• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಡ ವಿನ್ಸಿ ಕೋಡ್‌’ನಲ್ಲಿ ಕಳಚಿಬಿದ್ದ ನಮ್ಮ ಕೀರ್ತಿ ಕೋಡು!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇಂಥ ವಿಚಿತ್ರಗಳು, ತಿರಸಟ್ಟುಗಳು ನಡೆಯೋದು ನಮ್ಮ ದೇಶದಲ್ಲಿ ಮಾತ್ರ. ಈ ವಿಷಯದಲ್ಲಿ ನಮ್ಮನ್ನು ಮೀರಿಸುವವರು ಸದ್ಯಕ್ಕೆ ಯಾರು ಇಲ್ಲವೆಂಬುದು ನನ್ನ ಭಾವನೆ. ಅದೆಂಥ ದೇಶ ನಮ್ಮದು, ಇಲ್ಲಿ ಯಾವುದೂ ವಿವಾದಗಳಿಲ್ಲದೇ ಮೋಕಳೀಕ್‌ ಆಗುವುದಿಲ್ಲ.

‘ಡ ವಿನ್ಸಿ ಕೋಡ್‌’ ಚಿತ್ರದ ಸುತ್ತ ಕವಿದಿರುವ ವಿವಾದವನ್ನು ನೀವು ಗಮನಿಸುತ್ತಿರಬೇಕು. ಇದು ಚಿತ್ರವಾಗುವುದಕ್ಕಿಂತ ಮೊದಲೇ, ಇದೇ ಹೆಸರಿನಲ್ಲಿ ಕಾದಂಬರಿಯಾಗಿತ್ತು. ಮೂರು ವರ್ಷಗಳ ಹಿಂದೆಯೇ ಬಿಡುಗಡೆಯಾಗಿತ್ತು. ಈ ಕೃತಿ 44 ಭಾಷೆಗಳಿಗೆ ಅನುವಾದಗೊಂಡಿತ್ತು. ಈ ಕಾದಂಬರಿ ಜನಪ್ರಿಯವಾಗಬಹುದೆಂದು ಅದನ್ನು ಬರೆದ 42ವರ್ಷದ ಅಮೆರಿಕದ ಡಾನ್‌ ಬ್ರೌನ್‌ ಕನಸುಮನಸಿನಲ್ಲೂ ಊಹಿಸಿರಲಿಲ್ಲ. ‘ಡಿಜಿಟಲ್‌ ಫೋರ್‌ಟ್ರೆಸ್‌’ ಸೇರಿದಂತೆ ಆತನ ಮೊದಲ ಮೂರು ಕಾದಂಬರಿಗಳ ಹತ್ತು ಸಾವಿರ ಪ್ರತಿಗಳು ಸಹ ಮಾರಾಟವಾಗಿರಲಿಲ್ಲ. ಯಾವಾಗ ‘ದ ವಿನ್ಸಿ ಕೋಡ್‌’ ಪ್ರಕಟವಾಯಿತೋ, ಅದು ಮೊದಲ ವಾರವೇ ‘ನ್ಯೂಯಾರ್ಕ್‌ ಟೈಮ್ಸ್‌’ಪತ್ರಿಕೆಯ ಟಾಪ್‌ ಟೆನ್‌ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯಿತೋ ಡಾನ್‌ ಬ್ರೌನ್‌ನ ದೆಸೆ ತಿರುಗಿ ಹೋಯಿತು. ಟೈಮ್‌ ಮ್ಯಾಗಜಿನ್‌ ಆತನನ್ನು ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲೊಬ್ಬ ಎಂದು ಹೇಳಿದ್ದು ಪುಸ್ತಕ ಮಾರಾಟಕ್ಕೆ ಮತ್ತಷ್ಟು ಇಂಬು ನೀಡಿತು.

The Da Vinci Code, controversy and Indiaಹಾಗೆಂದು ‘ಡ ವಿನ್ಸಿ ಕೋಡ್‌’ ಅಂಥ ಹೋಳಿಕೊಳ್ಳುವಂಥ ಕಾದಂಬರಿಯೇನೂ ಆಗಿರಲಿಲ್ಲ. ಭಾಷೆ, ನಿರೂಪಣೆ, ಶೈಲಿಯ ದೃಷ್ಟಿಯಿಂದಲೂ ಅದ್ಭುತವೆನಿಸುವ ಕೃತಿಯೂ ಆಗಿರಲಿಲ್ಲ. ಪತ್ತೇದಾರಿ-ಥ್ರಿಲ್ಲರ್‌-ಸಂಚು- ಈ ಮೂರರ ಮಿಶ್ರಣವನ್ನು ಹೊಂದಿದ ಈ ಕಾದಂಬರಿ, ಗಟ್ಟಿ ವಿಮರ್ಶಕರಿಂದ ಪ್ರಶಂಸೆಗೆ ಒಳಗಾದ ಕೃತಿಯೂ ಆಗಿರಲಿಲ್ಲ. ಆದರೆ ಇವ್ಯಾವೂ ಮಾರಾಟದ ಮೇಲೆ ಪ್ರಭಾವ ಬೀರಲಿಲ್ಲ. ಬಿಡುಗಡೆಯಾಗಿ ಎರಡು ವರ್ಷಗಳ ನಂತರವೂ ಅದರ ಜನಪ್ರಿಯತೆಗೆ ಧಕ್ಕೆಯಾಗಲಿಲ್ಲ. ಹಾಗೆಂದು ಈ ಕೃತಿ ಎಲ್ಲೂ ಸಣ್ಣ ಪುಟ್ಟ ವಿವಾದವನ್ನು ಹುಟ್ಟು ಹಾಕಲಿಲ್ಲ. ಹಾಗೆ ನೋಡಿದರೆ ‘ಡ ವಿನ್ಸಿ ಕೋಡ್‌’ನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ ಯಾವಾಗ ಈ ಕಾದಂಬರಿಯನ್ನು ಆಧರಿಸಿ ನಿರ್ದೇಶಕ ರಾನ್‌ ಹೋವರ್ಡ್‌ ಅದೇ ಹೆಸರಿನಲ್ಲಿ ಸಿನಿಮಾ ಮಾಡಿದನೋ, ಶುರುವಾಯಿತು ನೋಡಿ ವಿವಾದ. ಈ ಚಿತ್ರವನ್ನು ನಿಷೇಧಿಸಬೇಕು, ಏಸುವಿಗೆ ಅವಮಾನ ಮಾಡಲಾಗಿದೆ, ಕ್ರಿಶ್ಚಿಯನ್‌ ಧರ್ಮದ ಅವಹೇಳನ ಮಾಡಲಾಗಿದೆ, ಡಾನ್‌ ಬ್ರೌನ್‌ನನ್ನು ಮುಗಿಸಿ, ಕಾದಂಬರಿಯನ್ನು ಸುಟ್ಟು ಹಾಕಿ ಎಂಬ ಮಾತುಗಳು ಕೇಳಿಬರಲಾರಂಭಿಸಿದವು. ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಟಾಮ್‌ ಹ್ಯಾಂಕ್ಸ್‌ ಅಭಿನಯದ ಈ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ವಿಶ್ವದೆಲ್ಲೆಡೆ ಪ್ರದರ್ಶನದಿಂದ 224 ದಶಲಕ್ಷ ಡಾಲರ್‌ ದಾಖಲೆಯ ಹಣ ಗಳಿಸಿತು. ಇದು ಈ ಕತೆಯ ಒಂದು ಘಟ್ಟ.

ಈ ಕತೆ ವಿವಾದಕ್ಕೆ ತಿರುಗಲು ಕಾರಣಗಳೇನೆಂಬ ಇನ್ನೊಂದು ಘಟ್ಟವನ್ನು ಗಮನಿಸೋಣ. ಅಷ್ಟಕ್ಕೂ ಈ ಕಾದಂಬರಿ-ಚಿತ್ರದಲ್ಲಿ ಇರುವುದಾದರೂ ಏನು? ಪ್ಯಾರಿಸ್‌ನ ಪ್ರಸಿದ್ಧ ಲಾವ್ರ್‌ ಮ್ಯೂಸಿಯಂನ ಕ್ಯೂರೇಟರ್‌ ಜಾಕ್‌ ಸುನೀರ್‌ ಅನುಮಾನಾಸ್ಪದವಾಗಿ ಹತ್ಯೆಗೀಡಾದಾಗ ಹಾರ್ವರ್ಡ್‌ ವಿಶ್ವವಿದ್ಯಾಲಯದ ಧಾರ್ಮಿಕ ಸಂಕೇತಶಾಸ್ತ್ರದ ಪ್ರಾಧ್ಯಾಪಕ ಪ್ರೊ. ರಾಬರ್ಡ್‌ ಲ್ಯಾಂಗ್‌ಡನ್‌ನನ್ನು ಈ ಕೊಲೆ ರಹಸ್ಯ ಭೇದಿಸುವಂತೆ ಕರೆಸಲಾಗುತ್ತದೆ. ಸುನೀರ್‌ ಮೃತದೇಹ ಮ್ಯೂಸಿಯಂನಲ್ಲಿ ನಗ್ನವಾಗಿ ಬಿದ್ದಿರುತ್ತದೆ. ಅದು ಖ್ಯಾತ ಕಲಾವಿದ ಲಿಯೋನಾರ್ಡೋ ಡಾ ವಿನ್ಸಿಯ ಕಲಾಕೃತಿ ‘ವಿಟ್ರುವಿಯನ್‌ ಮ್ಯಾನ್‌’ರೀತಿಯಂತೆ ಕಾಣುತ್ತದೆ. ಈ ಚಿತ್ರದಲ್ಲಿ ದೇಹದ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಕೆಲವು ಸಂಕೇತಗಳು, ಸಂದೇಶಗಳಿರುತ್ತವೆ. ವಿನ್ಸಿಯ ಪ್ರಸಿದ್ಧ ಕಲಾಕೃತಿಗಳಾದ ‘ಮೊನಾಲಿಸಾ’ಹಾಗೂ ‘ಲಾಸ್ಟ್‌ ಸಪ್ಟರ್‌’ನಲ್ಲಿ ಸಹ ಅಲ್ಲಲ್ಲಿ ಹುದುಗಿದ ಸಂದೇಶಗಳಿರುವಂತೆ ಈ ಕೃತಿಯಲ್ಲೂ ಅದು ಇದ್ದಿರಬಹುದೆಂದು ಭಾವಿಸಲಾಗುತ್ತದೆ. ಅನಂತರ ಇದೇ ರಹಸ್ಯ ಭೇದಿಸಲು ಸಹಾಯಕವಾಗುತ್ತದೆ.

Dan Brown written The Da Vinci Codeಅಲ್ಲದೇ ಈ ಕಾದಂಬರಿಯಲ್ಲಿ ಏಸುಗೆ ಸಂಬಂಧಿಸಿದ ಕೆಲವು ಉಲ್ಲೇಖಗಳು ವಿವಾದಕ್ಕೆ ಮತ್ತಷ್ಟು ಕಾವನ್ನು ಕೊಡುತ್ತವೆ. ಮೇರಿ ಮ್ಯಾಗ್ಡಲಿನ್‌ ಎಂಬ ವೇಶ್ಯೆಯಾಂದಿಗೆ ಏಸುವಿಗೆ ದೈಹಿಕ ಸಂಬಂಧ ಇತ್ತು ಹಾಗೂ ಇವರಿಬ್ಬರಿಗೂ ಒಬ್ಬ ಹೆಣ್ಣು ಮಗಳು ಹುಟ್ಟಿದಳು. ಈಕೆಗೆ ಹುಟ್ಟಿದ ಸಂತತಿ ಇಂದಿಗೂ ಮುಂದುವರಿದುಕೊಂಡು ಬಂದಿದೆಯೆಂದು ಡಾನ್‌ ಬ್ರೌನ್‌ ಬರೆದಿದ್ದು, ಎಲ್ಲರ ಹುಬ್ಬುಗಳೇರಲು ಮುಖ್ಯ ಕಾರಣ. ಕ್ರೆೃಸ್ತರ ಒಂದು ಗುಂಪು ಇಂದಿಗೂ ಮ್ಯಾಗ್ಡಲಿನ್‌ಳನ್ನು ಗೌರವದಿಂದ ಪೂಜಿಸುತ್ತದೆಂದೂ, ಚರ್ಚ್‌ ಈ ರಹಸ್ಯವನ್ನು ಗೌಪ್ಯವಾಗಿ ಕಾದಿಟ್ಟಿಯೆಂದೂ, ಯಾರಾದರೂ ಬಹಿರಂಗಪಡಿಸಿದರೆ ಅಂಥವರನ್ನು ಮುಗಿಸಿ ಬಿಡುವ ಬೆದರಿಕೆಯನ್ನು ಹಾಕುತ್ತಿದೆಯೆಂದು ಡಾನ್‌ ಬ್ರೌನ್‌ ತಮ್ಮ ಕಾದಂಬರಿಯಲ್ಲಿ ಬರೆಯುತ್ತಾರೆ.

ಸರಿ, ಈ ವಿವಾದಕ್ಕೆ ಬ್ರೌನ್‌ ಏನಂತಾನೆ?

ಇದು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ ಶುದ್ಧ ಕಾಲ್ಪನಿಕ ಕತೆ ಅಂತಾನೆ. ಮೊದಲೇ ಹೇಳಿದ್ದೇನೆ ಇದು ಕಾದಂಬರಿ ಅಂತ. ಯಾಕೆ ಅನಗತ್ಯ ವಿವಾದ? -ಇದು ಬ್ರೌನ್‌ನ ವಾದ.

ಹಾಗೆ ನೋಡಿದರೆ ಈ ವಿವಾದ ಇಲ್ಲಿಗೆ ಅಂತ್ಯವಾಗಬೇಕಿತ್ತು. ವಿಚಿತ್ರವೆಂದರೆ ವಿವಾದ ಆರಂಭವಾಗುವುದೇ ಇಲ್ಲಿ. ಕೋಟಿಗಟ್ಟಲೆ ಪ್ರತಿಗಳು ಮಾರಾಟವಾದ ಬಳಿಕ ಸ್ವಲ್ಪವೂ ವಿವಾದವಾಗದ ಪುಸ್ತಕ, ಏಕಾಏಕಿ ಸುದ್ದಿಯಾಗುವುದೆಂದರೆ ಅದರಲ್ಲಿ ಏನೋ ಇರಲೇಬೇಕು. ಆಷ್ಟಕ್ಕೂ ಈ ಚಿತ್ರ ಭಾರತದಲ್ಲಿ ಹುಟ್ಟಿಸಿದ ವಿವಾದ ಮಾತ್ರ ಅನೇಕ ಗುಮಾನಿಗಳಿಗೆ ಈಡು ಮಾಡಿದ್ದು ಸತ್ಯ.

ಈ ಚಿತ್ರಕ್ಕೆ ಕ್ಯಾಥೋಲಿಕ್‌ ರಾಷ್ಟ್ರವಾದ ಫಿಲಿಪ್ಪೀನ್ಸ್‌ ‘ಎ’ಸರ್ಟಿಫಿಕೇಟ್‌ ನೀಡಿ ಸುಮ್ಮನಾಯಿತು. ಇದನ್ನು ನಿಷೇಧಿಸಬೇಕೆಂದು ಕ್ರೆೃಸ್ತರ ಧರ್ಮಗುರು ಪೋಪ್‌ ಸಹ ಒತ್ತಾಯಿಸಲಿಲ್ಲ. ಅದೆಷ್ಟೇ ಪ್ರತಿಭಟನೆ, ಕೋಲಾಹಲಗಳಾದರೂ ಕ್ರೆೃಸ್ತರೇ ಬಹುಸಂಖ್ಯಾತರಾಗಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಯಾವ ಸರಕಾರವೂ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಲಿಲ್ಲ. ಚಿತ್ರವನ್ನು ನಿಷೇಧಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದವು.

ಆದರೆ ಭಾರತ ಸರಕಾರ ಮಾತ್ರ ನಿದ್ದೆ ಮಾಡಲಿಲ್ಲ.

ಈ ಚಿತ್ರವನ್ನು ನಿಷೇಧಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವ ನ್ಯಾಯಪೀಠದಲ್ಲಿ ತಾವೇ ಸ್ವತಃ ಹೋಗಿ ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆ ಮಂತ್ರಿ ಪ್ರಿಯರಂಜನ್‌ ದಾಸ್‌ ಮುನ್ಯಿ ಕುಳಿತುಬಿಟ್ಟರು! ಸಿನಿಮಾವನ್ನು ನಿಷೇಧಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲು ಈ ದಾಸ್‌ಮುನ್ಯಿ ಯಾರು? ಅವರಿಗೆ ಚಿತ್ರದ ಬಗ್ಗೆ ಏನು ಗೊತ್ತು? ಅವರೇಕೆ ಏಕಾಏಕಿ ಕಾರ್ಯಪ್ರವೃತ್ತರಾದರು? ಅವರ ಅರ್ಹತೆಗಳೇನು? ಈ ಚಿತ್ರ ಯಾವುದೇ ಅಡೆತಡೆಗಳಿಲ್ಲದೇ ಕ್ಯಾಥೋಲಿಕ್‌ ಚರ್ಚ್‌ನ ಕೇಂದ್ರವಾದ ರೋಮ್‌ನಲ್ಲಿ ಬಿಡುಗಡೆಯಾಯಿತು. ಆದರೆ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

ಕೇಂದ್ರ ಸರಕಾರ ಆದೇಶಿಸಿತ್ತು -ತನ್ನ ಅನುಮತಿಯಿಲ್ಲದೇ ಬಿಡುಗಡೆ ಮಾಡುವಂತಿಲ್ಲ. ದಾಸ್‌ಮುನ್ಯಿ ಮತ್ತು ಕ್ರಿಶ್ಚಿಯನ್‌ ಚರ್ಚ್‌ ಸಂಘಟನೆಯ ಪ್ರತಿನಿಧಿಗಳು ಹಾಗೂ ತಮ್ಮ ಸಚಿವಾಲಯದ ಮೂವರು ಅಧಿಕಾರಿಗಳನ್ನು ಇಟ್ಟುಕೊಂಡು ಒಂದು ಸಮಿತಿ ರಚಿಸಿಕೊಂಡರು. ಈ ಚಿತ್ರದ ವಿತರಕರಾದ ಸೋನಿ ಪಿಕ್ಚರ್ಸ್‌ಗೆ ತನ್ನ ಗ್ರೀನ್‌ ಸಿಗ್ನಲ್‌ ಇಲ್ಲದೇ ಚಿತ್ರ ಬಿಡುಗಡೆ ಮಾಡದಂತೆ ತಾಕೀತು ಮಾಡಿತು. ಅನಂತರ ಸೆನ್ಸಾರ್‌ ಮಂಡಳಿ ಸಚಿವರ ಆದೇಶದ ಮೇರೆಗೆ ಜಾಗೃತವಾಯಿತು. ಈ ಸಮಿತಿ ಚಿತ್ರ ನೋಡಿದ ಬಳಿಕ, ಸಿನಿಮಾದ ಆರಂಭ ಹಾಗೂ ಅಂತ್ಯದಲ್ಲಿ ‘ಇದೊಂದು ಕಾಲ್ಪನಿಕ ಕತೆ’ಎಂದು ದೊಡ್ಡದಾಗಿ ಬರೆಯುವಂತೆ ಸೂಚಿಸಿತು. ಅದನ್ನು ಬಿಟ್ಟರೆ, ಮತ್ತ್ಯಾವ ಬದಲಾವಣೆಯನ್ನೂ ಸೂಚಿಸಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೇರಾವ ಬದಲಾವಣೆ ಮಾಡಲು ಸಾಧ್ಯವೂ ಇರಲಿಲ್ಲ.

ಕೇಂದ್ರದ ಯುಪಿಎ ಸರಕಾರ ನಿದ್ದೆಯಲ್ಲಿ ದಿಡಗ್ಗನೆ ಎದ್ದು ಕುಳಿತವರಂತೆ ಹಠಾತ್ತನೆ ಮೈ ಕೊಡವಿಕೊಂಡು ಉತ್ತಿಷ್ಠವಾಗಿದ್ದಕ್ಕೆ ಯಾರಾದರೂ ಕಾರಣ ಹೇಳಿಯಾರು. ವ್ಯಾಟಿಕನ್‌ ಹೇಳುವ ಮೊದಲೇ ನಮ್ಮ ಮಂತ್ರಿಗಳು ಆದೇಶಕ್ಕೆ ಎದುರು ನೋಡುತ್ತಿರುತ್ತಾರೆ. ಈ ಆದೇಶ ಹತ್ತನೇ ಜನಪಥದಿಂದ ಬರುವ ಮುನ್ನವೇ, ತಾವೇ ಕಾರ್ಯಪ್ರವೃತ್ತರಾಗಿರುತ್ತಾರೆ. ಈ ಎರಡು ಕಾರಣಗಳನ್ನು ಬಿಟ್ಟರೇ, ದಾಸ್‌ಮುನ್ಯಿ ಸಿನಿಮಾ ನೋಡಲು ಮುನ್ನುಗ್ಗಿ ಕುಳಿತುಕೊಳ್ಳುವ ಅಗತ್ಯವೇ ಇರಲಿಲ್ಲ.

‘ಡ ವಿನ್ಸಿ ಕೋಡ್‌’ಪುಸ್ತಕವನ್ನು ಲೆಬನಾನ್‌ ಹಾಗೂ ಜೋರ್ಡಾನ್‌ ನಿಷೇಧಿಸಿದವು. ಬಿಟ್ಟರೆ ಮತ್ಯಾವ ದೇಶವೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಈ ವಿಷಯದಲ್ಲಿ ಅತೀವ ಆಸಕ್ತಿ ತೋರಿದ್ದು ಭಾರತ ಮಾತ್ರ. ಕೇವಲ ಶೇ.2.37ರಷ್ಟು ಕ್ರಿಶ್ಚಿಯನ್‌ರನ್ನು ಹೊಂದಿರುವ ಭಾರತದ ಈ ಉತ್ಸಾಹ ಅನೇಕ ಪಾಶ್ಚಿಮಾತ್ಯ ದೇಶಗಳ ನಗೆಪಾಟಲಿಗೆ ಗುರಿಯಾಗಿದ್ದು ದುರ್ದೈವ. ಅವರಿಗಾಗದ ಗಾಯಕ್ಕಿಂತ ನಮಗಾದ ನೋವು ಅವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ಇಷ್ಟೂ ಸಾಲದೆಂಬಂತೆ ಕೆಲ ಮುಸ್ಲಿಂ ಸಂಘಟನೆಗಳು ಈ ಚಿತ್ರ ನಿಷೇಧಕ್ಕೆ ಒತ್ತಾಯಿಸಿದ್ದು ಭಲೇ ತಮಾಷೆಯಾಗಿತ್ತು.

ಯಾರಿಗೋ ‘ಪ್ರಿಯ’ರಾಗಲು, ಯಾರನ್ನೋ ‘ರಂಜಿಸಲು’ ತನ್ನನ್ನು ಹಾಗೂ ಸರಕಾರವನ್ನು ಯಾರದ್ದೋ ‘ದಾಸ’ರನ್ನಾಗಿ ಮಾಡುವುದಿದೆಯಲ್ಲ ಅದು ನಾಚಿಕೆಗೇಡು. ಶುದ್ಧ ಬೌದ್ಧಿಕ ದಿವಾಳಿತನ.

ಖ್ಯಾತ ಕಲಾವಿದ ಎಂ.ಎಫ್‌.ಹುಸೇನ್‌ ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಅವಹೇಳನ ಮಾಡಿದರೆ, ‘ಅದರಲ್ಲಿ ತಪ್ಪೇನೂ ಇಲ್ಲ. ಅದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರ. ಅದನ್ನು ವಿರೋಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಚಾರ ಮಾಡಿದಂತೆ’ಎಂದು ನಮ್ಮ ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಾರೆ. ಈ ವಿವಾದವನ್ನು ನೋಡುತ್ತಾ, ತಾನಿದ್ದೇನೆ, ತನಗೆ ಕಣ್ಣು-ಕಿವಿಗಳಿವೆ ಎಂಬುದನ್ನು ಸಹ ಮರೆತು ಸರಕಾರ ಕುಳಿತುಬಿಡುತ್ತದೆ. ಯಾವ ಮಂತ್ರಿಯೂ ತುಟಿಪಿಟಿಕ್ಕೆನ್ನುವುದಿಲ್ಲ. ಆದರೆ ಜಗತ್ತಿನೆಲ್ಲೆಡೆ ಪ್ರದರ್ಶನವಾದರೂ, ಯಾವ ಅಹಿತಕರ ಘಟನೆಗಳಾಗದಿದ್ದರೂ ‘ಡ ವಿನ್ಸಿ ಕೋಡ್‌’ನ್ನು ನಿಷೇಧಿಸಿದರೆ ಹೇಗೆ, ನಿಷೇಧಿಸಲಾಗದಿದ್ದರೆ ಏನು ಮಾಡಬೇಕೆಂದು ಸರಕಾರ ಯೋಚಿಸುವುದಿದೆಯಲ್ಲ, ಇದು ಗಾಬರಿ ಹುಟ್ಟಿಸುವ ವಿಚಾರ.

ಪುಸ್ತಕವಿರಬಹುದು, ಸಿನಿಮಾವಿರಬಹುದು ಅದನ್ನು ನಿಷೇಧಿಸುವ ಕಲ್ಪನೆಯೇ ಆಘಾತಕಾರಿಯಾದದ್ದು. ‘ರಂಗ್‌ ದೇ ಬಸಂತಿ’ಚಿತ್ರ ಬಿಡುಗಡೆಗೆ ಮುನ್ನ ವಿವಾದಕ್ಕೊಳಗಾದಾಗ ಈ ಚಿತ್ರವನ್ನು ಸೈನಿಕ ಅಧಿಕಾರಿಗಳು ವೀಕ್ಷಿಸಿ, ಪ್ರದರ್ಶನಕ್ಕೆ ಅನುಮತಿ ನೀಡಿದರು. ‘ಬಾಂಬೆ’ಚಿತ್ರ ಶಿವಸೇನೆ ನಾಯಕ ಬಾಳಠಾಕ್ರೆ ನೋಡಿ ಅನುಮತಿ ನೀಡಿದ ನಂತರವೇ ತೆರೆಕಂಡಿದ್ದು. ಅಲ್ಪಸಂಖ್ಯಾತರಿಗೆ ನೋವಾಗುವುದೆಂದು ಭಾವಿಸಿ ಸಲ್ಮಾನ್‌ ರಶ್ದಿಯ ‘ಸೆಟಾನಿಕ್‌ ವರ್ಸಸ್‌’ಪುಸ್ತಕವನ್ನು ನಿಷೇಧಿಸಲಾಯಿತು. ಗೊತ್ತಿರಲಿ, ‘ಜೀಸಸ್‌ ಕ್ರೆೃಸ್ಟ್‌ ಸೂಪರ್‌ಸ್ಟಾರ್‌’ಎಂಬ ಚಿತ್ರದ ಮೇಲೆ ನಿಷೇಧ ಹೇರಿದ ವಿಶ್ವದ ಏಕೈಕ ಪ್ರಜಾಪ್ರಭುತ್ವ ದೇಶವೆಂದರೆ ಭಾರತ! ಬೇರೆ ಯಾವ ದೇಶವೂ ಈ ಚಿತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.

ಬೇರೆಯವರಿಗಿಲ್ಲದ ಕಾಳಜಿ ನಮಗೇಕೆ? ಅವರ ಕಾಳಜಿಯೆಲ್ಲವನ್ನೂ ನಾವೇ ಗುತ್ತಿಗೆ ಪಡೆದಿದ್ದೇವಾ? ಬಗ್ಗಿ ಎನ್ನದಿದ್ದರೂ ಮೊದಲೇ ಬಾಗಿ, ಬೆಂಡಾಗಿ ಬೋರಲಾಗುವ ನಮ್ಮ ದಾಸ್ಯತ್ವಕ್ಕೆ ಏನನ್ನೋಣ? ‘ಡ ವಿನ್ಸಿ ಕೋಡ್‌’ ಚಿತ್ರ ಜಗತ್ತಿನಾದ್ಯಂತ ಪ್ರದರ್ಶಿತವಾಗುತ್ತಿದೆ. ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಅದು ಯಾವ ಹಿಂಸೆಗೂ ಪ್ರಚೋದನೆಯಾಗಿಲ್ಲ. ಜಗತ್ತಿನ ಎಲ್ಲ ಕ್ರೆೃಸ್ತರು ಈ ಚಿತ್ರವನ್ನು ಸಹಜವಾಗಿ, ಮುಕ್ತವಾಗಿ ಸ್ವೀಕರಿಸುತ್ತಿರುವಾಗ ಭಾರತೀಯ ಕ್ರೆೃಸ್ತರು ನಿಷೇಧದ ಮಾತನಾಡುತ್ತಿರುವುದೇಕೆ? ಪುಸ್ತಕ ಬಂದಾಗ ನಿಷೇಧಿಸಬೇಕೆಂದು ಅನಿಸದಿದ್ದುದು ಈಗೇಕೆ ಅನಿಸುತ್ತಿದೆ? ಇದೊಂದು ಕಾಲ್ಪನಿಕ, ಕಟ್ಟುಕತೆಯೆಂದು ಸ್ವತಃ ಲೇಖಕನೇ ಹೇಳಿದ್ದಾನೆ. ಹೀಗಿರುವಾಗ ನಮಗೇಕೆ ತುರಿಕೆಯಾಗ ಬೇಕು?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more