• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಅವಕಾಶಕ್ಕೆ ತೆರೆದುಕೊಂಡ ಭಾರತದ ಆಕಾಶ

By Staff
|

ಹೊಸ ಅವಕಾಶಕ್ಕೆ ತೆರೆದುಕೊಂಡ ಭಾರತದ ಆಕಾಶ

ಭಾರತ ಸರ್ಕಾರ ‘ಆಕಾಶ ಕ್ರಾಂತಿ’ಗೆ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಇಂಡಿಯನ್‌ ಏರ್‌ಲೈನ್ಸ್‌, ಏರ್‌ ಇಂಡಿಯಾ ಎಂಬ ದರಿದ್ರ ಸೇವೆಯನ್ನು ಆದಷ್ಟು ಶೀಘ್ರ ಮುಚ್ಚುವುದು. ಸರಕಾರದಿಂದ ಆಗದ ಕೆಲಸವನ್ನು ಕನ್ನಡಿಗರಾದ ಒಬ್ಬ ಕ್ಯಾಪ್ಟನ್‌ ಗೋಪಿನಾಥ, ಡಾ.ವಿಜಯಮಲ್ಯ ಹಾಗೂ ನರೇಶ್‌ ಗೋಯಲ್‌, ಸುಬ್ರತೋ ರಾಯ್‌ ಸಹಾರಾ, ಜೇ ವಾಡಿಯಾ ತೋರಿಸಿಕೊಟ್ಟಿದ್ದಾರೆ!

Vishweshwar Bhatವಿಶ್ವೇಶ್ವರ ಭಟ್‌

ಆ ದಿನ ಬಹಳ ದೂರವಿಲ್ಲ. ಈ ದೇಶದಲ್ಲಿರುವ ಪ್ರತಿಯಾಬ್ಬರೂ ಸಹ ವಿಮಾನದಲ್ಲಿ ಪ್ರಯಾಣಿಸುವ ದಿನ ದೂರವಿಲ್ಲ.

-ಹೀಗೆಂದು ಒಂದು ಕಾಲಕ್ಕೆ ಬೆಂಗಳೂರಿನಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿದ್ದ, ಈಗ ಏರ್‌ಡೆಕ್ಕನ್‌ ವಿಮಾನ ಸಂಸ್ಥೆ ಮಾಲೀಕರಾಗಿರುವ ಕ್ಯಾಪ್ಟನ್‌ ಗೋಪಿನಾಥ ಸುಮಾರು ಮೂರು ವರ್ಷಗಳ ಹಿಂದೆ ಹೇಳಿದ್ದರು.

ಆ ದಿನ ಬಹಳ ದೂರವಿಲ್ಲ, ಈ ದೇಶದಲ್ಲಿರುವ ಪ್ರತಿಯಾಬ್ಬರೂ ಸಹ ವಿಮಾನದಲ್ಲಿ ವಿದೇಶ ಪ್ರಯಾಣ ಮಾಡುವ ದಿನ ದೂರವಿಲ್ಲ. ಹಾಗೆಂದು ಮೊನ್ನೆ ಪ್ಯಾರಿಸ್‌ನ ‘ಏರ್‌ ಬಸ್‌’ ವಿಮಾನ ತಯಾರಿಕಾ ಕಾರ್ಖಾನೆಯಲ್ಲಿ ನಿಂತು ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಾಲೀಕ ಡಾ.ವಿಜಯ ಮಲ್ಯ ಹೇಳಿದರು.

ಕ್ಯಾಪ್ಟನ್‌ ಗೋಪಿನಾಥ ಹೇಳಿದ ಮಾತು ನಿಜವಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ 26ಪಟ್ಟು ಪ್ರಯಾಣಿಕರು ಜಾಸ್ತಿಯಾಗಿದ್ದಾರೆ. ಮೊದಲು ಕೇವಲ ಸರಕಾರಿ ಸ್ವಾಮ್ಯದ ಇಂಡಿಯನ್‌ ಏರ್‌ಲೈನ್ಸ್‌ ಮಾತ್ರ ಇತ್ತು. ಈಗ ಜೆಟ್‌, ಸಹಾರಾ, ಡೆಕ್ಕನ್‌, ಕಿಂಗ್‌ಫಿಶರ್‌, ಸ್ಪೈಸ್‌ ಜೆಟ್‌, ಗೋ ಏರ್‌ ಹೀಗೆ ಹಲವಾರು ಏರ್‌ಲೈನ್ಸ್‌ ಹಾರಾಟ ಆರಂಭಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಆರು ಹೊಸ ಏರ್‌ಲೈನ್ಸ್‌ಗಳು ಆಗಸಕ್ಕಿಳಿಯಲಿವೆ. ಒಂದು ರೂಪಾಯಿಯಲ್ಲಿ ಬೆಂಗಳೂರಿನಿಂದ ದಿಲ್ಲಿಗೆ ಪ್ರಯಾಣಿಸುವ ಆಮಿಷವೊಡ್ಡಿದಂದಿನಿಂದ ಎಲ್ಲ ಏರ್‌ಲೈನ್ಸ್‌ಗಳು ದರ ಸಮರಕ್ಕಿಳಿದು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಭಾರತದ ಆಕಾಶ ಈಗ ಮೊದಲಿನಂತಿಲ್ಲ. ಹಕ್ಕಿಗಳಿಗೆ ಮೀಸಲಾಗಿದ್ದ ಆಗಸದಲ್ಲಿ ‘ಲೋಹದ ಹಕ್ಕಿ’ಗಳು ಕಾಣಿಸಿಕೊಳ್ಳುತ್ತಿವೆ.

ಹನ್ನೆರಡು ವರ್ಷಗಳ ಹಿಂದಿನ ಮಾತು. ಅಮೆರಿಕದಿಂದ ಆಗಮಿಸುವ ಸಹೋದರನನ್ನು ರಿಸೀವ್‌ ಮಾಡಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋದರೆ ಅಲ್ಲಿ 80- 100ಜನ ನಿಂತಿರುತ್ತಿದ್ದರು. ರಾತ್ರಿ ಸರಿದು ಬೆಳಕು ಮೂಡಿದರೆ ಒಂದು ವಿಮಾನ ಬರುತ್ತಿತ್ತು. ಇಲ್ಲಿಂದ ಹೋಗುವಾಗಲೂ ಅದೇ ಕತೆ. ವಾರಕ್ಕೊಂದು ಇಂಟರ್‌ನ್ಯಾಶನಲ್‌ ಫ್ಲೈಟ್‌. ಅಮೆರಿಕಕ್ಕೆ ಮಾತ್ರ ವಾರದಲ್ಲಿ ಎರಡು. ಆಗ ವಿದೇಶಕ್ಕೆ ಹೋಗುವುದು, ಬರುವುದೆಂದರೆ ದೊಡ್ಡ ಸಂಭ್ರಮವಾಗಿತ್ತು.

ಮನೆಮಂದಿಯೆಲ್ಲ ಏರ್‌ಫೋರ್ಟ್‌ ತನಕ ಬಂದು ಕಳಿಸಿ ಹೋಗುತ್ತಿದ್ದರು. ಬರುವಾಗಲೂ ಇಡೀ ಕುಟುಂಬದ ಸ್ವಾಗತ. ಈಗ ಏರ್‌ಪೋರ್ಟಿನಲ್ಲಿ ಈ ಸಂಪ್ರದಾಯಗಳೆಲ್ಲ ನಿಧಾನ ಕರಗುತ್ತಿವೆ. ವಿದೇಶ ಪ್ರಯಾಣ ಸಾಮಾನ್ಯವಾಗುತ್ತಿದೆ. ಈಗ ರಾತ್ರಿ ಹತ್ತು ಗಂಟೆಯಿಂದ ಒಂದು ಗಂಟೆ ತನಕ ಏರ್‌ಪೋರ್ಟ್‌ನಲ್ಲಿ ನಿಂತರೆ, ಕನಿಷ್ಠ ಹತ್ತು ಇಂಟರ್‌ನ್ಯಾಷನಲ್‌ಫ್ಲೈಟುಗಳು ಬಂದಿಳಿಯುತ್ತವೆ ಅಥವಾ ಹಾರಿ ಹೋಗುತ್ತವೆ. ಡೊಮೆಸ್ಟಿಕ್‌ ಫ್ಲೈಟ್‌ಗಳಂತೂ ಪ್ರತಿ ಅರ್ಧ ಗಂಟೆಗೊಂದರಂತೆ ಹಾರಿ ಇಳಿಯುತ್ತಿರುತ್ತವೆ. ಮೊದಲಾಗಿದ್ದರೆ, ಅಮೆರಿಕದಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಒಂದಿಬ್ಬರು ಬಿಳಿ ಚರ್ಮದವರು ಕಾಣಿಸಿಕೊಳ್ಳುತ್ತಿದ್ದರು. ಇಲ್ಲಿಂದ ಅಲ್ಲಿಗೆ ಹೋಗುವಾಗಲೂ ಅಷ್ಟೇ. ಆದರೆ ಈಗ ಇಂಥ 40- 50 ಮಂದಿಯಾದರೂ ಸಿಗುತ್ತಾರೆ. ಸಮಯ ಹಾಗೂ ಹಣದ ದೃಷ್ಟಿಯಿಂದ ರೈಲು ಪ್ರಯಾಣಕ್ಕಿಂತ ವಿಮಾನ ಪ್ರಯಾಣವೇ ಸೋವಿ. ಬೆಂಗಳೂರಿನಿಂದ ದಿಲ್ಲಿಗೆ ಫಸ್ಟ್‌ಕ್ಲಾಸ್‌ ಟ್ರೇನಿಗಿಂತ ವಿಮಾನ ಪ್ರಯಾಣಕ್ಕೆ ಕಡಿಮೆ ಖರ್ಚು. ರೈಲಿನ 36ಗಂಟೆ ಮುಂದೆ ವಿಮಾನದ ಎರಡೂವರೆ ತಾಸು ಯಾವ ಲೆಕ್ಕ?

ಒಂದು ಕಾಲಕ್ಕೆ ವಿದೇಶ ಪ್ರಯಾಣವೆಂದರೆ ಕನಸಿನ ಮಾತಾಗಿತ್ತು. ಅದು ಕೆಲವು ಅದೃಷ್ಟವಂತರ ಭಾಗ್ಯ ಎಂದೆ ಪರಿಗಣಿತವಾಗಿತ್ತು. ಇಂದು ಹಾಗಲ್ಲ. ಯಾರು ಬೇಕಾದರೂ ಹೋಗಬಹುದು. ಆರು ಸಾವಿರ ರೂ. ಇದ್ದರೆ ಕೊಲಂಬೋಕ್ಕೆ ಹೋಗಿ ಮೂರು ದಿನ ಉಳಿದು ಬರಬಹುದು. ಎಂಟೂವರೆ ಸಾವಿರದಲ್ಲಿ ಬ್ಯಾಂಕಾಕ್‌ ಪಯಣ ಸಾಧ್ಯ. ಹದಿನೆಂಟು ಸಾವಿರದಲ್ಲಿ ಬೆಂಗಳೂರಿನಿಂದ ಕೊಲಂಬೋದಲ್ಲಿ ಉಳಿದು ಲಂಡನ್‌ ಮುಗಿಸಿ ವಾಪಸ್‌ ಬರಬಹುದು. ಇಪ್ಪತ್ತೆೈದು ಸಾವಿರದಲ್ಲಿ ಮೂರು ದೇಶಗಳು ಸುತ್ತಾಡಿ ಬರುವುದು ಸಾಧ್ಯ. ನೀವು ಸೂಟ್‌ಕೇಸು ಸಿದ್ಧಪಡಿಸುವುದು ಗೊತ್ತಾದರೆ ಹತ್ತಾರು ಏರ್‌ಲೈನ್ಸ್‌, ಟ್ರಾವೆಲ್‌ ಕಂಪನಿಗಳು ಬಗೆಬಗೆಯ ಪ್ರಯಾಣ ಯೋಜನೆಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತವೆ.

ನಾಲ್ಕು ವರ್ಷಗಳ ಹಿಂದೆ ಇಂಡಿಯನ್‌ ಏರ್‌ಲೈನ್ಸ್‌ ವಿಮಾನದಲ್ಲಿ ದಿಲ್ಲಿಗೆ ಹೋಗಿ ಬರುವ ಹಣದಲ್ಲಿ ಇಂದು ಲಂಡನ್‌, ಪ್ಯಾರಿಸ್‌, ಸ್ವಿಜರ್‌ಲ್ಯಾಂಡಿಗೆ ಹೋಗಿ ಬರಬಹುದು ಇಲ್ಲವೇ ಮೂರು ದಿನ ಈಜಿಪ್ಟ್‌ ಸುತ್ತಿ ಬರಬಹುದು. ಇಂದು ಇವೆಲ್ಲ ಸಾಧ್ಯ. ಭಾರತದ ಆಕಾಶ ಹೊಸ ಅವಕಾಶಕ್ಕೆ ತೆರೆದುಕೊಂಡಿದೆ. ಇಂದು ಇವೆಲ್ಲ ಸಾಧ್ಯ. ಭಾರತದ ಆಕಾಶ ಹೊಸ ಅವಕಾಶಕ್ಕೆ ತೆರೆದುಕೊಂಡಿದೆ. ಇವೆಲ್ಲ ವಿಮಾನಯಾನದ ಬಗೆಗಿನ ಆಕರ್ಷಕ ಸುದ್ದಿ.

ವಿಮಾನಯಾನ ರಂಗದಲ್ಲಾಗಿರುವ ಈ ಕ್ರಾಂತಿಯನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ನಾವು ಇದ್ದೇವಾ? ಈ ಕ್ರಾಂತಿಗೆ ನಾವು ಸಿದ್ಧರಾಗಿದ್ದೇವಾ? ಇದನ್ನು ಮುಂದುವರಿಸಿಕೊಂಡು ಹೋಗುವಷ್ಟು ಮೂಲಸೌಕರ್ಯ ನಮ್ಮಲ್ಲಿ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೊರಟರೆ ನಿರಾಸೆಯೇ ಹೆಚ್ಚು. ಭಾರತದ ಯಾವುದೇ ವಿಮಾನ ನಿಲ್ದಾಣವನ್ನೇ ತೆಗೆದುಕೊಳ್ಳಿ. ತಲುಪುವುದಕ್ಕೆ ಹರಸಾಹಸ ಮಾಡಬೇಕು. ಎಲ್ಲ ಏರ್‌ಪೋರ್ಟ್‌ ಮುಂದೆ ಮೈಲುದ್ದದ ಕ್ಯೂ. ಕೆಲವೊಮ್ಮೆ ಟ್ರಾಲಿಯೂ ಸಿಗುವುದಿಲ್ಲ. ಅಲ್ಲಿಂದಲೇ ಸಮಸ್ಯೆಗಳು ಶುರುವಾಗುತ್ತವೆ. ಲಗೇಜ್‌ಗಳನ್ನು ಶೋಧಿಸುವ ಎರಡು ಎಕ್ಸ್‌-ರೇ ಯಂತ್ರಗಳ ಪೈಕಿ ಒಂದು ಮಾತ್ರ ಯಾವತ್ತೂ ಕೆಟ್ಟಿರುತ್ತದೆ. ಪೀಕ್‌ ಅವರ್‌ನಲ್ಲಿ ಕುಳಿತುಕೊಳ್ಳಲು ಸಹ ಜಾಗ ಸಿಗುವುದಿಲ್ಲ. ಶೌಚಾಲಯ, ಸ್ವಚ್ಛತೆ ಬಗ್ಗೆ ಮಾತನಾಡುವುದು ಬೇಡ.

ಈ ಎಲ್ಲ ಅಪಸವ್ಯಗಳನ್ನು ಸಹಿಸಿಕೊಂಡು ವಿಮಾನವೇರಿದರೆ ನಿಗದಿತ ಸಮಯಕ್ಕೆ ಅದು ಹಾರುವುದೆಂಬ ಗ್ಯಾರಂಟಿಯಿಲ್ಲ. ಮೊನ್ನೆ ಹಾಗೇ ಆಯಿತು. ಮುಂಬೈಯಲ್ಲಿ ಕಿಂಗ್‌ಫಿಶರ್‌ ವಿಮಾನವೇರಿ ಇನ್ನೇನು ರನ್‌ವೇ ಸನಿಹ ಬರುತ್ತಿದ್ದಂತೆ ಅಲ್ಲೇ ಟ್ರಾಫಿಕ್‌ ಜಾಮ್‌. ಇಪ್ಪತ್ತೆೈದು ನಿಮಿಷ ಕಾಯಬೇಕಾದ ಸ್ಥಿತಿ. ಬೆಂಗಳೂರಿನ ಮೇಲೆ ವಿಮಾನ ಹಾರುತ್ತಿದ್ದರೆ ಕೆಳಗಿಳಿಯಲು ಸಹ ಕ್ಯೂ. ಏರ್‌ಟ್ರಾಫಿಕ್‌ ಕಂಟ್ರೋಲ್‌(ಏಟಿಸಿ) ಅನುಮತಿ ಸಿಗುವುದಿಲ್ಲ. ಅಲ್ಲಿ ತನಕ ಅಕಾಶದಲ್ಲೇ ಗಿರಕಿ ಹೊಡೆಯಬೇಕು.

ರನ್‌ವೇ ಕೊರತೆಯಿಂದ ಅನಗತ್ಯ ತಾಸುಗಟ್ಟಲೆ ಕಾಯಬೇಕಾದ ಸ್ಥಿತಿ. ಇಷ್ಟೊಂದು ಸಂಖ್ಯೆಯ ವಿಮಾನಗಳನ್ನು ನಿಭಾಯಿಸಲು ನಮ್ಮ ವಿಮಾನ ನಿಲ್ದಾಣದಲ್ಲಿ ಸಿದ್ಧತೆಯಿಲ್ಲ. ಎಲ್ಲ ವಿಮಾನಗಳನ್ನು ಪಾರ್ಕ್‌ ಮಾಡುವಷ್ಟು ಸ್ಥಳಾವಕಾಶವೂ ಇಲ್ಲ. ಹೆಜ್ಜೆ ಹೆಜ್ಜೆಗೂ ಸರಕಾರಿ ನಿಯಮಗಳ ಕ್ರೂರ ಅಣಕ, ಘೋರ ಶಿಕ್ಷೆ. ಈ ಕಾರಣದಿಂದ ಖಾಸಗಿ ಏರ್‌ಲೈನ್ಸ್‌ಗಳು ಎಷ್ಟೇ ಉತ್ತಮ ಕಾರ್ಯಕ್ಷಮತೆ ತೋರಿದರೂ ಸಮಯಪಾಲನೆ ಮೆರೆಯಲು ಹಾಗೂ ಪ್ರಯಾಣಿಕರಿಗೆ ಸಂಪೂರ್ಣ ಸಮಾಧಾನಕರ ಅನುಭವ ನೀಡಲು ವಿಫಲವಾಗಿವೆ.

ಇಷ್ಟು ವರ್ಷಗಳ ಕೆಟ್ಟ ಸೇವೆಯ ನಂತರವೂ ಇಂಡಿಯನ್‌ ಏರ್‌ಲೈನ್ಸ್‌ ಹಾಗೂ ಏರ್‌ ಇಂಡಿಯಾ ಎಂಬ ಸರಕಾರಿ ಸ್ವಾಮ್ಯದ ಏರ್‌ಲೈನ್ಸ್‌ ಇಂದಿಗೂ ಇರುವುದು ನಮ್ಮ ಸಹನೆಯ ಅದ್ಭುತ ಪ್ರತೀಕ. ಕೆಲ ವರ್ಷಗಳ ಹಿಂದೆ ವಿದೇಶಿ ಪ್ರಯಾಣಿಕನೊಬ್ಬ ಈ ಏರ್‌ಲೈನ್ಸ್‌ನ್ನು ಹಾರಾಡುವ ಶವಪೆಟ್ಟಿಗೆಗಳು (Flying Coffins) ಎಂದು ಕರೆದಿದ್ದ. ಇಡೀ ಜಗತ್ತೇ ಆಕಾಶ ಕ್ರಾಂತಿಗೆ ತೆರೆದುಕೊಳ್ಳುತ್ತಿದ್ದರೆ, ಈ ಏರ್‌ಲೈನ್ಸ್‌ ಇನ್ನೂ ಓಲ್ಡ್‌ ಬ್ರಿಟಿಷ್‌ರಾಯ (ಓಬಿರಾಯ)ನ ಕಾಲದಲ್ಲೇ ಇವೆ.

ಇವುಗಳಿಗೆ ಸೇವೆ ಅಂದ್ರೆ ಏನೆಂದೇ ಗೊತ್ತಿಲ್ಲ. ಗಗನಸಖಿಯರು ನಗುವುದೂ ಇಲ್ಲ. ನಕ್ಕ ಬಳಿಕ ಗೊತ್ತಾಗುತ್ತದೆ ನಗದಿದ್ದರೇ ಚೆನ್ನಾಗಿತ್ತೆಂದು. ಎಲ್ಲ ವಯಸ್ಸಾದವರು, ಆ ವಿಮಾನಗಳಂತೆ! ಮೊನ್ನೆ ಪ್ಯಾರಿಸ್‌ನಿಂದ ಬರುವಾಗ ಬಿಸಿನೆಸ್‌ಕ್ಲಾಸ್‌ ತುಂಬಾ ಸೊಳ್ಳೆಗಳು. ಹರಿದ ಸೀಟು ಕವರ್‌ಗಳು. ಹಾಸಿಗೆಯಂತೆ ಚಾಚಿಕೊಳ್ಳುವ ಆಸನಗಳೆಲ್ಲ ಕಿತ್ತುಹೋಗಿ ಚಲಿಸದೇ ಮುದುಡಿ ಕುಳಿತಿದ್ದವು. ಯಾಕೆ ಹೀಗೆಂದು ಕೇಳಿದರೆ, ‘ನಾವಿರೋದೇ ಹೀಗೆ ಸ್ವಾಮಿ’ ಅಂತಾರೆ. ಗಗನಸಖಿಯರ ಮುಖದಲ್ಲಿ ನಗೆ ಬತ್ತಿಹೋಗಿ ಬಹಳ ದಿನಗಳಾಗಿವೆ. ಮನರಂಜನೆ, ಟಿವಿ, ಸೌಂಡ್‌ ಸಿಸ್ಟಮ್ಸ್‌ನಲ್ಲಿ ಯಾವುದೂ ಸರಿ ಇಲ್ಲ. ಎಲ್ಲ ಆಯುಷ್ಯ ತೀರಿದ ಲೀಸ್ಡ್‌ ಏರ್‌ಕ್ರಾಫ್ಟ್‌ಗಳು! ಒಂದೂರಿನಿಂದ ಮತ್ತೊಂದೂರಿಗೆ ಸುರಕ್ಷಿತವಾಗಿ ಹೋಗಿ ಬಂದರೆ ದೀರ್ಘ ನಿಟ್ಟುಸಿರು.

ಕಳೆದ ವಾರ ದಿಲ್ಲಿ - ಫ್ರಾಂಕ್‌ಫರ್ಟ್‌- ಲಾಸ್‌ ಏಂಜಲೀಸ್‌ಏರ್‌ ಇಂಡಿಯಾ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿದ ಘಟನೆ ಗೊತ್ತಿರಬಹುದು. ಕಳೆದ ನೂರು ದಿನಗಳಲ್ಲಿ ಈ ವಿಮಾನ ಮೂರನೇ ಸಲ, ಹದಿನೈದು ದಿನಗಳಲ್ಲಿ ಎರಡನೇ ಸಲ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಿತು. ಈ ವಿಮಾನದಲ್ಲಿ 304ಪ್ರಯಾಣಿಕರಿದ್ದರು. ಪುಣ್ಯವಶಾತ್‌ ಯಾರಿಗೂ ಏನೂ ಆಗಲಿಲ್ಲ. ಮೂರು ತಿಂಗಳ ಹಿಂದೆ ಇದೇ ವಿಮಾನ ಲಾಸ್‌ಏಂಜಲೀಸ್‌ ಏರ್‌ಪೋರ್ಟಿನಲ್ಲಿ ಆತಂಕದ ಕ್ಷಣಗಳನ್ನು ಸೃಷ್ಟಿಸಿತ್ತು. ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡುವಾಗ ಆಗಬಹುದಾದ ಅನಾಹುತ ತಪ್ಪಿಸಲು ಲಕ್ಷಾಂತರ ಕಿಲೋ ಇಂಧನವನ್ನು ಸಮುದ್ರಕ್ಕೆ ಚೆಲ್ಲಬೇಕಾಗುತ್ತದೆ.

ಮೊನ್ನೆ ಆಗಿದ್ದೂ ಅದೇ. ದಿಲ್ಲಿ ನಿಲ್ದಾಣದಿಂದ ಟೇಕ್‌ ಆಫ್‌ ಆಗುತ್ತಿದ್ದಂತೆ ವಿಮಾನದ ಟೈರುಗಳು ಒಡೆದು ಹೋದವು. ವಿಮಾನವನ್ನು ಮುಂಬೈನತ್ತ ಹೊರಳಿಸಲಾಯಿತು. ವಿಮಾನದಲ್ಲಿ ಸುಮಾರು ಏಳು ಗಂಟೆ ಹಾರಾಟಕ್ಕೆ ಸಾಕಾಗುವಷ್ಟು ಇಂಧನವಿತ್ತು. ಅರೇಬಿಯನ್‌ ಸಮುದ್ರದ ಮೇಲೆ ಒಂದೂವರೆ ಗಂಟೆ ವಿಮಾನವನ್ನು ಗಿರಕಿ ಹೊಡೆಸಿ ಇಂಧನವೆಲ್ಲವನ್ನೂ ಖಾಲಿ ಮಾಡಲಾಯಿತು. ಅನಂತರ ಮಧ್ಯೆ ಏರ್‌ಪೋರ್ಟ್‌ನಲ್ಲಿ ತುರ್ತುಸ್ಥಿತಿ ಘೋಷಿಸಲಾಯಿತು. ಏನು ಬೇಕಾದರೂ ಆಗಬಹುದಾದಂಥ ಪರಿಸ್ಥಿತಿ. ಫೈರ್‌ ಎಂಜಿನ್‌ಗಳು ಸನ್ನದ್ಧವಾಗಿ ನಿಂತವು. ಅಪಘಾತ ನಿಯಂತ್ರಣ ಕ್ರಮಗಳನ್ನು ಎಚ್ಚರಿಸಲಾಯಿತು. ಇಂಥ ಸಂದರ್ಭದಲ್ಲಿ ವಿಮಾನದೊಳಗೆ ಏಳುವ ಆತಂಕ, ಹಾಹಾಕಾರ, ದುಗುಡ, ಆಕ್ರಂದನ ಹೇಳಲಾಗದು. ಜೀವವನ್ನು ಎಡಗೈಲಿ ಹಿಡಿದು ಕುಳಿತುಕೊಳ್ಳಬೇಕು. ಆನಂತರ ವಿಮಾನ ನೆಲಕ್ಕಿಳಿದರೆ ಟೈರಿನ ರಬ್ಬರ್‌ ಚೆಲ್ಲಾಪಿಲ್ಲಿಯಾದವು. ವಿಮಾನದ ಹಿಂಭಾಗದ ರಿಮ್‌ ನೆಲಕ್ಕೆ ಉಜ್ಜಿ ಭಗ್ಗೆಂದು ಹೊಗೆ ಎದ್ದಿತು. ಇದೇ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಳ್ಳುವುದು. ಆದರೆ ವಿಮಾನದ ಹೊಟ್ಟೆಯಾಳಗೆ ಇಂಧನವೆಲ್ಲ ಖಾಲಿಯಾಗಿದ್ದರಿಂದ ಯಾವ ದುರಂತವೂ ಆಗಲಿಲ್ಲ.

ಅದು ಆಯುಷ್ಯ ತೀರಿದ ವಿಮಾನವಾಗಿತ್ತು. ಏರ್‌ ಇಂಡಿಯಾದ ಬಹುತೇಕ ವಿಮಾನಗಳ ಕತೆಯೂ ಇದೇ. ಪ್ರತಿ ವಿಮಾನಕ್ಕೂ airworthiness ಅಂತ ಇರುತ್ತದೆ. ಹಾರಾಟಕ್ಕೆ ಯೋಗ್ಯವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು. ಆದರೆ ಬಹುತೇಕ ವಿಮಾನಗಳಿಗೆ ಈ airworthiness ಇಲ್ಲ. ಅಂದರೆ ಅಕ್ಷರಶಃ ಇವು ಹಾರಾಡುವ ಶವಪೆಟ್ಟಿಗೆಗಳು. ಆದರೂ ಇವು ಹಾರುತ್ತಿವೆ. ಮೊನ್ನೆ ನಾವು ಕುಳಿತ ವಿಮಾನ ಪ್ಯಾರಿಸ್‌ನ ಚಾರ್ಲ್ಸ್‌ ಡಿಗಾಲ್‌ ಏರ್‌ಫೋರ್ಟಿನಿಂದ ಇನ್ನೇನು ಜಿಗಿಯಬೇಕೆನ್ನುವಷ್ಟರಲ್ಲಿ ವಿಮಾನದೊಳಗಿನ ಎಲೆಕ್ಟ್ರಿಕ್‌ ಸಂಪರ್ಕ ಕಡಿದುಹೋಯಿತು. ಒಂದು ವೇಳೆ ಟೇಕಾಫ್‌ ಆದ ಬಳಿಕ ಹೀಗಾಗಿದ್ದರೆ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಬೇಕಾಗುತ್ತಿತ್ತು. ಇಲ್ಲವೇ ಇದು ಎಂಥ ಅನಾಹುತ ತಂದಿಡುತ್ತಿತ್ತೋ?ಒಂದು ತಾಸಿನ ರಿಪೇರಿ ನಂತರವೇ ವಿಮಾನ ನೆಗೆದಿದ್ದು. ಅಲ್ಲಿನ ತನಕ ಗಾಳಿಯಾಡದ ಆ ವಿಮಾನದೊಳಗೆ ಇದ್ದ ನಮ್ಮ ಸ್ಥಿತಿ ಏನಾಗಿರಬೇಡ? ಆದರೆ ಏರ್‌ ಇಂಡಿಯಾ ಪೈಲಟ್‌ಗಳು‘ ಸಾರಿ ಫಾರ್‌ ದಿ ಮೈನರ್‌ ಇನ್‌ಕನ್ವೀನಿಯನ್ಸ್‌’ ಎಂದು ಇದನ್ನೆಲ್ಲ ಸಾರಿಸಿ ಹಾಕಿಬಿಡುತ್ತಾರೆ.

ಭಾರತ ಸರ್ಕಾರ ‘ಆಕಾಶ ಕ್ರಾಂತಿ’ಗೆ ಮಾಡಬಹುದಾದ ದೊಡ್ಡ ಉಪಕಾರವೆಂದರೆ ಇಂಡಿಯನ್‌ ಏರ್‌ಲೈನ್ಸ್‌, ಏರ್‌ ಇಂಡಿಯಾ ಎಂಬ ದರಿದ್ರ ಸೇವೆಯನ್ನು ಆದಷ್ಟು ಶೀಘ್ರ ಮುಚ್ಚುವುದು.

ಸರಕಾರದಿಂದ ಆಗದ ಕೆಲಸವನ್ನು ಕನ್ನಡಿಗರಾದ ಒಬ್ಬ ಕ್ಯಾಪ್ಟನ್‌ ಗೋಪಿನಾಥ, ಡಾ.ವಿಜಯಮಲ್ಯ ಹಾಗೂ ನರೇಶ್‌ ಗೋಯಲ್‌, ಸುಬ್ರತೋ ರಾಯ್‌ ಸಹಾರಾ, ಜೇ ವಾಡಿಯಾ ತೋರಿಸಿಕೊಟ್ಟಿದ್ದಾರೆ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ವಿಮಾನ ಪ್ರಯಾಣವನ್ನೇ ಒಂದು ಅನನ್ಯ ಅನುಭವವನ್ನಾಗಿ ಮಾಡಿದೆ. ಬರಲಿರುವ ದಿನಗಳಲ್ಲಿ ಒಂದು ಸಂಗತಿಯಂತೂ ದಿಟವಾಗಲಿದೆ Sky is not the limit!

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more