ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ರೂ. ಬಾಚಣಿಕೆ ಬೇಡವೆಂದವ ಎರಡು ಕೋಟಿ ‘ಬಾಚಿ’ ಕೊಂಡಾನೇ?

By Staff
|
Google Oneindia Kannada News


ಸೋನಿಯಾ ಗಾಂಧಿಯವರ ವಿದೇಶಿ ಮೂಲ ಹಾಗೂ ಅವರು ಪ್ರಧಾನಮಂತ್ರಿಯಂಥ ಉನ್ನತ ಸ್ಥಾನಕ್ಕೇರುವ ಅಪಾಯದ ಪರಿಣಾಮವನ್ನು ಬಿಂಬಿಸಿ ಮೊದಲು ದನಿಯೆತ್ತಿದವರೇ ಜಾರ್ಜ್‌. ಇವರ ಕೂಗಿನ ಪರಿಣಾಮ ದೇಶವ್ಯಾಪಿ ಪಸರಿಸಿದ್ದನ್ನು ಸೋನಿಯಾ ಎಂದೆಂದೂ ಮರೆಯಲಿಕ್ಕಿಲ್ಲ. ಅದು ಚುನಾವಣಾ ವಿಷಯವೂ ಆಯಿತು. ಹೀಗಾಗಿ ಸೋನಿಯಾಗೆ ಜಾರ್ಜ್‌ ಅಂದರೆ ನಖಶಿಖಾಂತ ಕೋಪ. ತೆಹಲ್ಕಾ ಪ್ರಕರಣದಲ್ಲಿ ಜಾರ್ಜ್‌ ಅವರನ್ನು ಹೇಗೆ ಸಿಕ್ಕಿಸಲಾಯಿತೆಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಅಂದು ಇಂದಿರಾಗಾಂಧಿ ಜಾರ್ಜ್‌ರನ್ನು ಮುಗಿಸಲು ಏನೆಲ್ಲ ತಂತ್ರಗಳನ್ನು ಹೂಡಿದರೋ, ಅದನ್ನು ಈಗ ಅವರ ಸೊಸೆ ಸೋನಿಯಾ ಗಾಂಧಿ ಮುಂದುವರೆಸುತ್ತಿದ್ದಾರೆ.

ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿರುವಂತೆ ಜಾರ್ಜ್‌ಗೆ ಒಂದು ಸಂಗತಿಯಂತೂ ಸ್ಪಷ್ಟವಾಗಿತ್ತು. ತನ್ನನ್ನು ಸೋನಿಯಾ ಗಾಂಧಿ ಸುಮ್ಮನೆ ಬಿಡುವುದಿಲ್ಲ ಎಂದು. ಸೋನಿಯಾ ಗಾಂಧಿ ರಾಷ್ಟ್ರಪತಿಯವರನ್ನು ಭೇಟಿ ಮಾಡುವುದಕ್ಕಿಂತ ಮೊದಲು ಜಾರ್ಜ್‌ ಭೇಟಿಯಾಗಿ, ವಿದೇಶಿ ವ್ಯಕ್ತಿಯಾಬ್ಬರಿಗೆ ರಕ್ಷಣಾ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳು ಸಿಗುವುದರ ಅಪಾಯವನ್ನು ವಿವರಿಸಿದ್ದರು. ಇದು ಸೋನಿಯಾ ಗಾಂಧಿ ಪ್ರಧಾನಿಯಾಗುವುದಕ್ಕೆ ಅಡ್ಡಿಯಾಯಿತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ.

ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿರುವಂತೆ ತೆಹಲ್ಕಾ ಹಗರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಫೂಕನ್‌ ಆಯೋಗವನ್ನು ರದ್ದುಗೊಳಿಸಿತು. ಕಾರಣವಿಷ್ಟೆ, ಈ ಆಯೋಗ ಮಧ್ಯಂತರ ವರದಿ ಸಲ್ಲಿಸಿ ಜಾರ್ಜ್‌ಗೆ ಕ್ಲೀನ್‌ಚಿಟ್‌ ಕೊಟ್ಟಿತ್ತು. ಇನ್ನು ಕೆಲವೇ ದಿನಗಳಲ್ಲಿ ಆಯೋಗ ಅಂತಿಮ ವರದಿ ಸಲ್ಲಿಸಬೇಕಾಗಿತ್ತು. ಆಗಲೇ ಯುಪಿಎ ಸರ್ಕಾರಕ್ಕೆ ವಾಸನೆ ಹೊಡೆದಿತ್ತು. ಅಂತಿಮ ವರದಿಯಲ್ಲೂ ಜಾರ್ಜ್‌ ನಿರ್ದೋಷಿ ಎಂದು ಸಾಬೀತಾಗುವುದು ನಿಶ್ಚಿತ. ಹೀಗಾಗಿ ಆಯೋಗವನ್ನೇ ರದ್ದುಪಡಿಸಿತು. ಜಾರ್ಜ್‌ ಅವರನ್ನು ಸಿಕ್ಕಿಸುವುದೇ ಉದ್ದೇಶ ಆಗಿತ್ತು.

ಅನಂತರ ಸರ್ಕಾರ ಏಕಾಏಕಿ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು. ನ್ಯಾಯಧೀಶರೊಬ್ಬರು ನಡೆಸುತ್ತಿದ್ದ ವಿಚಾರಣೆಯನ್ನು ಸಿಬಿಐ ಪೊಲೀಸರಿಗೆ ಒಪ್ಪಿಸಿದಾಗ ಸರ್ಕಾರದ ಇಂಗಿತವೇನೆಂಬುದು ಸ್ಪಷ್ಟವಾಯಿತು. ಇದಕ್ಕೆ ತೀವ್ರ ವಿರೋಧ ಬಂತು. ಆಗ ಯಾರೋ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದರು. (ಅಂದರೆ ಸರ್ಕಾರವೇ ಹಾಕಿಸಿತು.) ಸಿಬಿಐಗೇ ತನಿಖೆ ವಹಿಸಿಕೊಡಬೇಕೆಂದು ಆ ಅರ್ಜಿಯಲ್ಲಿ ಹೇಳಲಾಗಿತ್ತು. ಕೊನೆಗೆ ಸುಪ್ರೀಂ ಕೋರ್ಟ್‌ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸೂಚಿಸಿತು. ಕೇಂದ್ರ ಸರ್ಕಾರದ ಮೂಗಿನಡಿಯಲ್ಲಿ, ಪ್ರಧಾನಿಯವರೇ ಮೂಗುದಾರ ಹಿಡಿದು ಕುಳಿತುಕೊಂಡ ಸಂಸ್ಥೆಯಿಂದ, ಪ್ರಧಾನಿ ‘ದಾರ’ವನ್ನು ಸೋನಿಯಾ ಗಾಂಧಿಯೇ ಹಿಡಿದಿರುವಾಗ ಜಾರ್ಜ್‌ ಅವರನ್ನು ಹಣಿಯದೇ ಬಿಟ್ಟಾರೆಯೇ? ಜಾರ್ಜ್‌ ಹೇಳುವಂತೆ ಈ ದೇಶದ ಮೇಲೆ ತುರ್ತುಸ್ಥಿತಿಯಂಥ ಕರಾಳ ಶಾಸನ ಹೇರಿದ ಕಾಂಗ್ರೆಸ್‌ನಿಂದ ಮತ್ತೇನನ್ನು ನಿರೀಕ್ಷಿಸಲಿ?

ಈಗ ಸಿಬಿಐ ಚಾರ್ಚ್‌ಷೀಟ್‌ ಸಲ್ಲಿಸಿದೆ. ಬರಾಕ್‌ ಕ್ಷಿಪಣಿ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತ ಜಾರ್ಜ್‌ ಎರಡು ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆಂದು ಸಿಬಿಐ ಹೇಳುತ್ತಿದೆ. ಇದು ನಿಸ್ಸಂದೇಹವಾಗಿ ರಾಜಕೀಯ ಪ್ರತೀಕಾರ ಕ್ರಮ. ಇದು ಮ್ಯಾಚ್‌ಫಿಕ್ಸಿಂಗ್‌. ಜಾರ್ಜ್‌ರನ್ನು ಮುಗಿಸಲು ಯಾರು ತಂತ್ರ ಹೆಣೆಯುತ್ತಿದ್ದಾರೆಂದು ಎಂಥವರಿಗಾದರೂ ಗೊತ್ತಾಗುತ್ತದೆ. ಪ್ರತಿಪಕ್ಷ ಪಾಳೆಯದಲ್ಲಿ ಸೋನಿಯಾಗೆ ತೊಡಕಾಗಿರುವವರಲ್ಲಿ ಪ್ರಮುಖರೆಂದರೆ ಜಾರ್ಜ್‌. ಇಂದಲ್ಲ ನಾಳೆ ಇದೇ ಮನುಷ್ಯನಿಂದ ತೊಂದರೆ ತಪ್ಪಿದ್ದಲ್ಲ. ಅಲ್ಲದೇ ಹಿಂದೆ ಈತ ಕೊಟ್ಟ ಆಘಾತವನ್ನು ಮರೆಯುವುದುಂಟೇ? ಹೀಗಾಗಿ ಜೀವನದಲ್ಲೆಂದೂ ಲಂಚ ಮುಟ್ಟದ ಮನುಷ್ಯನ ಮೇಲೆ ಎರಡು ಕೋಟಿ ರೂ. ತಿಂದ ಆರೋಪ!

ಎಪ್ಪತ್ತೇಳರ ಈ ಇಳಿವಯಸ್ಸಿನಲ್ಲಿ ಎರಡು ಬಾರಿ ಮಿದುಳು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಜರ್ಜರಿತವಾಗಿದ್ದರೂ ಪುನಃ ಎದ್ದು ಬರುತ್ತೇನೆಂಬ ವಿಶ್ವಾಸದಲ್ಲಿರುವ ಜಾರ್ಜ್‌ ಮೊನ್ನೆ ಹೇಳಿದರು -‘ನಾನು ಯಾರೆಂಬುದು ಇಡೀ ದೇಶದ ಜನತೆಗೆ ಗೊತ್ತು. ಈ ಜನರೇ ನನ್ನ ಪರವಾಗಿ ಹೋರಾಡುತ್ತಾರೆ. ಸಿಬಿಐ ನನ್ನನ್ನು ಬಂಧಿಸಲಿ. ಆದರೆ ನಾನು ಜಾಮೀನು ಅರ್ಜಿ ಹಾಕುವುದಿಲ್ಲ. ನನಗೆ ಜೈಲು ಹೊಸತೇನಲ್ಲ.’

ಜೀವನದುದ್ದಕ್ಕೂ ಹೋರಾಟದ ಬದುಕನ್ನೇ ಸವೆಸಿದ ಜಾರ್ಜ್‌ ಈಗ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಏನನ್ನೂ ಬಯಸದ ಮನುಷ್ಯ ಲಂಚದ ಹಣಕ್ಕೆ ಬಾಯಾಡ್ಡಿದ ಅಂದ್ರೆ ನಂಬೋದಾದರೂ ಹ್ಯಾಗೆ? ಈ ಲಂಚದ ಅಗ್ನಿಪರೀಕ್ಷೆಯಲ್ಲಿ ಜಾರ್ಜ್‌ ಗೆದ್ದು ಬರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X