ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾಧ್ಯ ಅನಿಸಿದ್ದನ್ನೆಲ್ಲ ಹತ್ತೇ ವರ್ಷಗಳಲ್ಲಿ ಸಾಧಿಸಿ ತೋರಿಸಿದ ಬಿಲ್‌ಗೇಟ್ಸ್‌!

By Staff
|
Google Oneindia Kannada News

ಅಸಾಧ್ಯ ಅನಿಸಿದ್ದನ್ನೆಲ್ಲ ಹತ್ತೇ ವರ್ಷಗಳಲ್ಲಿ ಸಾಧಿಸಿ ತೋರಿಸಿದ ಬಿಲ್‌ಗೇಟ್ಸ್‌!
ಮಾಹಿತಿ ಜಾಲದಲ್ಲಿ ಸಿಗುವ ಸ್ಥಳಗಳಿಂದ-ಮಾಹಿತಿಗಳಿಂದ ರೋಮಾಂಚಿತರಾಗುವ ನಾವು, ಅದು ಕೊಡುವ ಮೈಲ್ಡ್‌ ಕಿಕ್‌ಗಳನ್ನು ಅಷ್ಟೇ ಲಘುವಾಗಿ ಸಹಿಸಿಕೊಳ್ಳಬೇಕು. ನಿಜಕ್ಕೂ ಮಾಹಿತಿ ಹೆದ್ದಾರಿಯಲ್ಲಿ ಪಯಣಿಸುವುದು ಒಂದು ರೋಚಕ ಅನುಭವ. ಈ ಪಯಣ ನಿಮ್ಮದಾಗಲಿ. ದಾರಿ ನಿಮ್ಮ ಮುಂದಿದೆ...

Vishweshwar Bhat ವಿಶ್ವೇಶ್ವರ ಭಟ್‌

ಕನಸುಗಾರ!

ಹಾಗೆಂದರೆ ತಪ್ಪೇನಿಲ್ಲ. ಈ ಕಂಪ್ಯೂಟರ್‌ ಕಿಂಗ್‌ ಬಿಲ್‌ಗೇಟ್ಸ್‌ಗೆ ಭಾರತ ಸರ್ಕಾರವೇನಾದರೂ ವಾಹನ ತಯಾರಿಕೆಗೆ ಅನುಮತಿ ನೀಡಿದರೆ, ಆತ ವಾಹನ ತಯಾರಿಕೆಗೆ ತೊಡಗುವುದಿಲ್ಲ. ಅದಕ್ಕಿಂತ ಮುಂಚೆ ರಸ್ತೆಗಳ ಸ್ವರೂಪವನ್ನು ಬದಲಿಸುತ್ತಾನೆ.

ಹಾಗೇ ಈತನಿಗೆ ರೈಲುಬೋಗಿ ನಿರ್ಮಾಣಕ್ಕೆ ಪರವಾನಗಿ ನೀಡಿದರೆ, ಮೊದಲು ಹಳಿಗಳನ್ನು ಬದಲಿಸಿ ಆನಂತರ ಬೋಗಿಗಳ ತಯಾರಿಕೆಗೆ ಮುಂದಾಗುತ್ತಾನೆ. ಏಕೆಂದರೆ ಈತ ತಯಾರಿಸುವ ವಾಹನ, ರೈಲುಬೋಗಿಗಳು ಈಗಿನ ರಸ್ತೆ, ಹಳಿಯ ಮೇಲೆ ಚಲಿಸಲಾರವು.

ಆತ ಕಂಪ್ಯೂಟರ್‌ ಕ್ಷೇತ್ರದಲ್ಲಿ ಮಾಡಿದ್ದೂ ಅದನ್ನೇ. ಕೇವಲ ಹತ್ತು ವರ್ಷಗಳಲ್ಲಿ ಅಸಾಧ್ಯವಾದದ್ದನ್ನು ಸಾಧಿಸಿದ. ಕಂಪ್ಯೂಟರ್‌ಗಳಿಗೆ ನವತಾರುಣ್ಯವನ್ನು ಕಲ್ಪಿಸಿದ. ಅದೇ ಹೊತ್ತಿಗೆ ಬಿಲ್‌ಗೇಟ್ಸ್‌ ಒಂದು ಪುಸ್ತಕವನ್ನೂ ಬರೆದ. ಅದರಲ್ಲಿ ತನ್ನ ಕನಸುಗಳನ್ನು ತೆರೆದಿಟ್ಟ.

Bill Gatesಮಾಹಿತಿ ತಂತ್ರಜ್ಞಾನದಿಂದ ನಮ್ಮ ಬದುಕು ಹೇಗೆ ಸುಧಾರಿಸುತ್ತದೆ, ಇದರಿಂದ ಜನರ ಜೀವನ ಉತ್ತಮವಾಗುವುದೇ ಅಥವಾ ಇಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರಲ್ಲೂ ಉದ್ಭವವಾಗುವುದು ಸಹಜ. ಮಾಹಿತಿ ತಂತ್ರಜ್ಞಾನ ಬಿಡುವಿನ ಸಮಯವನ್ನು ಹೆಚ್ಚಿಸಿದೆ ಹಾಗೂ ಜ್ಞಾನದ ವಿಕಾಸಕ್ಕೆ ಕಾರಣವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಪ್ರಗತಿಯಿಂದ ನೈಸರ್ಗಿಕ ಸಂಪನ್ಮೂಲದ ಮೇಲಿನ ಒತ್ತಡ ಕಡಿಮೆಯಾಗಿದೆ. ನಮ್ಮ ಜೀವನದ ಮೇಲೆ ಹಿಡಿತ ಸಿಗುತ್ತಿದೆ. ನಮ್ಮ ಅನುಭವ ಮತ್ತು ಉತ್ಪನ್ನಗಳನ್ನು ನಮ್ಮ ಆಸಕ್ತಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಲು ಸಹಾಯಕವಾಗುತ್ತಿದೆ.

ಇಂದು ಜನಸಾಮಾನ್ಯರ ಸರಾಸರಿ ಜೀವನಮಟ್ಟ ಕಳೆದ ಶತಮಾನದಲ್ಲಿ ಇದ್ದುದಕ್ಕಿಂತ ಸುಧಾರಿಸಿದೆ. ಈ ಶತಮಾನದ ಆರಂಭದಲ್ಲಿ ಕಾರು, ಟಿವಿ, ಫ್ರಿಜ್‌, ಫೋನ್‌ ಮುಂತಾದವೆಲ್ಲಾ ಲಗ್ಜುರಿ ವಸ್ತುಗಳಾಗಿದ್ದವು. ಆದರೆ ಈಗ ಹಾಗಿಲ್ಲ. ಅಭಿವೃದ್ಧಿಶೀಲ ದೇಶಗಳ ಕೊಳೆಗೇರಿಯಲ್ಲೂ ಟಿವಿ ಆಂಟೆನಾಗಳು ತಲೆಯೆತ್ತಿವೆ.

ಆದರೆ, ಬಿಲ್‌ಗೇಟ್ಸ್‌ಗೆ ಈ ಚಿತ್ರಣ ಸಂತಸ ನೀಡಿದಂತಿಲ್ಲ. ಕಾರಣ ಈ ರಸಕ್ಷಣಗಳು ತಮ್ಮದೇ ಆದ ಸಮಸ್ಯೆಗಳನ್ನೂ ಕಟ್ಟಿಕೊಂಡು ಬಂದಿದೆ. ಸಮಾಜದಲ್ಲಿ ಯಾವುದೇ ಬದಲಾವಣೆಯ ಆನಂತರ ಅವತರಿಸಿರುವ ಸ್ಥಿತಿ ಯಾವ ರೀತಿಯ ಪರಿಣಾಮನ್ನುಂಟುಮಾಡಬಲ್ಲದು ಎಂಬುದನ್ನು ಹೇಳುವುದು ಕಷ್ಟ. ಸಾಮಾನ್ಯವಾಗಿ ಇಂಥ ಬದಲಾವಣೆಯ ವಿರುದ್ಧ ಸಂಪ್ರದಾಯವಾದಿಗಳು ದನಿಯೆತ್ತಿ ಸ್ವಲ್ಪ ಗಾಬರಿ ಮೂಡಿಸುವುದು ಹೊಸತೇನಲ್ಲ. ಕೆಲಮೊಮ್ಮೆ ಬದಲಾವಣೆ ಎನ್ನೋದು ಹೊತ್ತು ತರುವ ಸಮಸ್ಯೆಯ ಆಳ, ಅರಿವು ಗೊತ್ತಾಗುವುದಿಲ್ಲ. ನಮ್ಮ ಜೀವನ ಕಂಪ್ಯೂಟರ್‌ಗೆ ಹೆಚ್ಚು ಹೆಚ್ಚು ಅವಲಂಬಿತವಾಗತೊಡಗಿದ್ದರಿಂದ ಈಗಲೂ ಅಂಥ ಗಾಬರಿ ಕೆಲವರಲ್ಲಿ ಮೂಡುತ್ತಿದೆ. ಪ್ರತಿ ಆವಿಷ್ಕಾರವನ್ನೂ ಅನುಮಾನದಿಂದಲೇ ನೋಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಆದ್ದರಿಂದ ಈ ವಿಷಯದ ಬಗ್ಗೆ ತಲಸ್ಪರ್ಶಿಯಾದ ಅಧ್ಯಯನ ಹಾಗೂ ಚರ್ಚೆ ನಡೆಯಬೇಕಿದೆ. ಅಲ್ಲಿಯವರೆಗೆ ಕಂಪ್ಯೂಟರ್‌ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ, ಪ್ರಗತಿಯನ್ನು ಒಂದು ಸಂತುಲಿಕ ದೃಷ್ಟಿಕೋನದಿಂದಲೇ ನೋಡಬೇಕಾದ ಅಗತ್ಯವಿದೆ.

ಈಗ ಬಹುತೇಕ ಮಂದಿಯನ್ನು ಕಾಡುವ ಪ್ರಶ್ನೆಯೆಂದರೆ - ಬದಲಾಗುತ್ತಿರುವ ಜಗತ್ತಿನಲ್ಲಿ ನನ್ನ ಸ್ಥಾನ ಎಲ್ಲಿ ?ಈ ಸ್ಥಿತಿಗೆ ಅಥವಾ ಮುಂದೆ ತಲೆದೋರಲಿರುವ ಹೊಸ ವಾತಾವರಣಕ್ಕೆ ನಾನು ಒಗ್ಗಿಕೊಳ್ಳುತ್ತೇನೆಂಬ ಈಗಿನ ನೌಕರಿ ವ್ಯವಸ್ಥೆಯಲ್ಲಿ ತಮ್ಮ ಸ್ಥಾನ ಅಪ್ರಸ್ತುತವಾಗಬಹುದು, ಆರ್ಥಿಕ ಏಳುಬೀಳಿನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಬಹುದು, ವಯಸ್ಸಾದವರಿಗೆ ಈಗಿನ ವ್ಯವಸ್ಥೆಗೆ ಒಗ್ಗಿಕೊಳ್ಳಲು ಅಸಾಧ್ಯವಾಗಬಹುದು ಹಾಗೂ ಕಾಲಕಾಲಕ್ಕೆ ಪರಿಸ್ಥಿತಿ ಬದಲಾಗುವುದರಿಂದ ಈ ಒಗ್ಗಿಕೊಳ್ಳದಿರುವಿಕೆ ನಿರಂತರವಾಗಿ ಕಾಡಬಹುದು- ಈ ಪ್ರಶ್ನೆಗಳು ಜನರನ್ನು ಕಿತ್ತು ತಿನ್ನುತ್ತಿವೆ.

ತಾತ್ಕಾಲಿಕ ಕಳವಳ : ಈ ಗಾಬರಿಗೆ ಅರ್ಥವಿಲ್ಲದೇ ಇಲ್ಲ. ಬದಲಾವಣೆಯ ಗತಿಯಲ್ಲಿ ಕೆಲವು ವೃತ್ತಿಗಳೇ ನಾಶವಾಗಬಹುದು. ಹೊಸ ಬದಲಾವಣೆಗೆ ಒಗ್ಗಿಕೊಳ್ಳಲಾಗದೇ ಜನರು ತತ್ತರಿಸಿ ಸಮಾಜದಲ್ಲಿ ಮಾನಸಿಕ ಕ್ಷೋಭೆ ತಲೆದೋರಬಹುದು. ಮುಂದಿನ ಮೂರ್ನಾಲ್ಕು ದಶಕಗಳವರೆಗೆ ಈ ಸ್ಥಿತ್ಯಂತರ ಮುಂದುವರಿಯಬಹುದು.

ಕಂಪ್ಯೂಟರ್‌ ಮತ್ತು ಮೈಕ್ರೊಪ್ರೊಸೆಸರ್‌ನಿಂದ ಕೆಲವರ ಉದ್ಯೋಗಕ್ಕೆ ಕುತ್ತು ಉಂಟಾಗಿರಬಹುದು. ಆದರೆ ಇದರಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯೆಂದು ಅನಿಸುವುದಿಲ್ಲ. ಟೈಪ್‌ರೈಟರ್‌ ಕಂಪನಿಗೆ ಹಾನಿಯಾಗಿರಬಹುದು. ಆದರೆ ಇದೇ ಸಂದರ್ಭದಲ್ಲಿ ಕಂಪ್ಯೂಟರ್‌ ಕ್ಷೇತ್ರ ಆಗಾಧವಾಗಿ ಬೆಳೆದಿದೆ. ಅಸಂಖ್ಯಾತ ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದೆ. ಕಂಪ್ಯೂಟರ್‌ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು, ಅತಿಯಾದ ಕಂಪ್ಯೂಟರ್‌ ಬಳಕೆಯಿಂದ ಕೆಲಸ ಕಳೆದುಕೊಂಡಿರುವುದು ಸತ್ಯವಾದರೂ ಅವರೆಲ್ಲರೂ ಅದೇ ಉದ್ಯಮದಲ್ಲಿರುವ ಇತರ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಕಂಪ್ಯೂಟರ್‌ ಬಳಕೆಯಿಂದ ಕಂಪ್ಯೂಟರ್‌ ಉದ್ಯಮದ ಹೊರಗಿನ ಕ್ಷೇತ್ರಗಳಲ್ಲಿ ಧಕ್ಕೆಯಾಗಿದೆಯೆಂಬುದು ಕೇವಲ ತಾತ್ಕಾಲಿಕ ಕಳವಳ.

ಇನ್ನು ಮುಂದೆ, ಜೀವನದ ಬಹುತೇಕ ಅಂಶಗಳು ಕಂಪ್ಯೂಟರ್‌ನಿಂದಲೇ ನಿರ್ದೇಶಿತವಾಗುವುದರಿಂದ, ಉದ್ಯೋಗ ಕೆಲವೇ ಕೆಲವು ಮಂದಿಗೆ ಸೀಮಿತವಾಗಬಹುದೆಂಬ ಕಳವಳದಲ್ಲೂ ನಿಜಾಂಶವಿಲ್ಲದೆ ಇಲ್ಲ. ಏಕೆಂದರೆ ಯಾವುದೇ ದೇಶದ ಆರ್ಥಿಕ ವ್ಯವಸ್ಥೆ ಎಷ್ಟು ವ್ಯಾಪಕವಾಗಿರುತ್ತದೆಂದರೆ, ಹೊರಗೆ ಲಭ್ಯವಾಗುವ ಸಂಪನ್ಮೂಲ ಆರ್ಥಿಕತೆಯ ಉಳಿದ ರಂಗಕ್ಕೂ ಹಂಚಿಕೆಯಾಗುತ್ತದೆ.

ಪ್ರತಿ ಬಾರಿ ಯಾವುದೇ ಒಂದು ಉದ್ಯೋಗ ಅನವಶ್ಯಕವಾದಾಗ, ಆ ಉದ್ಯೋಗದಿಂದ ವಂಚಿತರಾದವರು ಆರ್ಥಿಕತೆಯ ಇನ್ನೊಂದು ರಂಗದಲ್ಲಿ ತಮ್ಮನ್ನು ಪ್ರಸ್ತುತಪಡಿಸಿಕೊಳ್ಳುತ್ತಾರೆ. ಇದು ಕೈಗಾರಿಕಾ ಕ್ರಾಂತಿಯ ಆನಂತರ ಹುಟ್ಟಿದ ಅನೇಕ ಸಂಸ್ಥೆಗಳಲ್ಲಿ ಇಣುಕಿತ್ತು. ಇದಕ್ಕೆ ಕೈಗಾರಿಕಾ ಕ್ರಾಂತಿಯೇ ಕಾರಣವೆಂದು ಸುಮ್ಮನಿದ್ದಿದ್ದರೆ, ವಿಶ್ವ ಪ್ರಗತಿ ಹೊಂದುತ್ತಿರಲಿಲ್ಲ.

ಕಾಲಕಾಲಕ್ಕೆ ಸ್ಥಿತ್ಯಂತರ ಹೊಂದುವ ಆರ್ಥಿಕತೆಯ ಸಂದರ್ಭದಲ್ಲಿ ಉದ್ಯೋಗದ ಕೆಟಗರಿಗಳೂ ಬದಲಾಗುತ್ತವೆ. ಕಳೆದ 15-20 ವರ್ಷಗಳ ಹಿಂದಿನ ಟೆಲಿಫೋನ್‌ ವ್ಯವಸ್ಥೆಯನ್ನೇ ನೋಡಿ. ಎಲ್ಲ ಟೆಲಿಫೋನ್‌ ಕರೆಗಳನ್ನೂ ಆಪರೇಟರ್‌ ಮೂಲಕವೇ ಮಾಡಬೇಕಿತ್ತು. ಪಕ್ಕದ ಊರಿಗೆ ಫೋನ್‌ ಮಾಡಬೇಕಾದರೆ ಆಪರೇಟರ್‌ಗೆ ನಂಬರ್‌ ಕೊಟ್ಟು ಗಂಟೆಗಟ್ಟಲೆ ಕಾಯಬೇಕಿತ್ತು. ಈಗ ಎಲ್ಲಿಗೆ ಬೇಕಾದರೂ ತಕ್ಷಣ ಫೋನ್‌ ಮಾಡಬಹುದು. ಹೊಸ ಟೆಲಿಫೋನ್‌ ವ್ಯವಸ್ಥೆಯಿಂದ ಆಪರೇಟರ್‌ಗಳು ಕೆಲಸ ಕಳೆದುಕೊಳ್ಳುತ್ತಾರೆಂದು ಆಗ ಯಾರಾದರೂ ವಾದಿಸಿದ್ದರೆ, ಆ ವಾದ ಎಷ್ಟು ಪೊಳ್ಳೆಂಬುದು ಈಗ ಮನವರಿಕೆಯಾಗುತ್ತದೆ.

1990ರಲ್ಲಿ ಅಮೆರಿಕದ ಜನಗಣತಿ ಮಂಡಲಿ ದೇಶದಲ್ಲಿ ಒಟ್ಟು 501 ಉದ್ಯೋಗಗಳಿವೆಯೆಂದು ಗುರುತಿಸಿತು. ಐವತ್ತು ವರ್ಷಗಳ ಹಿಂದೆ ದೇಶದಲ್ಲಿ ಇದರ ಅರ್ಧದಷ್ಟು ಉದ್ಯೋಗವೂ ಇರಲಿಲ್ಲ. ಮುಂದಿನ ಹತ್ತು ವರ್ಷಗಳಲ್ಲಿ ಮತ್ತಷ್ಟು ಹೊಸ ಉದ್ಯೋಗ ಸೃಷ್ಟಿಯಾಗಬಹುದು. ಈ ಪ್ರಕ್ರಿಯೆಯಲ್ಲಿ ನೂರಾರು ವರ್ಷಗಳ ಯಾವುದಾದರೂ ಹಳೇ ಉದ್ಯೋಗ ನಶಿಸಬಹುದು. ಅದಕ್ಕೆ ಪೂರಕವಾದ ಹತ್ತಾರು ಹೊಸ ಉದ್ಯೋಗಗಳು ಹುಟ್ಟಿಕೊಳ್ಳಬಹುದು. ಈಗ ಆಗುತ್ತಿರುವುದೂ ಅದೇ ಅಲ್ಲವೆ? ಆದ್ದರಿಂದ ಕಂಪ್ಯೂಟರ್‌ ಮತ್ತು ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಒಂದು ‘ಭೂತ’ ಎಂದು ಪರಿಗಣಿಸಬೇಕಿಲ್ಲ.

ಆದರೂ ಜಾಗತಿಕ ಜಾಲ ಮತ್ತು ಕಂಪ್ಯೂಟರ್‌ ಆಧಾರಿತ ಯಂತ್ರಗಳು ನಮ್ಮ ಬದುಕನ್ನು ಹೆಚ್ಚಾಗಿ ನಿಯಂತ್ರಿಸ ತೊಡಗಿದರೆ ಅವುಗಳ ಮೇಲಿನ ನಮ್ಮ ಅವಲಂಬನೆ ಜಾಸ್ತಿಯಾಗುತ್ತಾ ಹೋಗುತ್ತದೆ. ಮಿತಿ ಮೀರಿದ ಅವಲಂಬನೆ ಅಪಾಯಕರ. ಕಂಪ್ಯೂಟರ್‌ಗಳನ್ನು ಹೆಚ್ಚು ಬಳಸತೊಡಗಿದರೆ, ಅವು ನಮ್ಮ ಮೇಲೆ ನಿಯಂತ್ರಣ ಸಾಧಿಸತೊಡಗುತ್ತವೆ. ಜಾಗತಿಕ ಜಾಲದಂಥ ವ್ಯವಸ್ಥೆ ಹೊಂದಿದಾಗ ಒಮ್ಮೆ ಅದು ಅಸ್ತವ್ಯಸ್ತವಾದರೆ, ಇಡೀ ಜನಜೀವನ ಅಸ್ತವ್ಯಸ್ತವಾಗಿ

ಬಿಡಬಲ್ಲದು. ವಿದ್ಯುಚ್ಛಕ್ತಿಯ ಮೇಲೆ ಇಡೀ ಬದುಕು ನಿಂತಿರುವ ಅಮೆರಿಕದಲ್ಲಿ 1965, 1977ರಲ್ಲೊಮ್ಮೆ ಕರೆಂಟ್‌ ಕೈ ಕೊಟ್ಟಿತು. ಅಷ್ಟು ಹೊತ್ತು ಇಡೀ ದೇಶ ಸ್ತಬ್ಧವಾಗಿತ್ತು. ಜನಜೀವನ ಸಂಪೂರ್ಣ ಅಡಸಲು ಬಡಸಲಾಯಿತು. ನಮ್ಮ ಜೀವನ ಕಂಪ್ಯೂಟರ್‌ ಸುತ್ತ ಹೆಣೆದುಕೊಂಡಾಗ, ಅದು ಕೈಕೊಟ್ಟರೆ ವಿಪರೀತ ಏರುಪೇರು ಉಂಟಾಗಬಹುದು. ಕಂಪ್ಯೂಟರ್‌ ಮತ್ತು ಇಂಟರ್ಯಾಕ್ಟಿವ್‌ ಜಾಲದ ಮೇಲೆ ಜೀವನ ಅವಲಂಬಿತವಾದಾಗ, ವ್ಯಕ್ತಿಯ ಖಾಸಗಿ ಬದುಕಿನ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಹೆಚ್ಚೆಂಬ ಕೊರಗು ಕೇಳಿ ಬರುತ್ತಿದೆ.

ಅಮೆರಿಕದಂಥ ದೇಶದ ಪ್ರತಿ ಪ್ರಜೆ, ಕುಟುಂಬದ ಮಾಹಿತಿಯನ್ನು ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಏಜೆನ್ಸಿಗಳು ಸಂಗ್ರಹಿಸಿದ್ದು, ಅವು ಅವುಗಳನ್ನು ಹೇಗೆ ಉಪಯೋಗಿಸುತ್ತಿವೆ ಅಥವಾ ಸರಿಯಾಗಿ ಬಳಸುತ್ತಿವೆಯೇ ಎಂಬ ಪ್ರಶ್ನೆ ಮಾಡುವುದುಂಟು. ಜನಗಣತಿ ಮಂಡಲಿ ಪ್ರತಿ ವ್ಯಕ್ತಿಯ ಖಾಸಗಿ ಜೀವನದ ಬಹುಮುಖ್ಯ ವಿವರ, ಲೈಬ್ರರಿ, ಬದಲಾಯಿಸಿದ ಉದ್ಯೋಗ, ಪೊಲೀಸ್‌ ಠಾಣೆ ಏರಿದ ಮಾಹಿತಿ, ಕೋರ್ಟ್‌ ಕಟಕಟೆ ಹತ್ತಿದ ವಿವರ, ಸಾಲ ಪಡೆದ ವಿವರ, ತೆರಿಗೆ ನೀಡಿದ ದಾಖಲೆ, ಆರ್ಥಿಕ ಭದ್ರತೆ, ಮಕ್ಕಳ ಸಂಖ್ಯೆ, ಅವರ ವಿವರ ಹೀಗೆ ಎಲ್ಲ ವಿವರಗಳ ದಾಖಲೆಗಳೂ ಲಭ್ಯ. ಅಲ್ಲಿನ ಪ್ರಜೆಗಳ ಈ ಎಲ್ಲ ವಿವರಗಳನ್ನೂ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. ಈ ಎಲ್ಲ ಮಾಹಿತಿಯನ್ನೂ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆ. ಆದರೆ ಇವುಗಳನ್ನು ಸರಿಯಾಗಿ ಬಳಸಿದರೆ ಒಳ್ಳೆಯದು. ಇವುಗಳ ದುರುಪಯೋಗ ಅನೇಕ ಸಮಸ್ಯೆಗಳನ್ನು ಹುಟ್ಟಿಸುತ್ತವೆ. ಇದು ಚಿಂತೆಗೆ ಈಡು ಮಾಡುತ್ತದೆ.

ಈ ರೀತಿ ಮಾಹಿತಿ ಸಂಗ್ರಹ ಹಾಗೂ ಅವುಗಳು ಲಭ್ಯವಾಗುವುದರಿಂದ ಸದಾ ನಮ್ಮ ಖಾಸಗಿ ಜೀವನದೊಳಗೆ ಯಾರಾದರೂ ಇಣುಕುತ್ತಲೇ ಇರುತ್ತಾರೆ. ನಾವು ಇರುವುದು ಎಲ್ಲಿ ಹೇಗಿದ್ದೇವೆಂಬುದನ್ನು ನೆಟ್‌ವರ್ಕ್‌ಗಳಿಂದ ತಿಳಿಯಬಹುದು. ನಮ್ಮ ಇಡೀ ಜೀವನವೆ ಒಂದು ರೀತಿಯಲ್ಲಿ ‘ಡಾಕ್ಯುಮೆಂಟೆಡ್‌’! ಇಂಥ ಒಂದು ವ್ಯವಸ್ಥೆ ಎಷ್ಟು ಉಪಯುಕ್ತವೋ ಅದರ ದುರುಪಯೋಗ ಊಹಿಸಲು ಅಸಾಧ್ಯ.

ನಮ್ಮ ಜೀವನ ಹೆಚ್ಚು ಹೆಚ್ಚು ಯಂತ್ರಗಳ ಮೇಲೆ ಆಧರಿಸಿದರೆ, ನಾವು ಅದರ ದಾಸರಾಗಬೇಕಾಗುತ್ತದೆ ಎಂಬ ಕಳವಳ ಕೂಡ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಕಿಸೆಯಲ್ಲಿರಿಸಿಕೊಳ್ಳಬಹುದಾದ ಸಣ್ಣ ಕಂಪ್ಯೂಟರ್‌ ನಮ್ಮ ಚಲನವಲನ, ಮಾತು, ಸಮಯ, ಸ್ಥಳ, ದೇಹದ ಶಾಖ ಮುಂತಾದ ಮಾಹಿತಿಗಳನ್ನು ದಾಖಲಿಸಿಟ್ಟುಕೊಳ್ಳುತ್ತದೆ. ನೆಟ್‌ವರ್ಕ್‌ನಲ್ಲಿ ಕಳಿಸುವ ಸಂದೇಶ ನೀವು ಫೋನ್‌ನಲ್ಲಿ ಆಡುವ ಮಾತುಗಳನ್ನು ಸಹ ಹಿಡಿದಿಟ್ಟುಕೊಳ್ಳುತ್ತದೆ. ಒಂದರ್ಥದಲ್ಲಿ ಇದು ನಿಮ್ಮನ್ನು ಹಿಡಿದಿಟ್ಟುಕೊಳ್ಳುವ, ನಿಮ್ಮ ಜೀವನದ ಪ್ರತಿ ಕ್ಷಣಗಳನ್ನು ದಾಖಲಿಸಿಟ್ಟುಕೊಳ್ಳುವ ಆಟೋಬಯಾಗ್ರಫಿ, ನೀವು ಇಡೀ ಜೀವನದಲ್ಲಿ ಆಡುವ ಮಾತುಗಳನ್ನು ಒಂದು ಸಣ್ಣ ಚಿಪ್‌ ಸಂಗ್ರಹಿಸಿಟ್ಟುಕೊಳ್ಳುವುದು. ಈ ಡಾಕ್ಯುಮೆಂಟೆಡ್‌ ಜೀವನದ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳನ್ನು ವಿವರಿಸಬೇಕಿಲ್ಲ.

ವೀಡಿಯೋ ಕ್ಯಾಮರಾ ಮೂಲಕ ಜನರ ಚಲನವಲನದ ಮೇಲೆ ನಿಗಾ ಇಡುವ ಪ್ರಸ್ತಾಪವೂ ಚರ್ಚೆಗೆ ಗ್ರಾಸವೊದಗಿಸಿದೆ. ಸಾರ್ವಜನಿಕ ಸ್ಥಳಗಳ ಮೂಲೆ ಮೂಲೆಯಲ್ಲಿ ಕ್ಯಾಮರಾ ಹುದುಗಿಸಿಟ್ಟು ಜನರ ಚಲನವಲನ ದಾಖಲಿಸುವ ಪ್ರಯತ್ನ ಕೆಲವೆಡೆ ಯಶಸ್ವಿಯೆನಿಸಿವೆ. ಇದರಿಂದ ಅಪರಾಧ ಸಂಖ್ಯೆ ಇಳಿಮುಖವಾಗುತ್ತಿದೆ. ಶಾಲೆ, ಕಾಲೇಜು ಆವರಣದಲ್ಲಿ ಕ್ಯಾಮರಾ ಹುದುಗಿಸಿಡುವ ಪ್ರಸ್ತಾಪವನ್ನು ಪಾಲಕರು ಸ್ವಾಗತಿಸುತ್ತಿದ್ದಾರೆ. ದಾರಿದೀಪಗಳ ಅಡಿಯಲ್ಲೂ ಇಂಥ ಕ್ಯಾಮರಾ ಅಳವಡಿಸುವ ಕಾರ್ಯವನ್ನು ಕೆಲವೆಡೆ ಕೈಗೆತ್ತಿಕೊಳ್ಳಲಾಗಿದೆ. ಈ ಕ್ಯಾಮರಾಗಳು ತೆಗೆದ ಚಿತ್ರಗಳನ್ನು ಕಂಪ್ಯೂಟರ್‌ಗಳು ಸ್ಕ್ಯಾನ್‌ ಮಾಡುವುದರಿಂದ ಪ್ರತಿಯಾಬ್ಬರ ಮೇಲೆ ಇಗಾ ವಹಿಸಲು ಸಾಧ್ಯವಾಗುತ್ತಿದೆ. ಕ್ಯಾಮರಾಗಳು ತೆಗೆದ ಚಿತ್ರವನ್ನು ನೋಡಲು ಎಲ್ಲರಿಗೂ ಅವಕಾಶ ಕಲ್ಪಿಸಬೇಕೆಂಬ ಒತ್ತಾಯದಿಂದ ಬೇರೆಯವರ ಖಾಸಗಿ ಬದುಕಿನೊಳಗೆ ಮಧ್ಯ ಪ್ರವೇಶಿಸಿದಂತಾಗುವುದೆಂಬ ಕೂಗು ಕೇಳಿಬರುತ್ತಿದೆ. ಈ ಬದಲಾವಣೆಗಳ ಪರಿಣಾಮ ಎಂಥ ಸ್ವರೂಪದ್ದೆಂದು ಊಹಿಸುವುದೂ ಕಷ್ಟ.

ಆಧುನಿಕ ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆಯೆಂದರೆ, ಒಂದು ಸಮಸ್ಯೆಗೆ ಉತ್ತರ ಕಂಡುಹಿಡಿಯುವುದರೊಳಗೆ ನೂರಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಕಂಡುಕೊಂಡ ಉತ್ತರಗಳು ಕೂಡ ಸಮಸ್ಯೆಯ ಒಂದು ಸ್ವರೂಪವಾಗಿಯೇ ಪರಿಣಮಿಸಬಹುದು. ಆದರೆ ಈ ಸಮಸ್ಯೆ ಬಾಧಿಸುವ ಅವಧಿ ಮಾತ್ರ ತಾತ್ಕಾಲಿಕ ಎಂಬುದು ಹಿಂದಿನ ಅನೇಕ ಅನುಭವಗಳಿಂದ ವ್ಯಕ್ತವಾಗುತ್ತದೆ. ಇವುಗಳನ್ನು ಎದುರಿಸುವ, ಸಹಿಸಿಕೊಳ್ಳುವ ಶಕ್ತಿಯನ್ನು ತಂತ್ರಜ್ಞಾನವೇ ನೀಡುವುದರಿಂದ ಅಧೀರರಾಗುವ ಪ್ರಮೇಯವಿಲ್ಲ.

ಮಾಹಿತಿ ಜಾಲದಲ್ಲಿ ಸಿಗುವ ಸ್ಥಳಗಳಿಂದ ಮಾಹಿತಿಗಳಿಂದ ರೋಮಾಂಚಿತರಾಗುವ ನೀವು, ಅದು ಕೊಡುವ ಮೈಲ್ಡ್‌ ಕಿಕ್‌ಗಳನ್ನು ಅಷ್ಟೇ ಲಘುವಾಗಿ ಸಹಿಸಿಕೊಳ್ಳಬೇಕು. ನಿಜಕ್ಕೂ ಮಾಹಿತಿ ಹೆದ್ದಾರಿಯಲ್ಲಿ ಪಯಣಿಸುವುದು ಒಂದು ರೋಚಕ ಅನುಭವ. ಈ ಪಯಣ ನಿಮ್ಮದಾಗಲಿ. ದಾರಿ ನಿಮ್ಮ ಮುಂದಿದೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X