ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿಯ ನೆಪದಿಂದ ಯಾರೂ ಮಹಾನ್‌ ವ್ಯಕ್ತಿಯಾಗುವುದಿಲ್ಲ !

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಆತ ಮತ್ತೆ ಮತ್ತೆ ನೆನಪಾಗುತ್ತಾನೆ!

ಯಾವುದೇ ವಿಷಯವಾದರೂ ಸರಿ, ಅದರ ಬಗ್ಗೆ ಯೋಚಿಸಲಾರಂಭಿಸಿದರೆ ಆತನ ನೆನಪು ಇಣುಕದೇ ಇರದು. ಜತೆಗೆ ನಾವೆಷ್ಟೇ ಯೋಚಿಸಿದರೂ ನಮ್ಮ ಯೋಚನೆಯ ವ್ಯಾಪ್ತಿಗೆ ನಿಲುಕದ ವ್ಯಕ್ತಿ ಬಹುಶಃ ಆತ ಮಾತ್ರ. ಅಂಥ ಓಶೋ ಬಗ್ಗೆ ಹಿಂದೆಯೂ ನೆನಪಿಸಿ ಕೊಂಡಿದ್ದೆ. ಬರಿ ಹುಳುಕನ್ನೇ ಹುಡುಕುವ. ಸದಾ ಟೀಕಿಸಲು ಹಾತೊರೆಯುವ ಪತ್ರಕರ್ತರ ವಿಷಯ ಬಂದಾಗಲಂತೂ ಓಶೋನ ಬಗ್ಗೆ ಹೇಳಲೇಬೇಕಾಗುತ್ತದೆ.

ಆರೋಗ್ಯಕರ ಪತ್ರಿಕೋದ್ಯಮ ವ್ಯಕ್ತಿಯ ದೇಹ, ಮನಸ್ಸು ಹಾಗೂ ಆತ್ಮವನ್ನು ಆರೋಗ್ಯದಿಂದ ಇಟ್ಟಿರುತ್ತದೆ. ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಆರೋಗ್ಯಕರವಾಗಿರುತ್ತದೆ. ಪತ್ರಿಕೋದ್ಯಮದ ಮೂಲ ಕಾಳಜಿ ಉತ್ತಮ ಮಾನವ ಸಂಕುಲವನ್ನು ಸೃಷ್ಟಿಸುವುದೇ ಹೊರತು ಕೇವಲ ಸುದ್ದಿ ಬಿತ್ತರಿಸುವ, ವರದಿ ಮಾಡುವ ಮಾಧ್ಯಮ ಅಲ್ಲ. ಪತ್ರಿಕೋದ್ಯಮ ಸಾಹಿತ್ಯದ ಮಾಧ್ಯಮವೂ ಹೌದು. ಹೀಗಾದಾಗ ಮಾತ್ರ ಆರೋಗ್ಯಕರ ಪತ್ರಿಕೋದ್ಯಮ ಸಾಧ್ಯ. ನಿನ್ನೆಯ ಅಥವಾ ಹಳೆಯ ಸುದ್ದಿ ಸಹ ನಮಗೆ ಉಪಯುಕ್ತವಾಗಬೇಕು. ಅವುಗಳನ್ನು ಇಂದು ಓದುವಂತಿರಬೇಕು. ಇಂದಿನ ಪತ್ರಿಕೆ ಇಂದಿಗೇ ಸೀಮಿತವಾಗಿರಬಾರದು. ಪತ್ರಿಕೆ ಕೇವಲ ಸುದ್ದಿ ಮಾಧ್ಯಮವಾದರೆ, ಕೇವಲ ವರದಿಗಷ್ಟೇ ಸೀಮಿತವಾದರೆ ಅದು ಅಂದಿಗಷ್ಟೇ ಅನ್ವಯವಾಗಿ ಅನಂತರ ಅಪ್ರಸ್ತುತವಾಗುತ್ತದೆ. ಆದ್ದರಿಂದ ಪತ್ರಿಕೆ ಎಂದಿಗೂ ಅಪ್ರಸ್ತುತವಾಗದಂತೆ ನೋಡಿಕೊಳ್ಳಬೇಕು. ಪತ್ರಿಕೆ ಯಾವತ್ತೂ ತಾಜಾ ಇರಬೇಕು.

ಸಾಹಿತ್ಯದ ಮೂಲದ್ರವ್ಯ ಇದೇ. ದಾಸ್ತೋವಸ್ಕಿ, ಟಾಲ್‌ಸ್ಟಾಯ್‌, ಆ್ಯಂಟನ್‌ ಚಿಕಾವ್‌ ತರ್ಗೆನೆವ್‌, ರವೀಂದ್ರನಾಥ ಟಾಗೋರ್‌ ಮುಂತಾದವರ ಕೃತಿ ಈ ಮಾನವ ಜನಾಂಗವಿರುವ ತನಕ ಶಾಶ್ವತವಾಗಿರುತ್ತದೆ. ಅಷ್ಟೇ ಅಲ್ಲ ಸದಾ ತಾಜಾ ಆಗಿರುತ್ತದೆ.

ಪತ್ರಿಕೋದ್ಯಮಕ್ಕೂ ಇಂಥದೇ ತಾಜಾತನ, ಹೊಸತನ ಬೇಕು. ಈ ಗುಣಲಕ್ಷಣಗಳನ್ನು ಸೇರಿಸಬೇಕು. ಪತ್ರಿಕೆಯಲ್ಲಿ ಸುದ್ದಿಗೆ ಜಾಗವಿರಲೇಬೇಕು. ಆದರೆ ಅದೊಂದೇ ಪತ್ರಿಕೆಯ ಹೂರಣವಾಗಬಾರದು. ಅದೇ ಪತ್ರಿಕೆಯ ಸತ್ವವಾಗಬಾರದು. ವರದಿಯೆಂದರೇನು? ಸುದ್ದಿಯೆಂದರೆ ಏನು? ಅವುಗಳಿಂದ ಜನರಿಗೇನಾಗಬೇಕು ?ಯಾರೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದನ್ಯಾಕೆ ವರದಿ ಮಾಡಬೇಕು ? ಅದನ್ನು ಸುದ್ದಿಯನ್ನಾಗಿಸುವುದು ಅನಗತ್ಯವಲ್ಲವೇ?

Oshoಪತ್ರಕರ್ತರು ಸುದ್ದಿಯಲ್ಲದ ಸುದ್ದಿಯನ್ನು ಬರೆದು ಪುಟ ತುಂಬಿಸುತ್ತಾರೆ. ಇದರಿಂದ ಜಾಗವೂ ಹಾಳು, ಓದುಗರ ಸಮಯವೂ ಹಾಳು. ಅಗತ್ಯವಾದ ಸುದ್ದಿಯನ್ನು ತಿಳಿಸಬೇಕು. ನಮ್ಮಲ್ಲಿ ಎಷ್ಟು ಮಂದಿ ಕವಿಗಳಿದ್ದಾರೆ, ಕಲಾವಿದರಿದ್ದಾರೆ, ಬರಹಗಾರರಿದ್ದಾರೆ, ಸಂಗೀತಗಾರರಿದ್ದಾರೆ, ಅಧ್ಯಾತ್ಮಿಕ ಗುರುಗಳಿದ್ದಾರೆ, ಬರಹಗಾರರಿದ್ದಾರೆ, ಪತ್ರಕರ್ತರು ಅವರೆಲ್ಲರನ್ನೂ ಓದುಗರಿಗೆ ಪರಿಚಯಿಸಬಹುದು.

ಪತ್ರಕರ್ತರು ಬೇಕಂತಲೇ ರಾಜಕಾರಣಿಗಳಿಗೆ ಬೇಕಾಬಿಟ್ಟಿ ಪ್ರಚಾರ ಕೊಟ್ಟು, ಅನಗತ್ಯ ಪ್ರಾಧಾನ್ಯ ನೀಡಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದ್ದಾರೆ. ಅದಕ್ಕಾಗಿಯೇ ನಮ್ಮ ದೇಶ ಈಗ ಇವರಿಂದಾಗಿ ನರಳುವಂತಾಗಿದೆ. ಇಡೀ ಜಗತ್ತು ಸಂಕಷ್ಟದಲ್ಲಿದ್ದರೆ ಅದಕ್ಕೆ ರಾಜಕಾರಣಿಗಳೇ ಕಾರಣ. ಇದರ ಹೊಣೆಗಾರಿಕೆಯನ್ನು ಪತ್ರಕರ್ತರು ಹೊರಲೇಬೇಕು. ರಾಜಕಾರಣಿಗಳಿಗೆ ನೀಡುತ್ತಿರುವ ಜಾಗವನ್ನು ಕಡಿಮೆಗೊಳಿಸಿ ಅವರ ಜಾಗ ಎಲ್ಲಿ ಏನು ಹಾಗೂ ಎಷ್ಟು ಎಂಬುದನ್ನು ತೋರಿಸಿಕೊಡಬೇಕು. ಯಾರೋ ಯಾವುದೋ ದೇಶದ ಅಧ್ಯಕ್ಷರಾಗಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ಯಥೇಚ್ಛ ಪ್ರಚಾರ ಕೊಡುವುದು ಸರಿ ಅಲ್ಲ. ಅವರು ಯೋಗ್ಯರೋ, ಅರ್ಹರೋ ಎಂಬುದನ್ನು ಖಾತ್ರಿಪಡಿಸಿಕೊಂಡು ಅವರಿಗೆ ಪ್ರಚಾರ ಕೊಡಬೇಕು. ಅವರ ವ್ಯಕ್ತಿತ್ವವನ್ನು ನೋಡಿ ಪ್ರಚಾರ ನೀಡಬೇಕೆ ಹೊರತು ಅಧ್ಯಕ್ಷನಾದ ಮಾತ್ರಕ್ಕೆ ನೀಡಬೇಕಿಲ್ಲ.

ಅಬ್ರಹಾಂ ಲಿಂಕನ್‌ ಅಮೆರಿಕದ ಅಧ್ಯಕ್ಷನಾದಾಗ ಹೀಗೆ ಆಯಿತು. ಮೊದಲ ದಿನದ ಸೆನೆಟ್‌ ಸಭೆಯಲ್ಲಿ ಅಲ್ಲಿ ಸೇರಿದ್ದ ಸದಸ್ಯರು ಲಿಂಕನ್‌ನನ್ನು ಕಂಡು ಮುನಿಸಿಕೊಂಡಿದ್ದರು. ಆತ ಶಿಷ್ಟಾಚಾರ, ನಡತೆ ಗೊತ್ತಿಲ್ಲದ ಗೊಡ್ಡು ವ್ಯಕ್ತಿ ಎಂದು ಅವರೆಲ್ಲ ಭಾವಿಸಿದ್ದರು. ಲಿಂಕನ್‌ ಚಮ್ಮಾರನ ಮಗನಾಗಿದ್ದ. ಚಪ್ಪಲಿ ಹೊಲಿಯುವುದು ಲಿಂಕನ್‌ ತಂದೆಯ ಕಸುಬಾಗಿತ್ತು. ಒಬ್ಬ ಸದಸ್ಯ ಎಷ್ಟೊಂದು ಉದ್ವಿಗ್ನ ಗೊಂಡಿದ್ದನೆಂದರೆ ಆತನಿಗೆ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಆಗಿಲಿಲ್ಲ.ಸಭೆಯಲ್ಲಿ ಎದ್ದು ನಿಂತು,‘ಮಿಸ್ಟರ್‌ ಲಿಂಕನ್‌, ನೀವು ನಿಮ್ಮ ಚೊಚ್ಚಲ ಭಾಷಣವನ್ನು ಆರಂಭಿಸುವ ಮೊದಲು ನೀವು ಚಮ್ಮಾರನ ಮಗ ಎಂಬುದನ್ನು ಮರೆಯಬೇಡಿ ಎಂಬುದನ್ನು ನಿಮಗೆ ಜ್ಞಾಪಿಸಬಯಸುತ್ತೇನೆ’ ಎಂದು ಜೋರಾಗಿ ಹೇಳಿದ.

ಇಡೀ ಸಭೆ ಗೊಳ್ಳೆಂದು ನಕ್ಕಿತು. ಕೆಲವರು ಮೇಜು ತಟ್ಟಿ ಖುಷಿ ಪಟ್ಟರು. ಅಬ್ರಹಾಂ ಲಿಂಕನ್‌ನನ್ನು ಅವಹೇಳನ ಮಾಡುವುದು ಅವರೆಲ್ಲರ ಉದ್ದೇಶವಾಗಿತ್ತು. ಆದರೆ ಲಿಂಕನ್‌ನಂಥವನನ್ನು ಅವಹೇಳನ ಮಾಡುವುದು ಅಷ್ಟು ಸುಲಭ ಅಲ್ಲ. ಸದಸ್ಯರ ಗೌಜು, ಗದ್ದಲ ಕರಗುತ್ತಿದ್ದಂತೆ ಲಿಂಕನ್‌ ಎದ್ದುನಿಂತು ವಿನಯಪೂರ್ವಕವಾಗಿ ನುಡಿದ -‘ನಾನು ನಿಮಗೆ ಆಭಾರಿಯಾಗಿದ್ದೇನೆ, ನನ್ನ ತಂದೆಯ ಬಗ್ಗೆ ಹೇಳಿದ್ದಕ್ಕೆ. ನನ್ನ ದೌರ್ಬಲ್ಯಗಳೇನೆಂಬುದು ನನಗೆ ಗೊತ್ತು. ನಾನು ಅಧ್ಯಕ್ಷನಾಗಿರಬಹುದು. ಆದರೆ ನನ್ನ ತಂದೆಯಂಥ ಮಹಾನ್‌ ವ್ಯಕ್ತಿಯಾಗಲಾರೆ. ಆತ ಮಹಾನ್‌ ನಾನು ಹೋಲಿಕೆಗೂ ನಿಲುಕುವುದಿಲ್ಲ. ನನ್ನ ತಂದೆ ಅದ್ಭುತವಾದ ಕಲೆಗಾರ. ಅವನ ಮುಂದೆ ನಾನು ಹೋಲಿಕೆಗೂ ನಿಲುಕುವುದಿಲ್ಲ. ನನ್ನ ತಂದೆ ಅದ್ಭುತವಾದ ಕಲೆಗಾರ. ಅವನನ್ನು ಮೀರಿಸುವುದು ನನ್ನಿಂದ ಆಗದ ಕೆಲಸ. ಆದರೂ ಶಕ್ತಿಮೀರಿ ಪ್ರಯತ್ನಿಸುತ್ತೇನೆ.’

ಇಡೀ ಸಭೆಯಲ್ಲಿ ಮೌನ. ಸದಸ್ಯರೆಲ್ಲ ಆಘಾತಕ್ಕೊಳಗಾದವರಂತೆ ಸ್ತಬ್ಧರಾದರು. ಲಿಂಕನ್‌ನನ್ನು ಅವಮಾನಿಸುವುದು ಅಷ್ಟು ಸುಲಭವಲ್ಲವೆಂಬುದು ಅವರಿಗೆ ಮನವರಿಕೆಯಾಗಿತ್ತು. ಲಿಂಕನ್‌ ಅಷ್ಟಕ್ಕೆ ಸುಮ್ಮನಾಗಲಿಲ್ಲ. ತನ್ನ ತಂದೆಯ ಬಗ್ಗೆ ಪ್ರಸ್ತಾಪಿಸಿದ ಸದಸ್ಯನನ್ನು ಉದ್ದೇಶಿಸಿ,‘ನನ್ನ ತಂದೆಯನ್ನು ಹೇಗೆ ನೆನಪಿನಲ್ಲಿ ಇಟ್ಟುಕೊಂಡಿದ್ದೀಯಾ?ನನಗೆ ಚೆನ್ನಾಗಿ ಗೊತ್ತು, ನನ್ನ ತಂದೆ ನಿಮ್ಮ ಮನೆಗೆ ಹೋಗುತ್ತಿದ್ದುದನ್ನು ಬಲ್ಲೆ. ನನ್ನ ತಂದೆಯವರು ಹೊಲಿದ ಬೂಟುಗಳನ್ನೇ ನೀವು ಧರಿಸಿರಬೇಕಲ್ಲವೇ?ಅದು ನಿಮಗೆ ಚುಚ್ಚುತ್ತಿದೆಯೇ? ಚಪ್ಪಲಿ ರಿಪೇರಿ ಮಾಡುವುದು ನನಗೆ ಅಲ್ಪಸ್ವಲ್ಪ ಗೊತ್ತು. ನೀವು ಧರಿಸಿದ ಬೂಟುಗಳಲ್ಲಿರುವ ಮೊಳೆಯನ್ನು ತೆಗೆಯಬಲ್ಲೆ. ನಾನೇನು ಮಹಾಕಲಾವಿದನಲ್ಲ. ಆದರೆ ನನ್ನ ತಂದೆಯ ಜತೆ ಕೆಲಸ ಮಾಡಿದ ಅನುಭವ ಇದ್ದಿದ್ದರಿಂದ ನನಗೂ ಸ್ವಲ್ಪ ಕಸುಬು ಗೊತ್ತು. ಅಷ್ಟೇ ಅಲ್ಲ, ನನ್ನ ಆತ್ಮೀಯ ಸಹೋದ್ಯೋಗಿ ಸ್ನೇಹಿತರೇ, ನಿಮ್ಮ ಬೂಟಿಗೆ ಸಂಬಂಧಿಸಿದಂತೆ ಏನಾದರೂ ರಿಪೇರಿ ಕೆಲಸವಿದ್ದರೆ ದಯವಿಟ್ಟು ನನಗೆ ತಿಳಿಸಿ. ನಾನು ದುರಸ್ತಿ ಮಾಡಿಕೊಡುತ್ತೇನೆ’ ಎಂದು ವಿನೀತನಾಗಿ ನುಡಿದ.

ಎಲ್ಲರೂ ಗಪ್‌ಚುಪ್‌.

ಅಧ್ಯಕ್ಷನಾದವನು ಕೇವಲ ಅಧ್ಯಕ್ಷ ಎಂಬ ಪದವಿ ನಿಮಿತ್ತದಿಂದ ದೊಡ್ಡ ವ್ಯಕ್ತಿಯಾಗಲಾರ. ಆದರೆ ಗುಣಮಟ್ಟದಿಂದ ಆಗುತ್ತಾನೆ. ಆದ್ದರಿಂದ ಅವನ ಗುಣಮಟ್ಟದ ಬಗ್ಗೆ ಮಾತಾಡೋಣ ಹೊರತು ವ್ಯಕ್ತಿತ್ವದ ಬಗ್ಗೆ ಬೇಡ. ಪದವಿ ಬಲದಿಂದ ಯಾರೂ ಕೂಡ ಮಹಾನ್‌ ವ್ಯಕ್ತಿಯಾಗುವುದಿಲ್ಲ. ಆತ ದೇಶಕ್ಕೇನು ಮಾಡಿದ, ಆತನ ಸಾಮರ್ಥ್ಯವೇನು ಎಂಬುದು ಮುಖ್ಯವಾಗುತ್ತದೆ. ಈ ಅಂಶಗಳಿಗೆ ಒತ್ತು ಕೊಡಬೇಕು. ಇವನ್ನು ಮಾಡುವಂತೆ ಆತನನ್ನು ಪ್ರಚೋದಿಸಬೇಕು.

ನಿಮಗೊಂದು ವಿಷಯ ಹೇಳಬೇಕು. ದಿನಗಳು ಹೇಗೆ ಉರುಳುತ್ತವೆ. ಕಳೆದ 40ವರ್ಷಗಳು ಹೀಗೆ ಕಳೆದದ್ದನ್ನು ನಾನು ನೋಡಿದ್ದೇನೆ. ನನ್ನ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತು. ಕುಟುಂಬದ ಬಹುತೇಕ ಸದಸ್ಯರು ಜೈಲುವಾಸ ಅನುಭವಿಸಿದರು. ನಾವು ಆಗ ಚಿಕ್ಕಮಕ್ಕಳಾಗಿದ್ದೆವು. ನಾವೂ ಕಷ್ಟ ಅನುಭವಿಸಿದೆವು. ಆ ಸಂದರ್ಭದಲ್ಲಿ ನಾನು ನನ್ನ ತಂದೆಯವರನ್ನು ಕೇಳುತ್ತಿದ್ದೆ -‘ನೀವೆಲ್ಲ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೀರಲ್ಲ, ಅದು ನಿಮಗೆ ಸಿಗುವುದಾ? ಬ್ರಿಟಿಷರು ಇಲ್ಲಿಂದ ತೊಲಗಬಹುದು. ಆದರೆ ಅವರ ನಂತರ ನಮ್ಮನ್ನಾಳಲು ಬರುವ ನಮ್ಮವರು ಅವರಿಗಿಂತ ಉತ್ತಮ ಆಡಳಿತ ನೀಡಬಹುದಾ? ನೀವು ಗುಲಾಮಗಿರಿ ವಿರುದ್ಧ ಹೋರಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತು. ಆದರೆ ನೀವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೀರೆಂಬ ಕಲ್ಪನೆ ನಿಮಗಿರಲಿಕ್ಕಿಲ್ಲ. ನಿಮ್ಮ ಮುಂದೆ ಯಾವುದೇ ಸಕಾರಾತ್ಮಕ ಕಾರ್ಯಕ್ರಮಗಳಿಲ್ಲ.’

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕಾರಾತ್ಮಕ ಕಾರ್ಯಕ್ರಮಗಳಿರಲಿಲ್ಲ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದವು. ದಿನದಿಂದ ದಿನಕ್ಕೆ ದೇಶ ಅಧೋಗತಿಗೆ ಇಳಿಯುತ್ತಿದೆ. ಕಳೆದ 30-40 ವರ್ಷಗಳ ಹಿಂದೆ ದೇಶದ ಜನಸಂಖ್ಯೆ 40ಕೋಟಿಯಷ್ಟಿತ್ತು. ನಾನು ಜನಸಂಖ್ಯಾ ನಿಯಂತ್ರಣದ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿದೆ. ಈ ಬಗ್ಗೆ ಎಲ್ಲೆಡೆ ಭಾಷಣ ಮಾಡಿದರೆ ಜನ ಕಲ್ಲೆಸೆದರು. ಸಭೆಗೆ ಅಡಚಣೆಯುಂಟು ಮಾಡಿದರು. ಕೆಲವು ಊರುಗಳಿಗೆ ಹೋಗಲು ಬಿಡಲಿಲ್ಲ. ರೈಲಿನಿಂದ ಇಳಿಯುವುದಕ್ಕೆ ಅಡ್ಡಿ ಮಾಡಿದರು. ಬೆದರಿಕೆಯಾಡ್ಡಿದರು. ಒಮ್ಮೆಯಂತೂ ಇನ್ನೂರು ಮಂದಿ ರೈಲು ನಿಲ್ದಾಣದಲ್ಲಿ ನಿಂತು ನಾನು ಇಳಿಯಲು ಬಿಡಲಿಲ್ಲ.

ಈಗ ದೇಶದ ಜನಸಂಖ್ಯೆ 90 ಕೋಟಿ ದಾಟ್ಟಿದೆ. ಶತಮಾನದ ಆರಂಭಕ್ಕೆ ನೂರು ಕೋಟಿ ಮುಟ್ಟುತ್ತದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಚೀನಾವನ್ನು ಹಿಂದಕ್ಕೆ ಹಾಕಲಿದೆ. ಇಲ್ಲಿಯತನಕ ಮೊದಲ ಸ್ಥಾನ ಚೀನಾಕ್ಕಿತ್ತು. ಇನ್ನು ಭಾರತಕ್ಕೆ. ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಚೀನಾ ಯಶಸ್ವಿಯಾಯಿತು. ಆದರೆ ನಮ್ಮ ರಾಜಕಾರಣಿಗಳಿಗೆ ಧಮ್ಮಿಲ್ಲ. ಜನರಿಗೆ ಸತ್ಯ ಹೇಳುವ ಎದೆಗಾರಿಕೆ ಅವರಿಗಿಲ್ಲ. ಏಕೆಂದರೆ ಅವರಿಗೆ ಜನರ ವೋಟು ಬೇಕಲ್ಲ.

ಆದರೆ ಪತ್ರಕರ್ತರು ಯಾರ ವೋಟನ್ನೂ ನಂಬಿ ಬದುಕಬೇಕಿಲ್ಲ. ಜನರಿಗೆ ಸತ್ಯವನ್ನು ತಿಳಿಸಬೇಕು. ಜನಪ್ರಿಯವಲ್ಲದ ಸಂಗತಿಗಳನ್ನೆತ್ತಿಕೊಂಡು ಹೋರಾಟ ನಡೆಸುತ್ತಿರುವ ಜನರ ಬಗ್ಗೆ ಪತ್ರಕರ್ತರು ಬರೆಯಬೇಕು. ಇದನ್ನು ನಾನು ಆರೋಗ್ಯಕರ ಪತ್ರಿಕೋದ್ಯಮ ಎಂದು ಕರೆಯುತ್ತೇನೆ.

ನೀವು ಇನ್ನೊಂದು ಪ್ರಶ್ನೆ ಕೇಳಿದಿರಿ -‘ಸಕಾರಾತ್ಮಕ ಸುದ್ದಿಯಿಂದ ಪತ್ರಿಕೋದ್ಯಮ ಬದುಕಿ ಉಳಿಯಬಹುದಾ?’ ನಾನು ಹಾಗೆ ಹೇಳುತ್ತಿಲ್ಲ. ನಕಾರಾತ್ಮಕ ಸುದ್ದಿಯಿಂದಲೇ ಬದುಕಿ ಉಳಿಯಲು ಪ್ರಯತ್ನಿಸಬೇಡಿ ಎಂದು ಹೇಳಬಯಸುತ್ತೇನೆ. ತನ್ನೆಲ್ಲ ಸೌಂದರ್ಯದ ಜತೆ ಸಕಾರಾತ್ಮಕತೆ ಹೊರಬರಲಿ. ನಕಾರಾತ್ಮಕತೆಯನ್ನು ಹಿಂದಕ್ಕೆ ತಳ್ಳಿ. ಸಕಾರಾತ್ಮಕವಾಗಿರಿ ಅಥವಾ ನಕಾರಾತ್ಮಕವಾಗಿರಿ ಎಂದು ನಾನು ಹೇಳುತ್ತಿಲ್ಲ. ಆದರೆ ವಾಸ್ತವವಾದಿಯಾಗಿರಿ. ಅದು ಬಹಳ ಮುಖ್ಯ.

ನಕಾರಾತ್ಮಕತೆ ಜೀವನದ ಒಂದು ಭಾಗ. ಹೌದು, ಸಾವು ಜೀವನದ ಒಂದು ಭಾಗ, ಹಾಗೆಂದ ಮಾತ್ರಕ್ಕೆ ಎಲ್ಲರ ಸಮ್ಮುಖದಲ್ಲಿಯೇ ನಮ್ಮ ಸಮಾಧಿಯನ್ನು ನಾವೇ ತೋಡಿಕೊಳ್ಳಬೇಕು ಎಂದಲ್ಲ. ಊರಿನ ಹೊರಗೆ ಸಮಾಧಿಯನ್ನು ನಿರ್ಮಿಸಿಕೊಳ್ಳಿ. ಅಲ್ಲಿಗೆ ನೀವು ಹೇಗಿದ್ದರೂ ಒಂದೇ ಸಲ ಹೋಗುತ್ತೀರಿ ಹಾಗೂ ವಾಪಸ್‌ ಬರುವುದಿಲ್ಲ. ಹೀಗಿರುವಾಗ ಎಲ್ಲರ ಮಧ್ಯದಲ್ಲಿಯೇ ಏಕೆ ನಿರ್ಮಿಸಿಕೊಳ್ಳುತ್ತೀರಿ?

ಹೀಗೆ ಮಾಡುವುದರಿಂದ ನಮ್ಮ ಜೀವನದಿಂದ ಕ್ರಮೇಣ ನಕಾರಾತ್ಮಕ ಸಂಗತಿಗಳು ದೂರ ಸರಿಯುತ್ತದೆ. ಸಕಾರಾತ್ಮಕ ಸಂಗತಿಗಳು ನಮ್ಮ ಮುಂದಕ್ಕೆ ಬರುತ್ತದೆ. ಇದು ಕೂಡ ಆರೋಗ್ಯಕರ ಪತ್ರಿಕೋದ್ಯಮದ ಆಶಯವಾಗಬೇಕು. ಸಕಾರಾತ್ಮಕತೆಯೇ ಗುರಿಯಾಗಬೇಕು. ನಕಾರಾತ್ಮಕತೆಯನ್ನು ದಾಟಿ ಮುಂದಕ್ಕೆ ಹೋಗಬೇಕು.

ಪತ್ರಿಕೋದ್ಯಮದಲ್ಲಿ ಕೂಡ ಇದನ್ನು ಸಾಧಿಸಬೇಕು. ಪತ್ರಿಕೋದ್ಯಮದ ಎಲ್ಲ ಲಾಭ-ಹಾನಿ ಲೆಕ್ಕಾಚಾರದ ನಡುವೆಯೂ ಇದನ್ನು ಸಾಧಿಸಲು ಸಾಧ್ಯವಿದೆ. ಆದರೆ ಗಟ್ಟಿ ಮನಸ್ಸು ಮಾಡಬೇಕು. ಯಾರಾದರೊಬ್ಬರು ದಿಟ್ಟ ಹೆಜ್ಜೆಯಿಟ್ಟರೆ ಉಳಿದವರು ಅನುಸರಿಸುತ್ತಾರೆ.

(ಸ್ನೇಹಸೇತು : ವಿಜಯ ಕರ್ನಾಟಕ)


ಪೂರಕ ಓದಿಗೆ-
  • ಪತ್ರಕರ್ತನಾದವನು ಸೂಕ್ಷ್ಮ ಸಂವೇದನೆ ಕಳೆದುಕೊಂಡಾಗ ಏನಾಗುತ್ತೆ ಅಂದ್ರೆ..

  • ಪತ್ರಕರ್ತ ಎಂಬ ಬಿರುದು ಚೆಂದವೇ ಹೊರತು ಬೃಹಸ್ಪತಿ ಎಂಬ ಪಟ್ಟವಲ್ಲ !

  • ಕತ್ತೆಯನ್ನೇ ‘ಕುದುರೆ’ ಎಂದು ನಂಬಿಸುವ ಟಿವಿ ಪತ್ರಿಕೋದ್ಯಮದ ಕುರಿತು....

  • ಓಶೋ -ಇಂದೊಂದು ಬಾಕಿ ಇತ್ತೆಂದು ಅಂದುಕೊಂಡಿದ್ದರೆ...
  • ಮುಖಪುಟ / ಅಂಕಣಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X