• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆರೆಯೇ ಇಲ್ಲದೆಡೆ ಹೂಳೆತ್ತುವ ಯೋಜನೆ ಜಾರಿಯಲ್ಲಿರುತ್ತದೆ ಅಂದ್ರೆ...

By Staff
|
Vishweshwar Bhat ವಿಶ್ವೇಶ್ವರ ಭಟ್‌
ಸರಕಾರಿ ಯೋಜನೆಗಳ ಹಣೆಬರಹವೇ ಅದು.

ಎಲ್ಲ ಯೋಜನೆಗಳು ನೋಡಲು, ಕೇಳಲು ಬಹಳ ಆಕರ್ಷಕವಾಗಿರುತ್ತವೆ. ಒಂದಷ್ಟು ಮಹತ್ವಾಕಾಂಕ್ಷೆಯಿಂದಲೇ ರೂಪುಗೊಂಡಿರುತ್ತವೆ. ಹೇಗೇ ನೋಡಿದರೂ ಅವುಗಳಲ್ಲಿನ ದೋಷ ಎದ್ದು ಕಾಣುವುದಿಲ್ಲ. ಎಲ್ಲವೂ ಜನಮುಖಿ, ಸಮಾಜಮುಖಿಯಾಗಿರುವಂತೆಯೇ ಕಾಣುತ್ತವೆ. ಹೀಗಾಗಿ ಯಾವುದೇ ಸರಕಾರಿ ಯೋಜನೆ ಘೋಷಿತವಾದಾಗ, ಕೇಳಲು ಹಿತವಾಗಿರುತ್ತದೆ. ಯೋಜನೆಯ ಉದ್ದೇಶಿತ ಸಾಫಲ್ಯ, ಅದು ಸಾಧಿಸಬಹುದಾದ ಸಾಧನೆಗೆ ಖುಷಿಯಾಗುತ್ತದೆ. ಆದರೆ ಈ ಖುಷಿ, ಸಂತಸ ಯೋಜನೆ ಜಾರಿಯಾಗಿ ಕೆಲವು ದಿನಗಳ ನಂತರ ಇರುವುದಿಲ್ಲ ಅಥವಾ ಇವೆಲ್ಲ ಮಂತ್ರಿಗಳು, ಅಧಿಕಾರಿಗಳ ಪಾಲಾಗಿರುತ್ತವೆ.

ನಮಗೆ ಅರ್ಥವಾಗಬೇಕಾದ, ಆದರೆ ನಾವು ಅರ್ಥಮಾಡಿಕೊಳ್ಳದ ಹಾಗೂ ಅರ್ಥಮಾಡಿಕೊಳ್ಳಲು ಸ್ವಲ್ಪವೂ ಪ್ರಯತ್ನಪಡದ ಸಂಗತಿಯೇನೆಂದರೆ ಎಲ್ಲ ಸರಕಾರಿ ಯೋಜನೆಗಳೂ ಎಷ್ಟು ಹಣ ಹೊಡೆಯಬಹುದೆಂಬ ಲೆಕ್ಕಾಚಾರದಲ್ಲಿಯೇ ರೂಪುಗೊಂಡಿರುತ್ತವೆ ಹಾಗೂ ಅವು ಜನರಿಗಿಂತ ಮಂತ್ರಿಗಳು, ಅಧಿಕಾರಿಗಳ ಪರವಾಗಿಯೇ ಇರುತ್ತವೆ. ನಾವು ಅರ್ಥ ಮಾಡಿಕೊಳ್ಳದ ಇನ್ನೊಂದು ಸಂಗತಿಯೆಂದರೆ, ಯಾವುದೇ ಯೋಜನೆಯ ನಿಜವಾದ ಫಲಾನುಭವಿಗಳು ಜನರಲ್ಲ: ಮಂತ್ರಿಗಳು ಹಾಗೂ ಅಧಿಕಾರಿಗಳು! ಅದಕ್ಕಾಗಿ ಒಂದು ಸರಕಾರಿ ಯೋಜನೆಯಲ್ಲಿ ಮಂತ್ರಿಗಳು ಹಾಗೂ ಅಧಿಕಾರಿಗಳಿಗಿರುವಷ್ಟು ಆಸಕ್ತಿ ಜನರಿಗಿರುವುದಿಲ್ಲ. ಆದರೆ ಜನಸಾಮಾನ್ಯರೇ ಎಲ್ಲ ಯೋಜನೆಗಳ ಕೇಂದ್ರ ಬಿಂದು ಎಂಬಂತೆ ಬಿಂಬಿಸಲಾಗುತ್ತದೆ.

Abrakadabra, Magic by ministers!ಈ ದೇಶದಲ್ಲಿ ‘ಗರೀಬಿ ಹಟಾವೋ’ ಘೋಷಣೆ ಹಾಕಿದ್ದಕ್ಕೆ ಇಂದಿರಾ ಗಾಂಧಿಯನ್ನು ಅಧಿಕಾರಕ್ಕೆ ತಂದವರು ನಾವು. ಇಪ್ಪತ್ತು ಅಂಶಗಳ ಕಾರ್ಯಕ್ರಮ ಪ್ರಕಟಿಸಿದ್ದಕ್ಕೆ ಅವರನ್ನೇ ಪ್ರಧಾನಿಯಾಗಿ ಮೆರೆಸಿದವರು ನಾವು. ಗರೀಬಿ ಹಟಾವೋ ಜತೆಗೆ ಬಡತನ ನಿರ್ಮೂಲನೆಗೆಂದು ಏನಿಲ್ಲವೆಂದರೂ ಕನಿಷ್ಠ ನೂರು ಯೋಜನೆಗಳು ಜಾರಿಗೆ ಬಂದಿರಬಹುದು. ಆದರೆ ಬಡತನ ಮಾತ್ರ ದೂರವಾಗಿಲ್ಲ. ಬಡತನ ಹಾಗೂ ಅನಕ್ಷರತೆ ಬಗ್ಗೆ ನಮ್ಮ ದೇಶದಲ್ಲಿ ಖರ್ಚು ಮಾಡಿದಷ್ಟು ಹಣವನ್ನು ಮತ್ತ್ಯಾ ವ ದೇಶವೂ ಮಾಡಿರಲಿಕ್ಕಿಲ್ಲ. ಆ ಹಣವನ್ನೇ ನೋಡಿದರೆ ಯಾರೂ ನಮ್ಮನ್ನು ದರಿದ್ರರು ಎನ್ನಲಿಕ್ಕಿಲ್ಲ. ಲಕ್ಷಾಂತರ ಸಾವಿರ ಕೋಟಿ ರೂ.ವ್ಯಯಿಸಿದ್ದೇವೆ. ಆದರೂ ಬಡತನ ಹೋಗುವುದಿಲ್ಲ ಅಂದ್ರೆ ಹಣ ಎಲ್ಲಿ ಹೋಗುತ್ತದೆಂಬುದು ಗೊತ್ತಾಗುತ್ತದೆ.

ಇತ್ತೀಚೆಗೆ ಹಿರಿಯ ಐಎಎಸ್‌ ಅಧಿಕಾರಿಯಾಬ್ಬರು ಹೇಳುತ್ತಿದ್ದರು - ಕೆಲ ವರ್ಷಗಳ ಹಿಂದೆ ಸರಕಾರ ಕಪ್ಪು ಹಲಗೆ ಕಾರ್ಯಾಚರಣೆ(ಆಪರೇಷನ್‌ ಬ್ಲ್ಯಾಕ್‌ಬೋರ್ಡ್‌) ಆರಂಭಿಸಿತ್ತು. ಕಪ್ಪು ಹಲಗೆ ಸಹ ಇಲ್ಲದ ಶಾಲೆಗಳಿಗೆ ಅವುಗಳನ್ನು ಪೂರೈಸುವುದು ಈ ಯೋಜನೆಯ ಉದ್ದೇಶ. ಸರಕಾರ ಮನಸು ಮಾಡಿದರೆ ಒಂದೆರಡು ದಿನಗಳಲ್ಲಿ ತನ್ನ ಆಡಳಿತ ಯಂತ್ರ ಬಳಸಿಕೊಂಡು, ಎಷ್ಟು ಶಾಲೆಗಳಲ್ಲಿ ಬ್ಲ್ಯಾಕ್‌ಬೋರ್ಡ್‌ಗಳಿಲ್ಲ, ಎಷ್ಟು ಬೋರ್ಡ್‌ಗಳು ಬೇಕಾಗಿವೆ ಎಂಬ ಮಾಹಿತಿ ಪಡೆಯುವುದು ಕಷ್ಟವೇನೂ ಅಲ್ಲ. ಬೇಡ, ಅತಿ ಹೆಚ್ಚೆಂದರೆ ವಾರದೊಳಗೆ ಈ ಮಾಹಿತಿ ಪಡೆಯಬಹುದು.

ಪತ್ರಿಕೆಗಳು, ಟೀವಿ ಮೂಲಕ ಸರಕಾರ ಆದೇಶ ನೀಡಬಹುದು. ಅದಕ್ಕಾಗಿ ಸುತ್ತೋಲೆಗಳನ್ನೇ ಹೊರಡಿಸಬೇಕಿಲ್ಲ. ಗಣ್ಯರು ನಿಧನರಾದಾಗ ಶಾಲೆ, ಕಾಲೇಜುಗಳಿಗೆ ರಜೆಯನ್ನು ಸುತ್ತೋಲೆ ಮೂಲಕ ಸರಕಾರ ಪ್ರಕಟಿಸುವುದಿಲ್ಲವಲ್ಲ. ಆ ‘ಸಿಹಿ’ ಸುದ್ದಿಯನ್ನು ಪತ್ರಿಕೆ, ಟೀವಿ ಮೂಲಕವೇ ಎಲ್ಲರೂ ತಿಳಿದುಕೊಳ್ಳುತ್ತಾರೆ. ಆದರೆ ಸರಕಾರ ಹಾಗೆ ಮಾಡುವುದಿಲ್ಲ. ಒಮ್ಮೆ ಸರಕಾರ ಹಾಗೆ ಮಾಡಿದರೆ ಜನರಾಗಲಿ, ಅಧಿಕಾರಿಗಳಾಗಲಿ ಕೇಳುವುದಿಲ್ಲ. ಸುತ್ತೋಲೆಯಿಂದಲೇ ಆದೇಶ ಪಡೆಯಲು ಬಯಸುತ್ತಾರೆ. ಕಟ್ಟಕಡೆಯ ವ್ಯಕ್ತಿಗೆ ಸುತ್ತೋಲೆ ತಲುಪುವ ಹೊತ್ತಿಗೆ ಇಪ್ಪತ್ತು ದಿನಗಳಾಗಿರುತ್ತವೆ. ರಜೆ, ಸೆಕೆಂಡ್‌ ಸ್ಯಾಟರ್‌ ಡೇ, ಭಾನುವಾರ, ಆರ್‌ಎಚ್‌, ಮತ್ತ್ಯಾರದೋ ಪುಣ್ಯ ತಿಥಿಗಳನ್ನೆಲ್ಲಾ ದಾಟಿ ಕೊಂಡು ಹೋಗಬೇಕಲ್ಲ?

ಕಪ್ಪು ಹಲಗೆ ಸಮೀಕ್ಷೆಗೆ ಸರಕಾರ ಆರು ತಿಂಗಳು ತೆಗೆದುಕೊಳ್ಳುತ್ತದೆ. ಈ ಸಮೀಕ್ಷೆಯನ್ನು ತನ್ನ ಸಿಬ್ಬಂದಿಯಿಂದಲೇ ಮಾಡಿಸಿದರೆ ತನಗೇನೂ ಸಿಗುವುದಿಲ್ಲವೆಂದು, ಹೊರಗಿನ ಏಜೆನ್ಸಿಗೆ ಒಪ್ಪಿಸುತ್ತದೆ. ಅಲ್ಲಿಂದಲೇ ಶುರುವಾಗುತ್ತದೆ ಕಪ್ಪು ವ್ಯವಹಾರ. ನೂರಾರು ಕೋಟಿ ರೂ. ವೆಚ್ಚದ ಈ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಮೂರು ವರ್ಷ ಮುಗಿದಿರುತ್ತದೆ. ಎಲ್ಲ ಶಾಲೆಗಳಿಗೆ ಬೋರ್ಡ್‌ ಪೂರೈಕೆಯಾಗಿದೆಯೆಂದು ಸರಕಾರ ಸಾರುತ್ತದೆ. ಕಾಗದ ದಾಖಲೆಗಳಲ್ಲಿ ಅದು ದೃಢಪಟ್ಟಿರುತ್ತದೆ. ಆದರೆ ಕುಗ್ರಾಮಗಳಲ್ಲಿರುವ ಶಾಲೆಗಳಲ್ಲಿ ಬೋರ್ಡ್‌ ಮಾತ್ರ ಇರುವುದಿಲ್ಲ. ಸರಕಾರದಿಂದ ಇಂಥ ಯೋಜನೆ ಜಾರಿಯಾದ ಬಗ್ಗೆ ಆ ಶಾಲೆಗಳ ಮೇಷ್ಟ್ರಿಗೆ ಗೊತ್ತೇ ಇರುವುದಿಲ್ಲ. ಆ ಕಾರಣಕ್ಕೆ ಇನ್ನೂ ಕೆಲವು ಶಾಲೆಗಳಿಗೆ ಕಪ್ಪು ಹಲಗೆಯೆಂದರೆ ಕಣ್ಣಿಗೆ ಕಪ್ಪುಬಟ್ಟೆಯಿದ್ದಂತೆ.

ವನವಾಸಿಗಳಿಗೆ, ಗಿರಿಜನರಿಗೆ ನಮ್ಮ ಸರಕಾರ ರೂಪಿಸಿರುವಷ್ಟು ಯೋಜನೆಗಳನ್ನು ನೋಡಿದರೆ ತಲೆ ಧಿಂ ಎನ್ನುತ್ತದೆ. ಈಗ ಸುರಿದಿರುವ ಹಣವೆಲ್ಲ ಅವರಿಗೇ ದಕ್ಕಿದ್ದರೆ ಅವರ ಜೀವನ ಎಂದೋ ನಂದಗೋಕುಲವಾಗಬೇಕಿತ್ತು. ಆದರೆ ಈಗ ಆಗಿರುವುದು ನಂದಿದ ಗೋಕುಲ! ವನವಾಸಿ ಕಲ್ಯಾಣ, ಗಿರಿಜನರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರದಲ್ಲಿ ನಲವತ್ತೆಂಟು ಯೋಜನೆಗಳಿವೆ. ಇದಕ್ಕಾಗಿ ಪ್ರತ್ಯೇಕ ಮಂತ್ರಿ, ಸಚಿವಾಲಯ, ಹತ್ತಾರು ಐಎಎಸ್‌ ಅಧಿಕಾರಿಗಳು, ನೂರಾರು ಸಿಬ್ಬಂದಿ ಇದ್ದಾರೆ. ಇದಕ್ಕಿಂತ ಮುಖ್ಯವಾಗಿ ಹಣವಿದೆ. ಕೋಟಿಕೋಟಿಗಳಲ್ಲಿ. ಆದರೆ ಈ ಹಣವೆಲ್ಲ ವನವಾಸಿಗಳಿಗಾಗಲಿ, ಗಿರಿಜನರಿಗಾಗಲಿ ಸಂದಾಯವಾಗುವುದೇ ಇಲ್ಲ. ದಿಲ್ಲಿಯಲ್ಲಿಯೇ ಹಂಚಿಕೆಯಾಗಿಬಿಡುತ್ತದೆ.

ವಿಚಿತ್ರವೆಂದರೆ ಇಂಥ ಯೋಜನೆಗಳಲ್ಲಿ ಅಪರಾತಪರಾ ಸರ್ವೇಸಾಮಾನ, ಆದರೆ ಯಾರಿಗೂ ಗೊತ್ತಾಗುವುದಿಲ್ಲ. ವನವಾಸಿಗಳಾಗಲಿ, ಗಿರಿಜನರಾಗಲಿ ಪ್ರಶ್ನಿಸುವುದಿಲ್ಲ. ಪತ್ರಕರ್ತರಿಗೆ ಇದರಲ್ಲಿ ಆಸಕ್ತಿಯಿಲ್ಲ. ಸಂಸತ್ತಿನಲ್ಲಿ ಈ ವಿಷಯಗಳ ಕುರಿತು ಚರ್ಚೆಯಾದರೆ ಐವತ್ತು ಮಂದಿಯೂ ಇರುವುದಿಲ್ಲ. ಇವು ಹೈ ಪ್ರೊಫೈಲ್‌ ಯೋಜನೆಗಳಲ್ಲ. ಹೀಗಾಗಿ ಯಾರ ಲಕ್ಷ್ಯವನ್ನೂ ಸೆಳೆಯುವುದಿಲ್ಲ. ನಿರಾತಂಕ ಲೂಟಿಗೆ ನಿರಂತರ ಅನುಮತಿ! ಇಂಥ ಇಲಾಖೆಗೆ ಹೋಗಲೆಂದು ಅಧಿಕಾರಿಗಳ ಮಟ್ಟದಲ್ಲಿ ದೊಡ್ಡ ಲಾಬಿ ನಡೆಯುತ್ತದೆ. ಭ್ರಷ್ಟಾತಿಭ್ರಷ್ಟರು ಬಂದು ಕುಳಿತು, ಉಂಡೆದ್ದು ಹೋಗುತ್ತಾರೆ. ಈ ಐವತ್ತು ವರ್ಷಗಳಲ್ಲಿ ಅವರ ಕಲ್ಯಾಣಕ್ಕಾಗಿ ಹತ್ತಾರು ಸಾವಿರ ಕೋಟಿ ರೂಪಾಯಿ ಖರ್ಚಾದರೂ ಅವರ ಜೀವನ ಮಟ್ಟದಲ್ಲಿ ಏನೂ ಸುಧಾರಣೆಯಾಗುವುದಿಲ್ಲ ಅಂದ್ರೆ ಏನರ್ಥ?

ಸರಕಾರದಲ್ಲಿ ಕೆಲವು ಯೋಜನೆಗಳಿವೆ, ಅವುಗಳಿರುವುದೇ ದುಡ್ಡು ಹೊಡೆಯಲಿಕ್ಕೆ. ಅಧಿಕೃತವಾಗಿ ಹಾಗೂ ನ್ಯಾಯಯುತವಾಗಿ ಅವ್ಯವಹಾರ ಮಾಡಲಿಕ್ಕೆಂದೇ ಇರುವ ಯೋಜನೆಗಳಿವು. ಉದಾಹರಣೆಗೆ ಕೆರೆ, ಕಾಲುವೆ, ನದಿ ಹೂಳೆತ್ತುವ ಯೋಜನೆ. ಹೂಳೇ ಇಲ್ಲದಿರುವ ಕೆರೆಗಳಲ್ಲಿ ಹೂಳೆತ್ತಿದ್ದೇವೆ ಅಂದ್ರೆ ಪರವಾಗಿಲ್ಲ. ಆದರೆ ಕೆರೆಯೇ ಇಲ್ಲದೆ ಹೂಳೆತ್ತಿದ್ದೇವೆ ಎಂದರೂ ಯಾರು ಪ್ರಶ್ನಿಸುವುದಿಲ್ಲ. ಅಂದರೆ ಈ ಯೋಜನೆಯಡಿ ಹಣ ಮಾಡಲು ಕೆರೆಯೂ ಬೇಕಾಗಿಲ್ಲ. ಹೂಳೂ ಬೇಕಾಗಿಲ್ಲ. ಸ್ವಲ್ಪ ಮಂಡೆ ಬೇಕು.

ಈಗ ಕಣ್ಮರೆಯಾಗಿರುವ ಅಥವಾ ಮುಚ್ಚಿಹೋಗಿರುವ, ಆದರೆ ಐವತ್ತು-ಅರವತ್ತು ವರ್ಷ ಹಿಂದಿನ ನಕಾಶೆಯಲ್ಲಿ ಅಸ್ತಿತ್ವದಲ್ಲಿರುವ ಕೆರೆಯ ಹೂಳನ್ನು ಎತ್ತಿದ್ದೇನೆಂದರೆ ಯಾರೂ ಪ್ರಶ್ನಿಸುವುದಿಲ್ಲ. ಹಣ ಸಂದಾಯವಾಗುತ್ತದೆ. ಕೆರೆಯಲ್ಲಿನ ಹೂಳು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಣದ ಹೊಳೆ ಅಥವಾ ಹಣದ ಹೋಳು. ಹಾಗೇ ಕಡಲಕೊರೆತ ತಡೆಗೆ ಗೋಡೆ ನಿರ್ಮಾಣ ಯೋಜನೆ. ಪ್ರತಿವರ್ಷವೂ ಕೊರೆಯುವ, ಅದಕ್ಕಾಗಿ ಹಣ ಸುರಿಯುವ, ಪ್ರತಿಸಲವೂ ಗೋಡೆ ಕುಸಿಯುವ ಈ ಯೋಜನೆ ಅಧಿಕಾರಿಗಳಿಗೆ ಕಾಮಧೇನು. ದುರ್ದೈವದ ಸಂಗತಿಯೆಂದರೆ ಈ ಯೋಜನೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಜಾರಿಯಲ್ಲಿದೆ. ಯಾಕೆಂದರೆ ಅಲ್ಲಿ ಕಡಲಿದೆಯೆಂಬ ಕಾರಣಕ್ಕೆ ಹಾಗೂ ನಕಾಶೆಯಲ್ಲಿ ತೋರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಮಾತ್ರ ಅಷ್ಟೆ.

ನಮ್ಮ ದೇಶದಲ್ಲಿರುವಷ್ಟು ಮಂತ್ರಿಗಳು, ಅವರಿಗಿರುವಷ್ಟು ಖಾತೆಗಳು ಪ್ರಾಯಶಃ ಯಾವುದೇ ದೇಶಗಳಲ್ಲೂ ಇರಲಿಕ್ಕಿಲ್ಲ. ಇದ್ದರೆ ದಯವಿಟ್ಟು ಗೊತ್ತಿದ್ದವರು ತಿಳಿಸಬೇಕು. ಜನಸಾಮಾನ್ಯರಿಗೆ ಕಿಲುಬು ಕಾಸು ಪ್ರಯೋಜನವಿಲ್ಲದ ಅಂಕಿ-ಅಂಶ ಖಾತೆಯಿಂದ ಹಿಡಿದು ಖಾತೆರಹಿತ ಖಾತೆಯವರೆಗೆ ಮಂತ್ರಿಗಳಿದ್ದಾರೆ. ಶಿಕ್ಷಣ ಎಂಬ ಒಂದು ಖಾತೆಯನ್ನು ಪ್ರಾಥಮಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ವಯಸ್ಕರ ಶಿಕ್ಷಣ ಎಂದೆಲ್ಲ ಒಡೆದಿದ್ದಾರೆ. ಸರಕಾರ ನಾಳೆ ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಿದರೆ, ಅದಕ್ಕೂ ಒಂದು ಖಾತೆ ಸೃಷ್ಟಿಸಿ ಒಬ್ಬ ಮಂತ್ರಿಯನ್ನು ಕೂರಿಸುತ್ತದೆ! ಸಕ್ಕರೆಗೂ ಮಂತ್ರಿ ಮಾಡಿದ ಸರಕಾರ, ಅಕ್ಕಿ,ಗೋಧಿ, ಬೇಳೆ-ಕಾಳಿಗೂ ಸಚಿವರನ್ನು ನೇಮಿಸುತ್ತಿತ್ತೇನೊ? ಆದರೆ ಅಂಥ ಪ್ರಸಂಗ ಉದ್ಭವವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಮಾಯಾವತಿ, ನೆರೆ ಪರಿಹಾರ, ಬರಗಾಲ ಪರಿಹಾರ, ಕಚೇರಿ ನಿರ್ವಹಣೆ, ಬೆಳೆವಿಮೆಗೆಲ್ಲ ಖಾತೆ ಸೃಷ್ಟಿಸಿ ಮಂತ್ರಿ ಮಾಡಲಿಲ್ಲವೇ? ಮಂತ್ರಿಯಾದ ತಪ್ಪಿಗಾದರೂ ಈ ಪ್ರಭೃತಿಗಳೆಲ್ಲ ಸಿದ್ಧಪಡಿಸುವ ಯೋಜನೆಗಳು ಹೇಗಿದ್ದೀತು ಎಂಬುದನ್ನು ಒಂದು ಕ್ಷಣ ಯೋಜಿಸಿ, ದಿಗ್ಭ್ರಮೆಯಾಗುತ್ತದೆ!

ಸರಕಾರದ ಯಾವುದೇ ಯೋಜನೆಗಳಿರಲಿ, ಅದರ ಸಾಫಲ್ಯವಿರುವುದು ಸರಕಾರದೊಳಗಿನ ಬೇರೆಬೇರೆ ಅಥವಾ ಎಲ್ಲ ಖಾತೆಗಳ ನಡುವಿನ ಸಮನ್ವಯತೆಯಲ್ಲಿ ಎಂಬ ಮಾತನ್ನು ನಮ್ಮ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಪದೇಪದೇ ಹೇಳುವುದನ್ನು ಕೇಳಿಸಿಕೊಂಡಿರಬಹುದು. ಅವರು ಕರ್ನಾಟಕದ ವಿಧಾನಸಭೆಯ ಜಂಟಿ ಸದನವನ್ನುದ್ದೇಶಿಸಿ ಮಾತನಾಡುವಾಗ ಒಂದು ಪ್ರಸಂಗವನ್ನು ಹೇಳಿದ್ದರು. ಅಬುದಾಬಿಯ ದೊರೆಯನ್ನು ಡಾ.ಕಲಾಂ ಭೇಟಿ ಮಾಡಿದಾಗ ಅವರು ತಮ್ಮ ದೇಶದ ವ್ಯವಸ್ಥೆಯ ಬಗ್ಗೆ ಹೇಳಿದ್ದು. ಇನ್ನು ಎರಡು ವರ್ಷಗಳಲ್ಲಿ ವಿದೇಶಿ ಪ್ರವಾಸಿಗರನ್ನು ಎರಡು ಪಟ್ಟು ಜಾಸ್ತಿ ಸೆಳೆಯಲಾಗುವುದೆಂದು ದೊರೆ ಹೇಳಿಕೆ ಕೊಟ್ಟರೆ, ಪ್ರವಾಸೋದ್ಯಮ ಮಂತ್ರಿ ತಕ್ಷಣ ಸಭೆ ಕರೆದು ಈಗ ಎಷ್ಟು ಪ್ರವಾಸಿಗರು ಬರುತ್ತಿದ್ದಾರೆ, ಅವರ ವಾಸ್ತವ್ಯಕ್ಕೆ ಎಷ್ಟು ಹೋಟೆಲ್‌ ರೂಮುಗಳಿವೆ, ಎರಡುಪಟ್ಟು ಹೆಚ್ಚಿನ ಪ್ರವಾಸಿಗರಿಗೆ ಇನ್ನೆಷ್ಟು ಹೋಟೆಲ್‌ಗಳನ್ನು ನಿರ್ಮಿಸಬೇಕು, ಅವರಿಗೆ ಮಾರ್ಗದರ್ಶನಕ್ಕಾಗಿ ಎಷ್ಟು ಗೈಡುಗಳ ಅಗತ್ಯವಿದೆಯೆಂದು ಚರ್ಚಿಸಿ, ಎರಡು ವರ್ಷಗಳೊಳಗೆ ಎರಡು ಪಟ್ಟು ಹೆಚ್ಚು ಪ್ರವಾಸಿಗರಿಗೆ ‘ಸುವಿಧಾ’ವನ್ನು ಕಲ್ಪಿಸಿಕೊಡುವ ಕ್ರಮಕ್ಕೆ ಮುಂದಾಗುತ್ತಾನೆ.

ಸಾರಿಗೆ ಮಂತ್ರಿ ಸಹ ಇಂಥದೇ ಸಭೆ ಕರೆದು, ಎರಡು ಪಟ್ಟು ಹೆಚ್ಚಿನ ಪ್ರವಾಸಿಗರ ಓಡಾಟಕ್ಕೆ ಅನುಕೂಲ ಕಲ್ಪಿಸಲು ತುರ್ತುಕ್ರಮ ಕೈಗೊಳ್ಳುತ್ತಾನೆ. ವಿಮಾನಯಾನ ಸಚಿವ ಸುಮ್ಮನಿರಲು ಸಾಧ್ಯವಿಲ್ಲ. ಆತ ಸಹ ರನ್‌ವೇ ಹೆಚ್ಚಿಸಲು, ವಿಮಾನ ಹಾರಾಟ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತಾನೆ. ವಿಮಾನ ನಿಲ್ದಾಣ ವಿಸ್ತರಣೆಗೆ ಮುಂದಾಗುತ್ತಾನೆ. ಏರ್‌ಪೋರ್ಟಿನಲ್ಲಿ ಪ್ರಯಾಣಿಕರ ಲಗೇಜ್‌ ನಿರ್ವಹಣೆ ವ್ಯವಸ್ಥೆ ಸುಧಾರಿಸುತ್ತಾನೆ. ಸಾರ್ವಜನಿಕ ಆರೋಗ್ಯ ಮಂತ್ರಿ, ಸಾರ್ವಜನಿಕ ಸ್ಥಳಗಳಲ್ಲಿನ ನೈರ್ಮಲ್ಯ, ಸ್ವಚ್ಛತೆ ಹೆಚ್ಚಳಕ್ಕೆ ಗಮನ ಕೊಡುತ್ತಾನೆ.

ದೂರ ಸಂಪರ್ಕ ಮಂತ್ರಿಯೂ ಬರಲಿರುವ ಹೆಚ್ಚುವರಿ ಪ್ರವಾಸಿಗರಿಗಾಗಿ ಕೊಡುಗೆಯ ಬಗ್ಗೆ ಯೋಚಿಸುತ್ತಾನೆ. ಅಂದರೆ ದೊರೆಯ ಒಂದು ಹೇಳಿಕೆ ಎಲ್ಲ ಮಂತ್ರಿಗಳಲ್ಲಿ ಏಕಕಾಲಕ್ಕೆ ಸಂಚಲನವನ್ನು ಮಾಡಿ, ಕಾರ್ಯಪ್ರವೃತ್ತರಾಗುವಂತೆ ಮಾಡುತ್ತದೆ. ಎರಡು ವರ್ಷಗಳೊಳಗೆ ಬರಲಿರುವ ಪ್ರವಾಸಿಗರ ಸ್ವಾಗತಕ್ಕೆ ಇಡೀ ದೇಶವೇ ಸನ್ನದ್ಧವಾಗಿರುತ್ತದೆ. ಎಲ್ಲೂ ಅವ್ಯವಸ್ಥೆಯಿರುವುದಿಲ್ಲ. ನೂಕುನುಗ್ಗಲು, ಗಜಿಬಿಜಿಯಿರುವುದಿಲ್ಲ. ಹೆಚ್ಚಿನ ಅತಿಥಿಗಳು ಬಂದಿದ್ದಾಗಲಿ, ಹೋಗಿದ್ದಾಗಲಿ ಗೊತ್ತಾಗದಷ್ಟು ಮೆತ್ತಗೆ ಎಲ್ಲ ಚಟುವಟಿಕೆಗಳು ಮುಗಿದಿರುತ್ತವೆ. ಎಲ್ಲರೂ ಏಕತ್ರರಾಗಿ, ಸಂಘಟಿತರಾಗಿ ಕೆಲಸ ಮಾಡುವ ಪರಿಯಿದು. ಸಮನ್ವಯತೆ ಅಂದ್ರೆ ಇದು.

ನಮ್ಮ ಯಾವ ಯೋಜನೆಯಲ್ಲಿ ಇಂಥ ಸಮನ್ವಯತೆ ಇದೆ? ಪಿಡಬ್ಲ್ಯುಡಿ ಇಲಾಖೆ ರಸ್ತೆ ಮಾಡಿದರೆ, ನೀರು ಸರಬರಾಜು ಇಲಾಖೆ ನೆಲ ಅಗೆಯುತ್ತದೆ. ಟೆಲಿಫೋನ್‌ ಇಲಾಖೆ ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆ ತೋಡಿ ರಸ್ತೆಗೆ ಮಣ್ಣನ್ನು ಎಸೆಯುತ್ತದೆ. ಅರಣ್ಯ ಇಲಾಖೆ ಮರ, ಗಿಡಗಳನ್ನು ಬೆಳೆಸಿದರೆ, ವಿದ್ಯುಚ್ಛಕ್ತಿ ಇಲಾಖೆ ಲೈನ್‌ ಎಳೆಯುವಾಗ ಅವುಗಳನ್ನು ಕಡಿದು ಹಾಕುತ್ತದೆ. ಕಟ್ಟಡ ಕಟ್ಟಲು ನಗರಪಾಲಿಕೆ ಅನುಮತಿ ನೀಡಿದರೆ, ಕೆಡವುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸುತ್ತದೆ. ಒಂದಕ್ಕೊಂದು, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲ.

ಸರಕಾರಿ ಯೋಜನೆಗಳೆಲ್ಲ ಅನರ್ಥವಾಗಿ, ಬಿಡಿಬಿಕಾಸಿಯಾಗಿ ಮಗುಚಿ ಬೀಳುವುದು ಹೀಗೇನೆ. ದೇಶ ಉದ್ಧಾರವಾಗಬೇಕು ಅಂದ್ರೆ ಅದ್ಹೇಗೆ ಆಗುತ್ತದೆ ಹೇಳಿ?

ಸಮಾಧಾನದ ಸಂಗತಿ ಅಂದ್ರೆ ಮಂತ್ರಿಗಳು, ಅಧಿಕಾರಿಗಳು ಈ ಯೋಜನೆಗಳನ್ನು ನಂಬಿಕೊಂಡಿರಬಹುದು, ಆದರೆ ದೇಶದ ಬಹು ಸಂಖ್ಯಾತ ಜನರಲ್ಲ. ಗೊತ್ತಿರಲಿ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more