ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ ಇಲ್ಲದಿದ್ದರೂ ಬಿಜೆಪಿ ಇರುತ್ತದೆ, ಹೇಗಿರುತ್ತದೆ ಅನ್ನೋದೇ ಪ್ರಶ್ನೆ!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ನಿನ್ನೆ ಇದ್ದದ್ದು ಇಂದಿಲ್ಲ
ಇಂದಿದ್ದದ್ದು ನಾಳೆ ಇರಲ್ಲ
ಇರುವ, ಇರದಿರುವ ಕ್ರಮ
ಹೀಗೇ ನಡೆಯುತ್ತಿರುತ್ತದೆ
ನಾವಿದ್ದೇವೆ, ಇರುತ್ತೇವೆಂಬ
ಭ್ರಮೆಯೂ ಸದಾ ಆವರಿಸಿರುತ್ತದೆ

- ಅಟಲ್‌ ಬಿಹಾರಿ ವಾಜಪೇಯಿ (‘ಯಕ್ಷ ಪ್ರಶ್ನೆ’ ಕವನ)

ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ ಅವರು ಅಂಥ ಹೇಳಿಕೆ ಎಸೆಯಬಹುದೆಂದು. ಅಂದು ಬಿಹಾರಿ ವಾಜಪೇಯಿ ಏಕಾಏಕಿ ರಾಜಕೀಯ ಸನ್ಯಾಸ ಘೋಷಿಸಿಬಿಟ್ಟರು. ಚುನಾವಣೆ ರಾಜಕೀಯಕ್ಕೆ ಇನ್ನು ಮುಂದೆ ತಾವು ಸಿಗುವುದಿಲ್ಲವೆಂದು ಹೇಳಿದರು. ಅಷ್ಟಕ್ಕೇ ನಿಲ್ಲಲಿಲ್ಲ. ಮುಂದಿನ ಉಸುರಿನಲ್ಲಿ, ಪಕ್ಷದ ವಿಧೇಯ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳಿದರು. ಅಂದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆಯೇ ಹೊರತು ವಾನಪ್ರಸ್ಥಾಶ್ರಮವನ್ನಲ್ಲ ಎಂದು ಸೂಚ್ಯವಾಗಿ ಹೇಳಿದಂತಾಯಿತು.

ವಾಜಪೇಯಿ ಇಲ್ಲದ ಬಿಜೆಪಿಯನ್ನು ಊಹಿಸಲೂ ಸಾಧ್ಯವಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಸಂಘಪರಿವಾರದ ನಾಯಕರು ಎಷ್ಟೇ ಘಂಟಾಘೋಷವಾಗಿ ಹೇಳಿದರೂ, ವಾಜಪೇಯಿ ಬೆಳೆದ ಎತ್ತರವಿದೆಯಲ್ಲ ಅದು ಬಿಜೆಪಿಯಷ್ಟೇ ಅಥವಾ ಅದಕ್ಕಿಂತ ದೊಡ್ಡದು. ಕಾರಣ ಅವರು ಹಾಗೂ ಪಕ್ಷ ಜತೆ ಜತೆಗೆ ಬೆಳೆದವರು. ಹಾಗೆ ನೋಡಿದರೆ, ಬಿಜೆಪಿಗಿಂತ ಮೊದಲೇ ವಾಜಪೇಯಿ ರಾಷ್ಟ್ರ ರಾಜಕಾರಣದಲ್ಲಿ ಬೆಳೆದು ನಾಯಕನೆನಿಸಿಕೊಂಡವರು. ಪ್ರಾಯಶಃ ನೆಹರು-ಗಾಂಧಿ ಕುಟುಂಬದ ಹೊರಗೆ, ಇಷ್ಟೊಂದು ಪ್ರಭಾವ, ವರ್ಚಸ್ಸು ಹಾಗೂ ಜನಪ್ರಿಯತೆ ಗಳಿಸಿದ ಮತ್ತೊಬ್ಬ ನಾಯಕರಿದ್ದರೆ ಅದು ನಿಸ್ಸಂದೇಹವಾಗಿ ವಾಜಪೇಯಿ.

ಪಕ್ಷಕ್ಕಾಗಲಿ, ದೇಶಕ್ಕಾಗಲಿ ಯಾರೂ ಅನಿವಾರ್ಯರಲ್ಲ ಎಂಬ ಮಾತು ನಿಜವೇ. ಆದರೆ ಪಕ್ಷ ಅಥವಾ ದೇಶದ ಅಭಿವೃದ್ಧಿಗೆ, ಬೆಳವಣಿಗೆಗೆ ವ್ಯಕ್ತಿಗಳು ಅನಿವಾರ್ಯವೇ. ನೆಹರು ನಂತರ ಯಾರು? ಎಂಬ ಪ್ರಶ್ನೆ ನೆಹರು ಬದುಕಿರುವಾಗಲೇ ಉದ್ಭವಿಸಿತ್ತು. ನೆಹರು ಇಲ್ಲದ ಕಾಂಗ್ರೆಸ್ಸನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ನೆಹರುಗೆ ಸರಿಸಮಾನರಾದ ನಾಯಕರು ಕಾಂಗ್ರೆಸ್ಸಿನಲ್ಲಿರಲಿಲ್ಲ. ಅವರೇರಿದ ಎತ್ತರದ ಹತ್ತಿರಕ್ಕೆ ಬರುವವರಿರಲಿಲ್ಲ. ಹಾಗೆಂದು ಅವರ ನಿಧನದ ಬಳಿಕ ಕಾಂಗ್ರೆಸ್‌ ಕತೆ ಮುಗಿದು ಹೋಗಲಿಲ್ಲ. ನೆಹರು ನಂತರ ಪಕ್ಷ ಮುಂದುವರಿದುಕೊಂಡು ಬಂದಿದೆ. ಅನೇಕ ನಾಯಕರು ದೇಶವನ್ನಾಳಿದ್ದಾರೆ. ಆದರೆ ನೆಹರು ಅವರನ್ನು replace ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇದೇ ಮಾತನ್ನು ವಾಜಪೇಯಿ ಅಥವಾ ಬಿಜೆಪಿಗೂ ಹೇಳಬಹುದು.

ವಾಜಪೇಯಿ ನಂತರ ಪಕ್ಷ ನಿಸ್ಸಂದೇಹವಾಗಿ ಮುಂದುವರಿದುಕೊಂಡು ಹೋಗುತ್ತದೆ. ಆದರೆ ಖಂಡಿತವಾಗಿಯೂ ಅದು ವಾಜಪೇಯಿ ಇದ್ದಾಗಿನ ಬಿಜೆಪಿಯಂತಿರುವುದಿಲ್ಲ. ಬೇರೇನೋ ಆಗಿರುತ್ತದೆ. ಇಲ್ಲಿ ನೆಹರು-ವಾಜಪೇಯಿಗೆ ಸ್ವಲ್ಪ ಅಂತರವೆಂದರೆ ಕಾಂಗ್ರೆಸ್ಸನ್ನು ನೆಹರು ಕಟ್ಟಲಿಲ್ಲ. ಅವರ ಜತೆಗೆ ಅನೇಕ ಮುತ್ಸದ್ಧಿಗಳಿದ್ದರು. ಗಾಂಧೀಜಿಯ ಮಾರ್ಗದರ್ಶನವಿತ್ತು. ಆದರೆ ಬಿಜೆಪಿಗೆ ವಾಜಪೇಯಿಯೇ ಗಾಂಧೀಜಿ.

ಮೊದಲೇ ಹೇಳಬೇಕು. ವಾಜಪೇಯಿ ಬಗ್ಗೆ ನನಗೆ ಅಂಥ ಸೆಳೆತವೇನೂ ಇಲ್ಲ. ಆದರೆ ಪತ್ರಕರ್ತನ ಸಹಜ ಕುತೂಹಲವಿದೆ. ಮೊದಲಿನಿಂದಲೂ ಈ ಕುತೂಹಲದೊಂದಿಗೇ ಅವರನ್ನು ನೋಡುತ್ತಾ ಬಂದಿದ್ದೇನೆ. ಅವರೊಬ್ಬ ಅದ್ಭುತ ಮಾತುಗಾರನೆಂಬ ಕಾರಣಕ್ಕೆ ಅವರನ್ನು ಯಾರೂ ಪ್ರೀತಿಸಿಲಿಕ್ಕಿಲ್ಲ. ಕಾರಣ ನಮ್ಮ ಮಧ್ಯೆ ಸೊಗಸಾಗಿ ಮಾತನಾಡುವ ರಾಜಕಾರಣಿಗಳಿಗೇನೂ ಬರವಿಲ್ಲ. ಮಾತು, ಛಬುಕುಗಳೇ ವರಸೆಗಳಾಗಿದ್ದರೆ, ಲಾಲೂ ಯಾದವ್‌, ಸಿ.ಎಂ. ಇಬ್ರಾಹಿಂ ಥರದವರನ್ನು ತಲೆ ಮೇಲೆ ಇಟ್ಟುಕೊಂಡಿರುತ್ತಿದ್ದೆವು. ಜನ ಅವರನ್ನೆಲ್ಲ ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ.

ಅವರು ಕವಿಯಾಗಿದ್ದಕ್ಕೆ, ಅವಿವಾಹಿತರಾಗಿರುವುದಕ್ಕೆ, ಸ್ಟೇಟ್ಸ್‌ಮನ್‌ ಖದರಿನ ರಾಜಕಾರಣಿಯಾಗಿದ್ದಕ್ಕೆ, ಉತ್ತಮ ಸಂಸದೀಯ ಪಟುವಾಗಿರುವುದಕ್ಕೆ ಅವರನ್ನು ಮೆಚ್ಚಬೇಕಾಗಿಲ್ಲ. ಅಂಥ ರಾಜಕಾರಣಿಗಳಿಗೂ ನಮ್ಮಲ್ಲಿ ಕೊರತೆಯಿಲ್ಲ. ಈ ಎಲ್ಲ ಪೈಕಿ ಒಂದು ಗುಣವಿರುವ ಅಸಂಖ್ಯ ಮುತ್ಸದ್ಧಿಗಳು ಅಥವಾ ಇವೆಲ್ಲವುಗಳನ್ನು ಹೊಂದಿರುವ ಅನೇಕರು ಸಿಗುತ್ತಾರೆ. ಆದರೆ ಅವರ್ಯಾರೂ ವಾಜಪೇಯಿ ಆಗಿಲ್ಲ. ರಾಜಕಾರಣದಲ್ಲಿ ಯಾರೂ ಸುಖಾಸುಮ್ಮನೆ ವಾಜಪೇಯಿಯಾಗುವುದಿಲ್ಲ. ಅವರಂತೆ ಆಗುವುದು ಸುಲಭವೂ ಅಲ್ಲ. ಹೀಗಾಗಿ ನಮ್ಮ ಮಧ್ಯೆ ಒಂದೇ ವಾಜಪೇಯಿ ಇದ್ದಾರೆ.

ವ್ಯಕ್ತಿಗತವಾಗಿ ವಾಜಪೇಯಿಯನ್ನು ಏನೆಂದು, ಹೇಗೆ ಟೀಕಿಸಬಹುದು? ಯೋಚಿಸಿ, ಪಟ್ಟಿ ಮಾಡಿ ನೋಡೋಣ. ಉಹುಂ, ಪಟ್ಟಿ ಬೆಳೆಯುವುದಿಲ್ಲ. ಕೋಮುವಾದಿ ಪಕ್ಷವೆಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಬಿಜೆಪಿಯಲ್ಲಿದ್ದಾರೆಂಬ ಏಕಮಾತ್ರ ಕಾರಣಕ್ಕೆ ಅವರನ್ನು ವಿರೋಧಿಸಬಹುದೇ ಹೊರತು. ಮತ್ತಾವ ಪ್ರಬಲ ಕಾರಣಗಳೂ ಸಿಗಲಿಕ್ಕಿಲ್ಲ. ಅವರ ವಿರೋಧಿಗಳೂ ಅವರಿಗೆ right man in a wrong party ಎಂದು ಹೇಳಿ ಅವರ ಟೀಕಾಸ್ತ್ರಗಳನ್ನು ಕೆಳಗಿಡುತ್ತಾರೆ. ಒಂದು ಹೆಜ್ಜೆ ಮುಂದೆ ಹೋಗಿ ಟೀಕಿಸಿದ್ದು ಸೋನಿಯಾ ಗಾಂಧಿ.

ಗದ್ಧಾರ್‌ ಅಂದರು! ಮಹಾನ್‌ ಸುಳ್ಳುಗಾರ ಅಂದರು!

ಈ ಟೀಕೆಗೆ ಅದೆಂಥ ಪ್ರತಿಭಟನೆ ರಾಷ್ಟ್ರವ್ಯಾಪಿ ವ್ಯಕ್ತವಾಯಿತೆಂದರೆ ಸೋನಿಯಾ ತಮ್ಮ ಮಾತನ್ನು ಹಿಂಪಡೆಯಬೇಕಾಯಿತು. ಅದಕ್ಕೆ ಅವರು ತೆತ್ತ ಬೆಲೆಯೇನು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ಸಿಗರೇ ಅಲವತ್ತುಕೊಂಡರು ಮೇಡಂ ಹಾಗೆ ಹೇಳಬಾರದಿತ್ತೆಂದು. ಖಾಸಗಿಯಾಗಿ ಸೋನಿಯಾ ಕೂಡ ತುಟಿಮೀರಿದ ಮಾತಿಗೆ ‘ಪ್ಚ್‌’ ಅಂದರು. ಡಾ. ಸುಬ್ರಮಣ್ಯ ಸ್ವಾಮಿ ಅವರಂಥ ಬಾಯಿಬಡುಕರು ವಾಜಪೇಯಿ ಬಗ್ಗ ಲಘುವಾಗಿ ಮಾತಾಡಿದ್ದನ್ನು ಬಿಟ್ಟರೆ (ಅದನ್ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ) ಅವರತ್ತ ಯಾರೂ ಬೊಟ್ಟು ಮಾಡಿ ತೋರಿಸಲಿಲ್ಲ.

ಈ ಸಂದರ್ಭದಲ್ಲಿ ನಾನು ಅವಿವಾಹಿತನೇ ಹೊರತು ಬ್ರಹ್ಮಚಾರಿ ಅಲ್ಲ ಎಂದು ವಾಜಪೇಯಿ ಟೀಕಾಕಾರರನ್ನು ಬಾಯಿಮುಚ್ಚಿಸಿದರು. ನನಗೆ ಕುಡಿಯಬೇಕಿನಿಸುವುದಿಲ್ಲ. ಹಾಗನಿಸಿದಾಗ ಬಿಯರ್‌ ಕುಡಿಯುತ್ತೇನೆ. ‘ಅಲ್ಸರ್‌ ಇರುವುದರಿಂದ ಕುಡಿದಾಗ ತಲೆ ನೋವು ಬರುತ್ತದೆ ಹೀಗಾಗಿ ಕುಡಿಯುವುದಿಲ್ಲ’ ಎಂದು ಈ ಕುರಿತು ಊಹಾಪೋಹಗಳಿಗೂ ತೆರೆ ಎಳೆದರು. ಬಿಜೆಪಿಯ ಪರಮ ವಿರೋಧಿಗಳು ಸಹ ವಾಜಪೇಯಿ ಕುರಿತು ತುಟಿ ಪಿಟಿಕ್ಕೆನ್ನಲಿಕ್ಕಿಲ್ಲ. ದಿವಂಗತ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರಂತೂ‘ವಾಜಪೇಯಿ ನನ್ನ ಗುರು’ ಎಂದು ಸಮಾರಂಭವೊಂದರಲ್ಲಿ ಆಲಿಂಗಿಸಿಕೊಂಡಿದ್ದರು. ಕಾಂಗ್ರೆಸ್‌,ಕಮುನಿಷ್ಟ್‌ ಪಕ್ಷಗಳಲ್ಲಿ ಅವರನ್ನು ಇಂದಿಗೂ ಇಷ್ಟಪಡುವ ದೊಡ್ಡ ಗುಂಪಿದೆ.

ಸ್ವತಃ ನೆಹರುಗೆ ವಾಜಪೇಯಿ ಕಂಡರೆ ಪ್ರೀತಿಸಿತ್ತು. ಪಾರ್ಲಿಮೆಂಟ್‌ನಲ್ಲಿ ಹಿಂದಿನ ಸಾಲಿನಲ್ಲಿ ಎದ್ದು ನಿಂತು ವಿದೇಶಾಂಗ ನೀತಿ ಬಗ್ಗೆ ಮಾತಾಡುತ್ತಿದ್ದರೆ ನೆಹರು ಕಿವಿಯರಳಿಸಿಕೊಂಡು ಕೇಳುತ್ತಿದ್ದರು. ಒಮ್ಮೆ ನೆಹರು ಲೋಕಸಭೆಯಲ್ಲಿ,‘ನಾನು ಬಹಳ ದಿನಗಳ ನಂತರ ಸಂಸತ್ತಿನಲ್ಲಿ ಉತ್ತಮ ಭಾಷಣ ಕೇಳಿದೆ. ವಾಜಪೇಯಿ ವಿದೇಶಾಂಗ ನೀತಿ ಬಗ್ಗೆ ಸೊಗಸಾಗಿ ಮಾತಾಡಿದರು. ಭಾಷಣ ಮಾಡುವಾಗ ಮಾತು ಅಗತ್ಯ, ಮೌನವಾಗಿರಲು ಮಾತು ಮತ್ತು ವಿವೇಚನೆ ಎರಡೂ ಅಗತ್ಯವೆಂಬ ವಾಜಪೇಯಿ ಮಾತನ್ನು ನಾನು ಒಪ್ಪುತ್ತೇನೆ’ ಎಂದು ಹೇಳಿ ಅನಂತರ ಮೊಗಸಾಲೆಯಲ್ಲಿ ಬಹಳ ಹೊತ್ತು ಮಾತಾಡಿ ಮೆಚ್ಚುಗೆ ಸೂಚಿಸಿದ್ದರು.

ವಾಜಪೇಯಿ ಬಲರಾಮಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಪ್ರಧಾನಿ ನೆಹರು ಸುತ್ತಲಿನ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರಾದರೂ ಬಲರಾಮಪುರದಲ್ಲಿ ಮಾತ್ರ ಪ್ರಚಾರ ಮಾಡಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಎಷ್ಟೇ ಒತ್ತಾಯಿಸಿದರೂ ನೆಹರು ಬರಲಿಲ್ಲ. ‘ಬಲರಾಮಪುರದಲ್ಲಿ ಪ್ರಚಾರ ಮಾಡಲು ಮನಸ್ಸಾಗಲಿಲ್ಲ. ವಾಜಪೇಯಿಯಂಥವರು ಆರಿಸಿ ಬರಬೇಕು. ಅವರು ಸಂಸತ್ತಿನಲ್ಲಿ ಚರ್ಚೆಯಲ್ಲಿ ಸಂಕ್ರಿಯವಾಗಿ ಭಾಗವಹಿಸುತ್ತಾರೆ. ಅಂಥವರು ಆರಿಸಿ ಬರುವುದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದು’ ಅಂದಿದ್ದರು ನೆಹರು. ವಾಜಪೇಯಿ ಆರಿಸಿ ಬಂದರು.

ಒಮ್ಮೆ ಪ್ರತಿಪಕ್ಷದ ಸದಸ್ಯರೆಲ್ಲ ನೆಹರು ಅವರ ಚೀನಾ ನೀತಿ ಖಂಡಿಸಿ ಸಂಸತ್ತಿನಲ್ಲಿ ತರಾಟೆಗೆ ತೆಗೆದುಕೊಂಡಾಗ, ‘ಪ್ರತಿಪಕ್ಷದ ಸದಸ್ಯರಾದ ಮಾತ್ರಕ್ಕೆ ಟೀಕಿಸಲೇಬೇಕೆಂಬ ನಿಯಮವಿದೆಯಾ? ಈ ಸಮಯದಲ್ಲಿ ನೆಹರು ಬೆಂಬಲಕ್ಕೆ ನಿಲ್ಲುವುದು ದೇಶದ ಒಳಿತಿನ ದೃಷ್ಟಿಯಿಂದ ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿ ವಾಜಪೇಯಿ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದ್ದರು. ವಾಜಪೇಯಿಯನ್ನು ನೆಹರುಗೆ ಹೋಲಿಸುವುದುಂಟು. ನೆಹರು ಜೌದಾರ್ಯ, ವೈಶಾಲ್ಯ, ಎಲ್ಲ ಅಭಿಪ್ರಾಯಗಳಿಗೆ ಜಾಗ ಮಾಡಿಕೊಡುವ ಗುಣವನ್ನು ವಾಜಪೇಯಿಯವರಲ್ಲೂ ಕಾಣಬಹುದು.

ವಾಜಪೇಯಿ ಕೂಡ ಪ್ರಧಾನಿಯಾದಾಗ ಮೂಲಸೌಕರ್ಯ ಅಭಿವೃದ್ಧಿ. ಆರ್ಥಿಕ ಸುಧಾರಣೆ ಹಾಗೂ ತಾಂತ್ರಿಕ ಪ್ರಗತಿಗೆ ಒತ್ತು ನೀಡಿದರು. ಯಾರನ್ನೂ ಎದುರು ಹಾಕಿಕೊಳ್ಳದ್ದರಿಂದಲೇ ಅವರು ಉದಾರವಾದಿಯೆಂಬ ಹೆಸರನ್ನು ಅನಾಯಾಸವಾಗಿ ಪಡೆದಿದ್ದಾರೆಂದು ಹೇಳುವುದುಂಟು. ಎಲ್ಲ ವರ್ಗಗಳ ಜನರು ಅವರನ್ನು ಇಷ್ಟಪಡಲು ಇದೂ ಕಾರಣವಾಗಿರಬಹುದು. ವಾಜಪೇಯಿ ಲಖನೌಗೆ ಹೋದರೆ ಅವರನ್ನು ಭೇಟಿಯಾಗುವವರಲ್ಲಿ ಮುಸ್ಲಿಮರೇ ಹೆಚ್ಚಿರುತ್ತಿದ್ದರೆಂದು ಹಿಂದೂಸ್ತಾನ ಟೈಮ್ಸ್‌ ಸಂಪಾದಕ ವೀರ್‌ಸಾಂಘ್ವಿ ಬರೆದಿದ್ದರು. ‘ನಾನೆಂದೂ ಬಿಜೆಪಿಯ ತತ್ತ್ವ, ಸಿದ್ಧಾಂತ ಇಷ್ಟಪಟ್ಟವನಲ್ಲ. ಆ ಪಕ್ಷಕ್ಕೆ ಎಂದೂ ಮತ ಹಾಕಲಾರೆ. ಆದರೆ ನನಗೆ ವಾಜಪೇಯಿಯನ್ನು ಇಷ್ಟಪಡದಿರಲು ಆಗುವುದಿಲ್ಲ’ ಎಂದು ಅವರು ಬರೆದಿದ್ದರು.

ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದು ವಾಜಪೇಯಿ ಮಟ್ಟಿಗೆ ಹೇಳುವಂತಿಲ್ಲ. ಅವರ ಆಡಳಿತದಲ್ಲೂ ದೋಷಗಳಿರಲಿಲ್ಲವೆಂದಲ್ಲ. ಅವರು ನೇತೃತ್ವ ವಹಿಸಿದ್ದ ಸರಕಾರ ಬಿಜೆಪಿಯದ್ದಾಗಿರಲಿಲ್ಲ. ಎರಡು ಡಜನ್‌ ಸನಿಹದ, ವಿಭಿನ್ನ, ವಿಚಿತ್ರ ರಾಜಕೀಯ ಧೋರಣೆಯ ‘ ಸಮಾನಮನಸ್ಕ’ ರಾಜಕೀಯ ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣ ಅವಧಿಗೆ ಅಧಿಕಾರ ನಡೆಸಿದ್ದೇ ದೊಡ್ಡ ಸಾಧನೆ. ಕಾಂಗ್ರೆಸ್‌ ಬಿಟ್ಟರೆ ಬೇರೆ ಯಾವ ಸರಕಾರವೂ ಅವಧಿ ಪೂರೈಸಿದ್ದೇ ಇಲ್ಲ. ರಾಜಕಾರಣಿಯನ್ನು ಅಳೆಯಲು ಅಧಿಕಾರ ಕೊಟ್ಟು ನೋಡಬೇಕು ಅಂತಾರೆ. ಆದರೆ ವಾಜಪೇಯಿ ಆಡಳಿತ ಪರವಾಗಿಲ್ಲ ಎನ್ನುವಂತಿತ್ತು.

ಸಣ್ಣಪುಟ್ಟ ಕರ್ಮಕಾಂಡಗಳಾದವು, ಸರಕಾರಕ್ಕೆ ಮುಖಭಂಗವಾಯಿತು. ವಾಜಪೇಯಿ ಆಡಳಿತ ಪರವಾಗಿಲ್ಲ ನಿಭಾಯಿಸಿದರು. ಪೋಖ್ರಾನ್‌ ಅಣುಸ್ಫೋಟ, ಕಾರ್ಗಿಲ್‌ ವಿಜಯ, ಪಾಕಿಸ್ತಾನಕ್ಕೆ ಶಾಂತಿ ಯಾತ್ರೆ, ಸುವರ್ಣ ಚತುಷ್ಪಥ, ಮಾಹಿತಿ ತಂತ್ರಜ್ಞಾನ ಕ್ರಾಂತಿ ವಾಜಪೇಯಿ ಆಡಳಿತ ನೆನಪಿಸುವ ಮೈಲಿಗಲ್ಲುಗಳು. ವಾಜಪೇಯಿ ಅಧಿಕಾರದ ಪಥದಲ್ಲಿ ಹಾದಿ ತಪ್ಪಲಿಲ್ಲ. ಕೈ, ಬಾಯಿ ಕೆಡಿಸಿಕೊಳ್ಳಲಿಲ್ಲ. ಹೆಸರನ್ನು ಹಾಳು ಮಾಡಿಕೊಳ್ಳಲಿಲ್ಲ. ವಯಸ್ಸು ಅವರ ಪರವಾಗಿಲ್ಲದಿದ್ದರೂ, ಒದಗಿ ಬಂದ ಅವಕಾಶವನ್ನು ನಿಭಾಯಿಸಿದರು. ತಮ್ಮ ಸ್ಥಾನ, ವ್ಯಕ್ತಿತ್ವಕ್ಕೆ ಕುಂದು ತರುವಂಥ ಕೆಲಸ ಮಾಡಲಿಲ್ಲ.

ಬಿಜೆಪಿ ಅಂದ್ರೆ ತಕ್ಷಣ ಕಣ್ಣಮುಂದೆ ಬರುವವರು ವಾಜಪೇಯಿ. ತಳಮಟ್ಟದಿಂದ ಪಕ್ಷ ಕಟ್ಟಿದರಲ್ಲಿ ಆಡ್ವಾಣಿ ಯೋಗದಾನ ದೊಡ್ಡದಿರಬಹುದು. ಆದರೆ ಇಡೀ ಪಕ್ಷದ ತುಂಬಾ ವಾಜಪೇಯಿ ಆವಾಹಿಸಿಕೊಂಡಷ್ಟು ಅವರಿಗೆ ಸಾಧ್ಯವಾಗಲಿಲ್ಲ.

ಈ ದೇಶದ ರಾಜಕಾರಣಕ್ಕೆ ಒಂದು ಘನತೆ, ಅಗ್ರಪಂಕ್ತಿ ಹಾಕಿಕೊಟ್ಟ ಮಹಾನ್‌ ಮುತ್ಸದ್ಧಿ ಎಂಬುದರಲ್ಲಿ ಸಂಶಯವಿಲ್ಲ. ವಾಜಪೇಯಿ ಫೋಟೊ ಇಟ್ಟುಕೊಂಡು ಬಿಜೆಪಿ ಜನರ ಬಳಿಗೆ ಹೋಗಬಹುದು. ಅದು ಅನಿವಾರ್ಯ ಕೂಡ. ಆದರೆ ಅಸಲಿ ಜಾದೂಗಾರನೇ ಇಲ್ಲದೇ ಮ್ಯಾಜಿಕ್‌ ಹೇಗೆ ಆಗುತ್ತದೆ? ಬಿಜೆಪಿ ಈ ಕ್ಷಣಕ್ಕೆ ಏಕೋ ಖಾಲಿಮನೆ ಎಂದು ಅನಿಸುವುದಿಲ್ಲವಾ?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X