ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಹಿನ್ನೀರ ಮನೆದೋಣಿಯಲ್ಲಿ ಮನಸು ಹರವಿಕೊಂಡು ಕೂತಾಗ...

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಎರಡು ದಿನ ಸವಡು ಸಿಕ್ಕರೆ ಮನಸ್ಸು ಕೇರಳದ ಕಡೆ ಮುಖ ಮಾಡಿ ನಿಲ್ಲುತ್ತದೆ. ಕೇರಳದ ಸೆಳೆತವೇ ಅಂಥದ್ದು. ಅವೆಷ್ಟು ಸಲ ಅಲ್ಲಿನ ಹಿನ್ನೀರಿನಲ್ಲಿ ಮನಸ್ಸು ಈಜಿ ಬಂದಿದೆಯೋ ಏನೋ? ಆದರೂ ಎರಡು ದಿನ ಪೂರ್ತಿ ನನ್ನವೆಂದು ಅನಿಸಿದಾಗ ಮನಸ್ಸು ಹೋಗಿ ಹೋಗಿ ಕೇರಳದ ಕೈಯನ್ನೇ ಹಿಡಿದು ಜಗ್ಗುತ್ತದೆ. ಅದರ ಮುಂದೆ ಡೊಗ್ಗರುಗಾಲು ಹಾಕಿ ದೈನೇಸಿಯಾಗುತ್ತದೆ. ಮೊನ್ನೆ ಅಂಥ ಎರಡು ದಿನ ನನ್ನವಾದಾಗ ಕುಮಾರಕೋಮ್‌ನ ಹಿನ್ನೀರಿನಲ್ಲಿ ಮನೆದೋಣಿಯೋಳಗೆ ಮನಸ್ಸು ಹರಡಿಕೊಂಡಿತ್ತು. ನಾಲ್ಕುವರ್ಷಗಳ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ನಾಲ್ಕೈದು ದಿನಗಳ ಮಟ್ಟಿಗೆ ಇದೇ ಕುಮಾರಕೋಮ್‌ನ ಹಿನ್ನೀರಿನಲ್ಲಿ ವಿಹರಿಸಿ ತಮ್ಮ ದಣಿವನ್ನಾರಿಸಿಕೊಂಡಿದ್ದು ನೆನಪಿರಬಹುದು.

ಕೇರಳದ ಪ್ರಾಕೃತಿಕ ಸೌಂದರ್ಯ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುವುದು ನನ್ನ ಉದ್ದೇಶವಲ್ಲ. ಅದಕ್ಕಾಗಿ ಅನೇಕ ಬ್ರೋಶರ್‌ಗಳಿವೆ. ವೆಬ್‌ಸೈಟ್‌ಗಳಿವೆ. ಅದನ್ನು ಬರೆಯಲೆಂದೇ ಪತ್ರಕರ್ತರಿದ್ದಾರೆ. ಅದು ಬೇರೆ. ಪ್ರತಿ ಸಲ ಕೇರಳಕ್ಕೆ ಹೋದಾಗ ಅಚ್ಚರಿಯೆನಿಸುವುದು, ಈ ಪುಟ್ಟ ರಾಜ್ಯ ಪ್ರವಾಸೋದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ಸಾಧಿಸುತ್ತಿರುವ ಬೆಳವಣಿಗೆ ಬಗ್ಗೆ. ಪ್ರವಾಸೋದ್ಯಮ ಒಂದು ರಾಜ್ಯದ ಚಹರೆಯನ್ನು ಹೇಗೆ ಬದಲಿಸಬಹುದು, ಅಲ್ಲಿನ ಜನರ ಜೀವನಮಟ್ಟವನ್ನು ಎತ್ತರಿಸಿ ಬದುಕಿನ ಸಾಧ್ಯತೆಯನ್ನು ಹೇಗೆ ವಿಸ್ತರಿಸಬಹುದು ಎಂಬುದನ್ನು ಕೇರಳಕ್ಕಿಂತ ಪರಿಣಾಮಕಾರಿಯಾಗಿ, ಯಾರೂ ಹೇಳಲಾರರು. ಹರಡಿದರೆ ಭೂಪಟದಲ್ಲಿ ಒಂದು ಲಂಗೋಟಿಯಂತೆ ಕಾಣುವ ಕೇರಳ ನಮಗಿಂತ ಮೂರ್ನಾಲ್ಕು ಪಟ್ಟು ಚಿಕ್ಕ ರಾಜ್ಯ. ಆದರೆ ಪ್ರವಾಸೋದ್ಯಮದಲ್ಲಿ ನಮಗಿಂತ ಅದು ನೂರಾರು ಪಟ್ಟು ಮುಂದಿದೆ. ಇಡೀ ರಾಜ್ಯವನ್ನು ಜಾಗತಿಕವಾಗಿ ಹೇಗೆ ಶೋಕೇಸ್‌ ಮಾಡಬಹುದೆಂಬುದನ್ನು ಕೇರಳ ನಮಗಷ್ಟೇ ಅಲ್ಲ, ಇಡೀ ದೇಶಕ್ಕೆ, ವಿಶ್ವಕ್ಕೆ ತೋರಿಸಿಕೊಟ್ಟಿದೆ.

Backwater in Keralaಇದರಲ್ಲಿ ಅತಿಶಯೋಕ್ತಿಯೇನು ಬಂತು? ಸ್ವಲ್ಪ ಕೇಳಿ, ವರ್ಲ್ಡ್‌ ಟ್ರಾವೆಲ್‌, ಟೂರಿಸಂ ಕೌನ್ಸಿಲ್‌ ಕೇರಳವನ್ನು ತನ್ನ ಪಾಲುದಾರನನ್ನಾಗಿಟ್ಟುಕೊಂಡಿದೆ. ನ್ಯಾಶನಲ್‌ ಜಿಯಾಗ್ರಫಿಕ್‌ ಎರಡು ವರ್ಷಗಳ ಸತತ ಅಧ್ಯಯನದ ನಂತರ, ಜೀವಮಾನದಲ್ಲಿ ನೋಡಲೇಬೇಕಾದ ವಿಶ್ವದ 50 ಸ್ಥಳಗಳಲ್ಲಿ ಕೇರಳ ಕೂಡ ಒಂದು ಎಂದಿತು. ಬ್ರಿಟನ್‌ನ ಪ್ರತಿಷ್ಠಿತ ಟ್ರಾವೆಲ್‌ ಮ್ಯಾಗಜಿನ್‌-ಕೊಂಡ್‌ನಾಸ್ಟ್‌-ಕೇರಳದ ಕುರಿತೇ ವಿಶೇಷಾಂಕ ಪ್ರಕಟಿಸಿದೆ.

ಟ್ರಾವೆಲ್‌ ಆ್ಯಂಡ್‌ ಲೀಶರ್‌ ಪತ್ರಿಕೆ ವಿಶ್ವದ ಅ ಅಮೋಘ 100 ಸ್ಥಳಗಳಲ್ಲಿ ಕೇರಳಕ್ಕೆ ಅಗ್ರಸ್ಥಾನ ಎಂದಿದೆ. ಇದೇ ಪತ್ರಿಕೆ ಜಗತ್ತಿನ ಅತ್ಯಂತ ಉತ್ತಮ ಬೆಳಗಿನ ಉಪಾಹಾರ ಕೇರಳದ್ದು ಎಂದು ಪ್ರಕಟಿಸಿದೆ. ಟೈಮ್‌ ಮ್ಯಾಗಜಿನ್‌ ಉದ್ಗಾರ ತೆಗೆಯಿತು, ಕೇರಳಕ್ಕೆ ಭೇಟಿ ನೀಡದಿದ್ದರೆ ಯಾವ ಪ್ರವಾಸಿಗನ ಯಾತ್ರೆಯೂ ಪೂರ್ಣವಾಗುವುದಿಲ್ಲ ಎಂದು. ಸತತ ಐದು ವರ್ಷ ಭಾರತ ಸರ್ಕಾರದಿಂದ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಏಕೈಕ ರಾಜ್ಯ -ಕೇರಳ. ಔಟ್‌ಲುಕ್‌ ಟ್ರಾವೆಲರ್‌ ಮ್ಯಾಗಜಿನ್‌ ಹೇಳುವಂತೆ, - ‘ ಭಾರತದಲ್ಲಿ ಕೇರಳದ ಮುಂದೆ ಮತ್ತೊಂದು ರಾಜ್ಯವಿಲ್ಲ, ಪ್ರವಾಸೋದ್ಯಮ ಅಂದ್ರೆ ಏನೆಂದು ಆ ರಾಜ್ಯದಿಂದ ಕಲಿಯಬೇಕು. ಒಂದೇ ರಾಜ್ಯದಲ್ಲಿ ಅದೆಂಥ ವೈವಿಧ್ಯ?’ ಜಗತ್ತಿನ ಯಾವ ಪತ್ರಿಕೆ ಕೇರಳದ ಬಗ್ಗೆ ಬರೆದಿಲ್ಲ ಕೇಳಿ?

ಹೌದು... ಹೌದು... ತಕರಾರಿಲ್ಲ. ಕೇರಳದ ಸಾಧನೆ ಬಗ್ಗೆ ಎರಡು ಮಾತಿಲ್ಲ ಬಿಡಿ.

ಈಗ ಹೇಳಿ, ನಮ್ಮ ಕರ್ನಾಟಕ ಯಾವ ದೃಷ್ಟಿಯಿಂದ ಕೇರಳಕ್ಕಿಂತ ಕಡಿಮೆಯಿದೆ? ನಮ್ಮಲ್ಲಿಲ್ಲದಿರುವುದಾದರೂ ಏನು? ಪ್ರಾಕೃತಿಕವಾಗಿ ನಮ್ಮಲ್ಲಿ ಏನುಂಟು, ಏನಿಲ್ಲ? ಅಲ್ಲಿ ಮಾತ್ರ ಇರುವ, ನಮ್ಮಲ್ಲಿ ಇಲ್ಲದಿರುವ ಯಾವ ಸಂಗತಿಯಿದೆ? ಆದರೂ ನಾವ್ಯಾಕೆ ಹೀಂಗ? ಅವರ್ಯಾಕೆ ಹಾಂಗ?

ಕೇರಳದಲ್ಲಿರುವಂತೆ ನಮ್ಮಲ್ಲೂ ವಿಶಾಲ ಕಡಲ ತೀರ(315 ಕಿ.ಮೀ)ವಿದೆ. ದ್ವೀಪಗಳಿವೆ, ನಡುಗಡ್ಡೆಗಳಿವೆ. ಹಿನ್ನೀರಿನ ವಿಶಾಲ ಹಾಸಿಗೆಯಿದೆ. ನದಿಗಳಿವೆ. ನೀರಿನ ತಡಿಗಳಿವೆ. ಜಲಾಶಯ, ಕೊಳ್ಳ, ಜಲಪಾತ, ಸರೋವರಗಳಿವೆ. ಗುಡ್ಡ, ಬೆಟ್ಟಗಳಿವೆ. ಘಾಟ್‌ಗಳಿವೆ. ಕೋಟೆ, ಕೊತ್ತಲಗಳಿವೆ. ನಂದಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಬಾಬಾ ಬುಡನ್‌ಗಿರಿ, ಮಡಿಕೇರಿಗಳಂಥ ವಿಹಾರಧಾಮಗಳಿವೆ.

Kallina Ratha in Hampiವನ್ಯಧಾಮ, ರಾಷ್ಟ್ರೀಯ ರಕ್ಷಿತ ಅರಣ್ಯ ಸಫಾರಿಗಳಿವೆ. ಜಗತ್ಪ್ರಸಿದ್ಧ ನಾಗರಹೊಳೆ, ಬಂಡೀಪುರ ವನ್ಯ ಪ್ರಾಣಿಧಾಮಗಳಿವೆ. ಪುಣ್ಯಕ್ಷೇತ್ರಗಳಿಗಂತೂ ಕೊರತೆಯಿಲ್ಲ. ವಿಶ್ವಪ್ರಸಿದ್ಧ ಹಂಪಿ ಹೇಳುವ ಕತೆಗಳು ಒಂದೇ ಎರಡೇ? ಐಹೊಳೆ, ಪಟ್ಟದಕಲ್ಲು, ಬಾದಾಮಿ, ಶ್ರೀರಂಗಪಟ್ಟಣ, ಮೈಸೂರು, ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಮುಂತಾದ ಐತಿಹಾಸಿಕ ಸ್ಥಳಗಳ ಸಾಲುಸಾಲು. ಪ್ರತಿ ಊರಿನಲ್ಲೂ ಒಂದು ಬೆರಗು, ಇತಿಹಾಸ, ಐತಿಹ್ಯ, ವಿಸ್ಮಯ, ಹಿತವಾದ ಹವೆ, ಪ್ರೀತಿ ತುಂಬಿದ ಜನ, ಸಮೃದ್ಧ ಭೂಮಿ, ಅದ್ಭುತ ಇತಿಹಾಸ, ಅನನ್ಯ ಪರಂಪರೆ ಕರ್ನಾಟಕದಲ್ಲಿ ಏನಿಲ್ಲ ಹೇಳಿ? ನಾವ ಅದ್ಯಾವ ದೃಷ್ಟಿಯಲ್ಲಿ ಕಮ್ಮಿ?

ಅದ್ಸರಿ, ಆದರೂ ನಾವ್ಯಾಕೆ ಹೀಂಗ ಅವರ್ಯಾಕೆ ಹಾಂಗ?

Belur Shilabalikeಕೇಳಲೇ ಬೇಕಾದ ಪ್ರಶ್ನೆಯಿದು. ಇಲ್ಲೇ ನಮಗೂ ಅವರಿಗೂ ಇರೋ ಫರಕು. ನಾವೆಂದೂ ಪ್ರವಾಸ ರಂಗವನ್ನು ಉದ್ಯಮವಾಗಿ ಪರಿಗಣಿಸಿದವರೇ ಅಲ್ಲ. ನಮ್ಮ ಪ್ರವಾಸಿ ತಾಣವನ್ನು ಅದಕ್ಕಾಗಿ ಸಜ್ಜುಗೊಳಿಸಿದವರೂ ಅಲ್ಲ. ನಮ್ಮ ಯಾವ ತಾಣವನ್ನು ನಾವು ಎದೆತಟ್ಟಿಕೊಂಡು ಹೇಳಿಕೊಳ್ಳುವ ಹಾಗೆ ಅಭಿವೃದ್ಧಿ ಪಡಿಸಿದ್ದೇವೆ? ಮೊನ್ನೆ ಮೊನ್ನೆ ತನಕ ನಮ್ಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳೂ ಇರಲಿಲ್ಲ. ಹಾಗಂತ ಈಗ ಇದೆ ಎಂದಲ್ಲ. ಇದ್ದಂತಿದೆ ಅಥವಾ ಇಲ್ಲ. ಪ್ರವಾಸೋದ್ಯಮ ಇಲಾಖೆ ಹೋಟೆಲು, ಗೆಸ್ಟ್‌ಹೌಸ್‌ಗಳು ಭ್ರಷ್ಟಾಚಾರದ ಪ್ರೇಕ್ಷಣೀಯ ಸ್ಥಳಗಳಂತೆ ಗೋಚರಿಸುತ್ತವೆ. ಕೆಲವು ತಾಣಗಳಲ್ಲಿ ಶೌಚಾಲಯಗಳೇ ಲಕ್ಷುರಿ. ಜೋಗ ಜಲಪಾತದಂಥ ಸ್ಥಳಗಳಲ್ಲಿ ಇಪ್ಪತ್ತು ಮಂದಿ ಹೋದರೆ ಉಳಿದುಕೊಳ್ಳುವ ವ್ಯವಸ್ಥೆಯಿಲ್ಲ. ಮಾಹಿತಿ ಸಾಹಿತ್ಯದ ಕೊರತೆ, ಗೈಡ್‌ಗಳ ಅಲಭ್ಯ, ಸಂಪರ್ಕಸೇತು ಅಭಾವ ಎದುರಿಸದ ಸ್ಥಳಗಳಿರಲಿಕ್ಕಿಲ್ಲ. ಅಂದರೆ ನಾವಿನ್ನೂ ಒಬೀರಾಯನ ಕಾಲದಲ್ಲೇ ಇದ್ದೇವೆ. ನಮ್ಮ ಪ್ರವಾಸೋದ್ಯಮದ ಪೊಟೆನ್ಸೀಯಲ್‌ ನಮಗೆ ಗೊತ್ತೆ ಇಲ್ಲ.

ಬೆಂಗಳೂರಿಗೆ ಸನಿಹದ ದೊಡ್ಡ ಆಲದ ಮರವನ್ನೇ ನೋಡಿ. ಇಡೀ ಸ್ಥಳಗಳನ್ನು ಎಷ್ಟು ಕೆಟ್ಟದಾಗಿ ಇಟ್ಟುಕೊಂಡಿದ್ದೇವೆ. ಇಂಥದ್ದೊಂದು ಸ್ಥಳವಿದೆಯೆಂಬುದಕ್ಕೆ ನಮ್ಮ ಟೂರಿಸಂ ಕಚೇರಿಯಲ್ಲಿ ಬ್ರೋಶರ್‌ ಸಹ ಸಿಗುವುದಿಲ್ಲ. ಅಲ್ಲಿಗೆ ಹೋಗುವುದು ಹೇಗೆಂಬ ಸೂಚನಾ ಫಲಕಗಳಿಲ್ಲ. ಅಲ್ಲಿ ಸ್ಥಳದ ಮಹತ್ವ ತಿಳಿಸುವ ಬೋರ್ಡ್‌ ಬಿಟ್ಟರೆ ಮತ್ತ್ಯಾವ ಮಾಹಿತಿಯೂ ಸಿಗುವುದಿಲ್ಲ. ಇದೇ ಆಲದ ಮರದ ಕೇರಳದಲ್ಲಿದ್ದಿದ್ದರೆ? ಅದರ ಕತೆಯೇ ಬೇರೆಯಾಗುತ್ತಿತ್ತು. ಕೊಂಬೆ ಕೊಂಬೆ, ರೆಂಬೆ ರೆಂಬೆಯಿಂದ ಹಿಡಿಡು ಆ ಮರದ ಮಹಾತ್ಮೆಯನ್ನು ಜಗತ್ತಿಗೇ ಸಾರಿ, ಹಾಕಿಕೊಂಡರೆ ಇದೇ ಆಲದ ಮರಕ್ಕೆ ನೇಣು ಹಾಕಿಕೊಳ್ಳಬೇಕು ಎಂಬಂತೆ ಬಿಂಬಿಸಿರುತ್ತಿದ್ದರು!

ಇದು ಮಲಯಾಳಿಗಳ ಪ್ರವಾಸೋದ್ಯಮ ಮೆಂಟಾಲಿಟಿ. ಇಲ್ಲಿ ನಿಮಗೆ ಇನ್ನೊಂದು ಪ್ರಸಂಗ ಹೇಳಬೇಕು. ಕೆಲ ವರ್ಷಗಳ ಹಿಂದೆ, ಲಂಡನ್‌ನಿಂದ ಮೂರು ತಾಸು ಪ್ರಯಾಣದ ದೂರದಲ್ಲಿರುವ ಸಾಲಿಸ್‌ಬರಿ ಸನಿಹದ ಸ್ಟೋನ್‌ಹೆಂಜ್‌ ಎಂಬ ಊರಿಗೆ ಹೋಗಿದ್ದೆ. ಬ್ರಿಟನ್‌ಗೆ ಹೋದವರೆಲ್ಲ ಈ ಊರಿಗೆ ಹೋಗಿ ಬರುತ್ತಾರೆ. ಹೋಗದಿದ್ದರೆ ‘ ಅಲ್ಲಿ ಹೋಗಲಿಲ್ವಾ?’ಎಂದು ಕೇಳುತ್ತಾರೆ. ಹಾಗಾದರೆ ಈ ಊರಿನಲ್ಲಿ ಅಂಥದ್ದೇನಿರಬಹುದು ಅಂತ ನೋಡಲು ಹೋದರೆ... ಬರೀ ಕಲ್ಲು! ವರ್ತುಲಾಕಾರದಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟಿದ್ದಾರೆ. ಅದು ಹಿತ್ತಾಳೆಯುಗದ್ದೆಂದು ನಂಬಲಾದ ಪುರಾತನ ಕಾಲದ್ದು. ಮುಗೀತು. ಅಲ್ಲಿ ಮತ್ತೇನೂ ಇಲ್ಲ. ಆದರೆ ಸ್ಪೋನ್‌ಹೆಂಜ್‌ನ್ನು ಪ್ರಮೋಟ್‌ ಮಾಡುತ್ತಿರುವ ರೀತಿ ನೋಡಬೇಕು. ಸ್ಟೋನ್‌ ಹೆಂಜ್‌ ಕ್ಯಾಲೆಂಡರ್‌, ಗ್ರೀಟಿಂಗ್‌ ಕಾರ್ಡ್‌, ಕೀಚೈನ್‌, ಕ್ಯಾಪ್‌, ಟೀಶರ್ಟ್‌, ವಾಚು, ವಾಲ್‌ಪೇಪರ್‌, ಪೋಸ್ಟರ್‌, ಕಂಪ್ಯೂಟರ್‌ ಸ್ಕೀನ್‌ ಸೇವರ್‌, ಸಾವಿರಾರು ಪುಸ್ತಕಗಳು, ಬ್ರೋಶರ್‌ಗಳು, ವೆಬ್‌ಸೈಟ್‌ಗಳು, ಈ ತಾಣದ ಅಭಿವೃದ್ಧಿಗೆ ಶ್ರಮಿಸುವ ಹತ್ತಾರು ಸಂಘಟನೆಗಳು. 1986ರಲ್ಲೇ ಇದನ್ನು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರಿಸಿತು. ನಮ್ಮ ಹಂಪಿ ಮುಂದೆ ಈ ಸ್ಪೋನ್‌ಹೆಂಜ್‌ ಅದ್ಯಾವ ಲೆಕ್ಕ? ಆದರೆ ನಮಗೆ ಹಂಪಿ, ಹಾಳುಹಂಪಿಯೇ. ಹೀಗಾಗಿ ನಾವು ಅದನ್ನು ಹಾಳುಗೆಡವಲಿಕ್ಕೇ ಇಟ್ಟಿದ್ದೇವೆ.

ಬ್ರಿಟನ್‌ಗೆ ಹೋದವರು ಶೇಕ್ಸ್‌ಪಿಯರ್‌ ಹುಟ್ಟಿದ ಸ್ಟ್ರಾಟ್‌ಫರ್ಡ್‌ ಅಪಾನ್‌-ಎವೊನ್‌ಗೆ ಹೋಗದೇ ಬರುವುದಿಲ್ಲ. ಶೇಕ್ಸ್‌ಪಿಯರ್‌ನ ಮನೆ, ಗ್ರಂಥಾಲಯ, ಚಿತ್ರ, ಮಲಗುವ ಕೋಣೆ ಮುಂತಾದವುಗಳನ್ನು ರಕ್ಷಿಸಿಟ್ಟಿದ್ದಾರೆ. ಇಂದು ಈ ಊರು ಪ್ರವಾಸಿ ಕೇಂದ್ರ. ಪ್ರತಿದಿನ ಸಾವಿರಾರು ಮಂದಿ ಬರುತ್ತಾರೆ. ಹಣತೆತ್ತು ಮನೆಯಾಳಗೆ ಹೋಗಬೇಕು. ಇದರಿಂದಾಗಿಯೇ ಸಾವಿರಾರು ಪೌಂಡ್‌ ಸಂಗ್ರಹವಾಗುತ್ತದೆ. ಇಂಥದೇ ಪ್ರಯೋಗವನ್ನು ನಾವೂ ಮಾಡಬಹುದಿತ್ತು. ಪಂಪನ ಬನವಾಸಿ, ಬೇಂದ್ರೆಯವರ ಸಾಧನಕೇರಿ, ಕುವೆಂಪು ಅವರ ಕುಪ್ಪಳ್ಳಿ, ಮುದ್ದಣನ ನಂದಳಿಕೆಯನ್ನೆಲ್ಲ ಸ್ಟ್ರಾಟ್‌ ಫರ್ಡ್‌-ಅಪಾನ್‌ ಎವೊನ್‌ಗಿಂತ ಕಡಿಮೆಯಿಲ್ಲದಂತೆ ಅಭಿವೃದ್ಧಿಪಡಿಸಬಹುದಿತ್ತು.

ನಾವು ಈ ದಿಕ್ಕಿನಲ್ಲಿ ಯೋಚನೆಯೇ ಮಾಡಿಲ್ಲ. ಎಲ್ಲ ಖಾತೆ ಹಂಚಿಕೆಯಾಗಿ ಉಳಿದಿದ್ದರೆ ಪ್ರವಾಸೋದ್ಯಮ ಖಾತೆ. ರಾಜ್ಯದ ಭೂಪಟ ಗೊತ್ತಿರದವರೇ ಅದಕ್ಕೆ ಮಂತ್ರಿ. ಮಹಾರಾಷ್ಟ್ರ ಹಾಗೂ ಧೃತರಾಷ್ಟ್ರಅಕ್ಕಪಕ್ಕದ ಊರುಗಳಾ ಎಂಬಷ್ಟು ಅವರದು ಭೌಗೋಳಿಕ ಜ್ಞಾನ. ನಿಷ್ಟ್ರಯೋಜಕ ಅಧಿಕಾರಿಯೇ ಕಾರ್ಯದರ್ಶಿ. ಜಿಡ್ಡುಗಟ್ಟಿದ ವ್ಯವಸ್ಥೆಯಲ್ಲಿ ‘ವಿಹರಿಸುವ’ ಸಿಬ್ಬಂದಿ ವರ್ಗ. ಈ ‘ಸೌಭಾಗ್ಯ’ವನ್ನು ನೋಡಲೆಂದೇ ಯಾವ ಪ್ರವಾಸಿ ಬರುತ್ತಾನೆ ಹೇಳಿ.

ಕಳೆದ ಐದಾರು ವರ್ಷಗಳ ತನಕ ಈ ರಾಜ್ಯದ ಪ್ರವಾಸೋದ್ಯಮ ಬಜೆಟ್‌ ಆರು-ಏಳು ಕೋಟಿ ರೂ.ಯಷ್ಟಿತ್ತು. ಅದು ಸಿಬ್ಬಂದಿ, ಸಾರಿಗೆ ವೆಚ್ಚಕ್ಕೆ ಸಾಕಾಗುತ್ತಿತ್ತು. (ಐವತ್ತು ಕೋಟಿ ರೂ. ದಾಟಿದ್ದು ಈ ವರ್ಷವೇ.) ನಾವು ಆರೇಳು ಕೋಟಿ ರೂ. ಮೀಸಲಿಡುತ್ತಿದ್ದಾಗ, ಕೇರಳ 80-90ಕೋಟಿ ರೂ. ಪ್ರವಾಸೋದ್ಯಮಕ್ಕೆ ತೆಗೆದಿಡುತ್ತಿತ್ತು. ಅಲ್ಲಿ ದಕ್ಷ ಮಂತ್ರಿ, ಪ್ರಾಮಾಣಿಕ ಐಎಎಸ್‌ ಅಧಿಕಾರಿಗೆ ಈ ಖಾತೆಯನ್ನು ವಹಿಸಲಾಗುತ್ತದೆ. ಪ್ರವಾಸೋದ್ಯಮ ಮಂತ್ರಿಯಾಗಲು, ಸೆಕ್ರೆಟರಿಯಾಗಲು ಲಾಬಿ ನಡೆಯುತ್ತದೆ. (ಅಮಿತಾಭ್‌ ಕಾಂತ್‌ನಂಥ ಐಎಎಸ್‌ ಅಧಿಕಾರಿ ಕೇರಳದಲ್ಲಿ ಮಾಡಿದ ಕೆಲಸ ಗುರ್ತಿಸಿ, ಸ್ವತಃ ಪ್ರಧಾನಿ ವಾಜಪೇಯಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಇಟ್ಟುಕೊಂಡರು.)

ಇತ್ತೀಚೆಗೆ ಅಧಿಕಾರಕ್ಕೆ ಬಂದ ಎಲ್‌ಡಿಎಫ್‌ ಸರಕಾರ ಪ್ರವಾಸೋದ್ಯಮಕ್ಕೆ ತನ್ನ ಆದ್ಯತೆಯೇನೆಂಬುದನ್ನು ಘೋಷಿಸಿದೆ. ಒಂದು ಸಾವಿರ ಕೋಟಿ ರೂ. ತೊಡಗಿಸುವುದಾಗಿ ಹೇಳಿದೆ! ನೆನಪಿರಲಿ, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಸರಕಾರ ಪ್ರವಾಸೋದ್ಯಮಕ್ಕೆ ಮೀಸಲಿಟ್ಟ ಹಣವನ್ನು ಲೆಕ್ಕಹಾಕಿದರೂ ಐದುನೂರು ಕೋಟಿ ರೂ. ದಾಟಲಿಕ್ಕಿಲ್ಲ! ಈ ರಂಗದಲ್ಲಿ 50ಸಾವಿರ ಹೊಸ ಹುದ್ದೆ ಸೃಷ್ಟಿಸುವ ಗುರಿ ಕೇರಳದ್ದು. ಈ ರಂಗದಿಂದ ಹಿಂದಿನ ವರ್ಷ ಸರಕಾರಕ್ಕೆ 1400 ಕೋಟಿ ರೂ. ಲಾಭ ಗಳಿಕೆಯಾಗಿದೆ. ಈ ಸಲ 2000ಕೋಟಿ ರೂ. ದಾಟುವುದು ಗ್ಯಾರಂಟಿ. ಪ್ರತಿವರ್ಷ ಶೇ.30ರಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ಕೇರಳದ ಪರ್‌ಕೆಪಿಟಾ ಆದಾಯ ಸದ್ಯದ 23ಸಾವಿರ ರೂ.ನಿಂದ 50ಸಾವಿರಕ್ಕೇರಲಿದೆ. ಬೇರೆ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುತ್ತಿರುವ ವಿದೇಶಿ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕೇರಳದ ಪ್ರವಾಸೋದ್ಯಮ ಮಂತ್ರಿ, ಸೆಕ್ರೆಟರಿಯನ್ನು ಜತೆಯಲ್ಲಿಟ್ಟುಕೊಂಡು ಎಲ್ಲ ರಾಜ್ಯಗಳಿಗೆ ಹೋಗಿ ತನ್ನ ರಾಜ್ಯವನ್ನು ಪ್ರಮೋಟ್‌ ಮಾಡುತ್ತಿದ್ದಾನೆ. ಸುರಿವ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವುದನ್ನು ಗಮನಿಸಿ ‘ ಮಾನ್ಸೂನ್‌ ಟೂರಿಸಂ’ ಎಂಬ ಹೊಸ ಪ್ಯಾಕೇಜ್‌ ಆರಂಭಿಸಲಾಗಿದೆ. ಎಕೋ, ಆಯುರ್ವೇದ, ಮೆಡಿಕಲ್‌, ಬ್ಯಾಕ್‌ವಾಟರ್‌, ಹಿಲ್‌ಸ್ಟೇಷನ್‌, ಸ್ಪೈಸಿ, ಪಿಲ್‌ಗ್ರೀಮ್‌ ಟೂರಿಸಂನಂತೆ ಇದು ಹೊಸ ಆಕರ್ಷಣೆ. ಪರಿಣಾಮ ಮಳೆಗಾಲದಲ್ಲಿ ಖಾಲೆ ಹೊಡೆಯುತ್ತಿದ್ದ ರೂಮುಗಳೆಲ್ಲ ಭರ್ತಿ.

ಜಗತ್ತಿನಲ್ಲಿ ಎಲ್ಲಿಯೇ ಟೂರಿಸಂ ಮೇಳ ನಡೆಯಲಿ, ಅಲ್ಲೊಂದು ಕೇರಳದ ಸ್ಥಾಲು ಇರಲೇಬೇಕು. ಕೇರಳದ ಯಾವ ಏರ್‌ಪೋರ್ಟ್‌, ಸಾರ್ವಜನಿಕ ಸ್ಥಳಕ್ಕೆ ಹೋದರೂ, ದಂಡಿಯಾಗಿ ಪ್ರವಾಸಿ ಮಾಹಿತಿ ಪತ್ರ, ಬ್ರೋಶರ್‌, ಸಿಡಿಗಳು ಉಚಿತವಾಗಿ ಸಿಗುತ್ತವೆ. ಟಚ್‌ ಸ್ಕಿೃೕನ್‌ ಕಿಯಾಸ್ಕ್‌ನಲಿ ಎಲ್ಲ ಮಾಹಿತಿ ಧಾರೆ. ಈ ಪರಿ ಪ್ರವಾಸಿಗರನ್ನು ಸೆಳೆದು Gods Own Country ಎಂದು ಕರೆಸಿಕೊಳ್ಳುವ ಕೇರಳದ ಯಾವ ಮೂಲೆಗೆ ಹೋದರೂ ಅಗ್ದೀ ಸ್ವಚ್ಛ. ಭಾರತದ ಕ್ಲೀನೆಸ್ಟ್‌ ರಾಜ್ಯವೆಂಬ ಅಭಿದಾನ. ಪ್ರವಾಸೋದ್ಯಮದಿಂದ ಮೂಲ ಸಂಸ್ಕೃತಿಗೆ ಅಪಾಯವೆಂಬ ಕೂಗು ಕೇರಳದ ಮಟ್ಟಿಗಂತೂ ಲಾಗೂ ಆಗುವುದಿಲ್ಲ.

ಹನ್ನೆರಡು ವರ್ಷಕ್ಕೊಮ್ಮೆ ಜರುಗುವ ಲೋಕವಿಖ್ಯಾತ ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತೇಜಿಸುವ ಬದಲು, ಈ ಸಂದರ್ಭದಲ್ಲಿ ರಾಜ್ಯ ಸರಕಾರ ಬೀಳುವುದನ್ನೇ ನೋಡುತ್ತಾ ಕುಂತು ಕಳೆದ ನಾವು, ಕೇರಳದಿಂದ ಕಲಿಯುವುದು ಸಾಕಷ್ಟಿದೆಯೆಂದು ಅನಿಸುವುದಿಲ್ಲವೇ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X