• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಟಿಆರ್‌ ಫುಡ್ಸ್‌ ಇದ್ರೆ ಕಿಚನ್‌ಗೆ ಹೋಗ್ಬೇಕಿಲ್ಲ, ಮನೆಯಲ್ಲಿ ಕಿಚನ್ನೇ ಇರ್ಬೇಕಿಲ್ಲ!

By Staff
|
Vishweshwar Bhat ವಿಶ್ವೇಶ್ವರ ಭಟ್‌
ಅವರನ್ನು ಕಂಡರೆ ನನಗೆ ಅತೀವ ಅಭಿಮಾನ, ಹೆಮ್ಮೆ!

ಪರಂಪಳ್ಳಿ ಸದಾನಂದ ಮಯ್ಯ ಅಂತ ಅವರ ಹೆಸರು. ಎಂಟಿಆರ್‌ ಫುಡ್ಸ್‌ ಲಿಮಿಟೆಡ್‌ನ ಮಾಲೀಕರು. ಅಪ್ಪಟ ಕನ್ನಡದ ಬ್ರ್ಯಾಂಡ್‌ ಆದ ಎಂಟಿಆರ್‌ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಸಾಹಸಿ. ಆಹಾರ ಉದ್ಯಮದಲ್ಲಿ ಅವರು ಮಾಡಿದ ಸಾಧನೆ ಪ್ರತಿಯಾಬ್ಬ ಕನ್ನಡಿಗನೂ ಹೆಮ್ಮೆ ಪಡುವಂಥದ್ದು. ನನಗೆ ಅನೇಕ ಸಲ ಅನಿಸಿದೆ, ಲಕ್ಷಾಂತರ ಕುಟುಂಬಗಳು ಹಾಯಾಗಿ ನೆಮ್ಮದಿಯ ಸಂಸಾರ ಮಾಡುತ್ತಿದ್ದರೆ ಅದರಲ್ಲಿ ಮಯ್ಯ ಅವರ ಯೋಗದಾನವೂ ಇದೆ. ಅಡುಗೆಮನೆಗೆ ಅಂಟಿಕೊಂಡಿದ್ದ ಹೆಂಗಸರನ್ನು ವಿಮೋಚನೆಗೊಳಿಸಿದ ಅಗ್ಗಳಿಕೆ ಅವರಿಗೆ ಸಲ್ಲಬೇಕು.

ಮನೆಯಲ್ಲಿ ಎಂಟಿಆರ್‌ ಫುಡ್ಸ್‌ ಇದ್ದರೆ ಹೆಂಗಸರು ಅಡುಗೆಮನೆಗೆ ಹೋಗಬೇಕಿಲ್ಲ. ಅಷ್ಟೇ ಅಲ್ಲ, ಮನೆಯಲ್ಲಿ ಅಡುಗೆಮನೆಯೂ ಇರಬೇಕಿಲ್ಲ. ಅದರಲ್ಲೂ ಮಯ್ಯ ರೆಡ್ಡಿ ಟು ಈಟ್‌ ತಿಂಡಿ, ತಿನಿಸುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ನಂತರ ಜೀವನ ಅದೆಷ್ಟು ಸುರಳೀತವಾಗಿದೆಯೆಂದರೆ ಇದನ್ನು ಸೇವಿಸಿದ ಬಳಿಕ ಉಳಿಯುವುದು ‘ರೆಡಿ ಟು ಸ್ಲೀಪ್‌’.

ಮನೆಯಲ್ಲಿ ಎಂಟಿಆರ್‌ ಫುಡ್ಸ್‌ ಇದ್ದರೆ ಅಡುಗೆಮನೆ ಸಹ ಬೇಕಾಗಿಲ್ಲ ಅಂದೆ ತಾನೆ? ಈ ಮಾತನ್ನು ಸುಮ್ಮನೆ ಹೇಳಿದ್ದಲ್ಲ. ಬೆಳಿಗ್ಗೆ ಎದ್ದರೆ ಎಂಟಿಆರ್‌ ಕಾಫಿ. ಉಪಾಹಾರಕ್ಕೆ ಎಂಟಿಆರ್‌ ರವಾ ಇಡ್ಲಿ ಮಿಕ್ಸ್‌, ರವಾ ದೋಸಾ ಮಿಕ್ಸ್‌, ವಡಾ, ಸಾಂಬಾರ್‌, ಖಾರಾಬಾತ್‌, ಕೇಸರಿಬಾತ್‌, ಉಪಮಾ, ಸಮೋಸಾ, ಉತ್ತಪ್ಪ ಜತೆಯಲ್ಲಿ ಬಾದಾಮ್‌ ಹಾಲು. ಮಧ್ಯಾಹ್ನ ಊಟಕ್ಕೆ ಎಂಟಿಆರ್‌ ಉಪ್ಪಿನಕಾಯಿ, ಎಂಟಿಆರ್‌ ಪಾಪಡ್‌, ಚನ್ನಾಮಸಾಲಾ, ದಾಲ್‌ ಫ್ರೆೃ, ಆಲೂ ಮಟರ್‌, ಪಾಲಕ್‌ ಪನೀರ್‌, ನವರತ್ನ ಕುರ್ಮಾ, ಆಲೂ ಪರಾಠಾ, ಪ್ಲೇನ್‌ ಪರಾಠಾ, ಈರುಳ್ಳಿ ಪರಾಠಾ, ಚಪಾತಿ, ಜತೆಯಲ್ಲಿ ಎಂಟಿಆರ್‌ ಜಾಮೂನು, ಪಾಯಸ. ಸಾಯಂಕಾಲ ಬಾಯಿಬೇಡಿಕೆಗೆ ಪಾವ್‌ಭಾಜಿ, ದಹೀಪುರಿ, ಪಾನಿಪೂರಿ. ರಾತ್ರಿ ಊಟಕ್ಕೆ ಎಂಟಿಆರ್‌ನ ಇನ್ನೂ ಬಗೆಬಗೆಯ ಐಟಮ್‌ಗಳು. ಊಟದ ಬಳಿಕ ಎಂಟಿಆರ್‌ ಐಸ್‌ಕ್ರೀಮ್‌.

ನಿಮಗೆ ಸಮಯವೇ ಇಲ್ಲವೆಂದಾದರೆ ರೆಡಿಟು ಈಟ್‌ ವರ್ಗದಲ್ಲಿ ಬಗೆಬಗೆಯ ಖಾದ್ಯಗಳು-ಟೊಮೇಟೊ ರೈಸ್‌, ಲೆಮನ್‌ ರೈಸ್‌, ಸಾಂಬಾರ್‌ ರೈಸ್‌, ರಸಂರೈಸ್‌, ಮಸಾಲ ರೈಸ್‌, ಜೀರಾ ರೈಸ್‌, ಜತೆಯಲ್ಲಿ ಟೊಮೆಟೊ, ಬೇಬಿಕಾರ್ನ್‌, ಕ್ಯಾರೆಟ್‌ ಸೂಪ್‌. ಪೊಟ್ಟಣಸಮೇತ ಬಿಸಿ ನೀರಿನಲ್ಲಿಟ್ಟು ಸ್ವಲ್ಪ ಬಿಸಿ ಮಾಡಿದರಾಯಿತು ಅಷ್ಟೆ. ಪ್ಲೇಟಿಗೆ ಸುರುವಿಕೊಂಡು ತಿನ್ನುವುದೊಂದೇ ಬಾಕಿ. ಬ್ರಹ್ಮಚಾರಿಗಳಿಗೆ, ಅವಿವಾಹಿತರಿಗೆ, ಹೆಂಡತಿ ಬಿಟ್ಟವರಿಗೆ, ಹೆಂಡತಿಯನ್ನು ತವರಿಗೆ ಕಳಿಸಿದವರಿಗೆ, ಏಕಾಂಗಿಯಾಗಿರುವವರಿಗೆ, ಪ್ರವಾಸದಲ್ಲಿರುವವರಿಗೆ, ಹೋಟೆಲ್‌ ತಿಂಡಿ ಇಷ್ಟಪಡದವರಿಗೆ ಎಂಟಿಆರ್‌ ಫುಡ್ಸ್‌ ಆಹಾರವಷ್ಟೇ ಅಲ್ಲ ಜೀವನಸಂಗಾತಿ. ಇನ್ನು ಕೆಲವರಿಗೆ ಇದು ಅಜ್ಜಿ, ಅಮ್ಮ, ಮಡದಿ. ಮತ್ತೆ ಕೆಲವರಿಗೆ ಪ್ರೀತಿಯ ಅಡುಗೆಭಟ್ಟ!

ಆಹಾರ ತಯಾರಿಕೆಯಲ್ಲಿ ಏನೆಲ್ಲ ಮಾಡಬಹುದೋ ಅವೆಲ್ಲವನ್ನೂ ಸದಾನಂದ ಮಯ್ಯ ಮಾಡಿ ತೋರಿಸಿದ್ದಾರೆ. ‘ಇದೊಂದನ್ನು ನೀವು ಮಾಡಿಲ್ಲ’ ಎಂದು ಹೇಳುವಂತಿಲ್ಲ. ಅದಕ್ಕೆ ಅವರು ಅವಕಾಶವನ್ನೇ ಕೊಡುವುದಿಲ್ಲ. ಅದಕ್ಕೆ ಅವರು ಆರಂಭಿಸಿರುವ ರೆಡಿ ಟೂ ಈಟ್‌ ಹಾಗೂ ಫ್ರೋಜನ್‌ ಫುಡ್‌ಗಳೇ ಸಾಕ್ಷಿ. ನೀವು ಅಪ್ಪಟ ಸಸ್ಯಾಹಾರಿಗಳಾದರೆ, ಹೋಟೆಲ್‌ ತಿಂಡಿ ಬಯಸುವವರಲ್ಲದಿದ್ದರೆ ರೆಡಿ ಟು ಈಟ್‌ನಲ್ಲಿ ಸಿಗುವ ಬಗೆಬಗೆಯ ಆಹಾರಗಳು ನಿಮ್ಮ ಊಟದ ಚಿಂತೆಯನ್ನು ನಿವಾರಿಸುತ್ತವೆ. ಒಂದು ವರ್ಷ ಕೆಡದಿರುವ ಈ ಆಹಾರಗಳನ್ನು ಬಟ್ಟೆಯ ಜತೆಗೆ ಸೂಟ್‌ಕೇಸ್‌ನಲ್ಲಿಟ್ಟುಕೊಂಡರೆ ಪ್ರವಾಸದಲ್ಲಿ ಹಸಿವು ಹತ್ತಿರ ಸುಳಿಯದು.

ಹಾಗೆಯೇ ಫ್ರೋಜನ್‌ ಫುಡ್‌. ವಿಶೇಷ ಪೊಟ್ಟಣದಲ್ಲಿ ಪ್ಯಾಕ್‌ ಮಾಡಿದ ಇಡ್ಲಿ, ವಡೆ, ಸಮೋಸಾ, ಪರಾಠಾಗಳನ್ನು ಮನೆಯ ಫ್ರಿಡ್ಜ್‌ನಲ್ಲಿಟ್ಟರೆ, ಯಾವ ಹೊತ್ತಿನಲ್ಲಿ ಎಷ್ಟು ನೆಂಟರು ಬಂದರೂ ಕಂಗಾಲಾಗಬೇಕಿಲ್ಲ. ವಡೆ ಅಥವಾ ಸಮೋಸವನ್ನು ಎಣ್ಣೆಯಲ್ಲಿ ಕರಿದು ಬಿಸಿ ಮಾಡಿದರಾಯಿತು. ಮೊದಲ ಬಾರಿಗೆ ಸಿದ್ಧಪಡಿಸುವಾಗ ವಡೆ ಎಷ್ಟು ಎಣ್ಣೆಯನ್ನು ಕುಡಿಯುತ್ತದೋ ಅಷ್ಟೇ. ಎರಡನೇ ಬಾರಿಗೆ ವಡೆ ಒಂದು ಎಣ್ಣೆಯನ್ನೂ ಹೀರುವುದಿಲ್ಲ. ಇದೇ ರೀತಿ ಪ್ರೋಜನ್‌ ಪರಾಠಾಗಳು. ತವಾ ಮೇಲಿಟ್ಟು ಬಿಸಿ ಮಾಡಿದಂತಾಯಿತು. ಊಟ, ತಿಂಡಿ ಅಂದ್ರೆ ಸುಲಿದ ಬಾಳೆಹಣ್ಣಿನಂತೆ. ಫಾಸ್ಟ್‌ ಜಗತ್ತಿಗೆ ಫಾಸ್ಟೆಸ್ಟ್‌ ಫುಡ್ಸ್‌!

ಈ ಐಟೆಮ್‌ಗಳಿಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದಾಗಿ ಮಯ್ಯ ರೆಡಿ ಟು ಈಟ್‌ ದೋಸೆಯನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಪ್ಯಾಕಿನೊಳಗೆ ದೋಸೆ, ಚಟ್ನಿ, ಪಲ್ಯ, ಸಿದ್ಧವಾಗಿರುತ್ತದೆ. ಬಿಚ್ಚಿ ತಿನ್ನುವುದೊಂದೇ ಬಾಕಿ. ಹಾಗೇ ರಾಗಿ ರೊಟ್ಟಿ, ಚಪಾತಿಗಳನ್ನೂ ಸಿದ್ಧಪಡಿಸಿದ್ದಾರೆ. ಜೋಳದ ರೊಟ್ಟಿ, ಖಡಕ್‌ ರೊಟ್ಟಿ ಸಹ ಮಯ್ಯ ಅವರ ಬೃಹತ್‌ ಆಧುನಿಕ ಅಡುಗೆ ಕೋಣೆಯಲ್ಲಿ ಸಿದ್ಧವಾಗುತ್ತಿವೆ. ಇದರ ಜೊತೆಗೆ ವಿವಿಧ ಚಟ್ನಿಪುಡಿಗಳು ಬೇಕಲ್ಲ? ಅವೂ ಸಹ ರೆಡಿಯಾಗುತ್ತಿದೆ. ಬಾಯಿ ಚಪ್ಪರಿಸಿಕೊಳ್ಳುತ್ತಿರುವಂತೆ ಬಂದುಬಿಡುತ್ತವೆ ಬಿಡಿ.

ಎಂಟಿಆರ್‌ ಫುಡ್‌ಗಳ ವೈಶಿಷ್ಟ್ಯವೆಂದರೆ promise of purity ಜತೆಯಲ್ಲಿ ರುಚಿ, ಗುಣಮಟ್ಟ ಹಾಗೂ ಕೈಗೆಟಕುವ ಬೆಲೆ. ಉದಾಹರಣೆಗೆ ರೆಡಿ ಟು ಈಟ್‌ ಫ್ರೋಜನ್‌ ವಡೆ. 20ವಡೆಗಳ್ಳುಳ್ಳ ಒಂದು ಪ್ಯಾಕಿಗೆ 60ರೂ. ಅಂದರೆ ಒಂದು ವಡೆಗೆ ಮೂರು ರೂ. ಇದೇ ವಡೆಯನ್ನು ದರ್ಶಿನಿ ಅಥವಾ ಹೋಟೆಲ್‌ಗಳಲ್ಲಿ 8-10ರೂಗೆ ಮಾರತ್ತಾರೆ. ಮನೆಯಲ್ಲಿ ಮಾಡಿದರೂ ಇಷ್ಟೊಂದು ಸೋವಿಯಾಗಲಿಕ್ಕಿಲ್ಲ. ಹಾಗೇ ಪರಾಠಾ ಅಥವಾ ರೋಟಿ. ಒಂದು ಪರಾಠಾಕ್ಕೆ ಐದು ರೂ. ಇದಕ್ಕೆ ಹೋಟೆಲ್‌ಗಳಲ್ಲಿ ಹದಿನೈದು ರೂ.ತೆರಬೇಕು. ಇದರ ಜತೆಗೆ ಥೇಟು ಎಂಟಿಆರ್‌ನ ರುಚಿ ಉಚಿತ, ಶುಚಿ ಖಚಿತ. ಹೀಗಾಗಿ ಎಂಟಿಆರ್‌ ಫುಡ್ಸ್‌ ಬಾಯಿರುಚಿಗೆ ವಗ್ಗರಣೆ ಹಾಕಿದಂತೆ.

ಇದರೊಂದಿಗೆ ದೇಸಿ ಆಹಾರಗಳಾದ ಪುಳಿಯೋಗರೆ, ಬಿಸಿಬೇಳೆ ಬಾತ್‌, ಪೊಂಗಲ್‌, ರಸಂ, ಪಾಲಕ್‌ಪನೀರ್‌ಗಳ ರುಚಿ ಸವಿದವನಿಗೇ ಗೊತ್ತು.

ದೇಶದಲ್ಲಿ ಸಂಸ್ಕರಿತ ಆಹಾರ ಉದ್ಯಮ ಶೈಶವಾವಸ್ಥೆಯಲ್ಲಿರುವಾಗ, ಎಂಟಿಆರ್‌ ಫುಡ್ಸ್‌ ಈಗಾಗಲೇ ತಾನೇ ನಿರ್ಮಿಸಿಕೊಂಡ ಹೆದ್ದಾರಿಯಲ್ಲಿ ಶರವೇಗದಲ್ಲಿ ಹೋಗುತ್ತಿರುವುದನ್ನು ಗಮನಿಸಬೇಕು. ಸಂಸ್ಕರಿತ ಆಹಾರ ತಯಾರಿಕೆಯಲ್ಲಿ ಮೈಸೂರಿನ ಸಿಎಫ್‌ಟಿಆರ್‌ಐ ಹಾಗೂ ಡಿಫೆನ್ಸ್‌ ಫುಡ್‌ ರಿಸರ್ಚ್‌ಲ್ಯಾಬ್‌ನಿಂದ ಸಹ ಸಾಧ್ಯವಾಗದಿರುವುದನ್ನು ಒಬ್ಬ ವ್ಯಕ್ತಿಯಾಗಿ ಮಯ್ಯ ಸಾಧಿಸಿ ತೋರಿಸಿದ್ದಾರೆ. ನನಗೆ ಇವೆಲ್ಲಕ್ಕಿಂತ ಮುಖ್ಯವಾಗಿ ಕಾಣುವುದು ಮಯ್ಯ ಅವರು ಅಸಂಖ್ಯ ಮಹಿಳೆಯರನ್ನು ಅಡುಗೆಯ ಬಂಧನದಿಂದ ಬಿಡಿಸಿರುವುದು.

ಅಡುಗೆಮನೆಯಲ್ಲಿ ಕಳೆಯುವ ಸಮಯವನ್ನು ಮಹಿಳೆಯರು ಬೇರೆ ಸದುದ್ದೇಶಕ್ಕೆ ಬಳಸಿಕೊಳ್ಳಬಹುದು. ಒಂದು ಪುಟ್ಟ ನಿದರ್ಶನ ಕೊಡುವುದಾದರೆ- ಒಂದು ಟನ್‌ ರೆಡಿ ಮಿಕ್ಸ್‌ಗಳನ್ನು ಎಂಟಿಆರ್‌ ಸಿದ್ಧಪಡಿಸಿದರೆ, ಅದರಿಂದ ಅಡುಗೆಮನೆಯಲ್ಲಿ ಮಹಿಳೆಯರ ಐದು ಸಾವಿರ ಗಂಟೆಗಳು ಉಳಿತಾಯವಾಗುತ್ತವೆ. ಈಗ ಪ್ರತಿದಿನ ಎಂಟಿಆರ್‌ನ ಭವ್ಯ ಪಾಕಶಾಲೆಯಲ್ಲಿ ನೂರು ಟನ್‌ ರೆಡಿಮಿಕ್ಸ್‌ಗಳು ಸಿದ್ಧವಾಗುತ್ತವೆ. ಅಂದರೆ ವಾರ್ಷಿಕ ಭಾರತೀಯ ಗೃಹಿಣಿಯರ 150ದಶಲಕ್ಷ ಗಂಟೆಗಳು ಉಳಿತಾಯವಾಗುತ್ತವೆ ಎಂದಂತಾಯಿತು. ಇದು ಅಡುಗೆಮನೆಯಲ್ಲಾದ ಕ್ರಾಂತಿ.

ಇಂದು ಎಂಟಿಆರ್‌ನ ಫುಡ್ಸ್‌ ಕೇವಲ ಭಾರತದಲ್ಲೊಂದೇ ಅಲ್ಲ, ವಿದೇಶಗಳಲ್ಲೂ ಭಾರತೀಯರನ್ನೊಂದೇ ಅಲ್ಲ ವಿದೇಶಿಯರನ್ನೂ ಆಕರ್ಷಿಸುತ್ತಿವೆ. ಜಪಾನೀಯರು, ಚೀನಿಯರು ಎಂಟಿಆರ್‌ ಪ್ರಾಡಕ್ಟ್‌ಗಳನ್ನು ಬಯಸುತ್ತಿದ್ದಾರೆ. ಅಮೆರಿಕ, ಬ್ರಿಟನ್‌, ಕೆನಡ, ಮಲೇಶಿಯಾ, ಸಿಂಗಪುರ, ಅರಬ್‌ ದೇಶಗಳು, ಆಸ್ಟ್ರೇಲಿಯಾಗಳು ಹಾಗೂ ನ್ಯೂಜಿಲ್ಯಾಂಡ್‌ನಲ್ಲೂ ಸಹ ಎಂಟಿಆರ್‌ ಲಭ್ಯ. ಆಫ್ರಿಕಾದಂಥ ದೇಶದಲ್ಲಿ ದಾರಿಹೋಕನೊಬ್ಬ ಬುತ್ತಿಬಿಚ್ಚಿ ಊಟ ಮಾಡುತ್ತಿದ್ದರೆ ಅದು ಎಂಟಿಆರ್‌ ರೆಡಿ ಟು ಈಟ್‌ ಆಗಿರಬಹುದು. ನಾನು ಮೂರು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋದಾಗ ಹದಿನೈದು ದಿನಗಳನ್ನು ದೂಡುವಂತಾಗಿದ್ದರೆ ಅದಕ್ಕೆ ‘ಮಯ್ಯ ಮಹಾತ್ಮೆ’ಯೇ ಕಾರಣ!

1983ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಎಂಟಿಆರ್‌ ಫುಡ್ಸ್‌ ಇಂದು ಬಹುರಾಷ್ಟ್ರೀಯ ಕಂಪನಿ ಸ್ವರೂಪ ಪಡೆದು ಹತ್ತು ಹಲವು ದೇಶಗಳಿಗೆ ವ್ಯಾಪಿಸಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಎಂಟಿಆರ್‌ (ಮಾವಳ್ಳಿ ಟಿಫಿನ್‌ ರೂಮ್‌) ಎಂಬ ಹೋಟೆಲ್‌ನ ಹೆಸರು, ಜಾಗತಿಕ ಬ್ರ್ಯಾಂಡ್‌ ಆಗಿ ಗಟ್ಟಿಯಾಗಿ ನಿಂತಿದೆ. ನೆಸ್ಟ್ಲೇಯಂತಹ ಬಹುರಾಷ್ಟ್ರೀಯ ಕಂಪನಿ ಎಂಟಿಆರ್‌ ಫುಡ್ಸ್‌ ಜತೆಗೆ ಜಿದ್ದಿಗೆ ಬಿದ್ದು ತಾನೂ ರೆಡಿಮಿಕ್ಸ್‌ಗಳನ್ನು ತಯಾರಿಸಲು ನಿರ್ಧರಿಸಿ, ಕೊನೆಗೆ ಎಂಟಿಆರ್‌ ಬ್ರ್ಯಾಂಡ್‌ ಮುಂದೆ ಸೆಣಸಲಾಗಲಿಕ್ಕಿಲ್ಲವೆಂದು ಕೈಬಿಟ್ಟಿದ್ದು ಕತೆ.

ವಾಲ್ಸ್‌, ಕ್ಯಾಡ್‌ಬರಿಯಂಥ ದೈತ್ಯ ಐಸ್‌ಕ್ರೀಮ್‌ ಕಂಪನಿಗಳಿಗೆ ಇನ್ನೂ ಸಹ ಎಂಟಿಆರ್‌ ಐಸ್‌ಕ್ರೀಮ್‌ನ್ನು ‘ಕರಗಿಸಲು’ ಸಾಧ್ಯವಾಗಿಲ್ಲ. ಇಂದು ಎಂಟಿಆರ್‌ ಬ್ರ್ಯಾಂಡಿನಲ್ಲಿ ಸುಮಾರು ಇನ್ನೂರು ಪ್ಯಾಕೇಜ್ಡ್‌ ಪ್ರಾಡಕ್ಟ್‌ಗಳು ಸಿಗುತ್ತವೆ. ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಎರಡು ಲಕ್ಷ ಚದರ ಅಡಿ ವಿಶಾಲ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಆಧುನಿಕ ಪಾಕಶಾಲೆಯಲ್ಲಿ ದಿನನಿತ್ಯ ನೂರು ಟನ್‌ ಆಹಾರ ಪದಾರ್ಥಗಳು ತಯಾರಾಗಿ, ದೇಶದಲ್ಲೆಡೆಯಿಂದ 2ಲಕ್ಷ ರಿಟೇಲ್‌ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಎಂಟಿಆರ್‌ ಫುಡ್ಸ್‌ ಲಕ್ಷಾಂತರ ಜನರಿಗೆ ಆಶ್ರಯತಾಣವಾಗಿದೆ. ಅಕ್ಷರಶಃ ಮಯ್ಯ ‘ಅನ್ನದಾತ’ರೇ ಆಗಿದ್ದಾರೆ.

ಎಂಟಿಆರ್‌ ಫುಡ್ಸ್‌ನ ಹಿಂದಿರುವ ಏಕೈಕ ಶಕ್ತಿಯೆಂದರೆ ಸದಾನಂದ ಮಯ್ಯ. ಇವರು ಓದಿದ್ದು ಬೆಂಗಳೂರಿನ ಬಿಎಂಎಸ್‌ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಇಂಜಿನೀಯರಿಂಗ್‌. ತಂದೆ ಯಜ್ಞನಾರಾಯಣ ಮಯ್ಯ ಆರಂಭಿಸಿದ ಎಂಟಿಆರ್‌ ಹೋಟೆಲ್‌ನಲ್ಲಿ ಬಿಡುವಿನ ವೇಳೆಯಲ್ಲಿ ಎಲ್ಲ ವಿಭಾಗಗಳಲ್ಲಿ ಸದಾನಂದ ಮಯ್ಯ ಕೆಲಸ ಮಾಡಬೇಕಾಗುತ್ತಿತ್ತು. ಅದು ತಂದೆಯ ತಾಕೀತು. ಅಷ್ಟೇ ಸಾಕಾಯಿತು. ಇಂಜಿನೀಯರಿಂಗ್‌ ಮುಗಿಯುವ ಹೊತ್ತಿಗೆ ಮಯ್ಯ ಒಳ್ಳೆಯ ‘ಪಾಕಪ್ರವೀಣ’ರಾಗಿದ್ದರು!

ಆನಂತರ ಮಯ್ಯ ಪೂರ್ಣಾವಧಿಗೆ ಎಂಟಿಆರ್‌ ಸೇರಿದರು. ಎಂಟಿಆರ್‌ ಜನಪ್ರಿಯವಾಗಿದ್ದು ಮಯ್ಯ ಸಾರಥ್ಯವಹಿಸಿಕೊಂಡ ನಂತರವೇ. ಎಂಟಿಆರ್‌ ಬೆಂಗಳೂರಿನ ‘ಪ್ರೇಕ್ಷಣೀಯ ಸ್ಥಳ’ಗಳಲ್ಲೊಂದು. ಅಷ್ಟೇ ಅಲ್ಲ ಅದು ಕರ್ನಾಟಕ ಸಂಸ್ಕೃತಿಯ ತುಣುಕು ಹೌದು. ಸುವರ್ಣ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಉಭಯ ಸದನಗಳನ್ನುದ್ದೇಶಿಸಿ ಮಾತನಾಡುವಾಗ ರಾಷ್ಟ್ರಪತಿ ಡಾ.ಅಬ್ದುಲ್‌ ಕಾಲಂ, ಬೆಂಗಳೂರನ್ನು ನೆನಪಿಸಿಕೊಳ್ಳುವಾಗ ಎಂಟಿಆರ್‌ ಸಹ ಹಾದುಹೋಗುತ್ತದೆಂದು ಹೇಳಿದ್ದು ಎಂಟಿಆರ್‌ ಜನಮಾನಸದಲ್ಲಿ ಆಳವಾಗಿ ಬೇರೂರಿರುವುದಕ್ಕೆ ಸಾಕ್ಷಿ.

ತುರ್ತುಸ್ಥಿತಿ ಸಂದರ್ಭದಲ್ಲಿ ಎಂಟಿಆರ್‌ ಹೋಟೆಲ್‌ ಬಾಗಿಲು ಮುಚ್ಚಿದಾಗ, ಅಲ್ಲಿನ ಕೆಲಸಗಾರರನ್ನು ಹೊರಹಾಕದೇ ರೆಡಿಮಿಕ್ಸ್‌ ತಯಾರಿಕೆಗೆ ಬಳಸಿಕೊಳ್ಳಲು ಮಯ್ಯ ನಿರ್ಧರಿಸಿದರು. ಅದೇ ರೆಡಿಮಿಕ್ಸ್‌ ಉದ್ಯಮಕ್ಕೆ ನಾಂದಿ. ಆದರೆ ಅದು ಸಣ್ಣ ಪ್ರಮಾಣದಲ್ಲಿತ್ತು. 1994ರಲ್ಲಿ ಕುಟುಂಬ ವ್ಯವಹಾರದಲ್ಲಿ ಬದಲಾವಣೆಗಳಾಗಿ ಹೋಟೆಲ್‌ ಉದ್ಯಮದಿಂದ ಮಯ್ಯ ಹೊರಬಂದು ಎಂಟಿಆರ್‌ ಫುಡ್ಸ್‌ ಶುರುಮಾಡಿದರು. ಆಹಾರವನ್ನು ಸಿದ್ಧಪಡಿಸುವುದಿರಬಹುದು, ರುಚಿ ನಿರ್ಧರಿಸುವುದಿರಬಹುದು, ಯಂತ್ರಗಳನ್ನು ರೂಪಿಸುವುದಿರಬಹುದು, ಎಲ್ಲವೂ ಸದಾನಂದ ಮಯ್ಯ ಅವರದೇ ಸೂತ್ರ. ಅವರೇ ಸೂತ್ರಧಾರರು. ಮೊದಲ ವರ್ಷ(1994)ಏಳು ಕೋಟಿ ರೂ. ವಹಿವಾಟು ಮಾಡಿದ ಎಂಟಿಆರ್‌ ಫುಡ್ಸ್‌ ಹತ್ತು ವರ್ಷಗಳಲ್ಲಿ ನೂರು ಕೋಟಿ ರೂ.ವರೆಗೆ ವಿಸ್ತರಿಸಿದ್ದು ಗಮನಾರ್ಹ. ಇಂದು 20ದಶಲಕ್ಷ ಡಾಲರ್‌ ಕಂಪನಿಯಾಗಿದೆ. ಅಷ್ಟೇ ಅಲ್ಲ ಪ್ರತಿವರ್ಷ ಶೇ. 35ರಷ್ಟು ಬೆಳವಣಿಗೆ ಗತಿಯಲ್ಲಿ ಸಾಗುತ್ತಿದೆ.

ಒಬ್ಬ ವ್ಯಕ್ತಿಯ ಕಾರ್ಯಪ್ರೀತಿ, ಶ್ರದ್ಧೆ, ಶ್ರಮ, ಹುಚ್ಚು, ಆಸ್ಥೆ, ಅದಮ್ಯ ಹಂಬಲ, ನಿಷ್ಠೆ, ಹಟ, ಛಲ... ಈ ಎಲ್ಲವೂ ಸಮಪ್ರಮಾಣದಲ್ಲಿ ರೆಡಿಮಿಕ್ಸ್‌ ಆದರೆ ಒಬ್ಬ ಸದಾನಂದ ಮಯ್ಯ ಆಗುತ್ತಾರೆ. ಆ ಒಬ್ಬ ಸದಾನಂದ ಮಯ್ಯ ಇಂಥ ಆಗಾಧ ಸಾಧನೆ ಮಾಡಿ ತೋರಿಸುತ್ತಾರೆ. ಸ್ನೇಹ, ಸಜ್ಜನಿಕೆಯ ಮುನ್ನುಡಿಯಾಂದಿಗೇ ಮಾತನಾಡುವ ಮಯ್ಯ, ಇಡೀ ದೇಶವೇ ಕೊಂಡಾಡುವಂಥ ಸಾಧನೆ ಮಾಡಿದ್ದಾರೆ.

ಇಂಥ ಸಾಧಕರನ್ನು ಕಂಡರೆ ಯಾರಿಗೆ ಅಭಿಮಾನ, ಹೆಮ್ಮಿ ಅನಿಸುವುದಿಲ್ಲ ಹೇಳಿ?

(ಸ್ನೇಹ ಸೇತು : ವಿಜಯ ಕರ್ನಾಟಕ )

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more