ಕೆಲಸ ಮಾಡಿದ್ದೇನೆ. ಕೇರಳ ತಮಿಳುನಾಡಿನಲ್ಲಿ ರಜೆಗೆ ಹೋದಾಗ ಗಮನಿಸಿದ್ದೇನೆ. ಅಲ್ಲೆಲ್ಲೂ ಇಲ್ಲದ ವಾತಾವರಣ ನಮ್ಮ ಕರ್ನಾಟಕದಲ್ಲಿ ಇದೆ, ವಿಚಿತ್ರ"

ಜಯಂತಿ ಮಾತು ಮುಗಿಸಿರಲಿಲ್ಲ. ನನ್ನ ಚೇಂಬರ್ ಒಳಗೆ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರೊಬ್ಬರು ಬಂದು, “ನಾವೊಂದು ಕ್ಯಾಂಪೇನ್ ಮಾಡುತ್ತಿದ್ದೇವೆ. ಆ ಸಂಬಂಧದ ಸುದ್ದಿ ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಆದರೆ ಎಲ್ಲ ಮಾಹಿತಿ ಇಂಗ್ಲಿಷಿನಲ್ಲಿವೆ. ಪತ್ರಿಕಾ ಪ್ರಕಟಣೆಯೂ. ಹೇಗಿದ್ದರೂ ನೀವು ಅನುವಾದ ಮಾಡ್ಕೊಳ್ತೀರಲ್ಲ" ಎಂದರು. (ಅವರ ಈ ಎಲ್ಲ ಮಾತುಗಳು ಇಂಗ್ಲಿಷಿನಲ್ಲಿಯೇ ಇದ್ದವು. ಅವರು ಅಪ್ಪಟ ಕನ್ನಡಿಗರು ಬೇರೆ.)

ಜಯಂತಿ ಆ ಮಹಾಶಯರನ್ನು ಸಿಟ್ಟಿನಿಂದ ಸುಟ್ಟುಬಿಡುವಂತೆ ದುಸಮುಸಗುಡುತ್ತಿದ್ದರು. ನಾನು ಹೇಳಿದೆ- “ಆಗೊಲ್ಲ. ನೀವು ಕನ್ನಡದಲ್ಲಿ ಬರೆದುಕೊಟ್ಟರೆ ಮಾತ್ರ ಪ್ರಕಟಿಸುತ್ತೇವೆ. ನಮ್ಮದು ಕನ್ನಡ ಪತ್ರಿಕೆಯೆಂಬುದು ಗೊತ್ತಿದ್ದೂ ಇಂಗ್ಲಿಷಿನಲ್ಲಿ ಬರೆದು ಕೊಡುತ್ತಿದ್ದೀರಲ್ಲ. ಒಂದು ವೇಳೆ ಇಂಗ್ಲಿಷ್ ಪತ್ರಿಕೆ ಸಂಪಾದಕರಿಗೆ ಕನ್ನಡದಲ್ಲಿ ಬರೆದು ಕೊಡ್ತಿದ್ರಾ? ಅವರಿಗೆ ಕನ್ನಡದಲ್ಲಿ ಕೊಡಬಾರದು ಎನ್ನುವ ನಿಮ್ಮ ಕಾಮನ್‌ಸೆನ್ಸ್, ನನಗೆ ಇಂಗ್ಲಿಷಿನಲ್ಲಿ ಕೊಡಬಾರದೆನ್ನುವಾಗ ಕೈಕೊಡುವುದೇಕೆ? ಕನ್ನಡದ ಬಗ್ಗೆ ಕನ್ನಡಿಗರಾಗಿ ಅಸಡ್ಡೆ ಏಕೆ?"

ನಾನು ಮಾತು ಮುಗಿಸುವುದನ್ನೂ ಕಾಯದೇ, ಜಯಂತಿ ಆ ಮಹಾಶಯರನ್ನುದ್ದೇಶಿಸಿ ಹೇಳಿದರು- “ಸ್ವಾಮಿ, ನಿಮ್ಮಂಥವರ ಬಗ್ಗೇ ಮಾತಾಡುತ್ತಿದ್ದೆವು. ನೀವು ಕನ್ನಡಿಗರು. ಇವರು ಕನ್ನಡ ಪತ್ರಿಕಾ ಸಂಪಾದಕರು. ಆದರೂ ನಿಮಗೆ ಇಂಗ್ಲಿಷಿನಲ್ಲಿ ಮಾತಾಡುವ ತೆವಲೇಕೆ? ನೀವು ಚೀನಾದಲ್ಲಿ ಕನ್ನಡ ಮಾತಾಡಬೇಕಿಲ್ಲ. ಅಲ್ಲಿ ಕನ್ನಡ ಬೆಳೆಸಬೇಕಿಲ್ಲ. ಇಲ್ಲಾದರೂ ನೆಟ್ಟಗೆ ಕನ್ನಡ ಮಾತಾಡ್ರೀ". ಆ ಮಹಾನುಭಾವರು ಒಂದೇ ಒಂದು ಮರು ಮಾತಾಡಲಿಲ್ಲ.

ಜಯಂತಿ ನಾಲ್ಕು ಭಾಷೆಗಳನ್ನು (ಕನ್ನಡ, ಹಿಂದಿ, ಇಂಗ್ಲಿಷ್, ಜಪಾನಿ) ಚೆನ್ನಾಗಿ ಮಾತಾಡುತ್ತಾರೆ, ಬರೆಯುತ್ತಾರೆ. ಆದರೆ ಬಾಯಿ ತೆರೆದರೆ ಕನ್ನಡವೇ. electricityಗೆ ವಿದ್ಯುಚ್ಛಕ್ತಿ ಎಂದೇ ಹೇಳುವಷ್ಟು ಅವರ ಕನ್ನಡ ಶುದ್ಧವಾಗಿದೆ. ಅಮೆರಿಕದಲ್ಲಿ ಕನ್ನಡ ಸಂಘಗಳಿಂದ ಹೊರಗಡೆ ಇದ್ದು ವೈಯಕ್ತಿಕ ನೆಲೆಯಲ್ಲಿ ಕನ್ನಡ ಕೆಲಸ ಮಾಡುತ್ತಿದ್ದಾರೆ. ಯಾರೇ ಕೇಳಿದರೂ 'ನಾನು ಕನ್ನಡತಿ" ಎಂದು ಹೇಳಿಯೇ ತಮ್ಮ ಹೆಸರು, ಪರಿಚಯ ಮಾಡಿಕೊಳ್ಳುತ್ತಾರೆ. ಹಾಗಂತ ಇವರು ಕನ್ನಡ ಹೋರಾಟಗಾರ್ತಿಯಲ್ಲ. ಪುಸ್ತಕ ಬರೆದಿಲ್ಲ, ಭಾಷಣ ಮಾಡೊಲ್ಲ. ಆದರೂ ಕನ್ನಡ ಅವರಲ್ಲಿ ಸಹಜವಾಗಿ ಜಾಗೃತವಾಗಿದೆ. ಹೀಗಾಗಿ ಅಮೆರಿಕದಲ್ಲೇ ಹುಟ್ಟಿದ ಮಕ್ಕಳಿಗೆ ಕನ್ನಡ ಕಲಿಸಿದ್ದಾರೆ ಓದಲು, ಬರೆಯಲು, ಮಾತಾಡಲು. “ಕನ್ನಡ ಮರೆತರೆ, ನಮ್ಮ ಮಕ್ಕಳಿಗೂ, ಇಂಗ್ಲಿಷ್ ಮಕ್ಕಳಿಗೂ ಏನು ವ್ಯತ್ಯಾಸ? ನಮ್ಮ ಭಾಷೆ, ಸಂಸ್ಕೃತಿ ಮರೆತರೆ ನಾವು ಕನ್ನಡಿಗರಾಗಿ ಬಾಳೋದುಂಟಾ? ಆಗ ನಾವು ಇನ್ಯಾರೋ, ಇನ್ನೇನೋ ಆಗುತ್ತೇವೆ" ಎಂದರು.

“ಮೂರು ವರ್ಷಗಳ ನಂತರ ಬೆಂಗಳೂರಿಗೆ ಬರುತ್ತಿದ್ದೀರಲ್ಲಾ, ಏನನಿಸುತ್ತಿದೆ?" ಕೇಳಿದೆ. ಜಯಂತಿ ವಿಷಾದದಿಂದ ಹೇಳಿದರು- “ಬೆಂಗಳೂರಿಗಿಂತ ವೇಗವಾಗಿ ಕನ್ನಡ ಹಾಳಾಗಿದೆ. ಎಲ್ಲರ ಬಾಯಲ್ಲೂ ಇಂಗ್ಲಿಷ್ ನಲಿದಾಡುತ್ತಿದೆ. ಎಲ್ಲರೂ ಇಂಗ್ಲಿಷ್ ಶಾಲೆಗಳಿಗೆ ಮಕ್ಕಳನ್ನು ಕಲಿಸುತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ಮಾತಾಡಿದರೆ ದಂಡ ಹಾಕುತ್ತಾರೆ. ಎಲ್ಲರೂ ತಮ್ಮ ಮಕ್ಕಳನ್ನು ಅಮೆರಿಕಕ್ಕೇ ಕಳಿಸುವ ಹುನ್ನಾರದಲ್ಲಿದ್ದಂತಿದೆ. ಅಪ್ಪಟ ಕನ್ನಡಿಗರ ಮನೆಗಳಲ್ಲೂ ಇಂಗ್ಲಿಷ್ ಪತ್ರಿಕೆ ಕಾಣಿಸಿಕೊಳ್ಳುತ್ತಿದೆ. ಕನ್ನಡ ಕಲಿತರೆ ಭವಿಷ್ಯವಿಲ್ಲ. ಉತ್ತಮ ಹಾಗೂ ಉನ್ನತ ಜೀವನಕ್ಕೆ ಇಂಗ್ಲಿಷ್ ಒಂದೇ ದಾರಿ ಎಂದೂ ಅನೇಕರು ಭಾವಿಸಿದಂತಿದೆ. ಏಕಾಏಕಿ ನಮ್ಮ ನಾಡಿನಲ್ಲೇ ಪರಕೀಯರಾಗುತ್ತಿದ್ದೇವೇನೊ ಎಂಬ ಭಾವ ಮೊದಲ ಬಾರಿಗೆ ಕಾಡುತ್ತಿದೆ. ನಾನು ಚಿಕ್ಕವಳಾಗಿದ್ದಾಗ ಕನ್ನಡದ ಮಧ್ಯೆ ಒಂದು ಇಂಗ್ಲಿಷ್ ಪದ ಬಳಸುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಒಂದು ಇಂಗ್ಲಿಷ್ ಪದ ಬಳಸಿದರೆ ಅಪ್ಪ ಗದರುತ್ತಿದ್ದರು. ಈಗ ಎಲ್ಲರೂ ಎಗ್ಗಿಲ್ಲದೇ ಬಳಸುತ್ತಿದ್ದಾರೆ.

ಜಯಂತಿ ಹೇಳಿದ್ದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ನಾಲಗೆ ಮೇಲೆ ಇಂಗ್ಲಿಷ್ ಪದಗಳು ಬಂದು ಕುಳಿತಿವೆ. ನಿತ್ಯ ಬಳಸುತ್ತಿದ್ದ ಕನ್ನಡ ಪದಗಳ ಬದಲಿಗೆ ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದೇವೆ. ಬರವಣಿಗೆಯಲ್ಲೂ ಮೊದಲಿಗಿಂತ ಹೆಚ್ಚು ಇಂಗ್ಲಿಷ್ ಪದಗಳು ಕಾಣಿಸಿಕೊಳ್ಳುತ್ತಿವೆ. ಕಾನ್ಫಿಡೆನ್ಸ್, ಡಿಫೆನ್ಸು, ರೆಫರೆನ್ಸು, ಮಾಡಲಿಟಿ, ಪರ್ಸನಾಲಿಟಿ, ಟೇಸ್ಟು, ನ್ಯಾಸ್ಟಿಫೆಲೋ, ಇಂಟಲಿಜೆಂಟ್, ಸರ್‌ಪ್ರೈಸು ಎಂದೆಲ್ಲ ಬರೆಯುವುದನ್ನು ನೋಡುತ್ತಿದ್ದೇವೆ. ಇವೆಲ್ಲವುಗಳಿಗೂ ಅಚ್ಚ, ಶುದ್ಧ ಕನ್ನಡ ಪದಗಳಿವೆ. ವಿಚಿತ್ರವೆಂದರೆ ಸುದ್ದಿಮನೆಗೆ ಹೊಸತಾಗಿ ಬರುವ ಯುವ ಪತ್ರಕರ್ತರೂ ಹೀಗೆಲ್ಲ ಬರೆಯಲಾರಂಭಿಸಿದ್ದಾರೆ. ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಇಂಗ್ಲಿಷ್ ಪದ ಸ್ವೀಕೃತವಾಗಿಬಿಟ್ಟಿದೆ. ಪದಗಳ ಮಟ್ಟಿಗೆ ಕನ್ನಡವೋ, ಇಂಗ್ಲಿಷೋ ಎಂಬ ತಾಕಲಾಟ ಶುರುವಾದರೆ ನಾಲಗೆ ಇಂಗ್ಲಿಷ್ ಕಡೆ ಹೊರಳುತ್ತದೆ. ಹೋಟೆಲ್ ನಲ್ಲಿ ಮಾಣಿಗೆ ಉಪ್ಪು ಬೇಕು ಅಂದ್ರೆ, ಸಾಲ್ಟ್ ಕೊಡಲಾ ಸಾರ್ ಅಂತ ಕೇಳುತ್ತಾನೆ. ಅನ್ನ ತಗೊಂಬಾ ಅಂದರೆ, ರೈಸ್ ಕೇಳಿದ್ರಾ ಸಾರ್ ಅಂತಾನೆ. ಚಿತ್ರಾನ್ನ ಅವನಿಗೆ ಎಂದೋ ಕಲರ್ಡ್ ರೈಸ್ ಆಗಿಹೋಗಿದೆ.

ಬೆಂಗಳೂರಿನಲ್ಲಿ ಯಾವುದೇ ಕಾಲೇಜಿಗೆ ಭಾಷಣಕ್ಕೆ ಹೋಗುವಾಗ ಹುಷಾರು. ನೀವು ಕನ್ನಡದಲ್ಲಿ ಮಾತಾಡುವವರಾದರೆ ಮೂಗು ಮುರಿಯುತ್ತಾರೆ, ಆಕಳಿಸುತ್ತಾರೆ. ಕನ್ನಡದಲ್ಲಿ ಮಾತಾಡುತ್ತಿದ್ದರೆ 'ಇಂಗ್ಲಿಷ್ ಇಂಗ್ಲಿಷ್" ಎಂದು ಕೂಗುತ್ತಾರೆ. ಅನೇಕ ಸಲ ನನಗೆ ಈ ಅನುಭವವಾಗಿದೆ. ಅಂಥ ಸಂದರ್ಭಗಳಲ್ಲಿ ನಾನು 'ಬೆಂಗಳೂರು ಕನ್ನಡದಲ್ಲಿ ಮಾತಾಡ್ತೀನಿ. ನಿಮಗೆ ಅರ್ಥವಾಗುತ್ತೆ" ಎಂದು ಹೇಳುತ್ತೇನೆ. ವಿದ್ಯಾರ್ಥಿಗಳು ಸುಮ್ಮನಾಗುತ್ತಾರೆ. ಬೆಂಗಳೂರು ಕನ್ನಡ ಅಂದ್ರೆ ಉಚ್ಚಾರ ಮಾತ್ರ ಕನ್ನಡ, ಪದಗಳೆಲ್ಲ ಇಂಗ್ಲಿಷ್. “ಏನ್ ಸಾರ್, ಟ್ರೇನು ಟೆನ್ ಮಿನಿಟ್ಸ್ ಲೇಟಾ? ಸೋ, ವಿಥಿನ್ ನೆಕ್ಸ್ಟ್ ಟೆನ್ ಮಿನಿಟ್ಸ್ ಐ ವಿಲ್ ಬಿ ದೇರ್." ಈ ರೀತಿ ಮಾತಾಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಒಂಥರ ಎಫ್‌ಎಮ್ ಕನ್ನಡ! 'ಡಿಯರ್ ಲಿಸನರ್‍ಸ್, ನಿಮಗಾಗಿ ವೆರಿ ಸ್ಪೆಶಲ್ ಸಾಂಗ್ ಪ್ರಸಾರ ಮಾಡ್ತೇವೆ..." ಎಂದು ಅಲ್ಲಿ ರೇಡಿಯೊ ಜಾಕಿ ಹೇಳುವ ರೀತಿ ಮಾತಾಡಬೇಕು. ಇದೊಂದು ರೀತಿಯ ಫ್ಯಾಷನ್ ಸಹ.

ನಮ್ಮ ನಾಲಗೆ, ಕಿವಿಗಳಿಗೆ ಇಂಗ್ಲಿಷ್ ರುಚಿಸುತ್ತಿವೆ, ಇಂಪಾಗುತ್ತಿವೆ. ಸ್ವಚ್ಛ ಕನ್ನಡದಲ್ಲೇ ಮಾತಾಡಬೇಕೆಂದು, “ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ಮುಂದಿನ ಒಂದು ವರ್ಷದ ಅವಧಿಗೆ ಅಬಾಧಿತವಾಗಿ ದಿನದಲ್ಲಿ ಇಪ್ಪತ್ನಾಲ್ಕು ಗಂಟೆಗಳ ಕಾಲ ಗ್ರಾಹಕರಿಗೆ ವಿದ್ಯುಚ್ಛಕ್ತಿ ಪೂರೈಸಲು ನಿರ್ಧರಿಸಿದೆ" ಎಂದು ನೀವೇನಾದರೂ ಮಾತಾಡಿದರೆ, ನಿಮ್ಮ ಕಿವಿಗೇ ಕಸಿವಿಸಿಯಾಗುತ್ತದೆ. ಯಾರೋ ಒತ್ತಾಯಪೂರ್ವಕವಾಗಿ ಕನ್ನಡದಲ್ಲಿಯೇ ಮಾತಾಡಿ ತೀರಬೇಕೆಂದು ನಿರ್ಧರಿಸಿದ್ದಾರೆನಿಸುತ್ತದೆ. ಅಂದರೆ ಮಾತಿನ ಮಧ್ಯೆ ಇಂಗ್ಲಿಷ್ ಪದ ಬಳಸದೇ, ಶುದ್ಧ ಕನ್ನಡದಲ್ಲಿಯೇ ಮಾತಾಡಿದರೆ ಅದು ಅಸಹಜ. ಅಷ್ಟರಮಟ್ಟಿಗೆ ನಾವು ಮಧ್ಯೆಮಧ್ಯೆ ಇಂಗ್ಲಿಷ್ ಪದಗಳಿಗೆ ಒಗ್ಗಿಕೊಂಡಿದ್ದೇವೆ, ಒಪ್ಪಿಕೊಂಡಿದ್ದೇವೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮವೆಂದು ಸಂಘಟಕರು ತಿಳಿಸಿದ್ದರು. ಹೋದ ನಂತರ ತಿಳಿದಿದ್ದೇನೆಂದರೆ ಶುದ್ಧ ಕನ್ನಡದಲ್ಲಿ ಮಾತಾಡುವವರಿಗೆ ಸನ್ಮಾನ ಎಂದು.ಕಾರ್ಯಕ್ರಮದ ಉದ್ದೇಶ ತಿಳಿದು ಸಂತಸ ಹಾಗೂ ಬೇಸರ ಒಟ್ಟಿಗೆ ಆದವು. ಸಂತಸವೇಕೆಂದರೆ ಶುದ್ಧ ಕನ್ನಡದಲ್ಲಿ ಮಾತಾಡುವವರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದಾರಲ್ಲ ಎಂದು. ಬೇಸರವೇಕೆಂದರೆ ಶುದ್ಧ ಕನ್ನಡದಲ್ಲಿ ಮಾತಾಡುವುದೂ ಅಗ್ಗಳಿಕೆ ವಿಚಾರವಾಗಿ ಪರಿಗಣಿಸುತ್ತಿದ್ದಾರಲ್ಲ ಎಂದು. ಅಂದರೆ ಯಾವುದು ಸಹಜವಾಗಿರಬೇಕಿತ್ತೋ ಅದೇ ನಮಗೆ ಅಸಾಧಾರಣವಾಗಿ ಕಾಣುತ್ತಿದೆ. ಅತಿ ಶೀತ ಪ್ರದೇಶದಲ್ಲಿ ವಾಸಿಸುತ್ತಿರುವುದಕ್ಕೆ ಪೆಂಗ್ವಿನ್ ಪಕ್ಷಿಗೆ ಪ್ರಶಸ್ತಿ ನೀಡಿದರೆ ಅದೆಂಥ ಅಸಂಬದ್ಧವೋ ಇದೂ ಹಾಗೆ ಅಲ್ಲವೇ ಎನಿಸಿತು. ಕಟುಸತ್ಯವೆಂದರೆ ಶುದ್ಧ ಕನ್ನಡದಲ್ಲಿ ಮಾತಾಡುವುದು ಅಪರೂಪವೆನಿಸುತ್ತಿದೆ ಹಾಗೂ ಅದೊಂದು ದೊಡ್ಡ ಸಾಧನೆಯೆಂದು ಪರಿಗಣಿತವಾಗುತ್ತಿದೆ. ಹೀಗಾಗಿ ಅಚ್ಚ ಕನ್ನಡದಲ್ಲಿ ಮಾತಾಡುವ ನಿರೂಪಕ, ನಿರೂಪಕಿಯರಿಗೆ ಬೇಡಿಕೆ ಹೆಚ್ಚುತ್ತಿರುವುದು ಬೇರೆ ಮಾತು.

ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಕನ್ನಡದಿಂದ ಇಂಗ್ಲಿಷಿನ ಕಡೆಗೆ ಆಕರ್ಷಿತರಾಗುತ್ತಿರುವವರ ಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ. 8ರಷ್ಟು ಹೆಚ್ಚಿದೆ. ಆರಂಭದಿಂದಲೇ ಇಂಗ್ಲಿಷ್ ಶಿಕ್ಷಣದೆಡೆಗೆ ಹೋಗುತ್ತಿರುವವರ ಪ್ರಮಾಣ ಹೆಚ್ಚುತ್ತಿರುವುದರಿಂದ, ಕನ್ನಡ ಮಾತಾಡಲು ಮಾತ್ರ ಬಲ್ಲ, ಆದರೆ ಓದಲು, ಬರೆಯಲು ಬಾರದವರ ಸಂಖ್ಯೆ ಹೆಚ್ಚುತ್ತಿದೆ. ಅಂದರೆ ಬೆಂಗಳೂರಿನಲ್ಲಿರುವ ಕನ್ನಡಿಗರು ಪಕ್ಕದ ತಮಿಳು, ತೆಲುಗು, ಮಲಯಾಳಂ ಮಾತಾಡಿದಂತೆ, ಕನ್ನಡವನ್ನೂ ಮಾತಾಡುವ ದಿನ ದೂರವಿಲ್ಲವೇನೋ? ಹೀಗಾದರೆ ಕನ್ನಡದ ಗತಿಯೇನು? ಕನ್ನಡಕ್ಕೇನಾದರೂ ಕುತ್ತು, ತೊಂದರೆ ಬಂದರೆ ಯಾರೂ ಪ್ರತಿಭಟಿಸುವುದಿಲ್ಲ. ನಾವೆಲ್ಲ ಆ ಕೆಲಸವನ್ನು ಕನ್ನಡ ರಕ್ಷಣಾ ವೇದಿಕೆಗೆ, ಕೆಲ ಸಾಹಿತಿಗಳಿಗೆ ಬಿಟ್ಟು ಎಷ್ಟು ವರ್ಷಗಳಾದವು. ಕನ್ನಡಕ್ಕಾಗಿ ನಾವು ಬೀದಿಗಿಳಿದು ಎಷ್ಟು ದಿನಗಳಾದವು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.

ಈ ಎಲ್ಲ ವಿಚಾರಗಳನ್ನು ಮನಸ್ಸಿನ ಹಿತ್ತಲಲ್ಲಿಯೇ ಇಟ್ಟುಕೊಳ್ಳೋಣ. ನಮ್ಮ ಪ್ರೀತಿಯ ಕನ್ನಡಕ್ಕೆ ನಾನೇನು ಮಾಡಬಹುದು ಎಂದು ಯೋಚಿಸೋಣ. ಪ್ರತಿವರ್ಷದಂತೆ ರಾಜ್ಯೋತ್ಸವವನ್ನು ಶೋಕಾಚರಣೆಯಂತೆ ಆಚರಿಸುವುದು ಬೇಡ. ಕನ್ನಡಕ್ಕೆ ಹಾಗಾಗುತ್ತಿದೆ, ಹೀಗಾಗುತ್ತಿದೆ ಎಂದು ಕಳವಳಗೊಂಡು ಶೋಕಿಸುವುದು ಬೇಡ. ಕನ್ನಡ ರಾಜ್ಯೋತ್ಸವ ನಿಜ ಅರ್ಥದಲ್ಲಿ ನಮ್ಮಲ್ಲಿ ಉತ್ಸವ ಹಾಗೂ ಉತ್ಸಾಹ ತರಲಿ.

ಕನ್ನಡಕ್ಕೆ ನಮ್ಮ ಪ್ರೀತಿಗಳು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more