• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ಒಬ್ಬ ವ್ಯಕ್ತಿ ಎರಡು ದೇಶಗಳನ್ನು ಬೆಸೆದ ಕತೆ!

By Staff
|


ಚೀನಾ ನಾಯಕರು ಭಾರತಕ್ಕೆ ಬಂದಾಗ ಡಾ.ಕೊಟ್ನಿಸ್‌ ಕುಟುಂಬದವರನ್ನು ಭೇಟಿಯಾಗದೇ ಹೋಗುವುದಿಲ್ಲ. ಭಾರತದ ನಾಯಕರು ಚೀನಾಕ್ಕೆ ಹೋದರೆ ಡಾ.ಕೊಟ್ನಿಸ್‌ ಪ್ರತಿಮೆಗೆ ಗೌರವ ಸಲ್ಲಿಸದೇ ವಾಪಸು ಬರುವುದಿಲ್ಲ. ಅದ್ಸರಿ, ಯಾರು ಈ ಡಾ.ಕೊಟ್ನಿಸ್‌!

  • ವಿಶ್ವೇಶ್ವರ ಭಟ್‌
Dwarakanath Kotnisಈಗ ಭಾರತ ಪ್ರವಾಸದಲ್ಲಿದ್ದಾರಲ್ಲ ಚೀನಾ ಅಧ್ಯಕ್ಷ ಹು ಜಿಂಟಾವೊ, ಇಂದು ದಿಲ್ಲಿಯಿಂದ ತಾವು ತಂಗಿರುವ ಹೋಟೆಲ್‌ನಲ್ಲಿ ಡಾ.ಕೊಟ್ನಿಸ್‌ ಕುಟುಂಬದ ಸದಸ್ಯರನ್ನು ಭೇಟಿ ಮಾಡ್ತಾರಂತೆ ಹಾಗೂ ಚೀನಾ ನಿಯೋಗದಲ್ಲಿರುವ ಮೇಡಂ ಗೋ ಕ್ವಿಂಗ್ಲಾನ್‌ ಸಹ ಈ ಸಂದರ್ಭದಲ್ಲಿ ಹಾಜರಿರ್ತಾರಂತೆ. ನೀವು ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿರಬಹುದು.

ಅದ್ಸರಿ, ಯಾರು ಈ ಡಾ. ಕೊಟ್ನಿಸ್‌? ಚೀನಾ ಅಧ್ಯಕ್ಷರೇಕೆ ಡಾ.ಕೊಟ್ನಿಸ್‌ ಕುಟುಂಬದ ಸದಸ್ಯರನ್ನು ತಾವು ಉಳಿದುಕೊಂಡ ಹೋಟೆಲ್‌ಗೆ ಕರೆಸಿಕೊಳ್ಳುತ್ತಿದ್ದಾರೆ. ಯಾರು ಈ ಮೇಡಂ ಗೋ ಕ್ವಿಂಗ್ಲಾನ್‌? ಅವರೇಕೆ ಹಾಜರಿರುತ್ತಾರೆ?

ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೊರಟರೆ ನಾವು ಒಂದು ಅಮರಕತೆಯ ಮುಂದೆ ಹೋಗಿ ನಿಂತಿರುತ್ತೇವೆ. ಇದು ಸಾಮಾನ್ಯ ಕತೆಯಲ್ಲ, ಭಾರತ-ಚೀನಾ ನಡುವಿನ ಮಧುರ ಬಾಂಧವ್ಯಕ್ಕೆ, ಉಭಯ ದೇಶಗಳ ನಡುವೆ ಹೊಸ ಸಂಬಂಧಕ್ಕೆ ಭಾಷ್ಯ ಬರೆದ ಕತೆಯೂ ಹೌದು. ಈ ಎರಡೂ ದೇಶಗಳ ನಾಯಕರು ಪರಸ್ಪರ ಎದುರಾದರೆ ಡಾ.ಕೊಟ್ನಿಸ್‌ ಅವರನ್ನು ಸ್ಮರಿಸದೇ ಹೋಗುವುದಿಲ್ಲ. ಚೀನಾ ನಾಯಕರು ಭಾರತಕ್ಕೆ ಬಂದಾಗ ಡಾ.ಕೊಟ್ನಿಸ್‌ ಕುಟುಂಬದವರನ್ನು ಭೇಟಿಯಾಗದೇ ಹೋಗುವುದಿಲ್ಲ. ಭಾರತದ ನಾಯಕರು ಚೀನಾಕ್ಕೆ ಹೋದರೆ ಡಾ.ಕೊಟ್ನಿಸ್‌ ಪ್ರತಿಮೆಗೆ ಗೌರವ ಸಲ್ಲಿಸದೇ ವಾಪಸು ಬರುವುದಿಲ್ಲ. ಡಾ.ಕೊಟ್ನಿಸ್‌ ಪತ್ನಿಯನ್ನು ಮಾತನಾಡಿಸದೇ ಬರುವುದಿಲ್ಲ.

ಬಹಳ ಅಚ್ಚರಿಯಾಗಬಹುದು, ಇಡೀ ಚೀನಾದಲ್ಲಿ ಇಬ್ಬರೇ ಇಬ್ಬರು ಭಾರತೀಯರ ಪ್ರತಿಮೆಗಳಿವೆ. ಒಂದನೆಯದು ಬುದ್ಧನದು ಹಾಗೂ ಎರಡನೆಯದು ಡಾ.ಕೊಟ್ನಿಸ್‌ ಅವರದು! ಪ್ರತಿವರ್ಷ ಚೀನಿಯರು ಕ್ವಿಂಗ್‌ಮಿನ್‌ ಎಂಬು ಉತ್ಸವ ಆಚರಿಸುತ್ತಾರೆ. ಅಂದರೆ ತಮ್ಮ ಪೂರ್ವಜರನ್ನು ಸ್ಮರಿಸುವ ದಿನವದು. ಅಂದು ಡಾ.ಕೊಟ್ನಿಸ್‌ ಅವರ ಪ್ರತಿಮೆ ಹಾಗೂ ಸ್ಮಾರಕವನ್ನು ಹೂವಿನಿಂದ ಅಲಂಕರಿಸಿ ಗೌರವ ಸಲ್ಲಿಸುತ್ತಾರೆ. ಡಾ.ಕೊಟ್ನಿಸ್‌ ಸ್ಮಾರಕ ಅಲಂಕಾರಕ್ಕೆಂದು ದೇಶವಾಸಿಗಳೆಲ್ಲ ಹೂವುಗಳನ್ನು ಕಳಿಸುತ್ತಾರೆ. ಡಾ.ಕೊಟ್ನಿಸ್‌ಅಂದ್ರೆ ಚೀನಾದಲ್ಲಿ ಚಿರಪರಿಚಿತ ಹೆಸರು!

ಡಾ.ದ್ವಾರಕಾನಾಥ ಶಾಂತರಾಮ ಕೊಟ್ನಿಸ್‌!

1910ರಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಶಾಂತರಾಮ ಕೊಟ್ನಿಸ್‌ಅವರ ಪುತ್ರನಾಗಿ ದ್ವಾರಕಾನಾಥ ಜನಿಸಿದರು. ಮೂವರು ಗಂಡು ಮತ್ತು ಐವರು ಹೆಣ್ಣು ಮಕ್ಕಳ ತುಂಬು ಸಂಸಾರ. ಮನೆಯಲ್ಲಿ ಬಡತನ. ಸಂಸಾರ ಸಾಗಿಸಿಕೊಂಡು ಹೋಗವುದೇ ಕಷ್ಟದ ಕೆಲಸ. ಹಾಗೆಂದು ಶಾಂತರಾಮ ಕೊಟ್ನಿಸ್‌ ತಮ್ಮ ಮಕ್ಕಳನ್ನು ಅವರ ಪಾಡಿಗೆ ಬಿಟ್ಟವರಲ್ಲ. ಒಳ್ಳೆಯ ಸಂಸ್ಕಾರ, ಜೀವನಶೈಲಿಯನ್ನು ಕಲಿಸಿದವರು. ಮನೆಯಲ್ಲಿ ಎಲ್ಲರಿಗೂ ಖಾದಿ, ಸರಳಜೀವನ. ತಂದೆ ನೀಡಿದ ಸಂಸ್ಕಾರವೇ ಮಗ ದ್ವಾರಕಾನಾಥನಿಗೆ ಜೀವನಪಥ. ಕಷ್ಟಪಟ್ಟು ಓದಿ, ಹೈಸ್ಕೂಲಿನಲ್ಲಿ ಸೀಟು ಸಿಕ್ಕಿತು. ಆ ದಿನಗಳಲ್ಲಿ ಮೆಡಿಕಲ್‌ ಶಿಕ್ಷಣಕ್ಕೆ ಯಾರೂ ಹಾತೊರೆಯುತ್ತಿರಲಿಲ್ಲ. ಆದರೆ ದ್ವಾರಕಾನಾಥ್‌ಗೆ ಡಾಕ್ಟರ್‌ ಆಗಬೇಕೆಂಬ ಹಠ. ದುಡ್ಡಿರಲಿಲ್ಲ. ಆದರೆ ಸಂಬಂಧಿಕರು, ಸ್ನೇಹಿತರಿಂದ ಸಾಲ ಮಾಡಿ ಮೆಡಿಕಲ್‌ ಸೇರಿಸಿದ್ದಾಯಿತು. ಕೋರ್ಸ್‌ ಮಗಿದು ಟ್ರೇನಿ ಡಾಕ್ಟರ್‌ಆಗಿ ಕೆಲಸ ಮಾಡುತ್ತಿದ್ದಾಗ ಅನಿರೀಕ್ಷಿತ ಕರೆ ಬಂದಿತು.

1937. ಜಪಾನ್‌ ದಾಳಿಯಿಂದ ಚೀನಾ ವಿಪರೀತ ಘಾಸಿಗೊಳಗಾಗಿತ್ತು. ಸಾವಿರಾರು ಸೈನಿಕರು ಯುದ್ಧದಲ್ಲಿ ತೀವ್ರ ಗಾಯಗೊಂಡಿದ್ದರು. ಅವರನ್ನು ಆರೈಕೆ ಮಾಡುವ, ಚಿಕಿತ್ಸೆ ನೀಡುವ ವೈದ್ಯರ ಕೊರತೆಯಿಂದ ಸೈನಿಕ ಶಿಬಿರದಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ. ಇಂಥ ಸಂದರ್ಭದಲ್ಲಿ ಕಮ್ಯುನಿಸ್ಟ್‌ ಜನರಲ್‌ ಝ ಡೆ, ಜವಾಹರಲಾಲ್‌ ನೆಹರುಗೆ ವೈದ್ಯರ ತಂಡವೊಂದನ್ನು ಕಳಿಸಿಕೊಡುವಂತೆ ಮನವಿ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶಕ್ಕೆ ಮನವಿ. ನೆಹರು ತಕ್ಷಣ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಡಾ.ಎಂ.ಅಟಲ್‌, ಡಾ.ದ್ವಾರಕಾನಾಥ್‌ ಕೊಟ್ನಿಸ್‌ ಅವರನ್ನೊಳಗೊಂಡ ವೈದ್ಯರ ತಂಡ 1938ರ ಆರಂಭದಲ್ಲಿ ಚೀನಾಕ್ಕೆ ತೆರಳುತ್ತದೆ. ಮರುವರ್ಷವೇ ಸ್ವತಃ ನೆಹರು ಚೀನಾಕ್ಕೆ ತೆರಳಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಭಾರತೀಯರ ವೈದ್ಯರ ತಂಡ ನಿರ್ವಹಿಸಿದ ಕಾರ್ಯದ ಬಗ್ಗೆ ತೀವ್ರ ಪ್ರಶಂಸೆ ವ್ಯಕ್ತವಾಗುತ್ತದೆ.

ಚೀನಾಕ್ಕೆ ಹೊರಟಾಗ ಡಾ.ಕೊಟ್ನಿಸ್‌ಗೆ ಕೇವಲ ಇಪ್ಪತ್ತೆಂಟು ವರ್ಷ. ಹೊರಡುವ ಮುನ್ನ ಸೊಲ್ಲಾಪುರದಲ್ಲಿನ ಮನೆಗೆ ಹೋಗಿ ತಂದೆ-ತಾಯಿಗೆ ನಮಸ್ಕರಿಸಿ, ಸಹೋದರಿಯರೊಂದಿಗೆ ಒಂದೆರಡು ದಿನ ಕಳೆದಿದ್ದೇ ಕೊನೆ. ಡಾ.ಕೊಟ್ನಿಸ್‌ ತಿರುಗಿ ಬರಲೇ ಇಲ್ಲ.

ಭಾರತೀಯ ವೈದ್ಯರ ತಂಡ ಚೀನಾದಲ್ಲಿ ಮಾಡಿದ ಕೆಲಸ ಅಸಾಧಾರಣ. ಐವರು ವೈದ್ಯರು ಸೇರಿ ಸುಮಾರು ಏಳು ತಿಂಗಳುಗಳ ಕಾಲ ಆರು ಸಾವಿರಕ್ಕೂ ಹೆಚ್ಚು ಸೈನಿಕರ ಶುಶ್ರೂಷೆ ಮಾಡಿದರು. ಮನೆ, ಮಠ, ಮರೆತು ಊಟ, ನಿದ್ದೆಯಿಲ್ಲದೇ ಸೈನಿಕ ಶಿಬಿರಗಳಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸೈನಿಕರಿಗೆ ಪುನರ್ಜನ್ಮ ನೀಡಿದರು. ಆ ಪೈಕಿ ಅನೇಕರು ಚೇತರಿಸಿಕೊಂಡರು. ಆದರೆ ನೂರಾರು ಸೈನಿಕರಿಗೆ ಇನ್ನೂ ವೈದ್ಯಕೀಯ ನೆರವಿನ ಅಗತ್ಯವಿತ್ತು. ಈ ಮಧ್ಯೆ ಸಾಂಸಾರಿಕ ತಾಪತ್ರಯಗಳಿಂದ ಭಾರತೀಯ ವೈದ್ಯರು ತಾಯ್ನಾಡಿಗೆ ಮರಳಲು ಚಡಪಡಿಸುತ್ತಿದ್ದರು. ಅವರೆಲ್ಲರನ್ನು ಡಾ.ಕೊಟ್ನಿಸ್‌ ಒತ್ತಾಯ ಮಾಡಿ ಉಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸೈನಿಕರನ್ನು ಹೀಗೆ ಬಿಟ್ಟು ಹೋಗುವುದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಅವರ ಒತ್ತಾಯ ಬಹುದಿನಗಳ ಕಾಲ ನಿಲ್ಲಲಿಲ್ಲ. ಅವರೆಲ್ಲ ಭಾರತಕ್ಕೆ ಹೊರಟು ನಿಂತರು.

ಆದರೆ ದ್ವಾರಕಾನಾಥ ಕೊಟ್ನಿಸ್‌ ಉಳಿಯಲು ನಿರ್ಧರಿಸಿದರು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more