• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಳುವ ಕಿವಿಗಳಿರುವವರೆಗೂ ಅಮೀನ್‌ ದನಿ ಅಮರಾ ಮಧುರಾ...

By Staff
|
Vishweshwar Bhat ವಿಶ್ವೇಶ್ವರ ಭಟ್‌
ಆತ ಸುದ್ದಿಯಲ್ಲಿ ಇಲ್ಲದಿರಬಹುದು. ಆತನ ದನಿ ಎಲ್ಲೂ ಕೇಳದಿರಬಹುದು. ಆದರೂ ಆತ ಆಗಾಗ ನೆನಪಾಗುತ್ತಾನೆ. ಬಾಲ್ಯದ ನೆನಪಿನ ಬೇರಿನಂತಿರುವ ಆತ ಆಗಾಗ ಮೈನೇವರಿಸಿಹೋಗುತ್ತಾನೆ. ಆತನ ನೆನಪು ನಮ್ಮೆಲ್ಲರ ಕಳೆದು ಹೋದ ದಿನಗಳ ನೆನಪೂ ಹೌದು. ಆತ ನಮ್ಮನ್ನು ಆ ಪರಿ ಮೋಡಿ ಮಾಡಿದ್ದ. ಕಂಠದಿಂದ ಕಟ್ಟಿ ಹಾಕಿದ್ದ. ಆತ ಮಾತಾಡುತ್ತಿದ್ದರೆ ತಂಗಾಳಿಯ ನೂರು ಸೋಕು. ಆತ ನಮ್ಮ ಬಾಲ್ಯ, ಯೌವನಗಳನ್ನೆಲ್ಲ ಚೆಂದಗೊಳಿಸಿ, ಸುಂದರ ನೆನಪಿನ ನಮ್ಮ ಬಾಲ್ಯ, ಯೌವನಗಳನ್ನೆಲ್ಲ ಚೆಂದಗೊಳಿಸಿ, ಸುಂದರ ನೆನಪಿನ ಫ್ರೇಮು ತೊಡಿಸಿ ಮನಸ್ಸಿನ ಗೋಡೆಗೆ ನೇತುಹಾಕಿ ಇಳಿಬಿಟ್ಟವ.

ಆತ ಅಮೀನ್‌ ಸಯಾನಿ.

‘ಭಾಯಿಯೋ ಔರ್‌ ಬೆಹನೋ, ಯೇ ಬಿನಾಕಾ ಗೀತ್‌ ಮಾಲಾ, ಆಪ್‌ ಸಬ್‌ಕೋ ಸ್ವಾಗತ್‌’ಅಂದ್ರೆ ಸಾಕು ಮೈಮನಗಳಲ್ಲಿ ಮಿಂಚಿನ ಸಂಚಾರ. ನೆನಪಿನ ಮೆರವಣಿಗೆಯಲ್ಲಿ ಟ್ರಾಫಿಕ್‌ ಜಾಮ್‌. ಅದೆಂಥ ಅದ್ಭುತ ಕಂಠವದು! ಇಡೀ ದೇಶವನ್ನು ಆವಾಹಿಸಿಕೊಂಡ, ಇಡೀ ದೇಶದ ಜನತೆಯನ್ನು ಕಟ್ಟಿಹಾಕಿದ ದನಿಯದು, ಆತನ ಮಾತಿಗೆ ಬಂಗಾರದ ಲೇಪವಿತ್ತು. ಅಚ್ಚರಿಯೆನಿಸುವ ಮಾಧುರ್ಯವಿತ್ತು. ಸ್ವರಕ್ಕೆ ಸಾಥಿಯಾಗುವ ಸೊಗಸು ಭಾಷೆಯಿತ್ತು. ಆತನ ದನಿ ಕೇಳಿದರೆ ಸಾಕು ಯಾರಾದರೂ ತಟ್ಟನೆ ಹೇಳುತ್ತಿದ್ದರು ‘ಇದು ಅಮೀನ್‌ ಸಯಾನಿದು’ ಎಂದು. ಆತನನ್ನು ನೋಡದವರೂ ಮಾತಿನಿಂದ ಗುರುತಿಸಬಹುದಾಗಿತ್ತು. ಅಮೀನ್‌ ನಿಜಕ್ಕೂ ಸ್ವರ ಅಮೀರ.

ಒಮ್ಮೆ ಲತಾ ಮಂಗೇಶ್ವರ್‌ ಅಮೀನ್‌ ಸಯಾನಿ ಬಗ್ಗೆ ಹೇಳಿದ್ದರು ‘ಅಂದು ರಾತ್ರಿ ಮುಂಬೈನ ಬೀದಿಯಾಂದರಲ್ಲಿ ಹೋಗುತ್ತಿದ್ದೆ. ಆ ಮನೆಯಲ್ಲಿ ಅಷ್ಟೊಂದು ಮಂದಿ ಏಕೆ ಸೇರಿದ್ದಾರೆಂದು ಗೊತ್ತಾಗಲಿಲ್ಲ. ಅಲ್ಲಿ ಜಮಾಯಿಸಿದ್ದ ಗುಂಪು ಹೊಸ್ತಿಲು ದಾಟಿ ಬೀದಿಗೆ ಇಳಿದು ಬಂದಿತ್ತು. ಎಲ್ಲರೂ ರೇಡಿಯಾಕ್ಕೆ ಕಿವಿ ಹಚ್ಚಿ ಕುಳಿತಿದ್ದರು. ಆತನ ದನಿಯ ಇಳಿಜಾರಿನಲ್ಲಿ ಹಿಂದಿ ಚಿತ್ರಗೀತೆಗಳು ಹರಿದು ಬರುತ್ತಿದ್ದವು. ನನಗೆ ಆಗ ಅನಿಸಿತು, ಈತನ ಕಾರ್ಯಕ್ರಮ ನಮ್ಮ ಹಾಡುಗಳಿಗೆ ಮರುಜೀವ ತಂದುಕೊಡುತ್ತಿದೆ’.

ಬುಧವಾರ ರಾತ್ರಿ ಎಂಟಾದರೆ ಅದು ಅಮೀನ್‌ ಸಯಾನಿ ಸಮಯ. ಬಿನಾಕಾ ಗೀತ್‌ಮಾಲಾ ಸಮಯ. ಅಂದರೆ ದೇಶಾದ್ಯಂತ ಕರ್ಫ್ಯೂ. ಒಂದು ತಾಸು ದೇಶಕ್ಕೆ ದೇಶವೇ ನಿಶ್ಚಲ. ಬುಧವಾರ ರಾತ್ರಿ ಎಂಟು ಗಂಟೆಗೆ ದೇಶದ ಯಾವುದೇ ಮೂಲೆಯಲ್ಲಿ ಯಾವ ಕಾರ್ಯಕ್ರಮವನ್ನೂ ಏರ್ಪಡಿಸುತ್ತಿರಲಿಲ್ಲ. ಒಂದು ಗಂಟೆಯ ರೇಡಿಯಾ ಕಾರ್ಯಕ್ರಮಕ್ಕೆ ಇಡೀ ದೇಶ ಸ್ಪಂದಿಸುತ್ತಿದ್ದ ರೀತಿಯದು. ಅಮೀನ್‌ ಸಯಾನಿ ಭಾಯಿಯೋ ಔರ್‌ ಬೆಹನೋ...ಅಂದ್ರೆ ಶರೀರವೆಲ್ಲಿಯೇ ಇರಲಿ ಮನಸ್ಸು ಮಾತ್ರ ರೇಡಿಯಾ ಪೆಟ್ಟಿಗೆ ಮುಂದೆ ಚಕ್ಕಳಮಕ್ಕಳ ಹಾಕಿ ಕುಳಿತುಬಿಡುತ್ತಿತ್ತು. ಒಂದು ಗಂಟೆ ಜಪ್ಪಯ್ಯ ಅಂದರೂ ಏಳದ ತಾದಾತ್ಮ್ಯ. ಅನಂತರ ಮನಸ್ಸೆಲ್ಲಾ ಖುಷಿ ಖುಷಿ, ನಿರಾಳ ನಿರಾಳ. ಮತ್ತೆ ಮುಂದಿನ ಬುಧವಾರ ಯಾವಾಗ ರಾತ್ರಿ ಎಂಟಾಗುವುದೋ ಎಂಬ ನಿರೀಕ್ಷೆ. ಅಲ್ಲಿಯತನಕ ಚಡಪಡಿಕೆ. ನಾಚಿಕೆಯೇ ಇಲ್ಲದ ಕುತೂಹಲ.

ಅಮೀನ್‌ ಸಯಾನಿ ಜೀವಂತ ದಂತಕತೆ. ರೇಡಿಯಾ ನಿರೂಪಕನಾಗಿ ಆತನನ್ನು ಮೀರಿಸಿದವರೇ ಇಲ್ಲ. ಟಿವಿ ರಾಮಾಯಣ, ಮಹಾಭಾರತ, ಒಂದು ದಿನದ ಕ್ರಿಕೆಟ್‌ ಪಂದ್ಯಗಳೆಲ್ಲ ಜನರನ್ನು ಬಾಚಿ ತಬ್ಬಿಕೊಳ್ಳುವ ಎಷ್ಟೋ ವರ್ಷಗಳ ಮೊದಲು ತನ್ನ ಸ್ವರದಿಂದ ಎಲ್ಲರನ್ನೂ ಬಂಧಿಸಿದವನು, ಬೆಸೆದವನು. ಒಂದಲ್ಲ, ಎರಡಲ್ಲ ಐವತ್ತು ವರ್ಷಗಳ ಕಾಲ ರೇಡಿಯಾದಲ್ಲಿ ಮೆರೆದು ಆಳಿದವನು. ಸೋಜಿಗವೆನಿಸಬಹುದು ಸಯಾನಿ ಏನಿಲ್ಲವೆಂದರೂ 55 ಸಾವಿರ ರೇಡಿಯಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರಬಹುದು. ಇಪ್ಪತ್ತು ಸಾವಿರ ರೇಡಿಯಾ ಜಿಂಗಲ್‌ಗಳನ್ನು ಬರೆದಿರಬಹುದು. ಕನಿಷ್ಠ ಮೂರು ಸಾವಿರ ಸಭೆ, ಸಮಾರಂಭಗಳಲ್ಲಿ ಕಾರ್ಯಕ್ರಮ ನಿರೂಪಿಸಿ (anchor)ರ ಬಹುದು. ಅಷ್ಟೇ ಅಲ್ಲ ಎಂಟು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬಹುದು. ರೇಡಿಯಾಕ್ಕಾಗಿ ಸಯಾನಿ ಸಂದರ್ಶಿಸದ ಹಿಂದಿಚಿತ್ರ ನಟ, ನಟಿ, ಸಂಗೀತ ನಿರ್ದೇಶಕ, ಗೀತರಚನೆಕಾರ, ಹಿನ್ನೆಲೆ ಗಾಯಕ, ಗಾಯಕಿಯರು ಇರಲಿಕ್ಕಿಲ್ಲ. ಸಯಾನಿ ಕರೆದರೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. ಸಯಾನಿ ನಡೆಸಿಕೊಡುವ ಕಾರ್ಯಕ್ರಮಗಳ ಜನಪ್ರಿಯತೆಯೇನೆಂಬುದು ಹಿಂದಿ ಚಿತ್ರರಂಗದಲ್ಲಿರುವವರಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಕೆಲವರಂತೂ ತಾವಾಗಿಯೇ ಮುಗಿಬಿದ್ದು ಸಂದರ್ಶನ ಕೊಡುತ್ತಿದ್ದರು. ತಮ್ಮನ್ನು ಸಂದರ್ಶಿಸುವಂತೆ ಒತ್ತಡ ಹೇರುತ್ತಿದ್ದರು. ಪ್ರಾಯಶಃ ಸಯಾನಿಗೆ ಸಿಗದವರೆಂದರೆ ಮಹಮ್ಮದ್‌ ರಫಿ. ರಫಿಗೆ ಸಂದರ್ಶನವೆಂಬುದೆ ಒಂಥರ ಮುಜುಗರ, ನಾಚಿಕೆ. ಸಯಾನಿ ಎಷ್ಟೇ ಕರೆದರೂ ರಫಿ ಹೋಗಲಿಲ್ಲ. ಕೊನೆಗೆ ಸಯಾನಿ ಬೇರೆ ಉಪಾಯ ಮಾಡಿದ. ರಫಿಯ ಕಾಲ್ಪನಿಕ ವ್ಯಕ್ತಿಯನ್ನು ಸೃಷ್ಟಿಸಿದೆ. ಆತನ ಸಂದರ್ಶನ ಮಾಡಿದ. ತಮ್ಮ ಪ್ರಶ್ನೆಗಳಿಗೆ ರಫಿ ಹಾಡಿದ ಹಾಡುಗಳನ್ನೇ ಉತ್ತರ ರೂಪದಲ್ಲಿ ಕೊಟ್ಟ. ಸ್ವತಃ ರಫಿಯೇ ಮಾತಾಡಿದ್ದರೆ ಈ ಕಾರ್ಯಕ್ರಮ ಅಷ್ಟೊಂದು ಸೊಗಸಾಗುತ್ತಿರಲಿಲ್ಲವೇನೋ?ಈ ರೇಡಿಯಾ ಸಂದರ್ಶನವನ್ನು ಆಲಿಸಿದ ರಫಿ, ಸಯಾನಿಯನ್ನು ಖುದ್ದಾಗಿ ಅಭಿನಂದಿಸಿದರು. ಇದು ಸಯಾನಿ ಅಸಲಿಯತ್ತು.

ಅಮೀನ್‌ ಸಯಾನಿ ಮೂಲತಃ ಕಚ್‌ ಪ್ರಾಂತದವನು. ಅವನ ಪೂರ್ವಿಕರು ಬಲ್ಸಾರ್‌ದಿಂದ ವಲಸೆ ಬಂದವರು. ಸಯಾನಿಗೆ ಇಬ್ಬರು ಸಹೋದರರರು- ಹಬೀಬ್‌ ಹಾಗೂ ಹಮೀದ್‌. ಹಬೀಬ್‌ ಕೆಲಸ ಹುಡುಕಿಕೊಂಡು ಇಂಗ್ಲೆಂಡ್‌ಗೆ ಹೋದವನು ವಾಪಸ್‌ ಬರಲಿಲ್ಲ. ಹಮೀದನೇ ಅಮೀನ್‌ಗೆ ಹೆಗಲಾದ. ಅಮೀನ್‌ ತಾಯಿ ಗಾಂಧೀಜಿಯ ಕಟ್ಟಾ ಅನುಯಾಯಿ. ಆಕೆ ಕೆಲ ಕಾಲ ಗಾಂಧಿ ಆಶ್ರಮದಲ್ಲೇ ಇದ್ದಳು. ಆಕೆಗೆ ಕವನ, ಸಾಹಿತ್ಯ, ಬರವಣಿಗೆಯಲ್ಲಿ ಆಸಕ್ತಿಯಿತ್ತು. ಇದನ್ನು ಗಮನಿಸಿದ ಗಾಂಧೀಜಿ ಆಕೆಗೆ ಪತ್ರಿಕೆಯನ್ನು ಆರಂಭಿಸುವಂತೆ ಸೂಚಸಿದರು. ಆಕೆ ಗುಜರಾತಿ, ಹಿಂದಿ, ಉರ್ದುನಲ್ಲಿ ಪಾಕ್ಷಿಕವೊಂದನ್ನು ಆರಂಭಿಸಿದಳು. ತಾಯಿಯ ಪತ್ರಿಕೆಯಲ್ಲಿ ಅಮೀನ್‌ ಪ್ರೂಫ್‌ ರೀಡರ್‌ ಆಗಿದ್ದ. ಪತ್ರಿಕೆ ಹಂಚುವ ಕೆಲಸವನ್ನೂ ಮಾಡುತ್ತಿದ್ದ. ಅನಂತರ ಈ ಪತ್ರಿಕೆಯಲ್ಲಿ ಬರೆಯತೊಡಗಿದ್ದ. ಆತನಿಗೆ ಓದಿನಲ್ಲಿ ಆಸಕ್ತಿ ಬಂದಿದ್ದೇ ಇಲ್ಲಿ. ಡಿಗ್ರಿ ಪಾಸು ಮಾಡಿದ್ದ ಆತ, ಪತ್ರಿಕೆಯಲ್ಲಿ ಸಾಹಿತ್ಯ ಓದಿಕೊಂಡ. ಹಿಂದಿ ಸಾಹಿತ್ಯದ ಮೇರುಕೃತಿಗಳನ್ನು ತಿರುಗಿಸಿದ. ಪತ್ರಿಕೆಯ ಕೆಲಸದಿಂದ ದುಡ್ಡು ಸಿಗುತ್ತಿರಲಿಲ್ಲ. ಇದನ್ನು ನೆಚ್ಚಿಕೊಳ್ಳುವಂತಿರಲಿಲ್ಲ.

ಇದೇ ಸಂದರ್ಭದಲ್ಲಿ (1951) ರೇಡಿಯಾ ಸಿಲೋನ್‌ ಪ್ರಾಯೋಜಿತ ಕಾರ್ಯಕ್ರಮಗಳನ್ನು ಆರಂಭಿಸಿತು. ಇವುಗಳನ್ನು ಮುಂಬೈನಲ್ಲಿ ಸಿದ್ಧಪಡಿಸಲಾಗುತ್ತಿತ್ತು. ಈ ಕಾರ್ಯಕ್ರಮಗಳನ್ನು ಅಮೀನ್‌ ಸಹೋದರ ಹಮೀದ್‌ ನಿರ್ದೇಶಿಸುತ್ತಿದ್ದರು. ಸ್ವತಃ ಹಮೀದ್‌ಬೋರ್ನ್‌ವೀಟಾ ಕ್ವಿಜ್‌ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ತಮ್ಮ ಅಮೀನ್‌ ವಿದ್ಯಾಭ್ಯಾಸ ಮುಂದುವರಿಸಲಿ ಎಂಬುದು ಹಮೀದ್‌ ಆಸೆಯಾಗಿತ್ತು. ಆದರೆ ಹಣೆಬರಹವನ್ನು ಬದಲಿಸುವುದಾದರೂ ಹೇಗೆ?‘ರೇಡಿಯಾ ಸಿಲೋನ್‌’ ಸಿನಿಮಾ ಹಾಡುಗಳನ್ನು ಆಧರಿಸಿದ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿತು. ಬಿನಾಕಾ ಟೂಥ್‌ಪೇಸ್ಟ್‌ ಇದನ್ನು ಪ್ರಾಯೋಜಿಸಲು ಮುಂದೆ ಬಂದಿತು. ಹೊಸ ದನಿಯನ್ನು ಪರಿಚಯಿಸುವುದು ಉದ್ದೇಶವಾಗಿತ್ತು. ಕಾರಣವಿಷ್ಟೇ. ಹೊಸ ನಿರೂಪಕರಿಗೆ ಹೆಚ್ಚು ಹಣ ಕೊಡಬೇಕಾಗಿರಲಿಲ್ಲ. ಅಲ್ಲದೇ ಶ್ರೋತೃಗಳು ಬರೆಯುವ ಪತ್ರಗಳನ್ನು ವಾರವಿಡೀ ಓದುವ ಕೆಲಸವೂ ಇರುತ್ತಿದ್ದುದರಿಂದ, ಪರಿಣತರು, ಪ್ರಸಿದ್ಧರು ಈ ಕೆಲಸ ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ರೇಡಿಯಾ ನಿರೂಪಕರಾಗಿ ಏನೇನೂ ಅನುಭವ ಇಲ್ಲದ ಅಮೀನ್‌ನನ್ನು ಆಯ್ಕೆ ಮಾಡಲಾಯಿತು. ವಾರಕ್ಕೆ 25ರೂ. ಸಂಬಳ. ಇಡೀ ಕಾರ್ಯಕ್ರಮವನ್ನು 150ರೂ ಒಳಗೆ ಸಿದ್ಧಪಡಿಸಬೇಕಿತ್ತು. ನಿರೂಪಕನೇ ಸ್ಕಿೃಪ್ಟ್‌ ಬರೆಯಬೇಕು ಶ್ರೋತೃಗಳ ಪತ್ರ ನೋಡಬೇಕು. ಆತನೇ ಕಾರ್ಯಕ್ರಮ ನಿರೂಪಿಸಬೇಕು. ಈ ಕೆಲಸಕ್ಕೆ ಸಯಾನಿ ಹೇಳಿ ಮಾಡಿಸಿದಂತಿದ್ದ.

1952ರಲ್ಲಿ ಬಿನಾಕಾ ಗೀತ್‌ಮಾಲಾ ಅರ್ಧಗಂಟೆ ಕಾರ್ಯಕ್ರಮವಾಗಿ ಆರಂಭಗೊಂಡಿತು. ಮೊದಲ ಪ್ರಸಾರಕ್ಕೆ ಸುಮಾರು 20 ಪತ್ರಗಳು ಬಂದಿದ್ದವು. ಮೂರನೆ ಕಾರ್ಯಕ್ರಮದ ಹೊತ್ತಿಗೆ 6ಸಾವಿರ ಮಂದಿ ಅಮೀನ್‌ ಭಾಯಿ ಕಂಠ, ನಿರೂಪಣೆ ಮೆಚ್ಚಿ ಬರೆದಿದ್ದರು. ಬಿನಾಕಾ ಗೀತ್‌ಮಾಲಾ ಆರಂಭವಾಗಿ ಮೂರು ತಿಂಗಳಿಗೆ ದೇಶಾದ್ಯಂತ ಹುಚ್ಚೆಬ್ಬಿಸಿತ್ತು. ಆಗ ಕೇವಲ ಏಳು ಹಾಡುಗಳನ್ನಷ್ಟೇ ಪ್ರಸಾರ ಮಾಡಲಾಗುತ್ತಿತ್ತು. 1954ರ ಹೊತ್ತಿಗೆ ಸುಮಾರು ಎರಡು ಲಕ್ಷ ಶ್ರೋತೃಗಳು ಪತ್ರ ಬರೆದು ಒಂದೇ ಬೇಡಿಕೆ ಇಟ್ಟಿದ್ದರು ‘ಕಾರ್ಯಕ್ರಮವನ್ನು ಇನ್ನರ್ಧ ಗಂಟೆಗೆ ವಿಸ್ತರಿಸಬೇಕು.’ ರೇಡಿಯಾ ಸಿಲೋನ್‌ ಒಪ್ಪಿತು. ಆಗ ಸಯಾನಿ ಹಲವಾರು ಪ್ರಯೋಗಗಳನ್ನು ಮಾಡಿದ. ಕೌಂಟ್‌ಡೌನ್‌ ಅವುಗಳಲ್ಲೊಂದು. ದೇಶದ ಪ್ರಮುಖ ನಗರಗಳಲ್ಲಿ 78 ಆರ್‌ಪಿಎಂ ಗ್ರಾಮೋಫೋನ್‌ ಡಿಸ್ಕ್‌ಗಳ ಮಾರಾಟ ಸಂಖ್ಯೆಯನ್ನು ಮಾನದಂಡವನ್ನಾಗಿಟ್ಟುಕೊಂಡು ಜನಪ್ರಿಯತೆ ಅಳೆಯಲಾಗುತ್ತಿತ್ತು. ಓದುಗರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಬಿನಾಕಾ ಗೀತ್‌ಮಾಲಾದಲ್ಲಿ ಪ್ರಸಾರವಾಗುವ ಹಾಡುಗಳು ಸಿನಿಮಾ ಭವಿಷ್ಯ ನಿರ್ಧರಿಸುತ್ತಿದ್ದವು. ಅಷ್ಟೇ ಅಲ್ಲ ಸಂಗೀತ ನಿರ್ದೇಶಕರ ಹಾಗೂ ಹಿನ್ನೆಲೆ ಗಾಯಕರ ಸಂಭಾವನೆಯನ್ನೂ. ಕ್ಯಾಸೆಟ್‌ಗಳ ಮಾರಾಟದ ಮೇಲೂ ಈ ಕಾರ್ಯಕ್ರಮ ಪರಿಣಾಮ ಬೀರುತ್ತಿತ್ತು. ಪಾಕೀಜಾ, ಸಸುರಾಲ್‌, ತಾಜ್‌ಮಹಲ್‌, ಸಂಗಮ್‌, ಸಹೇಲಿ, ಶಾಗಿರ್ದ್‌, ಅಂದಾಜ್‌, ಟ್ಯಾಕ್ಸಿ ಡ್ರೆೃವರ್‌, ಜಂಗ್ಲೀ ಮುಂತಾದ ಸಿನಿಮಾ ಯಶಸ್ಸಿಗೆ ಸಯಾನಿ ಕೂಡ ಕಾರಣನಾಗಿದ್ದ.

ಬಿನಾಕಾ ಹೋಗಿ ಸಿಬಾಕಾ ಆಯಿತು. ಸಿಬಾಕಾ ಹೋಗಿ ಕಾಲ್ಗೇಟ್‌ ಸಿಬಾಕಾ ಗೀತ್‌ಮಾಲಾ ಆಯಿತು. 1989ರಲ್ಲಿ ಈ ಕಾರ್ಯಕ್ರಮವನ್ನು ರೇಡಿಯಾ ಸಿಲೋನ್‌ದಿಂದ ಆಕಾಶವಾಣಿಗೆ ವರ್ಗಾಯಿಸಲಾಯಿತು. 1993ರಲ್ಲಿ ಕಾರ್ಯಕ್ರಮ ನಿಂತೇ ಹೋಯಿತು. ಐದು ವರ್ಷಗಳ ಬಳಿಕ ಪುನಃ ನಿಂತುಹೋಯಿತು. ಆದರೆ ಸಿಯಾನಿ ಮಾತ್ರ ಒಂದೇ ಒಂದು ವಾರ ನೆಪ ಹೇಳದೇ ಕಳ್ಳಬೀಳದೇ, ನಲವತ್ತೊಂದು ವರ್ಷ ಸತತವಾಗಿ ‘ಗೀತ್‌ಮಾಲಾ’ ನಡೆಸಿಕೊಟ್ಟ. ಹಿಂದಿ ಹಾಡುಗಳಷ್ಟೇ ಅಲ್ಲದೆ, ಅವನ ಮಾತುಗಳನ್ನು ಕೇಳುವ ತವಕ ಈ ಕಾರ್ಯಕ್ರಮದ ಕುತೂಹಲವನ್ನು ಹಿಡಿದಿಟ್ಟಿದ್ದವು. ಹಾಡಿಗೆ, ಗಾಯಕರಿಗೆ ಫಿಲ್ಮ್‌ಫೇರ್‌ ಪ್ರಶಸ್ತಿ ನೀಡುವಾಗ ಗೀತ್‌ಮಾಲಾದಲ್ಲಿ ಎಷ್ಟು ಸಲ ಬಿತ್ತರವಾಗಿದೆಯೆಂಬ ಅಂಶವನ್ನು ಪರಿಗಣಿಸಲಾಗುತ್ತಿತ್ತು. ರೇಡಿಯಾ ಸಿಲೋನ್‌ ಬಾರದ ರೇಡಿಯಾ ಸೆಟ್‌ಗಳನ್ನು ಯಾರೂ ಖರೀದಿಸುತ್ತಿರಲಿಲ್ಲ. ಸಲ್ಮಾನ ರಶ್ದಿ ತನ್ನ ‘ಶೇಮ್‌’ ಕೃತಿಯಲ್ಲಿ ರೇಡಿಯಾ ಸಿಲೋನ್‌ ಹಾಗೂ ಸಯಾನಿಯನ್ನು ನೆನಪಿಸಿಕೊಂಡಿರುವುದು ವಿಶೇಷ. ವಿಶ್ವದ ಐದು ಮಹಾನ್‌ ಬ್ರಾಡ್‌ಕಾಸ್ಟ್‌ರ್‌ಗಳಲ್ಲಿ ಅಮೀನ್‌ ಸಯಾನಿ ಕೂಡ ಒಬ್ಬ ಎಂದು ‘ದಿ ಹಿಂದು’ ಪತ್ರಿಕೆ ಹೇಳಿತ್ತು. ಬಿಬಿಸಿಯ ಪ್ರಸಿದ್ಧ ಬ್ರಾಡ್‌ಕಾಸ್ಟರ್‌ಗಳಿಗೆ ಸಯಾನಿಯನ್ನು ಹೋಲಿಸಿತ್ತು. ಸಯಾನಿ ಕಮಿರ್ಶಿಯಲ್‌ ರೇಡಿಯಾ ಪಿತಾಮಹ ಕ್ಲಿಫರ್ಡ್‌ ಆರ್‌ಡಾಟ್‌ಗೆ ಏನೂ ಕಮ್ಮಿಯಿಲ್ಲ ಎಂಬ ಮಾತುಗಳನ್ನೂ ಹೇಳಲಾಗುತ್ತಿತ್ತು. ಸಯಾನಿ ಅಷ್ಟೊಂದು ಎತ್ತರಕ್ಕೆ ಏರಿದ್ದ. ಅಂದು ಸಯಾನಿಗೆ ಸಿಗುತ್ತಿದ್ದ ಶ್ರೋತೃಗಳ ಮುಂದೆ ಇಂದು ‘ಕೌನ್‌ ಬನೇಗಾ ಕರೋಡ್‌ಪತಿ’ಯ ಅಮಿತಾಭ್‌ ಬಚ್ಚನ್‌ ಏನೇನೂ ಅಲ್ಲ. ಭಾರತ- ಪಾಕ್‌ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದರೆ ಬುಧವಾರ ರಾತ್ರಿ 8ರಿಂದ 9ಗಂಟೆಗೆ ಎರಡೂ ಕಡೆಯ ಸೈನಿಕರು ಬಂದೂಕು ಬಿಸಾಕಿ ರೇಡಿಯಾವನ್ನು ಕಿವಿಗೆ ಅವುಚಿಕೊಳ್ಳುತ್ತಿದ್ದರು. ಸಯಾನಿ ಬಾಯ್ತುಂಬಾ ‘ಬೆಹನೋ ಔರ್‌ ಭಾಯಿಯೋ’ ಎನ್ನುತ್ತಿದ್ದರೆ ಏನೋ ಅವ್ಯಕ್ತ ಆನಂದ. ಹುಳಿ ನೆನಪುಗಳನ್ನು ಹಿಂಡಿದ ಅನುಭವ. ಸಿಹಿ ನೆನಪುಗಳ ದಂಡಯಾತ್ರೆ.

ನಮಗೆ ಇಷ್ಟೆಲ್ಲ ವರ್ಷ ಹಾಡು ಕೇಳಿಸಿದ, ಹಾಡು ಕಲಿಸಿದ, ಹಾಡಿನಲ್ಲಿ ಬದುಕಿನ ಭಾವಗಳನ್ನು ಬಿಚ್ಚಿಟ್ಟ ಅಮೀನ್‌ ಸಯಾನಿ, ಆತನ ಮಧುರ ಕಂಠ ನಮ್ಮ ಎದೆಯ ಕವಾಟಿಯಲ್ಲಿ ಸದಾ ಭದ್ರ. ಕದ ಬಡಿದರೆ ಸಾವಿರ ನೆನಪುಗಳ ಕಲರವ. ದನಿಯಿರುವವರೆಗೆ ಅಮೀನ್‌ ಸಯಾನಿ ಅಮರ!

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more