ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರದ ಅರಿವಿಲ್ಲದ ಅವರು ಆಕಾಶದೆತ್ತರಕ್ಕೆ ನಿಂತರು!

By Staff
|
Google Oneindia Kannada News

ಅಕ್ಷರದ ಅರಿವಿಲ್ಲದ ಅವರು ಆಕಾಶದೆತ್ತರಕ್ಕೆ ನಿಂತರು!
ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲ ಆಗಬಹುದೆಂಬುದಕ್ಕೆ ಜಿಂದಾಲ್‌ ನಿದರ್ಶನ. ದೇಶದ ಹದಿಮೂರನೇ ಹಾಗೂ ವಿಶ್ವದ 548ನೇ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಫೋರ್ಬ್ಸ್‌ ವರದಿಯಲ್ಲಿ ದಾಖಲಾಗಿರುವ ಜಿಂದಾಲ್‌, ಗೋಡೆಗಳಿರುವೆಡೆ ಬಾಗಿಲನ್ನು ಮಾಡಿಕೊಂಡವರು. ಕಂದಕಗಳಿರುವೆಡೆ ಸೇತುವೆಗಳನ್ನು ನಿರ್ಮಿಸಿದವರು. ಅಸಾಧ್ಯವೆನಿಸುವ ಸವಾಲುಗಳನ್ನು ಸುಲಭಸಾಧ್ಯವಾಗಿಸಿದವರು.

Vishweshwar Bhat ವಿಶ್ವೇಶ್ವರ ಭಟ್‌

ಯಾವುದೇ ಮಹಾನ್‌ ಕೆಲಸವಿರಬಹುದು. ಆರಂಭದಲ್ಲಿ ಅದಕ್ಕೆ ಒಬ್ಬನೇ ಚಾಲನೆ ಕೊಡುತ್ತಿರುತ್ತಾನೆ. ಆನಂತರ ಅನೇಕರು ಕೈಜೋಡಿಸುತ್ತಾರೆ. ಆರಂಭದಲ್ಲಿ ಒಬ್ಬನೇ ಶುರುಮಾಡಿದಾಗ ಅನೇಕರು ಅಪಹಾಸ್ಯ ಮಾಡುತ್ತಾರೆ. ‘ಇದೆಲ್ಲ ನಿನ್ನಿಂದ ಆಗದ ಕೆಲಸ. ಯಾಕೆ ಸುಮ್ನೆ ಶ್ರಮಪಡ್ತೀಯಾ? ಕೈಸುಟ್ಟುಕೊಳ್ತೀಯಾ? ಇದನ್ನು ಬಿಟ್ಟು ಬೇರೆ ಏನಾದರೂ ಮಾಡಬಾರದಾ?’ ಎಂದು ತಣ್ಣೀರು ಎರಚುತ್ತಾರೆ. ಆದರೆ ಇವ್ಯಾವನ್ನೂ ಲೆಕ್ಕಿಸದೇ ತಾನು ಕೈಗೆತ್ತಿಕೊಂಡಿರುವ ಕೆಲಸವನ್ನು ಅವನು ಮುಂದುವರಿಸಿಕೊಂಡು ಹೋಗುತ್ತಿರುತ್ತಾನೆ. ಆಗಲೂ ಮಂದಿ ಅವನನ್ನು ಬಿಡುವುದಿಲ್ಲ. ಮೂದಲಿಕೆಯೆಂಬ ಚಾನೆಲ್‌ನಲ್ಲಿ ಹೀಗಳಿಕೆಯನ್ನು ಸದಾ ಬಿತ್ತರಿಸುತ್ತಲೇ ಹೋಗುತ್ತಾರೆ.

ಕೊನೆಗೊಂದು ದಿನ ಈ ಪರಿ ನಿಂದನೆಗೊಳಗಾದವ ಇವ್ಯಾವುಗಳನ್ನೂ ದರಕರಿಸದೇ ಯಶಸ್ವಿಯಾಗುತ್ತಾನೆ. ಆಗ ಇದೇ ಮಂದಿ ಪ್ಲೇಟು ಬದಲಿಸುತ್ತಾರೆ. ‘ನಾನು ಹೇಳಲಿಲ್ವಾ ಈತ ಸಾಮಾನ್ಯ ಮನುಷ್ಯ ಅಲ್ಲ ಅಂತ. ಒಂದಲ್ಲ ಒಂದು ದಿನ ಯಶಸ್ವಿಯಾಗುತ್ತಾನೆ ಅಂತ ಗೊತ್ತಿತ್ತು ನಂಗೆ’ ಎಂದು ಹೊಸರಾಗ ಶುರುಮಾಡಿಕೊಳ್ಳುತ್ತಾರೆ. ಮಹಾತ್ಮ ಗಾಂಧಿ, ನೆಲ್ಸನ್‌ ಮಂಡೇಲ, ಅಬ್ರಹಾಂ ಲಿಂಕನ್‌, ಧೀರೂಭಾಯಿ ಅಂಬಾನಿ, ಜೆಆರ್‌ಡಿ ಟಾಟಾ ಹೀಗೆ ಯಾರನ್ನೇ ಗಮನಿಸಿ ಅವರೆಲ್ಲರ ಹಿಂದೆಯೂ ಹೀಗೆ ಹೀಗಳೆಯುವವರು, ತಣ್ಣೀರು ಎರಚುವವರಿದ್ದರು. ಆದರೆ ಅವರೆಲ್ಲ ಇವನ್ನೆಲ್ಲ ದಾಟಿಕೊಂಡೇ ಮುಂದೆ ಹೋದರು. ಯಾರಿಗೂ ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಹಳ್ಳಿ ರೈತನ ಮಗ, ಐದನೇ ತರಗತಿಯನ್ನೂ ಪಾಸುಮಾಡದವ, ಸಾವಿರಾರು ಕೋಟಿ ರೂಪಾಯಿ ಬಂಡವಾಳದ ಸ್ಟೀಲ್‌ ಕಾರ್ಖಾನೆಯನ್ನು ಸ್ಥಾಪಿಸುತ್ತೇನೆಂದು ಹೇಳಿದಾಗ, ಯಾರು ತಾನೆ ಅಪಹಾಸ್ಯ ಮಾಡುವುದಿಲ್ಲ? ಈತನಿಗೆ ತಲೆ ಕೆಟ್ಟಿರಬೇಕು. ಸ್ಟೀಲ್‌ ಕಾರ್ಖಾನೆ ಶುರುಮಾಡ್ತಾನಂತೆ. ಅದೇನು ತರಕಾರಿ ಅಂಗಡಿ ತೆರೆದಷ್ಟು ಸುಲಭನಾ? ಎಂದು ಅನೇಕರು ಟೀಕಿಸಿದ್ದರು. ಬೇರೆ ಯಾರೂ ಅಲ್ಲ, ಸ್ವತಃ ಮನೆ ಮಂದಿಯೇ ಆ ಮಾತು ಕೇಳಿ ನಕ್ಕಿದ್ದರು. ಬುದ್ಧಿಮಾತು ಹೇಳಿದ್ದರು. ಆದರೆ ಅವರ್ಯಾರೂ ಕನಸು ಮನಸಿನಲ್ಲೂ ಊಹಿಸಿರಲಿಲ್ಲ, ಮುಂದೊಂದು ದಿನ ನಾವು ಟೀಕಿಸಿದ ವ್ಯಕ್ತಿ ದೇಶದಲ್ಲಿ ಕೇವಲ ಒಂದಲ್ಲ ಹದಿನೈದು ಸ್ಟೀಲ್‌ ಕಾರ್ಖಾನೆಗಳನ್ನು ಸ್ಥಾಪಿಸುತ್ತಾನೆಂದು.

ಆತನ ಹೆಸರು ಜಿಂದಾಲ್‌, ಪೂರ್ತಿಯಾಗಿ ಓಂಪ್ರಕಾಶ್‌ ಜಿಂದಾಲ್‌!

Om Prakash Jindalಈ ಜಿಂದಾಲ್‌ ಎಂಥ ವ್ಯಕ್ತಿ, ಆತನ ಕನಸು ಹೇಗಿತ್ತು, ಆತನ ಸಾಧನೆಯ ವ್ಯಾಪ್ತಿ ಏನು, ಅಗಾಧತೆಯ ಹರವು ಏನು ಎಂಬುದನ್ನು ತಿಳಿಯಲು ಎಲ್ಲ ಹದಿನೈದು ಸ್ಟೀಲ್‌ ಕಾರ್ಖಾನೆಗಳಿಗೆ ಭೇಟಿ ನೀಡಬೇಕಿಲ್ಲ. ನಮ್ಮ ಬಳ್ಳಾರಿ ಸನಿಹದಲ್ಲಿರುವ ತೋರಣಗಲ್ಲಿಗೆ ಹೋದರೂ ಸಾಕು. ಗಿಡ, ಮರಗಳೇ ಇಲ್ಲದ, ಸರಣಿ ಬೋಳು ಗುಡ್ಡಗಳ ತಡಿಯಲ್ಲಿ, ಸದಾ ಬೆಂಕಿ ಕಾರುವ ಆಗಸದ ಅಡಿಯಲ್ಲಿ ಒಂದು ಅದ್ಭುತ ಲೋಕವೇ ಅನಾವರಣಗೊಂಡಿರುವುದು ಗೊತ್ತಾಗುತ್ತದೆ. ಕೇವಲ ಹತ್ತು ವರ್ಷಗಳಲ್ಲಿ ಪವಾಡಸದೃಶ ರೀತಿಯಲ್ಲಿ ಇಡೀ ಪ್ರದೇಶ ಹೊಸ ಸ್ವರೂಪ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಮತ್ತೆಲ್ಲೂ ಮತ್ತ್ಯಾರೂ ಹೂಡದಷ್ಟು ಖಾಸಗಿ ಬಂಡವಾಳ ತೋರಣಗಲ್ಲಿನಲ್ಲಿ ಜಿಂದಾಲ್‌ ತೊಡಗಿಸಿದ್ದಾರೆ. ಇದೇನು ತಮಾಷೆಯಲ್ಲ. 12 ಸಾವಿರ ಕೋಟಿ ರೂಪಾಯಿಗಳನ್ನು ಒಂದೆಡೆ ವಿನಿಯೋಗಿಸಿದರೆ ಅಲ್ಲಿ ಅದೆಂಥ ಚಮತ್ಕಾರವಾಗಬಹುದು, ಎಂಥ ಪುಟ್ಟ ಜಗತ್ತು ತಲೆಯೆತ್ತಿ ನಿಲ್ಲಬಹುದು, ದೇಶದ ಅಭಿವೃದ್ಧಿಗೆ ಎಷ್ಟು ಸಹಾಯಕವಾಗಬಹುದು ಎಂಬುದಕ್ಕೆ ತೋರಣಗಲ್ಲು ಮೈಲುಗಲ್ಲು ಸಾಕ್ಷಿ. ಇಂಥ ಚಮತ್ಕಾರವನ್ನು ಜಿಂದಾಲ್‌ ದೇಶದ ಹದಿನೈದು ಕಡೆಗಳಲ್ಲಿ ಮಾಡಿದ್ದಾರೆ. ಒಬ್ಬ ವ್ಯಕ್ತಿ ಇಷ್ಟೆಲ್ಲ ಮಾಡಲು ಸಾಧ್ಯವಾ, ಮೆಟ್ರಿಕ್ಯುಲೇಷನ್‌ ಪಾಸು ಮಾಡದ ವ್ಯಕ್ತಿಯಿಂದ ಇವೆಲ್ಲ ಸಾಧ್ಯವಾದದ್ದಾದರೂ ಹೇಗೆ?

ಅಚ್ಚರಿಯಾಗುತ್ತದೆ. ‘ಕನಸು ಕಾಣಲೂ ಧೈರ್ಯ ಬೇಕು’ ಅಂತಾರಲ್ಲ ಈ ಮಾತು ಜಿಂದಾಲ್‌ ಮಟ್ಟಿಗಂತೂ ಅಪ್ಪಟ ಸತ್ಯ. ರಾತ್ರಿ ವೇಳೆ ತೋರಣಗಲ್ಲಿನ ಗುಡ್ಡಗಳ ಹಾಸುಗಳಲ್ಲಿ ನಿಂತು ಕಣ್ಣು ಹಾಯಿಸಿದರೆ ಕಣ್ತುಂಬ ಝಗಮಗ. ಆ ನೀರವತೆಯಲ್ಲಿ ಕಾರ್ಖಾನೆ ಸಾವಿರಾರು ಲಾರಿ ಅದಿರುಗಳನ್ನು ನುಂಗಿ ರಾತ್ರೋ ರಾತ್ರಿ ಸಾವಿರಾರು ಟನ್‌ ಸ್ಟೀಲುಗಳನ್ನಾಗಿ ಪರಿವರ್ತಿಸಿ ಒಂದೇ ಸಮನೆ ಉಗುಳುತ್ತದೆ. ಒಬ್ಬ ವ್ಯಕ್ತಿಯ ಕನಸಿನ ಬೀಜ ಲಕ್ಷಾಂತರ ಜನರ ಬದುಕಾಗಿ ಮೊಳಕೆಯಾಡೆಯುತ್ತದೆ!

ಹರ್ಯಾಣದ ಹಿಸ್ಸಾರ್‌ ಜಿಲ್ಲೆಯ ನಲ್ವಾ ಎಂಬುದು ಪುಟ್ಟ ಗ್ರಾಮ. ಜನಸಂಖ್ಯೆ ಐನೂರಕ್ಕಿಂತ ಹೆಚ್ಚಿರಲಾರದು. ಇಡೀ ಊರಿನಲ್ಲಿ ಸಮೃದ್ಧವಾಗಿದ್ದದ್ದು ಬಡತನ ಮಾತ್ರ. ಒಂದೇ ಶಾಲೆ. ಅದೂ ಖಾಲಿ ಖಾಲಿ. ನೀರಾವರಿ ಜಮೀನಿದ್ದರೂ ಇಡೀ ಗ್ರಾಮಕ್ಕೆ ಅದೆಂಥ ದುರ್ದೆಸೆ ಬಡಿದಿತ್ತೋ ಏನೋ ಅಂಥ ಪ್ರಗತಿ ಕಂಡಿರಲಿಲ್ಲ. ನೇತರಾಮ್‌ ಜಿಂದಾಲ್‌ ಮಾತ್ರ ಇದ್ದುದರಲ್ಲೇ ಪರವಾಗಿಲ್ಲ. ಎರಡು ನೂರು ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ. ಈತನಿಗೆ ಹನ್ನೊಂದು ಮಂದಿ ಮಕ್ಕಳು. ಐವರು ಗಂಡು ಮಕ್ಕಳು. ಅವರಲ್ಲೊಬ್ಬ ಓಂಪ್ರಕಾಶ್‌ ಜಿಂದಾಲ್‌. ನೇತರಾಮನಿಗೆ ತನ್ನ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕೆಂಬ ಹಂಬಲವೇನೂ ಇರಲಿಲ್ಲ. ತನ್ನ ಜಮೀನನ್ನು ಸಾಗುವಳಿ ಮಾಡಿಕೊಂಡು ಹೋದರೆ ಸಾಕು ಎಂದೇ ಹೇಳುತ್ತಿದ್ದ. ಅವನ ಯಾವ ಮಕ್ಕಳೂ ಶಾಲೆಗೆ ಹೋಗಲಿಲ್ಲ. ಎಲ್ಲರೂ ಐದು-ಆರನೇ ತರಗತಿವರೆಗೆ ಓದಿ ಬಿಟ್ಟವರೇ. ಓಂಪ್ರಕಾಶ್‌ ಸಹ ಐದನೇ ತರಗತಿಯಲ್ಲಿ ಫೇಲಾದ ಬಳಿಕ ಅತ್ತ ಕಡೆ ಮುಖ ಹಾಕಲಿಲ್ಲ. ಹಾಗೆಂದು ಜಮೀನ ಕಡೆಯೂ ಸುಳಿಯಲಿಲ್ಲ.

ಮೊದಲಿನಿಂದಲೂ ಓಂಪ್ರಕಾಶ್‌ಗೆ ಯಂತ್ರಗಳತ್ತ ಒಲವು. ಜೀವನದಲ್ಲಿ ನಾನು ಇಂಜಿನೀಯರ್‌ ಆಗ್ತೇನೆ. ಇಲ್ಲವೇ ಪೈಲ್ವಾನ್‌ ಆಗ್ತೇನೆ ಎಂದು ಹೇಳುತ್ತಿದ್ದ. ಇಂಜಿನೀಯರ್‌ ಆಗಬೇಕೆಂದರೆ ಕಾಲೇಜಿಗೆ ಹೋಗಬೇಕು. ಆದರೆ ನೀನು ಶಾಲೆಗೆ ಹೋಗುತ್ತಿಲ್ಲ ಎಂದರೆ, ಪರವಾಗಿಲ್ಲ ನೋಡ್ತಿರಿ. ಇಂಜಿನಿಯರ್‌ಗಳೂ ನಾಚುವ ರೀತಿಯಲ್ಲಿ ಕೆಲಸ ಮಾಡಿ ತೋರಿಸ್ತೀನಿ ಎಂದು ಹೇಳುತ್ತಿದ್ದ. ಆತನ ಸ್ನೇಹಿತರು, ಬಂಧುಗಳು ಇವನನ್ನು ಗೇಲಿ ಮಾಡುತ್ತಿದ್ದರು. ಆತನಿಗೆ ಬುದ್ಧಿ ನೆಟ್ಟಗಿಲ್ಲವೆಂದು ಕುಹಕವಾಡುತ್ತಿದ್ದರು. ಆದರೆ ಓಂಪ್ರಕಾಶ್‌ ಮನಸ್ಸಿನಲ್ಲೇ ನಕ್ಕು ಸುಮ್ಮನಾಗುತ್ತಿದ್ದ.

ಯಾವ ಉದ್ಯೋಗ ಆರಂಭಿಸಬೇಕೆಂಬ ಬಗ್ಗೆ ಓಂಪ್ರಕಾಶ್‌ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಹಿಸ್ಸಾರ್‌ನಲ್ಲಿ ಬಕೆಟ್‌ಗೆ ಬೇಡಿಕೆಯಿರುವುದನ್ನು ಗಮನಿಸಿ ಬಕೆಟ್‌ ತಯಾರಿಕೆ ಫ್ಯಾಕ್ಟರಿ ಆರಂಭಿಸಿದರು. ಆಗ ಅವರಿಗೆ ಕೇವಲ 18 ವರ್ಷ ವಯಸ್ಸು. ಬಹುಬೇಗ ಸ್ಟೀಲ್‌ ಬಕೆಟ್‌ಗಳಿಗೆ ವ್ಯಾಪಕ ಬೇಡಿಕೆಗಳು ಬಂದವು. ಗೃಹ ಬಳಕೆಗಿಂತ ನೀರಾವರಿ ಉಪಯೋಗಕ್ಕಾಗಿ ಈ ಬಕೆಟ್‌ಗಳು ಹೆಚ್ಚಾಗಿ ಖರ್ಚಾಗುತ್ತಿದ್ದವು. ಈ ಸಂದರ್ಭದಲ್ಲಿ ಅವರಿಗೆ ಒಂದು ಸಂಗತಿ ಗಮನಕ್ಕೆ ಬಂತು. ಅದೇನೆಂದರೆ ಹರ್ಯಾಣ ಹಾಗೂ ಸುತ್ತಲಿನ ರಾಜ್ಯಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಪೈಪ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ಹಾಗೂ ಯಾವ ದೇಶೀಯ ಕಂಪನಿಯೂ ಕಬ್ಬಿಣದ ಪೈಪುಗಳನ್ನು ತಯಾರಿಸದಿರುವುದು. ಈ ಪೈಪುಗಳನ್ನು ತಯಾರಿಸುವ ಫ್ಯಾಕ್ಟರಿಯನ್ನೇಕೆ ಆರಂಭಿಸಬಾರದೆಂದು ಅನಿಸಿತು.

ತಡಮಾಡಲಿಲ್ಲ. 1952ರಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಲಿಲುವಾದಲ್ಲಿ ಪೈಪ್‌ ತಯಾರಿಕಾ ಘಟಕ ಆರಂಭಿಸಿದರು, 40 ಸಾವಿರ ರೂಪಾಯಿ ಬಂಡವಾಳದೊಂದಿಗೆ. ಈ ಪೈಕಿ ಅರ್ಧದಷ್ಟು ಹಣವನ್ನು ಸಾಲವಾಗಿ ಪಡೆದರು. ಸ್ವತಃ ಓಂಪ್ರಕಾಶ್‌ ಪೈಪ್‌ ಉತ್ಪಾದನೆ ಉಸ್ತುವಾರಿ ನೋಡಿಕೊಂಡರು. ಸಹೋದರರನ್ನು ಮಾರ್ಕೆಟಿಂಗ್‌ಗೆ ಬಳಸಿಕೊಂಡರು. ಜಿಂದಾಲ್‌ ಪೈಪ್‌ ಲಿಮಿಟೆಡ್‌ ಸಂಸ್ಥೆ ಹುಟ್ಟಿಕೊಂಡಿದ್ದು ಹೀಗೆ. ದೇಶದ ಮೊಟ್ಟ ಮೊದಲ ಪೈಪ್‌ ಉದ್ಯಮದ ಹರಿಕಾರ ಜಿಂದಾಲ್‌. ಆಗ ಅವರಿಗೆ 22 ವರ್ಷ! ಪೈಪ್‌ ಉದ್ಯಮಕ್ಕೆ ಬೇಕಾಗುವ ಬೆಂಡ್ಸ್‌, ಸಾಕೆಟ್‌ಗಳೂ ವಿದೇಶಗಳಿಂದಲೇ ಬರುತ್ತಿದ್ದವು. ಅವನ್ನೂ ತಮ್ಮ ಫ್ಯಾಕ್ಟರಿಯಲ್ಲೇ ತಯಾರಿಸಲು ಆರಂಭಿಸಿದರು. ಈ ಎಲ್ಲ ಪ್ರಾಡಕ್ಟ್‌ಗಳಿಗೆ ಅದೆಂಥ ಬೇಡಿಕೆ ಬಂತೆಂದರೆ, ಸಾಮಾನುಗಳನ್ನು ಪೂರೈಸಲು ಆಗಲಿಲ್ಲ. ವಿದೇಶಗಳಿಗೆ ಹೋಗಿ ಭಾರೀ ಸಂಖ್ಯೆಯಲ್ಲಿ ಪೈಪು ತಯಾರಿಸುವ ಮಷೀನುಗಳನ್ನು ತಂದರು. ಅಲ್ಲಿಯತನಕ ಅಮೆರಿಕದ ಕಂಪನಿಗಳದೇ ಸ್ವಾಮ್ಯ. ಇಂದಿಗೂ ಜಿಂದಾಲ್‌ ಪೈಪುಗಳನ್ನು ಮೀರಿಸುವ ಮತ್ತೊಂದು ಕಂಪನಿಯಿಲ್ಲ.

ಜಿಂದಾಲ್‌ ಹೆಸರು ಚಾಲ್ತಿಗೆ ಬಂದಿದ್ದು ಅವರು ಸ್ಟೀಲ್‌ ತಯಾರಿಕೆಗೆ ಕೈಹಾಕಿದಾಗ. ಸ್ಟೀಲ್‌ ಉದ್ಯಮ ಆರಂಭಿಸಲು ಕನಿಷ್ಠ ಒಂದು ಸಾವಿರ ಕೋಟಿ ರೂಪಾಯಿಯಾದರೂ ಬೇಕು. ನಿಮ್ಮಲ್ಲಿ ಅಷ್ಟು ಹಣವಿದ್ದರೆ ಆರಂಭಿಸಿ. ಆದರೆ ಅಷ್ಟೇ ಹಣದಲ್ಲೇ ಇನ್ನೂ ಹತ್ತಾರು ಫ್ಯಾಕ್ಟರಿ ಹಾಕಬಹುದಲ್ಲ? ಎಂದು ಓಂಪ್ರಕಾಶ್‌ ಜಿಂದಾಲ್‌ಗೆ ಸಲಹೆ ನೀಡಿದಾಗ ಹೇಳಿದ್ದರು-ಸಾವಿರ ಕೋಟಿಗಿಂತ ಕಡಿಮೆ ಬಂಡವಾಳದ ಯಾವ ಉದ್ದಿಮೆಯನ್ನೂ ಆರಂಭಿಸಬಾರದೆಂದು ತೀರ್ಮಾನಿಸಿದ್ದೇನೆ. ಅವರು ಅಂದಂತೆ ನಡೆದುಕೊಂಡರು. ಸ್ಟೀಲ್‌ ಉದ್ಯಮದಲ್ಲಿ ಕೈಹಾಕುವುದು ಸಣ್ಣ ಮಾತಾಗಿರಲಿಲ್ಲ. ಟಾಟಾ ಅವರಂಥ ದಿಗ್ಗಜರಿದ್ದರು. ಆ ದಂಧೆಗೆ ವಿಪರೀತ ಬಂಡವಾಳ, ಪರಿಣತಿ, ಮಾನವ ಸಂಪನ್ಮೂಲ, ಯಂತ್ರಗಾರಿಕೆಗಳ ಅಗತ್ಯವಿತ್ತು. ಟಾಟಾ ಅವರನ್ನು ಎದುರುಹಾಕಿಕೊಂಡು ದಂಧೆ ಮಾಡುವುದು ಸುಲಭದ ಮಾತಾಗಿರಲಿಲ್ಲ. ಆದರೆ ಜಿಂದಾಲ್‌ ಈ ಸಂಗತಿಗಳಿಗೆ ಕಿಮ್ಮತ್ತು ಕೊಡಲಿಲ್ಲ. ತಮಗನಿಸಿದ್ದನ್ನು ಆರಂಭಿಸಲು ಯಾವ ಶಕ್ತಿಗಳು ಅಡ್ಡಬಂದರೂ ಕೇಳುತ್ತಿರಲಿಲ್ಲ. ಸರ್ಕಾರದಿಂದಲೂ ಸಾಧ್ಯವಾಗದಂಥ ಯೋಜನೆಯನ್ನು ಜಿಂದಾಲ್‌ ಆರಂಭಿಸಿದ್ದರೆ ಅವರ ಛಲ, ಹಟವೇ ಕಾರಣ.

1970ರಲ್ಲಿ ಪ್ರಧಾನಿ ಇಂದಿರಾಗಾಂಧಿ ತೋರಣಗಲ್ಲಿಗೆ ಬಂದು ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಸ್ಥಾಪನೆಗೆ ಅಡಿಗಲ್ಲು ಹಾಕಿದರು. ವಿಜಯನಗರ ಸ್ಟೀಲ್‌ ಲಿಮಿಟೆಡ್‌ ಎಂಬ ಕಂಪನಿ ಸ್ಥಾಪಿಸಲಾಯಿತು. ಒಬ್ಬ ಜನರಲ್‌ ಮ್ಯಾನೇಜರ್‌ ಸಹ ನೇಮಕಗೊಂಡ. ಇದಕ್ಕಾಗಿ ಜಾಗವನ್ನು ಸಹ ಗುರುತಿಸಲಾಯಿತು. ಅಡಿಗಲ್ಲು ಹಾಕಿ 25 ವರ್ಷಗಳಾದರೂ ಏನೇನೂ ಆಗಲಿಲ್ಲ. ಕೊನೆಗೆ ಜಿಂದಾಲ್‌ ಮನಸ್ಸು ಮಾಡಿದರು. ವಿಜಯನಗರ ಸ್ಟೀಲ್‌ ಲಿಮಿಟೆಡ್‌ಗೆ ನೀಡಿದ ಜಾಗದಲ್ಲೇ ಜಿಂದಾಲ್‌ ಸ್ಟೀಲ್‌ ಕಾರ್ಖಾನೆ ತಲೆಯೆತ್ತಿತು. ಕಳೆದ ಹತ್ತು ವರ್ಷಗಳಿಂದ ತೋರಣಗಲ್ಲಿನ ಜಿಂದಾಲ್‌ ಕಾರ್ಖಾನೆ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದು ವರ್ಷದಿಂದ ವರ್ಷಕ್ಕೆ ತನ್ನ ದಾಖಲೆಗಳನ್ನೇ ಮುರಿಯುತ್ತಾ ಮುನ್ನಡೆಯುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ ನಲವತ್ತು ಲಕ್ಷ ಟನ್‌ ಸ್ಟೀಲನ್ನು ಉತ್ಪಾದಿಸುವ ಗುರಿ ಹೊಂದಿದೆ.

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲ ಆಗಬಹುದೆಂಬುದಕ್ಕೆ ಜಿಂದಾಲ್‌ ನಿದರ್ಶನ. ದೇಶದ ಹದಿಮೂರನೇ ಹಾಗೂ ವಿಶ್ವದ 548ನೇ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಫೋರ್ಬ್ಸ್‌ ವರದಿಯಲ್ಲಿ ದಾಖಲಾಗಿರುವ ಜಿಂದಾಲ್‌, ಗೋಡೆಗಳಿರುವೆಡೆ ಬಾಗಿಲನ್ನು ಮಾಡಿಕೊಂಡವರು. ಕಂದಕಗಳಿರುವೆಡೆ ಸೇತುವೆಗಳನ್ನು ನಿರ್ಮಿಸಿದವರು. ಅಸಾಧ್ಯವೆನಿಸುವ ಸವಾಲುಗಳನ್ನು ಸುಲಭಸಾಧ್ಯವಾಗಿಸಿದವರು. ನಿಜ ಅರ್ಥದಲ್ಲಿ ಅವರು ಉಕ್ಕಿನ ಮನುಷ್ಯ. ಹಾಗೇ ಬದುಕಿದರು. ಹಿಸ್ಸಾರ್‌, ಕೋಸಿಕಲನ್‌, ತಿನ್‌ಸುಖಿಯಾ, ಮುಂಡ್ರಾ, ದೊಂಮಹುವಾ, ರಾಯಗಢ, ತೆನ್ಸಾ, ದುಬ್ರಿ ರಾಯಪುರ, ವಿಶಾಖಪಟ್ಟಣ, ತಾರಾಪುರ, ನಾಸಿಕ್‌, ವಾಸಿಂದ, ಗೋವಾ, ಸೇಲಂ ಹಾಗೂ ತೋರಣಗಲ್ಲಿನಲ್ಲಿ ಜಿಂದಾಲ್‌ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆಗಳಿವೆ. ನಮ್ಮ ದೇಶದ ನಾಲ್ಕನೇ ಅತಿದೊಡ್ಡ ಸಂಸ್ಥೆಯೆಂಬ ಅಗ್ಗಳಿಕೆ. ಇಂದು ಜಿಂದಾಲ್‌ ಇದೊಂದೇ ಅಲ್ಲ ಚಹ, ಪೇಂಟ್‌(ಶಾಲಿಮಾರ್‌) ಉದ್ಯಮದಲ್ಲೂ ತೊಡಗಿಸಿಕೊಂಡಿದೆ.

ಜಿಂದಾಲ್‌ ಕೇವಲ ಉದ್ಯಮಪತಿಯಾಗಿಯಷ್ಟೇ ಉಳಿಯಲಿಲ್ಲ. ಜನಪ್ರತಿನಿಧಿಯೂ ಆದರು. ಒಂದು ಸಲ ಲೋಕಸಭೆಗೆ ಹಾಗೂ ನಾಲ್ಕು ಸಲ ಹರ್ಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. ಹಿಂದಿನ ವರ್ಷದ ಮಾರ್ಚ್‌ 31ರಂದು ಹೆಲಿಕಾಪ್ಟರ್‌ ದುರುಂತದಲ್ಲಿ ನಿಧನರಾಗುವಾಗ ಅವರು ಹರ್ಯಾಣದ ಇಂಧನ ಸಚಿವರಾಗಿದ್ದರು. ಓಂಪ್ರಕಾಶ್‌ ಉದ್ಯಮ ಸಾಮ್ರಾಜ್ಯವನ್ನು ಪುತ್ರರಾದ ಪೃಥ್ವಿರಾಜ್‌, ಸಜ್ಜನ್‌, ರತನ್‌ ಮತ್ತು ನವೀನ್‌ ಜಿಂದಾಲ್‌ ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಓಂಪ್ರಕಾಶ್‌ ಜಿಂದಾಲ್‌ ಆತ್ಮಕಥೆಯನ್ನು ಖ್ಯಾತ ಪತ್ರಕರ್ತ ಅನಿಲ್‌ ಧಾರ್ಕರ್‌ ಬರೆದಿದ್ದಾರೆ. ಅದರ ಶೀರ್ಷಿಕೆ - The man who talked to machines - ಅವರ ಇಡೀ ವ್ಯಕ್ತಿತ್ವ ಹೇಳುತ್ತದೆ. ಮೊನ್ನೆ ತೋರಣಗಲ್ಲಿನ ಜಿಂದಾಲ್‌ ಕಾರ್ಖಾನೆ ಮುಂದೆ ನಿಂತಾಗ ಮನುಷ್ಯನ ಕನಸುಗಳ ಮುಂದೆ ಮನುಷ್ಯ ಅದೆಷ್ಟು ಸಣ್ಣವ ಅನಿಸಿತು.

ಜಿಂದಾಲ್‌ ಜಿಂದಾಬಾದ್‌!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X