ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನಾಯಕನಾಗುವ ಮುನ್ನವೆ ಮಾಯವಾದ ಮಹಾಜನ್‌

By Staff
|
Google Oneindia Kannada News

ಮಹಾನಾಯಕನಾಗುವ ಮುನ್ನವೆ ಮಾಯವಾದ ಮಹಾಜನ್‌ ಒಬ್ಬ ಚತುರ, ಆಕರ್ಷಕ ರಾಜಕಾರಣಿಗೆ ಬೇಕಾದ ಎಲ್ಲ ಒಳ್ಳೆಯ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದ ಪ್ರಮೋದ್‌,'ಭವಿಷ್ಯದ ಪ್ರಧಾನಿ" ಎಂದೇ ಭರವಸೆ ಮೂಡಿಸಿದ್ದರು. ವಾಜಪೇಯಿ, ಆಡ್ವಾಣಿ ಬಳಿಕ ಯಾರಾದರೂ ಭರವಸೆ ಇಡುಗಂಟನ್ನು ಇಡಬಹುದಾದ ನಾಯಕ ಎಂದು ಕರೆಯಿಸಿಕೊಳ್ಳುವಷ್ಟರಮಟ್ಟಿಗೆ ಬೆಳೆದಿದ್ದು ಅವರ ಮಹತ್ಸಾಧನೆ. ಅವರ ಬಗೆಗೆ ಸಾಕಷ್ಟು ಟೀಕೆ/ವಿಮರ್ಶೆಗಳೂ ಇವೆ.

ವಿಶ್ವೇಶ್ವರ ಭಟ್‌

ಪ್ರಮೋದ್‌ ಮಹಾಜನ್‌ರನ್ನು ನಾನು ಭೇಟಿ ಮಾಡಿದ್ದು ಕೇವಲ ಮೂರು ಸಲ. ಆಗ ನಾನು ಕೇಂದ್ರ ಮಂತ್ರಿ ಅನಂತ್‌ಕುಮಾರ್‌ಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದೆ. ಎರಡನೇ ಭೇಟಿಗೆ ಬಂದಾಗ ಪ್ರಮೋದ್‌, ನನ್ನ ಹೆಸರು ಹಿಡಿದು ಮಾತಾಡಿಸಿ ಉಭಯ ಕುಶಲೋಪರಿಗಿಳಿದಿದ್ದರು. ಮೊದಲ ಭೇಟಿಯ ಮಾತುಗಳು ನಮ್ಮಿಬ್ಬರ ಮಧ್ಯೆ ಪುನಃ ಹಾಸಿಕೊಂಡಿತ್ತು. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದ್ರೆ ಕೆಲವು ರಾಜಕಾರಣಿಗಳಿರುತ್ತಾರೆ. ಅವರನ್ನು ಐದಾರು ಸಲ ಪರಿಚಯಿಸಿಕೊಳ್ಳಬೇಕಾಗುತ್ತದೆ. ಮುಂದಿನ ಸಲ ಪುನಃ ಭೇಟಿಯಾದಾಗ,'ನಿಮ್ಮನ್ನು ಎಲ್ಲೋ ನೋಡಿದ ಹಾಂಗಿದೆಯಲ್ಲ" ಎಂಬ ಪ್ರಶ್ನಾರ್ಥಕ ಚಿಹ್ನೆಯಿಡುತ್ತಾರೆ. ಕೆಲವೊಮ್ಮೆ 'ಇವ್ರಾ? ನಂಗೆ ಪರಿಚಯಿಸ್ತೀರಲ್ಲ, ನಂಗೆ ಚೆನ್ನಾಗಿ ಗೊತ್ತು" ಎಂದು ಮುಖಾ ಮುಖಿ ಸುಳ್ಳು ಸುಳ್ಳೇ ಹೇಳುತ್ತಾರೆ. ನಾವು ಹೋದ ಬಳಿಕ ಪಕ್ಕದವನ ಕರೆದು,'ಅವನ ಹೆಸರು ಏನದು?" ಅಂತ ವಿಚಾರಿಸಿಕೊಳ್ಳುತ್ತಾರೆ. ಇರಲಿ ಬಿಡಿ.

ನನಗೆ ಚೆನ್ನಾಗಿ ನೆನಪಿದೆ. ಪ್ರಮೋದ್‌ ಮೊದಲ ಭೇಟಿಯಲ್ಲಿ ಹೇಳಿದ್ದರು. 'ನಿಮ್ಮ ಹಾಗೆ ನಾನು ಪತ್ರಕರ್ತನಾಗಿದ್ದೆ. ಬಿಎಯಲ್ಲಿ ಪತ್ರಿಕೋದ್ಯಮ ಓದಿ ಕೆಲ ಕಾಲ 'ತರುಣ್‌ ಭಾರತ್‌"ದಲ್ಲಿ ಉಪಸಂಪಾದಕನಾಗಿದ್ದೆ. ಪತ್ರಿಕೋದ್ಯಮದಲ್ಲಿಯೇ ಇದ್ದಿದ್ದರೆ ಇಷ್ಟೊತ್ತಿಗೆ ಸಂಪಾದಕನಾಗಿರುತ್ತಿದ್ದೆನೇನೋ? ಈ ಹಾಳು ರಾಜಕೀಯಕ್ಕೆ ಬಂದು ಬಿಟ್ಟೆ. ಈಗ ವಾಪಸ್‌ ಹೋಗಲು ಆಗುವುದಿಲ್ಲ. ಕಾರಣ ಯಾವ ಸಂಪಾದಕನೂ ನನಗೆ ಈಗ ನೌಕರಿ ಕೊಡುವುದಿಲ್ಲ. ಹೀಗಾಗಿ ಇಲ್ಲಿಯೇ ಇದ್ದೇನೆ".

Pramod Mahajanಮೂರನೆ ಭೇಟಿ ಎದುರಾದಾಗ ಎದೆಯಲ್ಲಿ ಹತ್ತಾರು ವರ್ಷಗಳ ಕಾಲ ಕಟ್ಟಿಕೊಂಡ ಸ್ನೇಹವನ್ನು ಬಿಚ್ಚಿಡುವವರಂತೆ ಪ್ರಮೋದ್‌ ಮಾತಾಡಿದ್ದರು. ಆಗ ಅವರು ಕೇಂದ್ರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದರು. ಸಂಸದೀಯ ವ್ಯವಹಾರಗಳ ಖಾತೆಯನ್ನೂ ನಿಭಾಯಿಸುತ್ತಿದ್ದುದರಿಂದ ಮಿಲಿಜುಲಿ ಸರಕಾರದ 23ಅಂಗಪಕ್ಷಗಳ ನಾಯಕರನ್ನೆಲ್ಲ ಸಂಭಾಳಿಸುವ ಹೊಣೆಗಾರಿಕೆಯೂ ಇತ್ತು. ಪ್ರಮೋದ್‌ ಬರುತ್ತಿದ್ದರೆ ಅವರ ಪಕ್ಷದ ನಾಯಕರು ಸಹ ಎದ್ದು ನಿಲ್ಲುತ್ತಿದ್ದರು. ಕಾರ್ಯಕರ್ತರಿಗಂತೂ ಎಲ್ಲಿಲ್ಲದ ಹುರುಪು. ಪ್ರಮೋದ್‌ ತಮ್ಮ ಕಿರುನಗೆಯಿಂದ ಅವರನ್ನೆಲ್ಲ ಮಾತಾಡಿಸಿ ಮುಂದೆ ಹೋಗುತ್ತಿದ್ದರು.

ವಾಜಪೇಯಿ, ಅಡ್ವಾಣಿಯಂಥ ನಾಯಕರು ಸಹ ಇಕ್ಕಟ್ಟಿನ, ಬಿಕ್ಕಟ್ಟಿನ ಪ್ರಸಂಗಗಳಲ್ಲಿ ಪ್ರಮೋದ್‌ ಕಡೆಗೆ ನೋಡುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ವಾಜಪೇಯಿ ಹದಿಮೂರು ದಿನಗಳ ಸರಕಾರ ರಚಿಸಿದಾಗ, ಆ ಸರಕಾರದ ಭವಿಷ್ಯದ ಬಗ್ಗೆ ಅವರಿಗೆ ಯಾವುದೇ ವಿಶ್ವಾಸವಿರಲಿಲ್ಲ.'ಅದೇನಾದರೂ ಪವಾಡ ನಡೆದು ಸರಕಾರ ಉಳಿಯುವಂತಾದರೆ ಅದು ಪ್ರಮೋದ್‌ ಮಹಾಜನ್‌ರಿಂದ" ಎಂದು ಸ್ವತಃ ವಾಜಪೇಯಿ ಖಾಸಗಿಯಾಗಿ ಹೇಳಿದ್ದರು. ಆ ಹದಿಮೂರು ದಿನ ದೇಶಕ್ಕೆ ದೇಶವೇ, ಮಹಾಜನತೆಯೆಲ್ಲ ಈ ಮಹಾಜನನ್ನೇ ಬಿಟ್ಟು ಬಿಡದೇ ನೋಡುತ್ತಿತ್ತು. ಬಿಜೆಪಿಯಾಗಲಿ, ಈ ದೇಶದ ಜನರಾಗಲಿ ಪ್ರಮೋದ್‌ ಮಹಾಜನ್‌ರ ಮೇಲಿಟ್ಟ ಭರವಸೆ, ವಿಶ್ವಾಸಗಳು ಹಾಗಿದ್ದವು.

ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಐಟಿ ಡಾಟ್‌ಕಾಂ ಉದ್ಘಾಟನೆಗೆಂದು ಪ್ರಮೋದ್‌ ಬೆಂಗಳೂರಿಗೆ ಬಂದಿದ್ದರು. ಆಗ ಅವರು ಟೆಲಿಕಮ್ಯುನಿಕೇಶನ್ಸ್‌ ಮಂತ್ರಿಯಾಗಿದ್ದರು. ಅಂದಿನ ಅವರ ಭಾಷಣ ಕೇಳಿದವರು ಅವರನ್ನು ಪ್ರೀತಿಸದಿರಲು ಸಾಧ್ಯವೇ ಇರಲಿಲ್ಲ. ಸ್ವತಃ ಕೃಷ್ಣ ಎದ್ದು ಹೋಗಿ ಪ್ರಮೋದ್‌ರನ್ನು ಅಭಿನಂದಿಸಿದ್ದರು. ಅಂದು ಪ್ರಮೋದ್‌ ಹೇಳಿದ್ದರು- 'ನನಗೆ ಬೆಂಗಳೂರು ಅಂದ್ರೆ ತುಂಬಾ ತುಂಬಾ ಇಷ್ಟ.(ಪ್ರೇಕ್ಷಕರಿಂದ ಚಪ್ಪಾಳೆ) ಮುಂಬೈ ಬಿಟ್ಟು ಬೇರೆ ನಗರದ ಆಯ್ಕೆ ಪ್ರಶ್ನೆ ಮುಂದಿಟ್ಟರೆ ನಾನು ಆಯ್ದುಕೊಳ್ಳುವುದು ಬೆಂಗಳೂರನ್ನೇ.(ಪುನಃ ಚಪ್ಪಾಳೆ). ನಾನು ನನ್ನ ನಿವೃತ್ತ ಜೀವನವನ್ನು ಬೆಂಗಳೂರಿನಲ್ಲಿಯೇ ಕಳೆಯಲು ನಿರ್ಧರಿಸಿದ್ದೇನೆ".

ಅದಾಗಲೇ fully charged ಆಗಿದ್ದ ಪ್ರೇಕ್ಷಕರು ಈ ಮಾತನ್ನು ಕೇಳುತ್ತಿದ್ದಂತೆ ಜೋರಾಗಿ ಚಪ್ಪಾಳೆ, ಕೇಕೆ ಹೊಡೆದು ಸಂಭ್ರಮಿಸಿದರು. ಇವೆಲ್ಲ ಮುಗಿದು ಒಂದು ಕ್ಷಣ ಮೌನ. ಪ್ರಮೋದ್‌ ಹೇಳಿದರು-'ಹೌದು, ನನ್ನ ನಿವೃತ್ತಿ ಜೀವನವನ್ನು ಬೆಂಗಳೂರಿನಲ್ಲಿಯೇ ಕಳೆಯಬೇಕೆಂದಿದ್ದೇನೆ. ಆದರೇನು ಮಾಡಲಿ. ರಾಜಕಾರಣಿಗಳು ನಿವೃತ್ತಿಯೇ ಆಗುವುದಿಲ್ಲವಲ್ಲ?" ನಾಲ್ಕು ನಿಮಿಷ ಚಪ್ಪರ ಕಿತ್ತು ಹೋಗುವಂತೆ ಜನ ಜಪ್ಪಾಳೆ ಹೊಡೆದಿದ್ದರು.

ಪ್ರಮೋದ್‌ ಮಾತಿನ ಧಾಟಿಯೇ ಹಾಗಿತ್ತು. ಅದು ಅವರ ವ್ಯಕ್ತಿತ್ವದ ಪ್ರಧಾನ ಅಂಶವಾಗಿತ್ತು. ವಿಚಾರ, ಹಾಸ್ಯ, ತೀಕ್ಷ್ಣ ವಿಡಂಬನೆ, ಚಾಟಿಯೇಟು, ವಾದ, ಆಕ್ರೋಶ, ವ್ಯಂಗ್ಯ... ಈ ಎಲ್ಲವುಗಳ ಸಮಪಾಕದಿಂದ ಕೂಡಿದ ಅವರ ಮಾತುಗಳನ್ನು ಕೇಳುತ್ತಿದ್ದರೆ, ಗಲ್ಲಕ್ಕೆ ಕೈ ಹಚ್ಚಿ ಕೂತು ಕೇಳಬೇಕೆನಿಸುತ್ತಿತ್ತು. ಒಬ್ಬ ಚತುರ, ಆಕರ್ಷಕ ರಾಜಕಾರಣಿಗೆ ಬೇಕಾದ ಎಲ್ಲ ಒಳ್ಳೆಯ ಸಂಗತಿಗಳನ್ನು ಮೈಗೂಡಿಸಿಕೊಂಡಿದ್ದ ಪ್ರಮೋದ್‌,'ಭವಿಷ್ಯದ ಪ್ರಧಾನಿ" ಎಂದೇ ಭರವಸೆ ಮೂಡಿಸಿದ್ದರು. ವಾಜಪೇಯಿ, ಆಡ್ವಾಣಿ ಬಳಿಕ ಯಾರಾದರೂ ಭರವಸೆ ಇಡುಗಂಟನ್ನು ಇಡಬಹುದಾದ ನಾಯಕ ಎಂದು ಕರೆಯಿಸಿಕೊಳ್ಳುವಷ್ಟರಮಟ್ಟಿಗೆ ಬೆಳೆದಿದ್ದು ಅವರ ಮಹತ್ಸಾಧನೆ.

ಪ್ರಮೋದ್‌ ಮಹಾಜನ್‌ ಅಂದ್ರೆ ಮೂಡುವ ಚಿತ್ರಣವೇ ಬೇರೆ. ಸ್ವಾತಂತ್ರ್ಯಾ ನಂತರ ಹುಟ್ಟಿದ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿರುವ ಅವರು ಕೇವಲ ರಾಜಕಾರಣಿ, ಸಂಘಟಕ, ಮಾತುಗಾರ, ಫಂಡ್‌ರೇಸರ್‌ ಅಷ್ಟೇ ಆಗಿದ್ದರೆ, ಅವರ ಬಗ್ಗೆ ಯಾರೂ ಈ ಹೊತ್ತಿನಲ್ಲಿ ಇಷ್ಟೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗೆಂದು ಪ್ರಮೋದ್‌ ಇವೆಲ್ಲವೂ ಆಗಿದ್ದರು. ಇಷ್ಟನ್ನೇ ಮಾಡಿಕೊಂಡಿರುವವರು ಎಲ್ಲ ಪಕ್ಷಗಳಲ್ಲೂ ಸಿಗುತ್ತಾರೆ. ಇಂಥವರಿಲ್ಲದಿದ್ದರೆ ಯಾವ ಪಕ್ಷವೂ ನಡೆಯುವುದಿಲ್ಲ. ಆದರೆ ಅಂಥವರು ಒಂದು ಹಂತದ ತನಕ ಬಂದು ಅಲ್ಲೇ ನಿಂತು ಬಿಡುತ್ತಾರೆ. ಸಂಘಟಕ, ಫಂಡ್‌ರೇಸರ್‌ ಎಂದೇ ಕರೆಯಿಸಿಕೊಳ್ಳುವ ಅಮರ್‌ಸಿಂಗ್‌ನನ್ನು ನಾಯಕನೆಂದು ಅವರ ಪಕ್ಷದವರೇ ಒಪ್ಪುವುದಿಲ್ಲ. ಮಾತುಗಾರಿಕೆಯಾಂದೇ ಮುಖ್ಯ ಲಕ್ಷಣವಾಗಿದ್ದರೆ ನಮ್ಮ ಇಬ್ರಾಹಿಮ್ಮು, ವಾಟಾಳು ಎಲ್ಲೋ ಇರಬೇಕಿತ್ತು. ಮಹಾಜನರನ್ನು ಭಿನ್ನವಾಗಿ ನೋಡಬೇಕಿರುವುದು ಈ ನೆಲೆಯಲ್ಲಿ. ಬಡಶಾಲಾ ಮೇಷ್ಟ್ರ ಮಗನಾಗಿ, ಬ್ರಾಹ್ಮಣನಾಗಿ ಹುಟ್ಟಿದ ಪ್ರಮೋದ್‌, ರಾಜಕೀಯದಲ್ಲಿ ಜಾತಿ ಅನರ್ಹತೆಯಿಂದ ಈ ಮಟ್ಟಕ್ಕೇರಿದ್ದು ಸಣ್ಣ ಸಾಧನೆಯಲ್ಲ.

ಹಲವು ಸ್ತರಗಳಿಂದ, ಕೋನಗಳಿಂದ ನೋಡಿ, ಈ ಮಹಾಜನ್‌ ಬಗ್ಗೆ ಏನಿಲ್ಲ ಅಂದು ಕೊಂಡರೂ ಕೊನೆಗೊಂದು ಸಲ ಇವರೆಲ್ಲೋ ಒಂದು ಕೋನದಿಂದ ಥೇಟು ವಾಜಪೇಯಿ ವ್ಯಕ್ತಿತ್ವಕ್ಕೆ ತುಸು ಹೋಲಬಹುದಾದ ಮನುಷ್ಯ ಅಂತ ಅನಿಸುತ್ತಾರೆ. ಮಾತು, ವಿಚಾರ, ಹಾವಭಾವದಲ್ಲಿ ಪ್ರಮೋದ್‌ ವಾಜಪೇಯಿಗೆ ಹತ್ತಿರ ಹತ್ತಿರ. ಇಬ್ಬರೂ ಸಾರ್ವಜನಿಕ ಜೀವನದಲ್ಲಿ ತಳೆದ ಮಾರ್ಗ. ಕಾಲಘಟ್ಟ ಸ್ವಲ್ಪ ಬೇರೆ ಬೇರೆಯಾದರೂ ವಾಜಪೇಯಿ ಪ್ರಭಾವ ಪ್ರಮೋದ್‌ ಮೇಲೆ ಆದಂತಿದೆ. ಇದನ್ನು ನಾನು ಉದ್ದೇಶ ಪೂರ್ವಕವಾಗಿ ಅನುಕರಣೆ ಎಂದು ಕರೆಯುತ್ತಿಲ್ಲ. ಅದಾಗಿದ್ದರೆ ಅದು ಪ್ರಮೋದ್‌ ಬೆಳವಣಿಗೆಯ ಮಿತಿಯಾಗುತ್ತಿತ್ತು. ಈ ಕಾರಣಕ್ಕಾಗಿಯೇ ವಾಜಪೇಯಿ ಇವರನ್ನು ಪಕ್ಕದಲ್ಲಿರಿಸಿಕೊಂಡಿದ್ದರು. ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು. ತಮ್ಮ ಸಾಮಿಪ್ಯವೇ ಪ್ರಮೋದ್‌ ಬೆಳವಣಿಗೆಗೆ ಕಂಟಕವಾಗುತ್ತಿದೆಯೆಂದು ಅನಿಸಿದಾಗಲೂ ವಾಜಪೇಯಿ ತಮ್ಮ ಪ್ರೀತಿಯ ಒಳಮನೆಯಲ್ಲೇ ಇಟ್ಟುಕೊಂಡಿದ್ದರು.

ಆಡ್ವಾಣಿ ಅವರಿಗೂ ಇಷ್ಟೇ ಬೇಕಾದ ಮನುಷ್ಯನಾಗಿದ್ದ ಪ್ರಮೋದ್‌, ಇಬ್ಬರು ನಾಯಕರು ಊದಿಕೊಂಡು ಕುಳಿತಾಗ ಅವರಿಬ್ಬರನ್ನು ಹತ್ತಿರಕ್ಕೆ ಕರೆಯುವ ತಾಕತ್ತು ಬೆಳೆಸಿಕೊಂಡಿದ್ದರು. ಪ್ರಮೋದ್‌ ಮಾತನ್ನು ಇವರಿಬ್ಬರೂ ತೆಗೆದು ಹಾಕುತ್ತಿರಲಿಲ್ಲ. ಕಾರಣ ತೆಗೆದು ಹಾಕುವಂಥ ಮಾತನ್ನ ಅವರು ಹೇಳುತ್ತಿರಲಿಲ್ಲ. ಈ ಇಬ್ಬರು ನಾಯಕರ ಮಾತುಗಳನ್ನು ಪರಸ್ಪರ ರವಾನಿಸುವುದಷ್ಟೇ ಕೆಲಸವಾಗಿದ್ದರೆ ಅವರ ಮಹತ್ವ ಕಾಣುತ್ತಿರಲಿಲ್ಲ. ಸಂದರ್ಭ ಬಂದರೆ ಇಬ್ಬರ ಮುಂದೂ ಹೇಳಲೇಬೇಕಾದ ಒಂದು ಮಾತನ್ನು ಇಟ್ಟು ಬರುವ ಛಾತಿ ಅವರಿಗಿತ್ತು. ವಾಜಪೇಯಿ, ಆಡ್ವಾಣಿ ನಂತರ ಯಾರು ಎಂಬ ಪ್ರಶ್ನೆ ಎದುರಾದಾಗಲೆಲ್ಲ ಮಹಾಜನ್‌ ಮುಂದೆ ಉತ್ತರಕ್ಕಾಗಿ ಬಿಜೆಪಿ ಮನಸ್ಸು ಬಂದು ನಿಲ್ಲುತ್ತಿತ್ತು. ಇವೆಲ್ಲ ಗೊತ್ತಿದ್ದೇ ವಾಜಪೇಯಿ ಹೇಳಿದ್ದು -ಆಡ್ವಾಣಿ ರಾಮ ಇದ್ದಂಗೆ, ಪ್ರಮೋದ್‌ ಲಕ್ಷ್ಮಣ ಇದ್ದಂಗೆ.

ಪ್ರಮೋದ್‌ ಬಗ್ಗೆ ತಕರಾರಿರುವುದು ಅವರ ಲೈಫ್‌ಸ್ಟೈಲ್‌ ಬಗ್ಗೆ. ಹಗಲೆಲ್ಲ ಖಾದಿ ಜುಬ್ಬಾ, ಪ್ಯಾಂಟಿನಲ್ಲಿ ಕಾಣಿಸಿಕೊಳ್ಳುವ ಅವರು ರಾತ್ರಿ ಸೂಟು ಬೂಟು ಧರಿಸಿ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ನೈಕಿ ಷೂ ಧರಿಸಿ, ಟೀ ಶರ್ಟ್‌ ತೊಟ್ಟು ಏರ್‌ಕಂಡೀಷನ್ಡ್‌ ಜಿಮ್‌ನಲ್ಲಿ ವಾಕ್‌ ಮಾಡ್ತಾರೆ, ಉದ್ಯಮಪತಿಗಳ ಜತೆ ಕಾಣಿಸಿಕೊಳ್ಳುತ್ತಾರೆ, ವಿಪರೀತ ಫಂಡ್‌ ಎತ್ತುತ್ತಾರೆ, ಒಮ್ಮೊಮ್ಮೆ arrogant ಆಗಿ ವರ್ತಿಸುತ್ತಾರೆ, ಐಷಾರಾಮಿ ಜೀವನ ನಡೆಸುತ್ತಾರೆ. ಇತ್ಯಾದಿ, ಇತ್ಯಾದಿ.

ಈ ಮಾತುಗಳಲ್ಲಿ ಸ್ವಲ್ಪ ನಿಜವಿದ್ದಿರಲೂ ಬಹುದು. ಇಂದು ಯಾವ ರಾಜಕಾರಣಿ ಗಾಂಧಿ ಥರಾ ಇದ್ದಾನೆ? ಅಥವಾ ಆರ್‌ಎಸ್‌ಎಸ್‌ ಪ್ರಚಾರಕನಂತಿದ್ದಾನೆ? ನಮ್ಮೆಲ್ಲ ಮಂತ್ರಿಗಳು, ರಾಜಕಾರಣಿಗಳು ಹಾಲಿಡೇ ಹೋಗೋದೇ ಸ್ವಿಜರ್‌ಲ್ಯಾಂಡ್‌, ಸ್ಕಾಟ್‌ಲ್ಯಾಂಡ್‌ ಅಲಸ್ಕಾ, ಆಫ್ರಿಕಾ ಸಫಾರಿಗೆ. ದುಬೈ, ಸಿಂಗಪೂರ್‌, ಅಮೆರಿಕಕ್ಕೆ ಶಾಪಿಂಗ್‌ ಹೋಗಿ ಬರುವ ದೊಡ್ಡ ನಾಯಕರ ದಂಡೇ ಇದೆ. ಸಣ್ಣ ಜ್ವರ, ಕಾಲುನೋವಿಗೆ ವಿದೇಶದಲ್ಲಿ ಚಿಕಿತ್ಸೆ ಪಡೆಯುವವರಿದ್ದಾರೆ. ವಾರಾಂತ್ಯವನ್ನು ಮಾರಿಷಸ್‌, ಲಂಡನ್‌ಗಳಲ್ಲಿ ಕಳೆಯುವವರಿದ್ದಾರೆ. ಇವನ್ನೆಲ್ಲ ಮಾಡುವವರಾರು ಎಂದು ಕೇಳುವುದಕ್ಕಿಂತ ಮಾಡದವರಾರು ಎಂದು ಹೇಳುವುದು ಸುಲಭ. ಇಂಥ ರಾಜಕೀಯ ಸಂಸ್ಕೃತಿಯಲ್ಲಿ ಮಹಾಜನ್‌ ಸಹ ಈ ಎಲ್ಲ ಷೋಕಿಗಳನ್ನು ಮಾಡುತ್ತಾರೆ. ಉಳಿದವರು ಸಹ ಮಾಡುತ್ತಾರೆ, ಆದರೆ ಹೇಳುವುದಿಲ್ಲ. ಅಷ್ಟೇ ವ್ಯತ್ಯಾಸ. ದಿಲ್ಲಿಯಲ್ಲಿ ಏರ್‌ ಕಂಡೀಷನ್ಡ್‌ ಜಿಮ್‌ ಇಲ್ಲದ ಯಾವ ಮಂತ್ರಿ ಮನೆಯಿದೆ? ಆದರೆ ಮಹಾಜನ್‌ ಮಾತ್ರ ಈ ಆರೋಪಕ್ಕಕೆ ಗುರಿಯಾಗುತ್ತಾರೆ. ಕಾರಣ ಇಷ್ಟೆ, ಪ್ರಮೋದ್‌ ಹಿಫೋಕ್ರೆೃಟ್‌ ಅಲ್ಲ, ಬೇರೆಯವರಿಗೂ ಸತ್ಯವಾಗಿರಲು ಬಯಸುತ್ತಾರೆ ಹೀಗಾಗಿ ವಿವಾದಕ್ಕೆ ಗುರಿಯಾಗುತ್ತಾರೆ.

ಇನ್ನು ಫಂಡ್‌ ರೇಸಿಂಗ್‌. ಈಗಿನ ರಾಜಕೀಯದಲ್ಲಿ ಯಾವ ರಾಜಕಾರಣಿಗೆ ತಾನು ಹಣ ಎತ್ತುವುದಿಲ್ಲ ಎಂದು ಹೇಳುವ ಧೈರ್ಯ ಸಭ್ಯತೆ, ಸುಬಗತನವಿದೆ? ಹಾಗೆ ಹೇಳುವವರಿಗೆ ರಾಜಕೀಯದಲ್ಲಿ ಉಳಿಗಾಲವಿದೆಯಾ? ಉದ್ಯಮಿಗಳಿಂದ ಹಣಪಡೆಯದ ಯಾವ ರಾಜಕೀಯ ಪಕ್ಷವಿದೆ? ಅವರವರ ಶಕ್ತ್ಯಾನುಸಾರ ಎಲ್ಲರೂ 'ಫಂಡ್‌"ಮೆಂಟಲಿಸ್ಟುಗಳೇ! ಇಂತಿರುವಾಗ ಮಹಾಜನ್‌ ಅವರನ್ನು ಮಾತ್ರ single out ಮಾಡುವುದೇಕೆ?

ಇನ್ನು ಪ್ರಮೋದ್‌ arrogant ಅಂತೆ, ಹೌದಾ?ಶಾಣ್ಯಾ ಆದವನು ಯಾವತ್ತೂ ಒಂದು ಮೇಲ್‌ಸ್ತರದಲ್ಲಿ ಯೋಚಿಸುತ್ತಾನೆ, ಕೆಲಸ ಮಾಡುತ್ತಾನೆ. ಬೇರೆಯವರೂ ತನ್ನ ವೇಗಕ್ಕೆ ಹೊಂದಿಕೊಳ್ಳಬೇಕೆಂದು ನಿರೀಕ್ಷಿಸುತ್ತಾನೆ. ಆದರೆ ಉಳಿದವರು ಈ ಮಟ್ಟ ಏರದಿದ್ದಾಗ ರೇಗದೇ, ಗದರದೇ ಸುಮ್ಮನಿರುವುದು ಸಾಧ್ಯವೇ ಇಲ್ಲ. ಇದೇ ಬೇರೆಯವರ ಕಣ್ಣಲ್ಲಿ ಅಹಂಕಾರಿಯಂತೆ ಕಂಡಿರಲಿಕ್ಕೂ ಸಾಕು. ಆದರೆ ಅಸಲಿಗೆ ಪ್ರಮೋದ್‌ ಹಾಗಿರಲಿಲ್ಲ. ಅವರಿಗೆ ವೇಗವಾಗಿ ಪಕ್ಷವನ್ನು ಮುನ್ನಡೆಸುವ ಧಾವಂತವಿತ್ತು. ಈ ವಿಷಯದಲ್ಲಿ ಅವರು ಇಂಪೇಶಂಟ್‌ ಆಗಿದ್ದರು.

ಪ್ರಮೋದ್‌ಗೆ ನಿಸ್ಸಂದೇಹವಾಗಿ ಉಜ್ಜಲ ರಾಜಕೀಯ ಭವಿಷ್ಯವಿತ್ತು. ಅದಕ್ಕೆ ಅವರು ಸಿದ್ಧತೆ ಮಾಡಿಕೊಂಡಿದ್ದರು. ಅವೆಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಆ ಯೋಗ್ಯತೆಯೂ ಇತ್ತು. ತಮಗೆ ಕೊಟ್ಟ ಹೊಣೆಗಾರಿಕೆಯೆಲ್ಲವನ್ನೂ ಅವರು ಸಮರ್ಥವಾಗಿ ನಿಭಾಯಿಸಿದ್ದರು. ಚುನಾವಣಾತಂತ್ರ ರೂಪಿಸುವುದಿರಲಿ, ಕಾರ್ಯಕ್ರಮ ಏರ್ಪಡಿಸುವುದಿರಲಿ ಬಿಕ್ಕಟ್ಟಿನಲ್ಲಿ ಸಂಧಾನಕಾರರಾಗುವುದಿರಲಿ, ಎಲೆಕ್ಷನ್‌ನಲ್ಲಿ ದುಡ್ಡು ಹೊಂದಿಸುವುದಿರಲಿ, ಪಕ್ಷದ ವಾದವನ್ನು ಟಿವಿ ಸಂವಾದ ವೇದಿಕೆಯಲ್ಲಿ ಮಂಡಿಸುವುದಿರಲಿ, ಪಕ್ಷದ ವಕ್ತಾರರಾಗುವುದಿರಲಿ, ಅದೆಂಥ ಪೇಚಿನ ಪ್ರಸಂಗ ಎದುರಿಸುವುದಿರಲಿ, ಇನ್ನಾವುದೇ ರಣತಂತ್ರ ಹೊಸೆಯುವುದಿರಲಿ ಪ್ರಮೋದ್‌ ಮಹಾಜನ್‌ ಎಲ್ಲೆಡೆಗೂ ಸಲ್ಲುತ್ತಿದ್ದರು.

ರಾಜಕೀಯ ಪಕ್ಷದ ಪ್ರತಿಯಾಂದು ಡಿಪಾರ್ಟ್‌ಮೆಂಟನ್ನೂ ಸಲೀಸಾಗಿ ನಿರ್ವಹಿಸುವ ಚಾಕಚಕ್ಯತೆ ಅವರಿಗೆ ಕರಗತವಾಗಿತ್ತು. ಬಿಜೆಪಿಯ ಹೊಸ ಪೀಳಿಗೆಯ ಮುಖವಾಗಿ, ಮುಖವಾಣಿಯಾಗಿ ಬಹುಮುಖವಾಗಿ ಅವರು ಸ್ವೀಕೃತವಾಗಿದ್ದರು. ಇವರನ್ನು ಇಷ್ಟಪಡುವ ದೊಡ್ಡ ಗುಂಪು ಬಿಜೆಪಿಯಲ್ಲಿದ್ದಷ್ಟೇ ಬೇರೆ ಪಕ್ಷಗಳಲ್ಲೂ ಇತ್ತು. ಇಂಥ ಸ್ಥಾನ ಗಳಿಸಿಕೊಂಡ ಇನ್ನೊಬ್ಬರೆಂದರೆ ವಾಜಪೇಯಿ!

ಈ ಕ್ಷಣದಲ್ಲಿ ಮನಸ್ಸು ಖಾಲಿಖಾಲಿಯಾದಂತೆನ್ನಿಸುತ್ತಿದೆ. ಈ ದೇಶಕ್ಕೆ ಅವರು ಬೇಕಿತ್ತು ಇನ್ನಷ್ಟು ಕಾಲ. ಮಹಾನಾಯಕನಾಗುವ ಮೊದಲೇ ಈ ಮಹಾಜನ್‌ ಮಾಯವಾಗಿಬಿಟ್ಟರಲ್ಲ. ಛೇ.

(ಸ್ನೇಹ ಸೇತು : ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X