ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಂಟನಿ ಮಂತ್ರಿಯಾಗಿರುವುದು ಇಡಿ ದೇಶಕ್ಕೆ ರಕ್ಷಣೆ!

By Staff
|
Google Oneindia Kannada News


ಕಾಂಗ್ರೆಸ್‌ ಹಿರಿಯ ನಾಯಕ ಶರದ್‌ ಪವಾರ್‌ರನ್ನು ಪಕ್ಷದಿಂದ ಹೊರಹಾಕಿದಾಗಲೂ ಆ್ಯಂಟನಿ ನಾಯಕತ್ವದ ವಿರುದ್ಧ ದನಿಯೆತ್ತಿದ್ದರು. ಪವಾರ್‌ ಉಚ್ಚಾಟನೆಗೆ ತಮ್ಮ ವಿರೋಧವನ್ನು ಬಹಿರಂಗವಾಗಿ ಪ್ರಕಟಿಸಿದಾಗ ಇವರ ಮೇಲೂ ಕ್ರಮ ಕೈಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಪಕ್ಷದ ನಾಯಕತ್ವ ಏನೂ ಮಾಡಲಿಲ್ಲ. ಆ್ಯಂಟನಿ ಪಕ್ಷದ ಒಳಿತಿನ ಹೊರತಾಗಿ ಮಾತಾಡುವುದಿಲ್ಲ ಎಂಬ ನಂಬಿಕೆಯೇ ಅವರನ್ನು ಬಚಾವ್‌ ಮಾಡಿತು. ಅದು ನಿಜವೂ ಹೌದು.

ಆ್ಯಂಟನಿ ಎಂದೂ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕೇಂದ್ರದಲ್ಲಿ ನರಸಿಂಹರಾವ್‌ ಸಂಪುಟದಲ್ಲಿ ಆ್ಯಂಟನಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾಗ ಸಕ್ಕರೆ ಹಗರಣದ ಕುರಿತು ಸಚಿವರೊಬ್ಬರು ತಪ್ಪಾಗಿ ಇವರ(ಆ್ಯಂಟನಿ)ಹೆಸರನ್ನು ಹೇಳಿಬಿಟ್ಟರು. ಇವರ ಖಾತೆಗೆ ಸಕ್ಕರೆ ಸಂಬಂಧಪಡುವ ವಿಷಯವೂ ಆಗಿರಲಿಲ್ಲ. ಆ್ಯಂಟನಿಗೆ ಇಷ್ಟೇ ಸಾಕಾಯಿತು. ಸಚಿವ ಪದವಿಗೆ ರಾಜೀನಾಮೆ ನೀಡಿದರು. ಹಾಗಂತ ಅವರ ರಾಜೀನಾಮೆಗೆ ಅಂಥ ಒತ್ತಡವೇನೂ ಬಂದಿರಲಿಲ್ಲ. ಆದರೆ ಅವರು ಕೊನೆಗೂ ಮನಸ್ಸು ಬದಲಿಸಲಿಲ್ಲ. ಆಗ ಕೇರಳದಲ್ಲಿ ಮುಖ್ಯಮಂತ್ರಿಯಾಗಿದ್ದ ಕರುಣಾಕರಣ್‌ರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿ ಆ ಹುದ್ದೆಗೆ ಆ್ಯಂಟನಿಯನ್ನು ಕರೆತರಲಾಯಿತು.

ಆ್ಯಂಟನಿಯವರ ನಿಷ್ಠೆ ಹಾಗೂ ಸರಳತೆ ಕಾಂಗ್ರೆಸ್ಸಿನಲ್ಲೊಂದೇ ಅಲ್ಲ, ಅದು ಲೋಕವಿಖ್ಯಾತ. ಅವರು ಅಧಿಕಾರದಲ್ಲಿ ಇಲ್ಲಅಂದ್ರೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನಿಶ್ಚಿತ. ಅದರಲ್ಲೂ ಹೈಕಮಾಂಡ್‌ಗೆ ಸದಾ ಹತ್ತಿರ. ಇಂದಿಗೂ ಸೋನಿಯಾರ ಅತ್ಯಂತ ನಂಬುಗಸ್ಥರಲ್ಲಿ ಅವರೂ ಒಬ್ಬರು. ಹಾಗಂತ ಹೊಗಳುಭಟ್ಟರಲ್ಲ. ಅಧಿಕಾರದಲ್ಲಿದ್ದರೂ ಅವರು ಸಂತರಂತೆ ಎಂಬ ಮಾತು ಪ್ರತಿಪಕ್ಷಗಳಲ್ಲೂ ಪುಚಲಿತ. ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಕೇಂದ್ರಮಂತ್ರಿಯಿದ್ದಾಗ ವಿದೇಶ ಪ್ರವಾಸ ಹೋಗಲಿಲ್ಲ. ಮಂತ್ರಿಯಾಗಿ ವಿದೇಶಯಾನ ಮಾಡಬಾರದೆಂಬುದು ಅವರು ತಮಗೇ ವಿಧಿಸಿಕೊಂಡ ಷರತ್ತು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ವತಿಯಿಂದ ರಷ್ಯಾ, ಜಪಾನ್‌, ಪ್ಯಾರಿಸ್‌ಗೆ ಹೋಗಿದ್ದರು. ಆ ಪ್ರವಾಸಕ್ಕೆ ಹೋಗುವ ಮೊದಲು ಅವರು ಪಾಸ್‌ಫೋರ್ಟನ್ನೂ ಸಹಾ ಮಾಡಿಸಿರಲಿಲ್ಲ.

ಆ್ಯಂಟನಿಗೆ ಇವತ್ತೂ ಸ್ವಂತ ಮನೆಯೆಂಬುದು ಇಲ್ಲ. ಅವರು ಸ್ವಂತಕ್ಕೆಂದು ಕಾರನ್ನೂ ಖರೀದಿಸಿದವರಲ್ಲ. ಅವರ ಪತ್ನಿ ಎಲಿಜಬೆತ್‌ ಇಂದಿಗೂ ಕೆನರಾ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ. ಆಕೆ ತಾನು ದುಡಿದಿದ್ದರಲ್ಲಿ ಖರೀದಿಸಿದ ಎರಡು ಸಾವಿರ ಅಡಿ(40 ಗಿ50) ಭೂಮಿ ಬಿಟ್ಟರೆ ಅವರದೆನ್ನುವ ಆಸ್ತಿಯೇನೂ ಇಲ್ಲ. ಆಸ್ತಿ ಶೇಖರಣೆಯಲ್ಲಿ ನಂಬಿಕೆಯಿಲ್ಲ. ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಮನೆಯಲ್ಲಿ ಸೇವಕರನ್ನಾಗಲಿ, ಅಡುಗೆಭಟ್ಟರನ್ನಾಗಲಿ ಇಟ್ಟುಕೊಂಡಿರಲಿಲ್ಲ. ಎಲ್ಲ ಕೆಲಸಗಳನ್ನೂ ತಾವೇ ಮಾಡಿಕೊಳ್ಳುತ್ತಿದ್ದರು. ಕ್ಯಾಬಿನೆಟ್‌ ದರ್ಜೆ ಮಂತ್ರಿ ದಿಲ್ಲಿಯಲ್ಲಿ ಏನಿಲ್ಲವೆಂದರೂ ಮನೆಯಲ್ಲಿ ಹತ್ತು ಆಳು-ಕಾಳುಗಳನ್ನಿಟ್ಟುಕೊಳ್ಳುತ್ತಾರೆ. ಆದರೆ ಆ್ಯಂಟನಿ ಮನೆಯಲ್ಲಿ ಅವರ್ಯಾರಿಗೂ ಪ್ರವೇಶ ಇಲ್ಲ!

ಎಲಿಜಬೆತ್‌ ಇಂದಿಗೂ ತಮ್ಮ ಸ್ವಂತ ವಾಹನದಲ್ಲಿ ಕಚೇರಿಗೆ ಹೋಗುತ್ತಾರೆ. ಗಂಡನ ಸರಕಾರಿ ಕಾರಿನ ಹಂಗೂ ಇಲ್ಲ. ಇಬ್ಬರು ಗಂಡು ಮಕ್ಕಳಿಗೂ ಇದೇ ನಿಯಮ. ಅಪ್ಪ ಮಂತ್ರಿಯಾಗಿರಬಹುದು. ಹಾಗಂತ ಮಕ್ಕಳಿಗೆ ಆತ ಅಪ್ಪನೇ. ಮಂತ್ರಿಗಿರಿಯ ಫಲ ಮಕ್ಕಳಿಗೆ ಇಲ್ಲ.

ಕೆಲ ದಿನಗಳ ಹಿಂದೆ ನಾನು ತಿರುವನಂತಪುರಂನಲ್ಲಿ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಮ್‌ಗೆ ಹೋಗಿದ್ದೆ. ಅಲ್ಲಿ ‘ಮುಖ್ಯಮಂತ್ರಿಗಳ ಗ್ಯಾಲರಿ’ ವಿಭಾಗ ನೋಡಿ ಕುತೂಹಲದಿಂದ ಹತ್ತಿರ ಹೋದರೆ ಆಶ್ಚರ್ಯ. ಮುಖ್ಯಮಂತ್ರಿಯಾಗಿದ್ದಾಗ ತಮಗೆ ನೀಡಿದ ಉಡುಗೊರೆ ಸಾಮಾನುಗಳನ್ನೆಲ್ಲ ಆ್ಯಂಟನಿ ಆ ಗ್ಯಾಲರಿಗೆ ದಾನವಾಗಿ ನೀಡಿದ್ದರು. ‘ನಾನು ಈ ಎಲ್ಲ ಉಡುಗೊರೆಗಳನ್ನು ಮುಖ್ಯಮಂತ್ರಿಯೆಂಬ ಕಾರಣಕ್ಕಾಗಿ ನೀಡಿದ್ದಾರೆಯೇ ಹೊರತು ನನಗಾಗಿ ಅಲ್ಲ . ಆದ್ದರಿಂದ ಇದು ರಾಜ್ಯದ ಆಸ್ತಿ. ಅದು ಸಾರ್ವಜನಿಕರಿಗೆ ಸಲ್ಲಬೇಕು ’ ಎಂದು ಅವರು ಹೇಳಿದ್ದರು.

ಉದ್ಘಾಟನಾ ಹಾರಾಟದ ಸಂದರ್ಭದಲ್ಲಿ ಭಾಗವಹಿಸಿದ್ದಕ್ಕಾಗಿ ಕುವೇಟ್‌ ಏರ್‌ಲೈನ್ಸ್‌ ಆ್ಯಂಟನಿಯವರಿಗೆ ವಜ್ರ ಮತ್ತು ಸುವರ್ಣ ಖಚಿತ ‘ಫ್ರೆಡ್‌’ ಜೆಂಟ್ಸ್‌ ಹಾಗೂ ಲೇಡೀಸ್‌ ವಾಚನ್ನು ಉಡುಗೊರೆಯಾಗಿ ನೀಡಿತ್ತು. ತೋರಿಸಿದರೆ ಆಸೆಯಾಗಬಹುದೆಂದು ತಮ್ಮ ಪತ್ನಿಗೆ ವಾಚನ್ನು ತೋರಿಸಲೂ ಇಲ್ಲ. ಹಲವಾರು ಲಕ್ಷ ರೂ. ಬೆಲೆಬಾಳುವ ಆ ಎರಡೂ ವಾಚುಗಳನ್ನು ಅವರು ಮ್ಯೂಸಿಯಮ್‌ಗೆ ಕೊಟ್ಟುಬಿಟ್ಟರು! ಆ ಗ್ಯಾಲರಿಯಲ್ಲಿ ಆ್ಯಂಟನಿಗೆ ನೀಡಿದ ವಜ್ಞಚು, ಉಂಗುರ, ಚೈನುಗಳು ಸೇರಿದಂತೆ ಅಮೂಲ್ಯ ಮತ್ತು ಬೆಲೆ ಕಟ್ಟಲಾಗದ ಅನೇಕ ಉಡುಗೊರೆ ಸಾಮಾನುಗಳನ್ನು ನೋಡಬಹುದು. ಶ್ರೀಲಂಕಾ ಪ್ರಧಾನಿ, ವಿದೇಶಿ ಗಣ್ಯರು,ಅನೇಕ ರಾಜ್ಯಪಾಲರು, ಮುಖ್ಯಮಂತ್ರಿಗಳು ನೀಡಿದ ಗಿಫ್ಟ್‌ ಐಟಮ್‌ಗಳೆಲ್ಲ ಈ ಗ್ಯಾಲರಿ ಸೇರಿವೆ. ಕೇಂದ್ರ ಮಂತ್ರಿಯಾಗಿದ್ದಾಗ ಪಡೆದ ಉಡುಗೊರೆಗಳನ್ನು ದಿಲ್ಲಿ ಬಿಡುವ ಮೊದಲು ಮ್ಯೂಸಿಯಮ್‌ಗೆ ಕೊಟ್ಟು ಬಂದಿದ್ದಾರೆ. ತಮಗೆ ಕೊಟ್ಟ ಗಂಧದ ಮಾಲೆ, ಸೆಣಬಿನ ಹಾರ, ಅರಿಶಿಣ ಕೊಂಬು, ಲಿಂಬೇ ಹಣ್ಣನ್ನು ಬಿಡುದ ರಾಜಕಾರಣಿಗಳ ಮಧ್ಯೆ ಈ ಕಾಲದಲ್ಲೂ ಇಂಥವರೂ ಇದ್ದಾರಾ ಅಂದ್ರೆ ನಂಬುವುದಾದರೂ ಹೇಗೆ?

ಆ್ಯಂಟನಿ ಅಪ್ಟಟ ಗಾಂಧಿವಾದಿ. ಮುಖ್ಯಮಂತ್ರಿಯಾಗಿದ್ದಾಗ ಕೇರಳದಲ್ಲಿ ಪಾನನಿಷೇಧ ಜಾರಿಗೊಳಿಸುವಂಥ ದಿಟ್ಟ ಕ್ರಮ ಕೈಗೊಂಡಿದ್ದರು. ಕರುಣಾಕರನ್‌ ಹಾಗೂ ಅವರ ಪುತ್ರ ಮುರಳೀಧರನ್‌ ಹೊಲಸು ರಾಜಕಾರಣಕ್ಕೆ ಅವರು ಸ್ವಲ್ಪವೂ ತಲೆಕೆಡಿಸಿಕೊಂಡವರಲ್ಲ. ಬೆಂಬಿಡದ ಭೂತದಂತೆ ಕರುಣಾಕರನ್‌ ಕಾಡಿದರೂ ಆ್ಯಂಟನಿ ಎಂದೂ ಪ್ರತೀಕಾರ ತೆಗೆದುಕೊಂಡವರಲ್ಲ. ಹೈಕಮಾಂಡ್‌ಗೆ ಅವರ ವಿರುದ್ಧ ದೂರಿತ್ತವರೂ ಅಲ್ಲ. ಅದರ ಬದಲು ತಮ್ಮ ರಾಜಕೀಯ ಶತ್ರುವಿಗೆ ಉಪಕಾರ ಮಾಡಿದ ವಿಚಿತ್ರ ಆಸಾಮಿ.

ಹೌದು ಸ್ವಾಮಿ, ಈ ಕಾಲದಲ್ಲಿ ಆ್ಯಂಟನಿಯಂಥವರೂ ಇದ್ದಾರೆ. ಪಕ್ಷಭೇದ ಮರೆತು ನಾವೆಲ್ಲ ಅಭಿಮಾನ ಪಡುವ ರಾಜಕಾರಣಿ.

ಇಂಥವರು ಮಂತ್ರಿಯಾಗಿರುವುದು ದೇಶಕ್ಕೆ ‘ರಕ್ಷಣೆ’!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X