• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿಕಾರವಿದ್ದಾಗ ಬೇರೆ ಭಂಗಿ, ಇಲ್ಲದಿದ್ದಾಗ ಏಕಾಂಗಿ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಇನ್ನೇನು ಸರಕಾರ ಬಿದ್ದುಹೋಗಲಿದೆಯಂತೆ.

ಹಾಗಂತ ಒಂದು ಮಾತು ಗಾಳಿಯಲ್ಲಿ ತೇಲಿಬಂದರೆ ಸಾಕು ಎಲ್ಲವೂ ಕ್ಷಣಾರ್ಧದಲ್ಲಿ ಅದಲು ಬದಲು. ಎಲ್ಲವೂ ಅಡಸಲು ಬಡಸಲು. ಅಧಿಕಾರದ ಸನಿಹದಲ್ಲಿದ್ದವರು ಯಾವ ಕಡೆ ನೀರು ಹರಿಯುತ್ತಿದೆಯೋ ಅದೇ ಇಳಿಜಾರಿನಲ್ಲಿ ಜಾರತೊಡಗುತ್ತಾರೆ. ಅಧಿಕಾರವೆಂಬುದು ಪೆಟ್ಟಿಗೆ ಕಟ್ಟಿಕೊಂಡು ಹೊರಡಲಿದೆಯೆಂಬ ಸುಳಿವು ಸಿಕ್ಕ ತಕ್ಷಣ ಎಲ್ಲರೂ ಅದರ ಹಿಂದೆಯೇ ದೌಡಾಯಿಸುತ್ತಾರೆ. ಇಂದಿನ ರಾಜ್ಯ ರಾಜಕಾರಣವನ್ನೇ ಗಮನಿಸಿ. ಧರ್ಮಸಿಂಗ್‌ ನೇತೃತ್ವದ ಸರಕಾರ ಪತನವಾಗಲಿದೆಯೆಂಬ (ಗಾಳಿ) ಸುದ್ದಿ ಹರಡುತ್ತಿದ್ದಂತೆ ‘ಅನುಗ್ರಹ’ ಬಿಕೋ. ಮನೆ ಮುಂದಿನ ಪೊಲೀಸರು ನಿರಾಳ. ಮನೆಯ ಫೋನು ನಿಶ್ಯಬ್ದ. ಡೈನಿಂಗ್‌ ಟೇಬಲ್‌ನಲ್ಲಿ ಮುಖ್ಯಮಂತ್ರಿ ಏಕಾಂಗಿ. ಸದಾ ತುಂಬಿರುತ್ತಿದ್ದ ಆಳು ಕೂಗಿದರೂ ಬರುವುದಿಲ್ಲ. ಅಧಿಕಾರದ ಅನುಗ್ರಹ ಹೊರಟು ಹೋದರೆ ಮನೆಯೆಲ್ಲ ಖಾಲಿ ಖಾಲಿ. ಬೆಲ್ಲಕ್ಕೆ ಇರುವೆ ಮುತ್ತಿದಂತೆ ಸದಾ ಸುತ್ತುವರಿದಿರುತ್ತಿದ್ದ ವಂದಿ ಮಾಗಧರು, ಭಟ್ಟಂಗಿಗಳು, ಸಹಾಯಕರೆಲ್ಲ ಸರಕಾರ ಬಿದ್ದುಹೋಗಲಿದೆಯೆಂಬ ಒಂದು ಮಾತಿಗೆ ಕ್ಯಾಂಪು ಬದಲಿಸಲು ನಿರ್ಧರಿಸಿರುತ್ತಾರೆ. ಅಧಿಕಾರವೆಂಬ ಮಾಯೆ ಆ ಒಂದು ಕ್ಷಣದಲ್ಲಿ ಅಂಥ ಬದಲಾವಣೆ ಮಾಡಿಬಿಡುತ್ತದೆ. ಆ ಹೊತ್ತಿನಲ್ಲಿ ಜತೆಗಿದ್ದವರು ಈ ಹೊತ್ತಿನಲ್ಲಿ ಇಲ್ಲ. ‘ಆ’ ಇದ್ದದ್ದು ‘ಈ’ ಆಗೋ ಹೊತ್ತಿಗೆ ಎಷ್ಟೆಲ್ಲ ಬದಲಾವಣೆ!

Dharam Singhಒಂದು ಗಾಳಿಸುದ್ದಿಗೆ ಇಷ್ಟೆಲ್ಲ ಬದಲಾವಣೆಯಾದರೆ, ಇನ್ನು ಅಧಿಕಾರವೇ ಹೋಗಿಬಿಟ್ಟರೆ ಎಷ್ಟೆಲ್ಲ ಆಗಬಹುದು ಯೋಚಿಸಿ. ನೋಡನೋಡುತ್ತಿದ್ದಂತೆ ಗೂಟದ ಕಾರು ಹೊರಟುಹೋಗುತ್ತದೆ. ಸದ್ಯದಲ್ಲೇ ಮನೆ ತೆರುವುಗೊಳಿಸಬೇಕಾಗುತ್ತದೆ. ಸರಕಾರಿ ಸೌಲಭ್ಯಗಳೆಲ್ಲ ಕರಗಿಹೋಗುತ್ತದೆ. ಹಾಗೇ ಆಯಾಚಿತವಾಗಿ ಸಿಗುತ್ತಿದ್ದ ಪೊಲೀಸ್‌ ಪೇದೆಯ ಸೆಲ್ಯೂಟೂ. ಇಷ್ಟೆಲ್ಲ ಆಗುವ ಹೊತ್ತಿಗೆ ಅಧಿಕಾರವೆಂಬುದು ಇನ್ನೆಲ್ಲೋ ಹೋಗಿ ಕುಳಿತುಕೊಂಡಿರುತ್ತದೆ. ಕ್ಷಣಮಾತ್ರದಲ್ಲಿ ಪ್ರವಾಹ ಬಂದು ಕೊಚ್ಚಿಕೊಂಡು ಹೋದ ಅನುಭವ. ಒಬ್ಬ ಮಂತ್ರಿ ರಾಜೀನಾಮೆ ಕೊಟ್ಟರೆ, ಮುಖ್ಯಮಂತ್ರಿ ಬದಲಾದರೆ, ಸರಕಾರ ಪತನವಾದರೆ ಏನೆಲ್ಲ ಆಗಬಹುದು, ಎಷ್ಟೆಲ್ಲ ಬದಲಾವಣೆಯಾಗಬಹುದು ನೋಡಿ.

ಅಂದು ದೇವರಾಜ್‌ ಅರಸ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಸಾಯಂಕರದ ಹೊತ್ತಿಗೆ ಅವರ ಮನೆಯ ನಾಯಿಗೂ ತನ್ನ ಧಣಿ ಮುಖ್ಯಮಂತ್ರಿ ಅಲ್ಲ ಎಂಬ ಸಂಗತಿ ಗೊತ್ತಾಗಿತ್ತು. ರಾಜೀನಾಮೆ ಕೊಡುವುದಕ್ಕಿಂತ ಮೊದಲೇ ಅವರ ಅಧಿಕೃತ ನಿವಾಸ ಬಾಲಬ್ರೂಯಿ ಬರಿದಾಗಿತ್ತು. ಸರಕಾರಿ ಕೆಂಪುದೀಪದ ಕಾರು ಹೊರಟುಹೋಗಿತ್ತು. ಸದಾ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು, ಅಧಿಕಾರಿಗಳಿಂದ ಗಿಜಿಗಿಜಿಯೆನ್ನುತ್ತಿದ್ದ ಅವರ ಮನೆ, ಅರಸು ರಾಜೀನಾಮೆ ಕೊಟ್ಟರಂತೆ ಎಂದು ಕೇಳುವ ಹೊತ್ತಿಗೆ ಸಪಾಟಾಗಿ ಖಾಲಿಯಾಗಿತ್ತು. ಗೇಟಿನಲ್ಲಿ ನಿಂತು ಬಾಗಿಲು ತೆರೆಯುತ್ತಿದ್ದ ಪೇದೆಯೂ ಜಾಗ ಖಾಲಿ ಮಾಡಿದ್ದ.

ಸರಕಾರಿ ಅಡುಗೆಭಟ್ಟನೊಬ್ಬನನ್ನು ಬಿಟ್ಟರೆ ಇಡೀ ಮನೆಯೆಲ್ಲ ಬರಿದೋ ಬರಿದು. ಹಾರ, ಶಾಲುಗಳನ್ನು ಜೋಡಿಸಿಡುತ್ತಿದ್ದ ಕೆಲಸಗಾರ ಕೆಲಸವಿಲ್ಲದೇ ಹೊರಟು ಹೋಗಿದ್ದ. ಸದಾ ಬಡಿದುಕೊಳ್ಳುತ್ತಿದ್ದ ಫೋನು ಸುಮ್ಮನೆ ಮಲಗಿತ್ತು. ರಾತ್ರಿಯಾದರೂ ಮನೆಗೆ ಬಾರದ ದೇವರಾಜ ಅರಸರ ಚಿಂತೆಯಲ್ಲಿ ಅವರ ಪತ್ನಿ ಚಿಕ್ಕಮ್ಮಣ್ಣಿ ಕುಳಿತಿದ್ದರು. ಸಾಹೇಬರಿಗೆ ಫೋನ್‌ ಮಾಡಲೆಂದು ಚಿಕ್ಕಮ್ಮಣ್ಣಿ ಎದ್ದರೆ ಷಾಕ್‌. ಫೋನಿಗೆ ಬೀಗ ಹಾಕಲಾಗಿತ್ತು! ಸಹಾಯಕರನ್ನು ಕರೆದರೆ,‘ಫೋನ್‌ ಸಂಪರ್ಕ ಕಡಿದು ಹಾಕುವಂತೆ ಆದೇಶ ಬಂತಂತೆ. ಹೀಗಾಗಿ ಯಾರೊ ಬಂದು ಸಂಪರ್ಕ ಕಡಿದು ಹಾಕಿ ಹೋದರು. ಸಾಹೇಬರ ಕೋಣೆಯಲ್ಲಿದ್ದ ಫೋನಿಗೆ ಬೀಗ ಹಾಕಿದರು’ ಎಂದ. ಚಿಕ್ಕಮ್ಮಣ್ಣಿ ಅಸಹಾಯಕತೆಯಿಂದ ಕುದ್ದು ಹೋದರು. ತಮ್ಮ ಸಹಾಯಕನನ್ನು ಕರೆದು ಫೋನಿಗೆ ಹಾಕಿದ ಬೀಗ ತೆಗೆಯುವಂತೆ ಹೇಳಿದರು.‘ಅಮ್ಮಾವ್ರೆ, ಫೋನಿನ ಬೀಗವನ್ನೂ ತೆಗೆದುಕೊಂಡು ಹೋಗಿದ್ದಾರೆ’ ಎಂದ ಆತ. ತಮ್ಮ ಖಾಸಗಿ ವೈದ್ಯರಿಗೂ ತುರ್ತಾಗಿ ಫೋನ್‌ ಮಾಡಬೇಕೆಂದರೆ ಅದೂ ಸಾಧ್ಯವಾಗಲ್ಲಿಲ್ಲ. ಅಷ್ಟು ಹೊತ್ತು ಮುಖ್ಯಮಂತ್ರಿ ಹೆಂಡತಿಯಾಗಿದ್ದವಳಿಗೆ ಆ ರಾತ್ರಿ ಒಂದು ಫೋನಿಗೆ ತತ್ವಾರವಾಯಿತೆಂದರೆ ಆಕೆಗೆ ಹೇಗಾಗಿರಬೇಡ? ಆದರೆ ಅಧಿಕಾರವೆಂಬುದು ಆಗಲೇ ಹೊರಟು ಬಹಳ ದೂರ ಕ್ರಮಿಸಿಯಾಗಿತ್ತು.

ತಮಿಳುನಾಡಿನ ಪನ್ನೀರಸೆಲ್ವಮ್‌ ಎಂಬಾತನನ್ನು ಅಧಿಕಾರ ಹೇಗೆ ಹುಡುಕಿಕೊಂಡು ಬಂತೆಂಬುದು ಈಗ ಇತಿಹಾಸ. ಆತ ಜಯಲಲಿತಾ ಸಂಪುಟದಲ್ಲಿ ಕಂದಾಯ ಸಚಿವನಾಗಿದ್ದ. ಪೆರಯಾಕುಲನ್‌ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ. ಆತ ಮೊದಲ ಬಾರಿಗೆ ಆಯ್ಕೆಯಾಗುವವರೆಗೂ ಯಾರೂ ಆತನ ಹೆಸರನ್ನು ಕೇಳಿರಲಿಲ್ಲ. ಆಯ್ಕೆಯಾದ ಬಳಿಕ ಸಹ. ‘ನಾನು ಜಯ ಲಲಿತಾ ಫೋಟೊ ಇಟ್ಟುಕೊಂಡು ಗೆದ್ದವನು’ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ. ಜಯಲಲಿತಾ ಆಯ್ಕೆಯ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದಾಗ ಅವರು ರಾಜೀನಾಮೆ ಕೊಡುವುದು ಅನಿವಾರ್ಯವಾಯಿತು. ಆಗ ಬದಲಿ ನಾಯಕನ ಪ್ರಶ್ನೆ ಎದುರಾದಾಗ ಮುಖ್ಯಮಂತ್ರಿ ಪಟ್ಟಕ್ಕೆ ಜಯಲಲಿತಾ ಪನ್ನೀರಸೆಲ್ವಮ್‌ನನ್ನು ಕುಳ್ಳಿರಿಸಿದರು. ಆತ ಕನಸು ಮನಸಿನಲ್ಲೂ ತಾನೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಣಿಸಿರಲಿಲ್ಲ. ‘ನಾಳೆ ನೀನು ಮುಖ್ಯಮಂತ್ರಿಯಾಗಿ ಪ್ರಮಾನ ವಚನ ಸ್ವೀಕರಿಸಬೇಕು’ ಎಂದು ಜಯಾ ಹೇಳಿದಾಗ ಪನ್ನೀರಸೆಲ್ವಮ್‌ ಕಂಗಾಲು.

‘ಅಮ್ಮ’ನನ್ನು ಭೇಟಿ ಮಾಡಿ ಮನೆ ತಲುಪುವ ಹೊತ್ತಿಗೆ ಪನ್ನೀರಸೆಲ್ವಮ್‌ ಮನೆ ಮುಂದೆ ನೂರಾರು ಮಂದಿ ಸೇರಿದ್ದರು. ಕ್ಷಣ ಮಾತ್ರದಲ್ಲಿ ಆತನ ಖದರು ಬದಲಾಗಿ ಬಿಟ್ಟಿತು. ಅಧಿಕಾರಿಗಳು ಹೂಗುಚ್ಛ ಹಿಡಿದು ಆತನ ಮನೆಯಲ್ಲಿ ನಿಂತಿದ್ದರು. ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಅಷ್ಟು ದಿನ ಇವರೆಲ್ಲ ಎಲ್ಲಿದ್ದಾರೋ ಏನೋ? ಜಯಲಲಿತಾ ಮನೆಯಲ್ಲಿ ಗಂಟೆಗಟ್ಟಲೆ ಕಾದು ಕುಳಿತಾಗ ತಿರುಗಿಯೂ ನೋಡದ ಅಲ್ಲಿನ ಸಹಾಯಕರು, ಭಟ್ಟಂಗಿಗಳು ಪನ್ನೀರಸೆಲ್ವಮ್‌ ಮುಖ್ಯಮಂತ್ರಿಯಾಗುತ್ತಿದ್ದಂತೆ ಹಾವಭಾವಗಳನ್ನೇ ಬದಲಿಸಿಕೊಂಡುಬಿಟ್ಟರು. ಮುಖ್ಯಮಂತ್ರಿಯ ಕಾರು ಜಯಲಲಿತಾ ಮನೆಗೆ ಬರುತ್ತಿದ್ದರೆ, ಎಲ್ಲ ಸೆಟೆದು ನಿಂತಿರುತ್ತಿದ್ದರು. ಮರುಚುನಾವಣೆಯಲ್ಲಿ ಜಯಾ ಗೆದ್ದು ಪುನಃ ಮುಖ್ಯಮಂತ್ರಿಯಾಗುತ್ತಾರೆಂಬ ಸುದ್ದಿ ಹೊರಬಿತ್ತು ನೋಡಿ, ಅಮ್ಮನನ್ನು ಭೇಟಿ ಮಾಡಲು ಪನ್ನೀರಸೆಲ್ವಮ್‌ ಮನೆಗೆ ಹೋದರೆ, ಗೇಟಿನಲ್ಲಿ ನಿಂತ ಪೇದೆಯೇ ತಟ್ಟನೆ ಬಾಗಿಲು ತೆಗೆಯಲಿಲ್ಲ.

ಪನ್ನೀರಸೆಲ್ವಮ್‌ ಆಗ ಮುಖ್ಯಮಂತ್ರಿಯಾಗಿದ್ದರು. ಕೆಲವೇ ಕ್ಷಣಗಳಲ್ಲಿ ರಾಜೀನಾಮೆ ನೀಡುವವರಿದ್ದರು. ಇನ್ನು ಸ್ವಲ್ಪ ಹೊತ್ತಿನ ನಂತರ ಆತ ಮುಖ್ಯಮಂತ್ರಿಯಾಗಿರುವುದಿಲ್ಲವೆಂಬ ಸಂಗತಿ ಜಯಲಲಿತಾ ಮನೆಯಲ್ಲಿರುವ ಎಲ್ಲರಿಗೂ ಗೊತ್ತಾಗಿತ್ತು. ಮುಖ್ಯಮಂತ್ರಿ ಕೆಂಪುದೀಪದ ಕಾರು ಜಯಾ ಮನೆಯ ಮುಂದೆ ಬರುತ್ತಿರುವಂತೆ ತೆಗೆದುಕೊಳ್ಳುತ್ತಿದ್ದರೆ ಅಂದು ಗೇಟಿನಲ್ಲಿ ನಿಂತ ಪೇದೆ ಅಡ್ಡ ಹಾಕಿದ. ಅಧಿಕಾರ ತನ್ನನ್ನು ಬಿಟ್ಟು ಹೋಗುತ್ತಿದೆಯೆಂಬುದು ಅಲ್ಲಿ ಪನ್ನೀರಸೆಲ್ವಮ್‌ಗೆ ಖಾತ್ರಿಯಾಗಿ ಹೋಯಿತು. ಅಮ್ಮನ ಕಾಲಿಗೆ ಬಾಗಿ ರಾಜಭವನಕ್ಕೆ ಹೋಗಿ ರಾಜೀನಾಮೆ ನೀಡಿ ವಾಪಸ್‌ ಬರುವಾಗ ಪನ್ನೀರಸೆಲ್ವಮ್‌ ಜತೆ ನಾಲ್ಕು ಜನರೂ ಇರಲಿಲ್ಲ. ಪನ್ನೀರಿಗೆ ಕಣ್ಣೀರು ಮಿಡಿಯುವವರೂ ಇರಲಿಲ್ಲ.

ಇಂಥ ಪರಿಸ್ಥಿತಿಯನ್ನು ಪೋಲ್ಯಾಂಡಿನ ಖ್ಯಾತ ಕಾದಂಬರಿಕಾರ ರಿಯಸರ್ಡ್‌ ಕಪುಸಿನ್‌ಸ್ಕಿ ‘ದಿ ಎಂಪರರ್‌’ ಕಾದಂಬರಿಯಲ್ಲಿ ಮನೋಜ್ಞನಾಗಿ ಚಿತ್ರಿಸಿದ್ದಾನೆ. ರಾಜನ ಆಸ್ಥಾನದಲ್ಲಿ ಒಂದು ನಾಯಿಯಿತ್ತು. ರಾಜನನ್ನು ಭೇಟಿ ಮಾಡಲು ಬಂದವರನ್ನು ನಾಯಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿತ್ತು. ರಾಜ ಅವರೊಂದಿಗೆ ಹೇಗೆ ವರ್ತಿಸಿದ, ಅವರನ್ನು ಹೇಗೆ ನಡೆಸಿಕೊಂಡ ಎಂಬುದನ್ನು ತಿಳಿಯುತ್ತಿತ್ತು. ಚೆನ್ನಾಗಿ ನಡೆಸಿಕೊಂಡರೆ ಅವರು ಹೊರಬರುತ್ತಿದ್ದಂತೆ ಕೈಕಾಲು ಮೂಸಿಹೊರಬಾಗಿಲ ತನಕ ಕಳಿಸಿ ಬರುತ್ತಿತ್ತು. ಇಲ್ಲದಿದ್ದರೆ ಮೂಸಿಯೂ ನೋಡುತ್ತಿರಲಿಲ್ಲ. ರಾಜನ ಆಸ್ಥಾನದಲ್ಲಿದ್ದ ಮಂತ್ರಿ ರಾಜೀನಾಮೆ ಕೊಡಲು ಬಂದಾಗ ನಾಯಿಗೆ ಗೊತ್ತಾಗಿಬಿಟ್ಟಿತ್ತು. ಇನ್ನು ಕೆಲವೇ ಕ್ಷಣಗಳಲ್ಲಿ ಮಂತ್ರಿ ಅಧಿಕಾರ ಕಳೆದುಕೊಳ್ಳಲಿದ್ದಾನೆಂದು. ಮಂತ್ರಿ ರಾಜನನ್ನು ಭೇಟಿ ಮಾಡಿ ಹೊರಬರುತ್ತಿದ್ದರೆ ನಾಯಿ ತೆಪ್ಪಗೆ ಬಾಲಮುದುರಿಕೊಂಡು ಬಿದ್ದಿತ್ತು. ತಲೆಯೆತ್ತಿಯೂ ಮಂತ್ರಿಯತ್ತ ನೋಡದೇ. ಮಂತ್ರಿ ಅಧಿಕಾರ ಕಳೆದುಕೊಂಡಿದ್ದಾನೆಂಬುದು ಅದಕ್ಕೆ ಗೊತ್ತಾಗಿಹೋಗಿತ್ತು.

ಅಧಿಕಾರ ಹೋದರೆ ನಾಯಿಯೂ ಮೂಸಿ ನೋಡುವುದಿಲ್ಲ ಅಂತಾರಲ್ಲ ಇದಕ್ಕೇ ಇರಬೇಕು. ಅಧಿಕಾರಿಗಳು ಬದಲಾಗುತ್ತಾರೆ. ಆಡಳಿತ ಬದಲಾಗುತ್ತದೆ. ಗೊತ್ತಿದ್ದೂ ಗೊತ್ತಿಲ್ಲದೇ ಅಸಂಖ್ಯ ಮಾರ್ಪಾಟುಗಳಾಗುತ್ತದೆ. ಇಡೀ ಆಡಳಿತಯಂತ್ರ ಮೊದಲಿನಿಂದ ತಿರುಗಬೇಕಾಗುತ್ತದೆ. ಒಂದು ಸರಕಾರದ ಪತನ ಏನೆಲ್ಲ ಘಟನಾವಳಿಗಳಿಗೆ ಕಾರಣವಾಗಬಹುದೆಂಬುದಕ್ಕೆ ಒಂದು ಪ್ರಸಂಗ ಹೇಳಬಹುದು. ಅಟಲ್‌ ಬಿಹಾರಿ ವಾಜಪೇಯಿ ಸರಕಾರದಲ್ಲಿ ಕರ್ನಾಟಕ ನಾಗರಿಕ ವಿಮಾನಯಾನ ಹಾಗೂ ಪ್ರವಾಸೋದ್ಯಮ ಸಚಿವರಿದ್ದರು. ಸಚಿವರ ಪಕ್ಷಕ್ಕೆ ಸೇರಿದವ ಕಾರ್ಯಕರ್ತನೊಬ್ಬ ಜಿರಲೆ ಔಷಧಿಗಳನ್ನು ತಯಾರಿಸುವ ಉದ್ಯಮ ನಡೆಸುತ್ತಿದ್ದ. ಆತ, ದೇಶದೆಲ್ಲೆಡೆಯಿರುವ ಐಟಿಡಿಸಿಯ ಅಶೋಕ ಹೋಟೆಲ್‌ಗಳಿಗೆ ಸಾವಿರಾರು ಲೀಟರ್‌ ಜಿರಲೆನಾಶಕಗಳನ್ನು ಮಾರಾಟ ಮಾಡಲು ಸಚಿವರ ಸಹಾಯ ಕೋರಿದ್ದ. ಸಚಿವರು ಆತನಿಗೆ ಸಹಾಯ ಮಾಡಿದ್ದರೆ, ಆತನ ಫ್ಯಾಕ್ಟರಿಯಿಂದ ಸಾವಿರಾರು ಬಾಟಲಿ ಜಿರಲೆನಾಶಕಗಳು ಹೋಟೆಲ್‌ಗೆ ಸರಬರಾಜು ಆಗುತ್ತಿದ್ದವು. ಪರಿಣಾಮವಾಗಿ, ಹೋಟೆಲ್‌ಗಳಲ್ಲಿದ್ದ ಲಕ್ಷಾಂತರ ಜಿರಲೆಗಳು ಸತ್ತು ಹೋಗುತ್ತಿದ್ದವು.

ಆದರೆ ಅವುಗಳ ನಸೀಬು ಗಟ್ಟಿಯಿದ್ದವು.

ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ವಾಜಪೇಯಿ ಸರಕಾರ ಕೇವಲ ಒಂದು ಮತದಿಂದ ಬಿದ್ದು ಹೋಯಿತು. ಈ ಸಚಿವರು ಅಧಿಕಾರ ಕಳೆದುಕೊಂಡರು. ಇದರಿಂದಾಗಿ ಜಿರಲೆನಾಶಕಗಳನ್ನು ಖರೀದಿಸುವಂತೆ ಸಂಬಂಧಪಟ್ಟ ಅಧಿಕಾರಗಳಿಗೆ ಸೂಚಿಸಲು ಸಚಿವರಿಗೆ ಆಗಲೇ ಇಲ್ಲ. ದೇಶದೆಲ್ಲೆಡೆಯಿರುವ ಹೋಟೆಲ್‌ಗಳಲ್ಲಿನ ಲಕ್ಷಾಂತರ ಜಿರಲೆಗಳು ಬಚಾವ್‌ ಆದವು!

ಈಗ ಧರ್ಮಸಿಂಗ್‌ ಸರಕಾರ ಪತನವಾಗುತ್ತಿದೆ. ಇಷ್ಟು ದಿನ ಅವರ ಜತೆ ಇದ್ದವರು, ಸುತ್ತ ಸುತ್ತ ಇದ್ದವರು, ಅವರಿಂದ ಫಲಾಪೇಕ್ಷೆಗಳನ್ನು ಬಯಸುತ್ತಿದ್ದವರು ನಿಧಾನವಾಗಿ ದೂರವಾಗುತ್ತಿದ್ದಾರೆ. ಅಧಿಕಾರವಿದ್ದಾಗ ಅವರ ಮುಂದೆ ಕ್ಷಣ ಕ್ಷಣ ಬಂದು ಹೋಗುತ್ತಿದ್ದವರೆಲ್ಲ ಮಾಯವಾಗಿ ಬಿಡುತ್ತಾರೆ. ಡೈನಿಂಗ್‌ ಟೇಬಲ್‌ ಮುಂದೆ ಧರ್ಮಸಿಂಗ್‌ ಈಗ ಏಕಾಂಗಿ!

ಅಧಿಕಾರದ ‘ಅನುಗ್ರಹ’ ಬೇರೆಯವರ ಮೇಲಾಗಿದೆ ಅಷ್ಟೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more