• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತನ್ನ ಹುಟ್ಟೂರಿಗೆ ಏನನ್ನೂ ಮಾಡದವನು ರಾಜ್ಯಕ್ಕೆ ಏನನ್ನು ಮಾಡಿಯಾನು?

By Staff
|
Vishweshwar Bhat ವಿಶ್ವೇಶ್ವರ ಭಟ್‌
ಬಹಳ ವರ್ಷಗಳಿಂದ ಆಸೆಯಿತ್ತು. ನಮ್ಮ ರಾಜ್ಯವನ್ನು ಆಳಿದ ಮುಖ್ಯಮಂತ್ರಿಗಳ ಸ್ವಂತ ಊರನ್ನು ನೋಡಬೇಕು. ಕನಿಷ್ಠ ಒಂದು ದಿನವಾದರೂ ಅಲ್ಲಿ ಉಳಿದು ಆ ಊರಿನ ಜನರಿಗೆ ತಮ್ಮ ‘ಹೆಮ್ಮೆಯ ಪುತ್ರ’ನ ಬಗ್ಗೆ ಎಂಥ ಅಭಿಪ್ರಾಯವಿದೆಯೆಂಬುದನ್ನು ಅವರ ಬಾಯಿಂದ ಕೇಳಬೇಕು ಹಾಗೂ ಆ ‘ಹೆಮ್ಮೆಯ ಪುತ್ರ’ತನ್ನ ಹುಟ್ಟೂರಿಗೆ ಏನು ಮಾಡಿದ್ದಾನೆಂಬುದನ್ನು ಅರಿಯಬೇಕು ಎಂದು. ಕಾರಣ ಇಷ್ಟೆ, ರಾಜ್ಯವನ್ನು ಹಾಗೆ ಉದ್ಧಾರ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದು ದಿನಬೆಳಗಾದರೆ ಕೊಚ್ಚಿಕೊಳ್ಳುವವರು ತಮ್ಮ ಊರನ್ನು ಹೇಗೆ ಇಟ್ಟಿರಬಹುದು ಎಂದು ತಿಳಿಯುವ ಕುತೂಹಲ. ಮತ್ತೊಂದು, ತನ್ನ ಊರಿಗೆ ಏನನ್ನೂ ಮಾಡದವನು ರಾಜ್ಯಕ್ಕೆ ಏನು ಮಾಡಿಯಾನು ಎಂಬ ಜಿಜ್ಞಾಸೆ.

ಮುಖ್ಯಮಂತ್ರಿಯಾದವನು ಇಡೀ ರಾಜ್ಯವನ್ನು ತನ್ನ ಊರಂತೆ ನೋಡಿಕೊಳ್ಳಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ಆತನಿಗೆ ಸಮಗ್ರ ರಾಜ್ಯವೇ ಸ್ವಂತ ಊರು. ಹಾಗೆಂದು ತನ್ನ ಹುಟ್ಟೂರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಟ್ಟು ಅಭಿವೃದ್ಧಿಪಡಿಸಿದರೆ ಯಾರೂ ತಪ್ಪು ಭಾವಿಸುವುದಿಲ್ಲ. ಅದಕ್ಕೆ ಬದಲಾಗಿ ಮೆಚ್ಚುಗೆ ಸೂಚಿಸುತ್ತಾರೆ. ಕನಿಷ್ಠ ಆ ಊರಿನ ಜನರಿಗಾದರೂ ಒಳ್ಳೆಯದಾಯಿತಲ್ಲ ಎಂದು ಒಳಗೊಳಗೆ ಸಂತಸಪಡುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳ ಸ್ವಂತ ಊರಿಗೆ ಯಾವುದೋ ಅಭಿವೃದ್ಧಿ ಯೋಜನೆ ದಕ್ಕಿದರೆ ನಮ್ಮ ಜನ ಸಂಕಟಪಡುವಷ್ಟು ಸಣ್ಣವರಲ್ಲ.

Former Chief Minister of Karnataka Dharam Singhಆದರೆ ನೀವು ಕರ್ನಾಟಕವನ್ನಾಳಿದ ಮುಖ್ಯಮಂತ್ರಿಗಳ ಹುಟ್ಟೂರಿಗೆ ಹೋಗಿ ಬರಬೇಕು. ಅವರೂರಿನ ‘ಹೆಮ್ಮೆಯ ಪುತ್ರ’ನ ಬಗ್ಗೆ ಅವರಾಡುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಇವರನ್ನೆಲ್ಲ ಹೆತ್ತ ಆ ‘ತಾಯಿ ಮಣ್ಣು’ಧನ್ಯಳು! ‘ಅವರೇನೋ ಮುಖ್ಯಮಂತ್ರಿಯಾದರು. ನಾವೆಲ್ಲ ಆನಂದಿಸಿದೆವು. ನಮ್ಮೂರಿನವ ಮುಖ್ಯಮಂತ್ರಿಯಾದ ಎಂದು ಕೇಕೆ ಹೊಡೆದು ಸಂಭ್ರಮಿಸಿದೆವು. ನಾಗರಿಕ ಸನ್ಮಾನವನ್ನೂ ಕೊಟ್ಟೆವು. ಅಲ್ಲಿಗೆ ಮುಗಿಯಿತು. ಅವರಿಂದ ಈ ಊರಿಗೆ ಅಂಥ ಹೇಳಿಕೊಳ್ಳುವಂಥ ಲಾಭವಾಗಲಿ, ಅಭಿವೃದ್ಧಿಯಾಗಲಿ ಆಗಲಿಲ್ಲ’. ಈ ಮಾತನ್ನು ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಜನರು ಹೇಳದಿದ್ದರೆ ಕೇಳಿ.

ಈ ರಾಜ್ಯವನ್ನು ಆಳಿದ ಬಹುತೇಕ ಎಲ್ಲ ಮುಖ್ಯಮಂತ್ರಿಗಳ ಹುಟ್ಟೂರಿನಲ್ಲಿ ಇಂಥ ಬೇಸರ, ಅಸಮಾಧಾನದ ಪದರ ಹಾಸಿಕೊಂಡಿದೆ. ಯಾವೊಬ್ಬ ಮುಖ್ಯಮಂತ್ರಿಯಾಂತ್ರಿಯಾದರೂ, ‘ಬನ್ನಿ ನನ್ನೂರಿಗೆ, ಹೇಗೆ ಅಭಿವೃದ್ಧಿಪಡಿಸಿದ್ದೇನೆಂಬುದನ್ನು ತೋರಿಸುವೆ. ಮಾದರಿ ಊರನ್ನಾಗಿ ಪರಿವರ್ತಿಸಿದ್ದೇನೆ. ಇವನ್ನೆಲ್ಲ ನೋಡಿ ನನ್ನ ಸಾಧನೆಯನ್ನು ಮೆಚ್ಚಬೇಕೆಂದು ನಿಮ್ಮನ್ನೆಲ್ಲ ಕರೆದು ಕೊಂಡು ಬಂದಿದ್ದೇನೆ’ ಎಂದು ಹೇಳಲಿ ನೋಡೋಣ. ಕಾರಣ, ಯಾವೊಬ್ಬ ಮುಖ್ಯಮಂತ್ರಿಯೂ ಅಂಥ ಕೆಲಸ ಮಾಡಿದ್ದರೆ ತಾನೆ? ಇಲ್ಲವೇ ಇಲ್ಲ. ಹೆಮ್ಮೆಯ ಪುತ್ರರ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳುವುದಾದರೂ ಹೇಗೆ?

ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿ ಅಧಿಕಾರ ಕಳೆದುಕೊಳ್ಳುವುದಕ್ಕಿಂತ ಆರು ತಿಂಗಳ ಮೊದಲು ಅವರ ಕ್ಷೇತ್ರವಾದ ಜೇವರ್ಗಿಯಲ್ಲೆಲ್ಲಾ ಸುತ್ತಾಡಿ, ನಂತರ ಅವರ ಹುಟ್ಟೂರಾದ ನೆಲೋಗಿಗೆ ಹೋಗಿದ್ದೆ. ಆ ಊರನ್ನು ನೋಡಿ ಬಹಳ ಕೆಟ್ಟೆನಿಸಿತು. ದುಃಖ ಉಮ್ಮಳಿಸಿ ಬಂದಂತಾಯಿತು. ಅದೇ ಊರಿನ ಹೆಮ್ಮೆಯ ಪುತ್ರ ಅಲ್ಲಿ ವಿಧಾನಸೌಧದಲ್ಲಿ ಈ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ಕುಳಿತಿದ್ದಾನೆ. ಆದರೆ ಇಲ್ಲಿ ಹುಟ್ಟೂರಿನ ಜನತೆ ಬರಗಾಲದ ಅಂಗಳದಲ್ಲಿ ಕೈಜೆಲ್ಲಿ ಚಿಕ್ಕಾಣಿ ಹಿಡಿದು ಕುಳಿತಿದ್ದಾರೆ.

ಅಲ್ಲಿ ಅವರು ಇಡೀ ರಾಜ್ಯವನ್ನು ಉದ್ಧಾರ ಮಾಡಿಬಿಡುತ್ತೇನೆಂಬಂತೆ ‘ಹೆದರಿಸುತ್ತಿದ್ದಾರೆ’. ಇಲ್ಲಿ ಏನೂ ಮಾಡದೇ ಇವರನ್ನೆಲ್ಲ ಹೆದರಿಸುತ್ತಿದ್ದಾರೆ. ಅಲ್ಲಿ ನೂರಾರು, ಸಾವಿರಾರು ಕೋಟಿ ರೂಪಾಯಿ ಮಾತಾಡುತ್ತಿದ್ದಾರೆ. ಆ ಪೈಕಿ ಒಂದಾದರೂ ಇಲ್ಲಿಗೆ ಬಂದರೆ ಊರಿಗೆ ಊರೇ ಉದ್ಧಾರವಾಗಿ ಹೋದೀತೆಂದು ಇಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ದುರ್ದೈವ ನೋಡಿ, ಅವರೂ ಮಾತಾಡಿದರು. ಇವರೂ ಮಾತಾಡಿಕೊಂಡರು. ಅವರು ಮೆರೆದು, ಮರೆಯಾದರು. ಆದರೆ ಅವರೂರಿನ ಜನತೆ ಮಾತ್ರ ಈಗಲೂ ಅವರ ಬಗ್ಗೆ ಅಭಿಮಾನದಿಂದಲೇ ಮಾತಾಡುತ್ತಿದ್ದಾರೆ. ಅಷ್ಟೆ ವ್ಯತ್ಯಾಸ.

ಅಂದು ಜೇವರ್ಗಿಯಲ್ಲಿ ಬೆಳಗ್ಗೆ 10ಗಂಟೆಗೆ ಬಂದು ನಿಂತಾಗ ಸೂರ್ಯ ಕೆಂಡ ಕಾರುತ್ತಿದ್ದ. ಬಿಸಿಬಿಸಿ ಬಿಸಿಲು ಕೆನ್ನೆಗೆ, ನೆತ್ತಿಗೆ ಹೊಡೆಯುತ್ತಿತ್ತು. ಎಲ್ಲ ಕಳಕೊಂಡ ವಿಧವೆಯಂತೆ ಜೇವರ್ಗಿ ಕಂಗೊಳಿಸುತ್ತಿತ್ತು. ಕ್ಷೇತ್ರಕ್ಕೆ ಧರ್ಮಸಿಂಗ್‌ ಕೊಡುಗೆಯೇನಾದರೂ ಇದ್ದೀತಾ, ಅದೇನಾದರೂ ಕಂಡಿತಾ ಎಂದು ಕಣ್ಣುಗಳನ್ನು ಹೊರ ಬಿಟ್ಟರೆ, ಏನೂ ಕಾಣಿಸಲಿಲ್ಲ. ಜೇವರ್ಗಿಯಲ್ಲಿ ತಂಪಾಗಿರುವುದೆಂದರೆ ಲೋಕೋಪಯೋಗಿ ಇಲಾಖೆಯ ಸರಕಾರಿ ಗೆಸ್ಟ್‌ಹೌಸ್‌ ಮಾತ್ರ.

ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳನ್ನು ನಾಚಿಸುವಂತಿರುವ ಕೋಣೆಗಳ ಒಳಾಂಗಣ ವಿನ್ಯಾಸ, ಧರ್ಮಸಿಂಗ್‌ ಕ್ಷೇತ್ರದಲ್ಲಿ ಶ್ರೀಮಂತವಾಗಿರುವ ಬಡತನವನ್ನು ಕ್ರೂರವಾಗಿ ಅಣಕಿಸಿತು. ಇಲ್ಲೊಂದು ಮಾತನ್ನು ಹೇಳಬೇಕು. ರಾಜ್ಯದ ಯಾವುದೇ ಊರಿಗೆ ಹೋಗಿ, ಅಲ್ಲಿ ಏನಿಲ್ಲವೆಂದರೂ ಸರಕಾರಿ ಪ್ರವಾಸಿ ಮಂದಿರ(ಐಬಿ) ಅಥವಾ ಗೆಸ್ಟ್‌ಹೌಸ್‌ ಮಾತ್ರ ಇದ್ದೇ ಇರುತ್ತದೆ. ಜೊತೆಗೆ ಅದು ಬಹಳ ಚೆನ್ನಾಗಿರುತ್ತದೆ.

ಸರಕಾರದ ಯಾವುದೇ ಇಲಾಖೆಗೆ ಸಿಬ್ಬಂದಿ ಕೊರತೆ ಕಾಡಬಹುದು. ಆದರೆ ಈ ಗೆಸ್ಟ್‌ಹೌಸ್‌ಗಳಲ್ಲಿ ಅಂಥ ಸಮಸ್ಯೆ ಎಂದೆಂದೂ ಉದ್ಭವಿಸುವುದಿಲ್ಲ. ಆಶ್ಚರ್ಯವಾಗಬಹುದು, ಅಕ್ಕಿ ಆಲೂರಿನಿಂದ ಹಾವೇರಿಗೆ ಬರುವ ಮಾರ್ಗದಲ್ಲಿ ಬಾಳಂಬೀಡ ಎಂಬ ಚಿಕ್ಕ ಊರಿದೆ. ಅಲ್ಲೊಂದು ಗೆಸ್ಟ್‌ಹೌಸ್‌ ಇದೆ. ಹಾವೇರಿ ಜಿಲ್ಲೆಯ ಸಚಿವರೊಬ್ಬರ ಕಾಲದಲ್ಲಿ ಕಟ್ಟಿಸಿದ್ದು. ಈ ಊರಿನಲ್ಲಿ ಅದ್ಯಾವ ಉದ್ದೇಶಕ್ಕೆ ಇದನ್ನು ಕಟ್ಟಿಸಿರಬಹುದು ಎಂದು ಎಂಥವನಿಗಾದರೂ ಅರ್ಥವಾಗುತ್ತದೆ. ಜೇವರ್ಗಿಯಲ್ಲಿ ಆಧುನಿಕತೆಯೇನಾದರೂ ಹೊಕ್ಕಿದ್ದರೆ ಅದು ಗೌಸ್ಟ್‌ಹೌಸ್‌ನಲ್ಲಿ ಹಾಗೂ ಅದು ಎಲ್ಲಿಯಾದರೂ ಉಳಿದಿದ್ದರೆ ಅಲ್ಲಿ ಮಾತ್ರ.

ಜೇವರ್ಗಿಯಿಂದ ನೆಲೋಗಿ ಇಪ್ಪತ್ತು ಕಿ.ಮೀ. ನೆಲೋಗಿಗೆ ನಾನು ಹೋದ ಮುನ್ನಾದಿನ ಧರ್ಮಸಿಂಗ್‌ ಬೆಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಾ ‘ನನಗೆ ರಾಜಕೀಯ ಹೇಗೆ ಮಾಡಬೇಕೆಂಬುದು ಗೊತ್ತಿದೆ. ನಾನು 40ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಈ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ’ಎಂದಿದ್ದರು. ಅವರ ಊರಿನ ಹೊಸ್ತಿಲನ್ನು ದಾಟುತ್ತಿದ್ದಾಗ, ಅವರು ನಿನ್ನೆ ಹೇಳಿದ ಮಾತುಗಳನ್ನು ಊರಿನ ಜನ ಕೇಳಿಸಿಕೊಳ್ಳಬೇಕೆನಿಸಿತ್ತು ಎಂದೆನಿಸಿತು. ಇದು ಮುಖ್ಯಮಂತ್ರಿಯ ಹುಟ್ಟೂರಾ ಎಂದು ಅಚ್ಚರಿಯಲ್ಲ, ದಿಗ್ಭ್ರಮೆಯಾಯಿತು. ಅಲ್ಲಿ ಅದಿಲ್ಲ, ಇದಿಲ್ಲ ಎಂದು ಪಟ್ಟಿ ಮಾಡುವುದಕ್ಕಿಂತ ನೆಲೋಗಿಯಲ್ಲಿ ಏನೇನು ಇಲ್ಲ ಅಂದ್ರೆ ಸುಲಭಕ್ಕೆ ಅರ್ಥವಾದೀತು. ಇರಬೇಕಾಗಿದ್ದೇನೂ ಇಲ್ಲ. ಇರುವುದು ಬಡತನ, ಅನಕ್ಷರತೆ, ಗಲೀಜು, ಗಬ್ಬುನಾತ. ಪಾಳುಬಿದ್ದ ನಾಗರಿಕತೆಯ ದೃಶ್ಯಗಳನ್ನು ನೆನಪಿಸುವ ನೆಲೋಗಿಯ ರಸ್ತೆಗಳು, ಬೀದಿಗಳು ಧರ್ಮಸಿಂಗ್‌ ಈ 40ವರ್ಷಗಳಲ್ಲಿ ಮಾಡಿದ ರಾಜಕೀಯವೇನು ಎಂಬುದನ್ನು ಸಾರಿ ಹೇಳುವಂತಿದ್ದವು.

ಲಕ್ಷ್ಯ ಕೊಡಿ, ಈ ಧರ್ಮಸಿಂಗ್‌ ಇದ್ದಾರಲ್ಲ ಕಳೆದ ಎಂಟು ಚುನಾವಣೆಗಳಿಂದ ಸತತವಾಗಿ ಜೇವರ್ಗಿಯಿಂದ ವಿಧಾನಸಭೆಗೆ ಆರಿಸಿ ಹೋಗುತ್ತಿದ್ದಾರೆ. ಅವರು ಸೋಲರಿಯದ ಸರದಾರರು. ಕ್ಷೇತ್ರದ ಅಭಿವೃದ್ಧಿ ಮಾಡದೇ, ಜನತೆಗೆ ಕಿಂಚಿತ್ತೂ ಒಳಿತನ್ನೂ ಮಾಡದೇ ಮೇಲಿಂದ ಮೇಲೆ ಆರಿಸಿಬರುವುದು ಹೇಗೆಂಬುದು ಅವರಿಗೆ ಚೆನ್ನಾಗಿ ಕರಗತವಾಗಿದೆ. ಅವರು ಆಗದ ಮಂತ್ರಿಖಾತೆಗಳಿರಲಿಕ್ಕಿಲ್ಲ. ನಗರಾಭಿವೃದ್ಧಿ, ಗೃಹ, ಗೃಹನಿರ್ಮಾಣ, ಸಮಾಜ ಕಲ್ಯಾಣ, ಕಂದಾಯ, ಲೋಕೋಪಯೋಗಿಯಂಥ ಚಿನ್ನದ ಮೊಟ್ಟೆಯಿಡುವ ಖಾತೆಗಳಿಗೆ ಮಂತ್ರಿಯಾಗಿದ್ದರು. ಕೊನೆಗೆ ಈ ರಾಜ್ಯದ ಮುಖ್ಯಮಂತ್ರಿಯೂ ಆದರು. ಪಕ್ಷದಲ್ಲಿ ಅವರು ನಿರ್ವಹಿಸದ ಜವಾಬ್ದಾರಿಗಳಿರಲಿಕ್ಕಿಲ್ಲ. ಇಷ್ಟೆಲ್ಲ ಇದ್ದೂ ತಮ್ಮ ಹುಟ್ಟೂರನ್ನು ನೆಟ್ಟಗೆ ಇಟ್ಟುಕೊಳ್ಳಲಿಕ್ಕೆ ಆಗಲಿಲ್ಲ ಅಂದ್ರೆ?

ನಾಚಿಕೆಯಾಗಬೇಕು.

ಇವರೆಲ್ಲ ನಾಯಕರು. ಅವರೂರಿನ ಹೆಮ್ಮೆಯ ಪುತ್ರರು. ಇವರಿಗೆ ಚುನಾವಣೆ ಬಂದಾಗ ವೋಟು ಹಾಕಬೇಕು. ಆರಿಸಿ ಬಂದು ಇವರೆಲ್ಲ ಏನು ಕಡಿದು ಹಾಕಿದರು ಎಂದು ಹುಡುಕುತ್ತಾ ಹೋದರೆ ನೆಲೋಗಿ ಪುನಃ ನೆನಪಾಗುತ್ತದೆ.

ನೆಲೋಗಿಯ ಹಿರಿಯರೊಬ್ಬರು(ಬೇಕೆಂದೇ ಅವರ ಹೆಸರನ್ನು ಬರೆದಿಲ್ಲ. ಅವರ ಸುರಕ್ಷತೆಯಿಂದ)ಉತ್ಸಾಹದಿಂದ ಉದ್ಗರಿಸಿದರು -‘ಸರsss, ಇದರೀss ನಮ್ಮ ಧರ್ಮಸಿಂಗ್‌ ಅವರು ಓದಿದ ಸಾಲಿs’. ಶಾಲೆಯ ಕಂಪೌಂಡಿನೊಳಗೆ ಕಾಲಿಟ್ಟರೆ, ‘ಚಂದಮಾಮ’ ಕತೆಯಲ್ಲಿ ಬರುವ ಬೇತಾಳನ ಗುಹೆಯಾಳಗೆ ಕಾಲಿಟ್ಟ ಅನುಭವ. ಶಾಲೆಯ ಯಾವ ಕೋಣೆಗಳಿಗೂ ಬಾಗಿಲುಗಳಿರಲಿಲ್ಲ ಅಥವಾ ಮರಿದು ಹೋಗಿದ್ದವು. ಕಿಟಕಿಬಾಗಿಲುಗಳೆರಡೂ ಇರಲಿಲ್ಲ ಅಥವಾ ಅವೆರಡೂ ಮುರಿದು ಹೋಗಿದ್ದವು.

ಯಾವ ಕೋಣೆಯಲ್ಲೂ ಕಪ್ಪು ಹಲಗೆಗಳಿರಲಿಲ್ಲ ಅಥವಾ ಇದ್ದರೂ ಮುರಿದು ಹೋಗಿದ್ದವು. ಗೋಡೆಗಳು ಸುಣ್ಣಬಣ್ಣವಿಲ್ಲದೇ ಬೆತ್ತಲೆಯಾಗಿದ್ದವು. ಒಂದು ಕೋಣೆಯಲ್ಲಂತೂ ಎಲ್ಲೆಡೆ ಸಗಣಿ, ಮಾಸ್ತರರು ಕುಳಿತು ಕೊಳ್ಳುತ್ತಿದ್ದ ಕುರ್ಚಿಗಳ ಕೈಗಳು ಮುರಿದುಹೋಗಿದ್ದವು. ಸಾಕ್ಷತ್‌ ಸರಸ್ವತಿಯೇನಾದರೂ ಬಂದುಬಿಟ್ಟಿದ್ದರೆ ಕೈಕಾಲು ಕಟ್ಟಿಹಾಕಿದರೂ ತಪ್ಪಿಸಿಕೊಂಡು ಓಡಿಬಿಡುತ್ತಿದ್ದಳೇನೋ? ಆ ಶಾಲೆಯಲ್ಲಿ ಮೇಷ್ಟ್ರು ಹೇಳಿಕೊಡುತ್ತಿದ್ದ ‘ಮೂರ್‌ಮೂರ್ಲೆ ಒಂಬತ್ತೋ, ಮೂರ್‌ ನಾಕ್ಲೆ ಹನ್ನೆರಡೋ...’ ಮಗ್ಗಿಗೆ ಮಕ್ಕಳೆಲ್ಲ ಒಕ್ಕೊರಲಿನಿಂದ ಹೇಳುತ್ತಿದ್ದುದನ್ನು ಕೇಳಿದರೆ, ಮುಖ್ಯಮಂತ್ರಿಗಳ ಬಗ್ಗೆ ಅಭಿಮಾನ ಮೂಡಿತು. ತಮ್ಮ ಚರ್ಮವನ್ನು ಇನ್ನೂ ದಪ್ಪವಾಗಿಯೇ ಇಟ್ಟುಕೊಂಡಿದ್ದಾರಲ್ಲ ಎಂದು. ಮುಖ್ಯಮಂತ್ರಿಯಾದವನ ಸ್ವಂತ ಊರಿನ ಶಾಲೆಯೇ ಹೀಗೆ ದಬಡಿಯಾಗಿ ಅನಾಥವಾಗಿರುವಾಗ, ಆತ ಬೇರೆ ಶಾಲೆಗಳಿಗೆ ಏನು ಮಾಡಬಹುದು? ತನ್ನ ಊರನ್ನೇ ಉದ್ಧಾರ ಮಾಡದವನು ಬೇರೆ ಊರನ್ನೇನು ಮಾಡಿಯಾನು?

‘ಸರss ಧರ್ಮಸಿಂಗ್‌ ಕಟ್ಟಿಸಿದ ಪೊಲೀಸ್‌ ಸ್ಟೇಷನ್ನು’ ಅಂದಿತು ಹಿರಿಯ ಜೀವ. ಈ ಊರಿಗೆ ಅದೊಂದು ಕೇಡು ಅಂದುಕೊಂಡೆ. ನಮ್ಮ ಬುದ್ಧಿಗೇಡಿ ಮಂತ್ರಿಗಳಿಗೆ ಒಂದು ವಿಚಿತ್ರ ಕಲ್ಪನೆಯಿದೆ. ಊರೂರಿನಲ್ಲಿ ಪೊಲೀಸ್‌ ಠಾಣೆಗಳನ್ನು ತೆರೆಯುವುದನ್ನೇ ದೊಡ್ಡ ಸಾಧನೆಯೆಂಬಂತೆ ಕೊಚ್ಚಿಕೊಳ್ಳುತ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಗೃಹಸಚಿವರಾಗಿದ್ದಾಗ, ಎಲ್ಲ ಊರುಗಳಲ್ಲಿ ಠಾಣೆಗಳನ್ನು ತೆರೆಯುವುದು ತಮ್ಮ ಗುರಿ ಮತ್ತು ತಾವು ಬಂದ ಬಳಿಕ ಎಷ್ಟು ಠಾಣೆಗಳನ್ನು ತೆರೆದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಹೆಚ್ಚು ಹೆಚ್ಚು ಪೊಲೀಸ್‌ ಠಾಣೆಗಳನ್ನು ತೆರೆಯುವಂತಾದರೆ ಸಮಾಜ ಯಾವ ದಿಕ್ಕಿನತ್ತ ಹೋಗುತ್ತಿದೆ? ಇದು ಸಾಧನೆಯಾಗುವುದಿಲ್ಲ ಅವಮಾನದ ಸಂಗತಿಯೆಂಬುದು ಅವರಿಗೆ ಅರ್ಥವಾಗುತ್ತಿರಲಿಲ್ಲ. ನೆಲೋಗಿಯಲ್ಲಿ ಪೊಲೀಸ್‌ ಸ್ಟೇಷನ್‌ ಸ್ಥಾಪಿಸುವಂಥ ಪರಿಸ್ಥಿತಿ ಬಂದಿದೆಯೆಂದರೆ ಮುಖ್ಯಮಂತ್ರಿಗಳ ಹುಟ್ಟೂರಿನ ಸಾಮಾಜಿಕ ಸ್ವಾಸ್ಥ ್ಯಅದೆಷ್ಟು ಹದಗೆಟ್ಟಿರಬಹುದು? ನಮಗೆಲ್ಲ ಒಂದು ಸಂಗತಿ ಗೊತ್ತಿರಲಿ, ಮುಂದಿನ ಸಲ ಚುನಾವಣೆಯಲ್ಲಿ ಪುನಃ ಧರ್ಮಸಿಂಗ್‌ ನಿಂತರೆ ಆರಿಸಿ ಬರುವವರು ಅವರೇ, ಯೋಚನೆ ಬೇಡ.

ಕೆಲ ವರ್ಷಗಳ ಹಿಂದೆ ಖ್ಯಾತ ಪತ್ರಕರ್ತ ಮಾರ್ಕ್‌ ಟುಲಿ ಜತೆ ಮಾತನಾಡುವಾಗ ಅವರು ಹೇಳಿದ ಒಂದು ಸಂಗತಿ ನೆನಪಾಗುತ್ತಿದೆ - ‘ಚತುರ ರಾಜಕಾರಣಿಯಾದವನು ಮಾಡುತ್ತೇನೆಂದು ಹೇಳುತ್ತಾನೆ ಹೊರತು ಮಾಡುವುದಿಲ್ಲ. ’ ಯಾವುದೇ ರಾಜಕಾರಣಿಯಿರಬಹುದು ಆತನ ಕ್ಷೇತ್ರದಲ್ಲಿ ನಿರುದ್ಯೋಗ, ಅನಕ್ಷರತೆ, ದಾರಿದ್ರ್ಯವಿದ್ದಷ್ಟೂ ಆತನಿಗೆ ಒಳ್ಳೆಯದು. ಈ ಕಾರಣಕ್ಕೆ ಆತ ತನ್ನ ಕ್ಷೇತ್ರದಲ್ಲಿ ಸ್ಲಮ್‌ಗಳನ್ನು ಬೆಳೆಸುತ್ತಾನೆ. ಸ್ಲಮ್‌ಗಳಲ್ಲಿ ಮತಗಳು ಹುಲುಸಾಗಿ ಬೆಳೆಯುವಷ್ಟು ಮತ್ತೆಲ್ಲೂ ಬೆಳೆಯುವುದಿಲ್ಲ. ಏಳೆಂಟು ಸಲ ಆರಿಸಿ ಬಂದವರ ಕ್ಷೇತ್ರಗಳಲ್ಲಿ ಮತ್ತೇನಿಲ್ಲದಿದ್ದರೂ ಸ್ಲಮ್‌ಗಳಾದರೂ ಭದ್ರವಾಗಿ ನೆಲೆಯೂರಿರುತ್ತವೆ.

ಎಸ್‌.ಎಂ.ಕೃಷ್ಣರ ಮದ್ದೂರು ನೆಲೋಗಿಯಷ್ಟು ಭಯಂಕರವಾಗಿ ಕಾಣದಿರಬಹುದು. ಅಲ್ಲಿನ ಒಳನೋಟ ಕನ್ನಡಿಯಂತಲ್ಲದಿದ್ದರೂ, ಒಡೆದ ಕನ್ನಡಿ ಚೂರುಗಳಂತಿವೆ.

ಮನೆಗೆಲ್ಲದವನು ಅದೇಗೆ ಮಾರು ಗೆಲ್ಲುತ್ತಾನೋ?

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more