• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಸಲವೂ ಅಲ್ಲಿನ ಚುನಾವಣೆಯಲ್ಲಿ ಸತ್ತವರು ಮತ ಹಾಕಲಿದ್ದಾರೆ!

By Staff
|

ಈ ಸಲವೂ ಅಲ್ಲಿನ ಚುನಾವಣೆಯಲ್ಲಿ ಸತ್ತವರು ಮತ ಹಾಕಲಿದ್ದಾರೆ!

ಯಾವುದು ಅತ್ಯಂತ ಪ್ರಗತಿಪರ ರಾಜ್ಯವೆಂದು ಕರೆಸಿಕೊಳ್ಳುತ್ತಿದೆಯೋ, ಎಲ್ಲಿ ಬುದ್ದಿಜೀವಿಗಳು, ಚಿಂತಕರು, ಜನಪರರು ಆಳುತ್ತಿದ್ದಾರೆಂದು ಭಾವಿಸಿದ್ದೆವೋ ಆ ರಾಜ್ಯದಲ್ಲಿ ಎಲ್ಲ ಭ್ರಷ್ಟಾಚಾರಗಳ ಗಂಗೋತ್ರಿ- ಚುನಾವಣೆ ಪದ್ಧತಿ-ಕೆಟ್ಟು ಕಲುಷಿತಗೊಂಡಿದೆ. ಈ ವ್ಯವಸ್ಥೆಯ ಸುಧಾರಣೆಗಿದ್ದ ಏಕೈಕ ಆಶಾಕಿರಣ ಕೆ.ಜೆ.ರಾವ್‌ ರಂಗದಿಂದ ನಿರ್ಗಮಿಸಿದ್ದಾರೆ. ಪಶ್ಚಿಮ ಬಂಗಾಲದ ಕರ್ಮಕಾಂಡದ ಬಗ್ಗೆ ನೂರೆಂಟು ಮಾತು.

Vishweshwar Bhat ವಿಶ್ವೇಶ್ವರ ಭಟ್‌
ಈ ಸಲ ಪಶ್ಚಿಮ ಬಂಗಾಲದಲ್ಲಿ ಸತ್ತವರು ಎದ್ದು ಬಂದು ಮತ ಹಾಕುವುದಿಲ್ಲ!

ಹಾಗೆಂದು ಈ ದೇಶದ ಜನತೆ ಭಾವಿಸಿದ್ದರು. ಅಂಥವರಿಗೆ ತೀವ್ರ ಬೇಸರ, ಭ್ರಮನಿರಸವುಂಟಾಗಿದೆ. ಭಯಗ್ರಸ್ತ ಕಾಶ್ಮೀರ ಮತ್ತು ಬಿಹಾರದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಿ ಭೇಷ್‌ ಎನಿಸಿಕೊಂಡಿದ್ದ ಚುನಾವಣಾ ಆಯೋಗದ ದಕ್ಷ, ದಿಟ್ಟ ಅಧಿಕಾರಿ ಕೆ.ಜೆ.ರಾವ್‌ ಹೊರಬಿದ್ದಿದ್ದಾರೆ. ತಮ್ಮ ನಿಯತ್ತಿನ, ಪ್ರಾಮಾಣಿಕ ಜೀವಮಾನದ ಸೇವೆಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿಯ ಗೌರವ ಸ್ವೀಕರಿಸಿದ ಒಂದು ವಾರದ ನಂತರ ಅವರು ಹೊರಬೀಳುವಂತಾಗಿದ್ದು ಪ್ರಜಾಪ್ರಭುತ್ವದ ದುರಂತ. ಅವರ ನಿರ್ಗಮನದಿಂದ ಪಶ್ಚಿಮ ಬಂಗಾಳದಲ್ಲಿ ಮುಕ್ತ ಚುನಾವಣೆ ನಡೆಯಬಹುದೆಂಬ ಅಳಿದುಳಿದ ಕೊನೆಯ ಆಸೆಯೂ ಮಣ್ಣುಪಾಲಾದಂತಾಗಿದೆ. ಹುಲ್ಲುಕಡ್ಡಿಯೂ ನೀರಲ್ಲಿ ಮುಳುಗಿದೆ. ಕಾಣದ ಕೈಯ ಕೈವಾಡದಿಂದ ರಾವ್‌ ಹೊರ ಹೋಗುವಂತಾಗಿದೆ.

ಕಮ್ಯುನಿಸ್ಟರಿಗೆ ಇದೇ ಬೇಕಿತ್ತು. ಯಾವಾಗ ಕೆ.ಜೆ.ರಾವ್‌ ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆಯ ವೀಕ್ಷಕರೆಂದು ಆಗಮಿಸಿದರೋ ಕೆಂಬಾವುಟ ಪತರಗುಟ್ಟಲಾರಂಭಿಸಿತ್ತು. ಮುಕ್ತ, ನ್ಯಾಯಸಮ್ಮತ ಚುನಾವಣೆಯನ್ನೇ ನಡೆಸಲು ಸಾಧ್ಯವಿಲ್ಲದಂಥ ಕಾನೂನು, ಸುವ್ಯವಸ್ಥೆ ಗಾಳುಮೇಳಾದ ಜಮ್ಮು-ಕಾಶ್ಮೀರ ಹಾಗೂ ಬಿಹಾರದಲ್ಲಿ ರಾವ್‌, ದೇಶವೇ ಬೆರಗಾಗುವಂತೆ ಹಿಂಸಾಚಾರ ಮುಕ್ತ ಚುನಾವಣೆ ನಡೆಸಿ ತೋರಿಸಿದರು. ಲಾಲು ಪ್ರಸಾದ್‌ ಯಾದವ್‌ರಂಥ ಪಂಟರುಗಳು ರಾವ್‌ ಬೀಸಿದ ದಂಡಕ್ಕೆ ಕಂಗಾಲಾಗಿ ಹೋದರು. ಮತಗಟ್ಟೆ ವಶ, ಮತಪೆಟ್ಟಿಗೆ ಅಪಹರಣ, ಬೋಗಸ್‌ ಮತದಾನ, ಬೆದರಿಕೆ ತಂತ್ರಗಳೆಲ್ಲ ಹೇಳ ಹೆಸರಿಲ್ಲದಂತಾದವು. ಭ್ರಷ್ಟ ರಾಜಕಾರಣಿಗಳ ದುರುಳ ಕರಾಮತ್ತುಗಳಿಗೆ ಕಡಿವಾಣ ಹಾಕಿದ ರಾವ್‌ ಅವೆರಡು ರಾಜ್ಯಗಳಲ್ಲಿ ರಕ್ತಚೆಲ್ಲದೇ ಚುನಾವಣೆಯಾಗುವಂತೆ ನೋಡಿಕೊಂಡರು. ಬಿಹಾರ ಚುನಾವಣೆಯಲ್ಲಿ ಲಾಲು-ರಾಬ್ಡಿ ಸೋತು, ನಿತೀಶ್‌ ಗೆದ್ದಿರಬಹುದು, ಆದರೆ ನಿಜವಾಗಿ ಗೆದ್ದಿದ್ದು ಕೆ.ಜೆ.ರಾವ್‌ ಹಾಗೂ ಪ್ರಜಾಸತ್ತೆ !

ಬಿಹಾರದಿಂದ ವಾಪಸು ಬಂದು ತಿಂಗಳೂ ಆಗಿರಲಿಲ್ಲ. ಚುನಾವಣೆ ಆಯೋಗ ರಾವ್‌ ಅವರನ್ನು ಪಶ್ಚಿಮ ಬಂಗಾಲಕ್ಕೆ ಕಳುಹಿಸಿತು. ಕೆಂಬಾವುಟ ಪಟಪಟ ಬಡಿದುಕೊಳ್ಳಲಾರಂಭಿಸಿದ್ದು ಆಗಲೇ. ರಾವ್‌ ಬರ್ತಾರಂತೆ ಎಂಬ ಸಣ್ಣ ಸುದ್ದಿಯೇ ಅವರನ್ನು ಆ ಪರಿ ದಂಗು ಹೊಡೆಸಿದರೆ, ಬಂದವರೇ ಚಾಟಿ ಬೀಸಲಾರಂಭಿಸಿದಾಗ ಹೇಗಾಗಬೇಡ? ಅಕ್ಷರಶಃ ಕಮ್ಯುನಿಷ್ಟರ ಬಿಗಿಮುಷ್ಟಿಯಲ್ಲಿ ಪಶ್ಚಿಮ ಬಂಗಾಲದ ವ್ಯವಸ್ಥೆ ಹೇಗೆ ತತ್ತರಿಸುತ್ತಿದೆಯೆಂಬುದನ್ನು ಅರಿಯಲು ಅವರಿಗೆ ಕಷ್ಟವಾಗಲಿಲ್ಲ. ಆ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಿಂದ ಮೊನ್ನೆಯ ಲೋಕಸಭೆ ಚುನಾವಣೆ ತನಕ ಎಲ್ಲ ವಿವರ, ಮತದಾರ ಪಟ್ಟಿ, ಶೇಕಡಾವಾರು ಮತದಾನ, ಇನ್ನಿತರ ಅಂಕಿ-ಅಂಶಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಕುಳಿತರು.

ಪ್ರತಿ ಚುನಾವಣೆಯಲ್ಲೂ ಒಂದಿಲ್ಲೊಂದು ಅಕ್ರಮ, ಕರ್ಮಕಾಂಡಗಳು ಕಣ್ಣಿಗೆ ರಾಚುತ್ತಿದ್ದವು. ಪ್ರಜಾಪ್ರಭುತ್ವವನ್ನೇ ಕ್ರೂರವಾಗಿ ಅಣಕಿಸುವಂತಿದ್ದವು. ಮೂವತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಮ್ಯುನಿಷ್ಟರು ಕ್ರಮವಾಗಿ ಚುನಾವಣೆ ಗೆಲ್ಲುವುದನ್ನೇ ಅದ್ಭುತ ಕಲೆಯನ್ನಾಗಿ ಕರಗತ ಮಾಡಿಕೊಂಡಿದ್ದರು. ಚುನಾವಣೆಯ ಕಪಾಟುಗಳನ್ನು ತೆರೆದರೆ ಅಸ್ಥಿಪಂಜರಗಳ ಮೂಳೆ ಬೀಳತೊಡಗಿದವು. ಯಾವುದು ಅತ್ಯಂತ ಪ್ರಗತಿಪರ (Most progressive) ರಾಜ್ಯವೆಂದು ಕರೆಸಿಕೊಳ್ಳುತ್ತಿದೆಯೋ, ಎಲ್ಲಿ ಬುದ್ದಿಜೀವಿಗಳು, ಚಿಂತಕರು, ಜನಪರರು ಆಳುತ್ತಿದ್ದಾರೆಂದು ಭಾವಿಸಿದ್ದೆವೋ ಆ ರಾಜ್ಯದಲ್ಲಿ ಎಲ್ಲ ಭ್ರಷ್ಟಾಚಾರಗಳ ಗಂಗೋತ್ರಿ- ಚುನಾವಣೆ ಪದ್ಧತಿ-ಕೆಟ್ಟು ಕಲುಷಿತಗೊಂಡಿತ್ತು. ರಿಗ್‌(rigging)ಮಾಡುವುದೇ ಅಲ್ಲಿನ ಚುನಾವಣೆಯ ‘ಋಗ್‌’ ವೇದ! ಚುನಾವಣೆ ಅಕ್ರಮ ವಿಷಯದಲ್ಲಿ ಬಿಹಾರಕ್ಕಿಂತ ಬಂಗಾಲ ಸ್ವಲ್ಪವೂ ಕಡಿಮೆಯಿಲ್ಲ. ಇಲ್ಲೂ ಅದೇ, ಅಷ್ಟೇ ಭಯಾನಕ ವಾತಾವರಣ.

ಕೆ.ಜೆ.ರಾವ್‌ಗೆ ಕಂಡ ಅಂಕಿ-ಅಂಶಗಳ ಮೇಲೆ ಕಣ್ಣಾಡಿಸಿದರೆ ಕಮ್ಯುನಿಷ್ಟರ ಬಂಡವಾಳ ಗೊತ್ತಾಗುತ್ತದೆ. 1971ರಲ್ಲಿ ಪಶ್ಚಿಮ ಬಂಗಾಲದ ಜನಸಂಖ್ಯೆ 4.43 ಕೋಟಿ. ಮೂವತ್ತು ವರ್ಷಗಳ ನಂತರ ಅಂದರೆ 2001ರಲ್ಲಿನ ಜನಸಂಖ್ಯೆ 8.02 ಕೋಟಿ. ಅಂದರೆ ಶೇ.80ರಷ್ಟು ಏರಿಕೆ. ಇದೇ ಅವಧಿಯಲ್ಲಿದ್ದ ಮತದಾರರ ಸಂಖ್ಯೆ ಗಮನಿಸಿ. 1971ರಲ್ಲಿ 2.20ಕೋಟಿ ಮತದಾರರಿದ್ದರು. 2001ರಲ್ಲಿ ಅವರ ಸಂಖ್ಯೆ 4.86ಕೋಟಿ! ಅಂದರೆ ಮೂವತ್ತು ವರ್ಷಗಳಲ್ಲಿ ಶೇ.121ರಷ್ಟು ಏರಿಕೆ! ಕತೆ ಇಷ್ಟೇ ಅಲ್ಲ.

‘ಮೋಸ್ಟ್‌ ಪ್ರೊಗ್ರೆಸ್ಸಿವ್‌’ ರಾಜ್ಯದಲ್ಲಿರುವ ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 8.75ಕೋಟಿ. ಅಂದರೆ ರಾಜ್ಯದ ಒಟ್ಟೂ ಜನಸಂಖ್ಯೆಗಿಂತ ಪಡಿತರಚೀಟಿದಾರರೇ ಅಧಿಕ !! votersಗಿಂತ ಹೆಚ್ಚು eaters. ಇನ್ನು ಬಡತನರೇಖೆಗಿಂತ ಕೆಳಗಿರುವವರನ್ನು ಬಿಡಿ. ಪಶ್ಚಿಮ ಬಂಗಾಲದಲ್ಲಿ ಪಡಿತರ ಚೀಟಿ. ಮತದಾರರ ಗುರುತಿನ ಚೀಟಿಯೂ ಹೌದು. ಅಂದರೆ ಆ ರಾಜ್ಯದಲ್ಲಿ ಜನರಿಗಿಂತ ಮತದಾರರೇ ಹೆಚ್ಚಿದ್ದಾರೆ ಅಂದಂತಾಯಿತು! ಇಂಥ ವಿಚಿತ್ರ, ವಿಪರ್ಯಾಸ ಜಗತ್ತಿನ ಬೇರೆಲ್ಲೂ ನಡೆದಿಲ್ಲ. ನಡೆಯುವ ಸಾಧ್ಯತೆಯೂ ಇಲ್ಲ. ಇವೆಲ್ಲ ಕಮ್ಯುನಿಷ್ಟರ ಪ್ರಗತಿಪರ ರಾಜ್ಯದಲ್ಲಿ ಮಾತ್ರ ಶಕ್ಯ.

1952ರಿಂದ 1977ರ ತನಕ ನಡೆದ ಮತದಾನದ ವಿವರಗಳನ್ನು ನೋಡಿ. ದೇಶದ ಯಾವುದೇ ಒಂದು ರಾಜ್ಯದ ಮತದಾನದ ಶೇಕಡಾವಾರು ಪ್ರಮಾಣಕ್ಕೂ, ರಾಷ್ಟ್ರೀಯ ಪ್ರಮಾಣಕ್ಕೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಅಂದರೆ ವಿಧಾನಸಭೆ ಚುನಾವಣೆ ಮತದಾನದ ಶೇಕಡಾವಾರಿಗೂ, ಲೋಕಸಭೆ ಚುನಾವಣೆಯ ಮತದಾನದ ಶೇಕಡಾವಾರಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಆದರೆ ಪಶ್ಚಿಮ ಬಂಗಾಲಕ್ಕೆ ಮಾತ್ರ ಈ ಸೂತ್ರ ಅನ್ವಯವಾಗುವುದಿಲ್ಲ. ಇಲ್ಲಿ ರಾಷ್ಟ್ರೀಯ ಮತದಾನ ಪ್ರಮಾಣಕ್ಕಿಂತ ರಾಜ್ಯದ್ದೇ ಹೆಚ್ಚು. 2004ರ ಲೋಕಸಭೆ ಚುನಾವಣೆಯ 42ಕ್ಷೇತ್ರಗಳಲ್ಲಿ ಶೇ.78ರಷ್ಟು ಮತದಾನವಾಯಿತು. ರಾಷ್ಟ್ರೀಯ ಮತದಾನ ಸರಾಸರಿ ಶೇ.22ರಷ್ಟು ಹೆಚ್ಚು. 1991ರಲ್ಲಿ ರಾಷ್ಟ್ರೀಯ ಮತದಾನ ಸರಾಸರಿ ಶೇ.59.99ರಷ್ಟಿದ್ದರೆ, ಪಶ್ಚಿಮ ಬಂಗಾಲದ್ದು ಶೇ.77ರಷ್ಟಿತ್ತು. ‘ಋಗ್‌’ವೇದ ಎಷ್ಟೊಂದು ವ್ಯಾಪಕವಾಗಿದೆಯೆಂಬುದಕ್ಕೆ ಇದು ನಿದರ್ಶನ. ಯಾವ ಲೆಕ್ಕಾಚಾರಕ್ಕೂ ನಿಲುಕದ ಅಂಕಿ-ಸಂಖ್ಯೆಗಳಿವು.

ಪಶ್ಚಿಮ ಬಂಗಾಲದ ಹತ್ತೊಂಬತ್ತು ಜಿಲ್ಲೆಗಳಲ್ಲಿ ಕೆ.ಜೆ.ರಾವ್‌ ಸೇರಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಪ್ರವಾಸ ಮಾಡಿದಾಗ ಅವರಿಗೆ ಆಘಾತ ಕಾದಿತ್ತು. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ 42ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಅಚ್ಚರಿಯೆಂದರೆ, ಆ ಪೈಕಿ 41ಲಕ್ಷ ಅರ್ಜಿ ಸಿಪಿಎಂ ಪಕ್ಷದಿಂದ ಬಂದಿತ್ತು! ಇವನ್ನು ಪರೀಕ್ಷಿಸಿದಾಗ ಆ ಪೈಕಿ 20ಲಕ್ಷ ಬೋಗಸ್‌ ಅರ್ಜಿಗಳೆಂದು ಕಂಡುಬಂದಿತು.

1991ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್‌ ಮಾರ್ಮಿಕವಾಗಿ ಹೇಳಿದ್ದರು-‘ಅತ್ಯಂತ ವೈಜ್ಞಾನಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಚುನಾವಣಾ ಅಕ್ರಮ ನಡೆಯುವ ರಾಜ್ಯವೆಂದರೆ ಪಶ್ಚಿಮ ಬಂಗಾಲ’ . ಶೇಷನ್‌ ಮಾತನ್ನು ಕಮ್ಯುನಿಷ್ಟರು ಇಂದಿಗೂ ನಿಜಗೊಳಿಸುತ್ತಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ನಿಂತಿರುವ ಈ ರಾಜ್ಯದಲ್ಲಿ ಈಗಾಗಲೇ ಹದಿಮೂರು ಲಕ್ಷ ನಕಲಿ ಮತದಾರರು ಸಿಕ್ಕಿಬಿದ್ದಿದ್ದಾರೆ. ಅವರನ್ನೆಲ್ಲ ಪಟ್ಟಿಯಿಂದ ಕಿತ್ತುಹಾಕಲಾಗಿದೆ. 1987ರಿಂದ ನಡೆದ ಪಂಚಾಯಿತಿ ಚುನಾವಣೆಯಿರಬಹುದು, ಪಾರ್ಲಿಮೆಂಟ್‌ ಚುನಾವಣೆಯಿರಬಹುದು ಪ್ರತಿಯಾಂದರಲ್ಲೂ ವ್ಯಾಪಕ ಅಕ್ರಮಗಳಾಗಿವೆ. ಸಿಪಿಎಂ ಪೋಷಿತ ಬೆಂಗಾಲ ಚಟ್ಕಲ್‌ ಯೂನಿಯನ್‌ನ ಉಪಾಧ್ಯಕ್ಷ ಗೋಬಿಂದ ಗುಹಾ ಬಹಿರಂಗವಾಗಿಯೇ ಹೇಳಿದ್ದಾರೆ-‘ನಮ್ಮ ಮುಂದಿರುವುದು ಎರಡೇ. ಅಕ್ರಮ ಚುನಾವಣೆ ಅಥವಾ ಸೋಲು’.

ಮೂವತ್ತು ವರ್ಷಗಳ ಆಡಳಿತದ ಫಲವಾಗಿ ಸರಕಾರ, ವ್ಯವಸ್ಥೆ ಕಮ್ಯುನಿಷ್ಟ್‌ಮಯವಾಗಿದೆ. ನೀವು ಕಮ್ಯುನಿಷ್ಟರಲ್ಲದಿದ್ದರೆ ಸಣ್ಣ ಕೆಲಸ ಮಾಡಿಸಿಕೊಳ್ಳಲೂ ಆಗದು. ವ್ಯವಸ್ಥೆಯ ಪ್ರತಿ ಮಜಲಲ್ಲೂ ಅವರೇ ತುಂಬಿ ಹೋಗಿದ್ದಾರೆ. ಆಯಕಟ್ಟಿನ ಜಾಗದಲ್ಲಂತೂ ಅವರಿರಲೇ ಬೇಕಲ್ಲ. ಸರಕಾರದ ಪ್ರತಿ ಇಲಾಖೆಯಲ್ಲೂ ಕಮ್ಯುನಿಸ್ಟ್‌ ಹಾಗೂ ಅದರ ಅಂಗಪಕ್ಷಗಳ ಯೂನಿಯನ್‌ಗಳು. ಈ ಇಲಾಖೆಗಳನ್ನು ಅಕ್ಷರಶಃ ನಡೆಸುವವರು ಯೂನಿಯನ್‌ ಲೀಡರ್‌ಗಳೇ ಹೊರತು ಅಧಿಕಾರಿಗಳಲ್ಲ. ಅಧಿಕಾರಿಗಳೂ ಅವರೇ ಆಗಿದ್ದರೆ (ಆಗಿರುತ್ತಾರೆ) ಸಮಸ್ಯೆಯಿಲ್ಲ. ಸಿಇಟಿಯು, ಡಿವೈಎಫ್‌ಎ, ಎಸ್‌ಎಫ್‌ಐ, ಕೃಷಿಕ್‌ ಸಭಾದಂಥ ಸಂಘಟನೆಗಳು ಹೊಂದಿರುವ ನಿಯಂತ್ರಣ ಅಸಾಧಾರಣ.

ಇಡೀ ರಾಜ್ಯ ಕಮುನಿಷ್ಟ ಚರ್ಚರಿ ಹಿಡಿತದಲ್ಲಿ ಹೇಗೆ ನರಳುತ್ತಿದೆಯೆಂದರೆ ಇಡೀ ಚುನಾವಣೆ ಪ್ರಕ್ರಿಯೆಯಲ್ಲಿ ಅವರ ಹೊರತಾಗಿ ಮತ್ತ್ಯಾರೂ ಇರುವುದಿಲ್ಲ. ಇರುವುದು ಸಾಧ್ಯವೂ ಇಲ್ಲ. ಮತದಾರರ ಪಟ್ಟಿ ಸಿದ್ಧಪಡಿಸುವುದರಿಂದ ಹಿಡಿದು ಫಲಿತಾಂಶ ಘೋಷಿಸುವವರೆಲ್ಲ ಕಮ್ಯುನಿಸ್ಟ್‌ ಪಕ್ಷದ ಕಾರ್ಡುದಾರರೇ. ಚುನಾವಣೆ ಕೆಲಸಕ್ಕೆಂದು ಮೂರುವರೆ ಲಕ್ಷ ಪ್ರಾಥಮಿಕ ಶಾಲಾ ಹಾಗೂ ಹೈಸ್ಕೂಲ್‌ ಶಿಕ್ಷಕರನ್ನು ಉಪಯೋಗಿಸಿಕೊಳ್ಳುತ್ತಾರೆ. ಆ ಪೈಕಿ ಶೇ. 90ರಷ್ಟು ಮಂದಿ ಕಮ್ಯುನಿಷ್ಟ ಪಕ್ಷದ ಸದಸ್ಯರು. ರಾಜ್ಯದ 49ಸಾವಿರ ಬೂತುಗಳನ್ನು ನಿಯಂತ್ರಿಸುವವರು ಇವರೇ. ಬಹುತೇಕ ಬೂತುಗಳಲ್ಲಿ ಮತಚೀಟಿ ಕೊಡುವವರು, ಉಗುರಿಗೆ ಮಸಿ ಬಳಿಯುವವರು, ಮತ ಹಾಕಿದ ಬಳಿಕ ಪೆಟ್ಟಿಗೆಗೆ ಹಾಕುವವರು, ಮತಗಟ್ಟೆಗೆ ಭದ್ರತೆ ಒದಗಿಸುವ ಪೊಲೀಸರು, ಗಸ್ತು ತಿರುಗುವವರು, ಮತ ಎಣಿಕೆ ಮಾಡುವವರು...ಎಲ್ಲರೂ ಕಮ್ಯುನಿಸ್ಟರೇ. ಬೇರೆಯವರು ಅದ್ಹೇಗೆ ಆರಿಸಿ ಬಂದಾರು? ಆ ಮಾವೋತ್ಸೆತುಂಗ್‌ನೇ ಬಂದು ಕಮುನಿಸ್ಟರ ವಿರುದ್ಧ ಚುನಾವಣೆಗೆ ನಿಂತರೂ ಅವನ ಇಡಗಂಟು ಜಫ್ತಾಗದಿದ್ದರೆ ಹೇಳಿ.

ಪ್ರಜಾಪ್ರಭುತ್ವದ ಗರ್ಭಗುಡಿಯಂತಿರುವ ಸಂಸತ್ತಿನಲ್ಲಿ ಲೋಕಸಭೆಯ ಸ್ಪೀಕರ್‌ ಇದ್ದಾರಲ್ಲ ಸೋಮನಾಥ ಚಟರ್ಚಿ, ಅವರೇನು ಸಾಮಾನ್ಯ ಆಸಾಮಿಯಲ್ಲ. ಎದ್ದು ನಿಂತರೆ ಪ್ರಜಾಪ್ರಭುತ್ವ, ಪಾವಿತ್ರ್ಯ, ಸಂವಿಧಾನದ ಬಗ್ಗೆ ಕಡಿಮೆ ಅಂದ್ರೆ ಒಂದು ಗಂಟೆ ಮಾತನಾಡಬಲ್ಲರು. ಕಳೆದ ಏಳು ಚುನಾವಣೆಗಳಿಂದ ಬೋಲ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ತಮ್ಮ ಕ್ಷೇತ್ರಕ್ಕಾಗಿ ಕಡಿದು ಕಟ್ಟೆ ಹಾಕಿದ್ದು ಅಷ್ಟಕಷ್ಟೆ. ಆದರೆ ಚುನಾವಣೆಯಲ್ಲಿ ಮಾತ್ರ ಗೆಲ್ಲುತ್ತಿದ್ದಾರೆ. ಅವರನ್ನು ಯಾರಾದರೂ ಸೋಲಿಸಲಿ ನೋಡೋಣ. ಉಹುಂ ಸಾಧ್ಯವೇ ಇಲ್ಲ.

ಅವರು ಸ್ಪರ್ಧಿಸಿದ ಕ್ಷೇತ್ರದಡಿ ಬರುವ ಲವಪುರ, ಬೋಲ್ಪುರ, ನನ್ನೂರ ವಿಧಾನಸಭೆ ಕ್ಷೇತ್ರಗಳ ನೂರಾರು ಮತಗಟ್ಟೆಗಳಲ್ಲಿ ಸೋಮನಾಥ ಚಟರ್ಜಿಗೆ ಸಾವಿರ ಮತಗಳು ಬಂದರೆ, ಅವರ ಸಮೀಪ ಪ್ರತಿಸ್ಪರ್ಧಿಗಳಿಗೆ ಎರಡು ಮೂರು ಮತಗಳು ಸಿಗುತ್ತದೆ. ಅಂದರೆ ಅದ್ಯಾವ ಪ್ರಮಾಣದಲ್ಲಿ ಅಕ್ರಮ ನಡೆಯಬಹುದು ಊಹಿಸಿ. ಐದಾರು ವರ್ಷಗಳ ಹಿಂದೆ ನಿಧನರಾದ ಐದು ಸಾವಿರಕ್ಕೂ ಹೆಚ್ಚು ಮಂದಿ ಸೋಮನಾಥರ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ. ಸತ್ತವರು ಚುನಾವಣೆಯಲ್ಲಿ ಎದ್ದೇಳುವುದು ಹಾಗೂ ಮತ ಚಲಾಯಿಸುವುದು ಪಶ್ಚಿಮ ಬಂಗಾಲದಲ್ಲಿ ಮಾತ್ರ!

ಕೆ.ಜೆ.ರಾವ್‌ ಹುತ್ತಕ್ಕೆ ಕೈ ಹಾಕಿದ್ದರು. ಇವನ್ನೆಲ್ಲ ಅರಗಿಸಿಕೊಳ್ಳುವುದು ಕಮ್ಯುನಿಸ್ಟ್‌ರಿಗೆ ಸಾಧ್ಯವೇ ಇರಲಿಲ್ಲ. ಫೆಬ್ರವರಿ 28ಕ್ಕೆ ರಾವ್‌ ಅವಧಿ ಮುಗಿದಿತ್ತು. ಆದರೆ ಮರುದಿನ ಆಯೋಗ ಬಿಡುಗಡೆ ಮಾಡಿದ 20 ಮಂದಿ ವೀಕ್ಷಕರ ಪಟ್ಟಿಯಲ್ಲಿ ರಾವ್‌ ಹೆಸರು ಇರಲಿಲ್ಲ. ಇದರ ಸಂದೇಶವೇನೆಂಬುದನ್ನು ಅರಿತ ರಾವ್‌ ಹೊರಬಿದ್ದರು. ರಾವ್‌ ಅವರನ್ನು ಮುಂದುವರಿಸುವುದು ಕಷ್ಟವಾಗಿರಲಿಲ್ಲ. ಆದರೆ ಅವರು ಮುಂದುವರಿಯುವುದು ಕಮ್ಯುನಿಸ್ಟರಿಗೆ ಬೇಕಾಗಿರಲಿಲ್ಲ. ರಾವ್‌ ಇಲ್ಲದ ಚುನಾವಣೆ ಹೇಗಿದ್ದೀತು? ಎಲ್ಲರಿಗೂ ಗೊತ್ತಿದೆ.

ಕಮ್ಯುನಿಸ್ಟರಿಗೆ ಜಯವಾಗಲಿ!

(ಸ್ನೇಹ ಸೇತು : ವಿಜಯ ಕರ್ನಾಟಕ )

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more