ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು ಲೋಹಿಯಾ ಭಾಷಣದ ಟಿಪ್ಪಣಿಯನ್ನು ಪೆಟ್ಟಿಗೆಯಲ್ಲಿ ತುಂಬಿಕೊಂಡು ಬಂದಿದ್ದರು!

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಅಂದು ಅವರು ಅಸಹಾಯಕರಾಗಿ ಕುಳಿತುಬಿಟ್ಟರು!

ತಮಾಮ್‌ ಸದಸ್ಯರೆಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಯಾರು ಏನು ಮಾತಾಡುತ್ತಿದ್ದಾರೆಂಬುದೇ ಕೇಳುತ್ತಿರಲಿಲ್ಲ. ಅವರಿವರ ನಡುವಿನ ದಬಾದುಬಿ ಯಾವ ಹಂತ ತಲುಪಿತ್ತೆಂದರೆ ಕೈಕೈ ಮಿಲಾಯಿಸುವುದೊಂದು ಬಾಕಿ ಇತ್ತು. ಇದನ್ನು ಯಾರಿಂದಲೂ ನಿಯಂತ್ರಿಸುವ ಹಾಗಿರಲಿಲ್ಲ.

ಸಭಾಧ್ಯಕ್ಷರ ಪೀಠದಲ್ಲಿ ಕುಳಿತ ಸೋಮನಾಥ ಚಟರ್ಜಿ ದುಸಮುಸ ಉಸಿರುಬಿಡುತ್ತಾ ಸಿಟ್ಟಿನಿಂದ ಕೈ ಹಿಸುಕಿತ್ತಾ, ಅಸ್ತ್ರ ಗಳಿಲ್ಲದೇ ಕಂಗಾಲಾದ ಅಸಹಾಯಕ ಯೋಧನಂತೆ ಕುಸಿದು ಕುಳಿತಿದ್ದರು. ಕೊನೆಗೆ ಬೇರೆ ದಾರಿಯಿಲ್ಲದೇ ಸದನವನ್ನು ಮುಂದೂಡಿದರು. ಅಂದು ಅವರು ನಾಲ್ಕನೇ ಬಾರಿಗೆ ಮುಂದೂಡಿದ್ದರು. ‘ಝೂಟ್‌ ಬೋಲ್ತಾ ಹೈ, ಯಹ್‌ ನಾಟಕ್‌ಬಾಜಿ ಕರತಾ ಹೈ. ಯೇ ತೇರಿ ಬಾಪ್‌ ಕಾ ಮೊಹಲ್ಲಾ ಹೈಕ್ಯಾ? ಚುಪ್‌ ಚುಪ್‌, ಆಪ್‌ ಲೋಗ್‌ ಹತ್ಯಾರ್‌, ಖಾತಿಲ್‌, ಚೋರ್‌, ನಾಮರ್ದ್‌ ಹೈ...’ ಎಂದು ಸದಸ್ಯರು ಬೊಬ್ಬಿಡುತ್ತಿದ್ದರೆ, ಚಟರ್ಜಿ ‘ಯೇ ಕ್ಯಾ ಹೋ ರಹಾ ಹೈ’ಎಂದು ಹೇಳುತ್ತಿದ್ದರೆ ಪಕ್ಕದಲ್ಲಿ ನಿಂತ ಜವಾನನು ಕೂಡ ಕೇಳಿಸಿಕೊಳ್ಳುತ್ತಿರಲಿಲ್ಲ.

THE INDIAN PARLIAMENTಸದನ ಪುನಃ ಸೇರಿತು. ಚಟರ್ಜಿ ಹೇಳಿದರು-‘ನಾನು ನನ್ನ ಎರಡೂ ಕೈಗಳನ್ನು ಜೋಡಿಸಿ ಹೇಳುತ್ತೇನೆ. ಈ ಸದನದ ಮರ್ಯಾದೆಯನ್ನು ಹಾಳುಗೆಡವಬೇಡಿ. ನಿಮ್ಮ ವರ್ತನೆಯಿಂದ ಮನಸ್ಸು ರೋಸಿ ಹೋಗಿದೆ. ಹೃದಯ ಕಲ್ಲವಿಲಗೊಂಡಿದೆ. ಎಲ್ಲರಿಗೂ ಮಾತಾಡಲು ಹಕ್ಕಿದೆ. ಎಲ್ಲರ ಮಾತುಗಳನ್ನೂ ಕೇಳಿಸಿಕೊಳ್ಳೋಣ. ಇತ್ತೀಚೆಗೆ ಹಿರಿಯ ಸ್ವಾತಂತ್ರ ಯೋಧರು ಸಿಕ್ಕಿದ್ದರು. ಅವರ ಕಣ್ಣಂಚಿನಲ್ಲಿ ನೀರಿತ್ತು. ಸಂಸದರ ವರ್ತನೆ ಕಂಡು ಮನನೊಂದು ನುಡಿದರು. ‘ದೇಶದ ಮಕ್ಕಳಿಗೆ ಸಂಸತ್ತಿನ ಕಲಾಪವನ್ನು ಹತ್ತು ದಿನ ತೋರಿಸಿದರೆ ಪ್ರಜಾಪ್ರಭುತ್ವವೆಂದರೆ ಹೊಡೆದಾಡುವುದು, ರೇಗುವುದು, ಬೈಯುವುದು ಎಂಬ ನಿರ್ಧಾರಕ್ಕೆ ಬರಬಹುದು. ದಯವಿಟ್ಟು ಟಿವಿಯಲ್ಲಿ ಸಂಸತ್‌ ಕಲಾಪ ತೋರಿಸಬೇಡಿ. ಸಂಸತ್ತಿನೊಳಗೆ ನೀವು ಏನು ಬೇಕಾದರೂ ಮಾಡಿಕೊಳ್ಳಿ. ನಿಮ್ಮ ಕಲಾಪ ಅಶ್ಲೀಲ ಸಿನಿಮಾಕ್ಕಿಂತ ಘೋರ’ ಎಂದು ದಬಾಯಿಸಿದರು. ಸ್ವಲ್ಪ ಹೊತ್ತು ಯೋಚಿಸಿದೆ. ಅವರ ಮಾತು ಸತ್ಯ ಎನಿಸಿತು’ ಚಟರ್ಜಿ ಮಾತು ಕೇಳಿದ ಸದಸ್ಯರು ಎರಡು ನಿಮಿಷ ಸುಮ್ಮನಿದ್ದರು. ಕಲಾಪ ಶುರುವಾಯಿತು. ಶುರುವಾಯಿತು ಜಗಳ, ರಗಳೆ, ವಾಗ್ಯುದ್ಧ , ಕೋಲಾಹಲ. ಆನಂತರ ಸಭಾತ್ಯಾಗ. ಅವರು ಅಸಹಾಯಕರಾಗಿ ಕುಳಿತುಬಿಟ್ಟರು!

ಸಂಸತ್‌ ಕಲಾಪ ಯಾವ ಪರಿ ಹದಗೆಟ್ಟು ಹೋಗಿದೆಯೆಂದರೆ ಚರ್ಚೆ, ಸಂವಾದ, ಅಭಿಪ್ರಾಯ ವಿನಿಮಯ, ವಿಚಾರ ಕೊಡು-ಕೊಳ್ಳುವಿಕೆಯೆಲ್ಲ ಹೆಚ್ಚೂಕಮ್ಮಿ ನಿಂತು ಹೋಗಿವೆ. ಒಮ್ಮೆ ಒಂದು ಉತ್ತಮ ಚರ್ಚೆಯಾಯಿತೆನ್ನಿ. ಸದನದಲ್ಲಿ ನೆಟ್ಟಗೆ ಇಪ್ಪತ್ತು ಮಂದಿ ಇರುವುದಿಲ್ಲ. ಅವರಲ್ಲಿ ಎಂಟು ಮಂದಿ ಆಕಳಿಸುತ್ತಿರುತ್ತಾರೆ, ತೂಕಡಿಸುತ್ತಿರುತ್ತಾರೆ. ಯಾವುದೇ ವಿಧೇಯಕದ ಮೇಲೆ ಚರ್ಚೆಯಾಗದೇ ಅಂಗೀಕೃತವಾಗುತ್ತದೆ. ಪೇಟೆಂಟ್‌ನಂಥ ಪ್ರಮುಖ ಹಾಗೂ ಗಂಭೀರ ವಿಷಯದ ಮೇಲೆ ಚರ್ಚೆಯಾಗುವಾಗ ಅಂದು ಲೋಕಸಭೆಯಲ್ಲಿ ಹಾಜರಿದ್ದ ಸದಸ್ಯರ ಸಂಖ್ಯೆ ಮೂವತ್ತೆಂಟು. ಉಳಿದ 504 ಸದಸ್ಯರು ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ದೂಳವುಳಿದಿದ್ದರು. ಎಲ್ಲಿಗೆ ಬಂತು ಸಂಸತ್ತು? ಎಲ್ಲಿಗೆ ಹೋದರು ಸಂಸದರು?

ಯಾವುದೇ ಸಂಸದರನ್ನು ಕೇಳಿ, ನಮ್ಮ ಬೀದಿಗೆ ದೀಪ ಇಲ್ಲ, ನೀರಿಲ್ಲ ಅಂತ ಹೇಳಿ. ತಟ್ಟನೆ ಅವರು ಹೇಳುತ್ತಾರೆ ‘ಅದು ನಮ್ಮ ಕೆಲಸ ಅಲ್ಲ. ನಮ್ಮದೇನಿದ್ದರೂ ಶಾಸನ ರೂಪಿಸುವುದು.’ ಆದರೆ ಶಾಸನ ರೂಪಿಸಬೇಕಾದವರು, ರೂಪಿಸಬೇಕಾದಲ್ಲಿ ಇರುವುದೇ ಇಲ್ಲ. ಲೋಕಸಭೆಯ ಹಾಜರಾತಿ ಪುಸ್ತಕ ತೆರೆದು ನೋಡಿದರೆ ್ಫಗೊತ್ತಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ , ಸದನದಲ್ಲಿ ಬಲಾಬಲ ಪರೀಕ್ಷೆ ಸಮಯದಲ್ಲಿ ಸದಸ್ಯರು ಪೂರ್ಣ ಸಂಖ್ಯೆಯಲ್ಲಿರುವುದನ್ನು ಬಿಟ್ಟರೆ, ಉಳಿದ ಸಂದರ್ಭದಲ್ಲಿ ಉಪಸ್ಥಿತರಿರುವ ಸರಾಸರಿ ಸದಸ್ಯರ ಸಂಖ್ಯೆ 80. ಅಂದರೆ, 450 ಸಂಸತ್ಸದಸ್ಯರು ಸದಾಗೈರು! ವರ್ಷದಿಂದ ವರ್ಷಕ್ಕೆ ಚಕ್ಕರ್‌ ಏರುತ್ತಿದೆ. ಶಾಲೆಯಲ್ಲಿ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೊಳಿಸಿದಂತೆ ಸಂಸದರ ಹಾಜರಾತಿ ಹೆಚ್ಚಿಸಲು ಏನು ಮಾಡಬೇಕು ಎಂದು ಚಟರ್ಜಿ ಕೇಳಿರುವುದು ಗಂಭೀರ ವಿಷಯ.

ಅನಂತಶಯನಮ್‌ ಅಯ್ಯಂಗಾರ್‌ ಲೋಕಸಭೆಯ ಸ್ಪೀಕರ್‌(1956-1962)ಆಗಿದ್ದರು. ರಾಜ್ಯಸಭೆಯ ಬಗ್ಗೆ ಸದನದಲ್ಲಿ ಚರ್ಚೆಯಾಗುತ್ತಿತ್ತು. ಸದನಕ್ಕೆ ತಡವಾಗಿ ಆಗಮಿಸಿದ ನಾಲ್ವರು ಸದಸ್ಯರನ್ನುದ್ದೇಶಿಸಿ, ‘ ತಡವಾಗಿ ಆಗಮಿಸುವುದು ಸದಸ್ಯರಿಗೆ ಶೋಭಿಸುವುದಿಲ್ಲ. ಗಹನ ವಿಷಯ ಚರ್ಚೆಯಾಗುವಾಗ ಎಲ್ಲರೂ ಹಾಜರಿಬೇಕು. ಇದು ನಿಮ್ಮ ಜವಾಬ್ದಾರಿ. ಮತ್ತೊಮ್ಮೆ ನನ್ನಿಂದ ಹೀಗೆ ಹೇಳಿಸಿಕೊಳ್ಳಬೇಡಿ’ಎಂದು ಎಚ್ಚರಿಸಿದ್ದರು. ಅಯ್ಯಂಗಾರರು ಪೀಠಕ್ಕೆ ಬರುವ ಹೊತ್ತಿಗೆ ಇಡೀ ಸದನ ತುಂಬಿರುತ್ತಿತ್ತು. ಪ್ರಧಾನಿ ಆಸೀನರಾಗುತ್ತಿದ್ದರು. ತಡವಾಗಿ ಆಗಮಿಸುವುದು ಅನುಚಿತ ಎಂಬ ಭಾವನೆಯಿತ್ತು. ನಾಲ್ಕೈದು ದಿನಗಳು ಗೈರುಹಾಜರಾಗಬೇಕಾದ ಸಂದರ್ಭದಲ್ಲಿ ಸ್ಪೀಕರ್‌ ಅನುಮತಿ ಕೋರಬೇಕಾಗುತ್ತಿತ್ತು.

ಆಗ ಸದನದಲ್ಲಿ ಗದ್ದಲ, ಕಾವೇರಿದ ಚರ್ಚೆಯಾಗುತ್ತಿರಲಿಲ್ಲ ಎಂದಲ್ಲ. ಆಗುತ್ತಿತ್ತು. ಆದರೆ ಅವು ಶಿಸ್ತು, ಸೌಜನ್ಯ, ಶಿಷ್ಟಾಚಾರದ ಪರಿಧಿಯಾಳಗಿರುತ್ತಿದ್ದವು. ಮುಂಡ್ರಾ ಹಗರಣ, ನಗರವಾಲ ಪ್ರಕರಣದಂಥ ವಿಷಯ ಬಂದಾಗ ವಾಗ್ಯುದ್ಧಗಳಾಗುತ್ತಿದ್ದವು. ಸಭಾತ್ಯಾಗಗಳಾಗುತ್ತಿದ್ದವು. ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವೆ ಜಟಾಪಟಿಗಳಾಗುತ್ತಿದ್ದವು. ಆದರೆ ಅವು ವಿಷಯ ಸಂಬಂಧಿತವಾಗಿರುತ್ತಿದ್ದವೇ ಹೊರತು ಅವೇ ನಿತ್ಯದ ಆಚರಣೆಗಳಾಗುತ್ತಿರಲಿಲ್ಲ.

ಅಂದು ನಡೆಯುತ್ತಿದ್ದ ಚರ್ಚೆಗಳಾದರೂ ಹೇಗಿರುತ್ತಿದ್ದವು? ಸದಸ್ಯನೊಬ್ಬ ಮಾತಿಗೆ ಎದ್ದು ನಿಂತರೆ ಇಡೀ ಸದನ ಕುಂತು ಕೇಳುತ್ತಿತ್ತು. ಮಾತುಗಾರರೂ ಅಂಥವರೇ ಇದ್ದರು. ನೆಹರು, ಎನ್‌. ಜಿ. ರಂಗಾ, ಗೋವಿಂದ ವಲ್ಲಭ್‌ ಪಂತ್‌, ರಾಮ ಮನೋಹರ ಲೋಹಿಯಾ, ಶ್ಯಾಮ ಪ್ರಸಾದ್‌ ಮುಖರ್ಜಿ, ಭೂಪೇಶ್‌ ಗುಪ್ತಾ, ಎಚ್‌.ವಿ.ಕಾಮತ್‌, ರಾಜಕುಮಾರಿ ಅಮೃತ್‌ ಕೌರ್‌, ಆಚಾರ್ಯ ಜೆ.ಬಿ.ಕೃಪಲಾನಿ, ಕೃಷ್ಣ ಮೆನನ್‌, ಪಿ.ಗೋವಿಂದ ಮೆನನ್‌, ಎಚ್‌. ಎನ್‌.ಕುಂಜ್ರು, ರೇಣು ಚಕ್ರವರ್ತಿ, ಡಿ.ಸಿ.ದೇಶಮುಖ್‌, ಕೆ.ಎಂ.ಮುನ್ಸಿ, ಡಾ.ಕರಣ್‌ಸಿಂಗ್‌, ಸಿ. ಸುಬ್ರಮಣ್ಯಂ, ಕೆ.ಟಿ. ಶಹಾ, ಪಿಲೂ ಮೋದಿ, ಜಿ.ವಿ.ಮಾಲವಂಕರ್‌, ಎಸ್‌.ಎ.ಡಾಂಗೆ, ಫ್ರಾಂಕ್‌ ಅಂಥೋನಿ, ಇಂದಿರಾಗಾಂಧಿ, ವಾಜಪೇಯಿ, ಮಧು ದಂಡವತೆ ಮುಂತಾದ ದಿಗ್ಗಜರಿದ್ದರು. 22 ಜನವರಿ 1947ರಂದು ಜವಾಹರಲಾಲ್‌ ನೆಹರು ಸಂಸತ್ತಿನಲ್ಲಿ ಮಾಡಿದ ಭಾಷಣ ಕೇಳಬೇಕು. ವಿಷಯ-ಸಂವಿಧಾನದ ಉದ್ದೇಶಗಳು. ಅಂದು ನೆಹರು ಭಾಷಣ ಮುಗಿಸಿದಾಗ ಸದಸ್ಯರೆಲ್ಲ ಬಂದು ಹಸ್ತಲಾಘವ ಮಾಡಿ ಪ್ರಶಂಸಿಸಿದ್ದರು. ನೆಹರು ಸುಮಾರು ಎರಡು ಗಂಟೆಗಳ ಕಾಲ ಮಾತಾಡಿದ್ದರು. ಸಂವಿಧಾನದ ಕಲ್ಪನೆಯನ್ನು ಭಾರತದ ಜನಜೀವನ, ಇತಿಹಾಸ, ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದರು. ಇದು ನಮ್ಮ ಸಂಸತ್ತಿನಲ್ಲಿ ಮಾಡಲಾದ ಅತ್ಯುತ್ತಮ ಭಾಷಣಗಳಲ್ಲೊಂದು ಎಂದು ಪಾರ್ಲಿಮೆಂಟ್‌ ಪರಿಣತ ಡಾ.ಸುಭಾಷ್‌.ಸಿ.ಕಶ್ಯಪ್‌ ಹೇಳಿದ್ದಾರೆ.

ಭಾರತೀಯನೊಬ್ಬನ ದಿನದ ದುಡಿಮೆ ಎಷ್ಟು, ದುಡಿಮೆಗೆ ಪ್ರತಿಫಲ ಎಷ್ಟಿರಬೇಕೆಂಬ ಬಗ್ಗೆ ಡಾ.ಲೋಹಿಯಾರ ಭಾಷಣ ಯಾರೂ ಮರೆಯುವುದಿಲ್ಲ. ಅಂದು ಅವರು ಎರಡೂ ಮುಕ್ಕಾಲು ಗಂಟೆ ಮಾತಾಡಿದ್ದರು. ತಾವು ಮಾತನಾಡಬೇಕಿರುವ ವಿಷಯದ ಟಿಪ್ಪಣಿಗಳನ್ನು ಮೂರು ಪೆಟ್ಟಿಗೆಗಳಲ್ಲಿ ತುಂಬಿಕೊಂಡು ಬಂದಿದ್ದರು. ಅವರ ತಯಾರಿ ಕಂಡು ಸ್ಪೀಕರ್‌ ಸಮಯ ನೀಡಿದ್ದರು. ಸದಸ್ಯರು ಮೇಜು ಕುಟ್ಟಿ ಡಾ.ಲೋಹಿಯಾಗೆ ಅನುವುಮಾಡಿಕೊಟ್ಟಿದ್ದರು.

ಲೋಕಸಭೆ ವೃತ್ತಾಂತದ ಬಗ್ಗೆ ಡಾ.ಕಶ್ಯಪ್‌ ಹೀಗೆ ಬರೆದಿದ್ದಾರೆ- ‘ ಸಂಸತ್ತಿನಲ್ಲಿ ಮಾತನಾಡಲು ಅಂದಿನ ಸದಸ್ಯರಿಗೆ ಉತ್ಸಾಹ ಇತ್ತು . ಕೇಳಲು ಸಹ. ನಾಳೆ ಯಾರು ಮಾತಾಡುತ್ತಾರೆಂಬ ಬಗ್ಗೆ ಮೊಗಸಾಲೆಯಲ್ಲಿ ಚರ್ಚೆಗಳಾಗುತ್ತಿದ್ದವು. ಅಂಥ ಯಾವ ಚಟುವಟಿಕೆ ಇಂದು ಕಾಣುವುದಿಲ್ಲ’ ಈಗ ಏನಾಗಿದೆ ನೋಡಿ. ನಮ್ಮ ಕಣ್ಣ ಮುಂದೆಯೇ ಪಾರ್ಲಿಮೆಂಟ್‌ ಘನತೆ ಮೂರಾಬಟ್ಟೆಯಾಗಿದೆ. ಕಲಾಪವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸ್ಪೀಕರ್‌ಗೆ ಕಲಾಪ ನಿಯಂತ್ರಿಸಲು ಆಗುತ್ತಿಲ್ಲ. ಸಭಾತ್ಯಾಗ, ಬಹಿಷ್ಕಾರಗಳೇ ಪ್ರಮುಖ ಚಟುವಟಿಕೆ. ಪ್ರಲಾಪವೇ ಕಲಾಪ.

ಸಂಸದರನ್ನು ಕಲಾಪಕ್ಕೆ ಕರೆತರುವ, ಸಂವಾದದಲ್ಲಿ ಪಾಲ್ಗೊಳ್ಳುವಂತೆ ಮಾಡುವ, ಯಾವ ನಿಯಮಗಳೂ ನಮ್ಮಲ್ಲಿಲ್ಲ. ಐದು ಸಲ ಆಯ್ಕೆಯಾದ ಸಂಸದ ಸಹಿತ ಒಂದೇ ಒಂದು ಸಲ ಬಾಯಿ ತೆರೆಯದ್ದನ್ನು (ಆಕಳಿಸುವಾಗ ಬಿಟ್ಟು) ನಾವು ನೋಡಿದ್ದೇವೆ. ನೀನ್ಯಾಕೆ ಹೀಗೆ ಎಂದು ಯಾರೂ ಕೇಳುವುದಿಲ್ಲ ಅಥವಾ ಕೇಳುವಂತಿಲ್ಲ. ಎಲ್ಲ ಸವಲತ್ತು, ಸೌಕರ್ಯಗಳನ್ನು ಸ್ವೀಕರಿಸಿ ಎದ್ದು ಹೋಗುತ್ತಾರೆ. ಸಂಸದರ ಸಾಧನೆ, ಕಾರ್ಯಕ್ಷಮತೆ ಪರಿಶೀಲಿಸುವ ಯಾವ ಮಾನದಂಡವೂ ಇಲ್ಲ. ಲಕ್ಷಾಂತರ ರೂಪಾಯಿ ಭತ್ತೆ ಪಡೆಯುವ ಸಂಸದರನ್ನು ಯಾರೂ ಪ್ರಶ್ನಿಸುವಂತಿಲ್ಲ. ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಸತತ ಗೈರು ಹಾಜರಾಗುವ ಸದಸ್ಯರನ್ನು ಸ್ಪೀಕರ್‌ ಬಹಿರಂಗವಾಗಿ ಛೇಡಿಸುವ ಪರಿಪಾಠವಿದೆ. ನಮ್ಮಲ್ಲಿ ಅದಿಲ್ಲ. ಇದ್ದಿದ್ದರೆ ಈಗ ಇಡೀ ಕಲಾಪವನ್ನು ಸ್ಪೀಕರ್‌ ಅದಕ್ಕೇ ಮೀಸಲಿಡಬೇಕಾದೀತು. ಯಾವುದನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯುತ್ತೇವೋ ಅದು ತಲುಪಿರುವ ಸ್ಥಿತಿ ಇದು.

ಇವೆಲ್ಲವನ್ನು ಕಂಡು ಸೋಮನಾಥ ಚಟರ್ಜಿ ಹೇಳುತ್ತಿದ್ದರು- ‘ ಸದಸ್ಯರು ಜವಾಬ್ದಾರಿಯಿಂದ ವರ್ತಿಸಲೆಂದು ಕಲಾಪವನ್ನು ಟಿವಿಯಲ್ಲಿ ನೇರಪ್ರಸಾರ ಮಾಡಲಾಯಿತು. ಇದರಿಂದ ಕಲಾಪದ ಗುಣಮಟ್ಟ ಸುಧಾರಿಸುವ ಬದಲು ಕುಸಿಯತೊಡಗಿತು. ಸದನದಲ್ಲಿ ಗದ್ದಲ ಮಾಡುವ ಸದಸ್ಯ ಹೆಚ್ಚು ಪ್ರಚಾರ ಪಡೆಯಲಾರಂಭಿಸಿದ. ಪ್ರಚಾರ ಪಡೆಯಲು ಗದ್ದಲವನ್ನೇ ಮಾಡಬೇಕೆಂದು ತೀರ್ಮಾನಿಸಿದ. ಇಂದು ಗದ್ದಲವಿಲ್ಲದ ಕಲಾಪಕ್ಕೆ ಪ್ರಚಾರ ಸಿಗುವುದಿಲ್ಲ.’

ಇಲ್ಲಿ ಪತ್ರಿಕೆಗಳ ಪಾತ್ರವೂ ಇಲ್ಲದಿಲ್ಲ. ಇತ್ತೀಚೆಗೆ ಸಂಸತ್ತಿನಲ್ಲಿ ಮಾಡಿದ ಒಂದೇ ಒಂದು ಉತ್ತಮ ಭಾಷಣದ ವರದಿಯನ್ನು ಪತ್ರಿಕೆಯಲ್ಲಿ ಓದಿದ್ದೀರಾ? ಹಾಗಾದರೆ ಯಾರೂ ಒಳ್ಳೆಯದಾಗಿ ಮಾತೇ ಆಡಿಲ್ಲವಾ? ಅರುಣ್‌ ಶೌರಿ ಹಿಂದಿನ ಅಧಿವೇಶನದಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ಹಿಡಿದ ಅರ್ಬುದ ರೋಗದ ಕುರಿತು ಅಧ್ಯಯನಶೀಲ ಭಾಷಣ ಮಾಡಿದರು. ಸಚಿವ ಕಮಲ್‌ನಾಥ್‌ ಪೇಟೆಂಟ್‌ ಕುರಿತು ವಿಶ್ವದ ಇತರ ದೇಶಗಳಲ್ಲಿರುವ ಸ್ಥಿತಿಗತಿ ಬಗ್ಗೆ ಆಳವಾಗಿ ಅಭ್ಯಸಿಸಿ ತಮ್ಮ ವಿಚಾರ ಮಂಡಿಸಿದರು. ಪತ್ರಿಕೆಗಳಲ್ಲಿ ಈ ಸುದ್ದಿ ವರದಿಯಾದರೆ ಕೇಳಿ. ಮುಖಪುಟದಲ್ಲಿ ಅಲ್ಲ, ಒಳಪುಟಗಲಲ್ಲಿ ಸಿಂಗಲ್‌ ಕಾಲಮ್ಮಿಗೂ ದಕ್ಕಲಿಲ್ಲ. ಪ್ರತಿ ಪಕ್ಷದ ನಾಯಕರು ಏನೇ ಮಾಡಿದರೂ ಪತ್ರಿಕೆಗಳಲ್ಲಿ ತಪ್ಪದೇ ವರದಿಯಾಗುತ್ತಿದ್ದವು. ಇಂದು ಅವರು ್ಫಮುಖಪುಟದಲ್ಲಿ ಕಾಣಿಸಿಕೊಳ್ಳಬಯಸಿದರೆ ಸಭಾತ್ಯಾಗ ಮಾಡಬೇಕು. ಸಭಾಧ್ಯಕ್ಷ ರ ಪೀಠದ ಮುಂದೆ ಧರಣಿ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಯಾರೂ ದರಕರಿಸುವುದಿಲ್ಲ.

ಸಂಸತ್ತು ಇಡೀ ದಿನ ಗದ್ದಲವಿಲ್ಲದೇ ಕಲಾಪ ನಡೆಸಿ ಹತ್ತಾರು ವಿಧೇಯಕ ಅಂಗೀಕರಿಸಿದರೆ ಅದೇನು ಮಹಾ? ಅವರು ಡ್ಯೂಟಿ ಅವರು ಮಾಡಿದ್ದಾರೆ. ಅದರಲ್ಲೇನು ಸುದ್ದಿಯ ಅಂಶಗಳಿವೆಯೆಂದು ಪತ್ರಕರ್ತರು ಬರೆಯುವುದಿಲ್ಲ. ಪತ್ರಿಕೆಯಲ್ಲಿ ಸುದ್ದಿಯಾಗಲು, ಸದಾ ಸುದ್ದಿಯಲ್ಲಿರಲು ಏನು ಮಾಡಬೇಕೆಂಬುದು ಸಂಸದರಿಗೂ ಗೊತ್ತಾಗಿದೆ. ಹೀಗಾಗಿ ಅವರು ಅದನ್ನೇ ಮಾಡುತ್ತಾರೆ. ಪತ್ತಿಕೆಗಳು ಮಾಡುವುದೂ ಅದನ್ನೇ. ಹೀಗೇ ಚಕ್ರ ತಿರುಗುತ್ತದೆ. ಸಂಸತ್ತು ಕ್ರಮೇಣ ತನ್ನ ಮಹತ್ವ, ಡವಲುದಾರಿಕೆ ಕಳೆದುಕೊಳ್ಳುತ್ತಿದೆ. ಪ್ರಜಾಸತ್ತೆಯ ಪರಮೋಚ್ಚ ವೇದಿಕೆ ಹೀಗೆ ವರ್ಚಸ್ಸು ಕುಗ್ಗಿಸಿಕೊಳ್ಳುತ್ತಿದ್ದರೆ ನಾವೂ ಸಹ ಅಸಹಾಯಕರಾಗಿ ನೋಡುತ್ತಿದ್ದೇವೆ. ಅಲ್ಲ, ಸ್ಪೀಕರ್‌ ಸ್ಥಿತಿಯೇ ಹಾಗಿರುವಾಗ ನಾವೇನು ಮಾಡಲಾದೀತು?

ನೂಲು ಹಿಡಿದು ಜೋಲುವವರ ಕಾಲು ಹಿಡಿದು ಜೋತಂತೆ. ಎಲ್ಲೋ ಒಂದು ಕಡೆ ಇದರಲ್ಲಿ ನಮ್ಮ ವೈಫಲ್ಯವೂ ಎದ್ದು ಕಾಣುತ್ತದೆಂದು ಅನಿಸುವುದಿಲ್ಲವಾ?

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X