ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಒಬ್ಬ ವ್ಯಕ್ತಿ ಎರಡು ದೇಶಗಳನ್ನು ಬೆಸೆದ ಕತೆ!

By Staff
|
Google Oneindia Kannada News


ಸಾವು-ಬದುಕಿನ ಜನ ಆಟವಾಡುವ ಸೈನಿಕರನ್ನು ಬಿಟ್ಟು ಬರಲು ಅವರಿಗೆ ಸಾಧ್ಯವಾಗಲಿಲ್ಲ. ಡಾ.ಕೊಟ್ನಿಸ್‌ ಆರಂಭಿಸಿದ ಮೊಬೈಲ್‌ ಕ್ಲಿನಿಕ್‌ ಸೇವೆ ಬಹಳ ಯಶಸ್ವಿಯಾಯಿತು. ಗಾಯಗೊಂಡ ಸೈನಿಕರನ್ನು ಅವರವರು ಇದ್ದ ಶಿಬಿರಗಳಲ್ಲೇ ನೋಡಲು ಡಾ.ಕೊಟ್ನಿಸ್‌ ವ್ಯಾನಿನಯಲ್ಲಿಯೇ ಆಸ್ಪತ್ರೆ ಸಿದ್ಧಪಡಿಸಿದರು. ಇದು ನೂರಾರು ಸೈನಿಕರ ಪ್ರಾಣಗಳನ್ನು ಉಳಿಸಿತು. ಸ್ವತಃ ಕೊಟ್ನಿಸ್‌ ಗಾಯಗೊಂಡ ಸೈನಿಕರನ್ನು ಅನಾಮತ್ತಾಗಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿ ಅಲ್ಲಿ ಅವರ ಆರೈಕೆ ಮಾಡಿದರು. ಕೊಳೆತ ಶವಗಳನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದರು. ಕ್ರಮೇಣ ಅವರ ಬಗ್ಗೆ ಸೇನಾಡೇರೆಗಳಲಿ ಅದೆಂಥ ಪ್ರೀತಿ, ಅಭಿಮಾಮ ಮೂಡಿತೆಂದರೆ, ಕೊಟ್ನಿಸ್‌ ತಮ್ಮೊಂದಿಗಿದ್ದರೆ ಪ್ರಾಣಕ್ಕೇನೂ ತೊಂದರೆಯಿಲ್ಲ ಎಂದು ಸೈನಿಕರು ಹೇಳುತ್ತಿದ್ದರು. ಡಾ.ಕೊಟ್ನಿಸ್‌ ತಮ್ಮ ಸರ್ವಸ್ವವನ್ನು ಸೈನಿಕರಿಗಾಗಿಯೇ ಅರ್ಪಿಸಿದರು. ಅವರಿಗಾಗಿ ಪ್ರತ್ಯೇಕ ಮನೆಯನ್ನು ನೀಡಲಾಗಿತ್ತು. ಆದರೆ ಅವರು ಸೇನಾಡೇರೆಗಳಲ್ಲೇ ಮಲಗುತ್ತಿದ್ದರು. ಕೊನೆಕೊನೆಗೆ ಡಾ.ಕೊಟ್ನಿಸ್‌ ಸೈನಿಕರೊಂದಿಗೆ ಅದೆಂಥ ಗಾಢ ಸಂಬಂಧ ಹೊಂದಿದರೆಂದರೆ ತಾವು ಬಂದ ಕೆಲಸ ಮುಗಿದ ನಂತರ ಅವರಿಗೆ ವಾಪಸು ಹೋಗಲು ಮನಸ್ಸಾಗಲಿಲ್ಲ. ಸೈನಿಕರಿಗೂ ಅವರನ್ನು ಕಳಿಸಲು ಇಷ್ಟವಿರಲಿಲ್ಲ.

ಚೀನಾದಲ್ಲಿಯೇ ಶಾಶ್ವತವಾಗಿ ನೆಲೆಸಲು ತೀರ್ಮಾನಿಸಿದರು.

ಈ ಮಧ್ಯೆ ತಮ್ಮೊಂದಿಗಿದ್ದ ನರ್ಸ್‌ ಗೋ ಕ್ವಿಂಗ್ಲಾನ್‌ ಜತೆ ಪ್ರೇಮಾಂಕುರವಾಯಿತು. ಆಕೆಯನ್ನು ಸೊಲ್ಲಾಪುರಕ್ಕೆ ಕರೆತಂದು ತಂದೆ-ತಾಯಿ ಸಮ್ಮುಖದಲ್ಲಿ ಮದುವೆಯಾಗಬೇಕೆಂದು ಯೋಚಿಸಿದ್ದರು. ಆದರೆ ಮನೆಯವರು ಒಪ್ಪಲಿಕ್ಕಿಲ್ಲವೆಂದು ಅನಿಸಿರಬೇಕು. ಅಲ್ಲಿಯೇ ಮದುವೆಯಾದರು. ಡಾ.ಕೊಟ್ನಿಸ್‌ ಸೇವೆಯನ್ನು ಪರಿಗಣಿಸಿ ಚೀನಾ ಸರಕಾರ ಡಾ.ಬೆಥುಗೆ ಇಂಟರ್‌ ನ್ಯಾಷನಲ್‌ ಶಾಂತಿ ಆಸ್ಪತ್ರೆಯ ನಿರ್ದೇಶಕರನ್ನಾಗಿ ನೇಮಿಸಿತು. ಅನಂತರ ಅವರು ಮಾವೋ ಜೆಡಾಂಗ್‌ ನೇತೃತ್ವದ ಸೇನೆಯನ್ನು ಸೇರಿದರು. ವುಟೈ ಪರ್ವತಶ್ರೇಣಿ ಪ್ರದೇಶದಲ್ಲಿನ ಸೇನಾ ನೆಲೆಯಲ್ಲಿ ವೈದ್ಯರನ್ನಾಗಿ ಅವರನ್ನು ಕಳಿಸಲಾಯಿತು. ಅಲ್ಲಿ ಅವರಿಗೆ ವಿಪರೀತ ಕೆಲಸ. ಕೆಲ ಸಂದರ್ಭಗಳಲ್ಲಿ 72ಗಂಟೆ ನಿರಂತರ ಕೆಲಸ ಮಾಡಬೇಕಾದ ಪರಿಸ್ಥಿತಿ. ಇದು ಒಂದೆರಡು ಸಲವಾದರೆ ಪರವಾಗಿಲ್ಲ. ಆರೇಳು ತಿಂಗಳು ಊಟ, ನಿದ್ದೆಗೆಟ್ಟು ಮೂರ್ನಾಲ್ಕು ದಿನ ಕೆಲಸ ಮಾಡುತ್ತಿದ್ದರು. ಪರಿಣಾಮ, ಡಾ.ಕೊಟ್ನಿಸ್‌ ಕಾಯಿಲೆ ಬಿದ್ದರು. ಪದೇ ಪದೆ ಮೂರ್ಛೆ ಬೀಳತೊಡಗಿದರು. ಇದೇ ಕಾಯಿಲೆಯಾಗಿ ಕಾಡತೊಡಗಿತು. ಅದು ಹಠಾತ್ತನೆ ಅವರ ಜೀವಕ್ಕೆ ಎರಡವಾಗಬಹುದೆಂದು ನಿರೀಕ್ಷಿಸಿರಲಿಲ್ಲ. 1942ರ ಡಿಸೆಂಬರ್‌ 9ರಂದು ಕೊಟ್ನಿಸ್‌ ನಿಧನರಾದರು.

ಆಗ ಅವರಿಗೆ ಬರೀ ಮೂವತ್ತೇರಡು ವರ್ಷ! ಚೀನಾದಲ್ಲಿ ಇದ್ದದ್ದು ಕೇವಲ ಐದು ವರ್ಷ! ಆದರೆ ಮಾಡಿದ್ದು ಜೀವಮಾನದ ಸಾಧನೆ. ಡಾ.ಕೊಟ್ನಿಸ್‌ ನಿಧನರಾದಾಗ ಚೀನಾದ ನಾಯಕ ಮಾವೊ ಜೆಡಾಂಗ್‌ ‘ಚೀನಾದ ಸೇನೆ ಒಬ್ಬ ಅದ್ಭುತ ವ್ಯಕ್ತಿಯನ್ನು ಹಾಗೂ ನಮ್ಮ ದೇಶ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದೆ. ಡಾ.ಕೊಟ್ನಿಸ್‌ ಅವರ ಅಂತಾರಾಷ್ಟ್ರೀಯ ಕಾಳಜಿ, ಸ್ಫೂರ್ತಿ ನಮಗೆ ಸದಾ ಪ್ರೇರಣೆಯಾಗಬೇಕು’ ಎಂದು ಹೇಳಿದ್ದರು. ಡಾ.ಕೊಟ್ನಿಸ್‌ ಅವರಿಗೆ ಸಕಲ ಸರಕಾರಿ ಗೌರವ, ಮರ್ಯಾದೆಗಳೊಂದಿಗೆ ಧೀಮಂತ ನಾಯಕರಿಗೆ ಕಲ್ಪಿಸಲಾಗುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಕೊಟ್ನಿಸ್‌ ನಿಧನರಾದಾಗ ಅವರ ಪತ್ನಿಯ ಮಡಿಲಲ್ಲಿ ಒಂಬತ್ತು ತಿಂಗಳ ಗಂಡು ಮಗು ಮಲಗಿತ್ತು. ದಂಪತಿಗಳಿಬ್ಬರೂ ಮಗುವಿಗೆ ಯಿನ್‌ಹುವಾ(ಯಿನ್‌-ಭಾರತ, ಹುವಾ-ಚೀನಾ) ಎಂದು ಪ್ರೀತಿಯಿಂದ ಹೆಸರಿಟ್ಟಿದ್ದರು. ಪತಿಯ ಅಕಾಲಿಕ ನಿಧನದ ಬಳಿಕ ಗೋ ಕ್ವಿಂಗ್ಲಾನ್‌ ದಿಕ್ಕೆಟ್ಟಳು. ಮುಂದೇನೆಂಬುದು ಆಕೆಗೆ ತೋಚದಾಯಿತು. ಚೀನಾ ಗಡಿಭಾಗದಲ್ಲಿ ಅವರ ಮನೆಯಲ್ಲಿ ಜೀವಿಸುವುದು ಸಾಧ್ಯವೇ ಇರಲಿಲ್ಲ. ಮಗುವಾದ ನಂತರ ಉದ್ಯೋಗ ಬಿಟ್ಟಿದ್ದರಿಂದ ಕೆಲಸವಿಲ್ಲದ ಬದುಕು ದುರ್ಭರವಾಯಿತು. ಕೊಟ್ನಿಸ್‌ ಅನುಕಂಪದಿಂದಾಗಿ ಯೆನನ್‌ನಲ್ಲಿರುವ ಕಮ್ಯುನಿಸ್ಟ್‌ ಪಾರ್ಟಿ ಕೇಂದ್ರ ಕಚೇರಿಯಲ್ಲಿ ಕೆಲಸ ಸಿಕ್ಕಿತು. ಪತಿಯ ನೆನಪು ಆಕೆಯನ್ನು ಕಿತ್ತು ತಿನ್ನುತ್ತಿತ್ತು. ಮತ್ತೊಂದು ಮದುವೆಯಾಗಲು ಇಷ್ಟವಿರಲಿಲ್ಲ. ಹಾಗೆಂದು ಏಕಾಂಗಿ ಜೀವನ ಸಾಗಿಸುವುದು ಸುಲಭವೂ ಆಗಿರಲಿಲ್ಲ.

ಕೊನೆಗೆ ಕಮ್ಯುನಿಸ್ಟ್‌ ನಾಯಕರ ಒತ್ತಾಯದಿಂದ ಪತಿ ನಿಧನದ ಎರಡು ವರ್ಷಗಳ ನಂತರ ಮರು ಮದುವೆಯಾದಳು. ಈ ದಾಂಪತ್ಯದಿಂದ ಒಂದು ಗಂಡು ಹಾಗೂ ಹೆಣ್ಣು ಮಕ್ಕಳಾದರೂ, ಈ ಮಗುವನ್ನು ಚೆನ್ನಾಗಿಯೇ ಬೆಳೆಸಿದರು. ಆತನನ್ನು ತಂದೆಯಂತೆ ಡಾಕ್ಟರನನ್ನಾಗಿ ಮಾಡಬೇಕೆಂದು ಆಸೆಪಟ್ಟಳು. ಆತನ ತಲೆಯಾಳಗೆ ಅದೇ ವಿಚಾರ ತುಂಬಿದಳು. ವೈದ್ಯನಾಗಿ ತಂದೆ ಕೆಲಸ ಮುಂದುವರಿಸುವಂತೆ ಪ್ರೇರೇಪಿಸಿದಳು. ಪುಣ್ಯವಶಾತ್‌ ಚೀನಾದ ಪ್ರತಿಷ್ಠಿತ ಕ್ಸಿಯಾನ್‌ ವಿಶ್ವವಿದ್ಯಾಲಯದಲ್ಲಿ ಸೀಟು ಸಿಕ್ಕಿತು. ಆತ ಮೆಡಿಕಲ್‌ ಮುಗಿಸಿದ. ಆದರೆ ವಿಧಿ ಆಟವೇ ಬೇರೆಯದಿತ್ತು. ತನ್ನ ಇಪ್ಪತ್ತಾರನೇ ವಯಸ್ಸಿಗೆ ಯಿನ್‌ಹುವಾ ತೀರಿಕೊಂಡ.

ಕೊಟ್ನಿಸ್‌ ನಿಧನರಾಗಿ ಹದಿನಾರು ವರ್ಷಗಳ ನಂತರ ಗೊ ಕ್ವಿಂಗ್ಲಾನ್‌ ಮಗನನ್ನು ಕರೆದುಕೊಂಡು ಸೊಲ್ಲಾಪುರಕ್ಕೆ ಬಂದಿದ್ದಳು. ಅತ್ತೆ-ಸೊಸೆ ಆಲಿಂಗಿಸಿಕೊಂಡು ಕೊಟ್ನಿಸ್‌ರನ್ನು ನೆನಪಿಸಿಕೊಂಡು ಅಳುತ್ತಿದ್ದರೆ, ಸುತ್ತಿಲಿದ್ದವರು ಮುಖ ಕೆಳಹಾಕಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಅತ್ತೆ-ಸೊಸೆಗೆ ಪರಸ್ಪರರ ಭಾಷೆ ಗೊತ್ತಿಲ್ಲದಿದ್ದರೂ, ಕೊಟ್ನಿಸ್‌ ಎಂಬ ಬಂಧ ಅವರಿಬ್ಬರನ್ನೂ ಬೆಸೆದಿತ್ತು. ಗಂಡನ ನೆನಪಿನಲ್ಲಿ ಸೊಲ್ಲಾಪುರದ ಕೊಟ್ನಿಸ್‌ ಮನೆಯ ಎದುರು ಗೋ ಕ್ವಿಂಗ್ಲಾನ್‌ ಒಂದು ಗಿಡನೆಟ್ಟಳು. ಮಗ ಯಿನ್‌ಹುವಾ ನೀರೆರೆದ. ಸೊಸೆ, ಮೊಮ್ಮಗ ಚೀನಾಕ್ಕೆ ಹೊರಟು ನಿಂತಾಗ ಆ ವೃದ್ಧ ಮಾತೆ ಗೋಳೋ ಅಂತ ಅತ್ತು ಬೀಳ್ಕೊಟ್ಟಿದ್ದಳು.

ಈ ಎಲ್ಲ ಪ್ರಸಂಗಗಳನ್ನು ಹೆಕ್ಕಿ ಹೆಕ್ಕಿ ವಿ.ಶಾಂತರಾಮ ‘ಡಾ.ಕೊಟ್ನಿಸ್‌ ಕಿ ಅಮರ್‌ ಕಹಾನಿ’ ಎಂಬ ಸಿನಿಮಾ ಮಾಡಿದ್ದರು. ಆ ದಿನಗಳಲ್ಲಿ ತುಂಬ ದಿನ ಓಡಿದ ಸಿನಿಮಾ. ಚೀನಿ ಭಾಷೆಯಲ್ಲೂ ‘ಡಾ.ಡಿ.ಎಸ್‌.ಕೊಟ್ನಿಸ್‌’ ಎಂಬ ಸಿನಿಮಾ ಸಹ ಬಂದಿದೆ. ಎರಡೂ ದೇಶಗಳು ಅಂಚೆ ಚೀಟಿ ಹೊರಡಿಸಿ ಗೌರವಿಸಿವೆ. ಚೀನಿ ಭಾಷೆಯಲ್ಲಿ ಡಾ.ಕೊಟ್ನಿಸ್‌ ಕುರಿತು ಏನಿಲ್ಲವೆಂದರೂ 20ಪುಸ್ತಕಗಳು ಪ್ರಕಟವಾಗಿವೆ. ಚೀನಾದ ಪಠ್ಯ-ಪುಸ್ತಕದಲ್ಲಿ ದೇಶಕ್ಕಾಗಿ ದುಡಿದವರ ಪಟ್ಟಿಯಲ್ಲಿ ಡಾ.ಕೊಟ್ನಿಸ್‌ ಹೆಸರೂ ಇದೆ. ಅಲ್ಲಿನ ಮಕ್ಕಳಿಗೆ ಅವರ ತ್ಯಾಗದ ಕತೆಯನ್ನು ಇಂದಿಗೂ ಹೇಳುತ್ತಾರೆ. ಪ್ರತಿ ವರ್ಷ ಡಿಸೆಂಬರ್‌ 9 ಬಂದರೆ, ಚೀನಾ ಸರಕಾರ ಡಾ.ಕೊಟ್ನಿಸ್‌ ಪುಣ್ಯತಿಥಿಯನ್ನು ಆಚರಿಸುತ್ತದೆ.

1996ರಲ್ಲಿ ಚೀನಾ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ಭಾರತಕ್ಕೆ ಬಂದಾಗ ಕೊಟ್ನಿಸ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ವಿಶೇಷ ಪ್ರತಿನಿಧಿಗಳ ಮೂಲಕ ಹೂಗುಚ್ಛ ಕಳಿಸಲು ಮರೆಯಲಿಲ್ಲ. ಅನಂತರ ಯಾರೇ ಬರಲಿ, ಅವರೆಲ್ಲ ಕೊಟ್ನಿಸ್‌ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಹುತಾತ್ಮರ ಸಂಸ್ಮರಣಾ ಪಾರ್ಕ್‌ನಲ್ಲಿ ಚೀನಾ ಸರಕಾರ ಡಾ.ಕೊಟ್ನಿಸ್‌ ನೆನಪಿನಲ್ಲಿ ಸುಂದರ ಸ್ಮಾರಕ ನಿರ್ಮಿಸಿದೆ. ಅಷ್ಟೇ ಅಲ್ಲ. ಅವರ ಹೆಸರಿನಲ್ಲಿ ಒಂದು ಮ್ಯೂಜಿಯಂ ಸಹಾ ಚೀನಾದಲ್ಲಿ ಇದೆ. ಡಾ.ಕೊಟ್ನಿಸ್‌ ಸಹೋದರಿಯರು ಐದಾರು ಸಲ ಚೀನಾಕ್ಕೆ ಭೇಟಿ ಕೊಟ್ಟು ಬಂದಿದ್ದಾರೆ. ರಾಷ್ಟ್ರಪತಿಯಾಗಿದ್ದಾಗ ಕೆ.ಆರ್‌.ನಾರಾಯಣ್‌, ಪ್ರಧಾನಿಯಾಗಿದ್ದಾಗ ವಾಜಪೇಯಿ ಸಹ ಡಾ.ಕೊಟ್ನಿಸ್‌ ಪತ್ನಿಯನ್ನು ಭೇಟಿ ಮಾಡಿದ್ದಾರೆ.

ಹು ಜಿಂಟಾವೋ ಡಾ.ಕೊಟ್ನಿಸ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡ್ತಾರಂತೆ ಅಂದಾಗ ಇವೆಲ್ಲ ನೆನಪಾದವು. ಇದು ಒಬ್ಬ ವ್ಯಕ್ತಿ ಎರಡು ಬಲಾಢ್ಯ ದೇಶಗಳನ್ನು ಬಿಗಿಯಾಗಿ ಬೆಸೆದ ಪರಿಯಿದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X