• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ ಬರೀ ಷೋಕಿಲಾಲನಾಗಿದ್ದರೆ, ಇಂಥ ಸಾಮ್ರಾಜ್ಯ ಕಟ್ಟಲಾಗುತ್ತಿತ್ತಾ?

By Staff
|

ಆತ ಬರೀ ಷೋಕಿಲಾಲನಾಗಿದ್ದರೆ, ಇಂಥ ಸಾಮ್ರಾಜ್ಯ ಕಟ್ಟಲಾಗುತ್ತಿತ್ತಾ?

ಹೆಸರಾಂತ ಉದ್ಯಮಿ ವಿಜಯ ಮಲ್ಯ ಅವರನ್ನು ಅನೇಕರು ಅಪಾಪೋಲಿಯೆಂದೇ ಭಾವಿಸಿದ್ದಾರೆ. ಆದರೆ ಅವರ ಇನ್ನೊಂದು ಮುಖ ಬಹುಮಂದಿಗೆ ಗೊತ್ತಿಲ್ಲ. ತಾಯ್ನಾಡಾದ ಭಾರತದ ಬಗ್ಗೆ ಅವರಲ್ಲಿ ಎಂತಹ ಭಾವನೆಗಳಿವೆ ಗೊತ್ತೆ?

Vishweshwar Bhat ವಿಶ್ವೇಶ್ವರ ಭಟ್‌
ಅಂದು ಅವರು ಆವೇಶದಿಂದ ಮಾತನಾಡುತ್ತಿದ್ದರೆ ಕುತೂಹಲದ ಕಿವಿಗಳು ಗಲ್ಲಕ್ಕೆ ಕೈ ಹಚ್ಚಿ ಕೇಳುತ್ತಿದ್ದವು. ನಾವು ಅಂದುಕೊಂಡ ಅವರು ಇವರೇನಾ ಅನ್ನಿಸಿತು. ಅವರು ಮಾತನಾಡಿದರು-‘ನೀವು ಭಾರತವನ್ನು ಹಾವಾಡಿಗರ, ಮಾಟ-ಮಂತ್ರಗಾರರ ದೇಶವೆಂದೇ ಭಾವಿಸಿದ್ದೀರಿ. ನಿಮ್ಮ ದೃಷ್ಟಿಯಲ್ಲಿ ಭಾರತ ಬಡದೇಶ. ಅಸ್ಪಶ್ಯತೆ, ರೋಗ-ರುಜಿನ, ಅನಕ್ಷರತೆಯಿರುವ ದೇಶ. ಎರಡು ಹೊತ್ತು ಊಟಕ್ಕೆ ಗತಿಯಿಲ್ಲದವರು ಕೋಟ್ಯಂತರ ಜನರಿದ್ದಾರೆಂದು ನೀವು ಭಾವಿಸಿದ್ದಿರಬಹುದು. ಅಮೆರಿಕದಲ್ಲಿ ಕೆಲವರು ಭಾರತದ ಹೆಸರನ್ನೂ ಕೇಳಿಲ್ಲ. ಭಾರತದ ಬಗ್ಗೆ ಕೇಳಿದವರೆಲ್ಲ ನಕಾರಾತ್ಮಕ ಸಂಗತಿಗಳಿಂದಲೇ ಗುರುತಿಸುತ್ತಾರೆ. ನಮ್ಮ ದೇಶದ ಬಗ್ಗೆ ಹೀಗೆ ಲಘುವಾಗಿ ಮಾತನಾಡುವವರ ಮಾತುಗಳನ್ನು ಕೇಳಿ ನೀವೂ ಭಾರತದ ಕುರಿತು ಕೆಟ್ಟ ಅಭಿಪ್ರಾಯಗಳನ್ನು ಹೊಂದಿರಬಹುದು’.

‘ಆದರೆ ನೀವು ಅಂದು ಕೊಂಡಂತೆ ಭಾರತ ಇಲ್ಲ. ಭಾರತ ಯಾವ ಸಂದರ್ಭದಲ್ಲೂ ಬಡರಾಷ್ಟ್ರವಾಗಿರಲಿಲ್ಲ. ಸಾವಿರ ವರ್ಷಗಳ ಹಿಂದೆಯೂ ಅತ್ಯಂತ ಶ್ರೀಮಂತವಾಗಿತ್ತು. ಹಣ, ಜ್ಞಾನ, ಸಂಸ್ಕೃತಿಯಲ್ಲಿ ನಾವು ಯಾವತ್ತೂ ಶ್ರೀಮಂತವಾಗಿದ್ದೇವೆ. ಭಾರತದ ಮೇಲೆ ಅಲೆಗ್ಸಾಂಡರ್‌ ದಾಳಿ ಮಾಡಿದ್ದೇಕೆ? ಬ್ರಿಟಿಷರು ಬಂದಿದ್ದೇಕೆ?

Vijay Mallyaಪೋರ್ಚುಗೀಸರಿಗೇಕೆ ನಮ್ಮ ದೇಶದ ಮೇಲೆ ಆಸೆ ಬಂತು? ಬಡದೇಶವಾಗಿದ್ದರೆ ಅವರು ಬರುತ್ತಿದ್ದರಾ? ರೋಗಿಷ್ಠರು, ಹಾವಾಡಿಗರು, ಮಾಟ-ಮಂತ್ರಗಾರರ ನಾಡಾಗಿದ್ದರೆ ಅವರೆಲ್ಲ ಇಲ್ಲಿಗೆ ಬರಲು ಧೈರ್ಯ ಮಾಡುತ್ತಿದ್ದರಾ? ಭಾರತದಲ್ಲಿ ಹಣ ಹಾಗೂ ಜ್ಞಾನ ಸಮೃದ್ಧಿಯಿವೆಯೆಂಬ ಕಾರಣಕ್ಕೆ ಮಾತ್ರ ಅವರೆಲ್ಲ ಬಂದರು. ನಾವು ಹೋರಾಟ ಮಾಡಿ ಹೊರಗಟ್ಟುವತನಕ ಇಲ್ಲಿಯೇ ಉಳಿದರು. ಅವರಿಗೆಲ್ಲ ಗೊತ್ತಿತ್ತು ಭಾರತ ಅತ್ಯಂತ ಶ್ರೀಮಂತ ದೇಶವೆಂದು’.

ಚಪ್ಪಾಳೆ...ಚಪ್ಪಾಳೆ...

ಹೌದು, ನಮ್ಮ ದೇಶ ಬಹಳ ಶ್ರೀಮಂತ ದೇಶ. ವಿಶ್ವದಲ್ಲಿಯೇ ನಾಲ್ಕನೆಯ ಅತ್ಯಂತ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ದೇಶವೆಂದರೆ ಭಾರತ. ನಮ್ಮ ದೇಶ ಎಲ್ಲ ರಂಗಗಳಲ್ಲೂ ಅಸಾಧಾರಣ ಪ್ರಗತಿ ಸಾಧಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಐಟಿ, ಬಿಟಿ, ಕೃಷಿ ಹೀಗೆ ಅನೇಕ ಕ್ಷೇತ್ರಗಳಲ್ಲಿನ ಭಾರತದ ಪ್ರಗತಿ ಸರಿ ಸಾಟಿಯಿಲ್ಲದ್ದು. ನಿಮಗ್ಯಾರಿಗೂ ಗೊತ್ತಿಲ್ಲದ ಯುವ, ಬಲಿಷ್ಠಶಾಲಿ ಭಾರತ ತಲೆಯೆತ್ತಿ ನಿಂತಿದೆ. ಹತ್ತೊಂಬತ್ತನೆ ಶತಮಾನ ಯುರೋಪಿನದ್ದಾಗಿತ್ತು. ಇಪ್ಪತ್ತನೆಯದು ಅಮೆರಿಕದ್ದಾಗಿತ್ತು. ಇಪ್ಪತ್ತೊಂದನೆಯ ಶತಮಾನ ಭಾರತದ್ದು.

ಚಪ್ಪಾಳೆ...ಚಪ್ಪಾಳೆ...ಚಪ್ಪಾಳೆ...

‘ಹಾಗೆಂದು ಭಾರತದಲ್ಲಿ ಸಮಸ್ಯೆಗಳಿಲ್ಲ ಎಂದಲ್ಲ. ಸಮಸ್ಯೆಗಳಿವೆ. ಭ್ರಷ್ಟಾಚಾರವಿದೆ, ದಾರಿದ್ರ್ಯವಿದೆ. ಇನ್ನೂ ಅನೇಕ ಸಮಸ್ಯೆಗಳಿವೆ. ಆದರೆ ಇವೆಲ್ಲವನ್ನು ಹೊಂದಿಯೂ ಬೇರಾವ ದೇಶವೂ ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ. ಚೀನಾ ನಮಗಿಂತ ವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದಿದೆ. ಅಲ್ಲಿ ಎಲ್ಲ ವಿರೋಧಗಳ ನಡುವೆಯೂ ಕಾನೂನು ಜಾರಿಯಾಗುತ್ತದೆ. ಅಲ್ಲಿ ವಿರೋಧಕ್ಕೆ ಬೆಲೆಯಿಲ್ಲ. ನಮ್ಮ ದೇಶದಲ್ಲಿ ಹಾಗಲ್ಲ, ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಎಲ್ಲರ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕಾಗುತ್ತದೆ. ಎಲ್ಲವೂ ಸರ್ವಸಮ್ಮತ ನಿರ್ಧಾರದ ಮೂಲಕವೇ ತೀರ್ಮಾನವಾಗಬೇಕು. ಹೀಗಾಗಿ ನಮ್ಮಲ್ಲಿ ಆಡಳಿತಶಾಹಿ ತುಸು ನಿಧಾನ. ಆದರೆ ಇಂದು ಭಾರತ ಎಲ್ಲ ಕ್ಷೇತ್ರಗಳಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿಯಾಡ್ಡುವ ಸಾಮರ್ಥ್ಯ ಹೊಂದಿದೆ. ನೆನಪಿರಲಿ, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ನಾವು ಭಾರತೀಯರು ಯಾರಿಗೂ ಕಡಿಮೆ ಇಲ್ಲ, ಯಾವುದರಲ್ಲೂ ಕಡಿಮೆ ಇಲ್ಲ’.

ಜೋರು ಚಪ್ಪಾಳೆ!

ಅಂದು ಡಾ.ವಿಜಯ ಮಲ್ಯ ಉಮೇದಿಯಿಂದ ಮಾತಾಡುತ್ತಿದ್ದರು. ಪ್ಯಾರಿಸ್‌ನ ಏರ್‌ಬಸ್‌ ಕಾರ್ಖಾನೆಯಲ್ಲಿ ಮೊದಲ ಎಟಿಆರ್‌ ಸಣ್ಣ ವಿಮಾನ ಸ್ವೀಕರಿಸಿ, ಭಾರತದ ರಾಯಭಾರಿಯಂತೆ ದೇಶದ ಸ್ಥಿತಿ-ಗತಿಯ ಸಕಾರಾತ್ಮಕ ಚಿತ್ರಣ ಮೂಡಿಸುತ್ತಿದ್ದರೆ ನಾವು ಅಂದುಕೊಂಡ, ಕಲ್ಪಿಸಿಕೊಂಡ ಮಲ್ಯ ಇವರೇನಾ ಎಂದು ಕ್ಷಣಕ್ಷಣಕ್ಕೂ ಅನ್ನಿಸುತ್ತಿತ್ತು. ಕೆಲ ವರ್ಷಗಳ ಹಿಂದೆ ಸದರ್ನ್‌ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ವಿಜಯ ಮಲ್ಯಗೆ ಗೌರವ ಡಾಕ್ಟರೇಟ್‌ ಪದವಿ ನೀಡಿದಾಗ ನಾವೆಲ್ಲ ಜೋಕು ಮಾಡಿ ಅವರನ್ನು ಆಡಿಕೊಂಡಿದ್ದೆವು.

ರಾತ್ರಿಯೆಲ್ಲ ನಿದ್ದೆ ಬಾರದ ವ್ಯಕ್ತಿ ಎಷ್ಟೋ ವೈದ್ಯರನ್ನು ಕಂಡು, ಔಷಧ ಕುಡಿದರೂ ಕಾಯಿಲೆ ವಾಸಿಯಾಗದಿದ್ದಾಗ, ಕೊನೆಗೆ ವೈದ್ಯರ ಸಲಹೆಯಂತೆ ಗುಂಡು ಸೇವಿಸಲಾರಂಭಿಸಿದ. ಕಾಯಿಲೆ ವಾಸಿಯಾಗದಿದ್ದಾಗ, ಕೊನೆಗೆ ವೈದ್ಯರ ಸಲಹೆಯಂತೆ ಗುಂಡು ಸೇವಿಸಲಾರಂಭಿಸಿದೆ. ಕಾಯಿಲೆ ವಾಸಿಯಾಯಿತು. ಯಾರು ಈ ಕಾಯಿಲೆ ಗುಣಪಡಿಸಿದ ಡಾಕ್ಟ್ರು ಅಂದ್ರೆ ‘ಡಾ.’ ವಿಜಯ ಮಲ್ಯ ಅಂತ ನಕ್ಕಿದ್ದೆವು.

ವಿಜಯ ಮಲ್ಯ ಅಂದ್ರೆ ನಮ್ಮ ಕಣ್ಣ ಮುಂದೆ ಬರುವ ವ್ಯಕ್ತಿಯೇ ಬೇರೆ. ಹೆಂಡದ ದೊರೆ, ಷೋಕಿ ಲಾಲ, ಪ್ಲೇಬಾಯ್‌, ವಿಲಾಸಿ, ಸ್ತ್ರೀ ವ್ಯಾಮೋಹಿ, ಸದಾ ಮಜಾ ಉಡಾಯಿಸುವವನು, ವಿದೇಶಗಳಲ್ಲಿ ಶ್ರೀಮಂತಿಕೆಯ ಜೀವನ ನಡೆಸುವ ಲೋಲುಪಿ... ಹೀಗೆ ಏನೇನೋ... ಹೀಗೆ ಇನ್ನೂ ಇತ್ಯಾದಿ. ಈ ಸಕಲ ಗುಣಗಳಿಗೆ ಒಬ್ಬ ಪೋಸ್ಟರ್‌ ಬಾಯ್‌ ಬೇಕಾದರೆ ಮಲ್ಯನೇ ವಾಸಿ ಎಂಬ ತೀರ್ಮಾನಕ್ಕೆ ಬರುತ್ತೇವೆ.

ಡಾ. ಸುಬ್ರಮಣ್ಯನ್‌ ಸ್ವಾಮಿಯಿಂದ ಖರೀದಿಸಿ ತಂದ ಜನತಾ ಪಾರ್ಟಿಯನ್ನು ಚುನಾವಣೆಗೆ ನಿಲ್ಲಿಸಿ, ‘ಯುವಕರೇ ಏಳಿ, ಎದ್ದೇಲಿ’ ಎಂದು ಟಿಪ್ಪು ಖಡ್ಗ ತೋರಿಸಿ ಮಲ್ಯ ಭಾಷಣ ಮಾಡಿದಾಗಲೂ ನಾವೆಲ್ಲ ಅವರನ್ನು ಅಂದುಕೊಂಡು ಬಿದ್ದು ಬಿದ್ದು ನಕ್ಕಿದ್ದೆವು. ವಿಜಯ ಮಲ್ಯ ಅಂದ್ರೆ ಸಾಕು, ಸುಂದರ ಹುಡುಗಿಯರನ್ನು ಅಕ್ಕಪಕ್ಕ ಇಟ್ಟುಕೊಂಡು ಲಲ್ಲೆ ಗರೆಯುವ, ಕ್ಯಾಲೆಂಡರ್‌ ಹುಡುಗಿಯರ ಜತೆ ಅರ್ಧನಗ್ನೇಶ್ವರನಾಗುವ, ಜೂಜು ಕುದುರೆಗಳ ಬಾಲದ ಚುಂಗು ಹಿಡಿಯುವ ಶುದ್ಧ ಅಪಾಪೋಲಿಯೆಂದು ಅನೇಕರು ಭಾವಿಸಿರಲಿಕ್ಕೂ ಸಾಕು. ಹಾಗೆಂದು ಭಾವಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಕಾರಣ ಹಾಗೆ ಭಾವಿಸಲು ಮಲ್ಯ ಸ್ವತಃ ಸಾಕಷ್ಟು ಅವಕಾಶ ಕಲ್ಪಿಸಿಕೊಡುತ್ತಾರೆ. ಮಲ್ಯ ಅಂದ್ರೆ ಇಷ್ಟೇ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಮಲ್ಯ ಇಷ್ಟೇ ಅಲ್ಲ. ಇಷ್ಟೇ ಆಗಿದ್ದರೆ ಅವರ ಬಗ್ಗೆ ಬರೆಯುವ ಅಗತ್ಯವೇ ಇರಲಿಲ್ಲ.

ಆದರೆ ಇದೇ ಮಲ್ಯ ಇಂದು ಇಡೀ ದೇಶವೇ ಹೆಮ್ಮೆ ಪಡುವಂಥ ಉದ್ಯಮಿಯಾಗಿ ಬೆಳೆದಿದ್ದಾರೆ. ನಾವೆಲ್ಲ ಅಭಿಮಾನಪಡುವ ಕನ್ನಡಿಗರಾಗಿ ಬೆಳೆದಿದ್ದಾರೆ. ನಾವೆಲ್ಲ ಅಭಿಮಾನಪಡುವ ಕನ್ನಡಿಗರಾಗಿ ಬೆಳೆದಿದ್ದಾರೆ. ಅವರು ಹಾಗಾಗಿದ್ದು ಹೇಗೆ?

1983ರಲ್ಲಿ ತಂದೆ ವಿಠಲ ಮಲ್ಯರಿಂದ ಜವಾಬ್ದಾರಿಯನ್ನು ವಹಿಸಿಕೊಂಡಾಗ ಯುಬಿ ಅಂದ್ರೆ ಯುನೈಟೆಡ್‌ ಬ್ರುಯರೀಸ್‌ ಅಂದ್ರೆ ಕಿಂಗ್‌ಫಿಶರ್‌ ಬ್ರ್ಯಾಂಡ್‌ನ ಬಿಯರ್‌ ತಯಾರಿಕಾ ಕಂಪನಿ ಮಾತ್ರ ಆಗಿತ್ತು. ತಮ್ಮ ಕಂಪನಿ ಇಷ್ಟಕ್ಕೇ ಸೀಮಿತವಾಗಬಾರದೆಂಬುದು ಅವರ ಹಂಬಲವಾಗಿತ್ತು. ವಿಶ್ವದ ಪ್ರಮುಖ ದೇಶಗಳಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಅವರು ಬಯಸಿದರು.

ತಮ್ಮ ಸಂಸ್ಥೆಯಲ್ಲಿ ಹೊಸ ಕಾರ್ಮಿಕ ನೀತಿ ಬರೆದರು. ಪ್ರತಿ ವಿಭಾಗದಲ್ಲೂ ವೃತ್ತಿಪರತೆ, ಉತ್ತರದಾಯಿತ್ವ ಪ್ರತಿಪಾದಿಸಿದರು. 1988ರಲ್ಲಿ ಮಲ್ಯ ಅನಿವಾಸಿ ಭಾರತೀಯರಾದರು. ಆ ಮೂಲಕ ಯುಬಿ ಭಾರತದ ಪ್ರಪ್ರಥಮ ಬಹುರಾಷ್ಟ್ರೀಯ ಕಂಪನಿಯಾಯಿತು. ವಿದೇಶಿ ಕಂಪನಿಗಳನ್ನು ಖರೀದಿಸುವುದು ಅವರ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೆಂದರೆ ಬರ್ಜರ್‌ ಪೇಂಟ್ಸ್‌ ಕಂಪನಿಯನ್ನು ಖರೀದಿಸಿದ್ದು. ಲಂಡನ್‌, ಸಿಂಗಾಪುರ, ನೈರೋಬಿ, ಜಮೈಕಾ ಹಾಗೂ ಅಬೀದ್‌ಜಾನ್‌ಗಳಲ್ಲಿ ಷೇರು ಮಾರುಕಟ್ಟೆಗೆ (ಐಪಿಓ) ಹೋದರು. ಹನ್ನೆರಡು ದೇಶಗಳಲ್ಲಿ ಬರ್ಜರ್‌ ಪೇಂಟ್ಸ್‌ ಉತ್ಪನ್ನಗಳು ಮಾರುಕಟ್ಟೆ ಲೀಡರ್‌ ಎನಿಸಿದವು. 1993ರಲ್ಲಿ ಮಲ್ಯ ಅಮೆರಿಕದಲ್ಲಿ ಸಾಫ್ಟ್‌ವೇರ್‌ ಕಂಪನಿ ತೆರೆದರು. ಕೇವಲ ಮೂರೇ ವರ್ಷಗಳಲ್ಲಿ ಈ ಕಂಪನಿ ನಾಸ್ಡಾಕ್‌ ಪಟ್ಟಿಗೆ ಸೇರಿತು.

1990ರಲ್ಲಿ ಭಾರತ ಸರಕಾರ ಉದಾರ ಆರ್ಥಿಕ ನೀತಿಯನ್ನು ಪ್ರಕಟಿಸಿದಾಗ ಹಲವು ಹತ್ತು ಸ್ತರಗಳಲ್ಲಿ ವ್ಯಾಪಾರವನ್ನು ಮಲ್ಯ ವಿಸ್ತರಿಸಿದರು. ಕಂಪನಿಯ ಹೆಸರನ್ನು ‘ಯುಬಿ’ ಎಂದು ಬದಲಿಸಿದರು. ಯುಬಿ ಕೇವಲ ಯುನೈಟೆಡ್‌ ಬ್ರುಯರೀಸ್‌ಗೆ ಮಾತ್ರ ಸೀಮಿತವಾಗದಂತೆ ಇದೇ ಹೆಸರಿನಲ್ಲಿ ಹೆಲವು ಉದ್ಯಮಗಳನ್ನು ಆರಂಭಿಸಿದರು.

‘ಮಂಗಳಾ’ ಹೆಸರಿನ ರಸಗೊಬ್ಬರ ಉತ್ಪಾದಿಸುವ ಮಂಗಳೂರು ಕೆಮಿಕಲ್ಸ್‌ ಆ್ಯಂಡ್‌ ಫರ್ಟಿಲೈಸರ್ಸ್‌ ಲಿಮಿಟೆಡ್‌(ಎಂಸಿಎಫ್‌)ನ್ನು ಖರೀದಿಸಿ ಮಲ್ಯ ಕೇವಲ ಎರಡೇ ವರ್ಷಗಳಲ್ಲಿ ಲಾಭದಾಯಕ ಘಟಕವಾಗಿ ಪರಿವರ್ತಿಸಿದರು. ಮಲ್ಯ ಅವರ ಮಹತ್ವದ ಸಾಧನೆಯೆಂದರೆ ಯುಬಿ ಎಂಜಿನಿಯರಿಂಗ್‌. ಪೂಣಾದಲ್ಲಿರುವ ಈ ಸಂಸ್ಥೆ ಬೃಹತ್‌ ಕೈಗಾರಿಕ ಸ್ಥಾವರಗಳನ್ನು ಸ್ಥಾಪಿಸುವುದರಲ್ಲಿ ಮುಂಚೂಣಿಯಲ್ಲಿದೆ. ವಿದ್ಯುತ್‌, ಅನಿಲ, ತೈಲ ಘಟಕಗಳನ್ನು ಸ್ಥಾಪಿಸುವುದರಲ್ಲಿ ಅಮೋಘ ಪರಿಣತಿ ಹೊಂದಿದೆ.

ಮಲ್ಯ ನಿಜ ಅರ್ಥದಲ್ಲಿ ‘ಹೆಂಡದ ದೊರೆ’. ಮದ್ಯ ಉತ್ಪಾದನೆಯಲ್ಲಿ ಮಲ್ಯಗೆ ಜಾಗತಿಕ ಮಟ್ಟದಲ್ಲಿ ಮೂರನೆ ಸ್ಥಾನ. ಕಿಂಗ್‌ಫಿಶರ್‌ ಬಿಯರ್‌ ಇಂದು 55 ದೇಶಗಳಲ್ಲಿ ಮಾರಾಟವಾಗುತ್ತಿದೆ. ಭಾರತದ ಮತ್ತ್ಯಾವ ಬ್ರ್ಯಾಂಡ್‌ ಕೂಡ ವಿದೇಶಗಳಲ್ಲಿ ಇಷ್ಟೊಂದು ವ್ಯಾಪಿಸಿದ ನಿದರ್ಶನ ಸಿಗುತ್ತಿಲ್ಲ. ಬಿಯರ್‌ ಮಾರುಕಟ್ಟೆಯಲ್ಲಿ ಕಿಂಗ್‌ಫಿಶರ್‌ ನಿಜವಾದ ಕಿಂಗ್‌. ಭಾರತದಲ್ಲಿ ಮಾರಾಟವಾಗುವ ಪ್ರತಿ ಮೂರು ಬಿಯರ್‌ ಬಾಟಲಿಗಳಲ್ಲಿ ಎರಡು ಕಿಂಗ್‌ಫಿಶರ್‌! ದೇಶಾದ್ಯಂತ 11ಸ್ವಂತ ಹಾಗೂ 15 ಗುತ್ತಿಗೆ ಬಿಯರ್‌ ತಯಾರಿಕಾ ಘಟಕಗಳನ್ನು ಹೊಂದಿರುವ ಕಿಂಗ್‌ಫಿಶರ್‌, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂ. 1 ಸ್ಥಾನ ಗಳಿಸುವ ದಿನಗಳು ದೂರವಿಲ್ಲ.

ಮೆಕ್‌ಡವೆಲ್‌, ಹರ್ಬರ್ಟ್ಸ್‌ನ್‌, ಟ್ರಿಂಪ್‌ಡಿಸ್ಟಿಲರ್ಸ್‌ - ವಿಂಟನರ್ಸ್‌ ಹಾಗೂ ಶಾ ವಾಲೇಸ್‌ ಕಂಪನಿಗಳನ್ನು ಖರೀದಿಸಿದ್ದು ದೇಶದಲ್ಲಿ ಮದ್ಯ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನಲ್ಲಿ ಮಲ್ಯ ಇಟ್ಟ ದಾಪುಗಾಲು. ದೇಶದ ಮದ್ಯ ಮಾರುಕಟ್ಟೆಯಲ್ಲಿ ಮಲ್ಯ ಅವರ ಪಾಲು ಶೇ. 52ರಷ್ಟು. ಹಿಂದಿನ ವರ್ಷ ಈ ಕಂಪನಿಗಳು ವಿವಿಧ ಬ್ರ್ಯಾಂಡ್‌ಗಳ 56ದಶಲಕ್ಷ ಕೇಸ್‌(ಒಂದು ಕೇಸ್‌ ಅಂದ್ರೆ ಒಂಬತ್ತು ಲೀಟರ್‌) ದಾಖಲೆ ಮದ್ಯ ಮಾರಾಟ ಮಾಡಿತು. ಈ ನಾಲ್ಕೂ ಕಂಪನಿಗಳನ್ನು ಸೇರಿಸಿ ‘ಯುಬಿ ಸ್ಪಿರಿಟ್ಸ್‌ ಲಿಮಿಟೆಡ್‌’ ಎಂಬ ಒಂದೇ ಕಂಪನಿ ಹುಟ್ಟುಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಬಿಯರ್‌, ವ್ಹಿಸ್ಕಿ, ರಮ್‌, ಬ್ರಾಂದಿ ಹೀಗೆ ಎಲ್ಲ ರೀತಿಯ ಮದ್ಯ ತಯಾರಿಕೆಯಲ್ಲೂ ಕೈಹಾಕಿರುವ ಮಲ್ಯ ಅವರನ್ನು ಸದ್ಯಕ್ಕೆ ಯಾರೂ ‘ಔಟ್‌’ ಮಾಡಲಾರರು. ಈಗಾಗಲೇ ಅವರು ‘ನೈಂಟಿ’ ಮೈಲಿ ವೇಗದಲ್ಲಿ ಹೋಗುತ್ತಿದ್ದಾರೆ. ಅಮೆರಿಕ, ಯುರೋಪ್‌, ಆಫ್ರಿಕಾ ಮುಂತಾದೆಡೆ ಗಡಂಗುಗಳನ್ನು ಹೊಂದಿರುವ ಮಲ್ಯ ಇನ್ನು ಐದು ವರ್ಷಗಳಲ್ಲಿ ಎಲ್ಲರನ್ನೂ ಮೀರಿಸುವ ‘ಗುಂಡು’ ಗಲಿಯಾದರೆ ಅಚ್ಚರಿಯೇನಿಲ್ಲ.

ಮಲ್ಯ ಅವರ ಕುದುರೆ ನಿಜ ಅರ್ಥದಲ್ಲಿ ಹಾರಲಾರಂಭಿಸಿದ್ದು ಹಿಂದಿನ ವರ್ಷದಿಂದ. ಮಲ್ಯ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಆರಂಭಿಸಿದರು. ಹತ್ತು ಹೊಸ ಏರ್‌ಬಸ್‌ಗಳನ್ನು ಖರೀದಿಸಿದರು. ಪ್ರತಿದಿನ ದೇಶಾದ್ಯಂತ 15 ನಗರಗಳನ್ನು ಸಂಪರ್ಕಿಸುವ, 70ಸಲ ಹಾರಾಟ ಮಾಡುವ ಈ ಏರ್‌ಲೈನ್ಸ್‌, ಸುರಕ್ಷಿತ ಯಾನ, ಮನರಂಜನೆ, ಉತ್ತಮ ಸೇವೆಯಾಗಿ ಈಗಾಗಲೇ ಪ್ರಯಾಣಿಕರನ್ನು ಆಕರ್ಷಿಸಿ, ಒಂದೇ ವರ್ಷದಲ್ಲಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. 2012ರ ಹೊತ್ತಿಗೆ ಇನ್ನೂ 45ದೊಡ್ಡ ವಿಮಾನ ಹಾಗೂ 35 ಸಣ್ಣ ವಿಮಾನಗಳನ್ನು ಖರೀದಿಸಿ ದೇಶದ ಆಕಾಶವನ್ನೂ ಆಕ್ರಮಿಸುವ ಆಲೋಚನೆ ಹೊಂದಿದೆ.

ಬಿಯರ್‌ನಿಂದ ಉದ್ಯಮ ಆರಂಭಿಸಿದ ಮಲ್ಯ, ಔಷಧ, ರಸಗೊಬ್ಬರ, ಪೇಂಟ್ಸ್‌, ಪೆಟ್ರೊ ಕೆಮಿಕಲ್ಸ್‌, ಪ್ಲಾಸ್ಟಿಕ್‌, ಎಲೆಕ್ಟ್ರೋ-ಮೆಕ್ಯಾಫಾಸ್ಟ್‌ಫುಡ್‌, ಪಿಜ್ಜಾ, ಏರ್‌ಲೈನ್ಸ್‌, 140ಬ್ರ್ಯಾಂಡ್‌ಗಳ ಮದ್ಯಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಈಗ ಹೇಳಿ, ಬರಿ ಷೋಕಿಲಾಲನಾಗಿದ್ದರೆ, ಪ್ಲೇಬಾಯ್‌ ಆಗಿದ್ದರೆ ಇಷ್ಟೆಲ್ಲ ಸಾಧಿಸಲು ಸಾಧ್ಯವಾಗುತ್ತಿತ್ತಾ? ಜಾಗತಿಕ ಪೈಪೋಟಿ ಎದುರಿಸಿ ಎದ್ದುನಿಲ್ಲಲು ಆಗುತ್ತಿತ್ತಾ? ಕೈ ಹಾಕಿದ ಉದ್ಯಮದಲ್ಲೆಲ್ಲ ನಾಯಕನಾಗಲು ಆಗುತ್ತಿತ್ತಾ?

ಇವೆಲ್ಲ ಒಬ್ಬ ಕನ್ನಡಿಗನ ಸಾಧನೆಯೆಂಬುದನ್ನು ಮರೆಯಬಾರದು.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more